Saturday, August 14, 2021

ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆ ಸ್ಥಾನಮಾನ : ಗೋವಿಂದ ಕಾರಜೋಳ


ನೂತನ ಜಲಸಂಪನ್ಮೂಲ ಖಾತೆ ಸಚಿವ ಗೋವಿಂದ ಕಾರಜೋಳ ಅವರು ಶನಿವಾರ ಭದ್ರಾವತಿ ತಾಲೂಕಿನ ಭದ್ರಾ ನದಿ ಜಲಾಶಯದಲ್ಲಿ ಬಾಗಿನ ಅರ್ಪಿಸಿ ಮಾತನಾಡಿದರು.
     ಭದ್ರಾವತಿ, ಆ. ೧೪: ಬಯಲು ಸೀಮೆ ಮಧ್ಯ ಕರ್ನಾಟಕ ಭಾಗಕ್ಕೆ ನೀರು ಒದಗಿಸುವ ಮಹಾತ್ವಕಾಂಕ್ಷೆ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಣೆ ಮಾಡಲು ತಾತ್ವಿಕ ಒಪ್ಪಿಗೆ ಸಿಕ್ಕಿದೆ. ಇನ್ನೊಂದು ಸಭೆ ನಡೆಯುವುದು ಬಾಕಿ ಇದ್ದು, ಈ ಸಂಬಂಧ ತಕ್ಷಣ ಅನುಮೋದನೆ ಸಿಗಲಿದೆ ಎಂದು ನೂತನ ಜಲಸಂಪನ್ನೂಲ ಖಾತೆ ಸಚಿವ ಗೋವಿಂದ ಕಾರಜೋಳ ಹೇಳಿದರು.
    ಅವರು ಶನಿವಾರ ಭದ್ರಾ ನದಿಗೆ ತಾಲೂಕಿನ ಭದ್ರಾ ಜಲಾಶಯದಲ್ಲಿ ಬಾಗಿನ ಅರ್ಪಿಸಿ ಮಾತನಾಡಿದರು. ಮಧ್ಯ ಕರ್ನಾಟಕದ ಬಹು ನಿರೀಕ್ಷಿತ ಯೋಜನೆಯಾಗಿರುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಈಗಾಗಲೇ ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ವೀಕ್ಷಣೆ ನಡೆಸಿ ತಾಂತ್ರಿಕ ವರದಿ ಸಿದ್ದಪಡಿಸಿ ಸಲ್ಲಿಸಲು ತಜ್ಞರ ತಂಡವನ್ನು ಕಳುಹಿಸಿಕೊಟ್ಟಿತ್ತು. ಈ ತಂಡ ವರದಿಯನ್ನು ಸಲ್ಲಿಸಿದೆ. ಈ ಯೋಜನೆಗೆ ಇದುವರೆಗೂ ಸುಮಾರು ೪,೭೦೦ ಕೋ. ರು. ಅಧಿಕ ಹಣ ವ್ಯಯಮಾಡಲಾಗಿದೆ.  ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿಸುವ ಕನಸು ಈಡೇರಲಿದೆ ಎಂದರು.
       ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ತುಮಕೂರು ಜಿಲ್ಲೆಗಳ ರೈತರಿಗೆ ಅನುಕೂಲವಾಗುವ ಈ ಯೋಜನೆಗೆ ಇನ್ನೂ ೨೧,೪೫೦ ಕೋ. ರು. ವ್ಯಯವಾಗುವ ನಿರೀಕ್ಷೆ ಇದೆ. ಈ  ಯೋಜನೆಯಿಂದ ೨.೨೫ ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಲಭಿಸಲಿದೆ ಎಂದರು.
     ಸಚಿವ ಭೈರತಿ ಬಸವರಾಜ್, ಸಂಸದರಾದ ಬಿ.ವೈ ರಾಘವೇಂದ್ರ, ಜಿ.ಎಂ ಸಿದ್ದೇಶ್ವರ, ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ, ಎಸ್.ಎ ರವೀಂದ್ರನಾಥ್, ಎಸ್. ರುದ್ರೇಗೌಡ, ಕಾಡ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಸೂಡಾ ಅಧ್ಯಕ್ಷ ಎಸ್.ಎಸ್ ಜ್ಯೋತಿ ಪ್ರಕಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸ್ವಾತಂತ್ರ್ಯ ಒಂದು ದಿನದ ಸಂಭ್ರಮಾಚರಣೆಗೆ ಸೀಮಿತವಲ್ಲ : ಬಿ.ಎನ್ ರಾಜು

