ಸೋಮವಾರ, ಆಗಸ್ಟ್ 16, 2021

೭ ಸಾವಿರ ಕಟ್ಟಡ ಕಾರ್ಮಿಕರಿಗೆ ಇನ್ನೂ ದಿನಸಿ ಸಾಮಗ್ರಿ ಬಂದಿಲ್ಲ

ಶಾಸಕ ಬಿ.ಕೆ ಸಂಗಮೇಶ್ವರ್ ಅಸಮಾಧಾನ



ಭದ್ರಾವತಿ ತರೀಕೆರೆ ರಸ್ತೆಯಲ್ಲಿರುವ ಶ್ರೀ ವಳ್ಳುವರ್ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ‍್ಸ್ ಸೆಂಟ್ರಲ್ ಯೂನಿಯನ್ ವತಿಯಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ದಿನಸಿ ಸಾಮಗ್ರಿ ವಿತರಣೆ ಕಾರ್ಯಕ್ರಮವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.   ಮಾತನಾಡಿದರು.  
ಭದ್ರಾವತಿ, ಆ. ೧೬:  ಕೋವಿಡ್-೧೯  ಲಾಕ್ ಡೌನ್ ಹಿನ್ನೆಲೆಯಲ್ಲಿ  ಸಂಕಷ್ಟಕ್ಕೆ ಒಳಗಾಗಿರುವ ತಾಲ್ಲೂಕಿನಲ್ಲಿರುವ ಕಟ್ಟಡ ಕಾರ್ಮಿಕರಿಗೆ ರಾಜ್ಯ ಸರ್ಕಾರದ ವತಿಯಿಂದ ನೆರವಿನ ಹಸ್ತವಾಗಿ ನೀಡಲಾಗುತ್ತಿರುವ ಆಹಾರ ಸಾಮಗ್ರಿ ಸಮರ್ಪಕವಾಗಿ ತಲುಪಿಲ್ಲ ಎಂದು ಶಾಸಕ ಬಿ ಕೆ ಸಂಗಮೇಶ್ವರ್ ಅಸಮಧಾನ ವ್ಯಕ್ತಪಡಿಸಿದರು.
ಅವರು ಸೋಮವಾರ ನಗರದ ತರೀಕೆರೆ ರಸ್ತೆಯಲ್ಲಿರುವ ಶ್ರೀ ವಳ್ಳುವರ್ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ‍್ಸ್ ಸೆಂಟ್ರಲ್ ಯೂನಿಯನ್ ವತಿಯಿಂದ  ಹಮ್ಮಿಕೊಳ್ಳಲಾಗಿದ್ದ ದಿನಸಿ ಸಾಮಗ್ರಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದರು.  
