ಮಂಗಳವಾರ, ಮೇ 11, 2021

ಒಂದೇ ದಿನ ೨೯೦ ಮಂದಿಗೆ ಸೋಂಕು ಪತ್ತೆ : ಸಾವಿನ ಸಂಖ್ಯೆ ಅರ್ಧ ಶತಕ

   ಭದ್ರಾವತಿ, ಮಾ. ೧೧: ಸೆಮಿ ಲಾಕ್‌ಡೌನ್ ೨ನೇ ದಿನ ಸೋಂಕು ಮತ್ತಷ್ಟು ಸ್ಪೋಟಗೊಂಡಿದ್ದು, ಮಂಗಳವಾರ ಒಂದೇ ದಿನ ೨೯೦ ಮಂದಿಗೆ ಸೋಂಕು ದೃಢಪಟ್ಟಿದೆ.
   ಒಟ್ಟು ೨೬೯ ಮಂದಿ ಮಾದರಿ ಸಂಗ್ರಹಿಸಲಾಗಿದ್ದು, ೨೯೦ ಮಂದಿಗೆ ಸೋಂಕು ದೃಢಪಟ್ಟಿದೆ. ಕೇವಲ ೫ ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಸೋಂಕಿಗೆ ಒಂದು ಬಲಿಯಾಗಿದ್ದು, ಇದುವರೆಗೂ ೫೦ ಮಂದಿ ಮೃತಪಟ್ಟಿದ್ದಾರೆ. ೨೭೦ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು ೨೫ ಕಂಟೈನ್‌ಮೆಂಟ್ ಜೋನ್‌ಗಳಿದ್ದು, ಈ ಪೈಕಿ ೨ ಜೋನ್ ತೆರವುಗೊಳಿಸಲಾಗಿದೆ.
   ಸೋಮವಾರ ೨೪೮ ಮಂದಿಗೆ ಸೋಂಕು ಪತ್ತೆಯಾಗಿದ್ದು, ಒಂದೇ ದಿನ ಸುಮಾರು ೫೦ ಸೋಂಕು ಹೆಚ್ಚಳವಾಗಿದೆ. ಇದರಿಂದಾಗಿ ಸೆಮಿ ಲಾಕ್‌ಡೌನ್ ನಡುವೆಯೂ ನಾಗರೀಕರಲ್ಲಿ ಆತಂಕ ಹೆಚ್ಚಾಗಿದೆ.

ಸಂಕಷ್ಟಕ್ಕೆ ಒಳಗಾದವರ ಹಸಿವು ನೀಗಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು


ಭದ್ರಾವತಿಯಲ್ಲಿ  ಜೀವಾಮೃತ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಹಾರ ಸಿದ್ದಪಡಿಸಿ ವಿತರಣೆಗೆ ಸಿದ್ದಗೊಳಿಸುತ್ತಿರುವುದು.
   ಭದ್ರಾವತಿ, ಮೇ. ೧೧: ರಾಜ್ಯ ಸರ್ಕಾರ ಸೆಮಿ ಲಾಕ್‌ಡೌನ್ ಜಾರಿಗೊಳಿಸಿರುವ ಹಿನ್ನಲೆಯಲ್ಲಿ ನಗರದಲ್ಲಿ ವಿವಿಧ ಸ್ವಯಂ ಸೇವಾ ಸಂಸ್ಥೆಗಳು ದೀನಾದಲಿತರು, ನಿಗರ್ತಿಕರು, ಅಸಹಾಯಕರು ಹಾಗು ಭಿಕ್ಷುಕರ ಹಸಿವು ನೀಗಿಸುವ ನಿಟ್ಟಿನಲ್ಲಿ ಮುಂದಾಗಿವೆ.  
   ನಗರದ ಜೀವಾಮೃತ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಭಾನುಪ್ರಕಾಶ್ ಆಚಾರ್ಯ ನೇತೃತ್ವದಲ್ಲಿ ಕಳೆದ ೮ ದಿನಗಳಿಂದ ನಿರಂತರವಾಗಿ ಸಿದ್ದಪಡಿಸಿದ ಆಹಾರವನ್ನು ನಗರದ ಪ್ರಮುಖ ರಸ್ತೆಗಳ ಬದಿಯಲ್ಲಿ ಕಂಡು ಬರುವ ಭಿಕ್ಷುಕರು, ನಿರ್ಗತಿಕರು, ಅಸಹಾಯಕರು ಹಾಗು ತುರ್ತು ಸೇವೆಯಲ್ಲಿ ತೊಡಗಿರುವ ಆರಕ್ಷಕ, ಗೃಹ ರಕ್ಷಕ ಸಿಬ್ಬಂದಿಗಳಿಗೆ ವಿತರಿಸುವ ಮೂಲಕ ಹಸಿವು ನೀಗಿಸುವ ಕಾರ್ಯದಲ್ಲಿ ತೊಡಗಿದೆ.

