ಭದ್ರಾವತಿಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರು ಮಾತನಾಡಿದರು.
ಭದ್ರಾವತಿ, ಮೇ. ೯: ನಗರಸಭೆ ಇತಿಹಾಸದಲ್ಲಿಯೇ ಒಬ್ಬ ಅದ್ಭುತ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪೌರಾಯುಕ್ತ ಮನೋಹರ್ ಪಾತ್ರರಾಗಿದ್ದಾರೆ. ಇವರ ಜನಪ್ರಿಯತೆಯನ್ನು ಸಹಿಸದ ಕೆಲವರ ಹುನ್ನಾರದಿಂದಾಗಿ ಬೇರೆಡೆಗೆ ವಾರ್ಗಾವಣೆಗೊಂಡಿದ್ದಾರೆಂದು ಪ್ರಗತಿಪರ ಸಂಘಟನೆಗಳ ಮುಖಂಡರು ಆರೋಪಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಮುಖರು, ನಗರಸಭೆಯಲ್ಲಿ ಭ್ರಷ್ಟಾಚಾರ ಮುಕ್ತ, ಪ್ರಾಮಾಣಿಕ ಆಡಳಿತಕ್ಕೆ ಒತ್ತು ನೀಡಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಿಂಭಾಗದಲ್ಲಿ ಸುಮಾರು ರು. ೫ ಕೋ. ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ಅಂಬೇಡ್ಕರ್ ಭವನ, ನೂತನ ಕನಕಮಂಟಪ, ನಗರಸಭೆ ವ್ಯಾಪ್ತಿಯಲ್ಲಿರುವ ಕೆರೆಗಳ ಅಭಿವೃದ್ಧಿ, ಗೃಹ ಭಾಗ್ಯ ಯೋಜನೆಯಡಿ ಸುಮಾರು ೭೬ ಪೌರಕಾರ್ಮಿಕರಿಗೆ ವಸತಿ, ಸರ್ಕಾರದ ವಿವಿಧ ಯೋಜನೆಯಡಿ ಬಡವರಿಗೆ ಮನೆ ನಿರ್ಮಾಣ, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಜಿ+ ೪ ಮಾದರಿ ೪ ಸಾವಿರ ಮನೆಗಳ ನಿರ್ಮಾಣಕ್ಕೆ ಚಾಲನೆ, ಕನಕಮಂಟಪ ಮೈದಾನದ ಪಕ್ಕದಲ್ಲಿ ನಗರಸಭೆ ಅಧಿಕಾರಿಗಳಿಗೆ ವಸತಿ ನಿರ್ಮಾಣ, ಬಿ.ಎಚ್ ರಸ್ತೆ ಅಂಡರ್ ಬ್ರಿಡ್ಜ್ ಬಳಿ ೧೨ ಅಡಿ ಎತ್ತರ ಸುಮಾರು ೫೦ ಲಕ್ಷ ರು. ವೆಚ್ಚದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಗ್ರೇಡ್-೧ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಾಯುಕ್ತರನ್ನು ಇದೀಗ ಯಾವುದೇ ಸ್ಥಳ, ಹುದ್ದೆ ಸೂಚಿಸದೆ ಸರ್ಕಾರ ವರ್ಗಾವಣೆಗೊಳಿಸಿರುವುದು ಖಂಡನೀಯ ಎಂದರು.
ಒಬ್ಬ ಅಧಿಕಾರಿ ಯಾವ ರೀತಿ ಕೆಲಸ ಮಾಡಬಹುದು ಎಂಬುದನ್ನು ಮನೋಹರ್ ಅವರು ತಮ್ಮ ಆಡಳಿತಾವಧಿಯಲ್ಲಿ ತೋರಿಸಿಕೊಟ್ಟಿದ್ದಾರೆ. ಅವರ ಸೇವೆ ನಗರದಲ್ಲಿ ಇನ್ನಷ್ಟು ಲಭಿಸುವಂತಾಗಬೇಕು. ಅದರಲ್ಲೂ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ವರ್ಗಾವಣೆಗೊಳಿಸಿರುವುದು ಸರಿಯಲ್ಲ. ಸೋಂಕಿನ ಪ್ರಮಾಣ ಕಡಿಮೆಯಾದ ನಂತರ ಅವರನ್ನು ವರ್ಗಾವಣೆಗೊಳಿಸಲಿ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಡಿ.ಸಿ ಮಾಯಣ್ಣ, ಪ್ರೊ. ಎಂ. ಚಂದ್ರಶೇಖರಯ್ಯ, ಶಿವಬಸಪ್ಪ, ಸಿದ್ದಲಿಂಗಯ್ಯ, ಜಿ. ರಾಜು, ರಾಜೇಂದ್ರ, ಡಿಎಸ್‌ಎಸ್ ಮುಖಂಡ ರವಿನಾಯ್ಕ, ಸುರೇಶಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.