Monday, October 5, 2020

ಸಂಸ್ಥಾಪಕರ ಆಶಯದಂತೆ ಜಯ ಕರ್ನಾಟಕ ಸಂಘಟನೆ ಬಲವರ್ಧನೆ

ಯುವಕರಿಗೆ ಹೆಚ್ಚಿನ ಆದ್ಯತೆ, ಎಲ್ಲಾ ಜಿಲ್ಲೆ, ತಾಲೂಕುಗಳಲ್ಲಿ ನೂತನ ಪದಾಧಿಕಾರಿಗಳ ನೇಮಕ : ಜಗದೀಶ್


ರಾಜ್ಯಾಧ್ಯಕ್ಷರಾದ ನಂತರ ಮೊದಲ ಬಾರಿಗೆ ಭದ್ರಾವತಿಗೆ ಆಗಮಿಸಿದ ಜಯ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಜಗದೀಶ್‌ರವರನ್ನು ಸ್ಥಳೀಯ ಮುಖಂಡರು ಸನ್ಮಾನಿಸಿ, ಅಭಿನಂದಿಸಿದರು.
ಭದ್ರಾವತಿ, ಅ. ೫: ರಾಜ್ಯಾದ್ಯಂತ ಜಯ ಕರ್ನಾಟಕ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಮೂಲಕ ಸಂಘಟನೆಯ ಸಂಸ್ಥಾಪಕರ ಆಶಯಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಎಲ್ಲರೂ ಮುನ್ನಡೆಯಬೇಕೆಂದು ಸಂಘಟನೆ ರಾಜ್ಯಾಧ್ಯಕ್ಷ ಜಗದೀಶ್ ಕರೆ ನೀಡಿದರು.
      ಅವರು ಅಧ್ಯಕ್ಷರಾದ ನಂತರ ಸೋಮವಾರ ಮೊದಲ ಬಾರಿಗೆ ನಗರಕ್ಕೆ ಆಗಮಿಸಿ ಸಂಘಟನೆಯ ಪ್ರಮುಖರು ಹಾಗು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.  ಮುತ್ತಪ್ಪ ರೈರವರು ಸಮಾಜಮುಖಿ ಚಿಂತನೆಗಳೊಂದಿಗೆ, ಜನಪರ ಕಾಳಜಿಯಿಂದ ಸಂಘಟನೆಯನ್ನು ಹುಟ್ಟು ಹಾಕಿದರು. ಇದೀಗ ಅವರು ನಮ್ಮೊಂದಿಗಿಲ್ಲ. ಆದರೆ ಅವರು ಬಿಟ್ಟು ಹೋಗಿರುವ ಸಂಘಟನೆ ನಮ್ಮೊಂದಿಗಿದೆ. ಈ ಹಿನ್ನಲೆಯಲ್ಲಿ ಆ ಮೂಲಕ ಅವರನ್ನು ಕಾಣುವ ಪ್ರಯತ್ನ ಸಂಘಟನೆಯ ಎಲ್ಲರೂ ಮಾಡಬೇಕಾಗಿದೆ.
