Wednesday, June 9, 2021

ಭದ್ರಾವತಿಯಲ್ಲಿ ೧೧೩ ಸೋಂಕು, ೬ ಮಂದಿ ಬಲಿ

    ಭದ್ರಾವತಿ, ಜೂ. ೯: ತಾಲೂಕಿನಲ್ಲಿ ಮಂಗಳವಾರ ಕೇವಲ ೪೫ ಕೊರೋನಾ ಸೋಂಕು ಪತ್ತೆಯಾಗಿತ್ತು. ಆದರೆ ಬುಧವಾರ ಸೋಂಕು ಪುನಃ ನೂರರ ಗಡಿ ದಾಟಿದ್ದು, ಒಟ್ಟು ೧೧೩ ಸೋಂಕು ದೃಢಪಟ್ಟಿದೆ. ಈ ನಡುವೆ ಸೋಂಕಿಗೆ ಒಂದೇ ದಿನ ೬ ಮಂದಿ ಬಲಿಯಾಗಿದ್ದಾರೆ.
   ಒಟ್ಟು ೧೦೫೪ ಮಂದಿ ಮಾದರಿ ಸಂಗ್ರಹಿಸಲಾಗಿದ್ದು, ೧೧೩ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ೮೨ ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ತಾಲೂಕಿನಲ್ಲಿ ಇದುವರೆಗೂ ಒಟ್ಟು ೬೧೩೪ ಸೋಂಕು ಪ್ರಕರಣಗಳು ದಾಖಲಾಗಿದ್ದು, ೫೧೨೯ ಮಂದಿ ಗುಣಮುಖರಾಗಿದ್ದಾರೆ. ೧೦೦೫ ಸಕ್ರಿಯ ಪ್ರಕರಣಗಳು ಬಾಕಿ ಉಳಿದಿವೆ.
     ಒಂದೇ ದಿನ ೬ ಮಂದಿ ಬಲಿಯಾಗಿದ್ದು, ಇದುವರೆಗೂ ಒಟ್ಟು ೧೬೬ ಮಂದಿ ಮೃತಪಟ್ಟಿದ್ದಾರೆ. ಒಟ್ಟು ೨೬೩ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರ ವ್ಯಾಪ್ತಿಯಲ್ಲಿ ಒಟ್ಟು ೪೨ ಕಂಟೈನ್‌ಮೆಂಟ್ ಜೋನ್‌ಗಳು ಸಕ್ರಿಯಾಗಿದ್ದು, ಇದುವರೆಗೂ ೮೪ ಜೋನ್‌ಗಳನ್ನು ತೆರವುಗೊಳಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಒಟ್ಟು ೨೬ ಜೋನ್‌ಗಳು ಸಕ್ರಿಯಾಗಿದ್ದು, ೧೭ ತೆರವುಗೊಳಿಸಲಾಗಿದೆ.

ಆಶಾ ಕಾರ್ಯಕರ್ತೆಯರು, ಆಂಬ್ಯುಲೆನ್ಸ್ ಚಾಲಕರಿಗೆ ದಿನಸಿ ಸಾಮಗ್ರಿ ವಿತರಣೆ

ಭದ್ರಾವತಿ ನಗರಸಭೆ ವಾರ್ಡ್ ನಂ.೨೬ರ ವ್ಯಾಪ್ತಿಯ ನ್ಯೂ ಕಾಲೋನಿ ಭಾಗದ ಆಶಾ ಕಾರ್ಯಕರ್ತೆಯರು ಹಾಗೂ ಸರ್ಕಾರಿ ಆಂಬ್ಯುಲೆನ್ಸ್ ಚಾಲಕರಿಗೆ ಬುಧವಾರ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು. 

