ಪ್ರಸ್ತುತ ಹೊರಡಿಸಲಾಗಿರುವ ಆದೇಶವನ್ನು ವಿರುದ್ಧ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು
ಶ್ರೀ ಮೈಸೂರು ಕಾಗದ ಕಾರ್ಖಾನೆ ನೌಕರರ ಸಂಘದ ಅಧ್ಯಕ್ಷ ಎಸ್. ಚಂದ್ರಶೇಖರ್
ಭದ್ರಾವತಿ, ಅ. ೧೨: ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚುವ ಸಂಬಂಧ ಕಾರ್ಮಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರು ನೀಡಿರುವ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ಶ್ರೀ ಮೈಸೂರು ಕಾಗದ ಕಾರ್ಖಾನೆ ನೌಕರರ ಸಂಘದ ಅಧ್ಯಕ್ಷ ಎಸ್. ಚಂದ್ರಶೇಖರ್ ತಿಳಿಸಿದರು.
ಅಪರ ಮುಖ್ಯ ಕಾರ್ಯದರ್ಶಿ ಡಾ. ಜಿ. ಕಲ್ಪನಾ ಅವರು ಹೊರಡಿಸಿರುವ ಆದೇಶ ಪ್ರತಿಯನ್ನು ಸಂಘ ಸ್ವೀಕರಿಸಿದೆ. ಈ ಹಿಂದೆ ಆಡಳಿತ ಮಂಡಳಿ ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚುವ ಸಂಬಂಧ ನೋಟಿಸ್ ಹೊರಡಿಸಿದ್ದು, ಇದರ ವಿರುದ್ಧ ಅಧಿಕೃತ ಕಾರ್ಮಿಕ ಸಂಘ ಉಚ್ಛ ನ್ಯಾಯಾಲಯದ ಮೋರೆ ಹೋದ ಹಿನ್ನಲೆಯಲ್ಲಿ ವಿಚಾರಣೆ ನಡೆದು ಮಧ್ಯಂತರ ಆದೇಶ ಹೊರಡಿಸಲಾಗಿತ್ತು. ಈ ಆದೇಶದ ಪ್ರಕಾರ ಮೊದಲು ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಉದ್ಯೋಗದ ಭದ್ರತೆ ನೀಡುವಂತೆ ಸೂಚಿಸಲಾಗಿತ್ತು. ಆ ನಂತರ ಮುಂದಿನ ವಿಚಾರಣೆ ಕೈಗೆತ್ತಿಗೊಳ್ಳಲಾಗುವುದು ಎಂದು ನ್ಯಾಯಾಲಯ ತಿಳಿಸಿತ್ತು. ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿ ಇರುವಾಗ ಈ ರೀತಿ ಆದೇಶ ಹೊರಡಿಸಿರುವುದು ಸರಿಯಾದ ಕ್ರಮವಲ್ಲ ಎಂದರು.
ಕಾರ್ಖಾನೆಯಲ್ಲಿರುವ ಕಾರ್ಮಿಕರಿಗೆ ವಿವಿಧ ನಿಗಮ ಮಂಡಳಿಗಳಲ್ಲಿ ಉದ್ಯೋಗದ ಅವಕಾಶ ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಇದಕ್ಕೆ ಸರ್ಕಾರ ನ್ಯಾಯಾಲಯದಲ್ಲಿ ಒಪ್ಪಿಗೆ ಸಹ ಸೂಚಿಸಿದೆ. ಆದರೆ ಸರ್ಕಾರ ನಿಗಮ ಮಂಡಳಿಗಳಿಗೆ ಕೇವಲ ಒಂದೇ ಒಂದು ಪತ್ರ ಬರೆದಿದೆ ಹೊರತು ಸುಮಾರು ೧ ರಿಂದ ೨ ವರ್ಷದವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ನಡುವೆ ಕೆಲವು ಕಾರ್ಮಿಕರನ್ನು ನಿಯೋಜನೆ ಮೇರೆಗೆ ವಿವಿಧ ನಿಗಮ ಮಂಡಳಿಗಳಲ್ಲಿ ಎರವಲು ಸೇವೆಗೆ ಕಳುಹಿಸಲಾಗಿದೆ. ಎಲ್ಲಾ ಕಾರ್ಮಿಕರಿಗೆ ಉದ್ಯೋಗದ ಭದ್ರತೆ ಒದಗಿಸಬೇಕೆಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ. ಆಡಳಿತ ಮಂಡಳಿ ಸಲ್ಲಿಸಿರುವ ಅರ್ಜಿಗೆ ನಮ್ಮ ತಕರಾರು ಇಲ್ಲ. ಕಾರ್ಮಿಕರಿಗೆ ಮೊದಲು ಉದ್ಯೋಗದ ಭದ್ರತೆ ಸಿಗಬೇಕು. ಆ ನಂತರ ಕಾರ್ಖಾನೆ ಮುಚ್ಚುವ ಆದೇಶ ಹೊರಡಿಸಲಿ. ಈ ಹಿನ್ನಲೆಯಲ್ಲಿ ಪ್ರಸ್ತುತ ಹೊರಡಿಸಲಾಗಿರುವ ಆದೇಶವನ್ನು ಪ್ರಶ್ನಿಸಲಾಗುವುದು ಎಂದರು.