ತಾಲೂಕಿನಲ್ಲಿ ಸುಮಾರು ೧೪ ಸಾವಿರ ಕಟ್ಟಡ ಕಾರ್ಮಿಕರಿದ್ದು, ಈ ಪೈಕಿ ಕೇವಲ ೫ ಸಾವಿರ ಕಾರ್ಮಿಕರಿಗೆ ಮಾತ್ರ ದಿನಸಿ ಸಾಮಗ್ರಿಗಳನ್ನು ವಿತರಿಸಲಾಗಿದೆ. ಉಳಿದ ಕಾರ್ಮಿಕರಿಗೆ ದಿನಸಿ ಸಾಮಗ್ರಿ ವಿತರಿಸುವಂತೆ ಒತ್ತಾಯಿಸಿದ ಪರಿಣಾಮ ಇದೀಗ ಸುಮಾರು ೨ ಸಾವಿರ ಕಾರ್ಮಿಕರಿಗೆ ದಿನಸಿ ಸಾಮಗ್ರಿಗಳನ್ನು ಕಳುಹಿಸಿಕೊಡಲಾಗಿದೆ. ಇನ್ನೂ ಸುಮಾರು ೭ ಸಾವಿರ ಕಾರ್ಮಿಕರಿಗೆ ಇದುವರೆಗೂ ಆಹಾರ ಸಾಮಗ್ರಿ ತಲುಪದಿರುವುದು ವಿಷಾದನೀಯ ಬೆಳವಣಿಗೆ ಯಾಗಿದೆ ಎಂದರು.
ಕಟ್ಟಡ ಕಾರ್ಮಿಕರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಕಡ್ಡಾಯವಾಗಿ ಗುರುತಿನ ಚೀಟಿಗಳನ್ನು  ಮಾಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ವಹಿಸದೇ ಗುರುತಿನ ಚೀಟಿ ಇಲ್ಲದವರು ತಕ್ಷಣ ಗುರುತಿನ ಚೀಟಿ ಇಲಾಖೆಯಿಂದ ಪಡೆದುಕೊಳ್ಳುವಂತೆ ಮನವಿ ಮಾಡಿದರು.  
ತಹಸೀಲ್ದಾರ್ ಆರ್. ಪ್ರದೀಪ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ನಗರಸಭಾ ಸದಸ್ಯರಾದ ಮಣಿ, ಜಾರ್ಜ್, ಸಂಘದ ಅಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ನಾರಾಯಣಸ್ವಾಮಿ, ಕಾರ್ಯಾಧ್ಯಕ್ಷ ಅಭಿಲಾಷ್, ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್‌ಬಾಬು, ಶಿವಮೊಗ್ಗ ಜಿಲ್ಲಾ ನಗರಾಧ್ಯಕ್ಷ ಮಣಿ, ಅಂತೋಣಿ, ಗೌರವಾಧ್ಯಕ್ಷ ಅಂತೋಣಿ ಕ್ರೂಸ್, ಸಲಹೆಗಾರ ಶಿವಣ್ಣಗೌಡ, ಜಿ. ಸುರೇಶ್, ಮನೋಹರ್, ಕೃಷ್ಣ,  ನಾಗೇಂದ್ರರೆಡ್ಡಿ, ಮಂಜುನಾಥ್, ಶ್ರೀನಿವಾಸ್ ಮತ್ತು ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.




