Wednesday, June 2, 2021

ಭದ್ರಾವತಿಯಲ್ಲಿ ೧೫೨ ಸೋಂಕು ಪತ್ತೆ : ೨ ಬಲಿ

ಭದ್ರಾವತಿ, ಜೂ. ೨: ತಾಲೂಕಿನಲ್ಲಿ ಕೊರೋನಾ ಸೋಂಕಿನ ಪ್ರಮಾಣ ಪುನಃ ಏರಿಕೆ ದಾರಿ ಹಿಡಿದಿದ್ದು, ಬುಧವಾರ ೧೫೦ರ ಗಡಿ ದಾಟಿದೆ. ಇದರಿಂದಾಗಿ ತಾಲೂಕಿನ ಜನರಲ್ಲಿ ಆತಂಕ ಹೆಚ್ಚಾಗಿದೆ.
       ಒಟ್ಟು ೫೪೧ ಮಂದಿ ಮಾದರಿ ಸಂಗ್ರಹಿಸಲಾಗಿದ್ದು, ೧೫೨ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಕೇವಲ ೬೯ ಮಂದಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ಇದುವರೆಗೂ ತಾಲೂಕಿನಲ್ಲಿ ಒಟ್ಟು ೫೧೦೫ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ೪೩೨೫ ಮಂದಿ ಗುಣಮುಖರಾಗಿದ್ದಾರೆ. ಒಟ್ಟು ೭೮೦ ಸಕ್ರಿಯ ಪ್ರಕರಣಗಳು ಬಾಕಿ ಇದ್ದು, ಇದುವರೆಗೂ ೧೩೪ ಮಂದಿ ಮೃತಪಟ್ಟಿದ್ದಾರೆ.
    ಒಟ್ಟು ೪೬೨ ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ನಗರ ವ್ಯಾಪ್ತಿಯಲ್ಲಿ ೭೦ ಕಂಟೈನ್‌ಮೆಂಟ್ ಜೋನ್‌ಗಳಿವೆ. ಈ ಪೈಕಿ ೧೪ ತೆರವುಗೊಳಿಸಲಾಗಿದೆ. ಉಳಿದಂತೆ ಗ್ರಾಮಾಂತರ ಭಾಗದಲ್ಲಿ ೩೩ ಕಂಟೈನ್‌ಮೆಂಟ್ ಜೋನ್‌ಗಳಿವೆ.
       ಒಂದು ತಿಂಗಳ ಮಗುವಿಗೂ ಸೋಂಕು:
     ತಾಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ತಿಂಗಳ ಮಗುವಿಗೂ ಕೊರೋನಾ ಸೋಂಕು ತಗುಲಿದ್ದು, ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿರುವ ಗ್ರಾಮ ಪಂಚಾಯಿತಿ ಸದಸ್ಯ ಕೆ.ವಿ ಧನಂಜಯ, ಗ್ರಾಮಸ್ಥರು ಚಿಕ್ಕ ಮಕ್ಕಳನ್ನು ಹೆಚ್ಚು ಎಚ್ಚರದಿಂದ ನೋಡಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ದಾಕ್ಷಾಯಣಮ್ಮ ನಿಧನ

ದಾಕ್ಷಾಯಣಮ್ಮ
  ಭದ್ರಾವತಿ, ಜೂ. ೨: ತಾಲೂಕಿನ ನಿವಾಸಿ ವೇದಬ್ರಹ್ಮ ಶಿವಲಿಂಗಾರಾಧ್ಯ ಶಾಸ್ತ್ರಿ ಅವರ ಪತ್ನಿ ದಾಕ್ಷಾಯಣಮ್ಮ(೮೫) ಬುಧವಾರ ಬೆಳಿಗ್ಗೆ ನಿಧನ ಹೊಂದಿದರು.
   ಹೊನ್ನಾಳಿ ತಾಲೂಕಿನ ಕೋಟೆ ಮಲ್ಲೂರಿನಲ್ಲಿ ಇವರ ಅಂತ್ಯ ಸಂಸ್ಕಾರ ನೆರವೇರಿತು. ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಸಿದ್ದಲಿಂಗಯ್ಯ, ವಿ.ಎಂ ತೋಂಟಾರಾಧ್ಯ ಮತ್ತು ಶಿವಮೊಗ್ಗ ವಿ.ಎಂ ಜ್ಞಾನೇಶ್ವರ ಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಬೀದಿಬದಿ ವ್ಯಾಪಾರಿಗಳಿಗೆ ಕೊರೋನಾ ಲಸಿಕೆ

