![](https://blogger.googleusercontent.com/img/b/R29vZ2xl/AVvXsEjEETfy8_CyWBDnc7uB2xNMLmg5QRSe2gXudUVgvxuP1G_PT0pvOzy1bRz4muSsPzBljwvkfgyg39sHtTrjBXWEaMeV_tOhQ24hco5a4NeuFbNpIP0yS32fJw08Vu8z-6Gfe4cRpxUd28XG/w640-h292-rw/D22-BDVT2-702466.jpg)
ಭದ್ರಾವತಿ ನಗರಸಭೆ ವಾರ್ಡ್ ನಂ.೨೪ರ ಆಮ್ ಆದ್ಮಿ ಪಾರ್ಟಿ ಅಧಿಕೃತ ಅಭ್ಯರ್ಥಿ ಎ. ಮಸ್ತಾನ್ ಗುರುವಾರ ಮತದಾರರಿಗೆ ಪಕ್ಷದ ಮಾಸ್ಕ್‌ಗಳನ್ನು ವಿತರಿಸುವ ಮೂಲಕ ಮತಯಾಚನೆ ನಡೆಸಿದರು.
ಭದ್ರಾವತಿ, ಏ. ೨೨: ಕೋವಿಡ್-೧೯ರ ನಡುವೆಯೂ ನಗರಸಭೆ ೩೫ ವಾರ್ಡ್‌ಗಳಲ್ಲಿ ಗುರುವಾರ ಸಹ ಅಭ್ಯರ್ಥಿಗಳಿಂದ ಪ್ರಚಾರದ ಭರಾಟೆ ಕಂಡು ಬಂದಿತು. ವಿಶೇಷವಾಗಿ ವಾರ್ಡ್ ನಂ.೨೪ರ ಆಮ್ ಆದ್ಮಿ ಪಾರ್ಟಿ ಅಧಿಕೃತ ಅಭ್ಯರ್ಥಿ ಎ. ಮಸ್ತಾನ್ ಮತದಾರರಿಗೆ ಪಕ್ಷದ ಮಾಸ್ಕ್‌ಗಳನ್ನು ವಿತರಿಸುವ ಮೂಲಕ ಮತಯಾಚನೆ ನಡೆಸಿದರು.
ಬೊಮ್ಮನಕಟ್ಟೆ ವ್ಯಾಪ್ತಿಯನ್ನು ಒಳಗೊಂಡಿರುವ ವಾರ್ಡ್ ನಂ. ೨೪ರಲ್ಲಿ ಒಟ್ಟು ೩೦೬೯ ಮತದಾರರಿದ್ದು, ಅರ್ಧದಷ್ಟು ಮುಸ್ಲಿಂ ಮತದಾರರಿದ್ದಾರೆ. ಉಳಿದಂತೆ ಹಿಂದೂ ಹಾಗು ಕ್ರಿಶ್ಚಿಯನ್ ಮತದಾರರಿದ್ದು, ಒಟ್ಟು ೯ ಮಂದಿ ಚುನಾವಣಾ ಕಣದಲ್ಲಿದ್ದಾರೆ. ಪ್ರಮುಖವಾಗಿ ಕಾಂಗ್ರೆಸ್ ಪಕ್ಷದಿಂದ ಹಾಲಿ ನಗರಸಭಾ ಸದಸ್ಯ ದಿವಂಗತ ಮೆಹಬೂಬ್ ಸಾಬ್‌ರವರ ಪುತ್ರ ಎಸ್.ಎಂ ಅಬ್ದುಲ್ ಮಜೀದ್, ಜೆಡಿಎಸ್ ಪಕ್ಷದಿಂದ ಸಾಮಾನ್ಯ ಕಾರ್ಯಕರ್ತ ಕೋಟೇಶ್ವರರಾವ್(ಕೋಟಿ), ಬಿಜೆಪಿ ಪಕ್ಷದಿಂದ ಎಸ್.ಸಿ ಮೋರ್ಚಾ ತಾಲೂಕು ಅಧ್ಯಕ್ಷ ಪಿ. ಗಣೇಶ್‌ರಾವ್, ಆಮ್ ಆದ್ಮಿ ಪಾರ್ಟಿಯಿಂದ ಯುವ ಮುಖಂಡ ಎ. ಮಸ್ತಾನ್, ವಿಶ್ವ ಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷ ಶೇಖ್ ಹುಸೇನ್ ಸಾಬ್, ಖಾಜಾ ಮೈನುದ್ದೀನ್ ಸೇರಿದಂತೆ ೫ ಮಂದಿ ಪಕ್ಷೇತರ ಅಭ್ಯರ್ಥಿಗಳಿದ್ದು, ಒಟ್ಟು ೯ ಮಂದಿ ಕಣದಲ್ಲಿದ್ದಾರೆ.