   ಭದ್ರಾವತಿ, ಜೂ. ೯: ನಗರಸಭೆ ನಗರಸಭೆ ವಾರ್ಡ್ ನಂ.೨೬ರ ವ್ಯಾಪ್ತಿಯ ನ್ಯೂ ಕಾಲೋನಿ ಭಾಗದ ಆಶಾ ಕಾರ್ಯಕರ್ತೆಯರು ಹಾಗೂ ಸರ್ಕಾರಿ ಆಂಬ್ಯುಲೆನ್ಸ್ ಚಾಲಕರಿಗೆ ಬುಧವಾರ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.
    ತಾಲೂಕು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಎಂ.ಜಿ ರಾಮಚಂದ್ರ ತಮ್ಮ ಸ್ವಂತ ಖರ್ಚಿನಲ್ಲಿ ಸುಮಾರು ೨೫ ಮಂದಿಗೆ ದಿನಸಿ ಸಾಮಗ್ರಿ ಹಾಗು ತರಕಾರಿ ವಿತರಿಸುವ ಮೂಲಕ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ.
    ನಗರಸಭಾ ಸದಸ್ಯರಾದ ಸರ್ವಮಂಗಳ, ಎಸ್.ಎಸ್ ಭೈರಪ್ಪ, ಕಾಂತರಾಜ್, ಮಾಜಿ ಸದಸ್ಯರಾದ ಮುಕುಂದಪ್ಪ, ಯುವ ಮುಖಂಡ ಬಿ.ಎಸ್ ಬಸವೇಶ್, ಫ್ರಾನ್ಸಿಸ್, ಕಾಂಗ್ರೆಸ್ ಮುಖಂಡರಾದ ವಿಲ್ಸನ್ ಬಾಬು, ವಿಜಯಗಾಂಧಿ, ಎಲ್ಲೋಜಿರಾವ್, ಹರೀಶ್, ವಿನೋದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪ್ರೊ. ಬಿ. ಕೃಷ್ಣಪ್ಪ ಶೋಷಿತರ ಪರ ಧ್ವನಿಯಾಗಿದ್ದರು : ಪಳನಿರಾಜ್

ಭದ್ರಾವತಿಯಲ್ಲಿ ಸಿ.ಎನ್ ರಸ್ತೆಯಲ್ಲಿರುವ ತಾಲೂಕು ಶಾಖೆ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರೊ. ಬಿ. ಕೃಷ್ಣಪ್ಪನವರ ೮೩ನೇ ಜನ್ಮ ದಿನ ಕಾರ್ಯಕ್ರಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಜಿಲ್ಲಾ ಸಂಘಟನಾ ಸಂಚಾಲಕ ಪಳನಿರಾಜ್ ಪಾಲ್ಗೊಂಡು ಮಾತನಾಡಿದರು.
     ಭದ್ರಾವತಿ, ಜೂ. ೯: ಪ್ರೊ. ಬಿ. ಕೃಷ್ಣಪ್ಪನವರ ಹೋರಾಟದ ದಾರಿಯಲ್ಲಿ ನಾವೆಲ್ಲರೂ ಸಾಗುತ್ತಿದ್ದು, ಮುಂದಿನ ದಿನಗಳಲ್ಲೂ ಇದೆ ದಾರಿಯಲ್ಲಿ ಸಾಗುವ ಮೂಲಕ ಶೋಷಿತರ ಧ್ವನಿಯಾಗಬೇಕೆಂದು  ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಜಿಲ್ಲಾ ಸಂಘಟನಾ ಸಂಚಾಲಕ ಪಳನಿರಾಜ್ ತಿಳಿಸಿದರು.
   ಅವರು ಬುಧವಾರ ನಗರದ ಸಿ.ಎನ್ ರಸ್ತೆಯಲ್ಲಿರುವ ತಾಲೂಕು ಶಾಖೆ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರೊ. ಬಿ. ಕೃಷ್ಣಪ್ಪನವರ ೮೩ನೇ ಜನ್ಮ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
     ನಗರದ ಎರಡು ಬೃಹತ್ ಕಾರ್ಖಾನೆಗಳಾದ ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳಲ್ಲಿ ಅಂದು ದಲಿತ ಕಾರ್ಮಿಕರ ಮೇಲೆ ಮೇಲ್ವರ್ಗದ ಸಮುದಾಯದ ಜನರಿಂದ ನಡೆಯುತ್ತಿದ್ದ ಶೋಷಣೆಗಳ ವಿರುದ್ಧ ಹೋರಾಟ ನಡೆಸುವ ಉದ್ದೇಶದಿಂದ ಪ್ರೊ. ಬಿ. ಕೃಷ್ಣಪ್ಪನವರು ನಗರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹುಟ್ಟು ಹಾಕಿದರು. ನಂತರ ಅವರು ರಾಜ್ಯಾದ್ಯಂತ ಹಲವಾರು ಹೋರಾಟಗಳನ್ನು ನಡೆಸುವ ಮೂಲಕ ಶೋಷಿತರ ಪರ ಧ್ವನಿಯಾಗಿ ನ್ಯಾಯ ಒದಗಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು. ಇವರ ಹೋರಾಟದ ದಾರಿಯಲ್ಲಿ ಇದೀಗ ಸಂಘಟನೆ ರಾಜ್ಯಾಧ್ಯಕ್ಷ ಮಾವಳ್ಳಿ ಶಂಕರ್, ಜಿಲ್ಲಾಧ್ಯಕ್ಷ ಹಾಲೇಶಪ್ಪನವರ ನೇತೃತ್ವದಲ್ಲಿ ಮುನ್ನಡೆಯುತ್ತಿದ್ದು, ನಿರಂತರವಾಗಿ ಶೋಷಿತರ ಪರ ಹೋರಾಟ ನಡೆಯಲಿದೆ ಎಂದರು.
     ತಾಲೂಕು ಪ್ರಧಾನ ಸಂಚಾಲಕ ಎಂ. ಕುಬೇಂದ್ರಪ್ಪ, ಸಂಘಟನಾ ಸಂಚಾಲಕ ಬಸವರಾಜ, ಖಜಾಂಚಿ ನೀಲಕಂಠ,  ಸದಸ್ಯರಾದ ರಾಮನಾಯ್ಕ, ಆನಂದರಾವ್, ಬಾಬಣ್ಣ, ರಾಜು, ಯೋಗೇಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ಪ್ರೊ. ಬಿ. ಕೃಷ್ಣಪ್ಪನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಲಾಯಿತು.

