ವಿಐಎಸ್‌ಎಲ್ ಉಳಿಸಿ ಹೋರಾಟ ಸಮಿತಿಯಿಂದ ಸಂಸದ ರಾಘವೇಂದ್ರಗೆ ಮನವಿ
ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಖಾಸಗಿಕರಣಗೊಳಿಸಬಾರದು, ಕಾಯಂ ಹಾಗು ಗುತ್ತಿಗೆ ಕಾರ್ಮಿಕರ ಮತ್ತು ನಿವೃತ್ತ ಕಾರ್ಮಿಕರ ಹಿತ ಕಾಪಾಡುವಂತೆ ಸಂಸದ ಬಿ.ವೈ ರಾಘವೇಂದ್ರರವರಿಗೆ ಭಾನುವಾರ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ವಿಐಎಸ್‌ಎಲ್ ಉಳಿಸಿ ಹೋರಾಟ ಸಮಿತಿ ಮನವಿ ಮಾಡಿತು.
ಭದ್ರಾವತಿ, ಡಿ. ೬: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಖಾಸಗಿಕರಣಗೊಳಿಸಬಾರದು, ಕಾಯಂ ಹಾಗು ಗುತ್ತಿಗೆ ಕಾರ್ಮಿಕರ ಮತ್ತು ನಿವೃತ್ತ ಕಾರ್ಮಿಕರ ಹಿತ ಕಾಪಾಡುವಂತೆ ಸಂಸದ ಬಿ.ವೈ ರಾಘವೇಂದ್ರರವರಿಗೆ ಭಾನುವಾರ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ವಿಐಎಸ್‌ಎಲ್ ಉಳಿಸಿ ಹೋರಾಟ ಸಮಿತಿ ಮನವಿ ಮಾಡಿತು.
ಕೇಂದ್ರ ಸರ್ಕಾರ ಕಾರ್ಖಾನೆಯನ್ನು ಖಾಸಗಿಕರಣಗೊಳಿಸಲು ಮುಂದಾಗಿರುವುದು ವಿಷಾದನೀಯ ಬೆಳವಣಿಗೆಯಾಗಿದ್ದು, ಇದಕ್ಕೆ ಅವಕಾಶ ನೀಡಬಾರದು. ಪ್ರಸ್ತುತ ಕಾರ್ಖಾನೆಯಲ್ಲಿರುವ ಗುತ್ತಿಗೆ ಕಾರ್ಮಿಕರಿಗೆ ಪೂರ್ಣಾವಧಿ ಕೆಲಸ ನೀಡಬೇಕು. ನಿವೃತ್ತ ಕಾರ್ಮಿಕರು ವಾಸಿಸುತ್ತಿರುವ ಮನೆಗಳನ್ನು ಮುಂದುವರೆಸುವುದು ಸೇರಿದಂತೆ ಇತ್ಯಾದಿ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಲಾಯಿತು.
ಸಮಿತಿ ಮನವಿಗೆ ಸ್ಪಂದಿಸಿದ ಸಂಸದರು, ಉಕ್ಕು ಪ್ರಾಧಿಕಾರದ ಎಎಸ್‌ಪಿ ಮತ್ತು ಎಸ್‌ಎಸ್‌ಪಿ ಕಾರ್ಖಾನೆಗಳಲ್ಲಿ ಯಾವುದಾದರೊಂದು ಕಾರ್ಖಾನೆಯನ್ನು ಖಾಸಗಿಕರಣ ಪ್ರಕ್ರಿಯೆಯಿಂದ ಒಂದು ವೇಳೆ ಕೈಬಿಟ್ಟಲ್ಲಿ ವಿಐಎಸ್‌ಎಲ್‌ಯನ್ನು ಸಹ ಸರ್ಕಾರಿ ಸ್ವಾಮ್ಯದಲ್ಲಿಯೇ ಉಳಿಸಿಕೊಳ್ಳಲು ಪ್ರಯತ್ನಿಸಲಾಗುವುದು. ಅಲ್ಲದೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರೊಂದಿಗೆ ಕಾರ್ಖಾನೆ ಸಮಸ್ಯೆಗಳನ್ನು ಚರ್ಚಿಸಲು ಸಮಯ ನಿಗದಿಪಡಿಸಿಕೊಡುವುದಾಗಿ ಭರವಸೆ ನೀಡಿದರು.
ಮುಖ್ಯಮಂತ್ರಿಗಳ ಭೇಟಿ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿ ಹೋರಾಟ ಸಮಿತಿ ಅಧ್ಯಕ್ಷ ಎಸ್ ಎನ್ ಬಾಲಕೃಷ್ಣ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ವಿಐಎಸ್‌ಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್, ಜೆಡಿಎಸ್ ಅಧ್ಯಕ್ಷ ಆರ್. ಕರುಣಾಮೂರ್ತಿ, ಜಿಲ್ಲಾ ಪಂಚಾಯಿತಿ ಸದಸ್ಯ ಎಸ್. ಮಣಿ ಶೇಖರ್, ಮುಖಂಡರಾದ ಎಂ.ಎ ಅಜಿತ್ ಅಪ್ಪಾಜಿ, ಬಾಲಕೃಷ್ಣ, ಎಎಪಿ ಜಿಲ್ಲಾಧ್ಯಕ್ಷ ರವಿಕುಮಾರ್, ಮಂಗೋಟೆ ರುದ್ರೇಶ್, ವೆಂಕಟೇಶ್, ಕಾರ್ಮಿಕ ಸಂಘದ ಪದಾಧಿಕಾರಿಗಳಾದ ಬಸಂತ ಕುಮಾರ್, ಅಮೃತ್ ಕುಮಾರ್, ಗುತ್ತಿಗೆ ಕಾರ್ಮಿಕರ ಸಂಘದ ಸುರೇಶ್, ರಾಕೇಶ್, ಶ್ರೀನಿವಾಸ್ ಮತ್ತು ನರಸಿಂಹಾಚಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.