ಈ ವಾರ್ಡ್‌ನಲ್ಲಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಬೆಂಬಲಿಗರಾಗಿದ್ದ ಮೆಹಬೂಬ್ ಸಾಬ್ ೩ ಬಾರಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಅವರ ನಿಧನದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಅಭ್ಯರ್ಥಿಗಳು ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಮನೆ ಮನೆಗೆ ತೆರಳಿ ಬಿರುಸಿನಿಂದ ಮತಯಾಚನೆ ನಡೆಸುತ್ತಿದ್ದಾರೆ.
ಹೊಸ ಬುಳ್ಳಾಪುರ, ಹುಡ್ಕೋ ಕಾಲೋನಿ ಒಳಗೊಂಡಿರುವ ವಾರ್ಡ್ ನಂ.೨೫ರಲ್ಲಿ ಒಟ್ಟು ೩೭೭೬ ಮತದಾರರಿದ್ದು, ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿರುವ ಅಭ್ಯರ್ಥಿಗಳು ಈ ಬಾರಿ ಕಣದಲ್ಲಿದ್ದು, ಪ್ರಮುಖವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಹಾಲಿ ನಗರಸಭಾ ಸದಸ್ಯ ಆಂಜನಪ್ಪ ಕಣದಲ್ಲಿದ್ದು, ಜೆಡಿಎಸ್ ಪಕ್ಷದಿಂದ ಸ್ಥಳೀಯ ಮುಖಂಡ ಉದಯ್‌ಕುಮಾರ್, ಬಿಜೆಪಿ ಪಕ್ಷದಿಂದ ತಾಲೂಕು ಬಿಜೆಪಿ ಎಸ್‌ಸಿ ಮೋರ್ಚಾ ಉಪಾಧ್ಯಕ್ಷ ಕೆ. ಚಂದ್ರು, ಪಕ್ಷೇತರ ಅಭ್ಯರ್ಥಿಯಾಗಿ ಸ್ನೇಹಜೀವಿ ಬಳಗದ ಸದಸ್ಯ, ತಾಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಸುರೇಶ್ ಸೇರಿದಂತೆ ಒಟ್ಟು ೫ ಮಂದಿ ಕಣದಲ್ಲಿದ್ದಾರೆ. ಈ ಪೈಕಿ ಉದಯ್‌ಕುಮಾರ್, ಕೆ. ಚಂದ್ರು ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದ್ದು, ಅಭ್ಯರ್ಥಿಗಳಿಂದ ಅಬ್ಬರದ ಪ್ರಚಾರ ನಡೆಯುತ್ತಿದೆ. ಕಳೆದ ಬಾರಿ ಈ ವಾರ್ಡ್‌ನಲ್ಲಿ ಜೆಡಿಎಸ್ ಪಕ್ಷದ ಎಂ. ರಾಜು ಗೆಲುವು ಸಾಧಿಸಿದ್ದರು.
ಸಂಪೂರ್ಣವಾಗಿ ವಿಐಎಸ್‌ಎಲ್ ಕಾರ್ಖಾನೆ ವಸತಿಗೃಹಗಳನ್ನು ಒಳಗೊಂಡಿರುವ ಬಾಲಭಾರತಿ-ಬೆಣ್ಣೆ ಕೃಷ್ಣ ಸರ್ಕಲ್ ವ್ಯಾಪ್ತಿಯ ವಾರ್ಡ್ ನಂ.೨೬ರಲ್ಲಿ ಒಟ್ಟು ೨೯೯೫ ಮತದಾರರಿದ್ದು, ಎಲ್ಲಾ ಜಾತಿಯ ಕಾರ್ಮಿಕ ಕುಟುಂಬಗಳು ಇಲ್ಲಿ ನೆಲೆನಿಂತಿವೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ವಿಐಎಸ್‌ಎಲ್ ಕಾರ್ಖಾನೆ ನಿವೃತ್ತ ನೌಕರ, ಛಲವಾದಿ ಸಮಾಜದ ಮುಖಂಡ ಎಸ್.ಎಸ್ ಭೈರಪ್ಪನವರ ಪತ್ನಿ ಬಿ.ಪಿ ಸರ್ವಮಂಗಳ ಕಣದಲ್ಲಿದ್ದಾರೆ. ಬಿಜೆಪಿಯಿಂದ ನಾಗಲಕ್ಷ್ಮೀ, ಜೆಡಿಎಸ್ ಪಕ್ಷದಿಂದ ಪರಮೇಶ್ವರಿ, ಆಮ್ ಆದ್ಮಿ ಪಾರ್ಟಿಯಿಂದ ಎನ್. ಶಿಲ್ಪಾ , ಪಕ್ಷೇತರ ಅಭ್ಯರ್ಥಿಗಳಾಗಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ, ಯುವ ಮುಖಂಡ ಎಸ್.ಕೆ ಸುಧೀಂದ್ರರವರ ಪತ್ನಿ ರೇಷ್ಮಾ, ಸರಸ್ವತಮ್ಮ ಸೇರಿದಂತೆ ಒಟ್ಟು ೭ ಮಂದಿ ಕಣದಲ್ಲಿದ್ದಾರೆ. ಕಳೆದ ಬಾರಿ ಈ ವಾರ್ಡ್‌ನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಆಂಜನಪ್ಪ ಗೆಲುವು ಸಾಧಿಸಿದ್ದರು. ಅಭ್ಯರ್ಥಿಗಳಿಂದ ಅಬ್ಬರದ ಪ್ರಚಾರ ನಡೆಯುತ್ತಿದ್ದು, ಮನೆ ಮನೆಗೆ ತೆರಳಿ ಮತಯಾಚನೆ ನಡೆಸುತ್ತಿದ್ದಾರೆ.
