Tuesday, February 2, 2021

ಎಸ್. ಕೂಬಾನಾಯ್ಕ್‌ಗೆ ‘ಬಂಜಾರ ರತ್ನ’ ಪ್ರಶಸ್ತಿ

ಕರ್ನಾಟಕ ರಾಜ್ಯ ಬಂಜಾರ ವಿದ್ಯಾರ್ಥಿ ಸಂಘದ ವತಿಯಿಂದ ಶಿವಮೊಗ್ಗ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಲಾಗಿದ್ದ 'ಬಂಜಾರ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಅಭಿನಂದನಾ' ಕಾರ್ಯಕ್ರಮದಲ್ಲಿ ಭದ್ರಾವತಿ ಹಳ್ಳಿಕೆರೆ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕ ಎಸ್. ಕೂಬಾನಾಯ್ಕ್ ರವರಿಗೆ 'ಬಂಜಾರ ರತ್ನ' ಪ್ರಶಸ್ತಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಭದ್ರಾವತಿ, ಫೆ. ೨: ತಾಲೂಕಿನ ಹಳ್ಳಿಕೆರೆ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ, ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಎಸ್. ಕೂಬಾನಾಯ್ಕ್ 'ಬಂಜಾರ ರತ್ನ' ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಕರ್ನಾಟಕ ರಾಜ್ಯ ಬಂಜಾರ ವಿದ್ಯಾರ್ಥಿ ಸಂಘದ ವತಿಯಿಂದ ಶಿವಮೊಗ್ಗ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಲಾಗಿದ್ದ 'ಬಂಜಾರ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಅಭಿನಂದನಾ' ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ರಾಜ್ಯದ ವಿವಿಧ ಭಾಗಗಳಲ್ಲಿರುವ ಬಂಜಾರ ಸಮಾಜದ ಸುಮಾರು ೧೪ ಶಾಖಾ ಮಠಗಳ ಸ್ವಾಮೀಜಿಗಳು, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವೇದಾವಿಜಯಕುಮಾರ್, ಸಾಮಾಜಿಕ ಕಳಕಳಿ ವೇದಿಕೆ ಸಂಸ್ಥಾಪಕ ಡಾ. ರಾಜಾನಾಯ್ಕ್, ಕರ್ನಾಟಕ ರಾಜ್ಯ ಬಂಜಾರ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ಡಿ.ಆರ್ ಗಿರೀಶ್ ಮತ್ತು ಹೃದಯರೋಗ ತಜ್ಞ ಡಾ. ಗಿರೀಶ್ ಮೂಡ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.  



ಕೊನೆಗೂ ಕಲ್ಪನಹಳ್ಳಿ ಗ್ರಾಮಕ್ಕೆ ಕೆಎಸ್‌ಆರ್‌ಟಿಸಿ ಬಸ್

  ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕಲ್ಪನಹಳ್ಳಿ ಗ್ರಾಮದಲ್ಲಿ ಹಲವು ವರ್ಷಗಳ ಕನಸು ನನಸಾಗಿದ್ದು, ಗ್ರಾಮಕ್ಕೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ. ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಬಸ್ ಸಂಚಾರಕ್ಕೆ ಚಾಲನೆ ನೀಡಿದರು.
   ಭದ್ರಾವತಿ, ಫೆ. ೨: ತಾಲೂಕಿನ ಕೂಡ್ಲಿಗೆರೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕಲ್ಪನಹಳ್ಳಿ ಗ್ರಾಮದಲ್ಲಿ ಹಲವು ವರ್ಷಗಳ ಕನಸು ನನಸಾಗಿದ್ದು, ಗ್ರಾಮಕ್ಕೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ.
     ನಗರ ಪ್ರದೇಶದಿಂದ ೧೫ ಕಿ.ಮೀ ದೂರದಲ್ಲಿರುವ ಗ್ರಾಮೀಣ ಪ್ರದೇಶವಾದ ಕಲ್ಪನಹಳ್ಳಿ ಗ್ರಾಮಸ್ಥರು ಅನೇಕ ಬಾರಿ ಕೆಎಸ್‌ಆರ್‌ಟಿಸಿ ಸಾರಿಗೆ ವ್ಯವಸ್ಥೆ ಕಲ್ಪಿಸಿಕೊಡುವಂತೆ ಸ್ಥಳೀಯ ಜನಪ್ರತಿನಿಧಿಗಳಿಗೆ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದರು. ಕಳೆದ ೪ ದಿನಗಳ ಹಿಂದೆ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ನಗರಸಭೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಸಭೆಯಲ್ಲಿ ಗ್ರಾಮಾಂತರ ಹಾಗು ನಗರ ವ್ಯಾಪ್ತಿಯಲ್ಲಿ ಬಸ್ ಸಂಚಾರ ಸಮರ್ಪಕವಾಗಿ ಕೈಗೊಳ್ಳುವಂತೆ ಕೆಎಸ್‌ಆರ್‌ಟಿಸಿ ಘಟಕದ ಅಧಿಕಾರಿಗಳಿಗೆ ಸೂಚಿಸಿದ್ದರು.
    ಈ ಹಿನ್ನಲೆಯಲ್ಲಿ ಇದೀಗ ಕಲ್ಪನಹಳ್ಳಿಗೆ  ಬಸ್ ವ್ಯವಸ್ಥೆ ಕಲ್ಪಿಸಲಾಗಿದ್ದು, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಬಸ್ ಸಂಚಾರಕ್ಕೆ ಚಾಲನೆ ನೀಡಿದರು. ಗ್ರಾಮದ ಯುವ  ಮುಖಂಡ ಪ್ರವೀಣ್ ನಾಯಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮಾದಿಗರ ಚೈತನ್ಯ ರಥ ಯಾತ್ರೆ ಫೆ.೩ರಂದು ನಗರಕ್ಕೆ ಆಗಮನ

