Friday, December 24, 2021

ಸುಗ್ರಾಮ ಅಧ್ಯಕ್ಷೆಯಾಗಿ ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಸದಸ್ಯೆ ಗೌರಮ್ಮ ಎಸ್. ಮಹಾದೇವ ಆಯ್ಕೆ

ಭದ್ರಾವತಿ ದುರ್ಗಾ ಕಾಂಚನ ಹೋಟೆಲ್ ಸಭಾಂಗಣದಲ್ಲಿ ಶುಕ್ರವಾರ ದಿ ಹಂಗರ್ ಪ್ರಾಜೆಕ್ಟ್, ಕರ್ನಾಟಕ ಮತ್ತು ತರೀಕೆರೆ, ವಿಕಸನ ಸಂಸ್ಥೆ ನೇತೃತ್ವದಲ್ಲಿ ತಾಲೂಕು ಸುಗ್ರಾಮ ಚುನಾಯಿತ ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರ ಒಕ್ಕೂಟದ ಚುನಾವಣೆ ನಡೆದು ನೂತನ ಪದಾಧಿಕಾರಿಗಳು ಆಯ್ಕೆಯಾದರು.
    ಭದ್ರಾವತಿ, ಡಿ. ೨೪: ತಾಲೂಕು ಸುಗ್ರಾಮ ಚುನಾಯಿತ ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರ ಒಕ್ಕೂಟದ ಅಧ್ಯಕ್ಷರಾಗಿ ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಸದಸ್ಯೆ ಗೌರಮ್ಮ ಎಸ್. ಮಹಾದೇವ ಆಯ್ಕೆಯಾಗಿದ್ದಾರೆ.
    ದುರ್ಗಾ ಕಾಂಚನ ಹೋಟೆಲ್ ಸಭಾಂಗಣದಲ್ಲಿ ಶುಕ್ರವಾರ ದಿ ಹಂಗರ್ ಪ್ರಾಜೆಕ್ಟ್, ಕರ್ನಾಟಕ ಮತ್ತು ತರೀಕೆರೆ, ವಿಕಸನ ಸಂಸ್ಥೆ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು ೧೩ ಸ್ಪರ್ಧಿಗಳು ಕಣದಲ್ಲಿದ್ದರು. ಈ ಪೈಕಿ ಗೌರಮ್ಮ-೫೬, ಪಲ್ಲವಿ-೪೬, ಗೀತಾ-೪೧, ಕವಿತಾ-೪೧, ಮಾಲತಿ-೩೯, ನಜೀಮಾ ಸುಲ್ತಾನ-೨೮ ಮತ್ತು ಶಾಂತಿಬಾಯಿ-೨೪ ಮತಗಳನ್ನು ಪಡೆದುಕೊಂಡು ಕ್ರಮವಾಗಿ ಅಧ್ಯಕ್ಷರಾಗಿ ಗೌರಮ್ಮ, ಉಪಾಧ್ಯಕ್ಷರಾಗಿ ಪಲ್ಲವಿ, ಕಾರ್ಯದರ್ಶಿಯಾಗಿ ಗೀತಾ, ಖಜಾಂಚಿಯಾಗಿ ಕವಿತಾ ಮತ್ತು ನಿರ್ದೇಶಕರಾಗಿ ಮಾಲತಿ, ನಜೀಮಾ ಸುಲ್ತಾನ ಮತ್ತು ಶಾಂತಿಬಾಯಿ ಆಯ್ಕೆಯಾಗಿದರು.
    ದಿ ಹಂಗರ್ ಪ್ರಾಜೆಕ್ಟ್, ಕರ್ನಾಟಕದ ಪದ್ಮಿನಿ ಅನಂತ್,  ಬೆಳಗಾವಿ      ಸ್ಪಂದನ ಸಂಸ್ಥೆಯ ಉಮಾ ಮತ್ತು ಶಂಕರ್ ವಿಕಸನ ಸಂಸ್ಥೆ ಯ ಶಾಲಿನಿ, ತರೀಕೆರೆ ವಿಕಸನ ಸಂಸ್ಥೆಯ ಶಬಾನ ಬೇಗಂ, ರೂಪ ಮತ್ತು ಶ್ರೀನಿವಾಸ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.

