![](https://blogger.googleusercontent.com/img/b/R29vZ2xl/AVvXsEhC7FkUXZSZher16qBKfJxFdLTngIXsWU9rPy41mrpqtC6c_vZ2mp-6fN5KMq9tJep1Y30AQx4Kd5mplrxESzZRdqYjIKowhvcNyJCjThg2oCDqWeG5sQr7oCFB3NaCX8z5pg97kU33KWTK/w400-h154-rw/D2-BDVT2-707352.jpg)
ಭದ್ರಾವತಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣಕ್ಕೆ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಹೆಸರು ನಾಮಕರಣಗೊಳಿಸುವ ಸಂಬಂಧ ಬಿ.ಎಚ್ ರಸ್ತೆ ಪದ್ಮ ನಿಲಯ ಹೋಟೆಲ್ ಸಭಾಂಗಣದಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಸಭೆ ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ, ನ. ೨: ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣಕ್ಕೆ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಹೆಸರು ನಾಮಕರಣಗೊಳಿಸುವ ನಿಟ್ಟಿನಲ್ಲಿ ನಡೆಸುತ್ತಿರುವ ಹೋರಾಟ ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ತಿಳಿಸಿದರು.
ಅವರು ಸೋಮವಾರ ನಗರದ ಬಿ.ಎಚ್ ರಸ್ತೆ ಪದ್ಮ ನಿಲಯ ಹೋಟೆಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯ ನೇತೃತ್ವ ವಹಿಸಿ ಮಾತನಾಡಿದರು. ಈ ಹಿಂದೆ ನಿಲ್ದಾಣಕ್ಕೆ ಅಪ್ಪಾಜಿ ಹೆಸರು ನಾಮಕರಣಗೊಳಿಸಲು ಮಾಜಿ ಶಾಸಕ ವೈಎಸ್‌ವಿ ದತ್ತಾ ನೇತೃತ್ವದಲ್ಲಿ ಹೋರಾಟ ನಡೆಸಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ತಾಲೂಕು ಆಡಳಿತ ಸಹ ಪೂರಕವಾಗಿ ಸ್ಪಂದಿಸುವ ವಿಶ್ವಾಸವಿದೆ. ಮುಂದಿನ ಹಂತದ ಹೋರಾಟ ನಡೆಸುವ ಅಗತ್ಯವಿದ್ದು, ಈ ಹಿನ್ನಲೆಯಲ್ಲಿ ಎಲ್ಲರ ಸಹಕಾರ ಅಗತ್ಯವಿದೆ ಎಂದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಮುಖರು ಮಾತನಾಡಿ, ಅಪ್ಪಾಜಿಯವರು ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅವಿಸ್ಮರಣೀಯವಾಗಿದೆ. ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕಾದರೆ ಅವರ ಹೆಸರನ್ನು ಬಸ್ ನಿಲ್ದಾಣಕ್ಕೆ ನಾಮಕರಣಗೊಳಿಸುವುದು ಸೂಕ್ತವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಸ್. ಮಣಿಶೇಖರ್, ಜೆ.ಪಿ ಯೋಗೇಶ್, ಶಿಮೂಲ್ ಅಧ್ಯಕ್ಷ ಆನಂದ್, ಅಪ್ಪಾಜಿ ಅಭಿಮಾನಿಗಳ ಬಳಗದ ಅಧ್ಯಕ್ಷ ಆರ್. ಕರುಣಾಮೂರ್ತಿ, ತಾ.ಪಂ ಸದಸ್ಯರಾದ ಧರ್ಮೇಗೌಡ, ಯಶೋಧಮ್ಮ, ನಗರಸಭೆ ಮಾಜಿ ಅಧ್ಯಕ್ಷರಾದ ಎಂ.ಎಸ್ ಸುಧಾಮಣಿ, ವಿಶಾಲಾಕ್ಷಿ, ಮುಖಂಡರಾದ ಕರಿಯಪ್ಪ, ಗುಣಶೇಖರ್, ಬದರಿನಾರಾಯಣ, ಗಿರಿನಾಯ್ಡು, ಉಮೇಶ್, ಚಂದ್ರಶೇಖರ್, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಬಿ.ವಿ ಗಿರೀಶ್, ಸಂಯುಕ್ತ ಜನತಾದಳ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್ ಗೌಡ, ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್, ಮುಳ್ಕೆರೆ ಲೋಕೇಶ್, ಇಬ್ರಾಹಿಂ ಖಾನ್, ಜಾವಿದ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.