Sunday, January 2, 2022

ಜ.೩ರಂದು ಶ್ರೀಮಾತೆ ಸಾವಿತ್ರಿ ಬಾಯಿಪುಲೆ ೧೯೧ನೇ ಜಯಂತಿ

    ಭದ್ರಾವತಿ, ಜ. ೨: ಕರ್ನಾಟಕ ದಲಿತ ನೌಕರರ ಒಕ್ಕೂಟದ ವತಿಯಿಂದ ಜ.೩ರಂದು ಸಂಜೆ ೫.೩೦ಕ್ಕೆ ಬಿ.ಎಚ್ ರಸ್ತೆ, ದುರ್ಗಾ ಕಾಂಚನ ಹೋಟೆಲ್ ಸಭಾಂಗಣದಲ್ಲಿ ಅಕ್ಷರದವ್ವ ಶ್ರೀಮಾತೆ ಸಾವಿತ್ರಿ ಬಾಯಿಪುಲೆಯವರ ೧೯೧ನೇ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಡಿಎಸ್‌ಎಸ್ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕು.ವಿ.ವಿ ಪ್ರಾಧ್ಯಾಪಕ ಜಗನ್ನಾಥ ಕೆ.ಡಾಂಗೆ ಉಪನ್ಯಾಸ ನೀಡಲಿದ್ದಾರೆ.
    ತಹಸೀಲ್ದಾರ್ ಆರ್. ಪ್ರದೀಪ್, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಚಿನ್ನಯ್ಯ, ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷ ಸಿ. ಜಯಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ, ಡಿಎಸ್‌ಎಸ್ ತಾಲೂಕು ಸಂಚಾಲಕ ಕೆ. ರಂಗನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎ. ತಿಪ್ಪೇಸ್ವಾಮಿ ಕೋರಿದ್ದಾರೆ.

ವಿದ್ಯುತ್ ತಗುಲಿ ಗಾಯಗೊಂಡ ಪ್ರಕರಣ : ೫ ಜನರ ವಿರುದ್ಧ ಪ್ರಕರಣ ದಾಖಲು

    ಭದ್ರಾವತಿ, ಜ. ೨: ಕೆಲವು ದಿನಗಳ ಹಿಂದೆ ಆನೇಕೊಪ್ಪ ನಗರಸಭೆ ಪಂಪ್ ಹೌಸ್ ಬಳಿ ನಿರಂತರ ಜ್ಯೋತಿ ವಿದ್ಯುತ್ ಕಾಮಗಾರಿ ನಡೆಸುತ್ತಿದ್ದ ಸಂದರ್ಭದಲ್ಲಿ ಖಾಸಗಿ ಕಂಪನಿಯೊಂದರ ಇಬ್ಬರು ಕಾರ್ಮಿಕರಿಗೆ ವಿದ್ಯುತ್ ತಗುಲಿ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ೫ ಜನರ ವಿರುದ್ಧ ಪ್ರಕರಣ ಕಾಗದನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಬಜಾಜ್ ಎಲೆಕ್ಟ್ರಿಕಲ್ ಲಿಮಿಟೆಡ್ ಕಾರ್ಮಿಕರಾದ ಸಂತೋಷ್ ಮತ್ತು ಪರಮೇಶ್ ಇಬ್ಬರು ೧೧ ಕೆ.ವಿ ವಿದ್ಯುತ್ ಕಂಬಗಳಲ್ಲಿ ವಿದ್ಯುತ್ ಜಂಪ್ ಜೋಡಿಸುವಾಗಿ ವಿದ್ಯುತ್ ಪ್ರವಹಿಸಿದ್ದು, ಇದರಿಂದಾಗಿ ಇಬ್ಬರು ಕೆಳಗೆ ಬಿದ್ದು ತೀವ್ರ ಗಾಯಗೊಂಡಿದ್ದರು. ಇಬ್ಬರನ್ನು ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು.
    ಯಾವುದೇ ಸುರಕ್ಷತೆ ಇಲ್ಲದೆ ಕಾಮಗಾರಿ ನಿರ್ವಹಿಸಿದ ಹಾಗು ಸುರಕ್ಷತಾ ಸಲಕರಣೆಗಳನ್ನು ನೀಡದೆ ಇರುವ ಆರೋಪದಡಿ   ವ್ಯಾಪ್ತಿಯ ಬಜಾಜ್ ಎಲೆಕ್ಟ್ರಿಕಲ್ ಲಿಮಿಟೆಡ್ ವ್ಯವಸ್ಥಾಪಕರಾದ ವೇದ ಪ್ರಕಾಶ್, ಸೈಟ್ ಸೂಪರ್ ವೈಸರ್ ಮದನ್‌ಕುಮಾರ್ ಹಾಗು ಈ ಭಾಗದ ಮೆಸ್ಕಾಂ ಲೈನ್‌ಮ್ಯಾನ್‌ಗಳಾದ ಭರ್ಮೇಗೌಡ ಮತ್ತು ಚನ್ನಯ್ಯ ಹಾಗು ಕಿರಿಯ ಇಂಜಿನಿಯರ್ ಲೋಕೇಶ್ ಸೇರಿದಂತೆ ಒಟ್ಟು ೫ ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಬಡವ ರಾಸ್ಕಲ್ ಚಿತ್ರದ ನಟ ಡಾಲಿ ಧನಂಜಯ ನಗರಕ್ಕೆ ಆಗಮನ : ಅಭಿಮಾನಿಗಳಿಂದ ಜೆಸಿಬಿ ಮೂಲಕ ಪುಷ್ಪ ಮಾಲೆ

ಭದ್ರಾವತಿಗೆ ಭಾನುವಾರ ಆಗಮಿಸಿದ ಬಡವ ರಾಸ್ಕಲ್ ಚಿತ್ರದ ನಟ ಡಾಲಿ ಧನಂಜಯ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ನಿವಾಸಕ್ಕೆ ಭೇಟಿ ನೀಡಿದರು.
 