ಒಕ್ಕಲಿಗರ ಸಂಘದ ನೂತನ ನಿರ್ದೇಶಕ ಧರ್ಮೇಶ್ ಸಿರಿಬೈಲ್‌ಗೆ ಅಭಿನಂದನೆ

ಸಮುದಾಯದವರ ಆರ್ಥಿಕ, ಶೈಕ್ಷಣಿಕ ಬೆಳವಣಿಗೆಗೆ ಹೆಚ್ಚಿನ ಗಮನ


ಭದ್ರಾವತಿ ಅಪ್ಪರ್‌ಹುತ್ತಾ ಒಕ್ಕಲಿಗರ ಸಮುದಾಯ ಭವನದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಒಕ್ಕಲಿಗರ ಸಂಘದ ಶಿವಮೊಗ್ಗ-ಉತ್ತರ ಕನ್ನಡ ಕ್ಷೇತ್ರದ ನೂತನ ನಿರ್ದೇಶಕ ಧರ್ಮೇಶ್ ಸಿರಿಬೈಲ್ ಅವರನ್ನು ಅಭಿನಂದಿಸಲಾಯಿತು.
    ಭದ್ರಾವತಿ, ಡಿ. ೨೪: ಒಕ್ಕಲಿಗ ಸಮುದಾಯದವರ ಏಳಿಗೆಗೆ ಬದ್ಧವಿದ್ದು, ಸಮುದಾಯದವರ ಆರ್ಥಿಕ, ಶೈಕ್ಷಣಿಕ ಬೆಳವಣಿಗೆಗೆ ಹೆಚ್ಚಿನ ಗಮನ ಹರಿಸುವುದಾಗಿ ರಾಜ್ಯ ಒಕ್ಕಲಿಗರ ಸಂಘದ ಶಿವಮೊಗ್ಗ-ಉತ್ತರ ಕನ್ನಡ ಕ್ಷೇತ್ರದ ನೂತನ ನಿರ್ದೇಶಕ ಧರ್ಮೇಶ್ ಸಿರಿಬೈಲ್ ಹೇಳಿದರು.
    ಅವರು ಶುಕ್ರವಾರ ನಗರದ ಅಪ್ಪರ್‌ಹುತ್ತಾ ಒಕ್ಕಲಿಗರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
    ಸಮಾಜದಲ್ಲಿ ಒಕ್ಕಲಿಗ ಸಮುದಾಯದವರಿಗೆ ಹೆಚ್ಚಿನ ಗೌರವವಿದ್ದು, ಸಮುದಾಯವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ. ಈ ಚುನಾವಣೆಯನ್ನು ಯಾರು ಸಹ ರಾಜಕೀಯವಾಗಿ ನೋಡಬಾರದು. ಸಮುದಾಯದ ಅಭಿವೃದ್ಧಿ ಮಾತ್ರ ಚುನಾವಣೆಯ ಹಿಂದಿನ ಉದ್ದೇಶ ಎಂಬುದನ್ನು ಅರಿತುಕೊಳ್ಳಬೇಕು. ನನ್ನ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
    ತಾಲೂಕಿನ ಒಕ್ಕಲಿಗ ಸಮುದಾಯದವರ ಪ್ರೀತಿ, ವಿಶ್ವಾಸಕ್ಕೆ ಪ್ರತಿಯಾಗಿ ಸ್ನೇಹಜೀವಿ ಬಳಗದ ಪೊಲೀಸ್ ಉಮೇಶ್ ಅವರ ಸಹಕಾರದೊಂದಿಗೆ ನಾಡಹಬ್ಬ ಪ್ರಭು ಕೆಂಪೇಗೌಡ ಪ್ರತಿಮೆಯನ್ನು ಕೊಡುಗೆಯಾಗಿ ನೀಡುತ್ತೇನೆ ಎಂದು ಭರವಸೆ ನೀಡಿದರು.
