Saturday, August 14, 2021

ಕುಸಿದು ಬೀಳುವ ಹಂತದಲ್ಲಿದೆ ಈ ಸೇತುವೆ : ದುರ್ಘಟನೆ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಿ

ಸಂಬಂಧಪಟ್ಟ ಇಲಾಖೆ ವಿರುದ್ಧ ಸ್ಥಳೀಯರ ಅಸಮಾಧಾನ


    * ಅನಂತಕುಮಾರ್
ಭದ್ರಾವತಿ, ಆ. ೧೪: ಇಲ್ಲಿನ ನಗರಸಭೆ ವಾರ್ಡ್ ನಂ.೩೧ರ ವ್ಯಾಪ್ತಿಯಲ್ಲಿ ಸೇತುವೆಯೊಂದು ಕುಸಿದು ಬೀಳುವ ಹಂತದಲ್ಲಿದ್ದರೂ ಸಹ ಸಂಬಂಧಪಟ್ಟ ಇಲಾಖೆಯವರು ಗಮನ ಹರಿಸದಿರುವುದು  ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.
    ವಾರ್ಡ್ ನಂ.೩೧ ಜಿಂಕ್‌ಲೈನ್ ಕೊಳಚೆ ಪ್ರದೇಶಕ್ಕೆ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆಯಿಂದ ಸಂಪರ್ಕಗೊಂಡಿರುವ ರಸ್ತೆಯಲ್ಲಿರುವ ಸೇತುವೆ ಮಳೆಯಿಂದಾಗಿ ಕುಸಿದು ಬೀಳುವ ಹಂತಕ್ಕೆ ತಲುಪಿದೆ. ಆದರೂ ಸಹ ಸಂಬಂಧಪಟ್ಟ ಇಲಾಖೆಯವರು ಗಮನ ಹರಿಸಿಲ್ಲ.
    ಇಲ್ಲಿ ಜನ್ನಾಪುರ ಕೆರೆ ನೀರು ಹರಿಯುತ್ತಿದ್ದು, ಜೊತೆಗೆ ವೀರಾಪುರ ಗ್ರಾಮದ ಕಡೆಯಿಂದ ಹರಿದು ಬರುವ ನೀರು ಸಹ ಸಂಪರ್ಕಗೊಂಡಿದೆ. ಈ ನೀರು ಮುಂದೆ ಭಂಡಾರಹಳ್ಳಿ, ಕವಲಗುಂದಿ ಮೂಲಕ ಭದ್ರಾನದಿಗೆ ಸೇರ್ಪಡೆಗೊಳ್ಳುತ್ತದೆ. ಈಗಾಗಲೇ ಸೇತುವೆ ಬಿಟ್ಟು ಡಾಂಬರ್ ರಸ್ತೆ ನಿರ್ಮಿಸಲಾಗಿದೆ. ಸೇತುವೆ ಮೇಲಿನ ಮಣ್ಣಿನ ರಸ್ತೆ ಮಳೆಯಿಂದಾಗಿ ಬಹುತೇಕ ಕುಸಿದಿದ್ದು, ಎರಡು ಬದಿಯ ತಡೆಗೋಡೆ ಸಹ ಶಿಥಿಲಗೊಂಡು ಮುರಿದು ಬಿದ್ದಿದೆ. ಆದರೂ ಸಹ ಈ ರಸ್ತೆ ಮೇಲೆ ವಾಹನಗಳು ಸಂಚರಿಸುತ್ತಿವೆ. 

ಸುಮಾರು ೨ ವರ್ಷಗಳಿಂದ ಈ ಸೇತುವೆ ಶಿಥಿಲಗೊಂಡು ಕುಸಿದು ಬೀಳುವ ಸ್ಥಿತಿಯಲ್ಲಿದ್ದು, ಈ ಹಿಂದೆ ಸೇತುವೆ ನಿರ್ಮಾಣಕ್ಕೆ ಮಂಜೂರಾಗಿದ್ದ ಹಣ ಬೇರೆ ಕಾಮಗಾರಿಗೆ ಬಳಸಿಕೊಳ್ಳಲಾಗಿದೆ. ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಧರ್ಮಪ್ಪ ಅವರಿಗೆ ತಕ್ಷಣ ಸೇತುವೆ ನಿರ್ಮಿಸಿಕೊಡುವಂತೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ. ಅಲ್ಲದೆ ಸ್ಥಳೀಯ ಶಾಸಕರ ಗಮನಕ್ಕೂ ಹಾಗು ಈ ಹಿಂದಿನ  ನಗರಸಭೆ ಪೌರಾಯುಕ್ತರಾಗಿದ್ದ ಮನೋಹರ್ ಅವರ ಗಮನಕ್ಕೂ ತರಲಾಗಿದೆ. ಆದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.
                                              - ಪಲ್ಲವಿ ದಿಲೀಪ್, ೩೧ನೇ ವಾರ್ಡ್ ನಗರಸಭಾ ಸದಸ್ಯರು, ಭದ್ರಾವತಿ.