ಭದ್ರಾವತಿ ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಿಂಭಾಗದಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದ ಮುಂಭಾಗ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಹಮ್ಮಿಕೊಳ್ಳಲಾಗಿರುವ ಪ್ರತಿಭಟನಾ ಸತ್ಯಾಗ್ರಹದಲ್ಲಿ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಮಾತನಾಡಿದರು.
     ಭದ್ರಾವತಿ, ಆ. ೧೪: ದೇಶಕ್ಕೆ ಸ್ವಾತಂತ್ರ್ಯ ಲಭಿಸಿರುವುದು ಒಂದು ದಿನದ ಸಂಭ್ರಮಾಚರಣೆಗೆ ಮಾತ್ರ ಸೀಮಿತವಾಗಬಾರದು.  ಬದಲಿಗೆ ಈ ದೇಶದ ಪ್ರತಿಯೊಬ್ಬ ನಾಗರೀಕ ಸಹ ಗೌರವಯುತವಾಗಿ, ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಾಣಗೊಳ್ಳುವವರೆಗೂ ಸಾಗಬೇಕಾಗಿದೆ ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಹೇಳಿದರು.
     ಅವರು ಶನಿವಾರ ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಿಂಭಾಗದಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದ ಮುಂಭಾಗ ಸಮಿತಿ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಹಮ್ಮಿಕೊಳ್ಳಲಾಗಿರುವ ಪ್ರತಿಭಟನಾ ಸತ್ಯಾಗ್ರಹ ನೇತೃತ್ವ ವಹಿಸಿ ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಸುಮಾರು ೭೫ ವರ್ಷ ಕಳೆದರೂ ಸಹ ಮಧ್ಯಮ ಹಾಗು ಬಡ ವರ್ಗದವರು ಗೌರವಯುತವಾಗಿ, ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ. ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಪ್ರತಿಯೊಬ್ಬರಿಗೂ ಬದಕಲು ಅವಶ್ಯಕವಿರುವ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
    ವಿಶ್ವದಾದ್ಯಂತ ಕೋವಿಡ್-೧೯ ಮಹಾಮಾರಿಯಿಂದ ಮಧ್ಯಮ ಹಾಗು ಬಡ ವರ್ಗದವರು ಪ್ರಾಣ ಉಳಿಸಿಕೊಳ್ಳಲು ಹೆಣಕಾಡುತ್ತಿದ್ದಾರೆ. ಅಲ್ಲದೆ ಲಾಕ್‌ಡೌನ್ ಪರಿಣಾಮ ಬದುಕು ತೀರ ಸಂಕಷ್ಟಕ್ಕೆ ಸಾಗಿದೆ. ಈ ನಡುವೆ ಸೋಂಕಿನಿಂದ ಮೃತಪಟ್ಟವರ ಕುಟುಂಬಕ್ಕೆ ದೇಶದ ಸರ್ವೋಚ್ಛ ನ್ಯಾಯಾಲಯ ಪರಿಹಾರ ನೀಡಲು ಸೂಚಿಸಿದೆ. ಆದರೂ ಸಹ ಇದುವರೆಗೂ ಪರಿಹಾರ ನೀಡದಿರುವುದು ಸರಿಯಲ್ಲ. ತಕ್ಷಣ ಪ್ರತಿ ಕುಟುಂಬಕ್ಕೆ ೧೦ ಲಕ್ಷ ರು. ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
