Tuesday, March 9, 2021

ಏ.೪ರಂದು ಡಾ. ಶಿವಕುಮಾರ ಸ್ವಾಮೀಜಿಯವರಿಗೆ ‘ವಿಶ್ವ ಮಾನವ’ ಪ್ರಶಸ್ತಿ

ಭದ್ರಾವತಿ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
   ಭದ್ರಾವತಿ, ಮಾ. ೯: ಧರ್ಮ, ಜಾತಿ, ಜನಾಂಗ ಎಲ್ಲವನ್ನೂ ಮೀರಿ ಮಧ್ಯಮ, ಬಡ ಮತ್ತು ಶೋಷಿತ ಮಕ್ಕಳಿಗೆ ಶಿಕ್ಷಣ ಕಲ್ಪಿಸಿಕೊಡುವ ಮೂಲಕ ತ್ರಿವಿಧ ದಾಸೋಹಿಗಳಾಗಿ ನಾಡಿನ ಹೃದಯ ಶ್ರೀಮಂತಿಕೆ ಹೆಚ್ಚಿಸಿರುವ ತುಮಕೂರು ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಯವರ ಸೇವಾ ಕಾರ್ಯಗಳನ್ನು ಸ್ಮರಿಸಿ ರಾಜ್ಯದ ಸಮಸ್ತ ಜನರ ಪರವಾಗಿ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಶ್ರೀಗಳಿಗೆ ವಿಶ್ವ ಮಾನವ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಬಿ.ಎನ್ ರಾಜು ತಿಳಿಸಿದರು.
   ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶ್ರೀಗಳ ಸೇವಾ ಕಾರ್ಯಗಳು ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕವಾಗಿವೆ. ಅವರು ತೋರಿಸಿಕೊಟ್ಟಿರುವ ಮಾರ್ಗದರ್ಶನದಲ್ಲಿ ನಾವೆಲ್ಲರೂ ಮುನ್ನಡೆಯಬೇಕಾಗಿದೆ. ಆಗ ಮಾತ್ರ ಅವರ ಬದುಕಿನ ಸಾರ್ಥಕತೆಗೆ ಗೌರವ ಸಲ್ಲಿಸಿದಂತಾಗುತ್ತದೆ. ಈ ಹಿನ್ನಲೆಯಲ್ಲಿ ಏ.೪ರಂದು ಸಂಜೆ ೫ ಗಂಟೆಗೆ ಹಳೇನಗರದ ಕನಕಮಂಟಪ ಮೈದಾನದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಶ್ರೀಗಳಿಗೆ 'ವಿಶ್ವ ಮಾನವ'ಪ್ರಶಸ್ತಿ ನೀಡಿ ಗೌರವ ಸಲ್ಲಿಸಲಾಗುತ್ತಿದೆ ಎಂದರು.
    ಕಾರ್ಯಕ್ರಮವನ್ನು ಸಂಸದ ಬಿ.ವೈ ರಾಘವೇಂದ್ರ ಉದ್ಘಾಟಿಸಲಿದ್ದು, ಮಾಜಿ ಶಾಸಕ ವೈಎಸ್‌ವಿ ದತ್ತಾ ಅಧ್ಯಕ್ಷತೆ ವಹಿಸಲಿದ್ದಾರೆ. ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಮುಖಂಡರಾದ ಡಿ.ಸಿ ಮಾಯಣ್ಣ, ಕೆ.ಟಿ ಗಂಗಾಧರ್, ವಿಜಿಯಮ್ಮ ಎನ್ ಗಿರಿಯಪ್ಪ, ಪ್ರೊ. ಎಂ. ಚಂದ್ರಶೇಖರಯ್ಯ, ಶಾರದಾ ಅಪ್ಪಾಜಿ, ತಹಸೀಲ್ದಾರ್ ಜಿ. ಸಂತೋಷ್ ಕುಮಾರ್, ಪೊಲೀಸ್ ಉಪಾಧೀಕ್ಷಕ ಕೃಷ್ಣಮೂರ್ತಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಜೆ ತಮ್ಮಣ್ಣಗೌಡ, ನಗರಸಭೆ  ಪೌರಾಯುಕ್ತ ಮನೋಹರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದೂದ್‌ಪೀರ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ, ಸಮಸ್ತ ನಾಗರೀಕರು ಪಾಲ್ಗೊಳ್ಳುವ  ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಿದರು.
    ಕಾರ್ಯಾಧ್ಯಕ್ಷರಾದ ಐ.ಎಲ್  ಅರುಣ್‌ಕುಮಾರ್ ಮತ್ತು ಎಂ.ವಿ ಚಂದ್ರಶೇಖರ್ ಬಿ.ಎನ್ ರಾಜುರವರ ನೇತೃತ್ವದಲ್ಲಿ ನಡೆದಿರುವ ಹೋರಾಟಗಳ ಕುರಿತು ವಿವರಿಸಿದರು. ಪ್ರಧಾನ ಕಾರ್ಯದರ್ಶಿ ಅಕ್ರಂ ಖಾನ್, ಸಂಚಾಲಕ ಸುಬ್ಬೇಗೌಡ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಹಿಂದೂ ಕೋಟೆ ಗರಡಿಗೆ ಶಿವಾನಾಯ್ಕ ಭೇಟಿ : ಸನ್ಮಾನ