ಸೆ.೩ಕ್ಕೆ ವಾರ್ಡ್ ನಂ.೨೯ರ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಹಿತಾ ನಂಜಪ್ಪ ಆಯ್ಕೆ

ಭದ್ರಾವತಿ ನಗರಸಭೆ ೨೯ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿಯಾಗಿ ನ್ಯಾಯವಾದಿ ಲೋಹಿತಾ ನಂಜಪ್ಪ ಆಯ್ಕೆಯಾಗಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು.
    ಭದ್ರಾವತಿ, ಆ. ೧೬: ನಗರಸಭೆ ವಾರ್ಡ್.೨೯ಕ್ಕೆ ಸೆ.೩ರಂದು ನಡೆಯಲಿರುವ ಚುನಾವಣೆಗೆ ನ್ಯಾಯವಾದಿ ಲೋಹಿತಾ ನಂಜಪ್ಪ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.
    ಜನ್ನಾಪುರ ನಿವಾಸಿ, ನಗರದ ಪ್ರಸಿದ್ದ ನ್ಯಾಯವಾದಿಗಳಲ್ಲಿ ಒಬ್ಬರಾಗಿದ್ದ ದಿವಂಗತ ಎ.ಬಿ ನಂಜಪ್ಪ ಅವರ ಪತ್ನಿ ಲೋಹಿತಾ ನಂಜಪ್ಪ ಸಹ ನ್ಯಾಯವಾದಿಯಾಗಿದ್ದು, ನೋಟರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ ತಾಲೂಕು ಒಕ್ಕಲಿಗರ ಸಂಘ, ಹಳೇನಗರದ ಮಹಿಳಾ ಸೇವಾ ಸಮಾಜ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಇದೀಗ ಶಾಸಕ ಬಿ.ಕೆ ಸಂಗಮೇಶ್ವರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮೂಲಕ ವಾರ್ಡಿನ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.  
     ಚುನಾವಣಾ ಆಯೋಗ ನಗರಸಭೆ ೩೫ ವಾರ್ಡ್‌ಗಳಿಗೆ ಏಪ್ರಿಲ್‌ನಲ್ಲಿ ಚುನಾವಣೆ ಘೋಷಿಸಿತ್ತು. ವಾರ್ಡ್ ನಂ. ೨೯ರಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಸಿ ಶೃತಿ ಮಂಜುನಾಥ್ ನಾಮಪತ್ರ ಸಲ್ಲಿಸಿದ್ದರು. ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾಗ ಹೃದಯಾಘಾತದಿಂದ ಮೃತಪಟ್ಟಿದ್ದರು. ಈ ಹಿನ್ನಲೆಯಲ್ಲಿ ಆಯೋಗ ಚುನಾವಣೆಯನ್ನು ರದ್ದುಗೊಳಿಸಿತ್ತು.
ಇದೀಗ ಪುನಃ ಚುನಾವಣೆ ಘೋಷಣೆಯಾಗಿದ್ದು, ಸೋಮವಾರ ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಿದ್ದಾರೆ. ನಾಮಪತ್ರ ಸಲ್ಲಿಸಲು ಆ.೨೩ ಹಾಗು ನಾಮಪತ್ರ ಹಿಂಪಡೆಯಲು ಆ. ೨೬ ಕೊನೆಯ ದಿನವಾಗಿದೆ. ಸೆ.೩ರಂದು ಮತದಾನ ನಡೆಯಲಿದ್ದು, ಸೆ.೬ರಂದು ಮತ ಎಣಿಕೆ ನಡೆಯಲಿದೆ.
       ಈಗಾಗಲೇ ೩೪ ವಾರ್ಡ್‌ಗಳ ಪೈಕಿ ಕಾಂಗ್ರೆಸ್ ಅತಿ ಹೆಚ್ಚು ೧೮ ಸ್ಥಾನಗಳನ್ನು, ಜೆಡಿಎಸ್ ೧೧ ಸ್ಥಾನಗಳನ್ನು ಮತ್ತು ಬಿಜೆಪಿ ೪ ಸ್ಥಾನಗಳನ್ನು ಪಡೆದುಕೊಂಡಿದ್ದು,  ಓರ್ವ ಪಕ್ಷೇತರ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಈ ವಾರ್ಡ್ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎನ್ನಲಾಗಿದ್ದು, ಉಳಿದಂತೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಪ್ರತಿಷ್ಠೆಗಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕಾಗಿದೆ.

