ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ವಿವಿಧ ದೇವಸ್ಥಾನಗಳ ಸೇವಾ ಸಮಿತಿಗಳೊಂದಿಗೆ ನಾಡಹಬ್ಬ ದಸರಾ ಹಿನ್ನಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ಪಾಲ್ಗೊಂಡು ಮಾತನಾಡಿದರು.
ಭದ್ರಾವತಿ, ಅ. ೫: ನಾಡಹಬ್ಬ ದಸರಾ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ದೇವಸ್ಥಾನಗಳ ಸೇವಾ ಸಮಿತಿಗಳು ಹೆಚ್ಚಿನ ರೀತಿಯಲ್ಲಿ ಸಹಕರಿಸುವಂತೆ ತಹಸೀಲ್ದಾರ್ ಆರ್. ಪ್ರದೀಪ್ ಮನವಿ ಮಾಡಿದರು.
ಅವರು ಮಂಗಳವಾರ ನಗರಸಭೆ ಸಭಾಂಗಣದಲ್ಲಿ ವಿವಿಧ ದೇವಸ್ಥಾನಗಳ ಸೇವಾ ಸಮಿತಿಗಳೊಂದಿಗೆ ನಾಡಹಬ್ಬ ದಸರಾ ಹಿನ್ನಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕೋವಿಡ್-೧೯ ಆರ್ಥಿಕ ಸಂಕಷ್ಟದ ನಡುವೆಯೂ ಹಬ್ಬವನ್ನು ಸೀಮಿತ ವ್ಯಾಪ್ತಿಯಲ್ಲಿ ಆಚರಿಸಲು ಈಗಾಗಲೇ ನಗರಸಭೆ ಆಡಳಿತ ಸಿದ್ದತೆಗಳನ್ನು ಕೈಗೊಂಡಿದೆ. ಇದಕ್ಕೆ ಪೂರಕವಾಗಿ ದೇವಸ್ಥಾನಗಳ ಸೇವಾ ಸಮಿತಿಗಳು ಸಹ ಸ್ಪಂದಿಸಬೇಕು. ಸರ್ಕಾರದ ಮಾರ್ಗಸೂಚಿಗಳಂತೆ ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಸಬೇಕು. ಎಲ್ಲಾ ದೇವಸ್ಥಾನಗಳ ದೇವಾನು ದೇವತೆಗಳು ಪಾಲ್ಗೊಳ್ಳುವ ಮೂಲಕ ಮೆರವಣಿಗೆಗೆ ಮತ್ತಷ್ಟು ಮೆರಗು ನೀಡಬೇಕೆಂದರು.
ಪೊಲೀಸ್ ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ಮಾತನಾಡಿ, ದೇವಸ್ಥಾನ ಸೇವಾ ಸಮಿತಿಗಳು ಜನಸಂದಣಿ ಹೆಚ್ಚಾಗದಂತೆ ಎಚ್ಚರವಹಿಸಬೇಕು. ವಾಹನಗಳ ಸುಗಮ ಸಂಚಾರಕ್ಕೆ ಸಹಕರಿಸಬೇಕು. ಬನ್ನಿ ಮುಡಿಯುವ ಕನಕಮಂಟಪ ಮೈದಾನದಲ್ಲಿ ಹೆಚ್ಚಿನ ಜಾಗೃತಿ ವಹಿಸಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಕಲ್ಪಿಸಿಕೊಡಬಾರದು. ನಿಗದಿಪಡಿಸಿರುವ ಆಯಾ ಸ್ಥಳಗಳಲ್ಲೇ ಸಮಿತಿಗಳು ಇರತಕ್ಕದ್ದು. ಪೊಲೀಸ್ ಇಲಾಖೆ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದರು.
ವಿವಿಧ ದೇವಸ್ಥಾನಗಳ ಪ್ರಮುಖರು ಮಾತನಾಡಿ, ಕಳೆದ ೨ ಎರಡು ವರ್ಷಗಳಿಂದ ಕೊರೋನಾ ಹಿನ್ನಲೆಯಲ್ಲಿ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ಈ ಹಿನ್ನಲೆಯಲ್ಲಿ ದೇವಸ್ಥಾನಗಳಿಗೆ ಬರುವ ಆದಾಯ ಸಹ ಕುಂಠಿತಗೊಂಡಿದೆ. ಈ ನಡುವೆಯೂ ದಸರಾ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಮುಂದಾಗಿವೆ. ನಗರಸಭೆ ಆಡಳಿತ ಗೌರವಧನ ಹೆಚ್ಚು ಮಾಡಿದ್ದಲ್ಲಿ ಇನ್ನೂ ಹೆಚ್ಚಿನ ಅಲಂಕಾರದೊಂದಿಗೆ ದೇವಾನುದೇವಾತೆಗಳು ಪಾಲ್ಗೊಳ್ಳಲು ಅನುಕೂಲವಾಗಲಿದೆ ಎಂದರು.
ನಗರಸಭೆ ಪೌರಾಯುಕ್ತ ಕೆ. ಪರಮೇಶ್ ಮಾತನಾಡಿ, ಕಳೆದ ವರ್ಷ ದಸರಾ ಹಬ್ಬ ಯಶಸ್ವಿಯಾಗಿ ನಡೆದಿದೆ. ಆದರೆ ಖರ್ಚು ಮಾಡಿರುವ ಹಣ ಇದುವರೆಗೂ ಬಿಡುಗಡೆಗೊಂಡಿಲ್ಲ. ಇದೀಗ ನಗರಸಭೆ ವತಿಯಿಂದ ಅದ್ದೂರಿಯಾಗಿ ಆಚರಿಸಲು ಆರ್ಥಿಕ ಮುಗ್ಗಟ್ಟಿನ ಸಮಸ್ಯೆ ಎದುರಾಗಿದೆ. ಆದರೂ ಸಹ ಸೀಮಿತ ಅನುದಾನದಲ್ಲಿಯೇ ಸಾಧ್ಯವಾದಷ್ಟು ಎಲ್ಲರಿಗೂ ಸಮಾಧಾನಕರವಾಗುವ ನಿಟ್ಟಿನಲ್ಲಿ ಆಚರಿಸಬೇಕೆಂಬ ಆಶಯ ನಮ್ಮದಾಗಿದೆ. ಈ ನಿಟ್ಟಿನಲ್ಲಿ ಸಾಧ್ಯವಾದಷ್ಟು ಹೆಚ್ಚಿನ ಗೌರವಧನ ನೀಡುವುದಾಗಿ ತಿಳಿಸಿದರು.
ನಗರಸಭೆ ಕಂದಾಯಾಧಿಕಾರಿ ಎಂ.ಎಸ್ ರಾಜ್‌ಕುಮಾರ್, ಪರಿಸರ ಅಭಿಯಂತರ ಪ್ರಭಾಕರ್, ಸಮುದಾಯ ಸಂಘಟನಾಧಿಕಾರಿ ಸುಹಾಸಿನಿ ಉಪಸ್ಥಿತರಿದ್ದರು. ನಗರದ ವಿವಿದ ದೇವಸ್ಥಾನಗಳ ಸೇವಾ ಸಮಿತಿಗಳ ಪ್ರಮುಖರು ಪಾಲ್ಗೊಂಡಿದ್ದರು.