Tuesday, June 8, 2021

ಜಿಲ್ಲೆಯಲ್ಲಿಯೇ ಮೊದಲ ಪ್ರಯತ್ನ : ಚುನಾಯಿತ ಪ್ರತಿನಿಧಿಗಳಿಗೆ ಲಸಿಕೆ ಅಭಿಯಾನ

ಭದ್ರಾವತಿ ತಾಲೂಕು ಕಚೇರಿ ರಸ್ತೆಯಲ್ಲಿರುವ ಶ್ರೀ ವೀರಶೈವ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿರುವ ಗ್ರಾಮ ಪಂಚಾಯಿತಿ ಮತ್ತು ನಗರಸಭೆ ಸದಸ್ಯರು ಹಾಗು ಸಿಬ್ಬಂದಿಗಳಿಗೆ ಕೊರೊನಾ ಲಸಿಕೆ ಅಭಿಯಾನಕ್ಕೆ ಮಂಗಳವಾರ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು.
      ಭದ್ರಾವತಿ, ಜೂ. ೮: ಸದಾ ಕಾಲ ಜನರ ಮಧ್ಯೆ ಬೆರೆಯುವ ಚುನಾಯಿತ ಪ್ರತಿನಿಧಿಗಳಿಗೆ ಕೊರೋನಾ ಲಸಿಕೆ ಅತ್ಯವಶ್ಯಕವಾಗಿದ್ದು, ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿಯೇ ಮೊದಲ ಪ್ರಯತ್ನವಾಗಿ ಚುನಾಯಿತ ಪ್ರತಿನಿಧಿಗಳ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ತಿಳಿಸಿದರು.
   ಅವರು ಮಂಗಳವಾರ ತಾಲೂಕು ಕಚೇರಿ ರಸ್ತೆಯಲ್ಲಿರುವ ಶ್ರೀ ವೀರಶೈವ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿರುವ ಗ್ರಾಮ ಪಂಚಾಯಿತಿ ಮತ್ತು ನಗರಸಭೆ ಸದಸ್ಯರು ಹಾಗು ಸಿಬ್ಬಂದಿಗಳಿಗೆ ಕೊರೊನಾ ಲಸಿಕೆ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
   ಜನರ ಮಧ್ಯೆ ಬೆರೆಯುವ ಚುನಾಯಿತ ಪ್ರತಿನಿಧಿಗಳಿಗೆ ಸೋಂಕು ವೇಗವಾಗಿ ಹಬ್ಬುತ್ತಿದೆ. ಈ ಹಿನ್ನಲೆಯಲ್ಲಿ ಲಸಿಕೆ ಅಗತ್ಯವಾಗಿದ್ದು,  ನಗರಸಭೆ ೩೫ ವಾರ್ಡ್‌ಗಳ ಸದಸ್ಯರು, ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ೨೨ ಗ್ರಾಮ ಪಂಚಾಯಿತಿಗಳ ಸದಸ್ಯರು ಹಾಗು ಸಿಬ್ಬಂದಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಶೀಘ್ರದಲ್ಲಿಯೇ ಕ್ಷೇತ್ರದ ಪ್ರತಿಯೊಬ್ಬರಿಗೂ ಲಸಿಕೆ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
   ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಓ. ಮಲ್ಲಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕ್ಷುಲ್ಲಕ ಕಾರಣಕ್ಕೆ ಹತ್ಯೆಯಾದ ಗುತ್ತಿಗೆ ಪೌರ ನೌಕರ ಸುನಿಲ್ ನಿವಾಸಕ್ಕೆ ಎಚ್. ಹನುಮಂತಪ್ಪ ಭೇಟಿ