ನ್ಯಾಯಕ್ಕಾಗಿ, ಬಡವರಿಗಾಗಿ ಹೋರಾಟ ನಡೆಸುವವರಿಗೆ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ಪೀಪಲ್ ಲಿಬರೇಷನ್ (ಬಿ ಪಿ ಎಲ್) ನೂತನ ಸಂಘ ಹಾಗು ೭೫ನೇ ಸ್ವಾತ್ರ್ಯೋತ್ಸವ ಸಮಾರಂಭವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
    ಭದ್ರಾವತಿ, ಆ. ೧೬: ನ್ಯಾಯಕ್ಕಾಗಿ, ಬಡವರಿಗಾಗಿ ಹೋರಾಟ ನಡೆಸುವವರಿಗೆ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧ ಎಂದು ಶಾಸಕ ಬಿ ಕೆ ಸಂಗಮೇಶ್ವರ್ ಹೇಳಿದರು.
    ಅವರು ನ್ಯೂಟೌನ್ ಭದ್ರಾವತಿ ಪೀಪಲ್ ಲಿಬರೇಷನ್(ಬಿಪಿಎಲ್) ನೂತನ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ಅಧಿಕಾರಿಗಳು, ರಾಜಕಾರಣಿಗಳು ಯಾರೇ ಆಗಿರಲಿ ತಪ್ಪು ಮಾಡುವವರ ವಿರುದ್ಧ ಹೋರಾಟ ನಡೆಸಿ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ  ಶ್ರಮಿಸಬೇಕು. ಅಸಹಾಯಕರು, ನಿರ್ಗತಿಕರು, ಬಡವರಿಗೆ ನೆರವಾಗಬೇಕು. ಸಂಘದ ಸದಸ್ಯರೆಲ್ಲರೂ ಒಟ್ಟಾಗಿ ಮುನ್ನಡೆಯಬೇಕೆಂದರು.
    ಕೊರೋನಾ ಸಂದರ್ಭದಲ್ಲಿ ಅಸಹಾಯಕರು, ನಿರ್ಗತಿಕರು ಹಾಗು ಬಡವರ ಹಸಿವನ್ನು ನೀಗಿಸುವಲ್ಲಿ ಸಂಘದ ಸದಸ್ಯರೆಲ್ಲರೂ ಒಟ್ಟಾಗಿ ನಡೆಸಿದ ಸೇವಾ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
    ಸಂಘದ ಗೌರವಾಧ್ಯಕ್ಷ ಎಸ್.ಕೆ ಸುಧೀಂದ್ರ ಮಾತನಾಡಿ, ಸಂಘದ ಮೂಲ ಉದ್ದೇಶ ನಿರ್ಗತಿಕರು, ಅಸಹಾಯಕರು ಹಾಗೂ ಬಡವರಿಗೆ ನೆರವಾಗಬೇಕೆಂಬುದಾಗಿದೆ. ಸದಸ್ಯರೆಲ್ಲರೂ ಬಡವರ್ಗದವರೇ ಆಗಿದ್ದು, ಇಲ್ಲಿ ಯಾವುದೇ ರೀತಿಯ ಹಣದ ವಹಿವಾಟು ಇಲ್ಲ. ಹೋರಾಟದ ಮೂಲಕ ನ್ಯಾಯ ಒದಗಿಸಿಕೊಡುವುದು. ಸರ್ಕಾರದ ಸೌಲಭ್ಯಗಳು ನಿಜವಾದ ಫಲಾನುಭವಿಗಳಿಗೆ ತಲುಪಿಸುವುದು ಸೇರಿದಂತೆ ಹಲವಾರು ಉದ್ದೇಶಗಳನ್ನಿಟ್ಟುಕೊಂಡು ಸಂಘವನ್ನು ಸ್ಥಾಪಿಸಲಾಗಿದೆ ಎಂದರು.  