ಭದ್ರಾವತಿ ಹಳೇನಗರದ ಕೋಟೆ ಏರಿಯಾದಲ್ಲಿರುವ ಹಿಂದೂ ಕೋಟೆ ಗರಡಿ ಮನೆಗೆ ಭೇಟಿ ನೀಡಿದ ದೇವರಾಜ ಅರಸು ಅಂತರಾಷ್ಟ್ರೀಯ ಕುಸ್ತಿ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಆಯನೂರು ಶಿವನಾಯ್ಕರನ್ನು ಸನ್ಮಾನಿಸಿ ಗೌರವಿಸಲಾಯಿತು.
   ಭದ್ರಾವತಿ, ಮಾ. ೯: ಹಳೇನಗರದ ಕೋಟೆ ಏರಿಯಾದಲ್ಲಿರುವ ಹಿಂದೂ ಕೋಟೆ ಗರಡಿ ಮನೆಗೆ ದೇವರಾಜ ಅರಸು ಅಂತರಾಷ್ಟ್ರೀಯ ಕುಸ್ತಿ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಆಯನೂರು ಶಿವನಾಯ್ಕ ಭೇಟಿ ನೀಡಿ ಪರಿಶಿಲನೆ ನಡೆಸಿದರು.
   ಪ್ರಸ್ತುತ ನಗರದಲ್ಲಿ ಅಸ್ತಿತ್ವ ಉಳಿಸಿಕೊಂಡಿರುವ ಹಿಂದೂ ಕೋಟೆ ಗರಡಿ ಮನೆ ಅತ್ಯಂತ ಹಳೇಯದಾದ ಗರಡಿ ಮನೆಯಾಗಿದ್ದು, ಈ ಗರಡಿ ಮನೆಯಲ್ಲಿ ತರಬೇತಿ ಪಡೆದ ಬಹಳಷ್ಟು ಕುಸ್ತಿಪಟು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
    ಆಯನೂರು ಶಿವನಾಯ್ಕರನ್ನು ಗರಡಿ ಮನೆಯ ಹಿರಿಯ ಫೈಲ್ವಾನರು ಹಾಗು ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು. ಗರಡಿ ಮನೆ ಅಧ್ಯಕ್ಷ ಬಿ. ದತ್ತಣ್ಣ, ಸೀತಾರಾಮಣ್ಣ, ಕೃಷ್ಣಯ್ಯ, ನಂಜುಂಡಪ್ಪ, ಶಿವಣ್ಣ, ಚನ್ನಬಸಪ್ಪ, ಯಲ್ಲಪ್ಪ, ಧನಂಜಯ, ಟಿ. ವೆಂಕಟೇಶ್ ಮತ್ತು ಯಲ್ಲಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮಹಿಳೆಯರಿಗಾಗಿ ಪೊಲೀಸ್ ಇಲಾಖೆಯಿಂದ ಹಲವು ಸುರಕ್ಷತಾ ಕ್ರಮಗಳು

ಜೆಸಿಐ ವತಿಯಿಂದ ಪದ್ಮಾಂಭ ಸ್ವಯಂ ಸೇವಾ ಸಂಸ್ಥೆ ಸಹಯೋಗದೊಂದಿಗೆ ಭದ್ರಾವತಿ ಅನು ಗಾರ್ಮೆಂಟ್ಸ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಸಂಚಾರಿ ಪೊಲೀಸ್ ಠಾಣಾಧಿಕಾರಿ ಕವಿತಾ ಪಾಲ್ಗೊಂಡು ಮಾತನಾಡಿದರು.  
   ಭದ್ರಾವತಿ, ಮಾ. ೯: ಇತ್ತಿಚಿನ ದಿನಗಳಲ್ಲಿ ಮಹಿಳೆಯರ ರಕ್ಷಣೆಗೆ ಪೊಲೀಸ್ ಇಲಾಖೆ ಬಹಳಷ್ಟು ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿದ್ದು, ಅಲ್ಲದೆ ಜನಸ್ನೇಹಿಯಾಗಿದೆ ಎಂದು ಸಂಚಾರಿ ಪೊಲೀಸ್ ಠಾಣಾಧಿಕಾರಿ ಕವಿತಾ ತಿಳಿಸಿದರು.
    ಅವರು ಜೆಸಿಐ ವತಿಯಿಂದ ಪದ್ಮಾಂಭ ಸ್ವಯಂ ಸೇವಾ ಸಂಸ್ಥೆ ಸಹಯೋಗದೊಂದಿಗೆ ನಗರದ ಅನು ಗಾರ್ಮೆಂಟ್ಸ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.  
     ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಯಾವುದೇ ರೀತಿ ಕಿರುಕುಳ, ಸಮಸ್ಯೆಗಳಿದ್ದಲ್ಲಿ ಮಹಿಳೆಯರು ಧೈರ್ಯವಾಗಿ ಠಾಣೆಗಳಿಗೆ ಬಂದು ದೂರು ನೀಡಬಹುದು. ಯಾವುದೇ ರೀತಿ ಆತಂಕಪಡುವ ಅಗತ್ಯವಿಲ್ಲ. ಇಲಾಖೆ ಎಲ್ಲಾ ರೀತಿಯ ಸುರಕ್ಷತೆ ಕಲ್ಪಿಸಿಕೊಡಲಿದೆ ಎಂದು ಭರವಸೆ ನೀಡಿದರು.
   ವಾಹನ ಸವಾರರು ಕಡ್ಡಾಯವಾಗಿ ತಮ್ಮ ವಾಹನಕ್ಕೆ ಸಂಭಂಧಿಸಿದ ಎಲ್ಲಾ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಂಡಿರಬೇಕು. ಸಂಚಾರಿ ಪೊಲೀಸರ ತಪಾಸಣೆ ವೇಳೆ ತೋರಿಸಬೇಕು. ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಅಪಘಾತಗಳು ಸಂಭವಿಸದಂತೆ ಎಚ್ಚರಿಸಬೇಕೆಂದರು.  
   ಯಾವುದೆ ಮಹಿಳೆಯರು ತಮಗೆ ಏನಾದರೂ ಕಿರುಕುಳ ಅಥವ ತೊಂದರೆ ಆದಲ್ಲಿ ಯಾವುದೆ ಹಿಂಜರಿಕೆ ಹೆದರಿಕೆ ಇಲ್ಲದೆ ನೇರವಾಗಿ ಪೊಲೀಸ್ ಠಾಣೆಗೆ ಬಂದು ತಮಗಾದ ಅನ್ಯಾಯದ ಬಗ್ಗೆ ದೂರನ್ನು ದಾಖಲಿಸಬಹುದು ಎಂದರು.
     ಜೆಸಿಐ ಅಧ್ಯಕ್ಷೆ ವಿಪುಲ ಬಿ ರಾವ್ ಅಧ್ಯಕ್ಷತೆ ವಹಿಸಿದ್ದರು. ಪದ್ಮಾಂಭ ಸ್ವಯಂ ಸೇವಾ ಸಂಸ್ಥೆ ಅಧ್ಯಕ್ಷೆ ಅನ್ನಪೂರ್ಣ ಸತೀಶ್, ಯಶೋಧ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಅಂತರಾಷ್ಟ್ರೀಯ ಮಹಿಳಾ ದಿನ ಜಾಗೃತಿ ಸಂಕೇತವಾಗಲಿ : ಸುವಾಸಿನಿ

ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದ ವತಿಯಿಂದ ಭದ್ರಾವತಿ ಹಳೇನಗರದ ವೀರಶೈವ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ನಗರಸಭೆ ಸಮುದಾಯ ಸಂಘಟನಾ ಅಧಿಕಾರಿ ಸುವಾಸಿನಿ ಉದ್ಘಾಟಿಸಿದರು.
ಭದ್ರಾವತಿ, ಮಾ. ೯: ಮಹಿಳೆಯರ ಸಂಭ್ರಮ ಕೇವಲ ಮಾರ್ಚ್ ತಿಂಗಳಿಗೆ ಮಾತ್ರ ಸೀಮಿತವಾಗಿರಬಾರದು. ನಿತ್ಯನಿರಂತರವಾಗಿರಬೇಕು, ಸಮಾಜದಲ್ಲಿ ಮಹಿಳೆ ಇನ್ನೂ ಸಬಲೀಕರಣವಾಗಬೇಕು. ಈ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನ ಜಾಗೃತಿ ಸಂಕೇತವಾಗಬೇಕೆಂದು ನಗರಸಭೆ ಸಮುದಾಯ ಸಂಘಟನಾ ಅಧಿಕಾರಿ ಸುವಾಸಿನಿ ತಿಳಿಸಿದರು.
    ಅವರು ಮಂಗಳವಾರ ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದ ವತಿಯಿಂದ ಹಳೇನಗರದ ವೀರಶೈವ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಸಮಾಜದಲ್ಲಿ ಹೆಣ್ಣು ಮತ್ತು ಗಂಡು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಇಬ್ಬರ ನಡುವೆ ಸಮನ್ವಯತೆ, ಸಹಬಾಳ್ವೆ ಬಹಳ ಮುಖ್ಯವಾಗಿದೆ. ಈ ಹಿನ್ನಲೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಎಂದರೆ ಕೇವಲ ಮಹಿಳೆಯರಿಗೆ ಸೀಮಿತವಾಗಿಲ್ಲ. ಮಹಿಳೆಯರೊಂದಿಗೆ ಪುರುಷರು ಸಹ ಇರಬೇಕು. ಆ ಮೂಲಕ ಮಹಿಳೆಯರು ನಮ್ಮೊಳಗಿನ ಪರಿಪೂರ್ಣತೆ ಕಂಡುಕೊಳ್ಳಬೇಕೆಂದರು.
     ಪ್ರಸ್ತುತ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮುನ್ನಡೆಯಲಿದ್ದಾರೆ. ಆದರೂ ಸಹ ಇನ್ನೂ ಬಹಳಷ್ಟು ಮಹಿಳೆಯರು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದೆ ಉಳಿದ್ದಿದ್ದು, ಇವರು ಸಹ ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕೆಂದರು.  
    ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಹಿರೇಮಠ, ಬಿಳಿಕಿ ದಿವ್ಯ ಸಾನಿಧ್ಯ ವಹಿಸಿದ್ದು, ಮಹಿಳಾ ಘಟಕದ ಅಧ್ಯಕ್ಷೆ ರೂಪ ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು.
    ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಸಿದ್ದಲಿಂಗಯ್ಯ, ಆರ್.ಎಸ್ ಶೋಭ, ನಂದಿನಿ ಮಲ್ಲಿಕಾರ್ಜುನ, ಕವಿತಾ ಸುರೇಶ್, ವೇದಾ ಬಸವರಾಜ್, ಎಸ್. ಪೂರ್ಣಿಮಾ, ಎಸ್. ವಾಗೀಶ್, ಜಿ.ಎಂ ಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Monday, March 8, 2021

