Thursday, December 9, 2021

ಆರೋಗ್ಯ ಇಲಾಖೆ ವತಿಯಿಂದ ನಗರಸಭೆ ೩೫ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಲಸಿಕೆ ನೀಡುವ ಕಾರ್ಯಕ್ರಮ




    ಭದ್ರಾವತಿ, ಡಿ. ೯: ತಾಲೂಕು ಆರೋಗ್ಯ ಇಲಾಖೆ ವತಿಯಿಂದ ನಗರಸಭೆ ೩೫ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಡಿ.೧೦ ಮತ್ತು ೧೧ ಎರಡು ದಿನಗಳ ಕಾಲ ಮೊದಲ ಡೋಸ್ ಮತ್ತು ಎರಡನೇ ಡೋಸ್ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ ಬೆಳಿಗ್ಗೆ ೮ ಗಂಟೆಯಿಂದ ಸಂಜೆ ೪ ಗಂಟೆವರೆಗೆ ಹಮ್ಮಿಕೊಳ್ಳಲಾಗಿದೆ.
    ಡಿ.೧೦ರಂದು ಅಶ್ವಥ್‌ನಗರ ನಗರ ಆರೋಗ್ಯ ಕೇಂದ್ರ  ವ್ಯಾಪ್ತಿಯಲ್ಲಿನ ವಾರ್ಡ್ ನಂ. ೦೮, ೦೯, ೧೦, ೧೨ ಮತ್ತು ೧೫ರ ನಿವಾಸಿಗಳಿಗೆ, ನೆಹರುನಗರ ನಗರ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿನ ವಾರ್ಡ್ ನಂ. ೦೪, ೦೫ ಮತ್ತು ೦೬ರ ನಿವಾಸಿಗಳಿಗೆ, ಉಜ್ಜನಿಪುರ ನಗರ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿನ ವಾರ್ಡ್ ನಂ. ೨೪, ೨೭, ೨೮, ೨೩ ಮತ್ತು ೨೨ರ ನಿವಾಸಿಗಳಿಗೆ ಹಾಗು ಜನ್ನಾಪುರ ನಗರ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿನ ವಾರ್ಡ್ ನಂ. ೦೧, ೦೩, ೦೨, ೩೧ ಮತ್ತು ೩೩ ನಿವಾಸಿಗಳಿಗೆ ಲಸಿಕೆ ನೀಡಲಾಗುವುದು.
    ಡಿ.೧೧ರಂದು ಅಶ್ವಥ್‌ನಗರ ನಗರ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿನ ವಾರ್ಡ್ ನಂ. ೦೭, ೧೧, ೧೪, ೧೫ ಮತ್ತು ೧೬ರ ನಿವಾಸಿಗಳಿಗೆ, ನೆಹರುನಗರ ನಗರ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿನ ವಾರ್ಡ್ ನಂ. ೧೩, ೧೭ ಮತ್ತು ೧೮ರ ನಿವಾಸಿಗಳಿಗೆ, ಉಜ್ಜನಿಪುರ ನಗರ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿನ ವಾರ್ಡ್ ನಂ. ೨೨, ೨೩, ೨೫, ೨೭ ಮತ್ತು ೨೮ರ ನಿವಾಸಿಗಳಿಗೆ ಹಾಗು ಜನ್ನಾಪುರ ನಗರ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿನ ವಾರ್ಡ್ ನಂ. ೨೯, ೩೦, ೩೨, ೩೪ ಮತ್ತು ೩೫ರ ನಿವಾಸಿಗಳಿಗೆ ಲಸಿಕೆ ನೀಡಲಾಗುವುದು.
    ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವ ಮೂಲಕ ಸಹಕರಿಸುವಂತೆ ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಮನವಿ ಮಾಡಿದ್ದಾರೆ.