ಕುಟುಂಬ ವರ್ಗಕ್ಕೆ ಸಾಂತ್ವಾನ, ೫೦ ಸಾವಿರ ರು. ಚೆಕ್ ವಿತರಣೆ, ಕಾಯಂ ಉದ್ಯೋಗ ಭರವಸೆ

ಇತ್ತೀಚೆಗೆ ಕ್ಷುಲ್ಲಕ ಕಾರಣದಿಂದ ಹತ್ಯೆಯಾದ ಭದ್ರಾವತಿ ಜೈಭೀಮಾ ನಗರದ ನಿವಾಸಿ, ಗುತ್ತಿಗೆ ಪೌರ ನೌಕರ ಸುನಿಲ್ ನಿವಾಸಕ್ಕೆ ಮಂಗಳವಾರ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷ ಎಚ್. ಹನುಮಂತಪ್ಪ ಭೇಟಿ ನೀಡಿದರು. ಈ ಸಂದರ್ಭದಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಲಾಯಿತು.
     ಭದ್ರಾವತಿ, ಜೂ. ೮: ಇತ್ತೀಚೆಗೆ ಕ್ಷುಲ್ಲಕ ಕಾರಣದಿಂದ ಹತ್ಯೆಯಾದ ಜೈಭೀಮಾ ನಗರದ ನಿವಾಸಿ, ಗುತ್ತಿಗೆ ಪೌರ ನೌಕರ ಸುನಿಲ್ ನಿವಾಸಕ್ಕೆ ಮಂಗಳವಾರ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷ ಎಚ್. ಹನುಮಂತಪ್ಪ ಭೇಟಿ ನೀಡಿ ೫೦ ಸಾವಿರ ರು. ಪರಿಹಾರದ ಚೆಕ್ ವಿತರಿಸುವ ಜೊತೆಗೆ ಕುಟುಂಬ ವರ್ಗದವರು ಸ್ವಯಂ ಉದ್ಯೋಗ ಆರಂಭಿಸಲು ನಿಗಮದಿಂದ ಶೂನ್ಯ ಬಡ್ಡಿ ದರದಲ್ಲಿ ೩ ಲಕ್ಷ ರು. ಸಾಲ ಸೌಲಭ್ಯ ಕಲ್ಪಿಸಿಕೊಡುವುದಾಗಿ ಭರವಸೆ ನೀಡುವ ಮೂಲಕ ಸಾಂತ್ವಾನ ತಿಳಿಸಿದರು.
    ಗಾಂಜಾ ಮತ್ತಿನಲ್ಲಿದ್ದ ಯುವಕರು ಸುನಿಲ್ ಹತ್ಯೆ ಮಾಡಿರುವುದು ವಿಷಾದನೀಯ ಘಟನೆಯಾಗಿದ್ದು, ಈ ರೀತಿಯ ಘಟನೆಗಳು ಮರುಕಳುಹಿಸಬಾರದು. ಸುನಿಲ್ ಪತ್ನಿ ಸೆಲ್ವಿ ಅವರಿಗೆ ನಗರಸಭೆಯಲ್ಲಿ ಕಾಯಂ ಉದ್ಯೋಗ ನೀಡುವ ಪ್ರಕ್ರಿಯೆ ಜಾಲ್ತಿಯಲ್ಲಿದೆ. ಜೊತೆಗೆ ಇನ್ನೂ ೫೦ ಸಾವಿರ ರು. ಪರಿಹಾರ ನಿಗಮದಿಂದ ನೀಡಲಾಗುವುದು. ಅಲ್ಲದೆ ನಿಗಮದಿಂದ ಲಭಿಸಬಹುದಾದ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.
      ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಿ :
     ಹನುಮಂತಪ್ಪ ಅವರನ್ನು ಭೇಟಿ ಮಾಡಿದ ಬಿಜೆಪಿ ಪಕ್ಷದ ಸ್ಥಳೀಯ ಮುಖಂಡರು, ಸುನಿಲ್ ಹತ್ಯೆಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಸುನಿಲ್ ಪತ್ನಿಗೆ ಕಾಯಂ ಉದ್ಯೋಗ ನೀಡಬೇಕು. ಹೆಣ್ಣು ಮಗುವಿಗೆ ಉಚಿತ ಶಿಕ್ಷಣ ನೀಡಬೇಕೆಂದು ಆಗ್ರಹಿಸಿದರು.
     ಡಿಎಸ್‌ಎಸ್ ಮುಖಂಡರಾದ ಸತ್ಯ ಭದ್ರಾವತಿ, ಸಫಾಯಿ ಕರ್ಮಚಾರಿ ಆಯೋಗದ ಜಿಲ್ಲಾ ಸದಸ್ಯ ಚಿನ್ನಯ್ಯ, ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ ಶ್ರೀನಾಥ್, ಮುಖಂಡರಾದ ಮಂಗೋಟೆ ರುದ್ರೇಶ್, ನಗರಸಭಾ ಸದಸ್ಯೆ ಅನಿತಾ ಮಲ್ಲೇಶ್, ಚಂದ್ರು ನರಸೀಪುರ ಹಾಗು ನಗರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
 

