Friday, May 21, 2021
ಸಿಐಟಿಯು ವತಿಯಿಂದ ವಿವಿಧ ಬೇಡಿಕೆ ಈಡೇರಿಕೆಗಾಗಿ ಮನೆಗಳಲ್ಲಿ ಪ್ರತಿಭಟನೆ ವಿಶಿಷ್ಟ ಹೋರಾಟ
ಏಕಾಂಗಿ ಹೋರಾಟದ ಮೂಲಕ ಗಮನ ಸೆಳೆದ ಜಿಲ್ಲಾ ಪ್ರಧಾನ ಕರ್ಯದರ್ಶಿ ಎಂ. ನಾರಾಯಣ
ಭದ್ರಾವತಿಯಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್(ಸಿಐಟಿಯು) ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ನಾರಾಯಣ ಶುಕ್ರವಾರ ಮನೆಗಳಲ್ಲಿ ಪ್ರತಿಭಟನೆ ವಿಶಿಷ್ಟ ಹೋರಾಟ ನಡೆಸುವ ಮೂಲಕ ಗಮನ ಸೆಳೆದರು.
ಭದ್ರಾವತಿ, ಮೇ. ೨೧: ಕೊರೋನಾ ಸೋಂಕು ೨ನೇ ಅಲೆ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದ್ದು, ತಕ್ಷಣ ಎಲ್ಲರಿಗೂ ಉಚಿತ ಲಸಿಕೆ ನೀಡುವ ಜೊತೆಗೆ ಲಾಕ್‌ಡೌನ್ ಪರಿಣಾಮದಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ಕಾರ್ಮಿಕರು, ರೈತರು ಮತ್ತು ಕೃಷಿ ಕೂಲಿಕಾರರಿಗೆ ೩ ತಿಂಗಳು ಕನಿಷ್ಠ ಮಾಸಿಕ ೧೦,೦೦೦ ರು. ಪರಿಹಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್(ಸಿಐಟಿಯು) ವತಿಯಿಂದ ಶುಕ್ರವಾರ ಮನೆಗಳಲ್ಲಿ ಪ್ರತಿಭಟನೆ ವಿಶಿಷ್ಟ ಹೋರಾಟ ನಡೆಸಲಾಯಿತು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ನಾರಾಯಣ ತಮ್ಮ ಮನೆಯಲ್ಲಿ ಏಕಾಂಗಿಯಾಗಿ ಹೋರಾಟ ನಡೆಸುವ ಮೂಲಕ ಗಮನ ಸೆಳೆದರು.
ಕಟ್ಟಡ ಕಾರ್ಮಿಕರು, ವಲಸೆ ಕಾರ್ಮಿಕರು, ಆಟೋ, ಟ್ಯಾಕ್ಸಿ, ಗೂಡ್ಸ್ ಸೇರಿದಂತೆ ಇನ್ನಿತರ ವಾಹನಗಳ ಚಾಲಕರು, ಬೀದಿಬದಿ ವ್ಯಾಪಾರಿಗಳು, ಮನೆಗೆಲಸಗಾರರು, ಹಮಾಲಿಗಳು, ಬಿಸಿಯೂಟ ನೌಕರರು, ದಿನಗೂಲಿಗಳು, ಗುತ್ತಿಗೆ-ಹೊರಗುತ್ತಿಗೆ ಕಾರ್ಮಿಕರು, ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಮತ್ತು ಸಿಬ್ಬಂದಿಗಳು, ಮೆಕ್ಯಾನಿಕ್‌ಗಳು, ಕ್ಷೌರಿಕರು, ದೋಬಿಗಳು, ಸೆಕ್ಯೂರಿಟಿಗಳು ಸೇರಿದಂತೆ ಎಲ್ಲಾ ಅಸಂಘಟಿತ ಶ್ರಮಜೀವಿಗಳು, ಆದಾಯ ತೆರಿಗೆ ಪಾವತಿ ವ್ಯಾಪ್ತಿಯಲ್ಲಿ ಬರದಿರುವ ರೈತಕೂಲಿಕಾರರು, ಬಡರೈತರು ಹಾಗು ದಲಿತರು ಲಾಕ್‌ಡೌನ್ ಪರಿಣಾಮ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರ್ಕಾರ ತಕ್ಷಣ ಕನಿಷ್ಠ ಮಾಸಿಕ ೧೦,೦೦೦ ರು. ಪರಿಹಾರ ೩ ತಿಂಗಳು ನೀಡಬೇಕೆಂದು ಆಗ್ರಹಿಸಿದರು.
ಕೈಗಾರಿಕೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಹಾಗು ಸಂಘಟಿತ ಕಾರ್ಮಿಕರಿಗೆ ಲಾಕ್‌ಡೌನ್ ಅವಧಿಯಲ್ಲಿ ನೀಡಲಾಗಿರುವ ರಜೆಗಳನ್ನು ಸಂಬಳ ಸಹಿತ ರಜೆ ಎಂದು ಘೋಷಿಸಬೇಕು. ಕೃಷಿ ವಿರೋಧಿ ಕಾಯ್ದೆಗಳನ್ನು ಕೈಬಿಟ್ಟು ರೈತರ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಬೇಕು. ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸುವ ಜೊತೆಗೆ ಪ್ರೋತ್ಸಾಹಧನ ನೀಡಬೇಕು. ಸೂಕ್ತ ಬೆಲೆ ಸಿಗದೆ ಸಂಕಷ್ಟಕ್ಕೊಳಗಾಗಿರುವ ರೈತರಿಗೆ ಬೆಳೆ ಪರಿಹಾರ ನೀಡಬೇಕು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ೨೦೦ ದಿನ ಉದ್ಯೋಗ ನೀಡಬೇಕು. ದಿನಕೂಲಿಯನ್ನು ೭೦೦ ರು. ಗಳಿಗೆ ಹೆಚ್ಚಿಸಬೇಕು. ಇಂದಿರಾ ಕ್ಯಾಂಟಿನ್‌ಗಳಲ್ಲಿ ಪೌಷ್ಠಿಕಾಂಶಯುಳ್ಳ ಗುಣಮಟ್ಟದ ಆಹಾರ ವಿತರಿಸಬೇಕು. ಪ್ರತಿ ವ್ಯಕ್ತಿಗೆ ಮಾಸಿಕ ೧೦ ಕೆ.ಜಿ ಅಕ್ಕಿ ೬ ತಿಂಗಳು ನೀಡಬೇಕು. ಕೊರೋನಾ ಚಿಕಿತ್ಸೆಯಲ್ಲಿ ಕಂಡು ಬರುತ್ತಿರುವ ಲೋಪದೋಷಗಳನ್ನು ತಕ್ಷಣ ಸರಿಪಡಿಸಿಕೊಂಡು ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
೨ ದಿನದ ಸಂಪೂರ್ಣ ಲಾಕ್‌ಡೌನ್‌ಗೆ ಸಹಕರಿಸಿ : ಬಿ.ಕೆ ಸಂಗಮೇಶ್ವರ್
ಬಿ.ಕೆ ಸಂಗಮೇಶ್ವರ್
ಭದ್ರಾವತಿ, ಮೇ. ೨೧: ಕೊರೋನಾ ಸೋಂಕು ಎಲ್ಲೆಡೆ ಹೆಚ್ಚಳವಾಗುತ್ತಿದ್ದು, ಕ್ಷೇತ್ರದ ಜನರ ಆರೋಗ್ಯದ ದೃಷ್ಟಿಯಿಂದ ೨ ದಿನ ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಇದಕ್ಕೆ ಎಲ್ಲರೂ ಸಹಕರಿಸಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಮನವಿ ಮಾಡಿದ್ದಾರೆ.
ಈ ಕುಡಿತು ಪತ್ರಿಕೆಯೊಂದಿಗೆ ಮಾತನಾಡಿ, ಕೊರೋನಾ ಸೋಂಕು ಹೆಚ್ಚಳವಾಗಿರುವ ಹಿನ್ನಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ಕೈಗೊಳ್ಳಲಾಗುತ್ತಿದೆ. ಪ್ರತಿಯೊಬ್ಬರು ಮನೆಯಲ್ಲಿಯೇ ಇದ್ದು ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಕುರಿತು ಜಾಗೃತಿ ಹೊಂದಬೇಕು. ಜೊತೆಗೆ ವ್ಯಾಯಾಮ, ಧ್ಯಾನ ಸೇರಿದಂತೆ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಆರೋಗ್ಯ ವೃದ್ಧಿಸಿಕೊಳ್ಳಬೇಕು.