    


ಭದ್ರಾವತಿ ಕೇಸರಿ ಪಡೆ ವತಿಯಿಂದ ಆಹಾರ ಸಿದ್ದಪಡಿಸಿ ವಿತರಣೆಗೆ ಸಿದ್ದಗೊಳಿಸುತ್ತಿರುವುದು.
       ೭ ದಿನಗಳಿಂದ ಹಸಿವು ನೀಗಿಸುವ ಕಾರ್ಯದಲ್ಲಿ ಕೇಸರಿಪಡೆ :
    ಹಿಂದೂಪರ ಸಂಘಟನೆಗಳಲ್ಲಿ ಒಂದಾಗಿರುವ ಕೇಸರಿಪಡೆ ಹಲವಾರು ವರ್ಷಗಳಿಂದ ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಕೊರೋನಾ ಸೋಂಕು ಕಾಣಿಸಿಕೊಂಡ ಆರಂಭದಲ್ಲಿ ದೇಶಾದ್ಯಂತ ಘೋಷಿಸಲಾಗಿದ್ದ ಲಾಕ್‌ಡೌನ್ ಸಂದರ್ಭದಲ್ಲೂ ಬಡವರ ನೆರವಿಗೆ ಧಾವಿಸಿತ್ತು. ಇದೀಗ ಕಳೆದ ೭ ದಿನಗಳಿಂದ ಕೇಸರಿ ಪಡೆ ಅಧ್ಯಕ್ಷ ಗಿರೀಶ್, ಮಂಜುನಾಥ್ ಕೊಯ್ಲಿ ಸೇರಿದಂತೆ ಇನ್ನಿತರರ ನೇತೃತ್ವದಲ್ಲಿ ಸಿದ್ದಪಡಿಸಿದ ಆಹಾರವನ್ನು ಹಸಿವಿನಿಂದ ಬಳಲುತ್ತಿರುವ ಸಂಕಷ್ಟಕ್ಕೆ ಒಳಗಾದವರಿಗೆ ವಿತರಿಸುವ ಮೂಲಕ ಮಾನವೀಯತೆ ಮೆರೆಯುತ್ತಿದೆ.



ಜಯ ಕರ್ನಾಟಕ ಸಂಘಟನೆ ಮುಖಂಡ, ಮಾಜಿ ಸೈನಿಕ ಮುಕುಂದ ಹಸಿದವರ ಸಂಕಷ್ಟಕ್ಕೆ ಸ್ಪಂದಿಸುತ್ತಿರುವುದು.
        ನೆರವಿಗೆ ಧಾವಿಸಿದ ಮಾಜಿ ಸೈನಿಕ :
ಜಯ ಕರ್ನಾಟಕ ಸಂಘಟನೆ ಮುಖಂಡ, ಮಾಜಿ ಸೈನಿಕ ಮುಕುಂದ ಈ ಬಾರಿ ಸಹ ಹಸಿದವರ ಸಂಕಷ್ಟಕ್ಕೆ ಸ್ಪಂದಿಸುವ ಮೂಲಕ ಗಮನ ಸೆಳೆದಿದ್ದಾರೆ. ಕಳೆದ ಬಾರಿ ಲಾಕ್‌ಡೌನ್ ಅಂತ್ಯಗೊಳ್ಳುವವರೆಗೂ ನಿರಂತರವಾಗಿ ಸಿದ್ದಪಡಿಸಿದ ಆಹಾರ ವಿತರಣೆ ಜೊತೆಗೆ ದಿನನಿತ್ಯದ ಬಳಕೆಯ ತರಕಾರಿ, ದಿನಸಿ ಸಾಮಾಗ್ರಿಗಳನ್ನು ಸಹ ವಿತರಿಸುವ ಮೂಲಕ ಸಂಕಷ್ಟಕ್ಕೆ ಸ್ಪಂದಿಸಿದ್ದರು.