       ಪತ್ರಕರ್ತ ಸುರೇಶ್ ಮಾತನಾಡಿ, ಇಂದು ಅನ್ಯಾಯಗಳ ವಿರುದ್ಧ ಪ್ರಶ್ನಿಸುವ ಮನೋಭಾವ ಕಣ್ಮರೆಯಾಗುತ್ತಿದೆ. ಇದರಿಂದ  ಭ್ರಷ್ಟಾಚಾರಗಳು ಹೆಚ್ಚಾಗುತ್ತಿರುವುದು ವಿಪರ್ಯಾಸದ ಸಂಗತಿ. ಯಾವುದನ್ನೂ ಸಹ ಪ್ರಶ್ನಿಸದ ಕಾರಣ ಇಂದು ನಾವುಗಳು ವಿಐಎಸ್‌ಎಲ್ ಮತ್ತು ಎಂಪಿಎಂ  ಕಾರ್ಖಾನೆಗಳ ಯಂತ್ರಗಳು ಸ್ಥಗಿತಗೊಂಡು ಉದ್ಯೋಗವಿಲ್ಲದೆ ಸಂಕಷ್ಟದಲ್ಲಿ ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಸಂಘ ಹೆಸರಿಗೆ ತಕ್ಕಂತೆ ಹೋರಾಟದಲ್ಲೂ ಕೂಡ ಮುಂಚೂಣಿಯಲ್ಲಿರಬೇಕೆಂದರು.
ಸಂಘದ ಅಧ್ಯಕ್ಷ ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕರು ಮಾರಿಯಮ್ಮ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಕುಪ್ಪಸ್ವಾಮಿ,  ಬ್ಲಾಕ್ ಕಾಂಗ್ರೆಸ್ ಸಮಿತಿ ಸಾಮಾಜಿಕ ಜಾಲತಾಣ ತಾಲೂಕು ಅಧ್ಯಕ್ಷ  ಸದಾಶಿವಮೂರ್ತಿ, ನಗರಸಭಾ ಸದಸ್ಯ ಕೆ. ಸುದೀಪ್ ಕುಮಾರ್,  ಮುಖಂಡ ನರಸಿಂಹಮೂರ್ತಿ, ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಲತಾಮಣಿ  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಸಂಘದ ಕಾರ್ಯಾಧ್ಯಕ್ಷ ಎಂ ರವಿಕುಮಾರ್, ಉಪಾಧ್ಯಕ್ಷರಾದ ಸಂಪತ್ ಕುಮಾರ್, ಜಿ. ಗೋವಿಂದ, ಪ್ರಧಾನ ಕಾರ್ಯದರ್ಶಿ ಶ್ಯಾಮುವೇಲ್, ಕಾರ್ಯದರ್ಶಿ ಎಂ.ಸಿ ಸುನೀಲ್ ಕುಮಾರ್, ಸಂಘಟನಾ ಕಾರ್ಯದರ್ಶಿ ಲೋಕೇಶ್, ಸಹ ಕಾರ್ಯದರ್ಶಿಗಳಾದ ರವೀಂದ್ರ, ಅಜಂತ ಕುಮಾರ್, ಖಜಾಂಚಿ ಎ.ವಿ ಮುರಳಿಕೃಷ್ಣ ಹಾಗು ಸದಸ್ಯರಾದ ಮುತ್ತುಕುಮಾರನ್ ಮಾಯಪ್ಪ, ಶಂಕರ್,  ಕರುಣಾನಿಧಿ,  ನವೀನ್,  ಪ್ರಶಾಂತ್,  ಶ್ರೀನಿವಾಸ್, ವೆಂಕಟೇಶ್,  ಶ್ರೀಕಾಂತ್, ಸಂಜೀವರೆಡ್ಡಿ, ಅಭಿಲಾಶ್, ಯೋಗೇಶ್,  ಹರ್ಷ,  ಸಂದೀಪ, ಅನಿಲ್,  ಸತೀಶ್, ಸುಬ್ಬು,  ಮಂಜುನಾಥ್, ರಾಬರ್ಟ್, ಯೋಹಾನ್,  ಮೋಹನ್  ಮತ್ತು ರಜಾಲಿ ಬೇಗ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಭಾನುವಾರ, ಆಗಸ್ಟ್ 15, 2021

