ಅಪೇಕ್ಷ ಮಂಜುನಾಥ್, ಕಾಂತೇಶ್ ಕದರಮಂಡಲಿಗಿ ಅವರಿಗೆ ದತ್ತಿ ಪ್ರಶಸ್ತಿ
ಭದ್ರಾವತಿ ತಾಲೂಕಿನ ಬಿ.ಆರ್ ಪ್ರಾಜೆಕ್ಟ್ ಪತ್ರ ಸಂಸ್ಕೃತಿ ಸಂಘಟನೆ ಹಾಗೂ ಬೆಂಗಳೂರಿನ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರೋತ್ಸವ ಕಾದಂಬರಿ ಮತ್ತು ಸೊಬಗು ಕವನ ಸಂಕಲನ ಪುಸ್ತಕಗಳ ಲೋಕಾರ್ಪಣೆ ಹಾಗು ದಿವಂಗತ ದೇಶೀಗೌಡ ಮತ್ತು ಶ್ರೀಮತಿ ನಿಂಗಮ್ಮ 'ರಂಗಭೂಮಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದತ್ತಿ ಪ್ರಶಸ್ತಿಯನ್ನು ಶಿವಮೊಗ್ಗ ಕಾಂತೇಶ್ ಕದರಮಂಡಲಗಿ ಹಾಗೂ ಭದ್ರಾವತಿ ತಾಲೂಕು ಕಸಾಪ ಅಧ್ಯಕ್ಷ, ಶಿಕ್ಷಕ ಅಪೇಕ್ಷಾ ಮಂಜುನಾಥ್ ಅವರಿಗೆ ನೀಡಿ ಗೌರವಿಸಲಾಯಿತು.
ಭದ್ರಾವತಿ, ಸೆ. ೨೭: ಕನ್ನಡ ಭಾಷೆ ಬೆಳವಣಿಗೆಗೆ ಕೃತಿಗಳು ಸಹಕಾರಿಯಾಗಿದ್ದು, ಹೆಚ್ಚು ಹೆಚ್ಚು ಕೃತಿಗಳನ್ನು ಹೊರತರುವ ಪ್ರಯತ್ನ ನಾಡಿನಾದ್ಯಂತ ನಡೆಯಬೇಕೆಂದು ಬೆಂಗಳೂರು ನಗರ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಅನಿಕೇತನ ಮಾಯಣ್ಣ ಹೇಳಿದರು.
ಅವರು ತಾಲೂಕಿನ ಬಿ.ಆರ್ ಪ್ರಾಜೆಕ್ಟ್ ಪತ್ರ ಸಂಸ್ಕೃತಿ ಸಂಘಟನೆ ಹಾಗೂ ಬೆಂಗಳೂರಿನ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರೋತ್ಸವ ಕಾದಂಬರಿ ಮತ್ತು ಸೊಬಗು ಕವನ ಸಂಕಲನ ಪುಸ್ತಕಗಳ ಲೋಕಾರ್ಪಣೆ ಹಾಗು ದಿವಂಗತ ದೇಶೀಗೌಡ ಮತ್ತು ಶ್ರೀಮತಿ ನಿಂಗಮ್ಮ 'ರಂಗಭೂಮಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಕನ್ನಡ ಭಾಷೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕೆಂದರು.
ಇಂ. ಹೊಸಹಳ್ಳಿ ದಾಳೇಗೌಡ ಹಾಗೂ ಜಯಂತಿ ಚಂದ್ರಶೇಖರ ಅವರ 'ಪತ್ರೋತ್ಸವ' ಕಾದಂಬರಿ ಪುಸ್ತಕ ಕುರಿತು ಮಾತನಾಡಿದ ಕೊಪ್ಪಳದ ಗಜಲ್ ಕವಿ ಅಲ್ಲಾಗಿರಿ ರಾಜ್‌ರವರು, ಕಾದಂಬರಿಯಲ್ಲಿನ ಗ್ರಾಮೀಣ ಭಾಷೆಯ ಸೊಗಡು ಇಂದಿನ ಯುವ ಪೀಳಿಗೆಗೆ ತಲುಪಿಸುವ ಕೆಲಸವಾಗಬೇಕು. ಪ್ರಸ್ತುತ ಇಂತಹ ಕೃತಿ ಪದವಿ ತರಗತಿಗಳಿಗೆ ಪಠ್ಯ ಪುಸ್ತಕವನ್ನಾಗಿ ಮಾಡುವ ಅಗತ್ಯವಿದೆ ಎಂದರು.
'ಸೊಬಗು' ಕವನ ಸಂಕಲನ ಪುಸ್ತಕ ಕುರಿತು ಮಾತನಾಡಿದ ಸಾಹಿತಿ ಕೆ.ಎಸ್.ವೀರಭದ್ರಪ್ಪ, ಕವನ ಸಂಕಲನದಲ್ಲಿ ಅತ್ಯಂತ ಪರಿಣಾಮಕಾರಿಯಾಗಬಹುದಾದ ಕವಿತೆಗಳಿವೆ. ಒಮ್ಮೆ ಓದಿದರೆ ಅರ್ಥವಾಗದ ಶಬ್ದಗಳ ಬಳಕೆ ಅಚ್ಚರಿ ಮೂಡಿಸುತ್ತದೆ. ಇಂತಹ ಕವಿತೆಗಳು ಅಪರೂಪ ಎಂದರು.
ದಿವಂಗತ ದೇಶಿಗೌಡ ಮತ್ತು ಶ್ರೀಮತಿ ನಿಂಗಮ್ಮ ರಂಗಭೂಮಿ ದತ್ತಿ ಪ್ರಶಸ್ತಿಯನ್ನು ಶಿವಮೊಗ್ಗ ಕಾಂತೇಶ್ ಕದರಮಂಡಲಗಿ ಹಾಗೂ ಭದ್ರಾವತಿ ತಾಲೂಕು ಕಸಾಪ ಅಧ್ಯಕ್ಷ, ಶಿಕ್ಷಕ ಅಪೇಕ್ಷ ಮಂಜುನಾಥ್ ಅವರಿಗೆ ನೀಡಿ ಗೌರವಿಸಲಾಯಿತು.