Sunday, October 11, 2020

ಮಹಿಳೆಯ ಕೊರಳಿನಲ್ಲಿದ್ದ ಚಿನ್ನದ ಸರ ಅಪಹರಣ

ಭದ್ರಾವತಿ, ಅ. ೧೧: ದೇವಸ್ಥಾನಕ್ಕೆ ತೆರಳುತ್ತಿದ್ದ ಮಹಿಳೆಯೊಬ್ಬರ ಕೊರಳಿನಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಗರಸಭೆ ವ್ಯಾಪ್ತಿಯ ಭಂಡಾರಹಳ್ಳಿಯಲ್ಲಿ ನಡೆದಿದೆ.
      ಭಂಡಾರಹಳ್ಳಿ ನಿವಾಸಿ ವಸಂತಿ ಎಂಬುವರು ಪತಿ ಕೃಷ್ಣಪ್ಪನಾಯಕ ಮತ್ತು ತನ್ನ ೩ ಚಿಕ್ಕ ಮಕ್ಕಳೊಂದಿಗೆ ಶನಿವಾರ ಮಧ್ಯಾಹ್ನ ಸುಮಾರು ೧.೪೫ರ ಸಮಯದಲ್ಲಿ ಮನೆಯ ಸಮೀಪದಲ್ಲಿರುವ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ದ್ವಿಚಕ್ರವಾಹನದಲ್ಲಿ ಬಂದ ಅಪರಿಚಿತ ವ್ಯಕ್ತಿಯೋರ್ವ ಕೊರಳಿನಲ್ಲಿದ್ದ ಸುಮಾರು ೩೦ ಗ್ರಾಂ. ತೂಕದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದು, ಅಪಹರಿಸಲಾಗಿರುವ ಚಿನ್ನದ ಸರದ ಅಂದಾಜು ಮೌಲ್ಯ ೯೦ ಸಾವಿರ ರು. ಗಳಾಗಿದ್ದು, ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




ಕರ್ತವ್ಯನಿರತ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕ ನಿಧನ

ಭದ್ರಾವತಿ, ಅ. ೧೧: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಕರ್ತವ್ಯದಲ್ಲಿ ತೊಡಗಿದ್ದ ಗುತ್ತಿಗೆ ಕಾರ್ಮಿಕನೋರ್ವ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
    ಜಿಂಕ್‌ಲೈನ್ ನಿವಾಸಿ ಮಂಜುನಾಥ್(೪೦) ನಿಧನ ಹೊಂದಿದ್ದು, ಮಧ್ಯಾಹ್ನ ೩.೪೫ರ ಸುಮಾರಿನಲ್ಲಿ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾನೆ.
      ಬಡ ಕುಟುಂಬಕ್ಕೆ ಸಾಂತ್ವಾನ ಹೇಳಿರುವ ಸಮಾಜ ಸೇವಕ ಪೊಲೀಸ್ ಉಮೇಶ್ ಮೃತರ ನಿವಾಸಕ್ಕೆ ತೆರಳಿ ಸ್ನೇಹಜೀವಿ ಗೆಳೆಯರ ಬಳಗದ ವತಿಯಿಂದ ಮೃತರ ೨೫ ಸಾವಿರ ರು. ನೆರವು ನೀಡಿದ್ದಾರೆ. ಅಲ್ಲದೆ ಸೂಕ್ತ ಪರಿಹಾರ ನೀಡುವಂತೆ ಗುತ್ತಿಗೆದಾರರಿಗೆ ಆಗ್ರಹಿಸಿದ್ದಾರೆ.

