ಸೋಮವಾರ, ಸೆಪ್ಟೆಂಬರ್ 13, 2021

ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ ಪ್ರತಿಭಟನೆ

ದೇಶಾದ್ಯಂತ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳನ್ನು ಖಂಡಿಸಿ ಸೋಮವಾರ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ, ಸೆ. ೧೩: : ದೇಶಾದ್ಯಂತ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳನ್ನು ಖಂಡಿಸಿ ಸೋಮವಾರ ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗು  ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
    ಮಾಧವಚಾರ್ ವೃತ್ತದಿಂದ ತಾಲೂಕು ಕಛೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಮಾತನಾಡಿದ ಪ್ರಮುಖರು, ದೆಹಲಿಯ ಜಿಲ್ಲಾ  ಮ್ಯಾಜಿಸ್ಟ್ರೇಟ್ ಜೊತೆ ಕೆಲಸ ಮಾಡುತ್ತಿದ್ದ ೨೧ ವರ್ಷ ವಯಸ್ಸಿನ ಮಹಿಳಾ ಸಿವಿಲ್ ಡಿಫೆನ್ಸ್ ಅಧಿಕಾರಿ ರಾಬೀಯಾ ಸೈಫಿ ಅವರನ್ನು ಆ.೨೬ರಂದು
    ಅತ್ಯಾಚಾರ ನಡೆಸಿ ಭೀಕರವಾಗಿ ಕೊಲೆ ಮಾಡಲಾಗಿದೆ. ಈ ಕೊಲೆಗೆ ಮ್ಯಾಜಿಸ್ಟ್ರೇಟ್ ಕಛೇರಿಯಲ್ಲಿನ ಭ್ರಷ್ಟಾಚಾರವೇ ಕಾರಣ ಎಂದು ಆಕೆಯ ಕುಟಂಬಸ್ಥರು ಆರೋಪಿಸುತ್ತಿದ್ದಾರೆ. ಆದರೆ ಪೊಲೀಸರು ಕುಟುಂಬಸ್ಥರ ಹೇಳಿಕೆಗಳನ್ನು ದಾಖಲಿಸಿಕೊಳ್ಳದೆ ಕೇವಲ ಆಕೆಯ ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿರುವ ಆರೋಪಿಯ ಹೇಳಿಕೆ ಮಾತ್ರ ದಾಖಲಿಸಿಕೊಳ್ಳಲಾಗಿದೆ ಎಂದು ಆರೋಪಿಸಲಾಯಿತು.
    ಈ ಪ್ರಕರಣದಲ್ಲಿ ಅಧಿಕಾರಿಗಳು ಹಾಗು ಪೊಲೀಸರ ನಿರ್ಲಕ್ಷ್ಯತನ ಸರಿಯಲ್ಲ. ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತಿದ್ದು, ಜೊತೆಗೆ ಈ ರೀತಿಯ ಕೃತ್ಯಗಳು ನಡೆಯಲು ಪ್ರಚೋದನೆ ನೀಡಿದಂತಾಗುತ್ತಿದೆ. ಈಗಾಗಲೇ ದೇಶದಲ್ಲಿ ವಿಶೇಷವಾಗಿ ದೆಹಲಿ ಹಾಗು ಉತ್ತರ ಪ್ರದೇಶದಲ್ಲಿ ಮಹಿಳೆಯರಿಗೆ ಗೌರವಯುತವಾಗಿ, ಸುರಕ್ಷಿತವಾಗಿ ಬದುಕಲು ಸಾಧ್ಯವಿಲ್ಲ ಎಂಬ ಮನೋಭಾವನೆ ಉಂಟಾಗಿದೆ. ಈ ಹಿನ್ನಲೆಯಲ್ಲಿ ತಕ್ಷಣ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ರಚಿಸಿ, ಕೊಲೆಯ ಹಿಂದಿನ ರಹಸ್ಯ ಭೇದಿಸುವಂತೆ ಆಗ್ರಹಿಸಲಾಯಿತು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಲಾಯಿತು.
    ಎಸ್‌ಡಿಪಿಐ ಶಿವಮೊಗ್ಗ ನಗರ ಅಧ್ಯಕ್ಷ ಇಮ್ರಾನ್, ತಾಲೂಕು ಅಧ್ಯಕ್ಷ ಮಹಮದ್ ತಾಹೀರ್, ಕಾರ್ಯದರ್ಶಿ ಮಹಮದ್ ಗೌಸ್, ದೇವೇಂದ್ರ ಪಾಟೀಲ್, ಅಬ್ದುಲ್ ಮತೀನ್, ಅರ್ಷದ್ ಖುರೇಶ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಧ್ಯಕ್ಷ ಸಾದಿಕ್ ಉಲ್ಲಾ, ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಸಂಚಾಲಕ ಸುರೇಶ್, ಜಿ. ರಾಜು, ದಲಿತ ಮುಖಂಡ ಚಿನ್ನಯ್ಯ, ಮುತುರ್ಜಾಖಾನ್, ಎಎಪಿ ಪ್ರಮುಖರಾದ ಎಚ್. ರವಿಕುಮಾರ್, ಎ. ಮಸ್ತಾನ್, ಪರಮೇಶ್ವರಚಾರ್, ಇಬ್ರಾಹಿಂ ಖಾನ್, ಜಾವೀದ್, ಬಾಬಾಜಾನ್, ಕಾಂಗ್ರೆಸ್ ಪಕ್ಷದ ಎಂ. ರವಿಕುಮಾರ್, ಮುರುಳಿ ಕೃಷ್ಣ, ಜಗದೀಶ್, ಜಹೀರ್‌ಜಾನ್,  ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