ಭದ್ರಾವತಿ, ಜ. ೨: ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ವರದಿ ಜಾರಿಗೊಳಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ ೨ನೇ ಹಂತದ ಮಾದಿಗರ ಜೈತನ್ಯ ರಥ ಯಾತ್ರೆ ಫೆ.೩ರಂದು ನಗರಕ್ಕೆ ಆಗಮಿಸಲಿದೆ.
      ಸಂಜೆ ೪ ಗಂಟೆಗೆ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತಕ್ಕೆ ರಥ ಯಾತ್ರೆ ಆಗಮಿಸಲಿದ್ದು, ತಾಲೂಕು ಮಾದಿಗ ಒಕ್ಕೂಟದಿಂದ ಈ ರಥ ಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಲಾಗುವುದು. ಈ ಹಿನ್ನಲೆಯಲ್ಲಿ ತಾಲೂಕಿನ ಮಾದಿಗ ಸಮಾಜದ ಮುಖಂಡರು, ಮಹಿಳೆಯರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಒಕ್ಕೂಟದ ಅಧ್ಯಕ್ಷ ಎಂ. ಶಿವಕುಮಾರ್ ಕೋರಿದ್ದಾರೆ.

ಈ ಬಾರಿ ಬಜೆಟ್‌ನಲ್ಲಿ ಆದಾಯ ಹೆಚ್ಚಿಸಿಕೊಳ್ಳುವ ಯೋಜನೆಗಳನ್ನು ರೂಪಿಸಿಕೊಳ್ಳಿ

ಪೂರ್ವಭಾವಿ ಸಭೆಯಲ್ಲಿ ವಿವಿಧ-ಸಂಸ್ಥೆಗಳ ಮುಖಂಡರಿಂದ ಸಲಹೆ-ಸೂಚನೆ


   ಭದ್ರಾವತಿ, ಫೆ. ೨: ನಗರಸಭೆಯಲ್ಲಿ ಆದಾಯ ಬರುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು. ನಗರವನ್ನು ಎಲ್ಲಾ ರೀತಿಯಿಂದಲೂ ಅಭಿವೃದ್ಧಿಗೊಳಿಸಲು ಪೂರಕವಾದ ಬಜೆಟ್ ಈ ಬಾರಿ ಸಿದ್ದಪಡಿಸಬೇಕೆಂದು ಮಂಗಳವಾರ ನಗರಸಭೆ ಸಭಾಂಗಣದಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸಲಹೆ ವ್ಯಕ್ತಪಡಿಸಿದರು.
     ಸಭೆ ಆರಂಭದಲ್ಲಿ ಮಾತನಾಡಿದ ನಗರಸಭೆ ಲೆಕ್ಕಾಧೀಕ್ಷಕ ಸೈಯದ್ ಮಹಮೂದ್ ಆಲಿ ಮಾತನಾಡಿ, ಪ್ರತಿ ಬಾರಿ ಸಭೆಯಲ್ಲಿ ನಗರದ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸೂಕ್ತ-ಸಲಹೆಗಳನ್ನು ನೀಡುವ ಬಜೆಟ್ ಯಶಸ್ವಿಗೆ ಸಹಕರಿಸಿಕೊಂಡು ಬರುತ್ತಿದ್ದಾರೆ. ಈ ಬಾರಿ ಸಹ ಸರ್ಕಾರ ಹಲವು ಅನುದಾನಗಳನ್ನು ಹಾಗು ನಗರಸಭೆ ಆದಾಯಗಳನ್ನು ನಿರೀಕ್ಷಿಸಿ ಬಜೆಟ್ ಸಿದ್ದಪಡಿಸಬೇಕಾಗಿದೆ.  ಪ್ರಸ್ತುತ ನಗರಸಭೆಗೆ ಬರುತ್ತಿರುವ ಆದಾಯಗಳಲ್ಲಿ ಇಳಿಮುಖವಾಗುತ್ತಿದೆ. ಪ್ರಮುಖವಾಗಿ ನೀರಿನ ಶುಲ್ಕ ವಸೂಲಾತಿ ಈ ಬಾರಿ ಶೇ.೫೦ರಷ್ಟು ಮಾತ್ರ ನಡೆದಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರು ಸಹ ಸಹಕರಿಸುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಬೇಕೆಂದರು.
    ನಂತರ ಮಾತನಾಡಿದ ಪುರಸಭೆ ಮಾಜಿ ಉಪಾಧ್ಯಕ್ಷ ಟಿ. ವೆಂಕಟೇಶ್, ಜನಸಂಖ್ಯೆಗೆ ತಕ್ಕಂತೆ ೧೯೯೫ರಲ್ಲಿ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲಾಯಿತು. ಆದರೆ ನಿರೀಕ್ಷೆಯಂತೆ ಪ್ರಸ್ತುತ ನಗರಸಭೆ ಬೆಳವಣಿಗೆ ಹೊಂದಿಲ್ಲದಿರುವುದು ವಿಷಾದನೀಯ ಸಂಗತಿಯಾಗಿದೆ. ನಗರಸಭೆ ವತಿಯಿಂದ ಕೇವಲ ವೆಚ್ಚ ಮಾಡಲಾಗುತ್ತಿದೆ ಹೊರತು ಆದಾಯ ಬರುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿಕೊಂಡಿಲ್ಲ. ನಗರಸಭೆಗೆ ಯಾವುದೇ ರೀತಿ ಆದಾಯ ಬರದಿರುವ ಪ್ರದೇಶಗಳನ್ನು ಸಹ ಚುನಾವಣೆಯನ್ನು ಆಧಾರವಾಗಿಟ್ಟುಕೊಂಡು ಅನಗತ್ಯವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಮುಖ್ಯವಾಗಿ ಎಂಪಿಎಂ ಕಾರ್ಖಾನೆ ಸ್ಥಗಿತಗೊಂಡು ೫ ವರ್ಷಗಳು ಕಳೆದಿವೆ. ಕಾರ್ಮಿಕ ಕುಟುಂಬಗಳು ಸಹ ಬೇರೆಡೆಗೆ ಸ್ಥಳಾಂತರಗೊಂಡಿವೆ. ಕಾರ್ಖಾನೆ ಪುನಃ ಆರಂಭಗೊಳ್ಳುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಅಲ್ಲಿನ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದರಿಂದ ಯಾವುದೇ ಪ್ರಯೋಜನವಾಗುದಿಲ್ಲ. ಅಲ್ಲದೆ ನಗರಸಭೆಗೆ ಯಾವುದೇ ಆದಾಯ ಸಹ ಬರುವುದಿಲ್ಲ ಎಂದರು.
    ನಗರಸಭೆ ಹೊಂದಿರುವ ಆಸ್ತಿಗಳಿಂದ ಆದಾಯ ಹೆಚ್ಚಿಸಿಕೊಳ್ಳಬೇಕಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ ಹಲವೆಡೆ ಖಾಲಿ ನಿವೇಶನಗಳು ಸುಮಾರು ೫೦-೬೦ ವರ್ಷಗಳಿಂದ ಪಾಳುಬಿದ್ದಿವೆ. ಈ ಜಾಗಗಳನ್ನು ಖಾಲಿ ಬಿಡುವ ಬದಲು ಯಾವುದಾದರೂ ಕಟ್ಟಡಗಳನ್ನು ನಿರ್ಮಿಸಿದ್ದಲ್ಲಿ ಆದಾಯ ಬರಲಿದೆ. ನಗರದಲ್ಲಿ ಸುಮಾರು ೧೦ವರ್ಷಗಳ ಹಿಂದೆ ಆರಂಭಗೊಂಡಿರುವ ಒಳಚರಂಡಿ ಕಾಮಗಾರಿ ಇಂದಿಗೂ ಮುಕ್ತಾಯಗೊಂಡಿಲ್ಲ. ಕಳೆದ ೧೦ ವರ್ಷಗಳಿಂದ ಈ ಯೋಜನೆಯಲ್ಲಿ ಯಾವುದೇ ಆದಾಯ ನಿರೀಕ್ಷಿಸದೆ ಕೇವಲ ವೆಚ್ಚವನ್ನು ಮಾತ್ರ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ತಕ್ಷಣ ಕಾಮಗಾರಿ ಮುಕ್ತಾಯಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿದರು.


ಭದ್ರಾವತಿ ನಗರಸಭೆ ಬಜೆಟ್ ಪೂರ್ವಭಾವಿ ಸಭೆ ಮಂಗಳವಾರ ಪೌರಾಯುಕ್ತ ಮನೋಹರ್ ನೇತೃತ್ವದಲ್ಲಿ ನಡೆಯಿತು.
   ಪುರಸಭೆ ಮಾಜಿ ಸದಸ್ಯ, ಪತ್ರಕರ್ತ ಎನ್. ಬಾಬು ಮಾತನಾಡಿ, ನಗರಸಭೆ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು. ನಗರಸಭೆಯಲ್ಲಿ ನೀರಿನ ಕರ ವಸೂಲಿ ಹಾಗು ಕಂದಾಯ ಪಾವತಿಗೆ ಸೂಕ್ತ ವ್ಯವಸ್ಥೆ ರೂಪಿಸಿಕೊಳ್ಳಬೇಕು. ಜನರು ಶುಲ್ಕ ಪಾವತಿಸಿ ರಶೀದಿ ಪಡೆದಿದ್ದರೂ ಸಹ ಪಾವತಿ ಮಾಹಿತಿ ಖಾತೆಯಲ್ಲಿ ಜಮಾ ಆಗುತ್ತಿಲ್ಲ. ಇದರಿಂದಾಗಿ ಸಮಸ್ಯೆ ಎದುರಾಗುತ್ತಿದೆ. ಖಾತೆಗೆ ಹಣ ಜಮಾ ಮಾಡುವುದು ಅಧಿಕಾರಿಗಳ ಕರ್ತವ್ಯವಾಗಿದೆ. ಈ ಹಿನ್ನಲೆಯಲ್ಲಿ ಸ್ವೀಕೃತಗೊಂಡ ಹಣದ ಪಾವತಿಗಾಗಿ ಪ್ರತ್ಯೇಕ ವಿಭಾಗ ತೆರೆಯುವುದು ಸೂಕ್ತವಾಗಿದೆ ಎಂದು ಸಲಹೆ ನೀಡಿದರು.
     ನ್ಯಾಯವಾದಿ ಕೆ.ಎಸ್ ಸುಧೀಂದ್ರ ಮಾತನಾಡಿ, ತಾಲೂಕು ಕಛೇರಿ ರಸ್ತೆ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಅನಗ್ಯತವಾಗಿ ಈ ರಸ್ತೆಯಲ್ಲಿದ್ದ ಮರಗಳನ್ನು ಕಡಿತಲೆ ಮಾಡಲಾಗಿದೆ. ಯಾರನ್ನೋ ರಕ್ಷಿಸಲು ಮತ್ತ್ಯಾರನ್ನೋ ಬಲಿಕೊಡಲು ಹುನ್ನಾರ ನಡೆಸಲಾಗುತ್ತಿದೆ. ಈ ಕುರಿತು ನಗರಸಭೆಗೆ ಹಲವು ಬಾರಿ ಒತ್ತಾಯಿಸಲಾಗಿದೆ. ಆದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ರಸ್ತೆ  ಅಭಿವೃದ್ಧಿಯಲ್ಲಿ ತಾರತಮ್ಯ ಮಾಡದಿರುವುದು ಒಳ್ಳೆಯದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.  
    ನರಸಿಂಹಚಾರ್ ಮಾತನಾಡಿ, ಸಿದ್ದರೂಢನಗರದಲ್ಲಿ ಹಲವಾರು ವರ್ಷಗಳಿಂದ ಕುಡಿಯುವ ನೀರಿ ಸಮಸ್ಯೆ ಎದುರಾಗುತ್ತಿದೆ. ಈ ಹಿನ್ನಲೆಯಲ್ಲಿ ಈ ಬಗ್ಗೆ ಗಮನ ಹರಿಸಬೇಕೆಂದರು. ಇದೆ ರೀತಿ ಹಳೇನಗರ ಮನೆ ಮಾಲೀಕರ ಸಂಘದ ಅಧ್ಯಕ್ಷ ಎಲ್.ವಿ ರುದ್ರಪ್ಪ, ಜಹೀರ್ ಜಾನ್, ಬಿ. ಗಂಗಾಧರ್, ಬಸವರಾಜಯ್ಯ, ಹರೀಶ್ ಬಾಬು ಸೇರಿದಂತೆ ಇನ್ನಿತರರು ಸಲಹೆ ಸೂಚನೆಗಳನ್ನು ನೀಡಿದರು.  
   ಸಭೆಯಲ್ಲಿ ನಗರಸಭೆ ಪೌರಾಯುಕ್ತ ಮನೋಹರ್, ಇಂಜಿನಿಯರ್ ರಂಗರಾಜಪುರೆ, ಪರಿಸರ ಅಭಿಯಂತರ ಪ್ರಭಾಕರ್, ಕಂದಾಯಾಧಿಕಾರಿ ರಾಜ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



Monday, February 1, 2021

೩ ವರ್ಷದ ಮಗುವಿನ ಬುದ್ದಿಮತ್ತೆಗೆ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ಪ್ರಶಸ್ತಿ

ಬೆರಗಾದ ಶಾಸಕ ಬಿ.ಕೆ ಸಂಗಮೇಶ್ವರ್, ಮಗುವಿನ ಮುಂದಿನ ವಿದ್ಯಾಭ್ಯಾಸಕ್ಕೆ ನೆರವಿನ ಭರವಸೆ

 ಭದ್ರಾವತಿ ತಾಲೂಕಿನ ಉಕ್ಕುಂದ ಗ್ರಾಮದ ನಿವಾಸಿ ಪ್ರದೀಪ್ ಮತ್ತು ಸಿಂಧುರವರ ೩ ವರ್ಷದ ಹೆಣ್ಣು ಮಗು ಪ್ರತೀಕ್ಷ ಬುದ್ದಿಮತ್ತೆ ಸಾಧನೆಗೆ ಲಭಿಸಿರುವ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿಯನ್ನು ಶಾಸಕ ಬಿ.ಕೆ ಸಂಗಮೇಶ್ವರ್ ವಿತರಿಸಿದರು.
ಭದ್ರಾವತಿ, ಫೆ. ೧: ಕೆಲವು ಮಕ್ಕಳಿಗೆ ೩ ವರ್ಷ ಕಳೆದರೂ ಸಹ ಸರಿಯಾಗಿ ಮಾತು ಬರುವುದಿಲ್ಲ. ಇನ್ನೂ ಕೆಲವು ಮಕ್ಕಳಿಗೆ ದಿನದ ಘಟನೆಗಳನ್ನು ನೆನಪಿನಲ್ಲಿಟ್ಟುಕೊಳ್ಳುವಷ್ಟು ಬುದ್ದಿಮತ್ತೆ  ಸಹ ಇರುವುದಿಲ್ಲ. ಆದರೆ ಇಲ್ಲೊಂದು ೩ ವರ್ಷದ ಮಗುವಿನ ಬುದ್ದಿಮತ್ತೆ ಎಲ್ಲರನ್ನು ಬೆರಗುಗೊಳಿಸಿದೆ. ಹಲವು ವಿಷಯಗಳನ್ನು ಜ್ಞಾಪಕದಲ್ಲಿಟ್ಟುಕೊಂಡಿರುವ ಈ ಮಗುವಿನ ಸಾಧನೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್-೨೦೨೧ ಪ್ರಶಸ್ತಿ ಲಭಿಸಿದೆ.

ಎಲ್ಲಾ ಪೋಷಕರು ಸಹ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಕೇವಲ ೩ ವರ್ಷದ ಮಗುವಿನ ಸಾಧನೆ ನಿಜಕ್ಕೂ ಶ್ಲಾಘನೀಯವಾಗಿದ್ದು, ಈ ಮಗು ಇತರೆ ಮಕ್ಕಳಿಗೆ ಮಾದರಿಯಾಗಿದೆ. ಈ ಮಗುವಿನ ಮುಂದಿನ ವಿದ್ಯಾಭ್ಯಾಸಕ್ಕೆ ಎಲ್ಲಾ ರೀತಿಯ ನೆರವು ನೀಡುತ್ತೇನೆ.
    - ಬಿ.ಕೆ ಸಂಗಮೇಶ್ವರ್, ಶಾಸಕರು, ಭದ್ರಾವತಿ.


ತಾಲೂಕಿನ ಉಕ್ಕುಂದ ಗ್ರಾಮದ ನಿವಾಸಿ ಪ್ರದೀಪ್ ಮತ್ತು ಸಿಂಧುರವರ ೩ ವರ್ಷದ ಹೆಣ್ಣು ಮಗು ಪ್ರತೀಕ್ಷ ಸಾಧನೆಗೆ ಶಾಸಕ ಬಿ.ಕೆ ಸಂಗಮೇಶ್ವರ್ ಸಹ ಬೆರಗುಗೊಂಡಿದ್ದಾರೆ. ರಾಷ್ಟ್ರಗೀತೆ, ವಾರದ ೭ ದಿನಗಳ ಹೆಸರು, ೧೨ ತಿಂಗಳುಗಳ ಹೆಸರು, ೪ ರಾಷ್ಟ್ರೀಯ ಚಿಹ್ನೆಗಳು ಮತ್ತು ೧೪ ವಾಹನಗಳು ಹಾಗು ಮನುಷ್ಯನ ದೇಹದ ಅಂಗಾಂಗಗಳ ಗುರುತಿಸುವಿಕೆ, ೯ ರಾಷ್ಟ್ರೀಯ ಆಟಗಳ ಹೆಸರು ಹೀಗೆ ಹಲವು ವಿಷಯಗಳು ಕೇಳಿದ ತಕ್ಷಣ ಪಟ ಪಟನೆ ಪಟಾಕಿಯಂತೆ ಹೊರ ಬರುತ್ತವೆ ಈ ಮಗುವಿನ ಜ್ಞಾನ ಭಂಡಾರದಿಂದ.
ಉಕ್ಕುಂದ ಗ್ರಾಮ ಅರಣ್ಯ ವ್ಯಾಪ್ತಿಯ ಗ್ರಾಮೀಣ ಪ್ರದೇಶವಾಗಿದ್ದು, ನಗರ ಪ್ರದೇಶದಿಂದ ಸುಮಾರು ೧೦ ಕಿ.ಮೀ ದೂರದಲ್ಲಿದೆ. ಈ ಗ್ರಾಮಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಸಹ ಇಲ್ಲ. ಆನೆ, ಕರಡಿ, ಚಿರತೆ ಸೇರಿದಂತೆ ಕಾಡು ಪ್ರಾಣಿಗಳ ಹಾವಳಿಯಿಂದ ಸದಾ ಇಲ್ಲಿನ ಗ್ರಾಮಸ್ಥರು ತತ್ತರಿಸಿ ಹೋಗಿದ್ದಾರೆ. ಈ ಗ್ರಾಮದಲ್ಲಿಯೇ ಹುಟ್ಟಿ ಬೆಳೆದಿರುವ ತಂದೆ ಪ್ರದೀಪ್ ಪದವಿ ಪೂರೈಸಿದ್ದು, ಕೂಲಿ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಣೆಯಲ್ಲಿ ತೊಡಗಿದ್ದಾರೆ. ಉಳಿದಂತೆ ಪತ್ನಿ ಮನೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ಇಬ್ಬರು ಹೆಣ್ಣು ಮಕ್ಕಳು, ತಾಯಿಯೊಂದಿಗೆ ಬದುಕು ಸಾಗಿಸುತ್ತಿದ್ದಾರೆ. ಒಟ್ಟು ೫ ಜನರನ್ನು ಹೊಂದಿರುವ ಕುಟುಂಬಕ್ಕೆ ಮನೆ ಮನೆಗೆ ಹಾಲು ವಿತರಣೆ ಹಾಗು ಕೂಲಿ ಕೆಲಸವೇ ಆಧಾರವಾಗಿದೆ.

 ಮಗುವಿನ ಸಾಧನೆಯಿಂದ ಗ್ರಾಮಕ್ಕೆ ಮತ್ತಷ್ಟು ಹಿರಿಮೆ ಬಂದಿದ್ದು, ಬಾಲ್ಯದಿಂದಲೂ ಒಡನಾಟ ಹೊಂದಿರುವ ತಂದೆ ಪ್ರದೀಪ್ ಪದವಿ ಓದಿದ್ದರೂ ಸಹ ಕೂಲಿ ಕೆಲಸ ಮಾಡುವ ಮೂಲಕ ಗ್ರಾಮದಲ್ಲಿಯೇ ಉಳಿದುಕೊಂಡಿದ್ದಾರೆ. ಈ ಬಡ ಕುಟುಂಬಕ್ಕೆ ಹೆಚ್ಚಿನ ನೆರವಿನ ಅಗತ್ಯವಿದೆ.
                     - ಶಿವಕುಮಾರ್, ಗ್ರಾಮಸ್ಥ ಹಾಗು ಸಾಮಾಜಿಕ ಹೋರಾಟಗಾರ, ಉಕ್ಕುಂದ.

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿಗೆ ಭಾಜನಳಾಗಿರುವ ಪ್ರತೀಕ್ಷಳ ಮುಂದಿನ ವಿದ್ಯಾಭ್ಯಾಸ ಪೋಷಕರಿಗೆ ದೊಡ್ಡ ಸವಾಲಿನ ಕೆಲಸವಾಗಿದೆ. ಈ ಮಗುವಿನ ಸಾಧನೆ  ಗ್ರಾಮದಲ್ಲಿ ಹಬ್ಬದ ಸಂಭ್ರಮವನ್ನುಂಟು ಮಾಡಿದೆ. ಕೆಲವು ದಿನಗಳ ಹಿಂದೆಯೇ ಪ್ರಶಸ್ತಿ ಘೋಷಣೆಯಾಗಿರುವ ಬಗ್ಗೆ ಪೋಷಕರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮಾಹಿತಿ ನೀಡಿತ್ತು. ಇದೀಗ ಪದಕ ಮತ್ತು ಪ್ರಶಸ್ತಿ ಪತ್ರ ಲಭಿಸಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಮಗುವಿಗೆ ಪದಕ ಮತ್ತು ಪ್ರಶಸ್ತಿ ಪದಕ ವಿತರಿಸಿದರು.
ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಸ್ ಬಸವರಾಜ್, ಯುವ ಮುಖಂಡರಾದ ಬಿ.ಎಸ್ ಗಣೇಶ್, ಶಿವಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಹಜರತ್ ಸೈಯದ್ ಸಾದತ್ ಷಾ ಖಾದ್ರಿ ದರ್ಗಾ ವತಿಯಿಂದ ಉಚಿತ ಅಂಬ್ಯುಲೆನ್ಸ್ ಸೇವೆ

