Saturday, August 14, 2021

ಸ್ವಾತಂತ್ರ್ಯ ಒಂದು ದಿನದ ಸಂಭ್ರಮಾಚರಣೆಗೆ ಸೀಮಿತವಲ್ಲ : ಬಿ.ಎನ್ ರಾಜು

ಭದ್ರಾವತಿ ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಿಂಭಾಗದಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದ ಮುಂಭಾಗ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಹಮ್ಮಿಕೊಳ್ಳಲಾಗಿರುವ ಪ್ರತಿಭಟನಾ ಸತ್ಯಾಗ್ರಹದಲ್ಲಿ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಮಾತನಾಡಿದರು.
     ಭದ್ರಾವತಿ, ಆ. ೧೪: ದೇಶಕ್ಕೆ ಸ್ವಾತಂತ್ರ್ಯ ಲಭಿಸಿರುವುದು ಒಂದು ದಿನದ ಸಂಭ್ರಮಾಚರಣೆಗೆ ಮಾತ್ರ ಸೀಮಿತವಾಗಬಾರದು.  ಬದಲಿಗೆ ಈ ದೇಶದ ಪ್ರತಿಯೊಬ್ಬ ನಾಗರೀಕ ಸಹ ಗೌರವಯುತವಾಗಿ, ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಾಣಗೊಳ್ಳುವವರೆಗೂ ಸಾಗಬೇಕಾಗಿದೆ ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಹೇಳಿದರು.
     ಅವರು ಶನಿವಾರ ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಿಂಭಾಗದಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದ ಮುಂಭಾಗ ಸಮಿತಿ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಹಮ್ಮಿಕೊಳ್ಳಲಾಗಿರುವ ಪ್ರತಿಭಟನಾ ಸತ್ಯಾಗ್ರಹ ನೇತೃತ್ವ ವಹಿಸಿ ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಸುಮಾರು ೭೫ ವರ್ಷ ಕಳೆದರೂ ಸಹ ಮಧ್ಯಮ ಹಾಗು ಬಡ ವರ್ಗದವರು ಗೌರವಯುತವಾಗಿ, ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ. ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಪ್ರತಿಯೊಬ್ಬರಿಗೂ ಬದಕಲು ಅವಶ್ಯಕವಿರುವ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
    ವಿಶ್ವದಾದ್ಯಂತ ಕೋವಿಡ್-೧೯ ಮಹಾಮಾರಿಯಿಂದ ಮಧ್ಯಮ ಹಾಗು ಬಡ ವರ್ಗದವರು ಪ್ರಾಣ ಉಳಿಸಿಕೊಳ್ಳಲು ಹೆಣಕಾಡುತ್ತಿದ್ದಾರೆ. ಅಲ್ಲದೆ ಲಾಕ್‌ಡೌನ್ ಪರಿಣಾಮ ಬದುಕು ತೀರ ಸಂಕಷ್ಟಕ್ಕೆ ಸಾಗಿದೆ. ಈ ನಡುವೆ ಸೋಂಕಿನಿಂದ ಮೃತಪಟ್ಟವರ ಕುಟುಂಬಕ್ಕೆ ದೇಶದ ಸರ್ವೋಚ್ಛ ನ್ಯಾಯಾಲಯ ಪರಿಹಾರ ನೀಡಲು ಸೂಚಿಸಿದೆ. ಆದರೂ ಸಹ ಇದುವರೆಗೂ ಪರಿಹಾರ ನೀಡದಿರುವುದು ಸರಿಯಲ್ಲ. ತಕ್ಷಣ ಪ್ರತಿ ಕುಟುಂಬಕ್ಕೆ ೧೦ ಲಕ್ಷ ರು. ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