ಪ್ರಕೃತಿಯೊಂದಿಗೆ ಜೊತೆ ಜೊತೆಯಲ್ಲಿ ಸಾಗೋಣ, ಕೊರೋನಾ ವಿರುದ್ಧ ಹೋರಾಡೋಣ

೭೫ನೇ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಆರ್. ಪ್ರದೀಪ್  


ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೭೫ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
   ಭದ್ರಾವತಿ, ಆ. ೧೫ : ಪ್ರಕೃತಿಯ ವಿರುದ್ಧ ನಾವುಗಳು ಸಾಗುತ್ತಿರುವ ಪರಿಣಾಮ ಇಂದು ಸಂಕಷ್ಟ ಎದುರಿಸುವಂತಾಗಿದ್ದು, ಇದಕ್ಕೆ ಉದಾಹರಣೆ ಕೊರೋನಾ ಮಹಾಮಾರಿ ಎಂಬುದನ್ನು ನಾವು ಮರೆಯಬಾರದು. ಭವಿಷ್ಯದಲ್ಲಿ ನಾವೆಲ್ಲರೂ ಬದುಕಬೇಕಾದರೆ ಪ್ರಕೃತಿಯೊಂದಿಗೆ ಜೊತೆ ಜೊತೆಯಲ್ಲಿ ಸಾಗಬೇಕೆಂದು ತಹಸೀಲ್ದಾರ್ ಆರ್ . ಪ್ರದೀಪ್ ಹೇಳಿದರು.
      ಅವರು ಭಾನುವಾರ ಹಳೇನಗರದ ಕನಕಮಂಟಪ ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ  ಹಮ್ಮಿಕೊಳ್ಳಲಾಗಿದ್ದ ೭೫ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
      ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಮಹನೀಯರು ಪಾಲ್ಗೊಂಡಿದ್ದರು. ಅವರೆಲ್ಲರ ಹೋರಾಟದ ಪರಿಶ್ರಮದ ಫಲವಾಗಿ ನಾವೆಲ್ಲರೂ ಇಂದು ನೆಮ್ಮದಿಯಿಂದ ಬದುಕುವಂತಾಗಿದೆ. ಇಂತಹ ಮಹನೀಯರನ್ನು ನಾವೆಲ್ಲರೂ ನೆನಪು ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
       ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಹಲವಾರು ಸಮಸ್ಯೆಗಳು ಉಲ್ಬಣಗೊಂಡಿವೆ. ಮನುಷ್ಯರ ದುರಾಸೆಯ ಫಲವಾಗಿ ಪ್ರಕೃತಿ ನಾಶಗೊಳ್ಳುತ್ತಿದೆ. ಪ್ರಕೃತಿಗೆ ವಿರುದ್ಧವಾಗಿ ನಾವುಗಳು ಸಾಗುತ್ತಿದ್ದೇವೆ. ಇದರಿಂದಾಗಿ ಸಂಕಷ್ಟ ಎದುರಿಸುವಂತಾಗಿದೆ. ಮಹಾಮಾರಿ ಕೊರೋನಾ ವಿರುದ್ಧ ನಾವೆಲ್ಲರೂ ಹೋರಾಟ ನಡೆಸಬೇಕಾಗಿದೆ. ಈ ನಡುವೆ ತಾಲೂಕಿನಲ್ಲಿ ಈ ಬಾರಿ ಸಹ ಉತ್ತಮವಾಗಿ ಮಳೆಯಾಗುವ ಮೂಲಕ ನಮ್ಮೆಲ್ಲರ ಜೀವನದಿ ಭದ್ರೆ ಪೂರ್ಣಗೊಂಡಿದ್ದು, ನೆಮ್ಮದಿಯಿಂದ ಬದುಕುವಂತಾಗಿದೆ ಎಂದರು.
      ಇದಕ್ಕೂ ಮೊದಲು ಧ್ವಜಾರೋಹಣ ನೆರವೇರಿಸಿ ವಂದನೆ ಸ್ವೀಕರಿಸಿದರು. ಶಾಸಕ ಬಿ ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಿದ್ದರು.  ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್,  ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ,  ನಗರಸಭೆ ಪೌರಾಯುಕ್ತ ಕೆ. ಪರಮೇಶ್, ತಾಲೂಕು  ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ದಬಸಪ್ಪ, ನಗರಸಭಾ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಕೊರೋನಾ  ಸಂದರ್ಭದಲ್ಲಿ  ವಾರಿಯರ್ಸ್‌ಗಳಾಗಿ ಸೇವೆ ಸಲ್ಲಿಸಿರುವ ತರುಣ ಭಾರತಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಡಾ. ಎಂ.ಎಚ್ ವಿದ್ಯಾಶಂಕರ್,  ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ಸಹಾಯಕ ನೀಲೇಶ್‌ರಾಜ್ ಸೇರಿದಂತೆ ಇನ್ನಿತರ ರನ್ನು ಸನ್ಮಾನಿಸಿ ಗೌರವಿಸಲಾಯಿತು.    