Saturday, October 10, 2020

ಮಹಿಳೆಯರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸಿ : ಎಂ.ಎಚ್ ಲಕ್ಷ್ಮಣ

ಭದ್ರಾವತಿ ತಾಲೂಕಿನ ಸಿಂಗನಮನೆ ಗ್ರಾಮ ಪಂಚಾಯಿತಿಯಲ್ಲಿ ಬೆಂಗಳೂರಿನ ದಿ ಹಂಗರ್ ಪ್ರಾಜೆಕ್ಟ್ ಸಹಕಾರದೊಂದಿಗೆ ವಿಕಸನ ಸಂಸ್ಥೆಯ ವತಿಯಿಂದ  'ಸಂಭಾವ್ಯ ನಾಯಕತ್ವ' ತರಬೇತಿ ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ, ಅ. ೧೦: ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸಬೇಕೆಂದು ವಿಕಸನ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಎಂ.ಎಚ್ ಲಕ್ಷ್ಮಣ ಕರೆ ನೀಡಿದರು.
     ಅವರು ತಾಲೂಕಿನ ಸಿಂಗನಮನೆ ಗ್ರಾಮ ಪಂಚಾಯಿತಿಯಲ್ಲಿ ಬೆಂಗಳೂರಿನ ದಿ ಹಂಗರ್ ಪ್ರಾಜೆಕ್ಟ್ ಸಹಕಾರದೊಂದಿಗೆ ವಿಕಸನ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 'ಸಂಭಾವ್ಯ ನಾಯಕತ್ವ' ತರಬೇತಿಯಲ್ಲಿ ಪಾಲ್ಗೊಂಡು ಮಾತನಾಡಿದರು.
     ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಮಹಿಳೆಯರು ಹೆಚ್ಚಾಗಿ ಭಾಗವಹಿಸಬೇಕೆಂಬ ಉದ್ದೇಶದಿಂದ ಸರ್ಕಾರ ಶೇ.೫೦ರಷ್ಟು ಮೀಸಲಾತಿ ನೀಡಿದೆ. ಇದನ್ನು ಮಹಿಳೆಯರು ಸದ್ಬಳಕೆ ಮಾಡಿಕೊಳ್ಳಬೇಕು. ಚುನಾವಣೆಯಲ್ಲಿ ಸ್ಪರ್ಧಿಸುವ ಮಹಿಳೆಯರು ಗ್ರಾಮ ಪಂಚಾಯಿತಿ ಆಡಳಿತದ ಕಾರ್ಯ ವಿಧಾನಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರಬೇಕು. ಇದರಿಂದ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮಹಿಳೆಯರು ತಮ್ಮ ಅಧಿಕಾರ ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ ಎಂದರು.
     ಸಭೆಯಲ್ಲಿ ಸಿಂಗನಮನೆ ಗ್ರಾಮದ ಮಹಿಳೆಯರು, ಪಂಚಾಯಿತಿ ಮಹಿಳಾ ಸದಸ್ಯರು ಭಾಗವಹಿಸಿದ್ದು, ಈ ಪೈಕಿ ೪ ಮಹಿಳಾ ಸದಸ್ಯರು ಮುಂಬರುವ ಚುನಾವಣೆಯಲ್ಲಿ ಪುನಃ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದರು. ವಿಕಸನ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.

