ನೂತನ ಜಲಸಂಪನ್ಮೂಲ ಖಾತೆ ಸಚಿವ ಗೋವಿಂದ ಕಾರಜೋಳ ಅವರು ಶನಿವಾರ ಭದ್ರಾವತಿ ತಾಲೂಕಿನ ಭದ್ರಾ ನದಿ ಜಲಾಶಯದಲ್ಲಿ ಬಾಗಿನ ಅರ್ಪಿಸಿ ಮಾತನಾಡಿದರು.
ಭದ್ರಾವತಿ, ಆ. ೧೪: ಬಯಲು ಸೀಮೆ ಮಧ್ಯ ಕರ್ನಾಟಕ ಭಾಗಕ್ಕೆ ನೀರು ಒದಗಿಸುವ ಮಹಾತ್ವಕಾಂಕ್ಷೆ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಣೆ ಮಾಡಲು ತಾತ್ವಿಕ ಒಪ್ಪಿಗೆ ಸಿಕ್ಕಿದೆ. ಇನ್ನೊಂದು ಸಭೆ ನಡೆಯುವುದು ಬಾಕಿ ಇದ್ದು, ಈ ಸಂಬಂಧ ತಕ್ಷಣ ಅನುಮೋದನೆ ಸಿಗಲಿದೆ ಎಂದು ನೂತನ ಜಲಸಂಪನ್ನೂಲ ಖಾತೆ ಸಚಿವ ಗೋವಿಂದ ಕಾರಜೋಳ ಹೇಳಿದರು.
ಅವರು ಶನಿವಾರ ಭದ್ರಾ ನದಿಗೆ ತಾಲೂಕಿನ ಭದ್ರಾ ಜಲಾಶಯದಲ್ಲಿ ಬಾಗಿನ ಅರ್ಪಿಸಿ ಮಾತನಾಡಿದರು. ಮಧ್ಯ ಕರ್ನಾಟಕದ ಬಹು ನಿರೀಕ್ಷಿತ ಯೋಜನೆಯಾಗಿರುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಈಗಾಗಲೇ ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ವೀಕ್ಷಣೆ ನಡೆಸಿ ತಾಂತ್ರಿಕ ವರದಿ ಸಿದ್ದಪಡಿಸಿ ಸಲ್ಲಿಸಲು ತಜ್ಞರ ತಂಡವನ್ನು ಕಳುಹಿಸಿಕೊಟ್ಟಿತ್ತು. ಈ ತಂಡ ವರದಿಯನ್ನು ಸಲ್ಲಿಸಿದೆ. ಈ ಯೋಜನೆಗೆ ಇದುವರೆಗೂ ಸುಮಾರು ೪,೭೦೦ ಕೋ. ರು. ಅಧಿಕ ಹಣ ವ್ಯಯಮಾಡಲಾಗಿದೆ. ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿಸುವ ಕನಸು ಈಡೇರಲಿದೆ ಎಂದರು.
ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ತುಮಕೂರು ಜಿಲ್ಲೆಗಳ ರೈತರಿಗೆ ಅನುಕೂಲವಾಗುವ ಈ ಯೋಜನೆಗೆ ಇನ್ನೂ ೨೧,೪೫೦ ಕೋ. ರು. ವ್ಯಯವಾಗುವ ನಿರೀಕ್ಷೆ ಇದೆ. ಈ ಯೋಜನೆಯಿಂದ ೨.೨೫ ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಲಭಿಸಲಿದೆ ಎಂದರು.
ಸಚಿವ ಭೈರತಿ ಬಸವರಾಜ್, ಸಂಸದರಾದ ಬಿ.ವೈ ರಾಘವೇಂದ್ರ, ಜಿ.ಎಂ ಸಿದ್ದೇಶ್ವರ, ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ, ಎಸ್.ಎ ರವೀಂದ್ರನಾಥ್, ಎಸ್. ರುದ್ರೇಗೌಡ, ಕಾಡ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಸೂಡಾ ಅಧ್ಯಕ್ಷ ಎಸ್.ಎಸ್ ಜ್ಯೋತಿ ಪ್ರಕಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment