ತಾಲೂಕು ಕಛೇರಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಆರೋಪ

ಭದ್ರಾವತಿಯಲ್ಲಿ ತಾಲೂಕು ಮಟ್ಟದ ಪ್ರೊ ಕಬಡ್ಡಿ ಪಂದ್ಯಾವಳಿಯ ಮುಕ್ತಾಯದ ವೇಳೆ ಸ್ಥಳೀಯ ಕೆಲವು ಬಿಜೆಪಿ ಮುಖಂಡರು, ಕಾರ್ಯಕರ್ತರು ಧರ್ಮದ ಹೆಸರಿನಲ್ಲಿ ಗಲಭೆ ನಡೆಸಿ ಕ್ಷೇತ್ರದಲ್ಲಿ ಆಶಾಂತಿ ವಾತಾವರಣ ಸೃಷ್ಟಿಸಲು ಮುಂದಾಗಿರುವ ಘಟನೆಯನ್ನು ಖಂಡಿಸಿ ಮಂಗಳವಾರ ತಾಲೂಕು ಕಛೇರಿ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ ನೇತೃತ್ವವಹಿಸಿ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿದರು.
ಭದ್ರಾವತಿ, ಮಾ. ೨: ಕ್ಷೇತ್ರದಲ್ಲಿ ಇದುವರೆಗೂ ನೆಲೆಕಾಣದ ಬಿಜೆಪಿ ಪಕ್ಷ ಇದೀಗ ವಿನಾಕಾರಣ ಧರ್ಮದ ಹೆಸರಿನಲ್ಲಿ ಕೋಮು ಗಲಭೆ ಸೃಷ್ಟಿಸಿ ಕ್ಷೇತ್ರದಲ್ಲಿ ಆಶಾಂತಿ ವಾತಾವರಣ ರೂಪುಗೊಳ್ಳಲು ಕಾರಣವಾಗುತ್ತಿದ್ದು, ಒಂದು ವೇಳೆ ಅಹಿತಕರ ಘಟನೆಗಳು ನಡೆದು ಆಸ್ತಿಪಾಸ್ತಿಗಳಿಗೆ ಹಾನಿ ಸಂಭವಿಸಿದ್ದಲ್ಲಿ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಎಚ್ಚರಿಸಿದರು.
ತಾಲೂಕು ಮಟ್ಟದ ಪ್ರೊ ಕಬಡ್ಡಿ ಪಂದ್ಯಾವಳಿಯ ಮುಕ್ತಾಯದ ವೇಳೆ ಸ್ಥಳೀಯ ಕೆಲವು ಬಿಜೆಪಿ ಮುಖಂಡರು, ಕಾರ್ಯಕರ್ತರು ಧರ್ಮದ ಹೆಸರಿನಲ್ಲಿ ಗಲಭೆ ನಡೆಸಿ ಕ್ಷೇತ್ರದಲ್ಲಿ ಆಶಾಂತಿ ವಾತಾವರಣ ಸೃಷ್ಟಿಸಲು ಮುಂದಾಗಿರುವ ಘಟನೆಯನ್ನು ಖಂಡಿಸಿ ಮಂಗಳವಾರ ತಾಲೂಕು ಕಛೇರಿ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ ನೇತೃತ್ವವಹಿಸಿ ಅವರು ಮಾತನಾಡಿದರು.
ಒಂದೇ ದೈವ, ಒಂದೇ ಧರ್ಮ, ಒಂದೇ ಜಾತಿ ಎಂಬ ತತ್ವದಡಿ ನಾವೆಲ್ಲರೂ ಹಿಂದೂಗಳಾಗಿ ಬದುಕುತ್ತಿದ್ದೇವೆ. ಮಾನವ ಕುಲ ಒಂದೇ ಎಂಬ ಭಾವನೆ ನಮ್ಮದಾಗಿದೆ. ನಾನು ರಾಜಕಾರಣವನ್ನು ಈ ನಿಟ್ಟಿನಲ್ಲಿ ನಡೆಸಿಕೊಂಡು ಬಂದಿದ್ದೇನೆ. ಮತದಾರರು ಸಹ ನನ್ನನ್ನು ಕೈಬಿಡದೆ ಬೆಂಬಲಿಸಿಕೊಂಡು ಬಂದಿದ್ದಾರೆ. ಇದೀಗ ಕ್ಷೇತ್ರದಲ್ಲಿ ಧರ್ಮದ ಹೆಸರಿನಲ್ಲಿ ಆಶಾಂತಿ ವಾತಾವರಣ ಸೃಷ್ಟಿಸಿ ಲಾಭ ಪಡೆದುಕೊಳ್ಳಬಹುದೆಂಬ ದುರಾಸೆ ಬಿಜೆಪಿ ಪಕ್ಷಕ್ಕೆ ಬಂದಿರುವಂತೆ ಕಂಡು ಬರುತ್ತಿದೆ. ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು ನಮ್ಮ ಮೇಲೆ ದೌರ್ಜನ್ಯ ನಡೆಸಲು ಮುಂದಾಗುತ್ತಿದ್ದಾರೆ. ಆದರೆ ಕ್ಷೇತ್ರದ ಮತದಾರರಿಗೆ ಎಲ್ಲವೂ ತಿಳಿದಿದೆ. ಇದಕ್ಕೆ ಪೂರಕವೆಂಬಂತೆ ಪೊಲೀಸ್ ಇಲಾಖೆ ಅಧಿಕಾರಿಗಳು ಸಹ ನಡೆದುಕೊಳ್ಳುತ್ತಿದ್ದಾರೆ. ಒಂದು ವೇಳೆ ಕ್ಷೇತ್ರದಲ್ಲಿ ಆಶಾಂತಿ ವಾತಾವರಣ ನಿರ್ಮಾಣವಾದಲ್ಲಿ ಬಿಜೆಪಿ ಸರ್ಕಾರ ನೇರ ಹೊಣೆಯಾಗಬೇಕಾಗುತ್ತದೆ. ತಕ್ಷಣ ಅಶಾಂತಿ ವಾತಾವರಣ ಸೃಷ್ಟಿಸಲು ಯತ್ನಿಸಿದವರನ್ನು ಬಂಧಿಸಬೇಕೆಂದು ಆಗ್ರಹಿಸಿದರು.
ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್ ಮಾತನಾಡಿ, ಕ್ಷೇತ್ರದಲ್ಲಿ ಸದಾ ಕಾಲ ಶಾಂತಿ ನೆಲೆಗೊಳ್ಳಬೇಕೆಂಬ ಭಾವನೆಯೊಂದಿಗೆ ರಾಜಕಾರಣ ಮಾಡಿಕೊಂಡು ಬರುತ್ತಿರುವ ಸಂಗಮೇಶ್ವರ್ ನಿಜವಾದ ಶಾಂತಿಪ್ರಿಯ ಶಾಸಕರಾಗಿದ್ದಾರೆ. ಇದು ಭದ್ರಾವತಿ ಕ್ಷೇತ್ರದಲ್ಲಿರುವ ಎಲ್ಲರಿಗೂ ತಿಳಿದಿದೆ. ಶ್ರೀರಾಮನ ಬಗ್ಗೆ ಎಲ್ಲರಿಗೂ ಗೌರವವಿದೆ. ಆದರೆ ಬಿಜೆಪಿಯವರು ಶ್ರೀರಾಮನ ಹೆಸರಿನಲ್ಲಿ ನಡೆಸುತ್ತಿರುವ ದೌರ್ಜನ್ಯ, ಅಕ್ರಮಗಳು ನಿಲ್ಲಬೇಕು. ಈ ರೀತಿಯ ಘಟನೆ ಇಲ್ಲಿ ಮಾತ್ರವಲ್ಲ ಎಲ್ಲೆಡೆ ನಡೆಯುತ್ತಿದ್ದು, ಇದರ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ ಎಂದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್ ಸುಂದರೇಶ್, ಶಿವಮೊಗ್ಗ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಎಚ್.ಸಿ ಯೋಗೇಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕಲಗೋಡು ರತ್ನಾಕರ್, ಅತ್ತಿಗುಂದ ಚಂದ್ರಶೇಖರಪ್ಪ, ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಘಟಕದ ಅಧ್ಯಕ್ಷ ಟಿ. ಚಂದ್ರಗೌಡ, ಗ್ರಾಮಾಂತರ ಘಟಕದ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ರಾಮಚಂದ್ರ, ನಗರಸಭೆ ಮಾಜಿ ಅಧ್ಯಕ್ಷರಾದ ವೈ. ರೇಣುಕಮ್ಮ, ಬಿ.ಕೆ ಮೋಹನ್, ಬಿ.ಟಿ ನಾಗರಾಜ್, ಮುಖಂಡರಾದ ಎಸ್.ಪಿ ದಿನೇಶ್, ಸಿ.ಎಂ ಖಾದರ್, ಅಮಿರ್‌ಜಾನ್, ದಿಲ್‌ದಾರ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.