ಅಂಬ್ಯುಲೆನ್ಸ್ ಜೊತೆಗೆ ೧೧೨ ವಾಹನ ಸದುಪಯೋಗಕ್ಕೆ ಪೊಲೀಸ್ ಉಪಾಧೀಕ್ಷಕ ಕೃಷ್ಣಮೂರ್ತಿ ಕರೆ

ಭದ್ರಾವತಿ ತರೀಕೆರೆ ರಸ್ತೆಯಲ್ಲಿರುವ ಹಜರತ್ ಸೈಯದ್ ಸಾದತ್ ಷಾ ಖಾದ್ರಿ ದರ್ಗಾ ಕಮಿಟಿ ವತಿಯಿಂದ ಸಾಮಾಜಿಕ ಸೇವಾ ಯೋಜನೆಯಡಿ ಉಚಿತವಾಗಿ 'ತುರ್ತು ಅಂಬ್ಯುಲೆನ್ಸ್ ಸೇವೆಗೆ' ಸೋಮವಾರ ಪೊಲೀಸ್ ಉಪಾಧೀಕ್ಷಕ ಕೃಷ್ಣಮೂರ್ತಿ ಚಾಲನೆ ನೀಡಿದರು.  
   ಭದ್ರಾವತಿ, ಫೆ. ೧: ದುರ್ಘಟನೆಗಳು ಸಂಭವಿಸಿದ ಸಂದರ್ಭದಲ್ಲಿ ತುರ್ತು ಸೇವೆಗಳಿಗೆ ಅಂಬ್ಯುಲೆನ್ಸ್‌ಗಳು ಅಗತ್ಯವಾಗಿದ್ದು, ಸಾರ್ವಜನಿಕರು ಉಚಿತ ಅಂಬ್ಯುಲೆನ್ಸ್ ಸೇವೆಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಪೊಲೀಸ್ ಉಪಾಧೀಕ್ಷಕ ಕೃಷ್ಣಮೂರ್ತಿ ಹೇಳಿದರು.     
   ಅವರು ಸೋಮವಾರ ನಗರದ ತರೀಕೆರೆ ರಸ್ತೆಯಲ್ಲಿರುವ ಹಜರತ್ ಸೈಯದ್ ಸಾದತ್ ಷಾ ಖಾದ್ರಿ ದರ್ಗಾ ಕಮಿಟಿ ವತಿಯಿಂದ ಸಾಮಾಜಿಕ ಸೇವಾ ಯೋಜನೆಯಡಿ ಉಚಿತವಾಗಿ 'ತುರ್ತು ಅಂಬ್ಯುಲೆನ್ಸ್ ಸೇವೆಗೆ' ಚಾಲನೆ ನೀಡಿ ಮಾತನಾಡಿದರು.
     ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ. ಇಂತಹ ಸಂದರ್ಭದಲ್ಲಿ ಅಂಬ್ಯುಲೆನ್ಸ್‌ಗಳ ಸೇವೆ ಅನಿವಾರ್ಯವಾಗಿದೆ. ಕಮಿಟಿ ವತಿಯಿಂದ ಕೈಗೊಂಡಿರುವ ಕಾರ್ಯ ಅಭಿನಂದನಾರ್ಹವಾಗಿದ್ದು, ಪೊಲೀಸ್ ಇಲಾಖೆ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದರು.
ಪೊಲೀಸ್ ಇಲಾಖೆ ವತಿಯಿಂದ ಸಹ ತುರ್ತು ವಾಹನ ಸೌಲಭ್ಯ:
    ಪೊಲೀಸ್ ಇಲಾಖೆ ಸಹ ಎಲ್ಲಾ ರೀತಿಯ ತುರ್ತು ಸಂದರ್ಭಗಳಿಗೆ ನೆರವಾಗುವಂತೆ ನೂತನವಾಗಿ ೧೧೨ ವಾಹನ ಸೇವೆಗೆ ಚಾಲನೆ ನೀಡಿದೆ. ಪ್ರಸ್ತುತ ಭದ್ರಾವತಿ ತಾಲೂಕಿನಲ್ಲಿ ನಗರ, ಗ್ರಾಮಾಂತರ ಹಾಗು ಹೊಳೆಹೊನ್ನೂರು ಭಾಗ ಒಟ್ಟು ೩ ವಾಹನಗಳನ್ನು ಮೀಸಲಿಡಲಾಗಿದೆ. ಈ ವಾಹನಗಳು ದಿನದ ೨೪ ಗಂಟೆ ಕಾರ್ಯ ನಿರ್ವಹಿಸಲಿದೆ. ಯಾವುದೇ ರೀತಿಯ ತುರ್ತು ಸಂದರ್ಭದಲ್ಲಿ ಸಾರ್ವಜನಿಕರು ೧೧೨ ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದರು.
    ನಗರಸಭೆ ಪೌರಾಯುಕ್ತ ಮನೋಹರ್ ಮಾತನಾಡಿ, ನಗರಸಭೆ ವತಿಯಿಂದ ಕಮಿಟಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಬದ್ದವಾಗಿದ್ದೇನೆ. ಈಗಾಗಲೇ ವಿವಿಧ ಕಾಮಗಾರಿಗಳನ್ನು ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಹಜರತ್ ಸೈಯದ್ ಸಾದತ್ ಷಾ ಖಾದ್ರಿ ದರ್ಗಾ ಧರ್ಮಗುರುಗಳು ಕಾರ್ಯಕ್ರಮ ನೇತೃತ್ವ ವಹಿಸಿದ್ದರು. ಕಮಿಟಿ ಅಧ್ಯಕ್ಷ ಮುಕ್ರಂ ಖಾನ್ ಹಾಗು ಪದಾಧಿಕಾರಿಗಳು ಮತ್ತು ಮುಸ್ಲಿಂ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

