ಭದ್ರಾವತಿ ಅಪ್ಪರ್ ಹುತ್ತಾದಲ್ಲಿರುವ ಕೆಂಪೇಗೌಡ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಚುಂಚಾದ್ರಿ ಮಹಿಳಾ ವೇದಿಕೆಯ ವಾರ್ಷಿಕ ಸಭೆ ಹಾಗೂ ೬೫ನೇ ಕನ್ನಡ ರಾಜ್ಯೋತ್ಸವ ಮತ್ತು ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರಿಗೆ ಭಾವಪೂರ್ಣ ನುಡಿನಮನ ಕಾರ್ಯಕ್ರಮದಲ್ಲಿ ವೇದಿಕೆ ಗೌರವಾಧ್ಯಕ್ಷೆ ಡಾ. ಅನುರಾಧ ಪಟೇಲ್‌ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಭದ್ರಾವತಿ, ಡಿ. ೧೩: ಯಾವುದೇ ಸಂಘಟನೆಯಲ್ಲಿ ಭಿನ್ನಾಭಿಪ್ರಾಯವಿರಬಾರದು. ಎಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯಬೇಕು. ಆಗ ಮಾತ್ರ ಸಂಘಟನೆ ಹೆಚ್ಚು ಶಕ್ತಿಯುತವಾಗಿ ರೂಪುಗೊಳ್ಳಲು ಸಾಧ್ಯ ಎಂದು ನಗರದ ಚುಂಚಾದ್ರಿ ಮಹಿಳಾ ವೇದಿಕೆ ಗೌರಾವಾಧ್ಯಕ್ಷೆ, ಡಿ. ದೇವರಾಜ ಅರಸು ಸಂಶೋಧನ ಸಂಸ್ಥೆ ನಿರ್ದೇಶಕಿ ಡಾ. ಅನುರಾಧ ಪಟೇಲ್ ಹೇಳಿದರು.
ಅವರು ಭಾನುವರ ಅಪ್ಪರ್ ಹುತ್ತಾದಲ್ಲಿರುವ ಕೆಂಪೇಗೌಡ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವೇದಿಕೆಯ ವಾರ್ಷಿಕ ಸಭೆ ಹಾಗೂ ೬೫ನೇ ಕನ್ನಡ ರಾಜ್ಯೋತ್ಸವ ಮತ್ತು ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರಿಗೆ ಭಾವಪೂರ್ಣ ನುಡಿನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಂಘಟನೆಗಾಗಿ ಯಾರನ್ನು ಸಹ ಬೇಡಿಕೊಳ್ಳುವ ಮನಸ್ಥಿತಿ ರೂಪುಗೊಳ್ಳಬಾರದು. ಸಂಘಟನೆಯಲ್ಲಿರುವವರು ಸಂಘಟನೆ ಕೆಲಸ ಸಮಾಜ ಸೇವೆ ಎಂದು ಭಾವಿಸಿಕೊಳ್ಳಬೇಕು. ಸಮಾಜ ಸೇವೆಯಲ್ಲಿ ತೊಡಗಿರುವವರು ಮಾನಸಿಕವಾಗಿ ಸನ್ನದ್ಧರಾಗಿರಬೇಕು. ಯಾರಲ್ಲೂ ಸ್ವಾರ್ಥ ಮನೋಭಾವವಿರಬಾರದು ಎಂದರು.
ಮಹಿಳೆಯರಿಗೆ ಸ್ವಾಭಿಮಾನದಿಂದ ಬದುಕುವ ಕಲೆಗಾರಿಕೆ ಇಂದು ಬಹಳ ಮುಖ್ಯವಾಗಿದೆ. ಈ ಹಿನ್ನಲೆಯಲ್ಲಿ ವೇದಿಕೆ ವತಿಯಿಂದ ಮಹಿಳೆಯರಿಗೆ ಹಲವು ತರಬೇತಿಗಳನ್ನು ನೀಡಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು. ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರು ಸಂಘಟನೆ ಸ್ಪೂರ್ತಿದಾಯಕ ಮತ್ತು ಆದರ್ಶ ವ್ಯಕ್ತಿಯಾಗಿದ್ದರು. ಅವರ ಆದರ್ಶತನಗಳನ್ನು ಮೈಗೂಡಿಸಿಕೊಳ್ಳಬೇಕೆಂದರು.
ನಗರಸಭಾ ಸದಸ್ಯ ಎಂ.ಎ ಅಜಿತ್ ಮಾತನಾಡಿ, ವೇದಿಕೆ ಕಾರ್ಯ ಚಟುವಟಿಕೆಗಳಿಗೆ ನಮ್ಮ ತಂದೆಯವರು ನೀಡುತ್ತಿದ್ದ ಪ್ರೋತ್ಸಾಹ ಮುಂದಿನ ದಿನಗಳಲ್ಲೂ ಮುಂದುವರೆಯಲಿದೆ. ಈ ನಿಟ್ಟಿನಲ್ಲಿ ನಾನು ಮತ್ತು ನನ್ನ ತಾಯಿಯವರು ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧರಾಗಿದ್ದೇವೆ. ಪ್ರತಿಯೊಬ್ಬರು ಕನ್ನಡ ಭಾಷೆ ಪ್ರೋತ್ಸಾಹಿಸಬೇಕು. ಭಾಷೆ ಆರಂಭ ಮೊದಲು ಮನೆಗಳಿಂದ ಆರಂಭಗೊಳ್ಳಬೇಕು. ಈ ನಿಟ್ಟಿನಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ ಎಂದರು.
ಶಾರದಾ ಅಪ್ಪಾಜಿ, ವೇದಿಕೆ ಉಪಾಧ್ಯಕ್ಷೆ ಎಂ.ಎಸ್ ಸುಧಾಮಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಭಾರತಿ ಜಯರಾಮ್ ವಾರ್ಷಿಕ ವರದಿ ಮಂಡಿಸಿದರು. ಖಜಾಂಚಿ ಲತಾ ಪ್ರಭಾಕರ್ ಲೆಕ್ಕಪತ್ರ ಮಂಡಿಸಿದರು. ಸಂಘದ ಅಧ್ಯಕ್ಷೆ ಪ್ರಭಾವತಿ ರಾಜು ಅಧ್ಯಕ್ಷತೆ ವಹಿಸಿದ್ದರು.
ವೇದಿಕೆ ಸದಸ್ಯರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ಜಾನಪದ ಕಲಾವಿದರಾದ ತಮಟೆ ಜಗದೀಶ್, ದಿವಾಕರ್ ಮತ್ತು ರವಿಕುಮಾರ್ ತಂಡದಿಂದ ಗಾಯನ ಕಾರ್ಯಕ್ರಮ ನಡೆಯಿತು.