ಉಕ್ಕಿನ ನಗರಕ್ಕೆ ಶೂನ್ಯ, ಉದ್ಯೋಗ ಸೃಷ್ಟಿ ಇಲ್ಲದ ಬಜೆಟ್

ಶಶಿಕುಮಾರ್ ಎಸ್ ಗೌಡ
     ಭದ್ರಾವತಿ, ಮಾ. ೮: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೋಮವಾರ ಮಂಡಿಸಿದ ೮ನೇ ಬಜೆಟ್ ತಾಲೂಕಿನ ಮಟ್ಟಿಗೆ ಶೂನ್ಯ ಬಜೆಟ್ ಆಗಿದ್ದು, ಕ್ಷೇತ್ರದ ಜನರು ಹೊಂದಿದ್ದ ಹಲವು ನಿರೀಕ್ಷೆಗಳು ಹುಸಿಯಾಗಿವೆ ಎಂದು ಬಜೆಟ್ ಕುರಿತು ವಿವಿಧ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ ಪ್ರಮುಖರು ಟೀಕಿಸಿದ್ದಾರೆ.
     ಉಕ್ಕಿನ ನಗರಕ್ಕೆ ಶೂನ್ಯ ಕೊಡುಗೆ ಬಜೆಟ್:
   ಜೆಡಿಎಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್ ಗೌಡ ಬಜೆಟ್ ಕುರಿತು ಪತ್ರಿಕೆಗೆ ಪ್ರತಿಕ್ರಿಯಿಸಿ ಪ್ರಮುಖವಾಗಿ ಎಂಪಿಎಂ ಕಾರ್ಖಾನೆ ಕುರಿತು ಯಾವುದೇ ಪ್ರಸ್ತಾಪ ಮಾಡದಿರುವುದು ಹಾಗು ಕ್ಷೇತ್ರದ ಮಟ್ಟಿಗೆ ಯಾವುದೇ ಹೊಸ ಯೋಜನೆಗಳನ್ನು ಜಾರಿಗೊಳಿಸುವ ಸಂಬಂಧ ಘೋಷಣೆ ಮಾಡಿಲ್ಲ. ೮ನೇ ಬಜೆಟ್ ಸಹ ಕ್ಷೇತ್ರಕ್ಕೆ ಶೂನ್ಯ ಕೊಡುಗೆ ನೀಡಿದೆ ಎಂದು ಟೀಕಿಸಿದ್ದಾರೆ.


ಎಚ್. ರವಿಕುಮಾರ್
        
       ಉದ್ಯೋಗ ಸೃಷ್ಟಿ ಇಲ್ಲದ ನಿರಾಶದಾಯಕ ಬಜೆಟ್:
    ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಪ್ರತಿಕ್ರಿಯಿಸಿ ಸುಮಾರು ೫ ವರ್ಷಗಳಿಂದ ಸ್ಥಗಿತಗೊಂಡಿರುವ ಮೈಸೂರು ಕಾಗದ ಕಾರ್ಖಾನೆಗೆ ಈ ಬಾರಿ ಬಜೆಟ್‌ನಲ್ಲಿ ಕನಿಷ್ಠ ಬಂಡವಾಳ ಹೂಡುವ ಮೂಲಕ ಆರಂಭಿಸಬಹುದೆಂಬ ನಿರೀಕ್ಷೆಯನ್ನು ಕಾರ್ಮಿಕ ಕುಟುಂಬಗಳು ಹೊಂದಿದ್ದವು. ಆದರೆ ನಿರೀಕ್ಷೆ ಹುಸಿಯಾಗಿದೆ. ಅಲ್ಲದೆ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಸುವ ಯಾವುದೇ ಯೋಜನೆಗಳನ್ನು ಘೋಷಿಸಿಲ್ಲ. ಅದರಲ್ಲೂ ಯುವ  ಸಮುದಾಯದ ಪಾಲಿಗೆ ಈ ಬಾರಿ ಬಜೆಟ್ ನಿರಾಶದಾಯಕ ಬಜೆಟ್ ಆಗಿದೆ ಎಂದು ಟೀಕಿಸಿದ್ದಾರೆ.



ಬಿ.ಎನ್ ರಾಜು

      ಅಂಬೇಡ್ಕರ್ ಭವನ ಕಾಮಗಾರಿಗೆ ಅನುದಾನ ನೀಡದ ಬಜೆಟ್:
   ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಬಜೆಟ್ ಕುರಿತು ಪ್ರತಿಕ್ರಿಯಿಸಿ ನಗರದಲ್ಲಿ ನೆನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನ ಕಾಮಗಾರಿಗೆ ಈ ಬಜೆಟ್‌ನಲ್ಲಿ ಹಣ ಬಿಡುಗಡೆಗೊಳಿಸುವಂತೆ ಹಲವಾರು ಹೋರಾಟ ನಡೆಸಲಾಗಿತ್ತು. ಅಲ್ಲದೆ ತಾಲೂಕು ಆಡಳಿತ, ಜಿಲ್ಲಾಡಳಿತ ಹಾಗು ಮುಖ್ಯಮಂತ್ರಿಗಳಿಗೆ ಮತ್ತು ಸಂಸದರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿತ್ತು. ಆದರೂ ಸಹ ಹಣ ಬಿಡುಗಡೆಗೊಳಿಸಿಲ್ಲ. ಈ ಸಂಬಂಧ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದ್ದಾರೆ.


ಡಾ.ಬಿ.ಎಂ ನಾಸಿರ್‌ಖಾನ್

        ಮಹಿಳೆಯರಿಗೆ ಹೆಚ್ಚಿನ ಆದ್ಯತೆ :
       ಬಜೆಟ್ ಕುರಿತು ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಥಮಿಕ ಡಾ.ಬಿ.ಎಂ ನಾಸಿರ್‌ಖಾನ್ ಪ್ರತಿಕ್ರಿಯಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಸೋಮವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಮಂಡಿಸಿರುವ ಬಜೆಟ್‌ನಲ್ಲಿ ಈ ಬಾರಿ ಮಹಿಳೆಯರಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿರುವುದು ವಿಶೇಷವಾಗಿದೆ. ಆದರೆ ರೈತರು, ಕಾರ್ಮಿಕರು, ಸರ್ಕಾರಿ ನೌಕರರು ಹಾಗು ಶ್ರೀಸಾಮಾನ್ಯರ ಹಲವು ನಿರೀಕ್ಷೆಗಳು ಬಜೆಟ್‌ನಲ್ಲಿ ಹುಸಿಯಾಗಿವೆ. ಈ ನಡುವೆಯೂ ಕೊರೋನಾ ಸಂಕಷ್ಟದಲ್ಲೂ ಎಲ್ಲರನ್ನು ಸಂತೃಪ್ತಿಪಡಿಸುವ ಬಜೆಟ್ ಮಂಡಿಸುವಲ್ಲಿ ಮುಖ್ಯಮಂತ್ರಿಗಳು ಯಶಸ್ವಿಯಾಗಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವಿಐಎಸ್‌ಎಲ್ ಸೇರಿದಂತೆ ವಿವಿಧೆಡೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಕರ್ನಾಟಕ ಜನಶಕ್ತಿ ಅಂಗ ಸಂಸ್ಥೆ 'ಮಹಿಳಾ ಮುನ್ನಡೆ' ವತಿಯಿಂದ ಅಂತರಾಷ್ಟ್ರಿಯ ಮಹಿಳಾ ದಿನಾಚರಣೆ ಭದ್ರಾವತಿ ಜನ್ನಾಪುರ ಎನ್‌ಟಿಬಿ ಕಚೇರಿ ರಸ್ತೆಯಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆಯಿತು.
   ಭದ್ರಾವತಿ, ಮಾ. ೮: ನಗರದ ವಿವಿಧೆಡೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಸೋಮವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಡೆಯಿತು.
       ಮಹಿಳಾ ಮುನ್ನಡೆ'ವತಿಯಿಂದ ಮಹಿಳಾ ದಿನಾಚರಣೆ:
   ಕರ್ನಾಟಕ ಜನಶಕ್ತಿ ಅಂಗ ಸಂಸ್ಥೆ 'ಮಹಿಳಾ ಮುನ್ನಡೆ' ವತಿಯಿಂದ ಅಂತರಾಷ್ಟ್ರಿಯ ಮಹಿಳಾ ದಿನಾಚರಣೆ ಜನ್ನಾಪುರ ಎನ್‌ಟಿಬಿ ಕಚೇರಿ ರಸ್ತೆಯಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆಯಿತು.
  ನ್ಯೂಟೌನ್ ಪೊಲೀಸ್ ಠಾಣೆ  ಸಬ್‌ಇನ್ಸ್‌ಪೆಕ್ಟರ್ ಭಾರತಿ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಶ್ವೇತಾ, ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಅರಿವಳಿಕೆ ತಜ್ಞೆ ಡಾ. ಪ್ರೀತಿ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಿ.ಸಿ ಮಾಯಣ್ಣ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
'ಮಹಿಳಾ ಮನ್ನಡೆ' ಅಧ್ಯಕ್ಷೆ ಎನ್ ನಾಗವೇಣಿ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ವರಲಕ್ಷ್ಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪಾರ್ವತಿ ಸ್ವಾಗತಿಸಿ, ರೂಪಾ ವಂದಿಸಿದರು.
  ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್, ಕರ್ನಾಟಕ ಜನಸೈನ್ಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಹನುಮಮ್ಮ, ಆಮ್ ಆದ್ಮಿ ಪಾರ್ಟಿ ಪ್ರಮುಖರು ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.