      ಜಯ ಕರ್ನಾಟಕ ಸಂಘಟನೆ ಕೇವಲ ನೆಲ, ಜಲ, ಭಾಷೆ ಹೋರಾಟಕ್ಕೆ ಸೀಮಿತವಾಗಿರದೆ ಜನರ ಮಾನವೀಯ ಮೌಲ್ಯಗಳಿಗೆ ಸ್ಪಂದಿಸಲಿದೆ ಎಂಬುದನ್ನು ಕಳೆದ ೫-೬ ತಿಂಗಳುಗಳಿಂದ ಕೈಗೊಳ್ಳುತ್ತಿರುವ ಸಮಾಜಮುಖಿ ಸೇವಾ ಕಾರ್ಯಗಳಿಂದ ಎಲ್ಲರೂ ತಿಳಿದುಕೊಳ್ಳಬಹುದಾಗಿದೆ. ಪ್ರಸ್ತುತ ಮಾದಕ ವ್ಯಸನ ವಿರುದ್ಧ ಸಂಘಟನೆ ಹೋರಾಟ ಇಳಿದಿದ್ದು, ಇತ್ತೀಚೆಗೆ ಕೇಂದ್ರ ಸರ್ಕಾರ ರಾಜ್ಯದಲ್ಲಿ ಹಿಂದಿ ಭಾಷೆ ಏರಿಕೆ ಮಾಡಲು ಯತ್ನಿಸಿದ್ದು, ಇದರ ವಿರುದ್ಧ ಸಹ ಹೋರಾಟ ನಡೆಸಿ ಕನ್ನಡ ನೆಲದಲ್ಲಿ ಕನ್ನಡಕ್ಕೆ ಮಾತ್ರ ಮೊದಲ ಆದ್ಯತೆ ಎಂಬುದನ್ನು ತಿಳಿಸಲಾಗಿದೆ. ಇದೆ ರೀತಿ ಹಲವಾರು ಜನಪರ ಹೋರಾಟಗಳಲ್ಲಿ ಸಂಘಟನೆ ಮುಂಚೂಣಿಯಲ್ಲಿದ್ದು, ರಾಜ್ಯಾದ್ಯಂತ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ೩೦ ಮಂದಿ ರಾಜ್ಯ ಪದಾಧಿಕಾರಿಗಳು ಕಾರ್ಯನಿರತರಾಗಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಾಗುತ್ತಿದೆ. ಸಂಘಟನೆಯಲ್ಲಿ ಯುವಕರು ಹೆಚ್ಚಾಗಿ ತೊಡಗಿಸಿಕೊಳ್ಳುವಂತೆ ಅವರಿಗೆ ತರಬೇತಿ ಸಹ ನೀಡಲಾಗುತ್ತಿದೆ. ಎಲ್ಲಾ ಜಿಲ್ಲೆ ಹಾಗು ತಾಲೂಕುಗಳಲ್ಲಿ ನೂತನ ಪದಾಧಿಕಾರಿಗಳನ್ನು ರಚಿಸಲಾಗುತ್ತಿದೆ ಎಂದರು.
      ಇದಕ್ಕೂ ಮೊದಲು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನೂತನ ಅಧ್ಯಕ್ಷರನ್ನು ಸ್ಥಳೀಯ ಮುಖಂಡರು ಸನ್ಮಾನಿಸಿ ಅಭಿನಂದಿಸಿದರು.
        ಪ್ರಧಾನ ಕಾರ್ಯದಶಿ ರಾಮಚಂದ್ರಯ್ಯ, ರಾಜ್ಯ ಉಪಾಧ್ಯಕ್ಷ ಮುನಿಸ್ವಾಮಿ, ಜಿಲ್ಲಾ ಉಸ್ತುವಾರಿ ಹರೀಶ್, ತಾಲೂಕು ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಪ್ರಮುಖರಾದ ಪ್ರಾನ್ಸಿಸ್, ಮುಕುಂದಪ್ಪ, ಪ್ರಸನ್ನ, ಜ್ಯೋತಿ ಪ್ರಸಾದ್, ಕಿರಣ್, ರಾಖಿ, ಗಾಂಧಿ ಅಶೋಕ, ಚಂದ್ರು, ದಾಸ್, ಸತೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಉತ್ತರ ಪ್ರದೇಶ ಸಾಮೂಹಿಕ ಅತ್ಯಾಚಾರ ಘಟನೆಗೆ ಖಂಡನೆ

ಪ್ರಗತಿಪರ ಸಂಘಟನೆಗಳಿಂದ ಸಿ.ಎಂ ಆದಿತ್ಯನಾಥ ಪ್ರತಿಕೃತಿ ದಹಿಸಿ ಆಕ್ರೋಶ

ಭದ್ರಾವತಿಯಲ್ಲಿ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದಿರುವ ದಲಿತ ಯುವತಿ 'ಮನೀಷಾ ವಾಲ್ಮೀಕಿ' ಮೇಲಿನ ಸಾಮೂಹಿಕ ಅತ್ಯಾಚಾರ ಘಟನೆಯನ್ನು ಪ್ರಗತಿ ಸಂಘಟನೆಗಳ ಒಕ್ಕೂಟ ಖಂಡಿಸಿದ್ದು, ಸೋಮವಾರ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸುವ ಮೂಲಕ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಭದ್ರಾವತಿ, ಅ. ೫: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದಿರುವ ದಲಿತ ಯುವತಿ 'ಮನೀಷಾ ವಾಲ್ಮೀಕಿ' ಮೇಲಿನ ಸಾಮೂಹಿಕ ಅತ್ಯಾಚಾರ ಘಟನೆಯನ್ನು ನಗರದ ಪ್ರಗತಿ ಸಂಘಟನೆಗಳ ಒಕ್ಕೂಟ ಖಂಡಿಸಿದ್ದು, ಸೋಮವಾರ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಯಿತು.
       ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್‌ರವರ ಪ್ರತಿಕೃತಿ ದಹಿಸುವ ಮೂಲಕ ಸಾಮೂಹಿಕ ಅತ್ಯಾಚಾರ ಘಟನೆಗೆ ಕಾರಣರಾದವರನ್ನು ತಕ್ಷಣ ಬಂಧಿಸುವ ಜೊತೆಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ ಆರೋಪಿಗಳನ್ನು ರಕ್ಷಿಸಲು ಸಾಕ್ಷಿಗಳನ್ನು ನಾಶಮಾಡಿದ ಉತ್ತರ ಪ್ರದೇಶ ಸರ್ಕಾರವನ್ನು ವಜಾ ಮಾಡಬೇಕೆಂದು ಆಗ್ರಹಿಸಲಾಯಿತು.
       ಒಕ್ಕೂಟದ ಅಧ್ಯಕ್ಷ, ಹಿರಿಯ ಕಾರ್ಮಿಕ ಮುಖಂಡ ಡಿ.ಸಿ ಮಾಯಣ್ಣ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಮುಖರಾದ ನಗರಸಭೆ ಮಾಜಿ ಬಿ.ಕೆ ಮೋಹನ್, ಛಲವಾದಿ ಮಹಾಸಭಾ ಅಧ್ಯಕ್ಷ ಸುರೇಶ್, ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಮಾಜದ  ಬಸವರಾಜ್ ಬಿ. ಆನೇಕೊಪ್ಪ, ಮಾದಿಗ ಸಮಾಜದ ರಾಜ್ಯಾಧ್ಯಕ್ಷ ಎಸ್. ಮಂಜುನಾಥ್, ಜೆಡಿಎಸ್ ತಾಲೂಕು ಅಧ್ಯಕ್ಷ ಆರ್ ಕರುಣಾಮೂರ್ತಿ, ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್, ಪಕ್ಷದ ಪ್ರಮುಖರಾದ ಪರಮೇಶ್ವರಚಾರ್, ಇಬ್ರಾಹಿಂ ಖಾನ್, ಜೋಸೆಫ್, ಜಾವಿದ್, ಡಿಎಸ್‌ಎಸ್ ಮುಖಂಡರಾದ ಚಿನ್ನಯ್ಯ, ಕುಬೇಂದ್ರಪ್ಪ,  ಜೆಬಿಟಿ ಬಾಬು, ರಾಜೇಂದ್ರ, ಬದರಿನಾರಾಯಣ, ಚನ್ನಪ್ಪ, ಎಂ. ಶಿವಕುಮಾರ್, ಕರಿಯಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Sunday, October 4, 2020

ಉತ್ತರ ಪ್ರದೇಶ ಸಾಮೂಹಿಕ ಅತ್ಯಾಚಾರ ಘಟನೆಗೆ ಖಂಡನೆ

 ಅ.೫ರಂದು ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ

ಭದ್ರಾವತಿ, ಅ. ೪: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದಿರುವ ದಲಿತ ಯುವತಿ ‘ಮನೀಷಾ ವಾಲ್ಮೀಕಿ’ ಮೇಲಿನ ಸಾಮೂಹಿಕ ಅತ್ಯಾಚಾರ ಘಟನೆಯನ್ನು ನಗರದ ಪ್ರಗತಿ ಸಂಘಟನೆಗಳ ಒಕ್ಕೂಟ ಖಂಡಿಸಿದೆ.