Sunday, January 31, 2021

ಬಸವೇಶ್ವರ ವೃತ್ತದಲ್ಲಿ ೧೨ ಅಡಿ ನಂದಿ ಪ್ರತಿಮೆ ನಿರ್ಮಾಣಕ್ಕೆ ಭೂಮಿ ಪೂಜೆ

ಭದ್ರಾವತಿ ಹಳೇನಗರದ ಬಸವೇಶ್ವರ ವೃತ್ತದಲ್ಲಿ ನೂತನವಾಗಿ ೧೨ ಅಡಿ ಎತ್ತರದ ನಂದಿ ಪ್ರತಿಮೆ(ಬಸವಣ್ಣ) ನಿರ್ಮಾಣಕ್ಕೆ ಭಾನುವಾರ ಶಾಸಕ ಬಿ.ಕೆ ಸಂಗಮೇಶ್ವರ ಭೂಮಿ ಪೂಜೆ ನೆರವೇರಿಸಿದರು.
   ಭದ್ರಾವತಿ, ಜ. ೩೧: ಹಳೇನಗರದ ಬಸವೇಶ್ವರ ವೃತ್ತದಲ್ಲಿ ನೂತನವಾಗಿ ೧೨ ಅಡಿ ಎತ್ತರದ ನಂದಿ ಪ್ರತಿಮೆ(ಬಸವಣ್ಣ) ನಿರ್ಮಾಣಕ್ಕೆ ಭಾನುವಾರ ಶಾಸಕ ಬಿ.ಕೆ ಸಂಗಮೇಶ್ವರ ಭೂಮಿ ಪೂಜೆ ನೆರವೇರಿಸಿದರು.
   ಬಸವೇಶ್ವರ ವೃತ್ತವನ್ನು ಸಂಪೂರ್ಣವಾಗಿ ಆಧುನೀಕರಣಗೊಳಿಸಿ ಶಿಥಿಲಗೊಂಡಿರುವ ಪ್ರತಿಮೆಯನ್ನು ತೆರವುಗೊಳಿಸಿ ಹೊಸ ಪ್ರತಿಮೆ ನಿರ್ಮಾಣ ಮಾಡುವಂತೆ ಹಲವು ವರ್ಷಗಳಿಂದ ಬೇಡಿಕೆ ಇದ್ದು, ಈ ಹಿನ್ನಲೆಯಲ್ಲಿ ಶಾಸಕರು ಭೂಮಿ ಪೂಜೆ ನೆರವೇರಿಸಿದರು.
  ಪ್ರಮುಖರಾದ ಬಿ.ಎಸ್ ಗಣೇಶ್, ಪರಶುರಾಮ್, ಮಹೇಶ್, ರಾಜು, ರಮಾಕಾಂತ, ಹಾಲೇಶ್, ರವಿಕುಮಾರ್, ರೇವಣ್ಣ, ಗುರುರಾಜ್, ಶಿವಾನಂದ್, ಬಿ.ಪಿ ರಾಘವೇಂದ್ರ, ಅಣ್ಣೋಜಿರಾವ್, ಗುತ್ತಿಗೆದಾರ ಬಾಲಾಜಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.