ಭದ್ರಾವತಿ ನಗರಸಭೆ ೩೫ ವಾರ್ಡ್‌ಗಳ ವ್ಯಾಪ್ತಿಯಲ್ಲಿರುವ ಬೀದಿಬದಿ ವ್ಯಾಪಾರಿಗಳಿಗೆ ಕೊರೋನಾ ಲಸಿಕೆ ಹಾಕಿಸುವ ನಿಟ್ಟಿನಲ್ಲಿ ನಗರಸಭೆ ಆಡಳಿತ ಮುಂದಾಗಿದ್ದು, ಲಸಿಕೆ ಹಾಕುವ ಕಾರ್ಯಕ್ಕೆ ಪೌರಾಯುಕ್ತ ಕೆ. ಪರಮೇಶ್ ಚಾಲನೆ ನೀಡಿದರು.
   ಭದ್ರಾವತಿ, ಜೂ. ೨: ನಗರಸಭೆ ೩೫ ವಾರ್ಡ್‌ಗಳ ವ್ಯಾಪ್ತಿಯಲ್ಲಿರುವ ಬೀದಿಬದಿ ವ್ಯಾಪಾರಿಗಳಿಗೆ ಕೊರೋನಾ ಲಸಿಕೆ ಹಾಕಿಸುವ ನಿಟ್ಟಿನಲ್ಲಿ ನಗರಸಭೆ ಆಡಳಿತ ಮುಂದಾಗಿದ್ದು, ಲಸಿಕೆ ಹಾಕುವ ಕಾರ್ಯಕ್ಕೆ ಪೌರಾಯುಕ್ತ ಕೆ. ಪರಮೇಶ್ ಚಾಲನೆ ನೀಡಿದರು.
   ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು ೧೬೬೮ ಬೀದಿಬದಿ ವ್ಯಾಪಾರಿಗಳಿದ್ದು, ಹಳೇನಗರದ ವೀರಶೈವ ಸಮುದಾಯ ಭವನದಲ್ಲಿ ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಲಸಿಕೆ ಹಾಕಲಾಗುತ್ತಿದೆ. ಎಲ್ಲಾ ವ್ಯಾಪಾರಿಗಳಿಗೂ ಕಡ್ಡಾಯವಾಗಿ ಲಸಿಕೆ ಹಾಕಲಾಗುತ್ತಿದ್ದು, ಮಂಗಳವಾರ ಮತ್ತು ಬುಧವಾರ ಸುಮಾರು ೧೦೦ ಬೀದಿಬದಿ ವ್ಯಾಪಾರಿಗಳಿಗೆ ಲಸಿಕೆ ಹಾಕಲಾಗಿದೆ.
ಉದ್ಯಮಿ ಬಿ.ಕೆ ಜಗನ್ನಾಥ್, ನಗರಸಭೆ ಸಮುದಾಯ ಸಂಘಟನಾ ಅಧಿಕಾರಿ ಎಂ. ಸುಹಾಸಿನಿ, ಸಂಘಟಕರಾದ ಈಶ್ವರಪ್ಪ, ಸುಮಿತ್ರ ಎಚ್. ಹರಪ್ಪನಹಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಶಾಸಕರ ಅನುದಾನದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ೨ ಅಂಬ್ಯುಲೆನ್ಸ್ ಖರೀದಿ