     ಪ್ರಗತಿಪರ ಸಂಘಟನೆಗಳ ಮುಖಂಡರು ಸಭೆ ನಡೆಸಿ ಘಟನೆಗೆ ಕಾರಣರಾದವರನ್ನು ತಕ್ಷಣ ಬಂಧಿಸುವ ಜೊತೆಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆಆರೋಪಿಗಳನ್ನು ರಕ್ಷಿಸಲು ಸಾಕ್ಷಿ ಗಳನ್ನು ನಾಶಮಾಡಿದ ಉತ್ತರ ಪ್ರದೇಶದ ಸರ್ಕಾರವನ್ನು ತಕ್ಷಣ ವಜಾ ಮಾಡಬೇಕೆಂದು ಒತ್ತಾಯಿಸಲಾಯಿತು.
     ಘಟನೆಯನ್ನು ಖಂಡಿಸಿ ಅ.೫ರಂದು ಬೆಳಿಗ್ಗೆ ೧೦.೩೦ಕ್ಕೆ ನಗರದ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು.
     ಸಭೆಯಲ್ಲಿ ಒಕ್ಕೂಟದ ಪ್ರಮುಖರಾದ ಸುರೇಶ್, ಜಿ. ರಾಜು, ಬಸವರಾಜ್ ಬಿ. ಆನೇಕೊಪ್ಪ, ಎಚ್. ರವಿಕುಮಾರ್, ಪರಮೇಶ್ವರ ಚಾರ್, ಜೆಬಿಟಿ ಬಾಬು, ಜಗದೀಶ್, ಎ. ತಿಪ್ಪೇಸ್ವಾಮಿ, ಆದಿತ್ಯಶಾಮ, ಮುಸ್ವೀರ್ ಬಾಷಾ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಮೋಚಿಗಾರ ಸಂಘದ ಮಹಿಳೆಯರ ಕುಂದು-ಕೊರತೆ ಸಭೆ

 

ಭದ್ರಾವತಿಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಮೋಚಿಗಾರ ಜನಾಂಗದ ಮಹಿಳೆಯರ ಸಂಘದ ಕುಂದು-ಕೊರತೆಗಳ ಸಭೆಯನ್ನು ಸೂಡಾ ಸದಸ್ಯ ದೇವರಾಜ್ ಮಣ್ಣಿನಕೊಪ್ಪ, ಪಿ. ಗಣೇಶ್‌ರಾವ್, ರೇಖಾ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
ಭದ್ರಾವತಿ, ಅ. ೪: ಮೋಚಿಗಾರ ಜನಾಂಗದ ಮಹಿಳೆಯರ ಸಂಘದ ಕುಂದು-ಕೊರತೆಗಳ ಸಭೆ ಭಾನುವಾರ ನಡೆಯಿತು.