ದೇಶಾದ್ಯಂತ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳನ್ನು ಖಂಡಿಸಿ ಸೋಮವಾರ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ವತಿಯಿಂದ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.


ಭಾನುವಾರ, ಸೆಪ್ಟೆಂಬರ್ 12, 2021

ಶಿಕ್ಷಕ ಸಿ. ವೆಂಕಟೇಶ್ ನಿಧನ

ಸಿ. ವೆಂಕಟೇಶ್
ಭದ್ರಾವತಿ, ಸೆ. ೧೨: ತಾಲೂಕಿನ ನವಿಲೆ ಬಸಾಪುರ ಸರ್ಕಾರಿ ಪ್ರೌಢಶಾಲೆ ಶಿಕ್ಷಕ, ಹುತ್ತಾಕಾಲೋನಿ ನಿವಾಸಿ ಸಿ. ವೆಂಕಟೇಶ್(೫೮) ನಿಧನ ಹೊಂದಿದರು.
ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಹೊಂದಿದ್ದರು. ಕ್ರಾಫ್ಟ್ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರ ನಿಧನಕ್ಕೆ ಶಾಲಾ ಶಿಕ್ಷಕರು, ಸಿಬ್ಬಂದಿ ವರ್ಗದವರು, ಕಸ್ಟರ್ ಅಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.  