ಕ್ಷೇತ್ರದ ಪ್ರತಿಯೊಬ್ಬರ ಆರೋಗ್ಯ ಮುಖ್ಯವಾಗಿದ್ದು, ೨ ದಿನದ ಸಂಪೂರ್ಣ ಲಾಕ್‌ಡೌನ್‌ಗೆ ಸಹಕರಿಸುವ ಮೂಲಕ ಕೊರೋನಾ ತೊಲಗಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಕಾರ್ಯಕ್ಕೆ ಕೈಜೋಡಿಸಬೇಕೆಂದು ಮನವಿ ಮಾಡಿದ್ದಾರೆ.
https://youtu.be/JPBlhvNDAwA
Thursday, May 20, 2021
ಬಡ ಕಟ್ಟಡ ಕಾರ್ಮಿಕರಿಗೆ ದಿನಸಿ ಸಾಮಗ್ರಿ ವಿತರಿಸಿ ವಿಶಿಷ್ಟ ರೀತಿಯ ಪ್ರತಿಭಟನೆ
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಟ್ಟಡ ಕಾರ್ಮಿಕರು ಗುರುವಾರ ಭದ್ರಾವತಿ ನಗರದ ಸಿ.ಎನ್ ರಸ್ತೆಯಲ್ಲಿರುವ ಕಾರ್ಮಿಕರ ಕಛೇರಿ ಮುಂಭಾಗ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದರು.
ಭದ್ರಾವತಿ, ಮೇ. ೨೦: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಟ್ಟಡ ಕಾರ್ಮಿಕರು ಗುರುವಾರ ನಗರದ ಸಿ.ಎನ್ ರಸ್ತೆಯಲ್ಲಿರುವ ಕಾರ್ಮಿಕರ ಕಛೇರಿ ಮುಂಭಾಗ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದರು.
ಕಟ್ಟಡ ಕಾರ್ಮಿಕರು ಕಪ್ಪು ಪಟ್ಟಿ ಧರಿಸಿ ಕೋವಿಡ್ ಸಂಕಷ್ಟದಲ್ಲಿರುವ ಬಡ ಕಾರ್ಮಿಕರಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸುವ ಜೊತೆಗೆ ವಿಶಿಷ್ಟವಾಗಿ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರ ತಕ್ಷಣ ಕಟ್ಟಡ ಕಾರ್ಮಿಕರಿಗೆ ೧೦,೦೦೦ ರು. ಪರಿಹಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಕಟ್ಟಡ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಅಂತೋಣಿ ಕ್ರೂಸ್, ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್‌ಬಾಬು, ತಾಂತ್ರಿಕ ಸಲಹೆಗಾರ ಕೆ. ಮನೋಹರ್, ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ್, ಸಂಘಟನಾ ಕಾರ್ಯದರ್ಶಿ ಅಭಿಲಾಷ್, ಪ್ರಮುಖರಾದ ಸುಬ್ರಮಣ್ಯ, ನಾರಾಯಣ ಸ್ವಾಮಿ, ಜಿ. ಸುರೇಶ್‌ಕುಮಾರ್, ನಿಸಾರ್, ಮೆಹಬೂಬ್, ಷಣ್ಮುಗಂ, ಲಿಯಾಖತ್, ಮಣಿಕಂಠ, ಕುಮಾರ್, ಗುರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸದೆ ಬೇಕಾಬಿಟ್ಟಿ ಚರಂಡಿ ಕಾಮಗಾರಿ
ಗುಣಮಟ್ಟ ಸಹ ಕಳಪೆ, ಸ್ಥಳೀಯರಿಂದ ದೂರು
ಭದ್ರಾವತಿ ನಗರಸಭೆ ವ್ಯಾಪ್ತಿಯ ಜನ್ನಾಪುರದಲ್ಲಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸದೆ ಚರಂಡಿ ಕಾಮಗಾರಿ ಕೈಗೊಂಡಿರುವುದು.