ವಿಧಾನ ಪರಿಷತ್ ಚುನಾವಣೆ : ಸಾರ್ವಜನಿಕರಿಗೆ ಪ್ರವೇಶ ನಿಷೇಧ

    ಭದ್ರಾವತಿ, ಡಿ. ೯: ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ನಗರಸಭೆ ಕಛೇರಿಯಲ್ಲಿ ಮತಗಟ್ಟೆ ಕೇಂದ್ರ ತೆರೆಯಲಾಗಿದ್ದು, ಶುಕ್ರವಾರ ಮತದಾನ ನಡೆಯುವ ಸಂಬಂಧ ಮತಗಟ್ಟೆ ಕೇಂದ್ರದಿಂದ ೧೦೦ ಮೀಟರ್ ವಿಸ್ತೀರ್ಣದವರೆಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ.
    ಸ್ಥಳೀಯ ಸಂಸ್ಥೆ ನಗರಸಭೆ ಚುನಾಯಿತ ಪ್ರತಿನಿಧಿಗಳು ಮತ ಚಲಾಯಿಸಲು ಅನುಕೂಲವಾಗುವಂತೆ ಮತಗಟ್ಟೆ ಕೇಂದ್ರ (ಮತಗಟ್ಟೆ ಸಂಖ್ಯೆ ೧೮೦) ತೆರೆಯಲಾಗಿದೆ. ಮತದಾನ ಬೆಳಿಗ್ಗೆ ೮ ರಿಂದ ಸಂಜೆ ೪ರವರೆಗೆ ನಡೆಯಲಿದ್ದು, ಸಾರ್ವಜನಕರು ಸಹಕರಿಸುವಂತೆ ಪೌರಾಯುಕ್ತ ಕೆ. ಪರಮೇಶ್ ಕೋರಿದ್ದಾರೆ.

ವಿಜೃಂಭಣೆಯಿಂದ ಜರುಗಿದ ಸುಬ್ರಮಣ್ಯ ಷಷ್ಠಿ ಉತ್ಸವ

ಭದ್ರಾವತಿ ಹಳೇನಗರದ ಶ್ರೀ ರಾಮೇಶ್ವರ-ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಶ್ರೀ ಸುಬ್ರಮಣ್ಯ ಷಷ್ಠಿ ಉತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿತು.
    ಭದ್ರಾವತಿ, ಡಿ. ೯: ಹಳೇನಗರದ ಶ್ರೀ ರಾಮೇಶ್ವರ-ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಶ್ರೀ ಸುಬ್ರಮಣ್ಯ ಷಷ್ಠಿ ಉತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿತು.
    ಉತ್ಸವದ ಅಂಗವಾಗಿ ಬೆಳಿಗ್ಗೆ ಶ್ರೀ ಸುಬ್ರಮಣ್ಯ ಸ್ವಾಮಿಗೆ ಪಂಚಾಮೃತ ಅಭಿಷೇಕ ಮತ್ತು ಮಹನ್ಯಾಸ ಪೂರ್ವಕ ರುದ್ರಾಭಿಷೇಕ ನಂತರ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು.
    ಜನ್ನಾಪುರ ಶ್ರೀ ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರಾದ ವೇ||ಬ್ರ|| ಕೃಷ್ಣಮೂರ್ತಿ ಸೋಮಯಾಜಿಯವರ ನೇತೃತ್ವದಲ್ಲಿ ಮೂಲಮಂತ್ರ ಹೋಮ ನೆರವೇರಿತು. ನಂತರ ರಾಜಬೀದಿ ಉತ್ಸವ, ಪೂರ್ಣಾಹುತಿ, ಬ್ರಹ್ಮಚಾರಿಗಳ ಪೂಜೆ ಮತ್ತು   ತೀರ್ಥಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ಹಾಗು ಲಲಿತಾ ಭಕ್ತ ಮಂಡಳಿಯಿಂದ ಭಜನಾ ಕಾರ್ಯಕ್ರಮಗಳು ಜರುಗಿದವು.
    ಶ್ರೀ ರಾಮೇಶ್ವರ-ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನ ಅಧ್ಯಕ್ಷ ಜೆ.ಎಂ ಆನಂದರಾವ್, ಸಿ.ಕೆ ರಾಮಣ್ಣ, ಕೃಷ್ಣಮೂರ್ತಿ, ಮಧು, ನಾಗಣ್ಣ  ಸೇರಿದಂತೆ ನಗರದ ವಿವಿಧೆಡೆಗಳಿಂದ ಭಕ್ತಾಧಿಗಳು ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು.