  ಈ ರಸ್ತೆಯಲ್ಲಿ ಪುರಾಣ ಪ್ರಸಿದ್ದ ಶ್ರೀ ಮಾದೇಶ್ವರ ಸ್ವಾಮಿ ದೇವಸ್ಥಾನ, ಚೌಡೇಶ್ವರಿ ದೇವಸ್ಥಾನಗಳಿದ್ದು, ಜಿಂಕ್‌ಲೈನ್ ಮೂಲಕ ವೀರಾಪುರ, ಸಿರಿಯೂರು ಗ್ರಾಮಗಳಿಗೆ ಹಾಗು ಹುಲಿಬಂಡೆ ಸಿದ್ದೇಶ್ವರ ಸ್ವಾಮಿ ದೇವಸ್ಥಾನಗಳಿಗೆ ತೆರಳುವವರು ಈ ರಸ್ತೆ ಮೂಲಕವೇ ಸಾಗಬೇಕಾಗಿದೆ. ಅಲ್ಲದೆ ಹಬ್ಬದ ಹರಿದಿನಗಳಂದು ಜನದಟ್ಟಣೆ ಅಧಿಕವಾಗಿರುತ್ತದೆ. ಈ ಭಾಗದಲ್ಲಿ ಕೃಷಿ ಜಮೀನುಗಳಿದ್ದು, ರೈತರು ಸಹ ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ಈ ರಸ್ತೆ ಬೈಪಾಸ್ ರಸ್ತೆಗೆ ಸಂಪರ್ಕಗೊಂಡಿರುವುದರಿಂದ ದೂರದ ಊರುಗಳಿಂದ ನಗರ ವ್ಯಾಪ್ತಿಯ ಜನ್ನಾಪುರ, ಹುತ್ತಾಕಾಲೋನಿ, ನ್ಯೂಟೌನ್ ಭಾಗದ ಪ್ರದೇಶಗಳಿಗೆ ಬರುವ ಪ್ರಯಾಣಿಕರು ಸಹ ಇದೆ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ. ಈ ಹಿನ್ನೆಯಲ್ಲಿ ಸೇತುವೆ ಕುಸಿದು ಬೀಳುವ ಹಂತಕ್ಕೆ ತಲುಪಿದ್ದರೂ ಸಹ ಸಂಬಂಧಪಟ್ಟ ಇಲಾಖೆಯವರು ಗಮನ ಹರಿಸದಿರುವುದರಿಂದ ಸ್ಥಳೀಯರು ಅಸಮಾಧಾನಗೊಂಡಿದ್ದಾರೆ.
   ಒಂದೇ ವೇಳೆ ದುರ್ಘಟನೆಗಳು ಸಂಭವಿಸಿದ್ದಲ್ಲಿ ಸ್ಥಳೀಯರು ಸಿಡಿದೇಳುವುದು ಖಚಿತವಾಗಿದೆ. ಇದಕ್ಕೂ ಮೊದಲು ಸಂಬಂಧಪಟ್ಟ ಇಲಾಖೆಯವರು ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಬೇಕಾಗಿದೆ.  
    ಗ್ರಾಮೀಣ ಭಾಗದಲ್ಲಿ ಬಹುತೇಕ ಕಡೆ ಸೇತುವೆಗಳು ಇದೆ ಸ್ಥಿತಿಯನ್ನು ತಲುಪಿವೆ. ಕೇಂದ್ರ ಹಾಗು ರಾಜ್ಯ ಸರ್ಕಾರಗಳಿಂದ ರಸ್ತೆ ಹಾಗು ಸೇತುವೆ ಕಾಮಗಾರಿಗಳಿಗಾಗಿ ಸಾಕಷ್ಟು ಅನುದಾನ ಬಿಡುಗಡೆಯಾಗುತ್ತಿದೆ. ಆದರೂ ಸಹ ಸಮರ್ಪಕವಾಗಿ ರಸ್ತೆ ಹಾಗು ಸೇತುವೆ ಕಾಮಗಾರಿಗಳು ನಡೆಯುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.

No comments:

Post a Comment