ಸಮುದಾಯದ ಪ್ರಮುಖರು ಮಾತನಾಡಿ, ಒಕ್ಕಲಿಗರ ಸಮುದಾಯದ ಏಳಿಗೆಗಾಗಿ ಶ್ರಮಿಸುವ ಒಳ್ಳೆಯ ವ್ಯಕ್ತಿಯನ್ನು ಆಯ್ಕೆ ಮಾಡಬೇಕೆಂಬ ಆಶಯದೊಂದಿಗೆ ಈ ಬಾರಿ ಧರ್ಮೇಶ್ ಅವರನ್ನು ಬೆಂಬಲಿಸಲಾಗಿದೆ. ಮುಂದಿನ ದಿನಗಳಲ್ಲಿ ಧರ್ಮೇಶ್ ಅವರು ಯಾವುದೇ ಸಂದರ್ಭದಲ್ಲೂ ಸಮುದಾಯದವರ ಪರವಾಗಿ ನಿಲ್ಲುವಂತಾಗಬೇಕು. ಚುನಾವಣೆ ಮುಗಿದ ನಂತರ ಸೋಲು-ಗೆಲುವು ಸಹಜ. ಎಲ್ಲರನ್ನೂ ಒಂದೇ ರೀತಿಯಲ್ಲಿ ನೋಡುವ  ಮನೋಭಾವ ಬಹಳ ಮುಖ್ಯವಾಗಿದೆ. ಒಕ್ಕಲಿಗ ಸಮುದಾಯದ ಪ್ರತಿಯೊಬ್ಬರ ಧ್ವನಿಯಾಗಬೇಕೆಂದರು.
    ವೇದಿಕೆಯಲ್ಲಿ ಒಕ್ಕಲಿಗ ಸಮುದಾಯದ ಪ್ರಮುಖರಾದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎಸ್. ಮಣಿಶೇಖರ್, ಜೆ.ಪಿ ಯೋಗೇಶ್, ಸ್ನೇಹಜೀವಿ ಬಳಗದ ಪೊಲೀಸ್ ಉಮೇಶ್, ನಗರಸಭೆ ಮಾಜಿ ಸದಸ್ಯ ಬಾಲಕೃಷ್ಣ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಸಹಕಾರ ಧುರೀಣ ಗೊಂದಿ ಜಯರಾಮ್, ಲೋಹಿತಾ ನಂಜಪ್ಪ, ತಾಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷ ನಾಗೇಶ್, ಎಪಿಎಂಸಿ ಮಾಜಿ ಉಪಾಧ್ಯಕ್ಷ ದೇವರಾಜ್, ಹಾಪ್‌ಕಾಮ್ಸ್ ಅಧ್ಯಕ್ಷ ವಿಜಯಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಮಾಜಿ ನಗರಸಭಾ ಮಾಜಿ ಅಧ್ಯಕ್ಷ ಸಿ.ಎನ್ ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಅನ್ನಪೂರ್ಣ ಸತೀಶ್ ಕಾರ್ಯಕ್ರಮ ನಿರೂಪಿಸಿದರು.

