Tuesday, March 9, 2021

ವಿವಿಧ ಬೇಡಿಕೆ ಈಡೇರಿಕೆಗಾಗಿ ಬೊಮ್ಮನಕಟ್ಟೆ ಹೌಸಿಂಗ್ ಬೋರ್ಡ್ ನಿವಾಸಿಗಳಿಂದ ಮನವಿ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭದ್ರಾವತಿ ಬೊಮ್ಮನಕಟ್ಟೆ ಹೌಸಿಂಗ್ ಬೋರ್ಡ್(ಕೆಎಚ್‌ಬಿ) ಕಾಲೋನಿ ನಿವಾಸಿಗಳು ಮಂಗಳವಾರ ನಗರಸಭೆ ಪೌರಾಯುಕ್ತ ಮನೋಹರ್‌ಗೆ ಮನವಿ ಸಲ್ಲಿಸಿದರು.
     ಭದ್ರಾವತಿ, ಮಾ. ೯: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೊಮ್ಮನಕಟ್ಟೆ ಹೌಸಿಂಗ್ ಬೋರ್ಡ್(ಕೆಎಚ್‌ಬಿ) ಕಾಲೋನಿ ನಿವಾಸಿಗಳು ಮಂಗಳವಾರ ನಗರಸಭೆ ಪೌರಾಯುಕ್ತ ಮನೋಹರ್‌ಗೆ ಮನವಿ ಸಲ್ಲಿಸಿದರು.
    ಸುಮಾರು ೩೦ ವರ್ಷಗಳಿಂದ ವಾಸಿಸುತ್ತಿದ್ದು, ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ಕಳೆದ ೩-೪ ವರ್ಷಗಳಿಂದ ಉದ್ಯಾನವನದಲ್ಲಿ ಸ್ವಚ್ಛತೆ ಇಲ್ಲದಂತಾಗಿದೆ. ಮಕ್ಕಳ ಆಟಿಕೆಗಳು ತುಕ್ಕು ಹಿಡಿದು ಹಾಳಾಗಿವೆ. ತಕ್ಷಣ ಸ್ವಚ್ಛತೆ ಕೈಗೊಂಡು ಆಟಿಕೆಗಳನ್ನು ದುರಸ್ತಿಗೊಳಿಸುವುದು. ಕಾಲೋನಿಯಲ್ಲಿರುವ ಚರಂಡಿಗಳು ದುರ್ವಾಸನೆಯಿಂದ ಕೂಡಿದ್ದು, ಇದರಿಂದ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಈ ಹಿನ್ನಲೆಯಲ್ಲಿ ಒಳಚರಂಡಿ ವ್ಯವಸ್ಥೆ ಕೈಗೊಳ್ಳುವುದು.
   ಬಹುತೇಕ ರಸ್ತೆಗಳು ಹಾಳಾಗಿದ್ದು, ಡಾಂಬರೀಕರಣ ಕೈಗೊಳ್ಳುವುದು. ನಿವಾಸಿಗಳ ಕುಂದು-ಕೊರತೆಗಳನ್ನು ಆಲಿಸಲು ನಗರಸಭೆವತಿಯಿಂದ ಒಂದು ಕಛೇರಿ ತೆರೆಯುವುದರ ಜೊತೆಗೆ ನೀರಿನ ಕಂದಾಯ ಮತ್ತು ಆಸ್ತಿ ಕಂದಾಯ ಪಾವತಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡುವುದು. ಕಾಲೋನಿಯಲ್ಲಿ ವಿದ್ಯಾರ್ಥಿಗಳು, ಹಿರಿಯ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ವಾಚನಾಲಯ ತೆರೆಯುವುದು. ಕಾಲೇಜು ವಿದ್ಯಾರ್ಥಿಗಳು ಸಂಚರಿಸಲು ನಗರ ಸಾರಿಗೆ ವ್ಯವಸ್ಥೆ ಕಲ್ಪಿಸಿ ಕೊಡುವುದು ಹಾಗು ನಗರ ಆರೋಗ್ಯ ಕೇಂದ್ರ ತೆರೆಯುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
   ನಿವಾಸಿಗಳಾದ ಎ.ಎನ್ ಪುಟ್ಟಸ್ವಾಮಿ, ಜಿ.ಎಸ್ ನಾಗರಾಜ, ಎಂ. ಶಾಂತ, ತಿಪ್ಪೇರುದ್ರಪ್ಪ, ಕೆ.ಬಿ ಪರಸಪ್ಪ, ಎಂ.ಜಿ ಬಸವರಾಜ, ದೇವೇಂದ್ರ, ಚಂದ್ರಶೇಖರ್, ಎಸ್.ಎನ್ ವೆಂಕಟೇಶ್, ಕೆ. ಮಮತ, ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್, ಪರಮೇಶ್ವರಚಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮಾ.೧೧ರಂದು ಪ್ರಾಣಿವಧೆ, ಮಾಂಸ ಮಾರಾಟ ನಿಷೇಧ