     ವಿಶ್ವದಾದ್ಯಂತ ಸಂವಿಧಾನ ಶಿಲ್ಪಿ, ವಿಶ್ವಮಾನವ ಡಾ. ಬಿ.ಆರ್ ಅಂಬೇಡ್ಕರ್ ಅವರನ್ನು ಗೌರವದಿಂದ ಕಾಣಲಾಗುತ್ತಿದೆ. ಆದರೆ ಭಾರತ ದೇಶದಲ್ಲಿ ಮಾತ್ರ ಅವರನ್ನು ಗೌರವಯುತವಾಗಿ ಕಾಣುತ್ತಿಲ್ಲ. ಇದಕ್ಕೆ ಉದಾಹರಣೆ ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಅಂಬೇಡ್ಕರ್ ಭವನ ಸಾಕ್ಷಿಯಾಗಿದೆ. ೨೦೧೭ರಲ್ಲಿ ಆರಂಭಗೊಂಡ ಕಾಮಗಾರಿ ಇಂದಿಗೂ ಮುಕ್ತಾಯಗೊಂಡಿಲ್ಲ. ಪ್ರಸ್ತುತ ಭವನ ಕಾಮಗಾರಿಗೆ ೨.೫ ಕೋ.ರು. ಬಿಡುಗಡೆಯಾಗಿದ್ದು, ಉಳಿದಂತೆ ೩ ರಿಂದ ೪ ಕೋ. ರು. ಅವಶ್ಯಕತೆ ಇದೆ. ತಕ್ಷಣ ಹಣ ಬಿಡುಗಡೆಗೊಳಿಸಿ ಉದ್ಘಾಟನೆ ನೆರವೇರಿಸುವಂತೆ ಆಗ್ರಹಿಸಿದರು.
    ಆಹಾರ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡದೆ ವಿನಾಕಾರಣ ಆದಾಯ ಮಿತಿ ನೆಪದಲ್ಲಿ ಏಕಾಏಕಿ ಬಡವರ ಪಡಿತರ ಚೀಟಿಗಳನ್ನು ರದ್ದುಪಡಿಸಿರುವುದು ಸರಿಯಲ್ಲ. ಇದೆ ರೀತಿ ಕ್ಷೇತ್ರದಲ್ಲಿ ಹಲವಾರು ತಿಂಗಳುಗಳಿಂದ ಅರ್ಹ ಫಲಾನುಭವಿಗಳಿಗೆ ವೃದ್ಧಾಪ್ಯ ವೇತನ, ವಿಧವಾ ವೇತನ ಮತ್ತು ಅಂಗವಿಕಲರ ವೇತನ ಬಿಡುಗಡೆಗೊಳಿಸದೆ ವಜಾಗೊಳಿಸಲಾಗಿದೆ. ಇದರಿಂದಾಗಿ ಫಲಾನುಭವಿಗಳು ತಾಲೂಕು ಕಛೇರಿ ಅಲೆದಾಡುವಂತಾಗಿದೆ. ತಕ್ಷಣ ತಪ್ಪಿತಸ್ಥ ಅಧಿಕಾರಿಗಳನ್ನು ಸೇವೆಯಿಂದ ಅಮಾನತ್ತುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳುವುದು ಸೇರಿದಂತೆ ಇನ್ನೂ ಹಲವಾರು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
    ಸಮಿತಿ ಕಾರ್ಯಾಧ್ಯಕ್ಷ ಐ.ಎಲ್ ಅರುಣ್‌ಕುಮಾರ್, ಉಪಾಧ್ಯಕ್ಷರಾದ ಬ್ರಹ್ಮಲಿಂಗಯ್ಯ, ಎಂ.ವಿ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಅಕ್ರಮ್ ಖಾನ್, ಸಂಚಾಲಕ ಶೇಖರ್, ಸಾಮಾಜಿಕ ಹೋರಾಟಗಾರ ಶಿವಕುಮಾರ್, ಜಯರಾಮ್, ನವೀನ್, ರಂಗಮ್ಮ, ನಾಗರತ್ನಮ್ಮ, ಜಯಮ್ಮ, ಸಂತಮ್ಮ, ಸಾವಿತ್ರಿ, ಗೀತಾ, ಕಮಲಮ್ಮ, ನೀಲಮ್ಮ, ಬಿ.ಟಿ ತಿಮ್ಮಯ್ಯ, ಆರ್. ರುದ್ರೇಶ್, ಮೇಘರಾಜ್, ಬಾಲರಾಜ್, ಭಾಗ್ಯಮ್ಮ, ಆರ್. ರಾಕೇಶ್ ಮತ್ತು ವಿದ್ಯಾ ಸೇರಿದಂತೆ ಇನ್ನಿತರರು ಪ್ರತಿಭಟನಾ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

No comments:

Post a Comment