     ಬಿಜೆಪಿ ಪಕ್ಷದ ಜಿಲ್ಲಾ ಎಸ್.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ, ಸೂಡಾ ಸದಸ್ಯ ದೇವರಾಜ್ ಮಣ್ಣಿನಕೊಪ್ಪ ಸಂಘದ ಕುಂದು ಕೊರತೆ ಆಲಿಸುವ ಜೊತೆಗೆ ಪ್ರಸ್ತುತ ಸಂಘದ ಕಾರ್ಯ ವೈಖರಿಗೆ ಪ್ರಶಂಸೆ ವ್ಯಕ್ತಡಿಸಿ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
    ಬಿಜೆಪಿ ತಾಲೂಕು ಎಸ್.ಸಿ ಮೋರ್ಚಾ ಅಧ್ಯಕ್ಷ ಪಿ. ಗಣೇಶ್‌ರಾವ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಡಾ. ಪುಷ್ಪಲತಾ, ಸುಶೀಲಮ್ಮ, ಮೋಚಿಗಾರ ಜನಾಂಗದ ಮಹಿಳೆಯರ ಸಂಘದ ಅಧ್ಯಕ್ಷೆ ರೇಖಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕವಲಗುಂದಿ ಗ್ರಾಮದ ನಿವಾಸಿಗಳಿಗೆ ದಿನಸಿ ಸಾಮಗ್ರಿ ವಿತರಣೆ


ಭದ್ರಾವತಿ ನಗರಸಭೆ ವ್ಯಾಪ್ತಿಯ ವಾಡ್ ನಂ.೨ರ ಕವಲಗುಂದಿ ಗ್ರಾಮದ ನಿವಾಸಿಗಳ ನೆರವಿಗೆ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಪುತ್ರ ನಗರಸಭಾ ಸದಸ್ಯ ಎಂ.ಎ ಅಜಿತ್ ಮುಂದಾಗಿದ್ದು, ಭಾನುವಾರ ಅಗತ್ಯ ದಿನಸಿ ಸಾಮಗ್ರಿಗಳನ್ನು ವಿತರಿಸಿದರು.
ಭದ್ರಾವತಿ, ಅ. ೪: ನಗರಸಭೆ ವ್ಯಾಪ್ತಿಯ ವಾಡ್ ನಂ.೨ರ ಕವಲಗುಂದಿ ಗ್ರಾಮದ ನಿವಾಸಿಗಳ ನೆರವಿಗೆ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಪುತ್ರ ನಗರಸಭಾ ಸದಸ್ಯ ಎಂ.ಎ ಅಜಿತ್ ಮುಂದಾಗಿದ್ದು, ಭಾನುವಾರ ಅಗತ್ಯ ದಿನಸಿ ಸಾಮಗ್ರಿಗಳನ್ನು ವಿತರಿಸಿದರು.
  ಪ್ರತಿ ವರ್ಷ ಮಳೆಗಾಲದಲ್ಲಿ ಭದ್ರಾ ಜಲಾಶಯದಿಂದ ನೀರು ಬಿಟ್ಟ ಸಂದರ್ಭದಲ್ಲಿ ಇಲ್ಲಿನ ನಿವಾಸಿಗಳು ಸಂಕಷ್ಟಕ್ಕೆ ಒಳಗಾಗುತ್ತಿದ್ದು, ಈ ಬಾರಿ ಸಹ ಮನೆಗಳು ಜಲಾವೃತಗೊಂಡ ಪರಿಣಾಮ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಹಿನ್ನಲೆಯಲ್ಲಿ ಸುಮಾರು ೪೦ ಮನೆಗಳ ಕುಟುಂಬಗಳಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಿ ಪುನಃ ಸಂಕಷ್ಟಕ್ಕೆ ಒಳಗಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡುವುದಾಗಿ ಭರವಸೆ ನೀಡಿದರು.