ಕೋವಿಡ್-೧೯ ಲಸಿಕಾ ಕೇಂದ್ರ ಸ್ಥಳಾಂತರ : ೧೮, ೪೫ ವರ್ಷ ಮೇಲ್ಪಟ್ಟವರಿಗೆ ಲಸಿಕೆ

ಭದ್ರಾವತಿಯಲ್ಲಿ ಕೋವಿಡ್-೧೯ ಲಸಿಕಾ ಕೇಂದ್ರವನ್ನು ಕನಕಮಂಟಪ ಮೈದಾನದ ಮುಂಭಾಗದಲ್ಲಿರುವ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಸ್ಥಳಾಂತರಿಸಲಾಗಿದ್ದು, ಮಂಗಳವಾರ ೧೮, ೪೫ ವರ್ಷ ಮೇಲ್ಪಟ್ಟವರು ಬೆಳಿಗ್ಗೆಯಿಂದಲೇ ಕಾದು ಕುಳಿತು ಲಸಿಕೆ ಪಡೆದುಕೊಂಡರು.
   ಭದ್ರಾವತಿ, ಮೇ. ೧೧: ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್-೧೯ ಸೋಂಕಿತರ ಚಿಕಿತ್ಸೆಗಾಗಿ ಮಾತ್ರ ಮೀಸಲಿಡಲಾಗಿರುವ ಹಿನ್ನಲೆಯಲ್ಲಿ ಕೋವಿಡ್-೧೯ ಲಸಿಕಾ ಕೇಂದ್ರವನ್ನು ಕನಕಮಂಟಪ ಮೈದಾನದ ಮುಂಭಾಗದಲ್ಲಿರುವ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಸ್ಥಳಾಂತರಿಸಲಾಗಿದೆ.
   ಮಂಗಳವಾರ ಲಸಿಕಾ ಕೇಂದ್ರದಲ್ಲಿ ೪೫ ವರ್ಷ ಮೇಲ್ಪಟ್ಟವರು ೨ನೇ ಡೋಸ್ ಪಡೆಯಲು ಬೆಳಿಗ್ಗೆಯಿಂದಲೇ ಕಾದು ಕುಳಿತಿರುವುದು  ಕಂಡು ಬಂದಿತು. ಉಳಿದಂತೆ ಆನ್‌ಲೈನ್ ಮೂಲಕ ನೋಂದಾಯಿಸಿಕೊಂಡಿರುವ ೧೮ ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಲಾಯಿತು. ಲಸಿಕೆಯನ್ನು ಬೆಳಿಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೧ ಗಂಟೆವರೆಗೆ ಹಾಗು ಮಧ್ಯಾಹ್ನ ೨.೩೦ ರಿಂದ ೪.೩೦ರ ವರೆಗೆ ನೀಡಲಾಗುತ್ತಿದೆ.
   ಲಸಿಕೆ ಪಡೆದುಕೊಳ್ಳಲು ಬರುವವರ ಸಂಖ್ಯೆ ಸಹ ಏರಿಕೆಯಾಗುತ್ತಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಲಭ್ಯವಿರುವ ಲಸಿಕೆಗೆ ಅನುಗುಣವಾಗಿ ಆದ್ಯತೆ ಮೇರೆಗೆ ಎಲ್ಲರಿಗೂ ಲಸಿಕೆ ಹಾಕುವ ನಿಟ್ಟಿನಲ್ಲಿ ಹೆಚ್ಚಿನ ಶ್ರಮ ವಹಸಿದ್ದಾರೆ.

