Tuesday, June 15, 2021

ಮುಖ್ಯ ಶಿಕ್ಷಕ ಸುರೇಶಪ್ಪ ನಿಧನ

ಮುಖ್ಯ ಶಿಕ್ಷಕ ಸುರೇಶಪ್ಪ
    ಭದ್ರಾವತಿ, ಜೂ. ೧೫: ಹಳೇನಗರದ ಭೂತನಗುಡಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಸುರೇಶಪ್ಪ ಅನಾರೋಗ್ಯದ ಹಿನ್ನಲೆಯಲ್ಲಿ ಮಂಗಳವಾರ ನಿಧನ ಹೊಂದಿದರು.
    ನಗರ ಆಹಾರ ಶಾಖೆಯ ಆಹಾರ ನಿರೀಕ್ಷಕಿ, ಪತ್ನಿ ಡಿ. ಗಾಯತ್ರಿ ದೇವಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಹೊಂದಿದ್ದರು. ಸುರೇಶಪ್ಪ ಮುಖ್ಯ ಶಿಕ್ಷಕರಾಗಿ ಉತ್ತಮವಾಗಿ ಸೇವೆ ಸಲ್ಲಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದರು. ಇವರ ನಿಧನಕ್ಕೆ ಕರ್ನಾಟಕ ರಾಜ್ಯ ಪಡಿತರ ವಿತರಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿದ್ದಲಿಂಗಯ್ಯ, ನಗರ ಆಹಾರ ಇಲಾಖೆ ನಿರೀಕ್ಷಕ ಎ.ಟಿ ಬಸವರಾಜ, ಗೋದಾಮು ವ್ಯವಸ್ಥಾಪಕ ಶ್ರೀಕಂಠೇಗೌಡ, ನಾಗರಾಜ್, ವಾಗೀಶ್, ಸತೀಶ್ ಹಾಗು ತಾಲೂಕು ಪಡಿತರ ನ್ಯಾಯಬೆಲೆ ಅಂಗಡಿಗಳ ಮಾಲೀಕರು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.

ಸಂಕಷ್ಟದ ಸಮಯದಲ್ಲಿ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಿ : ಎಸ್. ರುದ್ರೇಗೌಡ