     ವಿಶ್ವದಾದ್ಯಂತ ಸಂವಿಧಾನ ಶಿಲ್ಪಿ, ವಿಶ್ವಮಾನವ ಡಾ. ಬಿ.ಆರ್ ಅಂಬೇಡ್ಕರ್ ಅವರನ್ನು ಗೌರವದಿಂದ ಕಾಣಲಾಗುತ್ತಿದೆ. ಆದರೆ ಭಾರತ ದೇಶದಲ್ಲಿ ಮಾತ್ರ ಅವರನ್ನು ಗೌರವಯುತವಾಗಿ ಕಾಣುತ್ತಿಲ್ಲ. ಇದಕ್ಕೆ ಉದಾಹರಣೆ ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಅಂಬೇಡ್ಕರ್ ಭವನ ಸಾಕ್ಷಿಯಾಗಿದೆ. ೨೦೧೭ರಲ್ಲಿ ಆರಂಭಗೊಂಡ ಕಾಮಗಾರಿ ಇಂದಿಗೂ ಮುಕ್ತಾಯಗೊಂಡಿಲ್ಲ. ಪ್ರಸ್ತುತ ಭವನ ಕಾಮಗಾರಿಗೆ ೨.೫ ಕೋ.ರು. ಬಿಡುಗಡೆಯಾಗಿದ್ದು, ಉಳಿದಂತೆ ೩ ರಿಂದ ೪ ಕೋ. ರು. ಅವಶ್ಯಕತೆ ಇದೆ. ತಕ್ಷಣ ಹಣ ಬಿಡುಗಡೆಗೊಳಿಸಿ ಉದ್ಘಾಟನೆ ನೆರವೇರಿಸುವಂತೆ ಆಗ್ರಹಿಸಿದರು.
    ಆಹಾರ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡದೆ ವಿನಾಕಾರಣ ಆದಾಯ ಮಿತಿ ನೆಪದಲ್ಲಿ ಏಕಾಏಕಿ ಬಡವರ ಪಡಿತರ ಚೀಟಿಗಳನ್ನು ರದ್ದುಪಡಿಸಿರುವುದು ಸರಿಯಲ್ಲ. ಇದೆ ರೀತಿ ಕ್ಷೇತ್ರದಲ್ಲಿ ಹಲವಾರು ತಿಂಗಳುಗಳಿಂದ ಅರ್ಹ ಫಲಾನುಭವಿಗಳಿಗೆ ವೃದ್ಧಾಪ್ಯ ವೇತನ, ವಿಧವಾ ವೇತನ ಮತ್ತು ಅಂಗವಿಕಲರ ವೇತನ ಬಿಡುಗಡೆಗೊಳಿಸದೆ ವಜಾಗೊಳಿಸಲಾಗಿದೆ. ಇದರಿಂದಾಗಿ ಫಲಾನುಭವಿಗಳು ತಾಲೂಕು ಕಛೇರಿ ಅಲೆದಾಡುವಂತಾಗಿದೆ. ತಕ್ಷಣ ತಪ್ಪಿತಸ್ಥ ಅಧಿಕಾರಿಗಳನ್ನು ಸೇವೆಯಿಂದ ಅಮಾನತ್ತುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳುವುದು ಸೇರಿದಂತೆ ಇನ್ನೂ ಹಲವಾರು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
    ಸಮಿತಿ ಕಾರ್ಯಾಧ್ಯಕ್ಷ ಐ.ಎಲ್ ಅರುಣ್‌ಕುಮಾರ್, ಉಪಾಧ್ಯಕ್ಷರಾದ ಬ್ರಹ್ಮಲಿಂಗಯ್ಯ, ಎಂ.ವಿ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಅಕ್ರಮ್ ಖಾನ್, ಸಂಚಾಲಕ ಶೇಖರ್, ಸಾಮಾಜಿಕ ಹೋರಾಟಗಾರ ಶಿವಕುಮಾರ್, ಜಯರಾಮ್, ನವೀನ್, ರಂಗಮ್ಮ, ನಾಗರತ್ನಮ್ಮ, ಜಯಮ್ಮ, ಸಂತಮ್ಮ, ಸಾವಿತ್ರಿ, ಗೀತಾ, ಕಮಲಮ್ಮ, ನೀಲಮ್ಮ, ಬಿ.ಟಿ ತಿಮ್ಮಯ್ಯ, ಆರ್. ರುದ್ರೇಶ್, ಮೇಘರಾಜ್, ಬಾಲರಾಜ್, ಭಾಗ್ಯಮ್ಮ, ಆರ್. ರಾಕೇಶ್ ಮತ್ತು ವಿದ್ಯಾ ಸೇರಿದಂತೆ ಇನ್ನಿತರರು ಪ್ರತಿಭಟನಾ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