ಭದ್ರಾವತಿಯಲ್ಲಿ ಕೇರಳ ಸಮಾಜಂ ಮಹಿಳಾ ವಿಭಾಗಂ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸೋಮವಾರ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಬ್ರೆಡ್ ಮತ್ತು ಹಣ್ಣು ವಿತರಿಸಲಾಯಿತು.
      ಮಹಿಳಾ ದಿನಾಚರಣೆ : ರೋಗಿಗಳಿಗೆ ಬ್ರೆಡ್, ಹಣ್ಣು ವಿತರಣೆ
  ಕೇರಳ ಸಮಾಜಂ ಮಹಿಳಾ ವಿಭಾಗಂ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸೋಮವಾರ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಬ್ರೆಡ್ ಮತ್ತು ಹಣ್ಣು ವಿತರಿಸಲಾಯಿತು.
     ಮಹಿಳಾ ವಿಭಾಗಂ ಅಧ್ಯಕ್ಷೆ ವಿಜಯಲಕ್ಷ್ಮಿ, ಉಪಾಧ್ಯಕ್ಷೆ ಶೋಭ ಬಾಲಚಂದ್ರನ್, ಸಹಕಾರ್ಯದಶಿ ಎಸ್.ಎಚ್ ಕಲ್ಯಾಣಿ ಶಶಿಧರನ್, ರೇಖಾ ಚಂದ್ರಶೇಖರ್, ಸದಸ್ಯರಾದ ಶೈಲಜ ಸುರೇಶ್, ಶಾಂತ, ಸ್ವಾತಿ, ಪುಷ್ಪ ಹಾಗೂ ಕೇರಳ ಸಮಾಜಂ ಅಧ್ಯಕ್ಷ ಗಂಗಾಧರ್, ಪ್ರಧಾನP ರ್ಯದರ್ಶಿ ಜಿ. ಸುರೇಶ್, ಖಜಾಂಚಿ ಎ. ಚಂದ್ರಶೇಖರ್, ಎಸ್.ಕುಮಾರ್, ಯುವ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್, ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಹಿರಿಯ ವೈದ್ಯ ಡಾ. ರವೀಂದ್ರನಾಥ ಕೋಠಿ, ಡಾ. ವರ್ಷ, ಮೇರಿ ಸಿಸ್ಟರ್, ರಶ್ಮಿ ಕುಲಕರ್ಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ನಂತರ ನ್ಯೂಟೌನ್ ಮಾರಿಯಮ್ಮ ದೇವಸ್ಥಾನದ ಮುಂಭಾಗ ವಿವಿಧ ಕ್ರೀಡಾ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.  


ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಸೋಮವಾರ ಕಾರ್ಖಾನೆ ಆಡಳಿತ ಕಛೇರಿ ಆವರಣದಲ್ಲಿರುವ ಮಹಾತ್ಮಗಾಂಧಿ ಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು.
      ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಮಹಿಳಾ ದಿನಾಚರಣೆ:
     ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಸೋಮವಾರ ಕಾರ್ಖಾನೆ ಆಡಳಿತ ಕಛೇರಿ ಆವರಣದಲ್ಲಿರುವ ಮಹಾತ್ಮಗಾಂಧಿ ಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು.
    ಪ್ರಭಾರಿ ಮಹಾಪ್ರಬಂಧಕ (ಸಿಬ್ಬಂದಿ ಮತ್ತು ಆಡಳಿತ), ಮಹಾಪ್ರಬಂಧಕ (ನಗರಾಳಿತ) ವಿಶ್ವನಾಥ್, ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್, ಅಧಿಕಾರಿಗಳ ಸಂಘದ ಅಧ್ಯಕ್ಷ ಎ.ಆರ್. ವೀರಣ್ಣ ಸೇರಿದಂತೆ ಇನ್ನಿತರರು ಕಾರ್ಯಕ್ರಮ ಉದ್ಘಾಟಿಸಿದರು.