ಡಿ.೧೦ರಂದು ಮಾನವ ಹಕ್ಕುಗಳ ದಿನಾಚರಣೆ

    ಭದ್ರಾವತಿ, ಡಿ. ೯: ಜನ್ನಾಪುರ ಎನ್‌ಟಿಬಿ ರಸ್ತೆಯಲ್ಲಿರುವ ಅಂಬೇಡ್ಕರ್ ಸಮುದಾಯ ಭವನದಲ್ಲಿ  ಡಿ.೧೦ರಂದು ಬೆಳಿಗ್ಗೆ ೧೦.೩೦ಕ್ಕೆ 'ಮಾನವ ಹಕ್ಕುಗಳ ದಿನಾಚರಣೆ' ಹಮ್ಮಿಕೊಳ್ಳಲಾಗಿದೆ.
       ನಗರದ ಡಾ.ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘ  ಹಾಗು ಶಿವಮೊಗ್ಗ ನೆಹರು ಯುವ ಕೇಂದ್ರ ಮತ್ತು ಹಳೇ ಸೀಗೆಬಾಗಿ ರಾಜೀವ್ ಗಾಂಧಿ ಶಿಕ್ಷಣ ಮಹಾವಿದ್ಯಾಲಯ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಯಶಸ್ವಿಗೊಳಿಸುವಂತೆ ಜಾನಪದ ಕಲಾವಿದ ತಮಟೆ ಜಗದೀಶ್ ಕೋರಿದ್ದಾರೆ.

ವಿಧಾನಪರಿಷತ್ ಚುನಾವಣೆಗೆ ತಾಲೂಕು ಆಡಳಿತ ಭರದ ಸಿದ್ದತೆ : ಮತಗಟ್ಟೆ ಅಧಿಕಾರಿಗಳು, ಸಿಬ್ಬಂದಿಗಳೊಂದಿಗೆ ಸಭೆ


ಭದ್ರಾವತಿ ವಿಧಾನ ಪರಿಷತ್ ಚುನಾವಣೆ ಮತದಾನ ಶುಕ್ರವಾರ ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ಗುರುವಾರ ಚುನಾವಣಾ ನೋಡಲ್ ಅಧಿಕಾರಿ, ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ಹಾಗು ತಹಸೀಲ್ದಾರ್ ಆರ್. ಪ್ರದೀಪ್ ಚುನಾವಣಾ ತರಬೇತಿ ಅಧಿಕಾರಿಗಳೊಂದಿಗೆ ಮತಗಟ್ಟೆ ಅಧಿಕಾರಿಗಳು ಹಾಗು ಸಿಬ್ಬಂದಿಗಳಿಗೆ ಅಗತ್ಯ ಮಾಹಿತಿಗಳನ್ನು ನೀಡಿದರು.
    ಭದ್ರಾವತಿ, ಡಿ. ೯: ವಿಧಾನ ಪರಿಷತ್ ಚುನಾವಣೆ ಮತದಾನಕ್ಕೆ ತಾಲೂಕು ಆಡಳಿತ ಭರದ ಸಿದ್ದತೆ ಕೈಗೊಂಡಿದ್ದು, ಎಲ್ಲಾ ಗ್ರಾಮ ಪಂಚಾಯಿತಿ ಮತ್ತು ನಗರಸಭೆ ಸೇರಿದಂತೆ ತಾಲೂಕಿನ ಒಟ್ಟು ೩೮ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.
    ಒಟ್ಟು ೪೭೯ ಮತದಾರರಿದ್ದು, ಈ ಪೈಕಿ ೨೫೪ ಮಹಿಳಾ ಹಾಗು ೨೨೫ ಪುರುಷ ಮತದಾರರಿದ್ದಾರೆ. ಮತದಾನದ ಹಕ್ಕಿನಲ್ಲೂ ಮಹಿಳೆಯರು ಮುಂದೆ ಇರುವುದು ವಿಶೇಷವಾಗಿದೆ. ತಾಲೂಕು ಪಂಚಾಯಿತಿ ಅವಧಿ ಮುಕ್ತಾಯಗೊಂಡಿರುವುದರಿಂದ ಇನ್ನೂ ಚುನಾವಣೆ ನಡೆದಿಲ್ಲ. ಇತ್ತೀಚೆಗೆ ನಗರಸಭೆ ೩೫ ವಾರ್ಡ್‌ಗಳಿಗೆ ಚುನಾವಣೆ ನಡೆದು ನೂತನ ಸದಸ್ಯರು ಆಯ್ಕೆಯಾಗಿದ್ದು, ಬಹುತೇಕ ಸದಸ್ಯರು ಮೊದಲ ಬಾರಿಗೆ ಮತ ಚಲಾಯಿಸುತ್ತಿದ್ದಾರೆ.
    ಆಯಾ ಪಂಚಾಯಿತಿಗಳಲ್ಲಿ ಮತದಾನ ಬೆಳಿಗ್ಗೆ ೮ ಗಂಟೆ ಯಿಂದ ಸಂಜೆ ೪ ಗಂಟೆವರೆಗೆ ನಡೆಯಲಿದ್ದು, ನೋಡಲ್ ಅಧಿಕಾರಿಯಾಗಿ ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
    ಗುರುವಾರ ಹಳೇ ತಾಲೂಕು ಕಛೇರಿ ಆವರಣದಲ್ಲಿ ಮತಗಟ್ಟೆ ಅಧಿಕಾರಿಗಳು ಹಾಗು ಸಿಬ್ಬಂದಿಗಳಿಗೆ ನೋಡಲ್ ಅಧಿಕಾರಿ ಟಿ.ವಿ ಪ್ರಕಾಶ್ ಅಗತ್ಯ ಮಾಹಿತಿಗಳನ್ನು ನೀಡಿದರು. ಉಳಿದಂತೆ ತಹಸೀಲ್ದಾರ್ ಆರ್. ಪ್ರದೀಪ್ ಚುನಾವಣಾ ತರಬೇತಿ ಅಧಿಕಾರಿಗಳೊಂದಿಗೆ ತಮ್ಮ ಕಛೇರಿಯಲ್ಲಿ ಮತಗಟ್ಟೆ ಅಧಿಕಾರಿಗಳು ಹಾಗು ಸಿಬ್ಬಂದಿಗಳಿಗೆ ಮತದಾನ ಸಂದರ್ಭದಲ್ಲಿ ವಹಿಸಬೇಕಾದ ಎಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

