Thursday, November 18, 2021

ಆರೋಗ್ಯ ಕಾಳಜಿಯಿಂದ ಸದಾ ಕಾಲ ಸದೃಢ : ಸುರಜಿತ್ ಮಿಶ್ರ

    ಭದ್ರಾವತಿ, ನ. ೧೮:  ನಾವುಗಳು ಸದಾ ಕಾಲ ಸದೃಢವಾಗಿರಲು ಆರೋಗ್ಯದ ಹೆಚ್ಚಿನ ಕಾಳಜಿ ವಹಿಸಬೇಕೆಂದು ಭಾರತೀಯ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಪ್ರಭಾರ ಕಾರ್ಯಪಾಲಕ ನಿರ್ದೇಶಕ ಸುರಜಿತ್ ಮಿಶ್ರ ಕರೆ ನೀಡಿದರು.
    ಅವರು ಅಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ತಾಲೂಕು ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಕಾರ್ಖಾನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
    ನಮ್ಮ ಆರೋಗ್ಯದ ರಕ್ಷಣೆ ನಮ್ಮ ಜವಾಬ್ದಾರಿಯಾಗಿದ್ದು, ಪ್ರತಿಯೊಬ್ಬರು ಇದನ್ನು ಅರಿತುಕೊಂಡು ಆರೋಗ್ಯದ ಬಗ್ಗೆನಿರ್ಲಕ್ಷ್ಯತನ ವಹಿಸದೆ ಜಾಗೃತಿ ವಹಿಸಬೇಕೆಂದರು.
    ಅಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಕಾಯಂ, ಗುತ್ತಿಗೆ ಹಾಗು ನಿವೃತ್ತ ಕಾರ್ಮಿಕರು ಮತ್ತು ಕುಟುಂಬ ವರ್ಗದವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
    ವಿಐಎಸ್‌ಎಲ್ ಆಸ್ಪತ್ರೆಯ ಹೆಚ್ಚುವರಿ ಮುಖ್ಯ ವ್ಯದ್ಯಾಧಿಕಾರಿ ಡಾ. ಎಂ.ವೈ ಸುರೇಶ್ ಮಾತನಾಡಿ, ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ವೈಯಕ್ತಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕೆಂದರು.
    ಕಾರ್ಖಾನೆಯ ಸಿಬ್ಬಂದಿ ಮತ್ತು ಆಡಳಿತ ವಿಭಾಗದ ಪ್ರಭಾರ ಮಹಾಪ್ರಬಂಧಕ ಪಿ.ಪಿ ಚಕ್ರವರ್ತಿ, ಸಾರ್ವಜನಿಕ ಸಂಪರ್ಕ ಇಲಾಖೆಯ ಮಹಾಪ್ರಬಂಧಕ ಎಲ್. ಪ್ರವೀಣ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ನೇತೃತ್ವದ ತಾಲೂಕು ಸರ್ಕಾರಿ ಆಸ್ಪತ್ರೆಯ ದಂತ ವೈದ್ಯರಾದ ಡಾ. ರಶ್ಮಿ, ಡಾ. ಮಯೂರಿ, ಸಮಾಲೋಚಕರಾದ ಶ್ರೀದೇವಿ, ಪ್ರಭಾವತಿ, ಪ್ರಯೋಗಾಲಯ ತಂತ್ರಜ್ಞ ರಘುವೀರ್, ಆಶಾ ಕಾರ್ಯಕರ್ತೆಯರಾದ ಕವಿತಾ, ನೀಲಾಂಬಿಕ, ಶಾಹೀನ್ ಮತ್ತು ಆರೋಗ್ಯ ಮೇರಿ ಅವರನ್ನೊಳಗೊಂಡ ತಂಡ ಆರೋಗ್ಯ ತಪಾಸಣೆ ನಡೆಸಿತು.
    ಮಧುಮೇಹ, ರಕ್ತದೊತ್ತಡ ಮತ್ತು ಬಾಯಿ ಕ್ಯಾನ್ಸರ್ ತಪಾಸಣೆ ನಡೆಸಲಾಯಿತು. ಶಿಬಿರದಲ್ಲಿ ಸುಮಾರು ೨೭೦ ಮಂದಿ ಪಾಲ್ಗೊಂಡು ಆರೋಗ್ಯ ತಪಾಸಣೆ ಸದುಪಯೋಗ ಪಡೆದುಕೊಂಡರು.



ಅಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಭದ್ರಾವತಿಯಲ್ಲಿ ತಾಲೂಕು ಆರೋಗ್ಯ ಇಲಾಖೆ ಸಹಯೋಗದೊಂದಿಗೆ ವಿಐಎಸ್‌ಎಲ್ ಕಾರ್ಖಾನೆ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ಜಿಲ್ಲಾಮಟ್ಟದ ಸ್ಪರ್ಧೆಗಳ

 ಭದ್ರಾವತಿ:  ಶಿವಮೊಗ್ಗ ಕಸ್ತೂರಬಾ ಬಾಲಿಕ ಪ್ರೌಢ ಶಾಲೆಯಲ್ಲಿ  ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ಜಿಲ್ಲಾ ಮಟ್ಟದ ಸ್ಪರ್ಧೆಗಳನ್ನು  ನ. 24 ರಂದು ಬೆಳಿಗ್ಗೆ 10 ಗಂಟೆಗೆ  ಆಯೋಜಿಸಲಾಗಿದೆ.

ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳಾದ ಪ್ರಬಂಧ (ಕನ್ನಡ ಮತ್ತು ಇಂಗ್ಲೀಷ್), ಭಿತ್ತಿ ಚಿತ್ರ ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ದ್ವಿತೀಯಾ ಸ್ಥಾನ ಪಡೆದ ವಿದ್ಯಾರ್ಥಿಗಳು ಹಾಗೂ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಭಾಗವಹಿಸಲು ಆಯಾ ಶಾಲೆಗಳ ಮುಖ್ಯ ಶಿಕ್ಷಕರು ಸೂಚಿಸುವಂತೆ  ಹಾಗು ಹೆಚ್ಚಿನ ಮಾಹಿತಿಗೆ  ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಹಾಗೂ ತಾಲೂಕು ನೋಡಲ್ ಅಧಿಕಾರಿ ನವೀದ್ ಅಹಮದ್ ಪರ್ವೀಜ್,  ದೂರವಾಣಿ ಸಂ : 9886214160 ಇವರನ್ನು ಸಂಪರ್ಕಿಸುವಂತೆ  ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರ್ ತಿಳಿಸಿದ್ದಾರೆ.