    ನ್ಯಾಯವಾದಿ ಬಿ.ಎಸ್ ರೂಪರಾವ್ ಕಾನೂನು ಅರಿವು ಕುರಿತು ಉಪನ್ಯಾಸ ನೀಡಿದರು. ಕರಾಟೆಪಟು ಬಾಲರಾಜ್ ಮತ್ತು ಎಸ್.ಎಲ್ ವಿನೋದ್ ತಂಡದವರು ಮಹಿಳೆಯರಿಗಾಗಿ ಸ್ವಯಂ ರಕ್ಷಣೆ ಕುರಿತು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ವಿಐಎಸ್‌ಎಲ್ ಆಸ್ಪತ್ರೆ ವೈದ್ಯೆ ಡಾ. ಎಸ್. ಕವಿತಾ ಮಹಿಳೆಯರ ಆರೋಗ್ಯ ರಕ್ಷಣೆ ಹಾಗು ನೈರ್ಮಲ್ಯ ಕುರಿತು ಉಪನ್ಯಾಸ ನಡೆಸಿಕೊಟ್ಟರು.
    ಡಾ. ಎಸ್. ಕವಿತಾ, ಅಮೃತ, ಕುಸುಮ ಮತ್ತು ಚಂದ್ರಾವತಿ ತಂಡದವರು ಪ್ರಾರ್ಥಿಸಿದರು. ಮಂಜುಶ್ರೀ, ತ್ರಿವೇಣಿ, ರಮ್ಯ ಮತ್ತು ರಕ್ಷಿತ ತಂಡದವರು ಗೀ ಗೀ ಪದ ನಡೆಸಿಕೊಟ್ಟರು.
  ರಂಗೋಲೆ ಸ್ಪರ್ಧೆ ಸೇರಿದಂತೆ ಸ್ಪರ್ಧೆಗಳನ್ನು ಆಯೊಜಿಸಲಾಗಿತ್ತು. ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
   ಸಹಾಯಕ ಪ್ರಬಂಧಕಿ ಶೋಭ ನಿರೂಪಿಸಿದರು. ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದಕ್ಕೂ ಮೊದಲು ಸೈಲ್ ಅಧ್ಯಕ್ಷೆ ಸೋಮ ಮಂಡಲ್ ಮಹಿಳಾ ಉದ್ಯೋಗಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಸಂವಾದ ನಡೆಸಿದರು.
      ಮಾ.೯ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ :
   ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದ ವತಿಯಿಂದ ಮಾ.೯ರಂದು ಬೆಳಿಗ್ಗೆ ೧೦.೩೦ಕ್ಕೆ ಹಳೇನಗರದ ವೀರಶೈವ ಸಭಾಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.
     ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಹಿರೇಮಠ, ಬಿಳಿಕಿ ದಿವ್ಯ ಸಾನಿಧ್ಯ ವಹಿಸಲಿಸಲಿದ್ದು, ನಗರಸಭೆ ಸಮುದಾಯ ಸಂಘಟನಾ ಅಧಿಕಾರಿ ಎಂ. ಸುವಾಸಿನಿ ಕಾರ್ಯಕ್ರಮ ಉದ್ಘಾಟಿಸುವರು. ಮಹಿಳಾ ಘಟಕದ ಅಧ್ಯಕ್ಷೆ ರೂಪ ನಾಗರಾಜ್ ಅಧ್ಯಕ್ಷತೆ ವಹಿಸಲಿದ್ದು, ನ್ಯೂಟೌನ್ ಪೊಲೀಸ್ ಠಾಣಾಧಿಕಾರಿ ಭಾರತಿ ಶ್ರೀನಿವಾಸ್, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷೆ ಸಿದ್ದಲಿಂಗಯ್ಯ, ಜಿಲ್ಲಾ ಉಪಾಧ್ಯಕ್ಷೆ ಅಕ್ಕಮಹಾದೇವಿ ಸಿದ್ದಲಿಂಗಪ್ಪ ಮಂಡಕ್ಕಿ, ರೇಣುಕಾ ನಾಗರಾಜ್, ಬಿ.ಎಸ್ ಮಹೇಶ್‌ಕುಮಾರ್, ಆರ್.ಎಸ್ ಶೋಭ, ನಂದಿನಿ ಮಲ್ಲಿಕಾರ್ಜುನ, ಕವಿತಾ ಸುರೇಶ್, ಡಿ. ಮಂಜುಳಾ ನಂಜುಂಡಪ್ಪ, ಸೌಭಾಗ್ಯ ಆರಾಧ್ಯ ಮತ್ತು ಗೌರಮ್ಮ ಪಾಲಾಕ್ಷಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.    