ಮೇ.೧೨ರಿಂದ ತುರ್ತು ಚಿಕಿತ್ಸೆಗೆ ಮಾತ್ರ ಅವಕಾಶ

    ಭದ್ರಾವತಿ, ಮೇ. ೧೧: ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್-೧೯ ಸೋಂಕಿತರ ಚಿಕಿತ್ಸೆಗಾಗಿ ಮಾತ್ರ ಮೀಸಲಿಡಲಾಗಿದ್ದು, ಈ ಹಿನ್ನಲೆಯಲ್ಲಿ  ಮೇ.೧೨ರಿಂದ ತುರ್ತು ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗಿದೆ.
   ಅಪಘಾತ, ವಿಷಪ್ರಾಶನ, ಹಾವು ಕಡಿತ, ನಾಯಿ ಕಡಿತ ಮತ್ತು ಶವ ಪರೀಕ್ಷೆ ಸೇರಿದಂತೆ ತುರ್ತು ಸೇವೆಗಳಿಗೆ ಮಾತ್ರ ಸಾರ್ವಜನಿಕರು ಆಸ್ಪತ್ರೆಗೆ ತೆರಳಬಹುದಾಗಿದೆ. ಉಳಿದಂತೆ ಸಾಮಾನ್ಯ ಚಿಕಿತ್ಸೆಗಳಿಗೆ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆಯಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.

ಸೋಮವಾರ, ಮೇ 10, 2021

ಕೊರೋನಾ ಸಂಕಷ್ಟ : ಯುವ ಕಾಂಗ್ರೆಸ್ ವತಿಯಿಂದ ‘ಹಸಿದವರಿಗೆ ಅನ್ನ’