ಎರಡರ ಪೈಕಿ ಒಂದು ಅಂಬ್ಯುಲೆನ್ಸ್ ಸೇವೆಗೆ ಸಮರ್ಪಿಸಿದ ಶಾಸಕ ಬಿ.ಕೆ ಸಂಗಮೇಶ್ವರ್


ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಭದ್ರಾವತಿಯಲ್ಲಿ ತುರ್ತು ಸೇವೆಗಾಗಿ ೨ ಹೊಸ ಅಂಬ್ಯುಲೆನ್ಸ್‌ಗಳನ್ನು ಶಾಸಕರ ನಿಧಿಯಿಂದ ಖರೀದಿಸಲಾಗಿದ್ದು, ಈ ಪೈಕಿ ಒಂದು ಅಂಬ್ಯುಲೆನ್ಸ್ ಬುಧವಾರ ಶಾಸಕ ಬಿ.ಕೆ ಸಂಗಮೇಶ್ವರ್ ಸೇವೆಗೆ ಸಮರ್ಪಿಸಿದರು.
    ಭದ್ರಾವತಿ, ಜೂ. ೨: ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ತುರ್ತು ಸೇವೆಗಾಗಿ ೨ ಹೊಸ ಅಂಬ್ಯುಲೆನ್ಸ್‌ಗಳನ್ನು ಶಾಸಕರ ನಿಧಿಯಿಂದ ಖರೀದಿಸಲಾಗಿದ್ದು, ಈ ಪೈಕಿ ಒಂದು ಅಂಬ್ಯುಲೆನ್ಸ್ ಬುಧವಾರ ಶಾಸಕ ಬಿ.ಕೆ ಸಂಗಮೇಶ್ವರ್ ಸೇವೆಗೆ ಸಮರ್ಪಿಸಿದರು.
    ಶಾಸಕರ ೧ ಕೋ. ರು. ಅನುದಾನದಲ್ಲಿ ಈಗಾಗಲೇ ೧೦೦ ಹಾಸಿಗೆಯುಳ್ಳ ಕೋವಿಡ್ ಸೋಂಕಿತರ ಆರೋಗ್ಯ ಕೇಂದ್ರ ನಿರ್ಮಾಣ, ಈ ಪೈಕಿ ೨೪ ಲಕ್ಷ ರು. ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ೨ ಅಂಬ್ಯುಲೆನ್ಸ್‌ಗಳನ್ನು ಖರೀದಿಸಲಾಗಿದೆ.
  ತಾಲೂಕು ಪಂಚಾಯಿತಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್, ನಗರಸಭೆ ಪೌರಾಯುಕ್ತ ಕೆ. ಪರಮೇಶ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ತಾಲ್ಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಓ. ಮಲ್ಲಪ್ಪ, ನಗರಸಭೆ ಸದಸ್ಯ ಕೆ. ಸುದೀಪ್‌ಕುಮಾರ್, ಕಂದಾಯಾಧಿಕಾರಿ ಪ್ರಶಾಂತ್, ಉದ್ಯಮಿ ಎ. ಮಾದು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tuesday, June 1, 2021

ಪೆಟ್ರೋಲ್ ಬಂಕ್, ಅಡುಗೆ ಅನಿಲ ವಿತರಣಾ ಸಿಬ್ಬಂದಿಗಳಿಗೆ ಕೊರೋನಾ ಲಸಿಕೆ

ಭದ್ರಾವತಿ ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ವ್ಯಾಪ್ತಿಯಲ್ಲಿ ಬರುವ ಪೆಟ್ರೋಲ್ ಬಂಕ್ ಸಿಬ್ಬಂದಿಗಳು ಹಾಗು ಅಡುಗೆ ಅನಿಲ ವಿತರಣಾ ಸಿಬ್ಬಂದಿಗಳಿಗೆ ಕೊರೋನಾ ಲಸಿಕೆ ಹಾಕಲಾಯಿತು.
ಭದ್ರಾವತಿ, ಜೂ. ೧:  ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ವ್ಯಾಪ್ತಿಯಲ್ಲಿ ಬರುವ ಪೆಟ್ರೋಲ್ ಬಂಕ್ ಸಿಬ್ಬಂದಿಗಳು ಹಾಗು ಅಡುಗೆ ಅನಿಲ ವಿತರಣಾ ಸಿಬ್ಬಂದಿಗಳಿಗೆ ಕೊರೋನಾ ಲಸಿಕೆ ಹಾಕಲಾಯಿತು.
ಇಲಾಖೆಯ ಶಿವಮೊಗ್ಗ ಜಂಟಿ ನಿರ್ದೇಶಕರು, ನೋಡಲ್ ಅಧಿಕಾರಿಯಾದ ಮಂಜುನಾಥ್ ಅವರ ಸಹಕಾರದೊಂದಿಗೆ ನಡೆದ ಲಸಿಕಾ ಕಾರ್ಯಕ್ರಮದಲ್ಲಿ ಒಟ್ಟು ೧೮೦ ಮಂದಿಗೆ ಲಸಿಕೆ ಹಾಕಲಾಯಿತು.
ಶಾಸಕ ಬಿ.ಕೆ ಸಂಗಮೇಶ್ವರ್, ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್, ನಗರ ಆಹಾರ ನಿರೀಕ್ಷಕ ಎ.ಟಿ ಬಸವರಾಜ್, ಶಿವಶಂಕರಯ್ಯ ಪೆಟ್ರೋಲ್ ಬಂಕ್ ಮಾಲೀಕ ಶಾಂತು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಭದ್ರಾವತಿ ಪುನಃ ನೂರರ ಗಡಿದಾಟಿದ ಸೋಂಕು