ಸೆ.೧೩ರಂದು ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ ಪ್ರತಿಭಟನೆ

ಭದ್ರಾವತಿ, ಸೆ. ೧೨: ದೇಶಾದ್ಯಂತ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳನ್ನು ಖಂಡಿಸಿ ಸೆ.೧೩ರಂದು ಬೆಳಿಗ್ಗೆ ೧೦.೩೦ಕ್ಕೆ ವಿವಿಧ ಸಂಘಟನೆಗಳಿಂದ ಪ್ರತಿಭಟನಾ ಮೆರವಣಿ ಹಮ್ಮಿಕೊಳ್ಳಲಾಗಿದೆ.
    ಕಳೆದ ವಾರ ದೆಹಲಿಯ ಪೊಲೀಸ್ ಅಧಿಕಾರಿ ರಾಬೀಯಾ ಸೈಫಿ ಅವರನ್ನು ಅತ್ಯಾಚಾರ ನಡೆಸಿ ಭೀಕರವಾಗಿ  ಕೊಲೆ ಮಾಡಿರುವ ಘಟನೆ ನಡೆದಿದ್ದು, ಅಲ್ಲದೆ ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನಲೆಯಲ್ಲಿ ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡುವ ಜೊತೆಗೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಪ್ರತಿಭಟನಾ ಹೋರಾಟ ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗು  ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ವತಿಯಿಂದ ಹಮ್ಮಿಕೊಳ್ಳಲಾಗಿದೆ.
    ಮಾಧವಚಾರ್ ವೃತ್ತದಿಂದ ತಾಲೂಕು ಕಛೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು ವಿವಿಧ ಸಂಘ-ಸಂಸ್ಥೆಗಳು, ಕಾರ್ಮಿಕರು, ರೈತರು, ವ್ಯಾಪರಸ್ಥರು, ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ  ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆ ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ನಾಯಿಗಳ ಮಾರಣ ಹೋಮ : ೧೨ ಮಂದಿ ಬಂಧನ