ವರ್ಗಾವಣೆಗೊಂಡ ಅಗ್ನಿಶಾಮಕ ಸಿಬ್ಬಂದಿ ಬಾಬು ಎಸ್. ಗೌಡಗೆ ಬೀಳ್ಕೊಡುಗೆ

ಭದ್ರಾವತಿ ಅಗ್ನಿಶಾಮಕ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬಾಬು ಎಸ್. ಗೌಡರವರು ಮುಂಬಡ್ತಿ ಹೊಂದಿ ಕಾರವಾರ ಹಳಿಯಾಳ ತಾಲೂಕಿಗೆ ವರ್ಗಾವಣೆ ಗೊಂಡ ಹಿನ್ನಲೆಯಲ್ಲಿ ಅವರನ್ನು ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು
ಭದ್ರಾವತಿ, ಅ. ೧೦: ನಗರದ ಅಗ್ನಿಶಾಮಕ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬಾಬು ಎಸ್. ಗೌಡರವರು ಮುಂಬಡ್ತಿ ಹೊಂದಿ ಕಾರವಾರ ಹಳಿಯಾಳ ತಾಲೂಕಿಗೆ ವರ್ಗಾವಣೆ ಗೊಂಡ ಹಿನ್ನಲೆಯಲ್ಲಿ ಅವರನ್ನು ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.
      ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅಗ್ನಿಶಾಮಕ ಠಾಣಾಧಿಕಾರಿ ಎನ್. ವಸಂತಕುಮಾರ್,  ಬಾಬು ಎಸ್. ಗೌಡರವರು ಇಲಾಖೆಯಲ್ಲಿ ಇದುವರೆಗೂ ಉತ್ತಮವಾಗಿ ಸೇವೆ ಸಲ್ಲಿಸುವ ಜೊತೆಗೆ ಇಲಾಖೆಯ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಮುಂಬಡ್ತಿ ಹೊಂದಿರುವ ಇವರು ಇನ್ನೂ ಉತ್ತಮ ಸೇವೆ ಸಲ್ಲಿಸುವಂತಾಗಲಿ ಎಂದರು.
ಸನ್ಮಾನ ಸ್ವೀಕರಿಸಿದ ಬಾಬು ಎಸ್. ಗೌಡ ಮಾತನಾಡಿ, 'ಭೇಟಿ ಆಕಸ್ಮಿಕ, ಅಗಲಿಕೆ ಅನಿವಾರ್ಯ'.  ೧೦ ವರ್ಷದ ಸೇವಾ ಅವಧಿಯಲ್ಲಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
      ಸಿಬ್ಬಂದಿ ವಿನೂತನ್ ಮಾತನಾಡಿ, ಬಾಬುರವರು ಇಲಾಖೆಯಲ್ಲಿ ತಮ್ಮೊಂದಿಗೆ ೮ ವರ್ಷಗಳಿಂದ ಒಡನಾಡಿಯಾಗಿ ಉತ್ತಮ ಬಾಂಧವ್ಯ ಹೊಂದಿದ್ದರು ಎಂದರು.
        ಸಿಬ್ಬಂದಿ ಡಿ.ಎನ್. ಸುರೇಶ್ ಮಾತನಾಡಿ, ಬಾಬುರವರು ಎಲ್ಲಾ ಸಿಬ್ಬಂದಿಗಳನ್ನು ಸಮಾನವಾಗಿ ಕಾಣುವ ಮೂಲಕ ಸಿಬ್ಬಂದಿಗಳ ವಸತಿಗೃಹಗಳಿಗೆ ಸಂಬಂಧಪಟ್ಟ ಎಲ್ಲಾ ಕೆಲಸಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂದರು.
      ಇದೇ ಸಂದರ್ಭದಲ್ಲಿ ಇಲಾಖೆಯಲ್ಲಿ ಸುಮಾರು ೩೦ ವರ್ಷಗಳಿಂದ ಸ್ವೀಪರ್ ಕೆಲಸ ಮಾಡಿ ನಿವೃತ್ತ ಹೊಂದಿರುವ ಮಹಿಮೂಮ(ಕಾಕಮ್ಮ) ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.  
   ವೇದಿಕೆಯಲ್ಲಿ ಉಪಸ್ಥಿತರಿದ್ದು ಪ್ರಮುಖ ಅಗ್ನಿಶಾಮಕ  ಕೆ.ಎಸ್. ರಮೇಶ್ ರವರು ಎಲ್ಲರನ್ನೂ ಸ್ವಾಗತಿಸಿದರು.  ಅ.ಶಾ. ವಿನೂತನ್.ಎಂ ಪ್ರಾರ್ಥಿಸಿ, ಕಾರ್ಯಕ್ರಮ ನಿರೂಪಿಸಿದರು.
      ಸಿಬ್ಬಂದಿಗಳಾದ ಹೆಚ್.ವಿ ಸುರೇಶಾಚಾರ್,  ಎಸ್.ಎಚ್ ಕುಮಾರ್, ಜಿ.ಟಿ ಶ್ರೀನಿವಾಸ್, ಆರ್. ಕರಿಯಣ್ಣ, ಎಂ.ಸಿ ಮಹೇಂದ್ರ, ಎಚ್.ಎಂ ಹರೀಶ್, ಕೆ.ಎಚ್ ರಾಜಾನಾಯ್ಕ್, ಗೃಹರಕ್ಷಕ ದಳ ಸಿಬ್ಬಂದಿಗಳಾದ ಪರಮೇಶ್ವರ ನಾಯ್ಕ, ಕೆ.ಆರ್ ಶಂಕರ್, ಜಿ ಸುರೇಶ್, ಡಿ.ಜಿ ಸುನಿಲ್, ಮುಬಾರಕ್ ಮತ್ತು ವೆಂಕಟೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕವಲಗುಂದಿ ತಗ್ಗು ಪ್ರದೇಶದ ನಿವಾಸಿಗಳಿಗೆ ದಿನಸಿ ಸಾಮಗ್ರಿ ವಿತರಣೆ