Thursday, December 23, 2021

ನಗರಸಭೆಯಲ್ಲಿ ಭ್ರಷ್ಟಾಚಾರ, ಮೂಲಸೌಕರ್ಯ ಕೊರತೆ ಖಂಡಿಸಿ ಬಿಜೆಪಿ ಪ್ರತಿಭಟನೆ

ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಗಳ ಕೊರತೆ, ನಗರಸಭೆ ಕಛೇರಿಯಲ್ಲಿ ಭ್ರಷ್ಟಾಚಾರ, ಮಧ್ಯವರ್ತಿಗಳ ಹಾವಳಿ ಖಂಡಿಸಿ ಹಾಗು ವಿವಿಧೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗುರುವಾರ ನಗರಸಭೆ ಕಛೇರಿ ಮುಂಭಾಗ ಭಾರತೀಯ ಜನತಾ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ, ಡಿ. ೨೩: ನಗರಸಭೆ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಗಳ ಕೊರತೆ, ನಗರಸಭೆ ಕಛೇರಿಯಲ್ಲಿ ಭ್ರಷ್ಟಾಚಾರ, ಮಧ್ಯವರ್ತಿಗಳ ಹಾವಳಿ ಖಂಡಿಸಿ ಹಾಗು ವಿವಿಧೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗುರುವಾರ ನಗರಸಭೆ ಕಛೇರಿ ಮುಂಭಾಗ ಭಾರತೀಯ ಜನತಾ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
    ಪಕ್ಷದ ಪ್ರಮುಖರು ಮಾತನಾಡಿ, ಬಿಜೆಪಿಯಲ್ಲಿ ಅಧಿಕಾರದ ಗದ್ದುಗೆ ಹಿಡಿದಿರುವ ಕಾಂಗ್ರೆಸ್ ಸದಸ್ಯರ ವಾರ್ಡ್‌ಗಳಿಗೆ ಮಾತ್ರ ಹೆಚ್ಚಿನ ಕಾಮಗಾರಿ ನೀಡಲಾಗುತ್ತಿದೆ. ನಗರಸಭೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಹಸ್ತಕ್ಷೇಪ ಹೆಚ್ಚಾಗಿದ್ದು, ಅಭಿವೃದ್ಧಿ ಕಾರ್ಯಗಳಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದರು.
    ಮನೆ ಕಂದಾಯ, ನೀರಿನ ಕಂದಾಯ ಹೆಚ್ಚಳ ಮಾಡಲಾಗಿದೆ. ಪ್ರತಿಯೊಂದು ಕೆಲಸಗಳನ್ನು ಸಿಬ್ಬಂದಿಗಳು ಮಧ್ಯವರ್ತಿಗಳ ಮೂಲಕ ನಿರ್ವಹಿಸುತ್ತಿದ್ದಾರೆ. ಸ್ವತ್ತಿನ ಮಾಲೀಕರು ಕಂದಾಯ ಪಾವತಿಸಿರುವುದು ಕಛೇರಿಯ ಪುಸ್ತಕದಲ್ಲಿ ನಮೂದಾಗುತ್ತಿಲ್ಲ. ದಿನ ಕೂಲಿ ನೌಕರರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹಾಜರಾತಿ ದಾಖಲೆಯಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ. ಬೀದಿ ದೀಪಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಮುಖ್ಯ ನಲ್ಲಿ ನೀರಿನ ಸರಬರಾಜಿಗೆ ತಾಂತ್ರಿಕವಾಗಿ ೬ ಇಂಚಿನ ಪೈಲ್‌ಲೈನ್ ಅಳವಡಿಸುವ ಬದಲು ೩ ಇಂಚಿನ ಪೈಪ್‌ಲೈನ್ ಅಳವಡಿಸಲಾಗಿದೆ. ಹೀಗೆ ಹಲವಾರು ಕಾಮಗಾರಿಗಳನ್ನು ಬೇಕಾಬಿಟ್ಟಿಯಾಗಿ ಕೈಗೊಳ್ಳಲಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ತಕ್ಷಣ ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು. ಗಾಂಧಿ ವೃತ್ತದಲ್ಲಿ ಬೀದಿಬದಿ ವ್ಯಾಪಾರಿಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಅವರ ವ್ಯವಹಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡುವುದು. ಪಂಪ್‌ಹೌಸ್‌ಗಳಲ್ಲಿ ಹಳೇಯ ಯಂತ್ರಗಳನ್ನು ಬದಲಿಸಿ ಹೊಸ ಯಂತ್ರಗನ್ನು ಅಳವಡಿಸುವುದು. ಯುಜಿಡಿ ಕಾಮಗಾರಿಯನ್ನು ತಕ್ಷಣ ಮುಕ್ತಾಯಗೊಳಿಸುವುದು ಹಾಗು ಮಾಧವ್‌ಚಾರ್ ವೃತ್ತದಿಂದ ಸಿ.ಎನ್ ಅಗಲೀಕರಣ ಕಾರ್ಯ ಕೈಗೊಳ್ಳುವುದು ಸೇರಿದಂತೆ ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಯಿತು. ಕೊನೆಯಲ್ಲಿ ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ಮತ್ತು ತಹಸೀಲ್ದಾರ್ ಆರ್. ಪ್ರದೀಪ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
    ಪಕ್ಷದ ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜಿ. ಧರ್ಮಪ್ರಸಾದ್, ಬಿ.ಕೆ ಶ್ರೀನಾಥ್, ನಗರಸಭಾ ಸದಸ್ಯರಾದ ವಿ. ಕದಿರೇಶ್, ಅನುಪಮ, ಅನಿತಾ ಮಲ್ಲೇಶ್ ಮತ್ತು ಶಶಿಕಲಾ, ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಪಾಟೀಲ್, ಪ್ರಮುಖರಾದ ಎನ್. ವಿಶ್ವನಾಥರಾವ್, ಟಿ. ವೆಂಕಟೇಶ್, ನರಸಿಂಹಚಾರ್, ಎಂ. ಮಂಜುನಾಥ್, ರಮೇಶ್, ಕೆ.ಆರ್ ಸತೀಶ್, ಚನ್ನೇಶ್, ಬಿ.ಎಸ್ ಶ್ರೀನಾಥ್, ರಾಮನಾಥ್ ಬರ್ಗೆ, ಬಿ.ಕೆ ಚಂದ್ರಪ್ಪ, ಪಿ. ಗಣೇಶ್‌ರಾವ್, ಅವಿನಾಶ್, ಬಿ.ಎಸ್ ನಾರಾಯಣಪ್ಪ, ಮಂಜು, ಜಗದೀಶ್‌ಪಟೇಲ್, ನಕುಲ್,  ಅನ್ನಪೂರ್ಣ ಸಾವಂತ್, ಹೇಮಾವತಿ, ಅನೂಷ, ಕವಿತಾ, ರೇಖಾ, ಸುಶೀಲಾ, ರುಕ್ಮಿಣಿ, ಮಂಗಳಗೌರಿ, ಸರಸ್ವತಿ, ಎಸ್.ಎನ್ ನಾಗಮಣಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Wednesday, December 22, 2021