ಮನೆಗೊಂದು ಸಸಿ, ಸುತ್ತಮುತ್ತಲ ಪರಿಸರ ಹಸಿರಾಗಿಸೋಣ : ಶೃತಿ ವಸಂತ್

ಭದ್ರಾವತಿ ನಗರಸಭೆ ವಾರ್ಡ್ ನಂ.೨೫ರ ಭಂಡಾರಹಳ್ಳಿ ಕಡದಕಟ್ಟೆ ಎಸ್‌ವಿಎಸ್ ಶಾಲೆ ಮುಂಭಾಗದಲ್ಲಿರುವ ನಾಗಮ್ಮ ಬಡಾವಣೆ ನಗರಸಭೆ ಉದ್ಯಾನವನದಲ್ಲಿ ಅರಣ್ಯ ಇಲಾಖೆ ಸಹಕಾರದೊಂದಿಗೆ ಜಮಾಅತೆ ಇಸ್ಲಾಮೀ ಹಿಂದ್, ತಾಲೂಕು ಕಟ್ಟಡ ಕಾರ್ಮಿಕರ ಸಂಘ, ಎಸ್‌ವಿಎಸ್ ಶಾಲೆ ಮತ್ತು ಕುಂಚ ಕಲಾವಿದರ ಸಂಘದ ವತಿಯಿಂದ ಗುರುವಾರ ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ನ. ೧೮: ಮನೆಗೊಂದು ಸಸಿ ನೆಡುವ ಮೂಲಕ ನಮ್ಮ ಸುತ್ತಮುತ್ತಲ ಪರಿಸರವನ್ನು ಹಸಿರಾಗಿಸುವ ನಿಟ್ಟಿನಲ್ಲಿ ಗಮನ ಹರಿಸೋಣ ಎಂದು ನಗರಸಭಾ ಸದಸ್ಯೆ ಶೃತಿ ವಸಂತ್ ಹೇಳಿದರು.
    ಅವರು ಗುರುವಾರ ವಾರ್ಡ್ ನಂ.೨೫ರ ಭಂಡಾರಹಳ್ಳಿ ಕಡದಕಟ್ಟೆ ಎಸ್‌ವಿಎಸ್ ಶಾಲೆ ಮುಂಭಾಗದಲ್ಲಿರುವ ನಾಗಮ್ಮ ಬಡಾವಣೆ ನಗರಸಭೆ ಉದ್ಯಾನವನದಲ್ಲಿ ಅರಣ್ಯ ಇಲಾಖೆ ಸಹಕಾರದೊಂದಿಗೆ ಜಮಾಅತೆ ಇಸ್ಲಾಮೀ ಹಿಂದ್, ತಾಲೂಕು ಕಟ್ಟಡ ಕಾರ್ಮಿಕರ ಸಂಘ, ಎಸ್‌ವಿಎಸ್ ಶಾಲೆ ಮತ್ತು ಕುಂಚ ಕಲಾವಿದರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವನ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಪರಿಸರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವನಮಹೋತ್ಸವ ಹೆಚ್ಚು ಸಹಕಾರಿಯಾಗಿದ್ದು, ದೇಶದಲ್ಲಿ ವನ ಮಹೋತ್ಸವ ಮಹತ್ವ ಅರಿತುಕೊಂಡು ೧೯೫೦ರಿಂದ ನಿರಂತರವಾಗಿ ವನ ಮಹೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರದ ವಿವಿಧ ಸ್ಥಳೀಯ ಸಂಸ್ಥೆಗಳು, ಖಾಸಗಿ ಸಂಘ-ಸಂಸ್ಥೆಗಳು, ಶಾಲಾ-ಕಾಲೇಜುಗಳು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಪ್ರತಿಯೊಬ್ಬರು ವನ ಮಹೋತ್ಸವ ಮಹತ್ವ ಅರಿತು ಖಾಲಿ ಇರುವ ಜಾಗಗಳಲ್ಲಿ ಮನೆಗೊಂದು ಸಸಿ ಎಂಬ ಪರಿಕಲ್ಪನೆಯೊಂದಿಗೆ ಸಸಿಗಳನ್ನು ನೆಡುವ ಮೂಲಕ ಅವುಗಳನ್ನು ಪೋಷಿಸಿ ಬೆಳೆಸಬೇಕೆಂದರು.
    ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್ ಬಾಬು ಮಾತನಾಡಿ, ಮಕ್ಕಳು ದೇಶದ ಭವಿಷ್ಯದ ಪ್ರಜೆಗಳು. ಪರಿಸರ ಕಾಪಾಡಿಕೊಳ್ಳುವ ಜವಾಬ್ದಾರಿ ಹೆಚ್ಚಿನಾದ್ದಾಗಿದೆ. ಒಳ್ಳೆಯ ಶಿಕ್ಷಣ ಪಡೆಯುವ ಜೊತೆಗೆ ಒಳ್ಳೆಯ ಪರಿಸರ ನಿರ್ಮಾಣ ಮಾಡಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಗಮನ ಹರಿಸಬೇಕೆಂದರು.
    ಎಸ್‌ವಿಎಸ್ ಶಾಲೆಯ ಸಂಸ್ಥಾಪಕ ಪ್ರಭಾಕರ್ ಮಾತನಾಡಿ, ದೆಹಲಿಯಲ್ಲಿ ಪ್ರಸ್ತುತ ಪರಿಸರ ಮಾಲಿನ್ಯ ತೀರ ಹದಗೆಟ್ಟಿದೆ. ಮಾಲಿನ್ಯ ನಿಯಂತ್ರಿಸಲು ಅಲ್ಲಿನ ಸರ್ಕಾರ ಲಾಕ್‌ಡೌನ್ ಘೋಷಿಸಿದೆ. ಭವಿಷ್ಯದಲ್ಲಿ ಈ ರೀತಿಯ ಪರಿಸ್ಥಿತಿ ರಾಜ್ಯದಲ್ಲೂ ಸಹ ಕಂಡು ಬರಬಹುದು. ಈ ಹಿನ್ನಲೆಯಲ್ಲಿ ನಾವೆಲ್ಲರೂ ಎಚ್ಚತ್ತುಕೊಳ್ಳಬೇಕಾಗಿದೆ. ಈ ಹಿನ್ನಲೆಯಲ್ಲಿ ನಮ್ಮ ಸುತ್ತಮುತ್ತ ಖಾಲಿ ಇರುವ ಸ್ಥಳಗಳಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ರಕ್ಷಣೆಗೆ ಮುಂದಾಗುವಂತೆ ಕರೆ ನೀಡಿದರು.
    ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಶಿವಮೊಗ್ಗ ವಲಯ ಸಂಚಾಲಕ ಸಲೀಮ್ ಉಮರಿ, ತಾಲೂಕು ಅಧ್ಯಕ್ಷ ಹಫೀಜ್ ರಹಮಾನ್ ಹಾಗು ಪದಾಧಿಕಾರಿಗಳು, ಕುಂಚ ಕಲಾವಿದರ ಸಂಘದ ಪದಾಧಿಕಾರಿಗಳು, ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ್, ತಾಂತ್ರಿಕ ಸಲಹೆಗಾರ ಮನೋಹರ್ ಮತ್ತು ಎಸ್‌ವಿಎಸ್ ಶಾಲೆಯ ಶಿಕ್ಷಕರು ಹಾಗು ಮಕ್ಕಳು ಉಪಸ್ಥಿತರಿದ್ದರು.
    ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಕಾರ್ಯಾಧ್ಯಕ್ಷ ಅಭಿಲಾಷ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.  ಕುಂಚ ಕಲಾವಿದರ ಸಂಘದ ಗುರು ವಂದಿಸಿದರು.

ಮಕ್ಕಳಿಂದಲೇ ಕಾರ್ಯಕ್ರಮ ಆಯೋಜನೆ : ನಿವೃತ್ತ ಶಿಕ್ಷಕರಿಗೆ ಬೀಳ್ಕೊಡುಗೆ

ಭದ್ರಾವತಿಯಲ್ಲಿ ಕಾಗದ ನಗರದ ಎಂಪಿಎಂ ಆಂಗ್ಲ ಶಾಲೆಯ ವಿದ್ಯಾರ್ಥಿಗಳು ಮಕ್ಕಳ ದಿನಾಚರಣೆ ಆಯೋಜಿಸುವ ಮೂಲಕ ಶಾಲೆಯಲ್ಲಿ ಸುಮಾರು ೧೭ ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಕೆ.ಆರ್ ಮಹೇಶ್ ಅವರನ್ನು ಸನ್ಮಾನಸಿ ಬೀಳ್ಕೊಡುಗೆ ನೀಡಿದರು.
    ಭದ್ರಾವತಿ, ನ. ೧೮: ಶಾಲಾ ಮಕ್ಕಳೇ ಕಾರ್ಯಕ್ರಮ ಆಯೋಜಿಸಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಬೀಳ್ಕೊಡುಗೆ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
    ಕಾಗದ ನಗರದ ಎಂಪಿಎಂ ಆಂಗ್ಲ ಶಾಲೆಯ ವಿದ್ಯಾರ್ಥಿಗಳು ಮಕ್ಕಳ ದಿನಾಚರಣೆ ಆಯೋಜಿಸುವ ಮೂಲಕ ಶಾಲೆಯಲ್ಲಿ ಸುಮಾರು ೧೭ ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಕೆ.ಆರ್ ಮಹೇಶ್ ಅವರನ್ನು ಸನ್ಮಾನಸಿ ಬೀಳ್ಕೊಡುಗೆ ನೀಡಿದರು.
    ಎಲ್‌ಕೆಜಿಯಿಂದ ೩ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ವಿವಿಧ ವೇಷಭೂಷಣ ಸ್ಪರ್ಧೆ ಆಯೋಜಿಸಲಾಗಿತ್ತು. ವೇದಿಕೆಯಲ್ಲಿ ವಿದ್ಯಾರ್ಥಿಗಳಾದ ದೃವನಶ್ರೀ, ವರ್ಷಿತ, ಪೃಥ್ವಿ, ಸ್ಪೂರ್ತಿ, ರಜತ್ ಮತ್ತು ಆಕಾಶ್ ಉಪಸ್ಥಿತರಿದ್ದರು.
    ಶಾಲೆಯ ಪ್ರಾಂಶುಪಾಲ ಆರ್. ಸತೀಶ್, ಉಪ ಪ್ರಾಂಶುಪಾಲ ನಾಗರಾಜ್ ಪಾಲ್ಗೊಂಡಿದ್ದರು. ಅನುರಾಧ ಮತ್ತು ಮಾರುತಿ ಕುಮಾರ್ ತೀರ್ಪುಗಾರರಾಗಿ ಕರ್ತವ್ಯ ನಿರ್ವಹಿಸಿದರು. ಪರಿಣಿತಾ ಮತ್ತು ಪ್ರೇರಣಾ ಪ್ರಾರ್ಥಿಸಿ, ಬಿಂದು ನಿರೂಪಿಸಿದರು.

Wednesday, November 17, 2021

ಬಾರಂದೂರು ಅಂಗನವಾಡಿಯಲ್ಲಿ ಕಳ್ಳತನ : ದೂರು ದಾಖಲು

ಭದ್ರಾವತಿ ತಾಲೂಕಿನ ಬಾರಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿಯೊಂದರಲ್ಲಿ ಕಳ್ಳತನ ನಡೆದಿದ್ದು, ಘಟನಾ ಸ್ಥಳಕ್ಕೆ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ, ಉಪಾಧ್ಯಕ್ಷೆ ಸುಮಾ ಪರಮೇಶ್ವರ್, ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
    ಭದ್ರಾವತಿ, ನ. ೧೭: ತಾಲೂಕಿನ ಬಾರಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿಯೊಂದರಲ್ಲಿ ಕಳ್ಳತನ ನಡೆದಿದ್ದು, ಈ ಸಂಬಂಧ ಕಾಗದನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
    ರಾತ್ರಿ ವೇಳೆ ಕಳ್ಳತನ ನಡೆಸಲಾಗಿದ್ದು, ೨ ಎರಡು ಸಿಲಿಂಡರ್, ದಿನಸಿ ಸಾಮಗ್ರಿಗಳನ್ನು ಕಳವು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ, ಉಪಾಧ್ಯಕ್ಷೆ ಸುಮಾ ಪರಮೇಶ್ವರ್, ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪೊಲೀಸರಿಗೆ ದೂರು ದಾಖಲಿಸಿದರು.

ಜಿಲ್ಲೆಯಲ್ಲಿ ಕಸಾಪ ಚುಟುವಟಿಕೆಗಳು ಸಕ್ರಿಯಗೊಳಿಸಲು ನನ್ನನ್ನು ಬೆಂಬಲಿಸಿ : ಡಿ. ಮಂಜುನಾಥ್

ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಮಾಜಿ ಅಧ್ಯಕ್ಷ ಡಿ. ಮಂಜುನಾಥ್ ಭದ್ರಾವತಿಯಲ್ಲಿ ಬುಧವಾರ  ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
    ಭದ್ರಾವತಿ, ನ. ೧೭: ಈ ಹಿಂದೆ ನನ್ನ ಅಧಿಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಸಾಹಿತ್ಯ ಪರಿಷತ್ ಚಟುವಟಿಕೆಗಳು ಸಕ್ರಿಯವಾಗಿದ್ದು, ಪ್ರಸ್ತುತ ಅಧ್ಯಕ್ಷರ ಅವಧಿಯಲ್ಲಿ ಕ್ರಿಯಾಶೀಲತೆ ಎಂಬುದು ಮರೆಯಾಗಿದೆ. ಈ ಹಿನ್ನಲೆಯಲ್ಲಿ ಹೊಸತನದೊಂದಿಗೆ ಸಾಹಿತ್ಯ ಪರಿಷತ್ ಚಟುವಟಿಕೆಗಳನ್ನು ಮುನ್ನಡೆಸಿಕೊಂಡು ಹೋಗಲು ಈ ಬಾರಿ ಚುನಾವಣೆಗೆ ಸ್ಪರ್ಧಿಸಲಾಗಿದೆ. ಪರಿಷತ್ತಿನ ಮತದಾರರು ನನ್ನನ್ನು ಬೆಂಬಲಿಸಬೇಕೆಂದು ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಮನವಿ ಮಾಡಿದರು.
    ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಸ್ತುತ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿರುವ ಡಿ.ಬಿ ಶಂಕರಪ್ಪ ಅವರ ತಂಡ ಅವರ ಅಧಿಕಾರದ ಅವಧಿಯಲ್ಲಿ ಯಾವುದೇ ಸಾಹಿತ್ಯಪರ ಚಟುವಟಿಕೆಗಳನ್ನು ಕೈಗೊಂಡಿಲ್ಲ. ಕೇವಲ ನನ್ನ ವಿರುದ್ಧ ಅಪಪ್ರಚಾರ ಕೈಗೊಂಡಿರುವುದು ಅವರ ಸಾಧನೆಯಾಗಿದೆ ಎಂದು ಆರೋಪಿಸಿದರು.
    ನಾನು ೨ ಬಾರಿ ನನ್ನ ಅಧಿಕಾರದ ಅವಧಿಯಲ್ಲಿ ನಿರಂತರವಾಗಿ ಜಿಲ್ಲಾದ್ಯಂತ ಚಟುವಟಿಕೆಗಳನ್ನು ನಡೆಸಿಕೊಂಡು ಬರುವ ಮೂಲಕ ಸಕ್ರಿಯವಾಗಿರಿಸಿದ್ದು, ಅಲ್ಲದೆ ಸರ್ಕಾರದಿಂದ ಹಲವು ಬಾರಿ ಅನುದಾನಗಳನ್ನು ಮಂಜೂರಾತಿ ಮಾಡಿಸುವ ಮೂಲಕ ಜಿಲ್ಲಾ ಕೇಂದ್ರ ಹಾಗು ತಾಲೂಕು ಕೇಂದ್ರಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ.  ನನ್ನ ಅವಧಿಯಲ್ಲಿ ಪೂರ್ಣಗೊಳ್ಳದ ಕೆಲವು ಅಭಿವೃದ್ಧಿ ಕಾರ್ಯಗಳನ್ನು ಪ್ರಸ್ತುತ ಅವಧಿಯ ಅಧ್ಯಕ್ಷರು ಪೂರ್ಣಗೊಳಿಸದಿರುವುದು ಮಾತ್ರವಲ್ಲದೆ ಯಾವುದೇ ಹೊಸ ಅಭಿವೃದ್ಧಿ ಕಾರ್ಯಗಳನ್ನು ಸಹ ಕೈಗೊಳ್ಳದಿರುವುದು ಅವರ ಅವಧಿಯಲ್ಲಿನ ಕಾರ್ಯ ಕ್ಷಮತೆಯನ್ನು ಎದ್ದು ತೋರಿಸುತ್ತದೆ ಎಂದರು.
    ಇದೀಗ ಪುನಃ ಚುನಾವಣೆಗೆ ನಾನು ಸ್ಪರ್ಧಿಸಿದ್ದು, ನ.೨೧ರ ಭಾನುವಾರ ನಡೆಯಲಿರುವ ಮತದಾನ ಕಾರ್ಯದಲ್ಲಿ ಪರಿಷತ್ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ನನ್ನನ್ನು ಬೆಂಬಲಿಸಬೇಕೆಂದು ಮನವಿ ಮಾಡಿದ ಅವರು, ಜಿಲ್ಲೆಯಾದ್ಯಂತ ಪ್ರತಿಯೊಬ್ಬ ಮತದಾರರ ಮನೆ ಮನೆಗೆ ಕೈಗೊಂಡಿರುವ ಪ್ರಚಾರ ಕಾರ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಈ ಬಾರಿ ಆಯ್ಕೆಯಾಗುವ ವಿಶ್ವಾಸವಿದೆ ಎಂದರು.
    ಪ್ರಮುಖರಾದ ಡಾ. ರಿಯಾಜ್ ಬಾಷಾ, ಕೋಗಲೂರು ತಿಪ್ಪೇಸ್ವಾಮಿ, ತಿಮ್ಮಪ್ಪ, ಕೋಡ್ಲುಯಜ್ಞಯ್ಯ, ಅನ್ನಪೂರ್ಣಸತೀಶ್, ಗುರು, ಚಂದ್ರಪ್ಪ ಸೇರಿದಂತೆ ಇನ್ನಿತರರು ಮಾತನಾಡಿ ಡಿ. ಮಂಜುನಾಥ್ ಅವರು ೨ ಬಾರಿ ಅಧ್ಯಕ್ಷರಾಗಿ ಎಲ್ಲರ ಸಹಕಾರದೊಂದಿಗೆ ಸಾಕಷ್ಟು ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಪರಿಷತ್‌ನಲ್ಲಿ ಕ್ರಿಯಾಶೀಲತೆ ತಂದುಕೊಟ್ಟಿದ್ದರು. ಈ ಹಿನ್ನಲೆಯಲ್ಲಿ ಮತದಾರರು ಡಿ. ಮಂಜುನಾಥ್ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಕೆ.ಟಿ ಪ್ರಸನ್ನ, ಪುಷ್ಪಾವತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ದಿವಂಗತ ಪುನೀತ್ ರಾಜ್‌ಕುಮಾರ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ : ಕೃತಜ್ಞತೆ

ಪುನೀತ್ ರಾಜ್‌ಕುಮಾರ್ ಜನ್ಮದಿನ 'ನೇತ್ರದಾನ' ದಿನವಾಗಿಸಿ


    ಭದ್ರಾವತಿ, ನ. ೧೬: ಇತ್ತೀಚೆಗೆ ನಿಧನ ಹೊಂದಿದ ಚಲನಚಿತ್ರ ನಟ, ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಘೋಷಣೆ ಮಾಡಿರುವುದಕ್ಕೆ ನಗರದ ಚಾಮೇಗೌಡ ಏರಿಯಾ ಬಿ.ಎಚ್ ರಸ್ತೆ ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘ ಕೃತಜ್ಞತೆ ಸಲ್ಲಿಸಿದೆ.
    ಪುನೀತ್ ರಾಜ್‌ಕುಮಾರ್‌ರವರ ಸಾಧನೆ ಅಪಾರವಾಗಿದ್ದು, ಪ್ರತಿಯೊಬ್ಬರ ಮನದಾಳದ ವ್ಯಕ್ತಿಯಾಗಿ ನೆಲೆ ನಿಂತಿದ್ದಾರೆ. ಅವರಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮರಣೋತ್ತರವಾಗಿ ಪ್ರಶಸ್ತಿ ನೀಡಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಈ ಹಿನ್ನಲೆಯಲ್ಲಿ ಬೊಮ್ಮಾಯಿಯವರಿಗೆ ಅಭಿಮಾನಿಗಳು, ಸಮಸ್ತ ನಾಗರೀಕರ ಪರವಾಗಿ ಸಂಘ ಕೃತಜ್ಞತೆ ಸಲ್ಲಿಸುತ್ತದೆ. ಇದರ ಜೊತೆಗೆ ಪುನೀತ್ ರಾಜ್‌ಕುಮಾರ್‌ರವರು ತಮ್ಮ ನೇತ್ರಗಳನ್ನು ದಾನ ಮಾಡುವ ಮೂಲಕ ೪ ಜನರ ಬದುಕಿನಲ್ಲಿ ಬೆಳಕಾಗಿ ಇತರರಿಗೆ ಸ್ಪೂರ್ತಿದಾಯಕರಾಗಿದ್ದಾರೆ. ಈ ಹಿನ್ನಲೆಯಲ್ಲಿ ಅವರ ಜನ್ಮದಿನವನ್ನು 'ನೇತ್ರದಾನ' ದಿನವಾಗಿ ಘೋಷಿಸಬೇಕೆಂದು ಮನವಿ ಮಾಡುತ್ತದೆ ಎಂದು ಸಂಘದ ಅಧ್ಯಕ್ಷ ವೆಂಕಟೇಶ್, ನಗರಸಭಾ ಸದಸ್ಯ ಜಾರ್ಜ್ ತಿಳಿಸಿದ್ದಾರೆ.