ಕಾಂಗ್ರೆಸ್-ಜೆಡಿಎಸ್‌ನಲ್ಲಿ ವಿಳಂಬ ಧೋರಣೆ, ಬಿಜೆಪಿಯಲ್ಲಿ ಕಾದು ನೋಡುವ ತಂತ್ರ
![](https://blogger.googleusercontent.com/img/b/R29vZ2xl/AVvXsEh6aydO3tD6Stj4HGeQtfNvZXwujagobTbjcMvNpV_X36I6QhuKvDMGEn6GCv5KE0j0pdcrk-2K5yT17z8bs7aRiDjZmV4vyax_EkyGCxfmJ07UVT1rwVEgDx0aJbCt71N0h48qvuYgQaMY/w640-h376-rw/Screenshot_20210410_005549-773387.jpg)
ಭದ್ರಾವತಿ, ಏ. ೧೦: ನಗರಸಭೆ ಚುನಾವಣೆ ಪ್ರಕ್ರಿಯೆಗಳು ಏ.೮ ರಿಂದ ಚುರುಕಿನಿಂದ ನಡೆಯುತ್ತಿದ್ದು, ಈ ನಡುವೆ ಬಿಜೆಪಿ ಹೊರತುಪಡಿಸಿ ಉಳಿದ ರಾಜಕೀಯ ಪಕ್ಷಗಳು ಅಧಿಕೃತ ಅಭ್ಯರ್ಥಿಗಳ ಘೋಷಣೆಯಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿವೆ.
ಈಗಾಗಲೇ ನಗರಸಭೆ ೩೫ ವಾರ್ಡ್‌ಗಳ ಪೈಕಿ ೨೧ ವಾರ್ಡ್‌ಗಳಿಗೆ ಬಿಜೆಪಿ ಅಧಿಕೃತ ಅಭ್ಯರ್ಥಿಗಳನ್ನು ಘೋಷಿಸಿದ್ದು, ಇನ್ನೂ ೧೪ ವಾರ್ಡ್‌ಗಳು ಬಾಕಿ ಉಳಿದಿವೆ. ಉಳಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಇದುವರೆಗೂ ಅಧಿಕೃತ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಈ ನಡುವೆ ಆಮ್ ಆದ್ಮಿ ಪಾರ್ಟಿ ಹಾಗು ಜನತಾದಳ(ಸಂಯುಕ್ತ) ಕರ್ನಾಟಕ ಮತ್ತು ವೆಲ್‌ಫೇರ್ ಪಾರ್ಟಿ ಇಂಡಿಯಾ ಪಕ್ಷದ ಅಭ್ಯರ್ಥಿಗಳು ಸಹ ಈ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ದಿನ ಕಳೆದಂತೆ ಚುನಾವಣೆ ಕುತೂಹಲ ಪಡೆದುಕೊಳ್ಳುತ್ತಿದೆ.
ಮತ್ತೊಂದೆಡೆ ಚುನಾವಣೆಗೆ ಸ್ಪರ್ಧಿಸಲು ಆಕಾಂಕ್ಷಿಗಳ ಪೈಪೋಟಿ ಹೆಚ್ಚಾಗುತ್ತಿದೆ. ಮಾತೃಪಕ್ಷದಲ್ಲಿ ಸ್ಪರ್ಧೆಗೆ ಕೈತಪ್ಪುವ ಆತಂಕ ಹೆಚ್ಚಾಗುತ್ತಿದ್ದು, ಅಸಮಾಧಾನಗೊಂಡವರನ್ನು ಸೆಳೆಯಲು ಎಲ್ಲಾ ರಾಜಕೀಯ ಪಕ್ಷಗಳು ಕಸರತ್ತು ನಡೆಸುತ್ತಿವೆ. ಏ.೧೫ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರುವ ಹಿನ್ನಲೆಯಲ್ಲಿ ಬಹುತೇಕ ಪಕ್ಷಗಳು ಸೋಮವಾರದ ನಂತರ ಅಧಿಕೃತ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸುವ ಸಾಧ್ಯತೆ ಹೆಚ್ಚಾಗಿದೆ.
ಜೆಡಿಎಸ್‌ನಲ್ಲಿ ಆತಂಕ :
ರಾಜಕೀಯ ಅಸ್ತಿತ್ವಕ್ಕಾಗಿ ಹೆಣಗಾಡುತ್ತಿರುವ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್ ಕೆಲವು ದಿನಗಳ ಹಿಂದೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ವೇಳೆ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಬೆಂಬಲ ವ್ಯಕ್ತಪಡಿಸುವ ಜೊತೆಗೆ ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಮುಂದಾಗಿದ್ದರು. ಆದರೆ ಕ್ಷೇತ್ರದಲ್ಲಿ ಕಬಡ್ಡಿ ಪಂದ್ಯಾವಳಿ ವೇಳೆ ನಡೆದ ಅಹಿತಕರ ಘಟನೆಗಳ ಹಿನ್ನಲೆಯಲ್ಲಿ ಉಂಟಾದ ರಾಜಕೀಯ ಬೆಳವಣಿಗೆಗಳ ಪರಿಣಾಮ ಜೆಡಿಎಸ್ ಪಕ್ಷದಲ್ಲಿಯೇ ಉಳಿದುಕೊಂಡಿದ್ದು, ಇದರ ಪರಿಣಾಮ ಇದೀಗ ಪಕ್ಷದಲ್ಲಿ ಅಸಮಾಧಾನಿತರ ಸಂಖ್ಯೆ ಹೆಚ್ಚಾಗುತ್ತಿದೆ. ಚುನಾವಣೆಗೆ ಸ್ಪರ್ಧಿಸಲು ಹಲವು ತಿಂಗಳುಗಳಿಂದ ಸಿದ್ದತೆ ನಡೆಸಿಕೊಂಡು ಬಂದಿದ್ದ ಪಕ್ಷದ ನಿಷ್ಠಾವಂತ ಕಾರ್ಯಕರ್ತರು, ಮುಖಂಡರು ಸ್ಪರ್ಧೆಗೆ ಅವಕಾಶ ಸಿಗದಿರುವುದು ಮನದಟ್ಟು ಆಗುತ್ತಿದ್ದಂತೆ ಇದೀಗ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಇದರಿಂದಾಗಿ ಜೆಡಿಎಸ್ ಪಕ್ಷಕ್ಕೆ ಒಂದೆಡೆ ಆತಂಕ ಎದುರಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಬಿಜೆಪಿ ಕಾದು ನೋಡುವ ತಂತ್ರಕ್ಕೆ ಮೊರೆ :
ಎಲ್ಲಾ ಪಕ್ಷಗಳಿಗಿಂತ ಮೊದಲೇ ೨೧ ವಾರ್ಡ್‌ಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿರುವ ಭಾರತೀಯ ಜನತಾ ಪಕ್ಷ ಉಳಿದಿರುವ ಪ್ರಮುಖ ೧೪ ವಾರ್ಡ್‌ಗಳ ಅಭ್ಯರ್ಥಿಗಳ ಆಯ್ಕೆಯಲ್ಲಿ ಕಾದು ನೋಡುವ ತಂತ್ರಕ್ಕೆ ಮೊರೆಹೋಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿಗಳ ಘೋಷಣೆ ನಂತರ ಈ ವಾರ್ಡ್‌ಗಳಿಗೆ ಅಭ್ಯರ್ಥಿಗಳ ಘೋಷಣೆ ನಡೆಯುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.