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ ಹೊಳೆಹೊನ್ನೂರಿನ ಸತೀಶ್ ಅವಿರೋಧ ಆಯ್ಕೆ

ಭದ್ರಾವತಿ, ಡಿ. ೨೩ : ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ ಹೊಳೆಹೊನ್ನೂರಿನ ಸತೀಶ್ ಗುರುವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.    ಒಟ್ಟು ೧೭ ಸ್ಥಾನಗಳನ್ನು ಹೊಂದಿರುವ ಸಮಿತಿಯಲ್ಲಿ ಹೊಂದಾಣಿಕೆ ಯಂತೆ ಹಿಂದೆ ಲವೇಶ್ ಗೌಡ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇದೀಗ ನೂತನ ಅಧ್ಯಕ್ಷರಾಗಿ ಸತೀಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದು, ಚುನಾವಣಾಧಿಕಾರಿಯಾಗಿ ತಾಲೂಕು ದಂಡಾಧಿಕಾರಿ ತಹಸಿಲ್ದಾರ್ ಆರ್. ಪ್ರದೀಪ್ ಕರ್ತವ್ಯ ನಿರ್ವಹಿಸಿದರು.  ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಜಿಲ್ಲಾ ಉಪನಿರ್ದೇಶಕ ಜಯಕುಮಾರ್, ಕಾರ್ಯದರ್ಶಿ ಸತೀಶ್ ಉಪಸ್ಥಿತರಿದ್ದರು.  ಸದಸ್ಯರಾದ ಕುಬೇಂದ್ರಪ್ಪ, ಎಂ.ಎಸ್ ಚಂದ್ರಶೇಖರ್, ಎಂ.ಎಸ್ ಬಸವರಾಜಪ್ಪ, ಟಿ.ಎಂ ರತ್ನಮ್ಮ, ಟಿ.ವಿ ಸುಜಾತ, ಲವೇಶ್‌ಗೌಡ, ರಾಜಾನಾಯ್ಕ, ಜಯರಾಂ, ಖಾಸಿಂ ಸಾಬ್, ಲಕ್ಷ್ಮಣಪ್ಪ ಮತ್ತು ಡಾ. ಎಚ್. ನಾಗೇಶ್ ಸೇರಿದಂತೆ ಒಟ್ಟು ೧೨ ಮಂದಿ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.  ಅಧ್ಯಕ್ಷ ಸ್ಥಾನಕ್ಕೆ ಕೇವಲ ಒಂದೇ ಒಂದು ನಾಮಪತ್ರ ಸಲ್ಲಿಕ್ಕೆಯಾದ ಹಿನ್ನೆಲೆಯಲ್ಲಿ  ಅವಿರೋಧ ಆಯ್ಕೆ ಘೋಷಿಸಲಾಯಿತು. ನೂತನ ಅಧ್ಯಕ್ಷರನ್ನು ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ, ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್ ಕುಮಾರ್, ತಾಲೂಕು ಕ್ಷತ್ರಿಯ ಮರಾಠ ಸಮಾಜದ ಅಧ್ಯಕ್ಷ ಯಶವಂತರಾವ್ ಘೋರ್ಪಡೆ ಸೇರಿದಂತೆ ಇನ್ನಿತರರು ಅಭಿನಂದಿಸಿದರು.

ಕಾರ್ಯಾಧ್ಯಕ್ಷರಾಗಿ ಡಾ. ಸಿ. ರಾಮಚಾರಿ ನೇಮಕ

ಡಾ. ಸಿ. ರಾಮಚಾರಿ
    ಭದ್ರಾವತಿ, ಡಿ. ೨೨: ಅಖಿಲ ಭಾರತ ವಿಶ್ವಕರ್ಮ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ಎಚ್.ವಿ ಸತೀಶ್‌ಕುಮಾರ್‌ರವರು ತಾಲೂಕಿನ ಬಾರಂದೂರು ನಿವಾಸಿ ಡಾ. ಸಿ. ರಾಮಚಾರಿ ಅವರನ್ನು ರಾಜ್ಯ ಘಟಕದ ಕಾರ್ಯಾಧ್ಯಕ್ಷರನ್ನಾಗಿ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.
    ನೂತನ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಡಾ. ಸಿ. ರಾಮಚಾರಿಯವರಿಗೆ ತುಮಕೂರು, ಹಾಸನ, ಚಿಕ್ಕಮಗಳೂರು, ಮೈಸೂರು ಮತ್ತು ಶಿವಮೊಗ್ಗ ಸೇರಿದಂತೆ ಒಟ್ಟು ೫ ಜಿಲ್ಲೆಗಳ ಉಸ್ತುವಾರಿಗಳಾಗಿ ಕಾರ್ಯನಿರ್ವಹಿಸುವಂತೆ ಪರಿಷತ್ತಿನ ರಾಜ್ಯಾಧ್ಯಕ್ಷ ಆರ್. ಪ್ರಸನ್ನಕುಮಾರ್ ಸೂಚಿಸಿದ್ದಾರೆ.
    ಸಿ. ರಾಮಚಾರಿಯವರು ಹಲವಾರು ವರ್ಷಗಳಿಂದ ವಿಶ್ವಕರ್ಮ ಸಮುದಾಯ ಸಂಘಟಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದು, ಇದೀಗ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿರುವುದು ಸಮುದಾಯವನ್ನು ಮತ್ತಷ್ಟು ಸಂಘಟಿಸಲು ಸಹಕಾರಿಯಾಗಿದೆ.