Wednesday, December 8, 2021

ನಿರ್ಮಲ ಆಸ್ಪತ್ರೆ ೨೪ ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ಪತ್ತೆ : ಆಸ್ಪತ್ರೆ ಸೀಲ್‌ಡೌನ್

ಭದ್ರಾವತಿ ಹಳೇನಗರದ ನಿರ್ಮಲ ಆಸ್ಪತ್ರೆ ೨೪ ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಆಸ್ಪತ್ರೆಯನ್ನು ಸೀಲ್‌ಡೌನ್ ಮಾಡಿರುವುದು.
    ಭದ್ರಾವತಿ, ಡಿ. ೯: ಶಿವಮೊಗ್ಗ ನಂಜಪ್ಪ ಲೈಫ್‌ಕೇರ್ ಆಸ್ಪತ್ರೆಯಲ್ಲಿ ಪರೀಕ್ಷೆ ಬರೆದ ಹಳೇನಗರದ ನಿರ್ಮಲ ಆಸ್ಪತ್ರೆಯ ೨೪ ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಇದರಿಂದಾಗಿ ಗುರುವಾರ ಆಸ್ಪತ್ರೆಯನ್ನು ಸೀಲ್‌ಡೌನ್ ಮಾಡಲಾಗಿದೆ.
    ಪರೀಕ್ಷೆಗೆ ತೆರಳಿದ್ದ ವಿದ್ಯಾರ್ಥಿಗಳ ಪೈಕಿ ಓರ್ವ ವಿದ್ಯಾರ್ಥಿಯಲ್ಲಿ ಸೋಂಕು ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ತಾಲೂಕು ಆರೋಗ್ಯ ಇಲಾಖೆ ವತಿಯಿಂದ ನರ್ಸಿಂಗ್ ವ್ಯಾಸಂಗ ನಡೆಸುತ್ತಿರುವ ಎಲ್ಲಾ  ಒಟ್ಟು ೧೭೯ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ೨೫ ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ. ವಿದ್ಯಾರ್ಥಿಗಳು ಹೊರಗೆ ಎಲ್ಲೂ ಸಹ ಹೋಗಿಲ್ಲ. ಆದರೂ ಸಹ ಸೋಂಕು ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ಪರೀಕ್ಷಾ ಕೇಂದ್ರದಿಂದಲೇ ಸೋಂಕು ಹರಡಿರುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.
ಮುನ್ನಚ್ಚರಿಕೆ ಕ್ರಮವಾಗಿ ಆಸ್ಪತ್ರೆಯನ್ನು ಸೀಲ್‌ಡೌನ್ ಮಾಡಲಾಗಿದ್ದು, ಆಸ್ಪತ್ರೆಯನ್ನು ಸಂಪೂರ್ಣವಾಗಿ ಸ್ಯಾನಿಟೈಜರ್ ಮಾಡಲಾಗಿದೆ. ಅಲ್ಲದೆ ಆಸ್ಪತ್ರೆಗೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದ್ದು, ಮುಖ್ಯದ್ವಾರವನ್ನು ಟೇಪ್ ಮಾಡುವ ಮೂಲಕ ಬಂದ್ ಮಾಡಲಾಗಿದೆ.
    ಆಸ್ಪತ್ರೆಯಲ್ಲಿ ಈ ಹಿಂದೆ ಕೊರೋನಾ ಸೋಂಕಿತರಿಗೂ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಸಂದರ್ಭದಲ್ಲಿ ಹೆಚ್ಚಿನ ಕಟ್ಟುನಿಟ್ಟಿನ ಎಚ್ಚರಿಕೆ ಕ್ರಮಗಳನ್ನು ಅನುಸರಿಸಲಾಗುತ್ತಿತ್ತು. ಇದರಿಂದ ಯಾವುದೇ ಸೋಂಕು ಪ್ರಕರಣಗಳು ಆಸ್ಪತ್ರೆಯಲ್ಲಿ ಕಂಡು ಬಂದಿರಲಿಲ್ಲ.

