ಭದ್ರಾವತಿ ಖಾಸಗಿ ಬಸ್ ನಿಲ್ದಾಣದ ಬಳಿ ಇಂದಿರಾ ಕ್ಯಾಂಟಿನ್‌ನಲ್ಲಿ ಗುರುವಾರದಿಂದ ಬಡವರಿಗೆ ಉಚಿತ ಆಹಾರ ವಿತರಣೆ ನಡೆಯಲಿದೆ.
ಭದ್ರಾವತಿ, ಮೇ. ೧೨: ರಾಜ್ಯ ಸರ್ಕಾರ ಸೆಮಿ ಲಾಕ್‌ಡೌನ್ ಹಿನ್ನಲೆಯಲ್ಲಿ ಹಸಿವಿನಿಂದ ಬಳಲುತ್ತಿರುವ ಬಡವರಿಗೆ ರಾಜ್ಯದ ಎಲ್ಲಾ ಇಂದಿರಾ ಕ್ಯಾಂಟಿನ್‌ನಲ್ಲಿ ಉಚಿತ ಆಹಾರ ವಿತರಿಸುವಂತೆ ಆದೇಶಿಸಿದ್ದು, ಈ ಹಿನ್ನಲೆಯಲ್ಲಿ ಗುರುವಾರದಿಂದ ನಗರದಲ್ಲಿ ಉಚಿತ ಆಹಾರ ವಿತರಣೆಗೆ ಸಿದ್ದತೆ ನಡೆಸಿಕೊಳ್ಳಲಾಗಿದೆ.
ಇದೀಗ ಪ್ರತಿದಿನ ೫೦೦ ಮಂದಿಗೆ ಸಾಕಾಗುವಷ್ಟು ಆಹಾರ ವಿತರಿಸಲಾಗುತ್ತಿದೆ. ಬೆಳಗಿನ ಉಪಹಾರ, ಮಧ್ಯಾಹ್ನ ಹಾಗು ರಾತ್ರಿ ಊಟ ಲಭ್ಯವಾಗುತ್ತಿದೆ. ಪ್ರತಿ ದಿನ ನೂರಾರು ಮಂದಿ ಬಡವರ್ಗದವರು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ನಗರದ ವಾರ್ಡ್ ನಂ.೩ರ ಖಾಸಗಿ ಬಸ್ ನಿಲ್ದಾಣದ ಬಳಿ ಹಾಗು ವಾರ್ಡ್ ನಂ.೧೨ ಹೊಸಮನೆ ಸಂತೆ ಮೈದಾನದಲ್ಲಿ ಒಟ್ಟು ಎರಡು ಕಡೆ ಇಂದಿರಾ ಕ್ಯಾಂಟಿನ್ ನಿರ್ಮಿಸಲಾಗಿದೆ.
ಇಂದಿರಾ ಕ್ಯಾಂಟಿನ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನೂತನ ಪೌರಾಯುಕ್ತ ಕೆ. ಪರಮೇಶ್ ಕ್ಯಾಂಟಿನ್‌ಗೆ ಬರುವ ಎಲ್ಲರಿಗೂ ಉಚಿತ ಆಹಾರ ವಿತರಿಸುವಂತೆ ಸೂಚಿಸಿದ್ದಾರೆ.