ಭದ್ರಾವತಿ, ಮಾ. ೯: ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ನಗರಸಭೆ ವ್ಯಾಪ್ತಿಯಲ್ಲಿ ಮಾ.೧೧ರಂದು ಪ್ರಾಣಿವಧೆ ಮತ್ತು ಮಾಂಸ ಮಾರಾಟ ಮಾಡುವುದನ್ನು ಹಾಗು ಬಾರ್ ಮತ್ತು ರೆಸ್ಟೋರೆಂಟ್ ಹಾಗು ಮಾಂಸಹಾರಿ ಹೋಟೆಲ್‌ಗಳಲ್ಲಿ ಮಾಂಸಹಾರ ತಯಾರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
    ಆದೇಶ ಉಲ್ಲಂಘಿಸಿ ಪ್ರಾಣಿವಧೆ, ಮಾಂಸ ಮಾರಾಟ ಹಾಗು ಮಾಂಸಹಾರ ತಯಾರಿಸುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಪೌರಾಯುಕ್ತರು ಎಚ್ಚರಿಸಿದ್ದಾರೆ.

ಏ.೪ರಂದು ಡಾ. ಶಿವಕುಮಾರ ಸ್ವಾಮೀಜಿಯವರಿಗೆ ‘ವಿಶ್ವ ಮಾನವ’ ಪ್ರಶಸ್ತಿ

ಭದ್ರಾವತಿ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
   ಭದ್ರಾವತಿ, ಮಾ. ೯: ಧರ್ಮ, ಜಾತಿ, ಜನಾಂಗ ಎಲ್ಲವನ್ನೂ ಮೀರಿ ಮಧ್ಯಮ, ಬಡ ಮತ್ತು ಶೋಷಿತ ಮಕ್ಕಳಿಗೆ ಶಿಕ್ಷಣ ಕಲ್ಪಿಸಿಕೊಡುವ ಮೂಲಕ ತ್ರಿವಿಧ ದಾಸೋಹಿಗಳಾಗಿ ನಾಡಿನ ಹೃದಯ ಶ್ರೀಮಂತಿಕೆ ಹೆಚ್ಚಿಸಿರುವ ತುಮಕೂರು ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಯವರ ಸೇವಾ ಕಾರ್ಯಗಳನ್ನು ಸ್ಮರಿಸಿ ರಾಜ್ಯದ ಸಮಸ್ತ ಜನರ ಪರವಾಗಿ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಶ್ರೀಗಳಿಗೆ ವಿಶ್ವ ಮಾನವ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಬಿ.ಎನ್ ರಾಜು ತಿಳಿಸಿದರು.
   ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶ್ರೀಗಳ ಸೇವಾ ಕಾರ್ಯಗಳು ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕವಾಗಿವೆ. ಅವರು ತೋರಿಸಿಕೊಟ್ಟಿರುವ ಮಾರ್ಗದರ್ಶನದಲ್ಲಿ ನಾವೆಲ್ಲರೂ ಮುನ್ನಡೆಯಬೇಕಾಗಿದೆ. ಆಗ ಮಾತ್ರ ಅವರ ಬದುಕಿನ ಸಾರ್ಥಕತೆಗೆ ಗೌರವ ಸಲ್ಲಿಸಿದಂತಾಗುತ್ತದೆ. ಈ ಹಿನ್ನಲೆಯಲ್ಲಿ ಏ.೪ರಂದು ಸಂಜೆ ೫ ಗಂಟೆಗೆ ಹಳೇನಗರದ ಕನಕಮಂಟಪ ಮೈದಾನದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಶ್ರೀಗಳಿಗೆ 'ವಿಶ್ವ ಮಾನವ'ಪ್ರಶಸ್ತಿ ನೀಡಿ ಗೌರವ ಸಲ್ಲಿಸಲಾಗುತ್ತಿದೆ ಎಂದರು.
    ಕಾರ್ಯಕ್ರಮವನ್ನು ಸಂಸದ ಬಿ.ವೈ ರಾಘವೇಂದ್ರ ಉದ್ಘಾಟಿಸಲಿದ್ದು, ಮಾಜಿ ಶಾಸಕ ವೈಎಸ್‌ವಿ ದತ್ತಾ ಅಧ್ಯಕ್ಷತೆ ವಹಿಸಲಿದ್ದಾರೆ. ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಮುಖಂಡರಾದ ಡಿ.ಸಿ ಮಾಯಣ್ಣ, ಕೆ.ಟಿ ಗಂಗಾಧರ್, ವಿಜಿಯಮ್ಮ ಎನ್ ಗಿರಿಯಪ್ಪ, ಪ್ರೊ. ಎಂ. ಚಂದ್ರಶೇಖರಯ್ಯ, ಶಾರದಾ ಅಪ್ಪಾಜಿ, ತಹಸೀಲ್ದಾರ್ ಜಿ. ಸಂತೋಷ್ ಕುಮಾರ್, ಪೊಲೀಸ್ ಉಪಾಧೀಕ್ಷಕ ಕೃಷ್ಣಮೂರ್ತಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಜೆ ತಮ್ಮಣ್ಣಗೌಡ, ನಗರಸಭೆ  ಪೌರಾಯುಕ್ತ ಮನೋಹರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದೂದ್‌ಪೀರ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ, ಸಮಸ್ತ ನಾಗರೀಕರು ಪಾಲ್ಗೊಳ್ಳುವ  ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಿದರು.
    ಕಾರ್ಯಾಧ್ಯಕ್ಷರಾದ ಐ.ಎಲ್  ಅರುಣ್‌ಕುಮಾರ್ ಮತ್ತು ಎಂ.ವಿ ಚಂದ್ರಶೇಖರ್ ಬಿ.ಎನ್ ರಾಜುರವರ ನೇತೃತ್ವದಲ್ಲಿ ನಡೆದಿರುವ ಹೋರಾಟಗಳ ಕುರಿತು ವಿವರಿಸಿದರು. ಪ್ರಧಾನ ಕಾರ್ಯದರ್ಶಿ ಅಕ್ರಂ ಖಾನ್, ಸಂಚಾಲಕ ಸುಬ್ಬೇಗೌಡ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಹಿಂದೂ ಕೋಟೆ ಗರಡಿಗೆ ಶಿವಾನಾಯ್ಕ ಭೇಟಿ : ಸನ್ಮಾನ