ಅಮಲೋದ್ಭವಿ ಮಾತೆಯ ದೇವಾಲಯದ ೮೩ನೇ ವರ್ಷದ ವಾರ್ಷಿಕೋತ್ಸವಕ್ಕೆ ತೆರೆ


ಭದ್ರಾವತಿ ನ್ಯೂಟೌನ್ ಅಮಲೋದ್ಭವಿ ಮಾತೆಯ ದೇವಾಲಯದ ೮೩ನೇ ವರ್ಷದ ವಾರ್ಷಿಕೋತ್ಸವದಲ್ಲಿ ದೇವಾಲಯದ ಧರ್ಮಗುರು ಫಾದರ್ ಲಾನ್ಸಿ ಡಿಸೋಜ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಡಿ.೮: ನಗರದ ನ್ಯೂಟೌನ್ ಅಮಲೋದ್ಭವಿ ಮಾತೆಯ ದೇವಾಲಯದ ೮೩ನೇ ವರ್ಷದ ವಾರ್ಷಿಕೋತ್ಸವ ಬುಧವಾರ ಆಡಂಬರದ ಬಲಿ ಪೂಜೆ, ವಿಶೇಷ ದಾನಿಗಳ ಸರಣೆ ಮತ್ತು ಸನ್ಮಾನ ಕಾರ್ಯಕ್ರಮಗಳೊಂದಿಗೆ ಮುಕ್ತಾಯಗೊಂಡಿತು.
    ಜಗದ್ಗುರು ಪೋಪ್‌ರವರ ಕರೆಯೋಲೆಯಂತೆ ೨೦೨೩ರಲ್ಲಿ ನಡೆಯುವ ವಿಶ್ವ ಸಿನೋದ್ ಸಭೆಯ ಸಿದ್ದತಾ ಪ್ರಕ್ರಿಯೆಗಳಿಗೆ ಪೂರಕವಾಗಿರುವಂತೆ  'ಅಮಲೋದ್ಭವಿ ಮಾತೆಯೊಡನೆ ಅನ್ಯೋನ್ಯತೆ, ಸಹಭಾಗಿತ್ವ ಮತ್ತು ಸುವಾರ್ತಾ ಸೇವೆಯೆಡೆಗೆ ಜೊತೆಯಾಗಿ ನಮ್ಮ ಪಯಣ' ಎಂಬ ಶೀರ್ಷಿಕೆಯೊಂದಿಗೆ ನ.೨೮ ಆರಂಭಗೊಂಡಿದ್ದ ವಾರ್ಷಿಕೋತ್ಸವದಲ್ಲಿ ಪ್ರತಿದಿನ ಸಂಜೆ ಜಪಸರ ಪ್ರಾರ್ಥನೆ, ಪೂಜೆ ಮತ್ತು ಪ್ರಬೋಧನೆಗಳು ಜರುಗಿದವು.
    ಶಿವಮೊಗ್ಗ ಗುಡ್ ಶೆಪರ್ಡ್ ಧರ್ಮಕೇಂದ್ರದ ಗುರು ಫಾದರ್ ವಿರೇಶ್ ಮೋರಾಸ್, ಮಾವಿನಕೆರೆ ಕಿರಿಯ ಪುಷ್ಪ ಸಂತ ತೆರೇಸಮ್ಮನವರ ಸುವಾರ್ತ ಕೇಂದ್ರದ ಧರ್ಮಗುರು ಫಾದರ್ ವೀನಸ್ ಪ್ರವೀಣ್, ಶಿವಮೊಗ್ಗ ಸೇಕೆರ್ಡ್ ಆರ್ಟ್ ಶಾಲೆ ಪ್ರಾಂಶುಪಾಲ ಫಾದರ್ ಲಾರೆನ್ಸ್, ಹಿರಿಯೂರು