ಮಂಗಳವಾರ ತಾ.ಪಂ. ಅಧ್ಯಕ್ಷೆ ಡಿ. ಲಕ್ಷ್ಮೀದೇವಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯರ ಆಗ್ರಹ
ಭದ್ರಾವತಿಯಲ್ಲಿ ಮಂಗಳವಾರ ತಾಲೂಕು ಪಂಚಾಯಿತಿ ಅಧ್ಯಕ್ಷೆ ಡಿ. ಲಕ್ಷ್ಮೀದೇವಿ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.
ಭದ್ರಾವತಿ, ಏ. ೬: ತಾಲೂಕು ಕಛೇರಿಗೆ ವಿವಿಧ ದಾಖಲೆಗಳನ್ನು ಪಡೆಯಲು ಬರುವವರಿಗೆ ಸರಿಯಾದ ಮಾಹಿತಿ ನೀಡದೆ ಅಲೆದಾಡಿಸುವುದು ಸರಿಯಲ್ಲ. ತಾಲೂಕು ಆಡಳಿತ ವ್ಯಾಪ್ತಿಗೆ ಒಳಪಡುವ ಇಲಾಖೆಗಳ ಅಧಿಕಾರಿಗಳು ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿಭಾಯಿಸುವಂತೆ ತಾಲೂಕು ಪಂಚಾಯಿತಿ ಸದಸ್ಯರು ಆಗ್ರಹಿಸಿದರು.
ಮಂಗಳವಾರ ತಾಲೂಕು ಪಂಚಾಯಿತಿ ಅಧ್ಯಕ್ಷೆ ಡಿ. ಲಕ್ಷ್ಮೀದೇವಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ನಾಗರಾಜ್, ಕಳೆದ ೬ ತಿಂಗಳುಗಳಿಂದ ಸರಿಯಾಗಿ ಪಿಂಚಣಿ ಬಂದಿಲ್ಲ. ಪಿಂಚಣಿಗಾಗಿ ತಾಲೂಕು ಕಛೇರಿ ಅಲೆದಾಡುವಂತಾಗಿದೆ. ಅಧಿಕಾರಿಗಳನ್ನು ಸಮರ್ಪಕಿಸಿದರೆ ಅದೇನೋ ಎರಡು ಕಡೆ ಲಾಕ್ ಆಗಿದೆ. ಎರಡು ಬಾರಿ ಆದೇಶ ಪತ್ರ ಮಂಜೂರಾಗಿದೆ. ಇತ್ಯಾದಿ ಕಾರಣಗಳನ್ನು ಹೇಳಿ ಕಳುಹಿಸಲಾಗುತ್ತಿದೆ. ಅಲ್ಲದೆ ಹೊದಸಾಗಿ ಅರ್ಜಿ ಸಲ್ಲಿಸುವಂತೆ ಸೂಚಿಸುತ್ತಿದ್ದಾರೆ. ಇದರಿಂದಾಗಿ ಪಿಂಚಣಿಯನ್ನು ನಂಬಿರುವ ಬಡವರು ತೊಂದರೆ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ಉಪತಹಸೀಲ್ದಾರ್ ಮಲ್ಲಿಕಾರ್ಜುನಯ್ಯ, ಹೊಸದಾಗಿ ಪಿಂಚಣಿ ಮಾಡಿಸುವ ಅಗತ್ಯವಿಲ್ಲ. ಆಧಾರ್ ಕಾರ್ಡ್, ಬ್ಯಾಂಕ್‌ಪಾಸ್‌ಬುಕ್ ನೀಡಿದರೆ ಸಾಕು ಪಿಂಚಣಿ ಸಮಸ್ಯೆ ಬಗೆಹರಿಸಿ ಕೊಡುವುದಾಗಿ ಭರವಸೆ ನೀಡಿದರು.
ಹಿರಿಯ ಸದಸ್ಯ ಧರ್ಮೇಗೌಡ ಮಾತನಾಡಿ, ಆಹಾರ, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕೆಲಸಗಳಿಗಾಗಿ ತಾಲೂಕು ಕಛೇರಿಗೆ ಬರರುವವರಿಗೆ ಸೂಕ್ತ ಮಾಹಿತಿ ನೀಡುವ ಜೊತೆಗೆ ಪೂರಕವಾಗಿ ಸ್ಪಂದಿಸಬೇಕು. ಆದರೆ ಅಧಿಕಾರಿಗಳು ಯಾವುದೇ ಮಾಹಿತಿ ನೀಡದೆ ಅಲೆದಾಡುಸುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.
ಆರಂಭದಲ್ಲಿ ಸದಸ್ಯ ದಿನೇಶ್ ಮಾತನಾಡಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳನ್ನು ಹೆಚ್ಚು ದಿನ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲಿ. ಇದರ ಹಿಂದೆ ಯಾವುದೋ ವೈಫಲ್ಯವಿರುವಂತೆ ಎದ್ದು ಕಾಣುತ್ತಿದೆ. ತಾಲೂಕು ಪಂಚಾಯಿತಿ ವ್ಯಾಪ್ತಿಯ ಸಮಗ್ರ ಚಿತ್ರಣ ಅರಿತುಕೊಂಡು ಅಭಿವೃದ್ಧಿಗೆ ಪೂರಕವಾಗಿ ಕರ್ತವ್ಯ ನಿರ್ವಹಿಸುವ ಮೊದಲೇ ವರ್ಗವಣೆಗೊಳ್ಳುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದರು.
ಇದಕ್ಕೆ ಉತ್ತರಿಸಿದ ಅಧ್ಯಕ್ಷೆ ಡಿ. ಲಕ್ಷ್ಮೀದೇವಿ, ಅಧಿಕಾರಿಯನ್ನು ಸರ್ಕಾರವೇ ವರ್ಗಾವಣೆಗೊಳಿಸಿದೆ. ಅಧಿಕಾರಿಗಳನ್ನು ಉಳಿಸಿಕೊಳ್ಳುವುದು ನಮ್ಮ ಕೈಯಲ್ಲಿಲ್ಲ ಎಂದರು.
ನೂತನ ಕಾರ್ಯನಿರ್ವಹಣಾಧಿಕಾರಿ ರಮೇಶ್ ಮಾತನಾಡಿ, ಸರ್ಕಾರದ ಆದೇಶದ ಮೇರೆಗೆ ನನ್ನನ್ನು ನಿಯೋಜನೆಗೊಳಿಸಲಾಗಿದೆ. ನಿಮ್ಮೆಲ್ಲರ ಸಹಕಾರದಿಂದ ಉತ್ತಮವಾಗಿ ಕರ್ತವ್ಯ ನಿರ್ವಹಿಸುವುದಾಗಿ ಭರವಸೆ ನೀಡಿದರು.
ಉಪಾಧ್ಯಕ್ಷೆ ನೇತ್ರಾಬಾಯಿ ಉಪಸ್ಥಿತರಿದ್ದರು. ತಾಲೂಕು ಪಂಚಾಯಿತಿ ಸದಸ್ಯರಾದ ಶಾಮಾಬಾನು, ಆಶಾ ಶ್ರೀಧರ್, ಯಶೋದಮ್ಮ, ಎ.ಎನ್ ಉಷಾಕಿರಣ, ಎಸ್. ರಮೇಶ್, ಕೆ.ವಿ ರುದ್ರಪ್ಪ, ಅಣ್ಣಾಮಲೈ, ತಿಪ್ಪೇಶ್‌ರಾವ್ ಅರಣ್ಯ, ಕೃಷಿ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.