ಭದ್ರಾವತಿ ಹಳೇನಗರದ ಕೋಟೆ ಏರಿಯಾದಲ್ಲಿರುವ ಹಿಂದೂ ಕೋಟೆ ಗರಡಿ ಮನೆಗೆ ಭೇಟಿ ನೀಡಿದ ದೇವರಾಜ ಅರಸು ಅಂತರಾಷ್ಟ್ರೀಯ ಕುಸ್ತಿ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಆಯನೂರು ಶಿವನಾಯ್ಕರನ್ನು ಸನ್ಮಾನಿಸಿ ಗೌರವಿಸಲಾಯಿತು.
   ಭದ್ರಾವತಿ, ಮಾ. ೯: ಹಳೇನಗರದ ಕೋಟೆ ಏರಿಯಾದಲ್ಲಿರುವ ಹಿಂದೂ ಕೋಟೆ ಗರಡಿ ಮನೆಗೆ ದೇವರಾಜ ಅರಸು ಅಂತರಾಷ್ಟ್ರೀಯ ಕುಸ್ತಿ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಆಯನೂರು ಶಿವನಾಯ್ಕ ಭೇಟಿ ನೀಡಿ ಪರಿಶಿಲನೆ ನಡೆಸಿದರು.
   ಪ್ರಸ್ತುತ ನಗರದಲ್ಲಿ ಅಸ್ತಿತ್ವ ಉಳಿಸಿಕೊಂಡಿರುವ ಹಿಂದೂ ಕೋಟೆ ಗರಡಿ ಮನೆ ಅತ್ಯಂತ ಹಳೇಯದಾದ ಗರಡಿ ಮನೆಯಾಗಿದ್ದು, ಈ ಗರಡಿ ಮನೆಯಲ್ಲಿ ತರಬೇತಿ ಪಡೆದ ಬಹಳಷ್ಟು ಕುಸ್ತಿಪಟು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
    ಆಯನೂರು ಶಿವನಾಯ್ಕರನ್ನು ಗರಡಿ ಮನೆಯ ಹಿರಿಯ ಫೈಲ್ವಾನರು ಹಾಗು ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು. ಗರಡಿ ಮನೆ ಅಧ್ಯಕ್ಷ ಬಿ. ದತ್ತಣ್ಣ, ಸೀತಾರಾಮಣ್ಣ, ಕೃಷ್ಣಯ್ಯ, ನಂಜುಂಡಪ್ಪ, ಶಿವಣ್ಣ, ಚನ್ನಬಸಪ್ಪ, ಯಲ್ಲಪ್ಪ, ಧನಂಜಯ, ಟಿ. ವೆಂಕಟೇಶ್ ಮತ್ತು ಯಲ್ಲಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮಹಿಳೆಯರಿಗಾಗಿ ಪೊಲೀಸ್ ಇಲಾಖೆಯಿಂದ ಹಲವು ಸುರಕ್ಷತಾ ಕ್ರಮಗಳು

ಜೆಸಿಐ ವತಿಯಿಂದ ಪದ್ಮಾಂಭ ಸ್ವಯಂ ಸೇವಾ ಸಂಸ್ಥೆ ಸಹಯೋಗದೊಂದಿಗೆ ಭದ್ರಾವತಿ ಅನು ಗಾರ್ಮೆಂಟ್ಸ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಸಂಚಾರಿ ಪೊಲೀಸ್ ಠಾಣಾಧಿಕಾರಿ ಕವಿತಾ ಪಾಲ್ಗೊಂಡು ಮಾತನಾಡಿದರು.  