ಭದ್ರಾವತಿ ಸ್ನೇಹ ಜೀವಿ ಬಳಗದ ವತಿಯಿಂದ ಸಮಾಜ ಸೇವಕ ಪೊಲೀಸ್ ಉಮೇಶ್ ಸಂಕಷ್ಟಕ್ಕೆ ಒಳಗಾಗಿರುವ ನಗರಸಭೆ ವಾರ್ಡ್ ನಂ.೨ರ ಕವಲಗುಂದಿ ಗ್ರಾಮದ ನಿವಾಸಿಗಳಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಿದರು.
ಭದ್ರಾವತಿ, ಅ. ೧೦: ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೨ರ ಕವಲಗುಂದಿ ತಗ್ಗು ಪ್ರದೇಶದ ಮನೆಗಳು  ಪ್ರತಿ ವರ್ಷ ಮಳೆಗಾಲದಲ್ಲಿ ಜಲಾವೃತಗೊಳ್ಳುತ್ತಿದ್ದು, ನಿವಾಸಿಗಳು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಸ್ನೇಹ ಜೀವಿ ಬಳಗದ ಸಮಾಜ ಸೇವಕ ಪೊಲೀಸ್ ಉಮೇಶ್ ನಿವಾಸಿಗಳ ಸಂಕಷ್ಟಕ್ಕೆ ಸ್ಪಂದಿಸಿದ್ದು, ಅಗತ್ಯ ದಿನಸಿ ಸಾಮ್ರಗಿಗಳನ್ನು ವಿತರಿಸಿದ್ದಾರೆ. 
     ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಗೊಳಿಸುವ ಅಗತ್ಯವಿದ್ದು, ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗು ನಗರಸಭೆ ಆಡಳಿತಗಳು ಬೇರೆಡೆ ಸ್ಥಳಾಂತರಗೊಳಿಸಲು ಕಳೆದ ಹಲವಾರು ವರ್ಷಗಳಿಂದ ಪ್ರಯತ್ನಿಸುತ್ತಿವೆ. ಆದರೆ ಇದುವರೆಗೂ ಯಶಸ್ವಿಯಾಗಿಲ್ಲ. ಈ ಬಾರಿ ಸಹ ಮಳೆಯಿಂದಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ.
    ಸುಮಾರು ೫೪ ಕುಟುಂಬಗಳಿಗೆ ದಿನಸಿ ಸಾಮಗ್ರಿಗಳನ್ನು ಉಮೇಶ್ ವಿತರಿಸುವ ಮೂಲಕ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
     ಸ್ನೇಹಜೀವಿ ಬಳಗದ ಮೇಘರಾಜ್, ಶ್ರೀಧರ್, ದೊರೆ, ಶಂಕರ್, ಧನಂಜಯ, ಅನಿಲ್, ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪೌರಕಾರ್ಮಿಕರ ಮಕ್ಕಳು ಶಿಕ್ಷಣವಂತರಾಗಲಿ : ಪೌರಾಯುಕ್ತ ಮನೋಹರ್