ಭದ್ರಾವತಿ ಹಳೇನಗರದ ಪತ್ರಿಕಾಭವನದಲ್ಲಿ ಸೇವಾ ಭಾರತಿ ಹಾಗು ಪ್ರೇರಣಾ ಎಜ್ಯುಕೇಷನ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಕರ್ತರಿಗೆ, ದಿನಪತ್ರಿಕೆ ವಿತರಕರು ಹಾಗು ಏಜೆಂಟರ್‌ಗಳಿಗೆ ದಿನಸಿ ಸಾಮಾಗ್ರಿ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಜೂ. ೧೫: ಕಷ್ಟಕಾಲದಲ್ಲಿ ಸ್ಪಂದಿಸುವ ಮನೋಭಾವನೆಯೊಂದಿಗೆ ಕೈಗೊಳ್ಳುವ ಸೇವಾ ಕಾರ್ಯಗಳು ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತವೆ. ಈ ನಿಟ್ಟಿನಲ್ಲಿ ಕೊರೋನಾ ಪರಿಣಾಮದಿಂದಾಗಿ ಎದುರಾಗಿರುವ ಸಂಕಷ್ಟದ ಸಮಯದಲ್ಲಿ ಸೇವಾ ಭಾರತಿ ಹಾಗು ಪ್ರೇರಣಾ ಎಜ್ಯುಕೇಷನ್ ಟ್ರಸ್ಟ್ ವತಿಯಿಂದ ಕೈಗೊಳ್ಳುತ್ತಿರುವ ಮಹಾತ್ಕಾರ್ಯಕ್ಕೆ ಯಾರಿಂದಲೂ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡ ಹೇಳಿದರು.
     ಅವರು ಹಳೇನಗರದ ಪತ್ರಿಕಾಭವನದಲ್ಲಿ ಸೇವಾ ಭಾರತಿ ಹಾಗು ಪ್ರೇರಣಾ ಎಜ್ಯುಕೇಷನ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಕರ್ತರಿಗೆ, ದಿನಪತ್ರಿಕೆ ವಿತರಕರು ಹಾಗು ಏಜೆಂಟರ್‌ಗಳಿಗೆ ದಿನಸಿ ಸಾಮಾಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
     ಸಂಸದ ಬಿ.ವೈ ರಾಘವೇಂದ್ರ ಕುಟುಂಬ ಸದಸ್ಯರು ಮುನ್ನಡೆಸಿಕೊಂಡು ಹೋಗುತ್ತಿರುವ ಪ್ರೇರಣಾ ಎಜ್ಯುಕೇಷನ್ ಟ್ರಸ್ಟ್ ಹಾಗು ಸೇವಾ ಭಾರತಿ ಸಂಸ್ಥೆಗಳು ಹಲವಾರು ವರ್ಷಗಳಿಂದ ಅನೇಕ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿವೆ. ಆದರೆ ಇದೀಗ ಕೈಗೊಳ್ಳುತ್ತಿರುವ ದಿನಸಿ ಸಾಮಗ್ರಿಗಳ ವಿತರಣೆ ಬಹುದೊಡ್ಡ ಕಾರ್ಯವಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ೮ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು ಸುಮಾರು ೩೫ ಸಾವಿರ ಮಂದಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ. ಅದರಲ್ಲೂ ಗುಣಮಟ್ಟದ ದಿನಸಿ ಸಾಮಾಗ್ರಿಗಳನ್ನು ವಿತರಿಸುತ್ತಿರುವುದು ವಿಶೇಷವಾಗಿದೆ. ಸಂಕಷ್ಟದ ಸಮಯದಲ್ಲೂ ನಾವು ನಿಮ್ಮ ಜೊತೆಗೆ ಇದ್ದೇವೆ ಎಂಬ ಸಂದೇಶ ಈ ಮೂಲಕ ತಿಳಿಸಲಾಗುತ್ತಿದೆ. ಇದು ಇತರರಿಗೆ ಸ್ಪೂರ್ತಿದಾಯಕವಾಗಬೇಕು. ಇದೆ ರೀತಿ ಹಲವಾರು ಸಂಘ-ಸಂಸ್ಥೆಗಳು ಎಲೆಮರೆ ಕಾಯಿಯಂತೆ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಈ ರೀತಿಯ ಸೇವಾ ಸಂಸ್ಥೆಗಳನ್ನು ಗುರುತಿಸಿ ಆ ಸಂಸ್ಥೆಗಳ ಸೇವಾ ಕಾರ್ಯಗಳಲ್ಲಿ ಭಾಗಿಯಾಗಬೇಕೆಂದು ಕರೆ ನೀಡಿದರು.
    ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಪ್ರಧಾನ ಕಾರ್ಯದರ್ಶಿಗಳಾದ ಚನ್ನೇಶ್, ಹನುಮಂತನಾಯ್ಕ್, ನಗರಸಭಾ ಸದಸ್ಯೆ ಶಶಿಕಲಾ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ, ಮುಖಂಡರಾದ ಬಿ.ಎಸ್ ನಾರಾಯಣಪ್ಪ, ಅವಿನಾಶ್, ಚಂದ್ರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವೃತ್ತಕ್ಕೆ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಹೆಸರನ್ನು ನಾಮಕರಣಗೊಳಿಸಿ

ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ
     ಭದ್ರಾವತಿ ಜೂ. ೧೫ :  ನಗರದ ಬಿ.ಎಚ್ ರಸ್ತೆ ಲೋಯರ್ ಹುತ್ತಾ ರೈಲ್ವೆ ಕೆಳ ಸೇತುವೆ ಬಳಿ ನಗರಸಭೆ ವತಿಯಿಂದ ವೃತ್ತ ನಿರ್ಮಿಸಿ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಹೆಸರನ್ನು ನಾಮಕರಣ ಮಾಡುವಂತೆ ತಾಲೂಕು ಆಟೋ ಚಾಲಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಲಕ್ಷಣ ಹಾಗು ಸ್ನೇಹಿತರು  ಒತ್ತಾಯಿಸಿದ್ದಾರೆ.
    ತಾಲೂಕಿನಾದ್ಯಂತ ಅನೇಕ ಆದರ್ಶಗಳ ವ್ಯಕ್ತಿಗಳ ಹೆಸರಿನಲ್ಲಿ ವೃತ್ತಗಳಿದ್ದು, ಮಹಾನ್ ಸಾಧಕರ ಆದರ್ಶಗಳು ನಮ್ಮೆಲ್ಲರಿಗೂ ದಾರಿದೀಪವಾಗಿವೆ. ಈ  ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ಸಹ ಒಬ್ಬರಾಗಿದ್ದಾರೆ. ಇವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಗರದ ಬಿ.ಎಚ್ ರಸ್ತೆ ಲೋಯರ್ ಹುತ್ತಾ ರೈಲ್ವೆ ಕೆಳ ಸೇತುವೆ ಬಳಿ ನಗರಸಭೆ ವತಿಯಿಂದ ವೃತ್ತ ನಿರ್ಮಿಸಿ ಶ್ರೀಗಳ ಪುತ್ಥಳಿಯನ್ನು ಆನಾವರಣಗೊಳಿಸುವ ಜೊತೆಗೆ ಅವರ ಹೆಸರನ್ನು ನಾಮಪಕರಣಗೊಳಿಸುವಂತೆ ನಗರಸಭೆ ಆಡಳಿತಕ್ಕೆ ಕೋರಲಾಗಿದೆ.

Monday, June 14, 2021

ನಗರಸಭೆ ಎಲ್ಲಾ ವಾರ್ಡ್‌ಗಳಿಗೂ ೧೫ನೇ ಹಣಕಾಸು ಯೋಜನೆಯಡಿ ಅನುದಾನ ಬಿಡುಗೊಳಿಸಿ

ಜೆಡಿಎಸ್ ಪಕ್ಷದ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪಗೆ ಮನವಿ


ಭದ್ರಾವತಿ  ನಗರಸಭೆ ಎಲ್ಲಾ ವಾರ್ಡ್‌ಗಳಿಗೂ ೨೦೨೧-೨೨ನೇ ಸಾಲಿನ ೧೫ನೇ ಹಣಕಾಸು ಅನುದಾನ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಜಾತ್ಯಾತೀತ ಜನತಾದಳ ವತಿಯಿಂದ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರ ಅವರಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಜೂ. ೧೪: ನಗರಸಭೆ ಎಲ್ಲಾ ವಾರ್ಡ್‌ಗಳಿಗೂ ೨೦೨೧-೨೨ನೇ ಸಾಲಿನ ೧೫ನೇ ಹಣಕಾಸು ಅನುದಾನ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಜಾತ್ಯಾತೀತ ಜನತಾದಳ ವತಿಯಿಂದ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರ ಅವರಿಗೆ ಮನವಿ ಸಲ್ಲಿಸಲಾಯಿತು. 
ನಗರಸಭೆ ೩೫ ವಾರ್ಡ್‌ಗಳ ಪೈಕಿ ೩೪ ವಾರ್ಡ್‌ಗಳಿಗೆ ಚುನಾವಣೆ ನಡೆದಿದ್ದು, ಕೊರೋನಾ ಸೋಂಕು ನಿಯಂತ್ರಣಕ್ಕೆ ನಗರಸಭೆ ಅಧಿಕಾರಿಗಳೊಂದಿಗೆ ನೂತನ ಸದಸ್ಯರು ಸಹ ಶಕ್ತಿ ಮೀರಿ ಶ್ರಮಿಸುತ್ತಿದ್ದಾರೆ. ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಸಹ ವಿಳಂಬವಾಗಿರುತ್ತದೆ. ಈ ನಡುವೆ ಶಾಸಕರು ಅಧಿಕಾರಿಗಳ ಮೇಲೆ ಒತ್ತಡ ತರುವ ಮೂಲಕ ಕಾಂಗ್ರೆಸ್ ಪಕ್ಷದ ನಗರಸಭಾ ಸದಸ್ಯರ ವಾರ್ಡ್‌ಗಳಿಗೆ ಮಾತ್ರ ಅನುದಾನ ಬಿಡುಗಡೆಗೊಳಿಸುವಂತೆ ೧೫ನೇ ಹಣಕಾಸು ಯೋಜನೆಯಡಿ ಸುಮಾರು ೭೫೦ ಲಕ್ಷ ರು. ಕ್ರಿಯಾ ಯೋಜನೆ ರೂಪಿಸುವ ಮೂಲಕ ಅನುಮೋದನೆಗೆ ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗಿದೆ. ಶಾಸಕರ ಮಲತಾಯಿ ಧೋರಣೆಯನ್ನು ಖಂಡಿಸುವ ಜೊತೆಗೆ ತಕ್ಷಣ ಈ ಕ್ರಿಯಾ ಯೋಜನೆಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಲಾಗಿದೆ.
   ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಸರಿಯಲ್ಲ ತಕ್ಷಣ ನಗರಸಭೆ ಎಲ್ಲಾ ೩೫ ವಾರ್ಡ್‌ಗಳಿಗೂ ಸಮಾನವಾಗಿ ಅನುದಾನ ಬಿಡುಗಡೆಗೊಳಿಸುವ ಜೊತೆಗೆ ನ್ಯಾಯ ಒದಗಿಸಿಕೊಡುವಂತೆ ಕೋರಲಾಗಿದೆ.
ಪಕ್ಷದ ಮುಖಂಡರಾದ ಶಾರದಾ ಅಪ್ಪಾಜಿ ಹಾಗು ಪಕ್ಷದ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯ ಎಸ್. ಮಣಿಶೇಖರ್, ನಗರಸಭಾ ಸದಸ್ಯರಾದ ಬಸವರಾಜ ಬಿ. ಆನೇಕೊಪ್ಪ, ರೇಖಾ .ಟಿ, ಮಂಜುಳಾ ಸುಬ್ಬಣ್ಣ, ಜಯಶೀಲ, ವಿಜಯ, ಪ್ರೇಮಾ, ಕೋಟೇಶ್ವರರಾವ್, ಉದಯ್‌ಕುಮಾರ್, ರೂಪಾವತಿ, ಪಲ್ಲವಿ, ಸವಿತಾ, ಆರ್. ಮೋಹನ್‌ಕುಮಾರ್, ಮುಖಂಡರಾದ ಗುಣಶೇಖರ್, ಸುರೇಶ್, ಪ್ರಕಾಶ್, ಉಮೇಶ್, ದಿಲೀಪ್, ವೆಂಕಟೇಶ್, ಅಶೋಕ್‌ಕುಮಾರ್ ಉಜ್ಜನಿಪುರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.   