     ಮಾಜಿ ನಗರಸಭಾ ಸದಸ್ಯ ಎಸ್.ಪಿ ಮೋಹನ್‌ರಾವ್ ಹಾಗು ಎಂ.ಜೆ ಅಪ್ಪಾಜಿ ಅಭಿಮಾನಿ ಬಳಗದವರು ಮತ್ತು ಸ್ಥಳೀಯ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಲಾವಿದರ ನೆರವಿಗೆ ಸಂಘಟನೆ ಅಗತ್ಯ : ಬಿ.ಆರ್ ಗೋಪಾಲ್

ಅಖಿಲ ಕರ್ನಾಟಕ ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ನೂತನ ಕಛೇರಿ ಭದ್ರಾವತಿಯಲ್ಲಿ ಭಾನುವಾರ ಉದ್ಘಾಟನೆ ಗೊಂಡಿತು. ಸಂಘದ ಅಧ್ಯಕ್ಷ ಬಿ.ಆರ್ ಗೋಪಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಭದ್ರಾವತಿ, ಅ. ೪: ಕಲಾವಿದರ ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಂಘಟನೆ ಅಗತ್ಯವಿದ್ದು, ಎಲ್ಲರೂ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೈಜೋಡಿಸಬೇಕೆಂದು ಹಿರಿಯ ಕಲಾವಿದ, ಅಖಿಲ ಕರ್ನಾಟಕ ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಆರ್ ಗೋಪಾಲ್ ಮನವಿ ಮಾಡಿದರು.
      ಅವರು ಭಾನುವಾರ ನಗರದ ಸಿ.ಎನ್ ರಸ್ತೆಯಲ್ಲಿ ಸಂಘದ ನೂತನ ಕಛೇರಿ ಉದ್ಘಾಟಿಸಿ ಮಾತನಾಡಿದರು. ಕಳೆದ ೫ ವರ್ಷಗಳಿಂದ ಸಂಘಟನೆ ಅಸ್ತಿತ್ವದಲ್ಲಿದ್ದು, ಪ್ರಸ್ತುತ ಮತ್ತಷ್ಟು ಕ್ರಿಯಾಶೀಲವಾಗಿಸುವ ಅಗತ್ಯವಿದೆ. ಈ ಮೂಲಕ ಕಲಾವಿದರ ಸಂಕಷ್ಟಗಳನ್ನು ಸಾಧ್ಯವಾದಷ್ಟು ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕಾಗಿದೆ ಎಂದರು.
      ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಲಾವಿದರು ಮಾತನಾಡಿ, ರಾಜ್ಯದಲ್ಲಿ ಬೆಂಗಳೂರು ಮತ್ತು ಭದ್ರಾವತಿ ೨ ಎರಡು ನಗರಗಳು ಮಾತ್ರ ಕಲಾವಿದರ ನೆಲೆಬೀಡಾಗಿವೆ.  ಎಲ್ಲಾ ರೀತಿಯ ಕಲಾವಿದರು ಈ ಎರಡು ನಗರಗಳಲ್ಲಿ ಇದ್ದು, ಬಹಳಷ್ಟು ಕಲಾವಿದರು ಈ ನಗರಗಳಲ್ಲಿ ತಮ್ಮ ಅಸ್ತಿತ್ವ ಕಂಡುಕೊಂಡು ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಕಲಾವಿದರು ಬಹಳಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸಂಘಟನೆ ಕಲಾವಿದರ ಸಂಕಷ್ಟಗಳಿಗೆ ಪೂರಕವಾಗಿ ಸ್ಪಂದಿಸಬೇಕೆಂದು ಮನವಿ ಮಾಡಿದರು.
       ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಜಗನ್ನಾಥ್, ಹಿರಿಯ ಸಲಹೆಗಾರ ನೂರುಲ್ಲಾ, ಮಹಿಳಾ ಘಟಕದ ಅಧ್ಯಕ್ಷೆ ನೇತ್ರಾ ಮೋಹನ್, ಡಿಎಸ್‌ಎಸ್ ಮುಖಂಡರಾದ ಎಂ. ಪಳನಿರಾಜ್, ಎಂ. ಕುಬೇಂದ್ರಪ್ಪ, ಸಾಹಿತಿ ಜೆ.ಎನ್ ಬಸವರಾಜಪ್ಪ, ನ್ಯಾಯವಾದಿ ಅಖಿಲ್ ಅಹಮದ್, ಪ್ರಮುಖರಾದ ಮೋಹನ್, ಸಿದ್ದೇಶ್, ರಾಜು, ಅಹಮದ್ ಜಾನ್(ಬಾಬು), ಶಂಕರ್ ಬಾಬು, ನಸ್ರುಲ್ಲಾ ಷರೀಫ್, ಪ್ರವೀಣ್, ಮಂಜಣ್ಣ, ಆರ್. ರಂಗರಾಮ್, ಅವಿನಿ, ಅಂಬಿಕಾ, ಶಿಲ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
        ವೆಂಕಟೇಶ್ ಕಾರ್ಯಕ್ರಮ ನಿರೂಪಿಸಿದರು. ನಾಗರಾಜ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಡಾ.ಎಸ್.ಪಿ ಬಾಲಸುಬ್ರಮಣ್ಯಂರವರ ನಿಧನಕ್ಕೆ ಸಂತಾಪ ಸೂಚಿಸಿ ಅವರ ಭಾವಚಿತ್ರ ಪುಷ್ಪನಮನ ಸಲ್ಲಿಸಲಾಯಿತು.