ಭದ್ರಾವತಿ ರಂಗಪ್ಪವೃತ್ತ ಜೈಭೀಮಾ ನಗರದಲ್ಲಿ ಶನಿವಾರ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ಜೀವನ ಆಧಾರಿತ ಮಹಾನಾಯಕ ಧಾರಾವಾಹಿ ಯಶಸ್ವಿಯಾಗಿ ಮುಂದುವರೆಯಬೇಕೆಂಬ ಆಶಯದೊಂದಿಗೆ ಧಾರಾವಾಹಿ ಸೃಷ್ಠಿಕರ್ತೆ ಹಾಗು ವಾಹಿನಿ ಮುಖ್ಯಸ್ಥರು ಮತ್ತು ಸಿಬ್ಬಂದಿಗಳಿಗೆ ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಭಿನಂದನೆ ಕಾರ್ಯಕ್ರಮ ಪೌರಾಯುಕ್ತ ಮನೋಹರ್ ಉದ್ಘಾಟಿಸಿ ಮಾತನಾಡಿದರು.
ಭದ್ರಾವತಿ, ಅ. ೧೦: ದೇಶದಲ್ಲಿ ಎಲ್ಲರೂ ಶಿಕ್ಷಣವಂತರಾಗುವ ಜೊತೆಗೆ ತಾರತಮ್ಯ ನಿರ್ಮೂಲನೆಯಾಗಬೇಕೆಂಬುದು ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಆಶಯವಾಗಿದ್ದು, ಅದರಂತೆ ಪೌರಕಾರ್ಮಿಕರು ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿಸಬೇಕೆಂದು ಪೌರಾಯುಕ್ತ ಮನೋಹರ್ ಕರೆ ನೀಡಿದರು.
       ಅವರು ಶನಿವಾರ ರಂಗಪ್ಪವೃತ್ತ ಜೈಭೀಮಾ ನಗರದಲ್ಲಿ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ಜೀವನ ಆಧಾರಿತ ಮಹಾನಾಯಕ ಧಾರಾವಾಹಿ ಯಶಸ್ವಿಯಾಗಿ ಮುಂದುವರೆಯಬೇಕೆಂಬ ಆಶಯದೊಂದಿಗೆ ಧಾರಾವಾಹಿ ಸೃಷ್ಠಿಕರ್ತೆ ಹಾಗು ವಾಹಿನಿ ಮುಖ್ಯಸ್ಥರು ಮತ್ತು ಸಿಬ್ಬಂದಿಗಳಿಗೆ ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಭಿನಂದನೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.
ಸಮಾಜದಲ್ಲಿ ಪೌರಕಾರ್ಮಿಕರ ಶ್ರಮ ಹೆಚ್ಚಿನದ್ದಾಗಿದ್ದು, ಪೌರಕಾರ್ಮಿಕರು ಅಂಬೇಡ್ಕರ್‌ರವರ ಆಶಯಗಳನ್ನು ಸರಿಯಾಗಿ ಅರಿತುಕೊಳ್ಳಬೇಕು. ಈ ರೀತಿಯ ಕಾರ್ಯಕ್ರಮಗಳು ಎಲ್ಲರಿಗೂ ಮಾರ್ಗದರ್ಶಕವಾಗಬೇಕೆಂದರು.
     ಪೊಲೀಸ್ ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ಮಾತನಾಡಿ, ದೀನ ದಲಿತರ ದ್ವನಿ, ಮಹಾನ್‌ಚೇತನ ಡಾ. ಬಿ.ಆರ್ ಅಂಬೇಡ್ಕರ್‌ರವರು ದೇಶಕ್ಕೆ ನೀಡಿರುವ ಸಂವಿಧಾನ ಎಲ್ಲರನ್ನು ಸರ್ವಸಮಾನತೆಯಿಂದ ಕಾಣುವಂತೆ ಮಾಡಿದೆ. ಅಂಬೇಡ್ಕರ್‌ರವರು ತಮ್ಮ ಬದುಕಿನ ಕೊನೆಯವರೆಗೂ ನೋವು, ಅವಮಾನ, ಸಂಕಷ್ಟಗಳನ್ನು ಎದುರಿಸಿ ಭವಿಷ್ಯದ ಸಮಾಜಕ್ಕೆ ಬೆಳಕಾಗಿ ನಿಂತವರು. ಇವರ ಆದರ್ಶತನ ಎಲ್ಲರೂ ಮೈಗೂಡಿಸಿಕೊಂಡು ಮುನ್ನಡೆಬೇಕೆಂದರು.
      ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಮಾತನಾಡಿದರು. ಡಿಎಸ್‌ಎಸ್ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ಜಿಲ್ಲಾ ಸಂಚಾಲಕ ಚಿನ್ನಯ್ಯ, ಡಿಎಸ್‌ಎಸ್ ಅಂಗವಿಕಲರ ವಿಭಾಗದ ಜಿಲ್ಲಾಧ್ಯಕ್ಷ ಕಾಣಿಕ್‌ರಾಜ್, ಜಿಂಕ್‌ಲೈನ್ ಮಣಿ, ರಂಗನಾಥ್, ಮಾರುತಿ ಮೆಡಿಕಲ್ ಆನಂದ್, ಈಶ್ವರಪ್ಪ, ಎ. ತಿಪ್ಪೇಸ್ವಾಮಿ, ಚುಂಜ್ಯಾನಾಯ್ಕ, ಹಿರಿಯ ಪತ್ರಕರ್ತ ಎನ್. ಬಾಬು, ಪರಮೇಶ್ವರಪ್ಪ(ಪರ್ಮಿ), ಎನ್. ಗೋವಿಂದ, ಕಾರ್ತಿಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಡಿಎಸ್ಎಸ್ ಕಾರ್ಯಕರ್ತ ನವೀನಕುಮಾರ್ ನೇತೃತ್ವದ ಹರೀಶ್, ಶಂಕರ್, ಮಂಜ, ಕಿರಣ, ಶಶಿ ಮತ್ತು ಸುಮನ್ ಸೇರಿದಂತೆ ಇನ್ನಿತರರನ್ನೊಳಗೊಂಡ ತಂಡ ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಿತು.