   ಭದ್ರಾವತಿ, ಮಾ. ೯: ಇತ್ತಿಚಿನ ದಿನಗಳಲ್ಲಿ ಮಹಿಳೆಯರ ರಕ್ಷಣೆಗೆ ಪೊಲೀಸ್ ಇಲಾಖೆ ಬಹಳಷ್ಟು ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿದ್ದು, ಅಲ್ಲದೆ ಜನಸ್ನೇಹಿಯಾಗಿದೆ ಎಂದು ಸಂಚಾರಿ ಪೊಲೀಸ್ ಠಾಣಾಧಿಕಾರಿ ಕವಿತಾ ತಿಳಿಸಿದರು.
    ಅವರು ಜೆಸಿಐ ವತಿಯಿಂದ ಪದ್ಮಾಂಭ ಸ್ವಯಂ ಸೇವಾ ಸಂಸ್ಥೆ ಸಹಯೋಗದೊಂದಿಗೆ ನಗರದ ಅನು ಗಾರ್ಮೆಂಟ್ಸ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.  
     ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಯಾವುದೇ ರೀತಿ ಕಿರುಕುಳ, ಸಮಸ್ಯೆಗಳಿದ್ದಲ್ಲಿ ಮಹಿಳೆಯರು ಧೈರ್ಯವಾಗಿ ಠಾಣೆಗಳಿಗೆ ಬಂದು ದೂರು ನೀಡಬಹುದು. ಯಾವುದೇ ರೀತಿ ಆತಂಕಪಡುವ ಅಗತ್ಯವಿಲ್ಲ. ಇಲಾಖೆ ಎಲ್ಲಾ ರೀತಿಯ ಸುರಕ್ಷತೆ ಕಲ್ಪಿಸಿಕೊಡಲಿದೆ ಎಂದು ಭರವಸೆ ನೀಡಿದರು.
   ವಾಹನ ಸವಾರರು ಕಡ್ಡಾಯವಾಗಿ ತಮ್ಮ ವಾಹನಕ್ಕೆ ಸಂಭಂಧಿಸಿದ ಎಲ್ಲಾ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಂಡಿರಬೇಕು. ಸಂಚಾರಿ ಪೊಲೀಸರ ತಪಾಸಣೆ ವೇಳೆ ತೋರಿಸಬೇಕು. ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಅಪಘಾತಗಳು ಸಂಭವಿಸದಂತೆ ಎಚ್ಚರಿಸಬೇಕೆಂದರು.  
   ಯಾವುದೆ ಮಹಿಳೆಯರು ತಮಗೆ ಏನಾದರೂ ಕಿರುಕುಳ ಅಥವ ತೊಂದರೆ ಆದಲ್ಲಿ ಯಾವುದೆ ಹಿಂಜರಿಕೆ ಹೆದರಿಕೆ ಇಲ್ಲದೆ ನೇರವಾಗಿ ಪೊಲೀಸ್ ಠಾಣೆಗೆ ಬಂದು ತಮಗಾದ ಅನ್ಯಾಯದ ಬಗ್ಗೆ ದೂರನ್ನು ದಾಖಲಿಸಬಹುದು ಎಂದರು.
     ಜೆಸಿಐ ಅಧ್ಯಕ್ಷೆ ವಿಪುಲ ಬಿ ರಾವ್ ಅಧ್ಯಕ್ಷತೆ ವಹಿಸಿದ್ದರು. ಪದ್ಮಾಂಭ ಸ್ವಯಂ ಸೇವಾ ಸಂಸ್ಥೆ ಅಧ್ಯಕ್ಷೆ ಅನ್ನಪೂರ್ಣ ಸತೀಶ್, ಯಶೋಧ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಅಂತರಾಷ್ಟ್ರೀಯ ಮಹಿಳಾ ದಿನ ಜಾಗೃತಿ ಸಂಕೇತವಾಗಲಿ : ಸುವಾಸಿನಿ

ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದ ವತಿಯಿಂದ ಭದ್ರಾವತಿ ಹಳೇನಗರದ ವೀರಶೈವ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ನಗರಸಭೆ ಸಮುದಾಯ ಸಂಘಟನಾ ಅಧಿಕಾರಿ ಸುವಾಸಿನಿ ಉದ್ಘಾಟಿಸಿದರು.
ಭದ್ರಾವತಿ, ಮಾ. ೯: ಮಹಿಳೆಯರ ಸಂಭ್ರಮ ಕೇವಲ ಮಾರ್ಚ್ ತಿಂಗಳಿಗೆ ಮಾತ್ರ ಸೀಮಿತವಾಗಿರಬಾರದು. ನಿತ್ಯನಿರಂತರವಾಗಿರಬೇಕು, ಸಮಾಜದಲ್ಲಿ ಮಹಿಳೆ ಇನ್ನೂ ಸಬಲೀಕರಣವಾಗಬೇಕು. ಈ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನ ಜಾಗೃತಿ ಸಂಕೇತವಾಗಬೇಕೆಂದು ನಗರಸಭೆ ಸಮುದಾಯ ಸಂಘಟನಾ ಅಧಿಕಾರಿ ಸುವಾಸಿನಿ ತಿಳಿಸಿದರು.
    ಅವರು ಮಂಗಳವಾರ ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದ ವತಿಯಿಂದ ಹಳೇನಗರದ ವೀರಶೈವ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಸಮಾಜದಲ್ಲಿ ಹೆಣ್ಣು ಮತ್ತು ಗಂಡು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಇಬ್ಬರ ನಡುವೆ ಸಮನ್ವಯತೆ, ಸಹಬಾಳ್ವೆ ಬಹಳ ಮುಖ್ಯವಾಗಿದೆ. ಈ ಹಿನ್ನಲೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಎಂದರೆ ಕೇವಲ ಮಹಿಳೆಯರಿಗೆ ಸೀಮಿತವಾಗಿಲ್ಲ. ಮಹಿಳೆಯರೊಂದಿಗೆ ಪುರುಷರು ಸಹ ಇರಬೇಕು. ಆ ಮೂಲಕ ಮಹಿಳೆಯರು ನಮ್ಮೊಳಗಿನ ಪರಿಪೂರ್ಣತೆ ಕಂಡುಕೊಳ್ಳಬೇಕೆಂದರು.
     ಪ್ರಸ್ತುತ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮುನ್ನಡೆಯಲಿದ್ದಾರೆ. ಆದರೂ ಸಹ ಇನ್ನೂ ಬಹಳಷ್ಟು ಮಹಿಳೆಯರು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದೆ ಉಳಿದ್ದಿದ್ದು, ಇವರು ಸಹ ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕೆಂದರು.  
    ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಹಿರೇಮಠ, ಬಿಳಿಕಿ ದಿವ್ಯ ಸಾನಿಧ್ಯ ವಹಿಸಿದ್ದು, ಮಹಿಳಾ ಘಟಕದ ಅಧ್ಯಕ್ಷೆ ರೂಪ ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು.
    ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಸಿದ್ದಲಿಂಗಯ್ಯ, ಆರ್.ಎಸ್ ಶೋಭ, ನಂದಿನಿ ಮಲ್ಲಿಕಾರ್ಜುನ, ಕವಿತಾ ಸುರೇಶ್, ವೇದಾ ಬಸವರಾಜ್, ಎಸ್. ಪೂರ್ಣಿಮಾ, ಎಸ್. ವಾಗೀಶ್, ಜಿ.ಎಂ ಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Monday, March 8, 2021