ಭದ್ರಾವತಿ, ಜೂ. ೧: ಕೊರೋನಾ ಸೋಂಕು ತಾಲೂಕಿನಲ್ಲಿ ಪುನಃ ನೂರರ ಗಡಿ ದಾಟಿದ್ದು, ಮಂಗಳವಾರ ೧೧೫ ಸೋಂಕು ಪತ್ತೆಯಾಗಿದೆ.
     ಒಟ್ಟು ೬೦೫ ಮಂದಿಯ ಮಾದರಿ ಸಂಗ್ರಹಿಸಲಾಗಿದ್ದು, ೧೦೫ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಕೇವಲ ೪೭ ಮಂದಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಒಟ್ಟು ಇದುವರೆಗೂ ೪೯೫೩ ಸೋಂಕು ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ೪೨೫೬ ಮಂದಿ ಗುಣಮುಖರಾಗಿದ್ದಾರೆ. ಒಟ್ಟು ೩೭೮ ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ನಗರ ವ್ಯಾಪ್ತಿಯಲ್ಲಿ ೮೪ ಹಾಗು ಗ್ರಾಮಾಂತರ ವ್ಯಾಪ್ತಿಯಲ್ಲಿ ೨೮ ಕಂಟೈನ್‌ಮೆಂಟ್ ಜೋನ್‌ಗಳಿವೆ.

ಮಲ ಹೊರುವ ಪದ್ದತಿ ನಿಷೇಧ ಕಾಯ್ದೆ ಜಾರಿಗೊಳಿಸುವಲ್ಲಿ ಇಚ್ಚಾಶಕ್ತಿ ಕೊರತೆ : ಶಿವಣ್ಣ ಎಂ. ಕೋಟೆ ವಿಷಾದ