ಭದ್ರಾವತಿ ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಪ್ರಸಕ್ತ ಸಾಲಿನ ಪ್ರವೇಶಾತಿ ಆರಂಭ


ಶನಿವಾರ, ಆಗಸ್ಟ್ 14, 2021

ಅಡಕೆ ಮರ ಬಿದ್ದು ೪ ವರ್ಷದ ಮಗು ಸಾವು

ಭದ್ರಾವತಿ, ಆ. ೧೪: ಮನೆ ಮುಂದೆ ಆಟವಾಡುತ್ತಿದ್ದ ೪ ವರ್ಷದ ಮಗುವಿನ ಮೇಲೆ ಅಡಕೆ ಮರ ಬಿದ್ದ ಪರಿಣಾಮ ಮೃತಪಟ್ಟಿರುವ ಘಟನೆ ತಾಲೂಕಿನ ಸಿದ್ದರಮಟ್ಟಿಯ ದೇವರಹಟ್ಟಿ ಗ್ರಾಮದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
    ಗ್ರಾಮದ ಅಡಕೆ ತೋಟದವೊಂದರ ಮನೆಯಲ್ಲಿ ವಾಸವಾಗಿರುವ ಸಂತೋಷ್ ಎಂಬುವರ ೪ ವರ್ಷದ ಹೆಣ್ಣು ಮಗು ಆದ್ಯಾ ಮೇಲೆ ಏಕಾಏಕಿ ಅಡಕೆ ಮರ ಮುರಿದು ಬಿದ್ದಿದ್ದು, ತೀವ್ರವಾಗಿ ಗಾಯಗೊಂಡಿದ್ದ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿದಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಈ ಸಂಬಂಧ ಸಂತೋಷ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಮಲಮ್ಮ ನಿಧನ

ಕಮಲಮ್ಮ
    ಭದ್ರಾವತಿ, ಆ. ೧೪: ಹಿರಿಯ ಕಾರ್ಮಿಕ ಹೋರಾಟಗಾರ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಿ.ಸಿ ಮಾಯಣ್ಣ ಅವರ ಪತ್ನಿ ಕಮಲಮ್ಮ(೭೭) ಶನಿವಾರ ನಿಧನ ಹೊಂದಿದರು.
    ಪತಿ ಡಿ.ಸಿ ಮಾಯಣ್ಣ, ೩ ಗಂಡು, ೩ ಹೆಣ್ಣು ಮಕ್ಕಳು ಹಾಗು ಅಳಿಯಂದಿರು, ಸೊಸೆಯಂದಿರು ಹಾಗು ಮೊಮ್ಮಕ್ಕಳನ್ನು ಹೊಂದಿದ್ದರು. ಕಮಲಮ್ಮ ಅವರು ಡಿ.ಸಿ ಮಾಯಣ್ಣ ಅವರ ಹೋರಾಟಕ್ಕೆ ಪ್ರೇರಕ ಶಕ್ತಿಯಾಗಿ, ಬೆನ್ನೆಲುಬಾಗಿ ನಿಂತಿದ್ದರು.
ಕಮ್ಮಲಮ್ಮ ಅವರ ಅಂತ್ಯಕ್ರಿಯೆ ಬೊಮ್ಮನಕಟ್ಟೆಯಲ್ಲಿರುವ ಅವರ ನಿವಾಸದ ಸಮೀಪದಲ್ಲಿರುವ ತೋಟದಲ್ಲಿ ಭಾನುವಾರ ನಡೆಯಲಿದೆ.
    ಇವರ ನಿಧನಕ್ಕೆ ಪ್ರಗತಿಪರ ಸಂಘಟನೆಗಳ ಒಕ್ಕೂಟ, ಜನಶಕ್ತಿ ಜಿ. ರಾಜು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಕಾರ್ಮಿಕರ ಹೋರಾಟಗಾರರು, ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.