Monday, June 7, 2021

ಲಸಿಕೆ ಖರೀದಿಸಲು ೧ ಕೋ.ರು. ಅನುದಾನ ಬಿಡುಗಡೆಗೊಳಿಸಿ

ಶಾಸಕ ಬಿ.ಕೆ ಸಂಗಮೇಶ್ವರ್
    ಭದ್ರಾವತಿ, ಜೂ. ೮: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಕೋವಿಡ್-೧೯ ಲಸಿಕೆ ಖರೀದಿಸಲು ೧ ಕೋ. ರು. ಅನುದಾನ ಬಿಡುಗಡೆಗೊಳಿಸುವಂತೆ ಶಾಸಕ ಬಿ.ಕೆ ಸಂಗಮೇಶ್ವರ್ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
     ತಾಲೂಕಿನಾದ್ಯಂತ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದು, ಈಗಾಗಲೇ ೨ನೇ ಅಲೆಯಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಈ ನಡುವೆ ೩ನೇ ಅಲೆ ಕಾಣಿಸಿಕೊಳ್ಳುವ ಬಗ್ಗೆ ತಜ್ಞರು ಮುನ್ಸೂಚನೆ ನೀಡಿದ್ದಾರೆ. ಪ್ರತಿಯೊಬ್ಬರಿಗೂ ಲಸಿಕೆ ಹಾಕುವುದರಿಂದ ಇದನ್ನು ಸಮರ್ಥವಾಗಿ ಎದುರಿಸಬಹುದಾಗಿದೆ. ಜಿಲ್ಲಾ ಹಾಗು ತಾಲೂಕು ಮಟ್ಟ, ವಾರ್ಡ್ ಮತ್ತು ಗ್ರಾಮ ಮಟ್ಟದಲ್ಲಿ  ಪ್ರಸ್ತುತ ಅಗತ್ಯವಿರುವಷ್ಟು ಲಸಿಕೆ ಲಭ್ಯವಾಗುತ್ತಿಲ್ಲ. ಇದರಿಂದಾಗಿ ಸೂಕ್ತ ಸಮಯದಲ್ಲಿ ಲಸಿಕೆ ಲಭ್ಯವಾಗದೆ ಸೋಂಕಿನ ೨ನೇ ಅಲೆಗೆ ತುತ್ತಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
     ಈ ಹಿನ್ನಲೆಯಲ್ಲಿ ತಕ್ಷಣ ಲಸಿಕೆ ಖರೀದಿ ಮಾಡಲು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ೧ ಕೋ. ರು. ಅನುದಾನ ಮಂಜೂರು ಮಾಡಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ವಾರ್ಡ್‌ಗಳಲ್ಲಿ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಬೇಕೆಂದು ಕೋರಿದ್ದಾರೆ.