ಪಾಸ್ವಾನ್ನಿಧನಕ್ಕೆ ಕಾರ್ಮಿಕ ಸಂಘ ಸಂತಾಪ

ಭದ್ರಾವತಿ, ಅ. ೯: ಕೇಂದ್ರ ಸಚಿವರಾಮ್ ವಿಲಾಸ್ ಪಾಸ್ವಾನ್‌ರವರನಿಧನ ದೇಶಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ ಎಂದು ವಿಐಎಸ್‌ಎಲ್ಕಾರ್ಮಿಕ ಸಂಘ ಸಂತಾಪ ಸೂಚಿಸಿದೆ.
     ಯುಪಿಎ ಸರ್ಕಾರದ ಅವಧಿಯಲ್ಲಿಉಕ್ಕು ಸಚಿವರಾಗಿದ್ದ ಪಾಸ್ವಾನ್‌ರವರು ವಿಐಎಸ್‌ಎಲ್ಕಾರ್ಖಾನೆ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸಿದ್ದರು. ಅವರ ನಿಧನಕ್ಕೆ ಕಾರ್ಮಿಕವರ್ಗ ಸಂತಾಪ ಸೂಚಿಸುತ್ತದೆ ಎಂದುಸಂಘದ ಅಧ್ಯಕ್ಷ ಜೆ. ಜಗದೀಶ್ತಿಳಿಸಿದ್ದಾರೆ.