ಭದ್ರಾವತಿ, ಮೇ. ೨೦: ನಗರಸಭೆ ವ್ಯಾಪ್ತಿಯ ಜನ್ನಾಪುರದಲ್ಲಿ ಬಾಕ್ಸ್ ಮಾದರಿ ಚರಂಡಿ ಕಾಮಗಾರಿಯನ್ನು ಬೇಕಾಬಿಟ್ಟಿಯಾಗಿ ಹಾಗು ಕಳಪೆ ಗುಣಮಟ್ಟದಿಂದ ಕೈಗೊಳ್ಳಲಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ವಾರ್ಡ್ ನಂ.೨೮ರ ಎಂ.ಎಂ ರಸ್ತೆ ಜಯಶ್ರೀ ವೃತ್ತದಿಂದ ವಾರ್ಡ್ ೨೯ರ ಮಲ್ಲೇಶ್ವರ ಸಭಾಭವನದವರೆಗೂ ಮುಖ್ಯರಸ್ತೆಯಲ್ಲಿ ಬಾಕ್ಸ್ ಮಾದರಿ ಚರಂಡಿ ಕಾಮಗಾರಿ ಕೈಗೊಳ್ಳಲಾಗಿದೆ. ಶಾಸಕರ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಚರಂಡಿ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರು ಸಾಕಷ್ಟು ಲೋಪದೋಷ ವೆಸಗಿರುವುದು ಬೆಳಕಿಗೆ ಬಂದಿದೆ.
ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸದೆ ಕಾಮಗಾರಿ ಕೈಗೊಳ್ಳಲಾಗಿದೆ. ಇದರಿಂದಾಗಿ ಸಾಕಷ್ಟು ಸಮಸ್ಯೆ ಎದುರಾಗಲಿದೆ. ಮಳೆಗಾಲದಲ್ಲಿ ಚರಂಡಿಯಲ್ಲಿ ನೀರು ಸರಾಗವಾಗಿ ಹರಿದುಹೋಗಲು ಸಾಧ್ಯವಾಗದೆ ನಿಂತುಕೊಳ್ಳಲಿದೆ. ಮತ್ತೊಂದೆಡೆ ಒಂದು ವೇಳೆ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಬೇಕಾದರೆ ನಿರ್ಮಾಣಗೊಂಡಿರುವ ಚರಂಡಿಯನ್ನು ಒಡೆಯಬೇಕಾಗುತ್ತದೆ. ಇದರಿಂದ ಕಾಮಗಾರಿ ಪುನಃ ಕೈಗೊಳ್ಳಬೇಕಾಗುತ್ತದೆ. ಅಲ್ಲದೆ ಸಾರ್ವಜನಿಕ ಹಣ ಪೋಲಾಗುತ್ತದೆ ಎಂದು ಆರೋಪಿಸಿದ್ದಾರೆ.
ಚರಂಡಿ ಕಾಮಗಾರಿ ಗುಣಮಟ್ಟ ಸಹ ಕಳಪೆಯಿಂದ ಕೂಡಿದ್ದು, ಸಾಕಷ್ಟು ಲೋಪದೋಷಗಳು ಕಂಡು ಬರುತ್ತಿವೆ. ಈ ಹಿನ್ನಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ಮೂಲಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ವಾರ್ಡ್ ನಂ.೨೮ರ ನೂತನ ನಗರಸಭಾ ಸದಸ್ಯ ಕಾಂತರಾಜ್ ಪತ್ರಿಕೆಯೊಂದಿಗೆ ಮಾತನಾಡಿ, ಕಾಮಗಾರಿಯಲ್ಲಿ ಲೋಪದೋಷಗಳು ನಡೆದಿರುವುದು ನನ್ನ ಗಮನಕ್ಕೆ ಬಂದಿದೆ. ಕಾಮಗಾರಿ ನಡೆಯುವಾಗ ನಗರಸಭೆ ಚುನಾವಣೆ ಪ್ರಕ್ರಿಯೆಯಲ್ಲಿತ್ತು. ಈ ಹಿನ್ನಲೆಯಲ್ಲಿ ಸಂಬಂಧಪಟ್ಟ ಗುತ್ತಿಗೆದಾರ ಅಥವಾ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ದೂರುಗಳು ಸಾಧ್ಯವಾಗಲಿಲ್ಲ. ಕಳೆದ ೨ ತಿಂಗಳಿನಿಂದ ಗುತ್ತಿಗೆ ಕಾಮಗಾರಿ ಸ್ಥಗಿತಗೊಳಿಸಿದ್ದು, ಈ ಸಂಬಂಧ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದರು.