ಕ್ಷೇತ್ರದಲ್ಲಿ ಪುನಃ ಶಾಂತಿ ನೆಲೆನಿಲ್ಲಲಿ : ವೀರಶೈವ ಸಮಾಜ

ಭದ್ರಾವತಿ ಹಳೇನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವೀರಶೈವ ಸಮಾಜದ ಮುಖಂಡರು ಮಾತನಾಡಿದರು.
    ಭದ್ರಾವತಿ, ಮಾ. ೮: ಹಳೇನಗರದ ಕನಕಮಂಟಪ ಮೈದಾನದಲ್ಲಿ ಆಯೋಜಿಸಲಾಗಿದ್ದ ತಾಲೂಕುಮಟ್ಟದ ಕಬಡ್ಡಿ ಪಂದ್ಯಾವಳಿಯ ಮುಕ್ತಾಯದ ವೇಳೆ ನಡೆದಿರುವ ಗಲಾಟೆ ಪ್ರಕರಣದ ನಂತರ ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಟ್ಟಿದ್ದು, ಪುನಃ ಶಾಂತಿ ನೆಲೆನಿಲ್ಲುವ ನಿಟ್ಟಿನಲ್ಲಿ ಎಲ್ಲಾ ಪಕ್ಷದವರು, ಎಲ್ಲಾ ಸಮುದಾಯವರು ಜೊತೆ ಸೇರಿ ಮಾತುಕತೆಗೆ ಮುಂದಾಗಬೇಕೆಂದು ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಕೆ.ಸಿ ವೀರಭದ್ರಪ್ಪ ಆಗ್ರಹಿಸಿದರು.
   ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗಲಾಟೆ ಪ್ರಕರಣವನ್ನು ವೀರಶೈವ ಸಮಾಜ ಖಂಡಿಸುತ್ತದೆ. ಗಲಾಟೆಗೆ ಸಂಬಂಧಿಸಿದಂತೆ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಆದರೆ ಯಾವುದೇ ಕಾರಣಕ್ಕೂ ತಪ್ಪು ಮಾಡದಿರುವವರಿಗೆ ಶಿಕ್ಷೆಯಾಗಬಾರದು. ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್‌ರವರು ಘಟನೆ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿ ಇರಲಿಲ್ಲ. ಆದರೂ ಸಹ ಅವರ ವಿರುದ್ಧ ಪ್ರಕರಣ ದಾಖಲಿಸಿರುವುದು ಖಂಡನೀಯ ಎಂದರು.
   ಕ್ಷೇತ್ರದ ಶಾಸಕರು ನಮ್ಮ ಸಮುದಾಯದವರೇ ಆಗಿದ್ದರೂ ಸಹ ಸದಾ ಕಾಲ ಎಲ್ಲಾ ಸಮುದಾಯದವರೊಂದಿಗೆ ಗುರುತಿಸಿಕೊಂಡಿದ್ದಾರೆ. ಎಲ್ಲರ ಪ್ರೀತಿ ವಿಶ್ವಾಸ ಗಳಿಸಿಕೊಂಡಿದ್ದಾರೆ. ಇವರ ಮೇಲೆ ಪ್ರಕರಣ ದಾಖಸಿರುವುದು ಸಮಾಜದವರಿಗೆ ನೋವುಂಟು ಮಾಡಿದೆ. ಇವರ ಮೇಲೆ ದೂರು ಕೊಟ್ಟವರು ತಕ್ಷಣ ದೂರು ಹಿಂಪಡೆದುಕೊಳ್ಳಬೇಕೆಂದು ಆಗ್ರಹಿಸಿದರು.
 ಪ್ರಸ್ತುತ ಕ್ಷೇತ್ರದಲ್ಲಿ ಎರಡು ಕಾರ್ಖಾನೆಗಳು ಮುಚ್ಚಿವೆ. ಉದ್ಯೋಗವಿಲ್ಲದೆ ಜನರು ಪರದಾಡುತ್ತಿದ್ದಾರೆ. ಈ ನಡುವೆ ಕೊರೋನಾ ಮಹಾಮಾರಿಯಿಂದ ತತ್ತರಿಸಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಈ ರೀತಿ ಘಟನೆ ನಡೆದಿರುವುದು ವಿಷಾದನೀಯ ಬೆಳವಣಿಗೆಯಾಗಿದೆ. ಕ್ಷೇತ್ರದಲ್ಲಿ ಪುನಃ ಶಾಂತಿ ನೆಲೆ ನಿಲ್ಲಬೇಕೆಂದು ಸಮಾಜ ಬಯಸುತ್ತದೆ ಎಂದರು.
      ಬಿ.ಎಸ್ ಯಡಿಯೂರಪ್ಪ, ಬಿ.ವೈರಾಘವೇಂದ್ರ ನಡೆಗೆ ಆಕ್ರೋಶ:
     ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಶಾಸಕರು ಹಾಗು ಸಮುದಾಯದವರನ್ನು ಬಳಸಿಕೊಳ್ಳುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಸಂಸದ ಬಿ.ವೈ ರಾಘವೇಂದ್ರರವರ ನಡೆಗೆ ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಎರೆಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಎರೇಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
    ಪ್ರತಿ ಬಾರಿ ಲೋಕಸಭಾ ಚುನಾವಣೆಯಲ್ಲಿ ಶಾಸಕರ ಮೂಲಕ ಸಮುದಾಯದವರ ಮತಗಳನ್ನು ಸೆಳೆಯಲಾಗುತ್ತಿದೆ. ಇದೀಗ ಅವರ ಏಳಿಗೆಯನ್ನು ಸಹಿಸದೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ನೆಲೆ ಕಲ್ಪಿಸಿಕೊಳ್ಳಲು ಅವರನ್ನು ರಾಜಕೀಯ ಮುಗಿಸಲು ಹುನ್ನಾರ ನಡೆಸಲಾಗುತ್ತಿದೆ. ಈ ವಿಚಾರದಲ್ಲಿ ವೀರಶೈವ ಸಮಾಜ ತಟಸ್ಥವಾಗಿರುವುದು ಸರಿಯಲ್ಲ. ಇದರ ವಿರುದ್ಧ ಧ್ವನಿ ಎತ್ತಬೇಕೆಂದು ಸಮಾಜದ ಅಧ್ಯಕ್ಷರಿಗೆ ಆಗ್ರಹಿಸಿದರು.
     ಇವರ ಮಾತಿನಿಂದ ವಿಚಲಿತಗೊಂಡ ಅಧ್ಯಕ್ಷ ವೀರಭದ್ರಪ್ಪ, ಒಂದು ಕ್ಷಣ ಚಂದ್ರಶೇಖರ್ ವಿರುದ್ಧ ಹರಿಹಾಯ್ದರು. ಸಮಾಜ ಯಾರ ವಿರುದ್ಧ ಸಹ ಇಲ್ಲ. ನಮ್ಮ ಉದ್ದೇಶ ಕ್ಷೇತ್ರದಲ್ಲಿ ಪುನಃ ಶಾಂತಿ ನೆಲೆನಿಲ್ಲಬೇಕೆಂಬುದಾಗಿದೆ ಅಷ್ಟೆ ಹೊರತು ಬೇರೆ ಯಾವುದೇ ವಿಚಾರಗಳಿಲ್ಲ ಎಂದು ತಿಳಿಸಿ ಗೋಷ್ಠಿ ಮುಕ್ತಾಯಗೊಳಿಸಿದರು.
  ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಸಂಜೀವಕುಮಾರ್, ಷಣ್ಮುಖಪ್ಪ, ಶಾಂತಕುಮಾರ್, ಬಸವಂತಪ್ಪ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.