ಯುವ ಕಾಂಗ್ರೆಸ್ ವತಿಯಿಂದ ಭದ್ರಾವತಿಯಲ್ಲಿ ಕಳೆದ ೩ ದಿನಗಳಿಂದ 'ಹಸಿದವರಿಗೆ ಅನ್ನ' ಎಂಬ ಕಾರ್ಯಕ್ರಮದಡಿ ದೀನದಲಿತರು, ನಿಗರ್ತಿಕರು, ಅಸಹಾಯಕರ ಹಸಿವು ನೀಗಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ.
     ಭದ್ರಾವತಿ, ಮೇ. ೧೦: ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ನಡುವೆಯೂ ಯುವ ಕಾಂಗ್ರೆಸ್ ವತಿಯಿಂದ ಕಳೆದ ೩ ದಿನಗಳಿಂದ 'ಹಸಿದವರಿಗೆ ಅನ್ನ' ಎಂಬ ಕಾರ್ಯಕ್ರಮದಡಿ ದೀನದಲಿತರು, ನಿಗರ್ತಿಕರು, ಅಸಹಾಯಕರ ಹಸಿವು ನೀಗಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ.
    ಯುವ ಕಾಂಗ್ರೆಸ್ ನಗರ ಅಧ್ಯಕ್ಷ ಜಿ.ವಿನೋದ್‌ಕುಮಾರ್ ನೇತೃತ್ವದಲ್ಲಿ ಜನ್ನಾಪುರ ನಿರಾಶ್ರಿತರ ಕೇಂದ್ರ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಹಾಗು ಪ್ರಮುಖ ರಸ್ತೆಗಳಲ್ಲಿ ದೀನದಲಿತರು, ನಿಗರ್ತಿಕರು, ಅಸಹಾಯಕರಿಗೆ ಸಿದ್ದಪಡಿಸಿದ ಆಹಾರದ ಜೊತೆಗೆ ನೀರಿನ ಬಾಟಲ್ ಸಹ ವಿತರಿಸಲಾಯಿತು. ಜೊತೆಗೆ ಮಹಾಮಾರಿ ಕೊರೋನಾ ನಿಯಂತ್ರಣಕ್ಕೆ ಎಚ್ಚರ ವಹಿಸುವ ಜೊತೆಗೆ ಕಡ್ಡಾಯ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಯಿತು.
    ನಗರ ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ಎ.ಪಿ ಗಣೇಶ್,  ಭರತ್, ಸಂತೋಷ್, ಯೋಗೇಶ್, ತೇಜಸ್, ವಿನ್‌ಸ್ಟನ್  ಮತ್ತು ಆದರ್ಶ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
      ಟಿ.ಎಂ.ಎ.ಇ.ಎಸ್ ವತಿಯಿಂದ ಆಹಾರ ಪದಾರ್ಥ ವಿತರಣೆ:  
   ಟಿ.ಎಂ.ಎ.ಇ.ಎಸ್ ಆಯುರ್ವೇದ ಮಹಾವಿದ್ಯಾಲಯ ವತಿಯಿಂದ ಜನ್ನಾಪುರ ಎನ್‌ಟಿಬಿ ಕಛೇರಿ ಆವರಣದಲ್ಲಿರುವ ನಿರಾಶ್ರಿತರ ಕೇಂದ್ರದಲ್ಲಿರುವ ನಿರ್ಗತಿಕರಿಗೆ ಆಹಾರ ಪದಾರ್ಥಗಳನ್ನು ವಿತರಿಸಲಾಯಿತು.
     ಮಹಾವಿದ್ಯಾಲಯದ ಆಡಳಿತಾಧಿಕಾರಿ ಹಿರೇಮಠ್, ಪೌರಾಯುಕ್ತ ಮನೋಹರ್, ಸಮುದಾಯ ಸಂಘಟನಾ ಅಧಿಕಾರಿಗಳಾದ ಸುಹಾಸಿನಿ, ಈಶ್ವರಪ್ಪ, ಡಿಎಸ್‌ಎಸ್ ಅಂಗವಿಕಲರ ವಿಭಾಗದ ಜಿಲ್ಲಾಧ್ಯಕ್ಷ ಕಾಣಿಕ್‌ರಾಜ್, ಜೀವ ಸಂಸ್ಥೆಯ ಅರಿಲಾ ಆನ್ಸ್, ಲಕ್ಷ್ಮಮ್ಮ, ಜಿಂಕ್‌ಲೈನ್ ಮಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



ಟಿ.ಎಂ.ಎ.ಇ.ಎಸ್ ಆಯುರ್ವೇದ ಮಹಾವಿದ್ಯಾಲಯ ವತಿಯಿಂದ ಭದ್ರಾವತಿ ಜನ್ನಾಪುರ ಎನ್‌ಟಿಬಿ ಕಛೇರಿ ಆವರಣದಲ್ಲಿರುವ ನಿರಾಶ್ರಿತರ ಕೇಂದ್ರದಲ್ಲಿರುವ ನಿರ್ಗತಿಕರಿಗೆ ಆಹಾರ ಪದಾರ್ಥಗಳನ್ನು ವಿತರಿಸಲಾಯಿತು.