    ಭದ್ರಾವತಿ, ಸೆ. ೧೨: ತಾಲೂಕಿನ ಕಂಬದಾಳ್-ಹೊಸೂರಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಾಯಿಗಳನ್ನು ಜೀವಂತವಾಗಿ ಹೂತಿಟ್ಟು ಮಾರಾಣ ಹೋಮಕ್ಕೆ ಕಾರಣವಾಗಿರುವ ಘಟನೆಗೆ ಸಂಬಂಧಿಸಿದಂತೆ ಒಟ್ಟು ೧೨ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
    ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಇಬ್ಬರು ಸದಸ್ಯರು ಹಾಗೂ ಓರ್ವ ಕರವಸೂಲಿಗಾರ ಸೇರಿದಂತೆ ೧೨ ಮಂದಿಯನ್ನು ಬಂಧಿಸಲಾಗಿದೆ. ಆರಂಭದಲ್ಲಿಯೇ ಈ ಪ್ರಕರಣದಲ್ಲಿ ಗ್ರಾಮ ಪಂಚಾಯಿತಿ ಕೈವಾಡವಿದೆ ಎಂಬ ಅನುಮಾನ ಸ್ಥಳೀಯರಿಂದ ವ್ಯಕ್ತವಾಗಿತ್ತು.
    ಸೆ.೩ರಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳನ್ನು ಹಿಡಿದು ನಂತರ ಅವುಗಳನ್ನು ಟಾಟಾ ಏಸ್ ವಾಹನದ ಮೂಲಕ ತಮ್ಮಡಿಹಳ್ಳಿಯ ಎಂಪಿಎಂ ಅರಣ್ಯ ವ್ಯಾಪ್ತಿಯಲ್ಲಿ ಜೆಸಿಬಿ ಬಳಸಿ ಎರಡು ಗುಂಡಿಗಳನ್ನು ತೆಗೆದು ಜೀವಂತವಾಗಿ ಹೂತು ಹಾಕಲಾಗಿತ್ತು. ಈ ವಿಚಾರ ಸ್ಥಳೀಯ ಗ್ರಾಮಸ್ಥರ ಗಮನಕ್ಕೆ ಬಂದಿದ್ದು, ತಕ್ಷಣ ಗ್ರಾಮಸ್ಥರು ಶಿವಮೊಗ್ಗ ಪ್ರಾಣಿದಯಾ ಸಂಘದವರಿಗೆ ಈ ವಿಚಾರ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ್ದ ಪ್ರಾಣಿದಯಾ ಸಂಘದವರು ಹೂತು ಹಾಕಲಾಗಿದ್ದ ನಾಯಿಗಳ ಮೃತದೇಹಗಳನ್ನು ಪತ್ತೆ ಹಚ್ಚಿ ಹೊರತೆಗೆಯುವ ಮೂಲಕ ಪ್ರಕರಣ ಬೆಳಕಿಗೆ ಬರಲು ಕಾರಣಕರ್ತರಾಗಿದ್ದರು.
    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಗ್ರಾಮಾಂತರ ಠಾಣೆ ಪೊಲೀಸರು ಇದೀಗ ೧೨ ಮಂದಿಯನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು ೧೫ ಮಂದಿ ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ಉಳಿದ ಮೂವರ ಬಂಧನಕ್ಕಾಗಿ ಕಾರ್ಯಾಚರಣೆ ಮುಂದುವರೆಸಿದ್ದಾರೆ.
    ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಾಯಿಗಳ ಹಾವಳಿ ಹೆಚ್ಚಾದ ಹಿನ್ನಲೆಯಲ್ಲಿ ಸ್ವತಃ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮೈಸೂರಿನಿಂದ ನಾಯಿ ಹಿಡಿಯುವವರನ್ನು ಕರೆಸಿದ್ದಾರೆ ಎನ್ನಲಾಗಿದೆ. ಹಿಡಿದ ನಾಯಿಗಳಿಗೆ ವಿಷದ ಚುಚ್ಚುಮದ್ದು ನೀಡಿ ಕೊಲ್ಲಲಾಗಿದೆ ಎಂಬ ಆರೋಪಗಳು ಇದೀಗ ಕೇಳಿ ಬರುತ್ತಿದ್ದು, ಈ ನಡುವೆ ಹೂತು ಹಾಕಲಾಗಿದ್ದ ಒಂದು ಗುಂಡಿಯಲ್ಲಿನ ಸುಮಾರು ೬೦ ನಾಯಿಗಳ ಮೃತದೇಹಗಳನ್ನು ಹೊರ ತೆಗೆಯಲಾಗಿದ್ದು, ಪಶುಸಂಗೋಪನೆ ಇಲಾಖೆಯ ವೈದ್ಯರಿಂದ ನಾಯಿಗಳ ಮೃತದೇಹಗಳ ಮರುಣೋತ್ತರ ಪರೀಕ್ಷೆ ನಡೆಸಲಾಗಿದೆ.  ಅಲ್ಲದೆ ಮೃತದೇಹದ ಮಾದರಿಗಳನ್ನು ಸಂಗ್ರಹಿಸಿ (ಮೂಳೆ, ಚರ್ಮ, ಕೂದಲು ಹಾಗೂ ಕಿಡ್ನಿ) ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ವರದಿ ಬಂದ ನಂತರ ಪ್ರಕರಣ ಸಂಪೂರ್ಣವಾಗಿ ತೆರೆ ಕಾಣಲಿದೆ.