Friday, August 13, 2021

ಆ.೧೪ರಂದು ಅಂಬೇಡ್ಕರ್ ಭವನ ಕಾಮಗಾರಿ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ



ಭದ್ರಾವತಿ, ಆ. ೧೩: ನಗರದ ಹೃದಯ ಭಾಗದಲ್ಲಿ ನಿರ್ಮಾಣಗೊಳ್ಳುತ್ತಿರುವ ಅಂಬೇಡ್ಕರ್ ಭವನ ಕಾಮಗಾರಿ ನಿರ್ಲಕ್ಷ್ಯ ಖಂಡಿಸಿ ಹಾಗು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಆ.೧೪ರಂದು ಬೆಳಿಗ್ಗೆ ೧೧ ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
     ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಿಂಭಾಗದಲ್ಲಿ ನಿರ್ಮಾಣಗೊಳ್ಳುತ್ತಿರುವ ಡಾ. ಬಿ.ಆರ್ ಅಂಬೇಡ್ಕರ್ ಭವನ ಮುಂಭಾಗದಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಪಿಂಚಣಿ ಅವ್ಯವಸ್ಥೆ, ಆದಾಯ ಮಿತಿಯೊಂದಿಗೆ ಬಡವರಿಗೆ ಪಡಿತರ ಚೀಟಿ ವಜಾಗೊಳಿಸಿರುವುದನ್ನು ಖಂಡಿಸಿ ಹಾಗು ಕೋವಿಡ್-೧೯ ಸೋಂಕಿನಿಂದ ಮೃತಪಟ್ಟವರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವಂತೆ ಹಾಗು ನಿವೇಶನ ರಹಿತ, ಭೂಮಿ ರಹಿತ ಬಡವರ ರಕ್ಷಣೆಗೆ ಆಗ್ರಹಿಸಲಾಗುವುದು.
    ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು, ರೈತರು, ಕಾರ್ಮಿಕರು ಸೇರಿದಂತೆ ಸಮಸ್ತ ನಾಗರೀಕರು ಕೋವಿಡ್-೧೯ರ ಮಾರ್ಗಸೂಚಿಗಳನ್ವಯ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ಶಿವಪಾರ್ವತಿದೇವಿ, ಶ್ರೀ ಬಸವೇಶ್ವರಸ್ವಾಮಿ ನೂತನ ದೇವಾಲಯ ಲೋಕಾರ್ಪಣೆ

ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಜರುಗಿದ ಭದ್ರಾವತಿ ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆ ೨ನೇ ತಿರುವಿನಲ್ಲಿ ನಿರ್ಮಾಣಗೊಂಡಿರುವ ಶ್ರೀ ಶಿವಪಾರ್ವತಿದೇವಿ ಅಮ್ಮನವರ ಹಾಗು ಶ್ರೀ ಬಸವೇಶ್ವರಸ್ವಾಮಿ ನೂತನ ದೇವಾಲಯ ಲೋಕಾರ್ಪಣೆ ಹಾಗು ವಿಗ್ರಹಗಳ ಪ್ರತಿಷ್ಠಾಪನೆ ಸಮಾರಂಭವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
     ಭದ್ರಾವತಿ, ಆ. ೧೩:  ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆ ೨ನೇ ತಿರುವಿನಲ್ಲಿ ನಿರ್ಮಾಣಗೊಂಡಿರುವ ಶ್ರೀ ಶಿವಪಾರ್ವತಿದೇವಿ ಅಮ್ಮನವರ ಹಾಗು ಶ್ರೀ ಬಸವೇಶ್ವರಸ್ವಾಮಿ ನೂತನ ದೇವಾಲಯ ಲೋಕಾರ್ಪಣೆ ಹಾಗು ವಿಗ್ರಹಗಳ ಪ್ರತಿಷ್ಠಾಪನೆ ಶುಕ್ರವಾರ ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ನೆರವೇರಿತು.
    ಶಾಸಕ ಬಿ.ಕೆ ಸಂಗಮೇಶ್ವರ್ ದೇವಸ್ಥಾನ ಲೋಕಾರ್ಪಣೆಗೊಳಿಸಿದರು. ಇದಕ್ಕೂ ಮೊದಲು ಧಾರ್ಮಿಕ ಆಚರಣೆಗಳು ಜರುಗಿದವು.  ಶ್ರೀ ಕ್ಷೇತ್ರ ಭದ್ರಗಿರಿ ಮುರುಗೇಶ್ ಸ್ವಾಮೀಜಿ ಉಪಸ್ಥಿತರಿದ್ದರು.
     ವೇದಿಕೆ ಕಾರ್ಯಕ್ರಮದಲ್ಲಿ ವಿಗ್ರಹ ದಾನಿಗಳಾದ ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರಗಳ ರಾಜ್ಯ ಸಂಯೋಜಕ ಪ್ರಭಾಕರ ಬೀರಯ್ಯ, ಶ್ರೀ ಮರುಳಸಿದ್ದೇಶ್ವರ ಜನಕಲ್ಯಾಣ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯ, ನೂತನ ದೇವಸ್ಥಾನ ಸಮಿತಿ ಅಧ್ಯಕ್ಷ ಶಿವಗಂಗಯ್ಯ, ಬಾರಂದೂರು ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಸಮಾಜ ಸೇವಕ, ಪೊಲೀಸ್ ಉಮೇಶ್ ಅವರಿಂದ ಅನ್ನಸಂತರ್ಪಣೆ ನೆರವೇರಿತು. ಪೂರ್ಣಿಮಾ ನಿರಂಜನ್ ಸ್ವಾಗತಿಸಿದರು. ನಾಗಲಕ್ಷ್ಮಿ ನಿರೂಪಿಸಿದರು.

ಆ.೧೬ರಂದು ಜೆಡಿಎಸ್ ಮುಖಂಡರಿಂದ ಬಾಗಿನ ಸಮರ್ಪಣೆ

    ಭದ್ರಾವತಿ, ಆ. ೧೩: ತಾಲೂಕಿನ ಜೀವನದಿ ಭದ್ರಾ ನದಿ ಜಲಾಶಯಕ್ಕೆ ಜಾತ್ಯಾತೀತ ಜನತಾದಳ ಮುಖಂಡರು ಆ.೧೬ರಂದು ಬೆಳಿಗ್ಗೆ ೧೧ ಗಂಟೆಗೆ ಶಾರದ ಅಪ್ಪಾಜಿ ನೇತೃತ್ವದಲ್ಲಿ ಗಂಗಾಪೂಜೆಯೊಂದಿಗೆ ಬಾಗಿನ ಸಮರ್ಪಿಸಲಿದ್ದಾರೆ.
    ಪಕ್ಷದ ವಿವಿಧ ಘಟಕಗಳ ಹಾಗು ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಸೇರಿದಂತೆ ಸಮಸ್ತ ನಾಗರೀಕರು ಕೋವಿಡ್-೧೯ ಪಾಲಿಸುವುದರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಪಕ್ಷದ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ ಕೋರಿದ್ದಾರೆ.

