Saturday, October 10, 2020

ಮಹಿಳೆಯರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸಿ : ಎಂ.ಎಚ್ ಲಕ್ಷ್ಮಣ

ಭದ್ರಾವತಿ ತಾಲೂಕಿನ ಸಿಂಗನಮನೆ ಗ್ರಾಮ ಪಂಚಾಯಿತಿಯಲ್ಲಿ ಬೆಂಗಳೂರಿನ ದಿ ಹಂಗರ್ ಪ್ರಾಜೆಕ್ಟ್ ಸಹಕಾರದೊಂದಿಗೆ ವಿಕಸನ ಸಂಸ್ಥೆಯ ವತಿಯಿಂದ  'ಸಂಭಾವ್ಯ ನಾಯಕತ್ವ' ತರಬೇತಿ ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ, ಅ. ೧೦: ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸಬೇಕೆಂದು ವಿಕಸನ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಎಂ.ಎಚ್ ಲಕ್ಷ್ಮಣ ಕರೆ ನೀಡಿದರು.
     ಅವರು ತಾಲೂಕಿನ ಸಿಂಗನಮನೆ ಗ್ರಾಮ ಪಂಚಾಯಿತಿಯಲ್ಲಿ ಬೆಂಗಳೂರಿನ ದಿ ಹಂಗರ್ ಪ್ರಾಜೆಕ್ಟ್ ಸಹಕಾರದೊಂದಿಗೆ ವಿಕಸನ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 'ಸಂಭಾವ್ಯ ನಾಯಕತ್ವ' ತರಬೇತಿಯಲ್ಲಿ ಪಾಲ್ಗೊಂಡು ಮಾತನಾಡಿದರು.
     ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಮಹಿಳೆಯರು ಹೆಚ್ಚಾಗಿ ಭಾಗವಹಿಸಬೇಕೆಂಬ ಉದ್ದೇಶದಿಂದ ಸರ್ಕಾರ ಶೇ.೫೦ರಷ್ಟು ಮೀಸಲಾತಿ ನೀಡಿದೆ. ಇದನ್ನು ಮಹಿಳೆಯರು ಸದ್ಬಳಕೆ ಮಾಡಿಕೊಳ್ಳಬೇಕು. ಚುನಾವಣೆಯಲ್ಲಿ ಸ್ಪರ್ಧಿಸುವ ಮಹಿಳೆಯರು ಗ್ರಾಮ ಪಂಚಾಯಿತಿ ಆಡಳಿತದ ಕಾರ್ಯ ವಿಧಾನಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರಬೇಕು. ಇದರಿಂದ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮಹಿಳೆಯರು ತಮ್ಮ ಅಧಿಕಾರ ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ ಎಂದರು.
     ಸಭೆಯಲ್ಲಿ ಸಿಂಗನಮನೆ ಗ್ರಾಮದ ಮಹಿಳೆಯರು, ಪಂಚಾಯಿತಿ ಮಹಿಳಾ ಸದಸ್ಯರು ಭಾಗವಹಿಸಿದ್ದು, ಈ ಪೈಕಿ ೪ ಮಹಿಳಾ ಸದಸ್ಯರು ಮುಂಬರುವ ಚುನಾವಣೆಯಲ್ಲಿ ಪುನಃ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದರು. ವಿಕಸನ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.

No comments:

Post a Comment