ಉಕ್ಕಿನ ನಗರದಲ್ಲಿ ಕೊರೋನಾ ಸ್ಪೋಟ : ಒಂದೇ ದಿನ ೨೪೮ ಮಂದಿಗೆ ಸೋಂಕು

ಗ್ರಾಮ ಪಂಚಾಯಿತಿ ಅಧ್ಯಕ್ಷ ಸೇರಿ ೬ ಮಂದಿ ಬಲಿ


   
ಕಲ್ಲಿಹಾಳ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್
ಭದ್ರಾವತಿ, ಮೇ. ೧೦: ಲಾಕ್‌ಡೌನ್ ಮೊದಲ ದಿನವೇ ತಾಲೂಕಿನಲ್ಲಿ ಕೊರೋನಾ ಸೋಂಕು ಸ್ಪೋಟಗೊಂಡಿದ್ದು, ಒಂದೇ ದಿನ ೨೪೮ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ನಡುವೆ ಕೊರೋನಾ ಸೋಂಕಿಗೆ ತಾಲೂಕಿನ ಕಲ್ಲಿಹಾಳ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್(೩೮) ಬಲಿಯಾಗಿದ್ದಾರೆ.
    ಒಟ್ಟು ೩೬೯ ಮಂದಿಯ ಮಾದರಿ ಸಂಗ್ರಹಿಸಲಾಗಿದ್ದು, ಈ ಪೈಕಿ ೨೪೮ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ನಗರ ಪ್ರದೇಶದಲ್ಲಿ ೧೫೬ ಹಾಗು ಗ್ರಾಮೀಣ ಪ್ರದೇಶದಲ್ಲಿ ೮೩ ಮಂದಿಗೆ ಸೋಂಕು ತಗುಲಿದೆ. ಈ ನಡುವೆ ೧೩೨ ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ೧೮೦ ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು ೨೫ ಕಂಟೈನ್‌ಮೆಂಟ್ ಜೋನ್‌ಗಳಿದ್ದು, ೨ ಜೋನ್ ತೆರವುಗೊಳಿಸಲಾಗಿದೆ.
      ಒಂದೇ ದಿನ ೬ ಮಂದಿ ಬಲಿ:
  ಗ್ರಾಮ ಪಂಚಾಯಿತಿ ಅಧ್ಯಕ್ಷ ಸೇರಿದಂತೆ ಒಂದೇ ದಿನ ಕೊರೋನಾ ಸೋಂಕಿಗೆ ೬ ಮಂದಿ ಬಲಿಯಾಗಿದ್ದಾರೆ.
     ಕಲ್ಲಿಹಾಳ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್ ಸೋಂಕಿಗೆ ಬಲಿಯಾಗಿದ್ದು, ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಹೊಂದಿದ್ದರು. ಶ್ರೀನಿವಾಸ್ ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಕಲ್ಲಿಹಾಳ್ ಶಕ್ತಿ ಕೇಂದ್ರದ ಪ್ರಮುಖರಾಗಿದ್ದರು. ಇವರ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಸಂತಾಪ ಸೂಚಿಸಿದ್ದಾರೆ.
     ಉಳಿದಂತೆ ಗ್ರಾಮೀಣ ಭಾಗದ ಅರೆಬಿಳಚಿ ಒಂದೇ ಗ್ರಾಮದಲ್ಲಿ ೩ ಮಂದಿ ಬಲಿಯಾಗಿದ್ದು, ನಗರ ಪ್ರದೇಶದ ಜನ್ನಾಪುರ ಹಾಗು ಉಜ್ಜನಿಪುರದಲ್ಲಿ ತಲಾ ಓರ್ವ ಸೋಂಕಿಗೆ ಬಲಿಯಾಗಿದ್ದಾರೆ.

ಕಾಂಗ್ರೆಸ್ ಮುಖಂಡ ಎಂ.ಎಸ್ ಮುರುಳಿಧರ ನಿಧನ

ಎಂ.ಎಸ್ ಮುರುಳಿಧರ
   ಭದ್ರಾವತಿ, ಮೇ. ೧೦: ನಗರದ ರಂಗಪ್ಪ ವೃತ್ತ ಸರ್ಕಲ್ ಸ್ವೀಟ್ಸ್ ಮಾಲೀಕ, ಕಾಂಗ್ರೆಸ್ ಮುಖಂಡ ಎಂ.ಎಸ್ ಮುರುಳಿಧರ(೪೫) ಅನಾರೋಗ್ಯದಿಂದ ನಿಧನ ಹೊಂದಿದರು.
   ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಮುರುಳಿಧರ್ ಕೆಲವು ವರ್ಷಗಳಿಂದ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಸರ್ಕಲ್ ಸ್ವೀಟ್ಸ್ ಹೆಸರಿನಲ್ಲಿಯೇ ಗುರುತಿಸಿಕೊಂಡಿದ್ದರು. ಇವರ ನಿಧನಕ್ಕೆ ನಗರದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.