ದುರ್ಗಾಂಬ ದೇವಸ್ಥಾನ, ಬೋವಿ ಕಾಲೋನಿ ವಿನಾಯಕ ಮೂರ್ತಿ ವಿಸರ್ಜನೆ

ಭದ್ರಾವತಿ ಕಂಚಿನಬಾಗಿಲು ಬಳಿ ಇರುವ ಅಂಬೇಡ್ಕರ್ ನಗರದ ಶ್ರೀ ದುರ್ಗಾಂಬ ದೇವಸ್ಥಾನದಲ್ಲಿ ಈ ಬಾರಿ ಪ್ರತಿಷ್ಠಾಪಿಸಲಾಗಿರುವ ಆಕರ್ಷಕವಾದ ಶೇಷವಾಹನ ವಿನಾಯಕ ಮೂರ್ತಿ.
    ಭದ್ರಾವತಿ, ಸೆ. ೧೨: ನಗರದ ಕಂಚಿನಬಾಗಿಲು ಬಳಿ ಇರುವ ಅಂಬೇಡ್ಕರ್ ನಗರದ ಶ್ರೀ ದುರ್ಗಾಂಬ ದೇವಸ್ಥಾನದಲ್ಲಿ ಈ ಬಾರಿ ಸಹ ವಿನಾಯಕ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಭಾನುವಾರ ವಿಸರ್ಜಿಸಲಾಯಿತು.
    ಆಕರ್ಷಕವಾದ ಶೇಷವಾಹನ ವಿನಾಯಕ ಮೂರ್ತಿಯನ್ನು ಈ ಬಾರಿ ಪ್ರತಿಷ್ಠಾಪಿಸಲಾಗಿದೆ. ೩ ದಿನಗಳ ಕಾಲ ವಿಶೇಷ ಪೂಜೆ ಸೇರಿದಂತೆ ಧಾರ್ಮಿಕ ಆಚರಣೆಗಳು ಜರುಗಿದವು. ಕೋವಿಡ್-೧೯ರ ಹಿನ್ನಲೆಯಲ್ಲಿ ಕಳೆದ ೨ ವರ್ಷಗಳಿಂದ ವಿನಾಯಕ ಮೂರ್ತಿಯನ್ನು ದೇವ್ಥಾನದಲ್ಲಿಯೇ ಪ್ರತಿಷ್ಠಾಪಿಸಲಾಗುತ್ತಿದೆ.
    ಬೋವಿ ಕಾಲೋನಿ ವಿನಾಯಕ ಮೂರ್ತಿ ವಿಸರ್ಜನೆ :
    ನಗರದ ಪ್ರತಿಷ್ಠಿತ ಸಂಘಟನೆಗಳಲ್ಲಿ ಒಂದಾಗಿರುವ ಬೋವಿ ಕಾಲೋನಿ ಸಂಘಟನೆ ವತಿಯಿಂದ ಪ್ರತಿವರ್ಷದಂತೆ ಈ ಬಾರಿ ಸಹ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.
    ನಗರಸಭೆ ವಾರ್ಡ್.೧೨ರ ಹೊಸಮನೆ ಮುಖ್ಯ ರಸ್ತೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಮೂರ್ತಿಯನ್ನು ಭಾನುವಾರ ವಿಸರ್ಜಿಸಲಾಯಿತು. ಈ ಸಂಘಟನೆ ವತಿಯಿಂದ ಹೆಚ್ಚು ದಿನಗಳ ಕಾಲ ಮೂರ್ತಿ ಪ್ರತಿಷ್ಠಾಪನೆ ನಡೆಯುತ್ತಿತ್ತು. ಈ ಬಾರಿ ಕೋವಿಡ್-೧೯ರ ಹಿನ್ನಲೆಯಲ್ಲಿ ಸರ್ಕಾರದ ನಿರ್ದೇಶನದಂತೆ ೩ ದಿನಗಳ ಆಚರಣೆಗೆ ಮೊಟಕು ಗೊಳಿಸಿದೆ.