ಜನಪ್ರತಿನಿಧಿಗಳಿಗೆ ಸಮಾಜವಾದಿ ಚಿಂತನೆಗಳು ಅಗತ್ಯ : ತೇಜಸ್ವಿ ವಿ. ಪಟೇಲ್


ಜೆ.ಎಚ್ ಪಟೇಲ್ ಅಭಿಮಾನಿ ಬಳಗದ ವತಿಯಿಂದ ಭದ್ರಾವತಿ ಕಾಂಚನಾ ಹೋಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಜಿ ಮುಖ್ಯಮಂತ್ರಿ, ದಿವಂಗತ ಜೆ.ಎಚ್ ಪಟೇಲ್‌ರವರ ೯೦ನೇ ಜನ್ಮದಿನ ಕಾರ್ಯಕ್ರಮವನ್ನು ರೈತ  ಮುಖಂಡ ತೇಜಸ್ವಿ ವಿ. ಪಟೇಲ್, ನಗರಸಭೆ ಪೌರಾಯುಕ್ತ ಮನೋಹರ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
ಭದ್ರಾವತಿ, ಅ. ೪: ಸಮಾಜವಾದಿ ಚಿಂತನೆಗಳು ಇದ್ದಾಗ ಮಾತ್ರ ಒಬ್ಬ ಜನಪ್ರತಿನಿಧಿ ಪ್ರಬುದ್ಧವಾಗಿ ಬೆಳೆಯಲು ಸಾಧ್ಯ ಎಂದು ರೈತ  ಮುಖಂಡ ತೇಜಸ್ವಿ ವಿ. ಪಟೇಲ್ ಹೇಳಿದರು.
        ಅವರು ಭಾನುವಾರ ಜೆ.ಎಚ್ ಪಟೇಲ್ ಅಭಿಮಾನಿ ಬಳಗದ ವತಿಯಿಂದ ನಗರದ ಕಾಂಚನಾ ಹೋಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಜಿ ಮುಖ್ಯಮಂತ್ರಿ, ದಿವಂಗತ ಜೆ.ಎಚ್ ಪಟೇಲ್‌ರವರ ೯೦ನೇ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
         ಜೆ.ಎಚ್ ಪಟೇಲ್‌ರವರ ಸಮಾಜವಾದಿ ಚಿಂತನೆಗಳು ಇಂದಿಗೂ ಅವರನ್ನು ಜನರ ಮನಸ್ಸಿನಲ್ಲಿ ಉಳಿದುಕೊಳ್ಳುವಂತೆ ಮಾಡಿವೆ. ನೇರ ನುಡಿ-ನಡೆ ವ್ಯಕ್ತಿತ್ವದ ಗುಣ, ಸಾಮಾನ್ಯರ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಮನೋಭಾವ, ಭವಿಷ್ಯದ ಚಿಂತನೆಗಳು ಪಟೇಲ್‌ರವರಲ್ಲಿ ಕಂಡು ಬರುವ ವಿಶೇಷತೆಗಳಾಗಿದ್ದವು ಎಂದರು.