ಉಕ್ಕಿನ ನಗರಕ್ಕೆ ಶೂನ್ಯ, ಉದ್ಯೋಗ ಸೃಷ್ಟಿ ಇಲ್ಲದ ಬಜೆಟ್

ಶಶಿಕುಮಾರ್ ಎಸ್ ಗೌಡ
     ಭದ್ರಾವತಿ, ಮಾ. ೮: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೋಮವಾರ ಮಂಡಿಸಿದ ೮ನೇ ಬಜೆಟ್ ತಾಲೂಕಿನ ಮಟ್ಟಿಗೆ ಶೂನ್ಯ ಬಜೆಟ್ ಆಗಿದ್ದು, ಕ್ಷೇತ್ರದ ಜನರು ಹೊಂದಿದ್ದ ಹಲವು ನಿರೀಕ್ಷೆಗಳು ಹುಸಿಯಾಗಿವೆ ಎಂದು ಬಜೆಟ್ ಕುರಿತು ವಿವಿಧ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ ಪ್ರಮುಖರು ಟೀಕಿಸಿದ್ದಾರೆ.
     ಉಕ್ಕಿನ ನಗರಕ್ಕೆ ಶೂನ್ಯ ಕೊಡುಗೆ ಬಜೆಟ್:
   ಜೆಡಿಎಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್ ಗೌಡ ಬಜೆಟ್ ಕುರಿತು ಪತ್ರಿಕೆಗೆ ಪ್ರತಿಕ್ರಿಯಿಸಿ ಪ್ರಮುಖವಾಗಿ ಎಂಪಿಎಂ ಕಾರ್ಖಾನೆ ಕುರಿತು ಯಾವುದೇ ಪ್ರಸ್ತಾಪ ಮಾಡದಿರುವುದು ಹಾಗು ಕ್ಷೇತ್ರದ ಮಟ್ಟಿಗೆ ಯಾವುದೇ ಹೊಸ ಯೋಜನೆಗಳನ್ನು ಜಾರಿಗೊಳಿಸುವ ಸಂಬಂಧ ಘೋಷಣೆ ಮಾಡಿಲ್ಲ. ೮ನೇ ಬಜೆಟ್ ಸಹ ಕ್ಷೇತ್ರಕ್ಕೆ ಶೂನ್ಯ ಕೊಡುಗೆ ನೀಡಿದೆ ಎಂದು ಟೀಕಿಸಿದ್ದಾರೆ.