ನರೇಗಾ ಯೋಜನೆಯಡಿ ಸಮರ್ಪಕವಾಗಿ ಉದ್ಯೋಗ ನೀಡಿ

ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಸಮರ್ಪಕವಾಗಿ ಉದ್ಯೋಗ ನೀಡುವಂತೆ ಆಗ್ರಹಿಸಿ ಸೋಮವಾರ ಭದ್ರಾವತಿ ತಾಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿ ಅಭಿವೃದ್ಧಿ ಅಧಿಕಾರಿ ಸಿ. ಕುಮಾರ್ ಅವರಿಗೆ ತಾಲೂಕು ಬಂಜಾರ ಯುವಕರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಜೂ. ೧೪: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಸಮರ್ಪಕವಾಗಿ ಉದ್ಯೋಗ ನೀಡುವಂತೆ ಆಗ್ರಹಿಸಿ ಸೋಮವಾರ ತಾಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿ ಅಭಿವೃದ್ಧಿ ಅಧಿಕಾರಿ ಸಿ. ಕುಮಾರ್ ಅವರಿಗೆ ತಾಲೂಕು ಬಂಜಾರ ಯುವಕರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.
   ಕೊರೋನಾ ಲಾಕ್‌ಡೌನ್ ಹಿನ್ನಲೆಯಲ್ಲಿ ಗ್ರಾಮೀಣ ಪ್ರದೇಶದ ನಿವಾಸಿಗಳು ತೀರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ನಡುವೆ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಸರಿಯಾಗಿ ಉದ್ಯೋಗ ನೀಡುತ್ತಿಲ್ಲ. ಜೂ.೯ ರಿಂದ ೧೨ರ ವರೆಗೆ ಕೇವಲ ೪ ದಿನ ಮಾತ್ರ ಉದ್ಯೋಗ ನೀಡಲಾಗಿದೆ. ಈ ಹಿಂದೆ ೭ ದಿನ ಕೆಲಸ ನೀಡಿರುವುದಿಲ್ಲ. ಇದರಿಂದಾಗಿ ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಹಿನ್ನಲೆಯಲ್ಲಿ ಸಮರ್ಪಕವಾಗಿ ಉದ್ಯೋಗ ನೀಡುವಂತೆ ಆಗ್ರಹಿಸಲಾಯಿತು.
    ಗ್ರಾಮ ಪಂಚಾಯಿತಿ ಸದಸ್ಯರಾದ ಬಿ. ಆನಂದ್, ಶೋಭಾ ಬಾಯಿ, ತಾಂಡ ಅಭಿವೃದ್ಧಿ ನಿಗಮದ ತಾಲೂಕು ಸಂಪನ್ಮೂಲ ವ್ಯಕ್ತಿ ಹೇಮಂತ್, ಮುಖಂಡರಾದ ಧರ್ಮನಾಯಕ್, ಬಂಜಾರ ಯುವಕರ ಸಂಘದ ಅಧ್ಯಕ್ಷ ಕೃಷ್ಣ ನಾಯಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Sunday, June 13, 2021