ಡಿ.೨೪ರಂದು ಸರ್ವಸದಸ್ಯರ ವಾರ್ಷಿಕ ಮಹಾಸಭೆ

ಭದ್ರಾವತಿ, ಡಿ. ೨೨: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯ ಕಾರ್ಮಿಕರು ತಮ್ಮ ಮುಂದಿನ ಭವಿಷ್ಯಕ್ಕಾಗಿ ರೂಪಿಸಿಕೊಂಡಿರುವ ಮೈಸೂರು ಕಾಗದ ಕಾರ್ಖಾನೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಇದೀಗ ಹಲವು ಸಮಸ್ಯೆಗಳು ಎದುರಾಗಿದ್ದು,  ಸಂಘ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ಈ ನಡುವೆ ಡಿ.೨೪ರಂದು ಬೆಳಿಗ್ಗೆ ೧೦ ಗಂಟೆಗೆ ಕಾಗದನಗರದ ಸೀತಾರಾಮ ಸಮುದಾಯ ಭವನದಲ್ಲಿ ೩೨ನೇ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಹಮ್ಮಿಕೊಂಡಿದೆ.
    ಸರ್ಕಾರ ಪ್ರಸ್ತುತ ಖಾಲಿ ನಿವೇಶನಗಳಿಗೆ ಸುಮಾರು ೬ ರಿಂದ ೭ ಪಟ್ಟು ಕಂದಾಯ ಹೆಚ್ಚಳ ಮಾಡಿದೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗು ನಗರಸಭೆ ಆಡಳಿತ ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾಗಿ ಸ್ಪಂದಿಸುತ್ತಿಲ್ಲ. ಸಂಘಕ್ಕೆ ಪ್ರಸ್ತುತ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಈ ಎಲ್ಲಾ ಬೆಳವಣಿಗೆಗಳ ಕುರಿತು ಸಭೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕಾಗಿದೆ. ಈ ಹಿನ್ನಲೆಯಲ್ಲಿ ಸದಸ್ಯರು ತಪ್ಪದೇ ಭಾಗವಹಿಸುವಂತೆ ಸಂಘದ ಅಧ್ಯಕ್ಷ ಟಿ.ಜಿ ಬಸವರಾಜಯ್ಯ ಕೋರಿದ್ದಾರೆ.

ಎಂ.ಇ.ಎಸ್ ಸಂಘಟನೆ ನಿಷೇಧಿಸಿ : ಬಂಧಿತ ೨೭ ಮಂದಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಿ

ಜಯಕರ್ನಾಟಕ ಸಂಘಟನೆ ವತಿಯಿಂದ ತಹಸೀಲ್ದಾರ್‌ಗೆ ಮನವಿ


ಬೆಳಗಾವಿಯಲ್ಲಿ ಎಂ.ಇ.ಎಸ್ ಪುಂಡರ ಹಾವಳಿ ಮಿತಿ ಮೀರಿದ್ದು, ಸ್ವಾತಂತ್ರ್ಯ ಹೋರಾಟಗಾರ, ದೇಶಭಕ್ತ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ಉರುಳಿಸಿ ಧ್ವಂಸಗೊಳಿಸಿರುವ ಪ್ರಕರಣದಲ್ಲಿ ಬಂಧಿತರಾಗಿರುವ ೨೭ ಮಂದಿ ಎಂ.ಇ.ಎಸ್ ಪುಂಡರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಹಾಗು ಈ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕೆಂದು ಆಗ್ರಹಿಸಿ ಬುಧವಾರ ಭದ್ರಾವತಿಯಲ್ಲಿ ಜಯಕರ್ನಾಟಕ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ, ಡಿ. ೨೨: ಬೆಳಗಾವಿಯಲ್ಲಿ ಎಂ.ಇ.ಎಸ್ ಪುಂಡರ ಹಾವಳಿ ಮಿತಿ ಮೀರಿದ್ದು, ಸ್ವಾತಂತ್ರ್ಯ ಹೋರಾಟಗಾರ, ದೇಶಭಕ್ತ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ಉರುಳಿಸಿ ಧ್ವಂಸಗೊಳಿಸಿರುವ ಪ್ರಕರಣದಲ್ಲಿ ಬಂಧಿತರಾಗಿರುವ ೨೭ ಮಂದಿ ಎಂ.ಇ.ಎಸ್ ಪುಂಡರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಹಾಗು ಈ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕೆಂದು ಆಗ್ರಹಿಸಿ ಬುಧವಾರ ಜಯ ಕರ್ನಾಟಕ ಸಂಘಟನೆ ವತಿಯಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
    ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ಡಾ. ಬಾಬಾಸಾಹೇಬ್ ಅಂಬೇಡ್ಕರ್‌ರವರ ಪ್ರತಿಮೆಗೆ ಯುವ ಮುಖಂಡ ಬಿ.ಎಸ್ ಗಣೇಶ್ ಹಾಗು ಸಂಘಟನೆ ಜಿಲ್ಲಾಧ್ಯಕ್ಷ ಡಾ. ಜೆ.ಆರ್ ದೀಪಕ್ ಮತ್ತು ತಾಲೂಕು ಅಧ್ಯಕ್ಷ ಆರ್. ಅರುಣ್ ನೇತೃತ್ವದಲ್ಲಿ ಮಾಲಾರ್ಪಣೆ ಮಾಡಿದ ಕಾರ್ಯಕರ್ತರು ಎಂ.ಇ.ಎಸ್ ಪುಂಡರ ಪುಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ನೆಲ, ಜಲ, ಭಾಷೆಗಾಗಿ ಕನ್ನಡಿಗರು ಯಾವುದೇ ರೀತಿಯ ಹೋರಾಟಕ್ಕೂ ಸಿದ್ದರಿದ್ದು, ರಾಜ್ಯದಲ್ಲಿ ಎಂ.ಇ.ಎಸ್ ಪುಂಡರು ಪೊಲೀಸ್ ವಾಹನಗಳಿಗೆ ಬೆಂಕಿ ಇಡುವ ಜೊತೆಗೆ ಸರ್ಕಾರ ವಾಹನಗಳ ಮೇಲೆ ಮನಸೋ ಇಚ್ಛೆ ಕಲ್ಲು ತೂರಾಟ ನಡೆಸಿ ದೇಶಭಕ್ತ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ಧ್ವಂಸಗೊಳಿಸಿರುವುದು ಕನ್ನಡಿಗರಿಗೆ ಹಾಗು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿರುವ ಅಪಮಾನವಾಗಿದೆ. ಈ ಹಿನ್ನಲೆ ಸರ್ಕಾರ ತಕ್ಷಣ ಎಂ.ಇ.ಎಸ್ ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
    ನಂತರ ತಾಲೂಕು ಕಛೇರಿ ಮಿನಿವಿಧಾನಸೌಧದವರೆಗೂ ಬೈಕ್ ರ್‍ಯಾಲಿ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಜಿಲ್ಲಾ ಕಾರ್ಯಾಧ್ಯಕ್ಷ ಅಬ್ದುಲ್ ರಹೀಮ್, ತಾಲೂಕು ಗೌರವಾಧ್ಯಕ್ಷ ಪಿ. ಶರವಣ, ತಾಲೂಕು ಉಸ್ತುವಾರಿ ದಿವ್ಯರಾಜ್, ಶಂಕರಘಟ್ಟ ಘಟಕದ ಅಧ್ಯಕ್ಷ ಡಿ.ಟಿ ಶಶಿಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಆರ್. ವರಲಕ್ಷ್ಮಿ, ಆಟೋ ಶಂಕರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.