ತಮಿಳು ಸಮುದಾಯದವರು, ಕೂಲಿ ಕಾರ್ಮಿಕರು ಹೆಚ್ಚಾಗಿರುವ ಆಂಜನೇಯ ಅಗ್ರಹಾರ-ಕೂಲಿಬ್ಲಾಕ್ ವ್ಯಾಪ್ತಿಯನ್ನು ಒಳಗೊಂಡಿರುವ ವಾರ್ಡ್ ನಂ.೨೭ರಲ್ಲಿ ಒಟ್ಟು ೩೭೭೯ ಮತದಾರರಿದ್ದಾರೆ. ಪ್ರಮುಖವಾಗಿ ಕಾಂಗ್ರೆಸ್ ಪಕ್ಷದಿಂದ ಯುವ ಮುಖಂಡ ದಾಸ್‌ರವರ ಸಹೋದರಿ ಲಕ್ಷ್ಮೀವೇಲು, ಬಿಜೆಪಿ ಪಕ್ಷದಿಂದ ಶೈಲಾ ರವಿಕುಮಾರ್, ಜೆಡಿಎಸ್‌ನಿಂದ ಹಾಲಿ ಸದಸ್ಯ ಗುಣಶೇಖರ್‌ರವರ ಪತ್ನಿ ರೂಪಾವತಿ ಹಾಗು ಇಬ್ಬರು ಪಕ್ಷೇತರರು ಸೇರಿದಂತೆ ೫ ಮಂದಿ ಕಣದಲ್ಲಿದ್ದಾರೆ. ಈ ವಾರ್ಡ್‌ನಲ್ಲೂ ಅಭ್ಯರ್ಥಿಗಳಿಂದ ಅಬ್ಬರದ ಪ್ರಚಾರ ನಡೆಯುತ್ತಿದೆ.
ಸಚಿವ ಕೆ.ಎಸ್ ಈಶ್ವರಪ್ಪ ಮತಯಾಚನೆ :
ಸಚಿವ ಕೆ.ಎಸ್ ಈಶ್ವರಪ್ಪ ಗುರುವಾರ ಬೆಳಿಗ್ಗೆ ವಾರ್ಡ್ ೧೪ರ ಬಿಜೆಪಿ ಅಭ್ಯರ್ಥಿ ಜಿ. ಆನಂದಕುಮಾರ್ ಪರವಾಗಿ ಮತಯಾಚನೆ ನಡೆಸಿದರು. ವಾರ್ಡ್ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದರು.
ಪಕ್ಷದ ಪ್ರಮುಖರಾದ ಬಿ.ಕೆ ಶ್ರೀನಾಥ್, ನಾಗರಾಜ್, ಸುಬ್ರಮಣ್ಯ, ಶೇಖರಪ್ಪ, ಯಲ್ಲಪ್ಪ, ದುಗ್ಗೇಶ್, ಪ್ರಕಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕೆ.ಎಸ್ ಈಶ್ವರಪ್ಪರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಭದ್ರಾವತಿ ನಗರಸಭೆ ವಾರ್ಡ್ ನಂ.೧೪ರ ಬಿಜೆಪಿ ಅಭ್ಯರ್ಥಿಪರ ಮತಯಾಚನೆಗೆ ಆಗಮಿಸಿದ್ದ ಸಚಿವ ಕೆ.ಎಸ್ ಈಶ್ವರಪ್ಪರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.