ವಿಯಾನ್ನಿ ಪ್ರೇಷಿತರ ಗೃಹದ ನಿರ್ದೇಶಕ ಫಾದರ್ ಸಂತೋಷ್, ಕಾಗದನಗರ ಸಂತ ಜೋಸೆಫ್‌ರ ದೇವಾಲಯದ ಎಸ್‌ಡಿಬಿ ಫಾದರ್ ಡೋಮಿನಿಕ್, ಉಜ್ಜನಿಪುರ ಡಾನ್ ಬೋಸ್ಕೋ ಐಟಿಐ ನಿರ್ದೇಶಕ ಎಸ್‌ಡಿಬಿ ಫಾದರ್ ಆರೋಗ್ಯರಾಜ್ ಮತ್ತು ಹಿರಿಯೂರು ಸ್ವರ್ಗ ಸ್ವೀಕೃತ ಮಾತೆಯ ದೇವಾಲಯದ ಧರ್ಮಗುರು ಫಾದರ್ ಫ್ರಾಂಕ್ಲಿನ್ ಡಿಸೋಜ ಮಾತನಾಡಲಿದ್ದಾರೆ. ಜೇಡಿಕಟ್ಟೆ ಆಶಾಕಿರಣ ನಿರ್ದೇಶಕ ಫಾದರ್ ಪ್ರಕಾಶ್, ಕಡೂರಿನ ನಿತ್ಯಾಧಾರ ಮಾತೆ ದೇವಾಲಯದ ಧರ್ಮಗುರು ಫಾದರ್ ರಾಜೇಂದ್ರ, ಹಾಸನ ಸಂತ ಅಂತೋಣಿಯವರ ದೇವಾಲಯದ ಧರ್ಮಗುರು ಫಾದರ್ ಜೋನಾಸ್ ಪ್ಯಾಟ್ರಿಕ್ ರಾವ್ ಸೇರಿದಂತೆ ಇನ್ನಿತರ ಧರ್ಮಗುರುಗಳು ಭಾಗವಹಿಸಿದ್ದರು.
    ವಾರ್ಷಿಕೋತ್ಸವದ ಅಂಗವಾಗಿ ರೋಗಿಗಳಿಗೆ ವಿಶೇಷ ಪ್ರಾರ್ಥನೆ, ಅಲೋದ್ಭವಿ ಮಾತೆಯ ಭವ್ಯ ತೇರಿನ ಮೆರವಣಿಗೆ, ಭಕ್ತರಿಗೆ ಆಶೀರ್ವಾದ ಹಾಗು ಅನ್ನಸಂತರ್ಪಣೆ, ಆಡಂಬರದ ಬಲಿ ಪೂಜೆ, ವಿಶೇಷ ದಾನಿಗಳ ಸರಣೆ ಮತ್ತು ಸನ್ಮಾನ ಕಾರ್ಯಕ್ರಮಗಳು ಜರುಗಿದವು.
    ದಾನಿಗಳಾದ ಉದ್ಯಮಿ ಎ. ಮಾಧು, ನಗರಸಭಾ ಸದಸ್ಯ ಜಾರ್ಜ್, ದೇವಾಲಯದ ಧರ್ಮಗುರು ಫಾದರ್ ಲಾನ್ಸಿ ಡಿಸೋಜ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.  ಪಾಲನ ಪರಿಷತ್ ಕಾರ್ಯದರ್ಶಿ ಅಂತೋಣಿ ವಿಲ್ಸನ್ ವಂದಿಸಿದರು. ನಗರದ ವಿವಿಧೆಡೆ ಭಕ್ತಾಧಿಗಳು ಪಾಲ್ಗೊಂಡಿದ್ದರು.