ಕೊರೋನಾ ಲಸಿಕಾ ಕೇಂದ್ರಕ್ಕೆ ಚಾಲನೆ


ಭದ್ರಾವತಿ ನಗರಸಭೆ ವಾರ್ಡ್ ನಂ.೩೧, ೩೨, ೩೩ ಮತ್ತು ೩೪ರ ನಿವಾಸಿಗಳಿಗೆ ಅನುಕೂಲವಾಗುವಂತೆ ನ್ಯೂಟೌನ್ ಉಂಬ್ಳೆಬೈಲು ರಸ್ತೆಯಲ್ಲಿರುವ ಸೇಂಟ್ ಚಾರ್ಲ್ಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ ಕೊರೋನಾ ಲಸಿಕಾ ಕೇಂದ್ರ ತೆರೆಯಲಾಗಿದ್ದು, ಭಾನುವಾರ ೪ ವಾರ್ಡ್‌ಗಳ ನಗರಸಭಾ ಸದಸ್ಯರು ಸೇರಿದಂತೆ ಸ್ಥಳೀಯರು ಚಾಲನೆ ನೀಡಿದರು.
    ಭದ್ರಾವತಿ, ಜೂ. ೧೩: ನಗರಸಭೆ ವಾರ್ಡ್ ನಂ.೩೧, ೩೨, ೩೩ ಮತ್ತು ೩೪ರ ನಿವಾಸಿಗಳಿಗೆ ಅನುಕೂಲವಾಗುವಂತೆ ನ್ಯೂಟೌನ್ ಉಂಬ್ಳೆಬೈಲು ರಸ್ತೆಯಲ್ಲಿರುವ ಸೇಂಟ್ ಚಾರ್ಲ್ಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ ಕೊರೋನಾ ಲಸಿಕಾ ಕೇಂದ್ರ ತೆರೆಯಲಾಗಿದ್ದು, ಭಾನುವಾರ ೪ ವಾರ್ಡ್‌ಗಳ ನಗರಸಭಾ ಸದಸ್ಯರು ಸೇರಿದಂತೆ ಸ್ಥಳೀಯರು ಚಾಲನೆ ನೀಡಿದರು.
     ನಗರಸಭೆ ಒಟ್ಟು ೩೫ ವಾರ್ಡ್‌ಗಳ ವ್ಯಾಪ್ತಿಯಲ್ಲಿ ೧೨ ಲಸಿಕಾ ಕೇಂದ್ರಗಳನ್ನು ನಗರಸಭೆ ವತಿಯಿಂದ ತೆರೆಯಲಾಗಿದ್ದು, ಈ ಪೈಕಿ ಇದು ಸಹ ಒಂದಾಗಿದೆ. ನಗರಸಭಾ ಸದಸ್ಯರಾದ ಪಲ್ಲವಿ ದಿಲೀಪ್, ಸವಿತಾ ಉಮೇಶ್,  ಆರ್. ಮೋಹನ್‌ಕುಮಾರ್, ಲತಾ ಚಂದ್ರಶೇಖರ್, ಮುಖಂಡರಾದ  ಎನ್. ರಾಮಕೃಷ್ಣ   ಸೇರಿದಂತೆ ಸ್ಥಳೀಯ ಮುಖಂಡರು ಇನ್ನಿತರರು ಉಪಸ್ಥಿತರಿದ್ದರು.
     ಹೊಸೂರು ಸಿದ್ದಾಪುರ ಜಿವಿಎಚ್‌ಪಿಎಸ್ ಶಾಲೆಯ ಸಹ ಶಿಕ್ಷಕರಾದ ಕೆ. ನಾಗರಾಜ ಮತ್ತು ಇಮ್ರಾನ್ ಆಲಿ, ಭಂಡಾರಹಳ್ಳಿ ಜಿಎಚ್‌ಪಿಎಸ್ ಶಾಲೆಯ ಸಹ ಶಿಕ್ಷಕ ರವಿಕುಮಾರ್, ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಲತಾಮಣಿ ಅವರನ್ನು ಸಿಬ್ಬಂದಿಗಳಾಗಿ ನೇಮಿಸಲಾಗಿದೆ.