ಸ್ನೇಹ ಜೀವಿ ಸತೀಶ್ ನೆನಪಿನಲ್ಲಿ ‘ಹಸಿದವರಿಗೆ ಅನ್ನ’ ಸೇವಾ ಕಾರ್ಯ

ಭದ್ರಾವತಿಯಲ್ಲಿ ಕಡು ಬಡವರಿಗೆ ಸಿದ್ದಪಡಿಸಿದ ಆಹಾರ ವಿತರಿಸುವ ಮೂಲಕ ಸೋಮವಾರ ಸ್ನೇಹ ಜೀವಿ ಬಳಗದ ಅಧ್ಯಕ್ಷ ದಿವಂಗತ ಸತೀಶ್‌ರವರನ್ನು ಸ್ಮರಿಸಲಾಯಿತು.
    ಭದ್ರಾವತಿ, ಜೂ. ೭: ಕಡು ಬಡವರಿಗೆ ಸಿದ್ದಪಡಿಸಿದ ಆಹಾರ ವಿತರಿಸುವ ಮೂಲಕ ಸೋಮವಾರ ನಗರದ ಸ್ನೇಹ ಜೀವಿ ಬಳಗದ ಅಧ್ಯಕ್ಷ ದಿವಂಗತ ಸತೀಶ್‌ರವರನ್ನು ಸ್ಮರಿಸಲಾಯಿತು.
   ಹಲವಾರು ಸೇವಾ ಕಾರ್ಯಗಳನ್ನು ಮೈಗೂಡಿಸಿಕೊಂಡಿರುವ ಸ್ನೇಹ ಜೀವಿ ಬಳಗವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದ್ದ ಸತೀಶ್‌ರವರು ಸುಮಾರು ೨ ತಿಂಗಳ ಹಿಂದೆ ನಿಧನ ಹೊಂದಿದ್ದು, ಸ್ಮರಣಾರ್ಥ ಇವರ ಪುತ್ರ ಸುಹಾಸ್ ನ್ಯೂಟೌನ್ ದಯಾ ಸಾಗರ್ ಟ್ರಸ್ಟ್ ವತಿಯಿಂದ ಕೊರೋನಾ ಸೆಮಿ ಲಾಕ್‌ಡೌನ್ ಹಿನ್ನಲೆಯಲ್ಲಿ ಹಸಿವಿನಿಂದ ಬಳಲುತ್ತಿರುವ ಕಡು ಬಡವರಿಗೆ ಸಿದ್ದಪಡಿಸಿದ ಆಹಾರ ವಿತರಿಸಿ ಮಾನವೀಯತೆ ಮೆರೆದರು. ದಯಾ ಸಾಗರ್ ಟ್ರಸ್ಟ್‌ನ ಮೋಸಸ್ ಹಾಗು ಸ್ನೇಹ ಜೀವಿ ಬಳಗದ ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
     ಭಿಕ್ಷುಕರು, ನಿಗರ್ತಿಕರು, ವಿಕಲಚೇತನರು, ಅಸಹಾಯಕರಿಗೆ ಅನ್ನದಾಸೋಹ ಸೇರಿದಂತೆ ಇನ್ನಿತರ  ಸೇವಾ ಕಾರ್ಯಗಳನ್ನು ನೆರವೇರಿಸುವ ಉದ್ದೇಶದಿಂದ ದಿವಂಗತ ರೋಶಯ್ಯನವರು ದಯಾಸಾಗರ್ ಟ್ರಸ್ಟ್ ಸ್ಥಾಪಿಸಿದ್ದರು. ಇದೀಗ ಈ ಟ್ರಸ್ಟನ್ನು ರೋಸಯ್ಯನವರ ಪುತ್ರ ಮೋಸಸ್ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.