ಕೋವಿಡ್ ಹಿನ್ನಲೆಯಲ್ಲಿ ಪೌರ ನೌಕರರ ಸಮಸ್ಯೆಗಳನ್ನು ತಕ್ಷಣ ಈಡೇರಿಸಿ


ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ, ಮಾಜಿ ಸಚಿವ ಶಿವಣ್ಣ ಎಂ. ಕೋಟೆ ಭದ್ರಾವತಿ ಹಳೇನಗರದ ಜೈ ಭೀಮಾ ನಗರ ವೀಕ್ಷಣೆ ನಡೆಸಿದರು.
    ಭದ್ರಾವತಿ, ಜೂ. ೧: ರಾಜ್ಯದಲ್ಲಿ ಇಂದಿಗೂ ತಲೆ ಮೇಲೆ ಮಲ ಹೊರುವ ಪದ್ದತಿ ಕಂಡು ಬರುತ್ತಿದ್ದು, ಕಾಯ್ದೆ ಜಾರಿ ನಡುವೆಯೂ ೫,೦೭೦ ಮಂದಿ ಈ ವೃತ್ತಿಯಲ್ಲಿ ತೊಡಗಿರುವುದು ವಿಷಾದನೀಯ ಸಂಗತಿಯಾಗಿದೆ. ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಅಧಿಕಾರಿ ವರ್ಗ ವಿಫಲವಾಗಿದೆ ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ, ಮಾಜಿ ಸಚಿವ ಶಿವಣ್ಣ ಎಂ. ಕೋಟೆ ಆರೋಪಿಸಿದರು.
    ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ೨೦೧೩ರಲ್ಲಿ ಮಲ ಹೊರುವ ಪದ್ದತಿ ನಿಷೇಧಿತ ಕಾಯ್ದೆ ಜಾರಿಗೊಳಿಸಲಾಗಿದೆ. ಆದರೂ ಸಹ ೫,೦೭೦ ಮಂದಿ ಇಂದಿಗೂ ಈ ವೃತ್ತಿಯಲ್ಲಿ ತೊಡಗಿದ್ದಾರೆ. ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಇವರನ್ನು ಗುರುತಿಸಿ ಪುನರ್ವಸತಿ ಕಲ್ಪಿಸಿಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ಸಂಬಂಧಿತ ಇಲಾಖೆಗಳ ಅಧಿಕಾರಿಗಳ ವರ್ಗ ಇಚ್ಛಾಶಕ್ತಿ ಪ್ರದರ್ಶಿಸಬೇಕಾಗಿದೆ. ಇತ್ತೀಚೆಗೆ ಪಾವಗಡ ತಾಲೂಕಿನ ಸಕ್ಕರೆ ಕಾರ್ಖಾನೆಯೊಂದರಲ್ಲಿ ಮಹಿಳೆಯೊಬ್ಬರನ್ನು ಮಲದ ಗುಂಡಿಗೆ ಉಳಿಸಿ ಸ್ವಚ್ಛಗೊಳಿಸಲಾಗಿದೆ. ಈ ವಿಷಯ ತಿಳಿದು ತಕ್ಷಣ ಕಾರ್ಖಾನೆಗೆ ಭೇಟಿ ನೀಡಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.
      ಗುತ್ತಿಗೆದಾರನಿಂದ ಪೌರ ನೌಕರನಿಗೆ ಅನ್ಯಾಯ:
   ಇತ್ತೀಚೆಗೆ ಜೈ ಭೀಮಾ ನಗರದಲ್ಲಿ ಹತ್ಯೆಯಾಗಿರುವ ಗುತ್ತಿಗೆ ಪೌರ ನೌಕರ ಸುನಿಲ್ ಕುಟುಂಬಕ್ಕೆ ಗುತ್ತಿಗೆದಾರನಿಂದ ಅನ್ಯಾಯವಾಗಿದೆ. ಸುನಿಲ್‌ಗೆ ಜೀವವಿಮೆ ಮಾಡಿಸದಿರುವುದು ಹೆಚ್ಚಿನ ಪರಿಹಾರದ ಮೊತ್ತ ಸಿಗದಿರಲು ಕಾರಣವಾಗಿದೆ. ಇದರಿಂದಾಗಿ ಕುಟುಂಬಸ್ಥರು ತೊಂದರೆ ಅನುಭವಿಸುವಂತಾಗಿದೆ. ಈ  ನಡುವೆಯೂ ಗಂಡನನ್ನು ಕಳೆದುಕೊಂಡಿರುವ ಮಹಿಳೆಗೆ ಸ್ಥಳೀಯ ಸಂಸ್ಥೆಯಲ್ಲಿ ಉದ್ಯೋಗ ಕಲ್ಪಿಸಿಕೊಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಸಮಾಜ ಕಲ್ಯಾಣ ಇಲಾಖೆಯಿಂದ ಬಿಡುಗಡೆಯಾಗಿರುವ ಪರಿಹಾರದ ಮೊತ್ತದಲ್ಲಿ ಸ್ವಲ್ಪ ಮೊತ್ತವನ್ನು ನೀಡಲಾಗಿದೆ ಎಂದರು.
       ಪೌರ ನೌಕರರ ಗುತ್ತಿಗೆ ಪದ್ದತಿ ರದ್ದುಗೊಳಿಸಲು ಚಿಂತನೆ:
