![](https://blogger.googleusercontent.com/img/b/R29vZ2xl/AVvXsEhT2iWkh8VSKxRnjeDk_Yf3R6Uy5qVZXAOQh3zooI22fCx2E_FXXG_2TmRMqe98Hpq3oxknWegaByK1c16OGn8l3VYfgmcW_QU0AFer2iyvc2-KZAAaz_ajNOwFEU5aTst_bKiSet_tFv54/w400-h284-rw/D19-BDVT1-703826.jpg)
ಭದ್ರಾವತಿ ಜನ್ನಾಪುರ ಎನ್‌ಟಿಬಿ ರಸ್ತೆಯಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಗರಾಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಮತ್ತು ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮ್ಯಾನ್ಯುಯಲ್ ಸ್ಕ್ಯಾವೆಂಜರ್‍ಸ್‌ಗಳ ಸಮೀಕ್ಷೆ ಕಾರ್ಯಕ್ರಮದಲ್ಲಿ ಎಂದು ಸಫಾಯಿ ಕರ್ಮಚಾರಿಗಳ ಆಯೋಗದ ಜಿಲ್ಲಾ ಸಮಿತಿ ಸದಸ್ಯ ಚಿನ್ನಯ್ಯ ಮಾತನಾಡಿದರು.
ಭದ್ರಾವತಿ, ಡಿ. ೧೯: ರಾಜ್ಯದಲ್ಲಿ ೨೦೧೩ರಲ್ಲಿಯೇ ಮಲಹೊರುವ ಪದ್ದತಿ ನಿಷೇಧಿಸಲಾಗಿದ್ದು, ಆದರೂ ಸಹ ಇಂದಿಗೂ ಈ ವೃತ್ತಿಯಲ್ಲಿ ತೊಡಗಿಸಿಕೊಂಡಿರುವವರು ಕಂಡು ಬರುತ್ತಿದ್ದಾರೆ. ಇವರನ್ನು ಗುರುತಿಸಿ ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಎಲ್ಲರದ್ದಾಗಿದೆ ಎಂದು ಸಫಾಯಿ ಕರ್ಮಚಾರಿಗಳ ಆಯೋಗದ ಜಿಲ್ಲಾ ಸಮಿತಿ ಸದಸ್ಯ ಚಿನ್ನಯ್ಯ ಹೇಳಿದರು.
ಅವರು ಜನ್ನಾಪುರ ಎನ್‌ಟಿಬಿ ರಸ್ತೆಯಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಗರಾಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಮತ್ತು ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮ್ಯಾನ್ಯುಯಲ್ ಸ್ಕ್ಯಾವೆಂಜರ್‍ಸ್‌ಗಳ ಸಮೀಕ್ಷೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಲಹೊರುವ ಪದ್ದತಿ ಸಮಾಜದಲ್ಲಿ ಒಂದು ಅನಿಷ್ಟ ಪದ್ದತಿಯಾಗಿದ್ದು, ಈ ಪದ್ದತಿ ಸಂಪೂರ್ಣವಾಗಿ ನಿಷೇಧವಾಗಬೇಕು. ಈ ವೃತ್ತಿಯಲ್ಲಿ ತೊಡಗಿಸಿಕೊಂಡಿರುವವರು ತಕ್ಷಣ ಈ ವೃತ್ತಿಯನ್ನು ತೊರೆದು ಹೊರಬರಬೇಕು. ಈ ಕುರಿತು ಘೋಷಿಸಿಕೊಂಡ ಕುಟುಂಬಗಳಿಗೆ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ. ಇಲ್ಲವಾದಲ್ಲಿ ಭವಿಷ್ಯದಲ್ಲಿ ಮತ್ತಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈಗಲೂ ಸಹ ಮಲದ ಗುಂಡಿಗಳನ್ನು ಸ್ವಚ್ಛಗೊಳಿಸಲು ಕೆಲವರನ್ನು ಬಳಸಿಕೊಳ್ಳಲಾಗುತ್ತಿದೆ. ಈ ರೀತಿ ಮಾಡುವವರ ವಿರುದ್ಧ ಸಹ ಕಠಿಣ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಜಾರಿಗೆ ತರಲಾಗಿರುವ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಮ್ಯಾನ್ಯುಯಲ್ ಸ್ಕ್ಯಾವೆಂಜರ್‍ಸ್‌ಗಳ ಸಮೀಕ್ಷೆ ಪರಿಣಾಮಕಾರಿ ನಡೆಯಬೇಕೆಂದರು.
ನಗರಸಭೆ ಉಪಾಧ್ಯಕ್ಷ ಚನ್ನಪ್ಪ ಮಾತನಾಡಿ, ಹಿಂದಿನ ಕಾಲದಲ್ಲಿ ಕೆಲವರು ನಾಗರೀಕ ಸಮಾಜದಲ್ಲಿ ಸತಿಸಹಗಮನ ಪದ್ದತಿ, ಬಾಲ್ಯವಿವಾಹ ಸೇರಿದಂತೆ ಕೆಲವು ಅನಿಷ್ಠ ಪದ್ದತಿಗಳನ್ನು ಜಾರಿಗೆ ತಂದಿದ್ದರು. ಇಂತಹ ಪದ್ದತಿಗಳಲ್ಲಿ ಮಲ ಹೊರುವ ಪದ್ದತಿ ಸಹ ಒಂದಾಗಿದೆ. ಕೆಲಸ ಮಾಡುವುದು ತಪ್ಪಲ್ಲ. ಯಾವ ಕೆಲಸ ಮಾಡಬೇಕು, ಹೇಗೆ ಮಾಡಬೇಕೆಂಬ ಪರಿಕಲ್ಪನೆ ನಮ್ಮಲ್ಲಿರಬೇಕು. ಆಗ ಮಾತ್ರ ಈ ರೀತಿಯ ಅನಿಷ್ಟ ಪದ್ದತಿಗಳು ನಿರ್ಮೂಲನೆಯಾಗಲಿವೆ ಎಂದರು.
ಪೌರಾಯುಕ್ತ ಕೆ. ಪರಮೇಶ್, ನಗರಸಭೆ ಸದಸ್ಯೆ ಸವಿತಾ ಉಮೇಶ್, ಪರಿಸರ ಅಭಿಯಂತರ ಪ್ರಭಾಕರ್ ಸೇರಿದಂತೆ ಇನ್ನಿತರರು ಮಾತನಾಡಿದರು. ಹಿರಿಯ ಆರೋಗ್ಯ ನಿರೀಕ್ಷಕ ಆರ್.ಬಿ ಸತೀಶ್, ಜಾನಪದ ಕಲಾವಿದ ತಮಟೆ ಜಗದೀಶ್ ಕಾರ್ಯಕ್ರಮ ನಿರೂಪಿಸಿದರು.