ಶನಿವಾರ, ಸೆಪ್ಟೆಂಬರ್ 11, 2021

ಶಾಲಾ ಮಕ್ಕಳಿಗೆ ನೋಟ್ ಪುಸ್ತಕ, ಲೇಖನ ಸಾಮಗ್ರಿ ವಿತರಣೆ

ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್ ಪುತ್ರ ಬಿ.ಎಸ್ ಗಣೇಶ್‌ರವರ ಹುಟ್ಟುಹಬ್ಬದ ಅಂಗವಾಗಿ ನಗರದ ತಾಲೂಕು ಕಛೇರಿ ರಸ್ತೆಯಲ್ಲಿರುವ ಆಲ್ ಮೊಹಮದ್ ಕಾಲೇಜಿನ ಪ್ರಾಥಮಿಕ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.
    ಭದ್ರಾವತಿ, ಸೆ. ೧೧: ಶಾಸಕ ಬಿ.ಕೆ ಸಂಗಮೇಶ್ವರ್ ಪುತ್ರ ಬಿ.ಎಸ್ ಗಣೇಶ್‌ರವರ ಹುಟ್ಟುಹಬ್ಬದ ಅಂಗವಾಗಿ ನಗರದ ತಾಲೂಕು ಕಛೇರಿ ರಸ್ತೆಯಲ್ಲಿರುವ ಆಲ್ ಮೊಹಮದ್ ಕಾಲೇಜಿನ ಪ್ರಾಥಮಿಕ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.
    ಬಿ.ಎಸ್ ಗಣೇಶ್‌ರವರ ಹುಟ್ಟುಹಬ್ಬವನ್ನು ಬಿ.ಕೆ ಸಂಗಮೇಶ್ವರ್ ಅಭಿಮಾನಿಗಳು ಹಾಗು ಕಾಂಗ್ರೆಸ್ ಪಕ್ಷದ ನಗರಸಭಾ ಸದಸ್ಯರು, ಮುಖಂಡರು ಹಾಗು ಕಾರ್ಯಕರ್ತರು ನಗರದ ವಿವಿಧೆಡೆ ವಿಭಿನ್ನ ರೀತಿಯಲ್ಲಿ ಆಚರಿಸುವ ಮೂಲಕ ಸಂಭ್ರಮ ಹಂಚಿಕೊಂಡರು.
    ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಮತ್ತು ಲೇಖನ ಸಾಮಗ್ರಿ ವಿತರಣೆ ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ಆರ್. ಶ್ರೇಯಸ್, ಬಷೀರ್ ಅಹಮದ್, ಸೈಯದ್ ರಿಯಾಜ್, ಮುಖಂಡರಾದ ಜೆಬಿಟಿ ಬಾಬು, ಮುಸ್ವೀರ್ ಬಾಷಾ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಕುಮರಿ ನಾರಾಯಣಪುರದ ಜೆಡಿಎಸ್ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಭದ್ರಾವತಿ ತಾಲೂಕಿನ ಕುಮರಿ ನಾರಾಯಣಪುರದ ಜೆಡಿಎಸ್ ಮುಖಂಡರು ಶಾಸಕ ಬಿ.ಕೆ ಸಂಗಮೇಶ್ವರ್ ಸಮ್ಮುಖದಲ್ಲಿ ಶನಿವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
    ಭದ್ರಾವತಿ, ಸೆ. ೧೧: ತಾಲೂಕಿನ ಕುಮರಿ ನಾರಾಯಣಪುರದ ಜೆಡಿಎಸ್ ಮುಖಂಡರು ಶಾಸಕ ಬಿ.ಕೆ ಸಂಗಮೇಶ್ವರ್ ಸಮ್ಮುಖದಲ್ಲಿ ಶನಿವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
    ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷವನ್ನು ಸಂಘಟಿಸುವ ಉದ್ದೇಶದೊಂದಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಮುಂದಾಗಿದ್ದು, ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ.
    ಕುಮರಿ ನಾರಾಯಣಪುರದ ಜೆಡಿಎಸ್ ಮುಖಂಡರಾದ ವೆಂಕಟೇಶ್ ಗೌಡ, ಪುಟ್ಟಸ್ವಾಮಿ ಗೌಡ ಸೇರಿದಂತೆ ಇನ್ನಿತರರು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.
    ಮುಖಂಡರಾದ ಇಸ್ಮಾಯಿಲ್ ಖಾನ್, ಬಾಬಳ್ಳಿ ಲೋಕೇಶ್, ತಳ್ಳಿಕಟ್ಟೆ ಪ್ರಕಾಶ್, ತಳ್ಳಿಕಟ್ಟೆ ದಿನೇಶ್ ಸೇರದಿಂತೆ ಇನ್ನಿತರರು ಉಪಸ್ಥಿತರಿದ್ದರು.