ಎಚ್. ರವಿಕುಮಾರ್
        
       ಉದ್ಯೋಗ ಸೃಷ್ಟಿ ಇಲ್ಲದ ನಿರಾಶದಾಯಕ ಬಜೆಟ್:
    ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಪ್ರತಿಕ್ರಿಯಿಸಿ ಸುಮಾರು ೫ ವರ್ಷಗಳಿಂದ ಸ್ಥಗಿತಗೊಂಡಿರುವ ಮೈಸೂರು ಕಾಗದ ಕಾರ್ಖಾನೆಗೆ ಈ ಬಾರಿ ಬಜೆಟ್‌ನಲ್ಲಿ ಕನಿಷ್ಠ ಬಂಡವಾಳ ಹೂಡುವ ಮೂಲಕ ಆರಂಭಿಸಬಹುದೆಂಬ ನಿರೀಕ್ಷೆಯನ್ನು ಕಾರ್ಮಿಕ ಕುಟುಂಬಗಳು ಹೊಂದಿದ್ದವು. ಆದರೆ ನಿರೀಕ್ಷೆ ಹುಸಿಯಾಗಿದೆ. ಅಲ್ಲದೆ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಸುವ ಯಾವುದೇ ಯೋಜನೆಗಳನ್ನು ಘೋಷಿಸಿಲ್ಲ. ಅದರಲ್ಲೂ ಯುವ  ಸಮುದಾಯದ ಪಾಲಿಗೆ ಈ ಬಾರಿ ಬಜೆಟ್ ನಿರಾಶದಾಯಕ ಬಜೆಟ್ ಆಗಿದೆ ಎಂದು ಟೀಕಿಸಿದ್ದಾರೆ.



ಬಿ.ಎನ್ ರಾಜು

      ಅಂಬೇಡ್ಕರ್ ಭವನ ಕಾಮಗಾರಿಗೆ ಅನುದಾನ ನೀಡದ ಬಜೆಟ್:
   ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಬಜೆಟ್ ಕುರಿತು ಪ್ರತಿಕ್ರಿಯಿಸಿ ನಗರದಲ್ಲಿ ನೆನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನ ಕಾಮಗಾರಿಗೆ ಈ ಬಜೆಟ್‌ನಲ್ಲಿ ಹಣ ಬಿಡುಗಡೆಗೊಳಿಸುವಂತೆ ಹಲವಾರು ಹೋರಾಟ ನಡೆಸಲಾಗಿತ್ತು. ಅಲ್ಲದೆ ತಾಲೂಕು ಆಡಳಿತ, ಜಿಲ್ಲಾಡಳಿತ ಹಾಗು ಮುಖ್ಯಮಂತ್ರಿಗಳಿಗೆ ಮತ್ತು ಸಂಸದರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿತ್ತು. ಆದರೂ ಸಹ ಹಣ ಬಿಡುಗಡೆಗೊಳಿಸಿಲ್ಲ. ಈ ಸಂಬಂಧ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದ್ದಾರೆ.


ಡಾ.ಬಿ.ಎಂ ನಾಸಿರ್‌ಖಾನ್

        ಮಹಿಳೆಯರಿಗೆ ಹೆಚ್ಚಿನ ಆದ್ಯತೆ :
       ಬಜೆಟ್ ಕುರಿತು ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಥಮಿಕ ಡಾ.ಬಿ.ಎಂ ನಾಸಿರ್‌ಖಾನ್ ಪ್ರತಿಕ್ರಿಯಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಸೋಮವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಮಂಡಿಸಿರುವ ಬಜೆಟ್‌ನಲ್ಲಿ ಈ ಬಾರಿ ಮಹಿಳೆಯರಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿರುವುದು ವಿಶೇಷವಾಗಿದೆ. ಆದರೆ ರೈತರು, ಕಾರ್ಮಿಕರು, ಸರ್ಕಾರಿ ನೌಕರರು ಹಾಗು ಶ್ರೀಸಾಮಾನ್ಯರ ಹಲವು ನಿರೀಕ್ಷೆಗಳು ಬಜೆಟ್‌ನಲ್ಲಿ ಹುಸಿಯಾಗಿವೆ. ಈ ನಡುವೆಯೂ ಕೊರೋನಾ ಸಂಕಷ್ಟದಲ್ಲೂ ಎಲ್ಲರನ್ನು ಸಂತೃಪ್ತಿಪಡಿಸುವ ಬಜೆಟ್ ಮಂಡಿಸುವಲ್ಲಿ ಮುಖ್ಯಮಂತ್ರಿಗಳು ಯಶಸ್ವಿಯಾಗಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.