ಬಾರ್ ಬೆಂಡ್, ಪೈಂಟರ್ ಕಾರ್ಮಿಕರಿಗೆ ಟೂಲ್ ಕಿಟ್ ವಿತರಣೆ

ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್ ತಮ್ಮ ಗೃಹ ಕಛೇರಿಯಲ್ಲಿ ಭಾನುವಾರ ಬಾರ್ ಬೆಂಡ್ ಮತ್ತು ಪೈಂಟರ್ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ನೀಡಲಾಗುವ ವೃತಿ ಕೌಶಲ್ಯಗಳಿಗೆ ಅಗತ್ಯವಿರುವ ಪರಿಕರಗಳನ್ನೊಳಗೊಂಡ ಟೂಲ್ ಕಿಟ್‌ಗಳನ್ನು ವಿತರಿಸಿದರು.
      ಭದ್ರಾವತಿ, ಜೂ. ೧೩:  ಶಾಸಕ ಬಿ.ಕೆ ಸಂಗಮೇಶ್ವರ್ ತಮ್ಮ ಗೃಹ ಕಛೇರಿಯಲ್ಲಿ ಭಾನುವಾರ ಬಾರ್ ಬೆಂಡ್ ಮತ್ತು ಪೈಂಟರ್ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ನೀಡಲಾಗುವ ವೃತಿ ಕೌಶಲ್ಯಗಳಿಗೆ ಅಗತ್ಯವಿರುವ ಪರಿಕರಗಳನ್ನೊಳಗೊಂಡ ಟೂಲ್ ಕಿಟ್‌ಗಳನ್ನು ವಿತರಿಸಿದರು.
    ಅಸಂಘಟಿತ ಕಾರ್ಮಿಕರ ವಲಯದ ವ್ಯಾಪ್ತಿಯಲ್ಲಿ ಬರುವ ಬಾರ್ ಬೆಂಡ್ ಮತ್ತು ಪೈಂಟರ್ ಕಾರ್ಮಿಕರಿಗೆ ಸರ್ಕಾರ ವಿವಿಧ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದು, ಇದೀಗ ವೃತ್ತಿ ಕೌಶಲ್ಯಗಳಿಗೆ ನೆರವಾಗುವಂತೆ ಅಗತ್ಯ ಪರಿಕರಗಳನ್ನು ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ವಿತರಿಸುವ ಮೂಲಕ ಕಾರ್ಮಿಕರಲ್ಲಿ ಆತ್ಮಸ್ಥೈರ್ಯ ಮೂಡಿಸಿದೆ.
   ಕಾರ್ಮಿಕ ನಿರೀಕ್ಷಕಿ ಮಮತಾಜ್ ಬೇಗಂ, ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್ ಬಾಬು, ಜಿಲ್ಲಾ ಉಪಾಧ್ಯಕ್ಷ ಚಂದ್ರು, ತಾಲೂಕು ಕಾರ್ಯದರ್ಶಿ ಅಭಿಲಾಷ್, ಸಂಘಟನಾ ಕಾರ್ಯದರ್ಶಿ ಸುಬ್ಬಣ್ಣ, ಶಂಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.