ಭದ್ರಾವತಿ ಮಿಲ್ಟ್ರಿಕ್ಯಾಂಪ್ ಬುಳ್ಳಾಪುರದಲ್ಲಿ ಜ.೧೬ರಿಂದ ಕಾರ್ಯಾರಂಭಗೊಳ್ಳಲಿರುವ ಆರ್‌ಎಎಫ್ ಘಟಕ ಶಿಲಾನ್ಯಾಸ ಕಾರ್ಯಕಮಕ್ಕೆ ಸಿದ್ದತೆಗಳನ್ನು ಕೈಗೊಂಡಿರುವುದು.
ಭದ್ರಾವತಿ, ಜ. ೧೫: ಲೋಕಸಭಾ ಸದಸ್ಯ ಬಿ.ವೈ ರಾಘವೇಂದ್ರರವರ ಅವಿರತ ಪರಿಶ್ರಮದಿಂದಾಗಿ ನಗರದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ ವಿಶೇಷ ವಿಭಾಗವಾಗಿರುವ ಕ್ಷಿಪ್ರ ಕಾರ್ಯ ಪಡೆ(ಆರ್‌ಎಎಫ್) ಘಟಕ ನಗರದಲ್ಲಿ ಜ.೧೬ರಂದು ಶಂಕುಸ್ಥಾಪನೆಗೊಳ್ಳುತ್ತಿದ್ದು, ಜಿಲ್ಲೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಿ.ಟಿ ಮೇಘರಾಜ್ ಮಾತನಾಡಿದರು.
ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗೃಹ ಸಚಿವರು ಘಟಕದ ಶಂಕುಸ್ಥಾಪನೆ ನೆರವೇರಿಸಲಿದ್ದು, ಕಾರ್ಯಕ್ರಮ ಯಾವುದೇ ರಾಜಕೀಯವಿಲ್ಲ ಉದ್ದೇಶ ಹೊಂದಿರುವುದಿಲ್ಲ. ಇದೊಂದು ಜಿಲ್ಲೆಯಲ್ಲಿ ನಡೆಯುತ್ತಿರುವ ಐತಿಹಾಸಿಕ ಕಾರ್ಯಕ್ರಮವಾಗಿದೆ. ಎಲ್ಲೆಡೆ ಸಂಭ್ರಮ ಮನೆ ಮಾಡಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸ್ವತಃ ಸಂಸದರು ಶಕ್ತಿಮೀರಿ ಶ್ರಮಿಸುತ್ತಿದ್ದಾರೆ. ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಗಣ್ಯರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಮಹಿಳಾ ಮುಖಂಡರು ಸೇರಿದಂತೆ ಸುಮಾರು ೮ ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಇದಕ್ಕೆ ತಕ್ಕಂತೆ ಬೃಹತ್ ವೇದಿಕೆ ಸಹ ನಿರ್ಮಿಸಲಾಗಿದೆ ಎಂದರು.
ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರು ಅಲ್ಲಿನ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕೇಂದ್ರ ಸರ್ಕಾರ ಗೃಹ ಸಚಿವರ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಿರುವ ಹಿನ್ನಲೆಯಲ್ಲಿ ಪ್ರತಿಯೊಬ್ಬರು ಭದ್ರತೆ ವಿಭಾಗದ ತಪಾಸಣೆಗೆ ಒಳಪಟ್ಟು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಮನವಿ ಮಾಡಿದರು.
ಎಲ್ಲಾ ರಾಜಕೀಯ ಪಕ್ಷದ ಮುಖಂಡರು, ಕಾರ್ಮಿಕ ಸಂಘಟನೆಗಳು ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳ ಅಭಿವೃದ್ಧಿ ವಿಚಾರಗಳು ಸೇರಿದಂತೆ ಯಾವುದೇ ರೀತಿಯ ವಿಚಾರಗಳಿದ್ದರೂ ಸಹ ಅವುಗಳನ್ನು ಬದಿಗಿಟ್ಟು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಬೇಕೆಂದು ಕೋರಿದರು.
ಜಿಲ್ಲಾ ಕಾರ್ಯದರ್ಶಿಗಳಾದ ಶಿವರಾಜ್, ಬಿ.ಕೆ ಶ್ರೀನಾಥ್, ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.