ನಗರದೆಲ್ಲೆಡೆ ನಾಗರಪಂಚಮಿ ಅದ್ದೂರಿ ಆಚರಣೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಜನ್ನಾಪುರ ಹಾಲಪ್ಪಶೆಡ್‌ನಲ್ಲಿರುವ ನಾಗರ ದೇವಸ್ಥಾನದಲ್ಲಿ ಭಕ್ತರು ಧಾರ್ಮಿಕ ಆಚರಣೆಗಳನ್ನು ನೆರವೇರಿಸುತ್ತಿರುವುದು.  
     ಭದ್ರಾವತಿ, ಆ. ೧೩: ನಗರದೆಲ್ಲೆಡೆ ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿ ಶುಕ್ರವಾರ ಅದ್ದೂರಿಯಾಗಿ ಜರುಗಿತು.
    ನಾಗರ ದೇವಸ್ಥಾನ, ನಾಗಬನ, ನಾಗರಕಟ್ಟೆ ಹಾಗು ವಿವಿಧ ದೇವಸ್ಥಾನಗಳಲ್ಲಿ ನಾಗರಪಂಚಮಿ ಅಂಗವಾಗಿ ನಾಗರ ಹುತ್ತಕ್ಕೆ ತುಪ್ಪದ ನೈವೇದ್ಯದೊಂದಿಗೆ ಹಾಲು ಎರೆಯಲಾಯಿತು. ಮಳೆ ಇಲ್ಲದ ಕಾರಣ ಭಕ್ತರು ಮನೆಗಳಿಂದ ಹೊರಬಂದು ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಂಡರು.
     ಕಳೆದ ವರ್ಷ ಕೋವಿಡ್-೧೯ ಸೋಂಕು ವ್ಯಾಪಕವಾಗಿ ವ್ಯಾಪಿಸಿದ್ದ ಹಿನ್ನಲೆಯಲ್ಲಿ ಆಚರಣೆ ಮೊಟಕುಗೊಂಡಿದ್ದು, ಈ ಬಾರಿ ೩ನೇ ಅಲೆ ಪ್ರಾರಂಭದ ಹಂತದಲ್ಲಿರುವ ಮುನ್ಸೂಚನೆ ಕಂಡು ಬರುತ್ತಿದೆ. ಆದರೂ ಸಹ ಭಕ್ತರು ಕೋವಿಡ್-೧೯ ಮಾರ್ಗಸೂಚಿಗಳನ್ನು ಪಾಲಿಸದೆ ಇರುವುದು ಕಂಡು ಬಂದಿತು.


ಭದ್ರಾವತಿ ನಗರಸಭೆ ವ್ಯಾಪ್ತಿಯ ಜನ್ನಾಪುರ ಕೆರೆ ಸಮೀಪದಲ್ಲಿರುವ ಶ್ರೀ ಅಶ್ವಥ್‌ಕಟ್ಟೆ ಮತ್ತು ಶ್ರೀ ನಾಗದೇವರ ಕಟ್ಟೆ ದೇವಸ್ಥಾನದಲ್ಲಿ ಭಕ್ತರು ಧಾರ್ಮಿಕ ಆಚರಣೆಗಳನ್ನು ನೆರವೇರಿಸುತ್ತಿರುವುದು.

ಮದ್ಯದಂಗಡಿಗಳಿಂದ ಸಾರ್ವಜನಿಕರಿಗೆ ತೊಂದರೆ : ಸ್ಥಳಾಂತರಕ್ಕೆ ಆಗ್ರಹಿಸಿ ಪ್ರತಿಭಟನೆ

ರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್‌ ನೇತೃತ್ವದಲ್ಲಿ  ತಹಸೀಲ್ದಾರ್, ಅಬಕಾರಿ, ರಕ್ಷಣಾ ಇಲಾಖೆಗೆ ಮನವಿ