ಭದ್ರಾವತಿಯಲ್ಲಿ ೨೦೪ ಸೋಂಕು ಪತ್ತೆ
ಭದ್ರಾವತಿ, ಮೇ. ೨೦: ತಾಲೂಕಿನಲ್ಲಿ ಕೊರೋನಾ ಸೋಂಕಿನ ಪ್ರಮಾಣ ಕಡಿಮೆಯಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಪುನಃ ಏರಿಕೆಯಾಗಿದ್ದು, ಗುರುವಾರ ೨೦೪ ಸೋಂಕು ದೃಢಪಟ್ಟಿದೆ.
ಒಟ್ಟು ೩೭೯ ಮಂದಿ ಮಾದರಿ ಸಂಗ್ರಹಿಸಲಾಗಿದ್ದು, ಪೈಕಿ ೨೦೪ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ೧೨೩ ಮಂದಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಇದುವರೆಗೂ ಒಟ್ಟು ೮೧ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಒಟ್ಟು ೩೯೫ ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಲಾಕ್‌ಡೌನ್ ಅವಧಿ ಮುಕ್ತಾಯಗೊಳ್ಳಲು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಹಂತದಲ್ಲೂ ಸೋಂಕು ನಿಯಂತ್ರಣಕ್ಕೆ ಬರದಿರುವುದು ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಲಾಕ್‌ಡೌನ್ ಬಿಗಿಗೊಳಿಸಲು ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ.
ಕೊರೋನಾ ಸಂಕಷ್ಟದಲ್ಲಿಯೂ ಜನರ ಹಣ ಲೂಟಿ : ಶಾಸಕ ಬಿ.ಕೆ ಸಂಗಮೇಶ್ವರ್ ಆರೋಪ
ಭದ್ರಾವತಿ ಸಿ.ಎನ್ ರಸ್ತೆಯಲ್ಲಿರುವ ಕಾರ್ಮಿಕ ಕಛೇರಿ ಆವರಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಬಡ ಕಟ್ಟಡ ಕಾರ್ಮಿಕರಿಗೆ ದಿನಸಿ ಸಾಮಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿದರು.
ಭದ್ರಾವತಿ, ಮೇ. ೨೦: ರಾಜ್ಯದಲ್ಲಿರುವ ಬಿಜೆಪಿ ಸರ್ಕಾರಕ್ಕೆ ಮಾನವೀಯತೆ ಎಂಬುದೇ ಗೊತ್ತಿಲ್ಲ. ಕೊರೋನಾ ಸಂಕಷ್ಟದಲ್ಲಿಯೂ ಭ್ರಷ್ಟಾಚಾರದಲ್ಲಿ ತೊಡಗಿದೆ. ಜನರ ಹಣ ಲೂಟಿ ಹೊಡೆಯುತ್ತಿದೆ. ಇಂತಹ ಸರ್ಕಾರ ಜನರಿಗೆ ಅಗತ್ಯವಿಲ್ಲ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಆಕ್ರೋಶ ವ್ಯಕ್ತಪಡಿಸಿದರು.
ಅವರು ಗುರುವಾರ ನಗರದ ಸಿ.ಎನ್ ರಸ್ತೆಯಲ್ಲಿರುವ ಕಾರ್ಮಿಕ ಕಛೇರಿ ಆವರಣದಲ್ಲಿ ಬಡ ಕಟ್ಟಡ ಕಾರ್ಮಿಕರಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.
ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ಏನೋ ಆಗಿಬಿಡುತ್ತದೆ ಎಂಬ ಭ್ರಮೆಯಲ್ಲಿ ಜನ ಮತವನ್ನು ಕೊಟ್ಟರು. ಆದರೆ ಇದುವರೆಗೂ ಏನು ಆಗಿಲ್ಲ. ದೇಶದಲ್ಲಿ ೭೦ ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ದೇಶದ ಜನರಿಗೆ ಎಲ್ಲವನ್ನು ನೀಡಿದೆ. ಬಡವರು, ದೀನದಲಿತರು, ಕಟ್ಟಡ ಕಾರ್ಮಿಕರ ಪರವಾಗಿ ಸ್ಪಂದಿಸಿದೆ. ಮಲ್ಲಿಕಾರ್ಜುನಖರ್ಗೆಯವರು ಕೇಂದ್ರದಲ್ಲಿ ಕಾರ್ಮಿಕ ಸಚಿವರಾಗಿದ್ದಾಗ ಹಲವಾರು ಬದಲಾವಣೆಗಳನ್ನು ತಂದು ಕಟ್ಟಡ ಕಾರ್ಮಿಕರಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದರು. ಇದೀಗ ಬಿಜೆಪಿ ಸರ್ಕಾರ ಬಂದ ಮೇಲೆ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ವಿನಾಕಾರಣ ಕಾರ್ಮಿಕರಿಗೆ ತೊಂದರೆ ಮಾಡುತ್ತಿದ್ದಾರೆಂದು ಆರೋಪಿಸಿದರು.
ರಾಜ್ಯ ಸರ್ಕಾರ ಕಾರ್ಮಿಕರಿಗೆ ಕೇವಲ ೨,೦೦೦ ರು. ಪರಿಹಾರ ಘೋಷಣೆ ಮಾಡಿರುವುದು ಸರಿಯಲ್ಲ. ಕನಿಷ್ಠ ೧೦,೦೦೦ ರು. ಪರಿಹಾರ ನೀಡಬೇಕು. ಈ ಸಂಬಂಧ ಈಗಾಗಲೇ ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಡಿ.ಕೆ ಶಿವಕುಮಾರ್ ಮತ್ತು ವಿರೋಧ ಪಕ್ಷ ನಾಯಕರಾದ ಸಿದ್ದರಾಮಯ್ಯನವರು ರಾಜ್ಯಸರ್ಕಾರಕ್ಕೆ ಒತ್ತಾಯಿಸಿದ್ದು, ಅಲ್ಲದೆ ಬಿಪಿಎಲ್ ಪಡಿತರ ಕುಟುಂಬಗಳಿಗೂ ೧೦,೦೦೦ ರು. ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ ಎಂದರು.
ಜಿಲ್ಲೆಯಲ್ಲಿ ಆಕ್ಸಿಜನ್, ವೆಂಟಿಲೇಟರ್ ಇಲ್ಲ :
ಜಿಲ್ಲೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ಪ್ರತಿ ದಿನ ಸಾವಿರಾರು ಮಂದಿ ಸೋಂಕಿಗೆ ಒಳಗಾಗಿ ನರಳುತ್ತಿದ್ದಾರೆ. ಆಕ್ಸಿಜನ್, ವೆಂಟಿಲೇಟರ್ ವ್ಯವಸ್ಥೆಗಳಿಲ್ಲ. ಇದರಿಂದಾಗಿ ಪ್ರತಿ ದಿನ ೨೦ ರಿಂದ ೩೦ ಜನ ಸಾಯುತ್ತಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿ ಸರ್ಕಾರದ ಪ್ರಭಾವಿ ನಾಯಕರುಗಳಿದ್ದರೂ ಸಹ ಆಕ್ಸಿಜನ್, ವೆಂಟಿಲೇಟರ್ ವ್ಯವಸ್ಥೆ ಸಮರ್ಪಕವಾಗಿ ಕಲ್ಪಿಸಿಕೊಡಲು ಸಾಧ್ಯವಾಗದಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ನೂತನ ನಗರಸಭಾ ಸದಸ್ಯರಾದ ಕೆ. ಸುದೀಪ್‌ಕುಮಾರ್, ಜಾರ್ಜ್ ಹಾಗು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Subscribe to:
Posts (Atom)