  ಗುತ್ತಿಗೆದಾರರಿಂದ ಪೌರ ನೌಕರರಿಗೆ ಅನ್ಯಾಯವಾಗುತ್ತಿದ್ದು, ಕನಿಷ್ಠ ಕೂಲಿ ಸಹ ಪೂರ್ಣ ಪ್ರಮಾಣದಲ್ಲಿ ನೌಕರರ ಕೈ ಸೇರುತ್ತಿಲ್ಲ. ಜೊತೆಗೆ ಇಎಸ್‌ಐ ಮತ್ತು ಪಿ.ಎಫ್ ಯೋಜನೆಗಳಿಗೆ ಗುತ್ತಿಗೆದಾರ ಸರಿಯಾಗಿ ಹಣ ಸಂದಾಯ ಮಾಡುತ್ತಿಲ್ಲ. ಈ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ಎಲ್ಲಾ ನೌಕರರನ್ನು ಕಾಯಂಗೊಳಿಸಿ ಗುತ್ತಿಗೆ ಪದ್ದತಿಯನ್ನು ರದ್ದುಗೊಳಿಸಲು ಚಿಂತನೆ ಸಹ ನಡೆಸಲಾಗುತ್ತಿದೆ ಎಂದರು.
       ಪೌರ ನೌಕರರಿಗೆ ಸೌಲಭ್ಯಗಳು ಸಮರ್ಪಕವಾಗಿ ಲಭಿಸಲಿ:
   ಕೋವಿಡ್-೧೯ರ ಪರಿಣಾಮ ಪೌರ ನೌಕರರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳಲ್ಲಿ, ಬೆಂಗಳೂರು ಮಹಾನಗರ ಪಾಲಿಕೆ ಹಾಗು ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರ ನೌಕರರ ಸಮಸ್ಯೆಗಳನ್ನು ತಕ್ಷಣ ಬಗೆಹರಿಸುವಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಲಾಗುತ್ತಿದೆ ಎಂದರು.
      ಜೈ ಭೀಮಾ ನಗರ ವೀಕ್ಷಣೆ:
   ಪೌರ ಕಾರ್ಮಿಕರು, ದಲಿತರು ಹೆಚ್ಚಾಗಿ ವಾಸಿಸುತ್ತಿರುವ ನಗರದ ಹೃದಯ ಭಾಗದಲ್ಲಿರುವ ಜೈ ಭೀಮಾ ನಗರದಲ್ಲಿ ಶಿವಣ್ಣ ಎಂ. ಕೋಟೆ ವೀಕ್ಷಣೆ ನಡೆಸಿದರು.
   ಸ್ಥಳೀಯರು ಮೂಲ ಸೌಲಭ್ಯಗಳ ಕೊರತೆಯಿಂದ ಅನುಭವಿಸುತ್ತಿರುವ ಸಮಸ್ಯೆಗಳನ್ನು ಕಂಡು ಸ್ಥಳೀಯ ಆಡಳಿತ ವಿರುದ್ಧ ಅಸಮಾಧಾನ ಸಹ ವ್ಯಕ್ತಪಡಿಸಿದರು. ಜೊತೆಗೆ ಪೌರ ನೌಕರರಿಗೆ ಗೃಹ ಭಾಗ್ಯ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ವಸತಿ ಸಂಕೀರ್ಣಗಳ ಕಾಮಗಾರಿ ಸಹ ಪರಿಶೀಲನೆ ನಡೆಸಿದರು.
     ಜಿಲ್ಲಾ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ, ದಲಿತ ಮುಖಂಡ ಚಿನ್ನಯ್ಯ, ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ಅಧ್ಯಕ್ಷ ಮಂಜುನಾಥ್, ನಗರಸಭೆ ಕಂದಾಯಾಧಿಕಾರಿ ರಾಜ್‌ಕುಮಾರ್, ಪರಿಸರ ಅಭಿಯಂತರ ಪ್ರಭಾಕರ್, ಹಿರಿಯ ಆರೋಗ್ಯ ನಿರೀಕ್ಷ ಆರ್.ಬಿ ಸತೀಶ್, ಸೂಪರ್ ವೈಸರ್ ಗೋವಿಂದ, ಪೊಲೀಸ್ ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ, ಹಳೇನಗರ ಪೊಲೀಸ್ ಠಾಣೆ ಪ್ರಭಾರಿ ಸಬ್‌ಇನ್ಸ್‌ಪೆಕ್ಟರ್ ಕವಿತಾ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ, ಮಾಜಿ ಸಚಿವ ಶಿವಣ್ಣ ಎಂ. ಕೋಟೆ ಭದ್ರಾವತಿ ಹಳೇನಗರದ ಜೈ ಭೀಮಾ ನಗರ ವೀಕ್ಷಣೆ ಸಂದರ್ಭದಲ್ಲಿ ಕೊಳಕು ಸ್ಥಳದಲ್ಲಿ ಕುಡಿಯುವ ನೀರಿನ ನಲ್ಲಿ ಸಂಪರ್ಕ ಕಲ್ಪಿಸಿರುವುದು ಹಾಗು ಚರಂಡಿಯಲ್ಲಿ ಸ್ವಚ್ಚತೆ ಇಲ್ಲದಿರುವುದನ್ನು ಕಂಡು ಸ್ಥಳೀಯ ಆಡಳಿತದ ವಿರುದ್ಧ ಅಸಮಾಧಾನ ತೋರ್ಪಡಿಸಿದರು.