ಭದ್ರಾವತಿ ಡೈರಿ ಸರ್ಕಲ್ ಬಳಿ ತೆರೆಯಲಾಗಿರುವ ಎರಡು ಮದ್ಯದಂಗಡಿಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಮಹಿಳಾ ಘಟಕದ   ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್‌ ನೇತೃತ್ವದಲ್ಲಿ  ಶುಕ್ರವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಆ. ೧೩: ನಗರದ ಡೈರಿ ಸರ್ಕಲ್ ಬಳಿ ತೆರೆಯಲಾಗಿರುವ ಎರಡು ಮದ್ಯದಂಗಡಿಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಮಹಿಳಾ ಘಟಕದ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
    ಪ್ರತಿಭಟನೆ ನೇತೃತ್ವ ವಹಿಸಿದ್ದ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಸೋಮಶೇಖರ್ ಮಾತನಾಡಿ, ಡೈರಿ ಸರ್ಕಲ್ ಅದರಲ್ಲೂ ಬಸ್ ನಿಲ್ದಾಣದ ಬಳಿಯೇ ಅನೇಕ ವರ್ಷಗಳಿಂದ ಎರಡು ಮದ್ಯದಂಗಡಿಗಳು ಕಾರ್ಯ ನಿರ್ವಹಿಸುತ್ತಿವೆ.
    ಸಮೀಪದಲ್ಲಿ ಆಯುರ್ವೇದಿಕ್ ಕಾಲೇಜು, ಡೈರಿ, ಕೆಎಸ್‌ಆರ್‌ಪಿ ಹಾಗು ಕೈಗಾರಿಕಾ ಪ್ರದೇಶವಿದ್ದು, ಪ್ರತಿದಿನ ಗಾರ್ಮೆಂಟ್ಸ್ ಕೆಲಸಕ್ಕೆ ಮಹಿಳೆಯರು, ಕಾಲೇಜು ವಿದ್ಯಾರ್ಥಿನಿಯರು, ಪ್ರಯಾಣಿಕರು ಇದೆ ರಸ್ತೆಯಲಿ ಓಡಾಡಬೇಕಾಗಿದೆ. ಈ ಮದ್ಯದಂಗಡಿಗಳಲ್ಲಿ ಮದ್ಯ ಸೇವನೆ ಮಾಡಲು ಬರುವವರಿಂದ ವಿನಾಕಾರಣ ತೊಂದರೆ ಎದುರಾಗಿದೆ. ಆಗಾಗ ಮದ್ಯಸೇವನೆ ಮಾಡುವವರ ನಡುವೆ ಗಲಾಟೆ ನಡೆದು ಆಶಾಂತಿ ವಾತಾವರಣ ನಿರ್ಮಾಣವಾಗುತ್ತಿದೆ. ಈ ಸಂಬಂಧ ಹಲವಾರು ಬಾರಿ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಮಾಡಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಕ್ಷಣ ಎರಡು ಮದ್ಯದಂಗಡಿಗಳನ್ನು ಬೇರೆಡೆಗೆ ಸ್ಥಳಾಂತರಬೇಕು. ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
   ತಹಸೀಲ್ದಾರ್ ಆರ್. ಪ್ರದೀಪ್ ಹಾಗು ಅಬಕಾರಿ ಸಬ್‌ಇನ್ಸ್‌ಪೆಕ್ಟರ್ ಮತ್ತು ನ್ಯೂಟೌನ್ ಪೊಲೀಸ್ ಠಾಣಾಧಿಕಾರಿ ಭಾರತಿ ಅವರಿಗೆ ಮನವಿ ಸಲ್ಲಿಸಲಾಯಿತು.
    ರಕ್ಷಣಾವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾರದ, ಉಪಾಧ್ಯಕ್ಷರಾದ ಅನಿತಾ, ಗೌರಮ್ಮ, ತಾಲೂಕು ಅಧ್ಯಕ್ಷೆ ಮಹೇಶ್ವರಿ, ಗೀತಾ, ರೂಪನಾರಾಯಣ, ಪದಾಧಿಕಾರಿಗಳಾದ ನಾಗರತ್ನ, ಶೋಭಾ, ಆಸ್ಮಿತ್‌ತಾಜ್, ಪದ್ಮಮ್ಮ, ಆಯುರ್ವೇದಿಕ ಕಾಲೇಜಿನ ಆಡಳಿತಾಧಿಕಾರಿ ಜಗದೀಶ್ ಹಿರೇಮಠ್, ಮುಖಂಡರಾದ ನಾರಾಯಣ ಐಹೊಳೆ, ಪೊಲೀಸ್ ಇಲಾಖೆಯ ಸೋಮಶೇಖರ್, ಪ್ರಶಾಂತ್, ಯಶವಂತ್, ನವೀನ್, ಮಾಯಣ್ಣ, ಬಾಲಕೃಷ್ಣ ಹಾಗು ವಿದ್ಯಾರ್ಥಿಗಳು, ಸ್ಥಳೀಯರು ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.