         ದಲಿತ ಹಾಗು ರೈತ ಚಳುವಳಿಗಳು ಉದಯಿಸಿದ, ಸಮಾಜವಾದಿ ಹೋರಾಟಗಳಿಗೆ ನೆಲೆಯಾಗಿದ್ದ, ರಾಷ್ಟ್ರ ಹಾಗು ರಾಜ್ಯ ರಾಜಕಾರಣದ ಕೇಂದ್ರ ಬಿಂದುವಾಗಿದ್ದ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಸ್ತುತ ಸಮಾಜವಾದಿ ಚಿಂತನೆಗಳು ಕಣ್ಮರೆಯಾಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಈ ನಡುವೆ ಕೆಲವರು ಜೆ.ಎಚ್ ಪಟೇಲ್‌ರವರ ಆದರ್ಶತನಗಳನ್ನು ಮೈಗೂಡಿಸಿಕೊಂಡು ಅವರನ್ನು ನೆನಪು ಮಾಡಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ  ಎಂದರು.
        ಹಿರಿಯ ಮುಖಂಡ ಗೋವಿಂದಸ್ವಾಮಿ ಮಾತನಾಡಿ, ಜೆ.ಎಚ್ ಪಟೇಲ್‌ರವರು ಎಲ್ಲಾ ಧರ್ಮ, ಜಾತಿ, ಸಮುದಾಯಗಳ ಏಳಿಗೆಯನ್ನು ಬಯಸಿದ್ದರು. ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಎಂದಿಗೂ ಅವರು ನಮ್ಮೊಂದಿಗೆ ಶಾಶ್ವತವಾಗಿ ಉಳಿದುಕೊಳ್ಳುವಂತೆ ಮಾಡಿವೆ ಎಂದರು.
        ನಗರಸಭೆ ಪೌರಾಯುಕ್ತ ಮನೋಹರ್ ಮಾತನಾಡಿ, ಪ್ರಸ್ತುತ ನಾವೆಲ್ಲರೂ ಪಟೇಲ್‌ರವರ ಸಮಾಜವಾದಿ ಚಿಂತನೆಗಳನ್ನು ಮೈಗೂಡಿಸಿಕೊಂಡು ಅವರ ಹಾದಿಯಲ್ಲಿ ಸಾಗಬೇಕಾದ ಅಗತ್ಯವಿದೆ ಎಂದರು.
      ಶಿರಸ್ತೇದಾರ್ ಮಂಜಾನಾಯ್ಕ, ಉಪ ವಲಯ ಅರಣ್ಯಾಧಿಕಾರಿ ಬಿ.ಆರ್ ದಿನೇಶ್‌ಕುಮಾರ್, ಸಮಾಜ ಸೇವಕ ಸ್ನೇಹ ಜೀವಿ ಬಳಗದ ಪೊಲೀಸ್ ಉಮೇಶ್,  ಕಲಾವತಿ, ದಿವ್ಯಶ್ರೀ, ರವಿ ಕಿಶನ್, ಬಿ.ಗಂಗಾಧರ್, ಕೆ. ಪ್ರಸಾದ್, ಸಿದ್ದಲಿಂಗಯ್ಯ, ಎಂ.ಎಸ್ ಜನಾರ್ಧನ ಅಯ್ಯಂಗಾರ್, ಕೆ.ಎಸ್ ಸತ್ಯನಾರಾಯಣ, ನಲ್ಲೂರು ಉಸ್ಮಾನ್ ಷರೀಫ್, ಬಿ.ಎನ್ ರಾಜು ಮತ್ತು ಬಿ.ವಿ ಗಿರೀಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
    ಜೆಡಿಯು ರಾಜ್ಯ ಯುವ ಘಟಕದ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ  ಹಾಗು ಸಂಘಟನಾ ಕಾರ್ಯದರ್ಶಿ ಬಾಬು ದೀಪಕ್‌ಕುಮಾರ್ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.