    ಭದ್ರಾವತಿ, ಜ. ೨: ಕಳೆದ ವಾರ ಬಿಡುಗಡೆಯಾದ ಬಡವ ರಾಸ್ಕರ್ ಚಿತ್ರದ ನಟ ಡಾಲಿ ಧನಂಜಯ ಭಾನುವಾರ ಚಿತ್ರದ ಪ್ರಚಾರಕ್ಕೆ ಸಿ.ಎನ್ ರಸ್ತೆಯಲ್ಲಿರುವ ನೇತ್ರಾವತಿ ಚಿತ್ರಮಂದಿರಕ್ಕೆ ಆಗಮಿಸಿದರು.
    ಧನಂಜಯ ಅವರಿಗೆ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ ಕಂಡು ಬಂದಿತು. ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಬಡವ ರಾಸ್ಕರ್ ಚಿತ್ರ ಇನ್ನೂ ಹೆಚ್ಚಿನ ಪ್ರದರ್ಶನಗೊಳ್ಳಲು ನೆರವಾಗುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸುವಂತೆ ಅಭಿಮಾನಿಗಳು ಹಾಗು ಸಾರ್ವಜನಿಕರಿಗೆ ನಟ ಧನಂಜಯ ಮನವಿ ಮಾಡಿದರು.
    ಇದಕ್ಕೂ ಮೊದಲು ಚಿತ್ರಮಂದಿರದ ಮಾಲೀಕ ದುಷ್ಯಂತ್ ರಾಜ್ ಮತ್ತು ಸಿಬ್ಬಂದಿಗಳು ಧನಂಜಯ ಅವರನ್ನು ಪುಷ್ಪ ಮಾಲಿಕೆ ಮೂಲಕ ಸ್ವಾಗತಿಸಿದರು.
    ಅಪ್ಪಾಜಿ ನಿವಾಸಕ್ಕೆ ಭೇಟಿ:
    ನಟ ಧನಂಜಯ ನ್ಯೂಟೌನ್ ಉಂಬ್ಳೆಬೈಲು ರಸ್ತೆಯಲ್ಲಿರುವ ಮಾಜಿ ಶಾಸಕ ದಿವಂಗತ ಶಾಸಕ ಎಂ.ಜೆ ಅಪ್ಪಾಜಿ ನಿವಾಸಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರಿಗೆ ಅಭಿಮಾನಿಗಳು ಜೆಸಿಬಿ ಮೂಲಕ ಪುಷ್ಪ ಮಾಲೆ ಸಮರ್ಪಿಸಿದರು.
    ಜೆಡಿಎಸ್ ಮುಖಂಡರಾ ಶಾರದ ಅಪ್ಪಾಜಿ, ಪುತ್ರ ಎಂ.ಎ ಅಜಿತ್ ಸೇರಿದಂತೆ ಕುಟುಂಬ ವರ್ಗದವರು ಧನಂಜಯ ಅವರಿಗೆ ಅದ್ದೂರಿ ಸ್ವಾಗತ ಕೋರಿದರು.



ಭದ್ರಾವತಿಗೆ ಭಾನುವಾರ ಆಗಮಿಸಿದ ಬಡವ ರಾಸ್ಕಲ್ ಚಿತ್ರದ ನಟ ಡಾಲಿ ಧನಂಜಯ ಅವರಿಗೆ ಅಭಿಮಾನಿಗಳು ಜೆಸಿಬಿ ಮೂಲಕ ಪುಷ್ಪ ಮಾಲೆ ಸಮರ್ಪಿಸಿದರು.

ಪೊಲೀಸರು ಕುಟುಂಬದಲ್ಲೂ ನೆಮ್ಮದಿ ವಾತಾವಣ ರೂಪಿಸಿಕೊಳ್ಳಲು ಪ್ರಯತ್ನಿಸಿ : ಆರ್. ಪ್ರದೀಪ್

ಭದ್ರಾವತಿ  ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಪೊಲೀಸ್ ಕುಟುಂಬದ ವಾರ್ಷಿಕ ಕ್ರೀಡಾಕೂಟದ ಕಾರ್ಯಕ್ರಮವನ್ನು ತಹಸೀಲ್ದಾರ್ ಆರ್. ಪ್ರದೀಪ್, ಪೊಲೀಸ್ ಉಪ ಅಧೀಕ್ಷಕರಾದ ಜಿತೇಂದ್ರಕುಮಾರ್ ದಯಾಮ, ಗಜಾನನ ಸುತಾರಾ ಸೇರಿದಂತೆ ಇನ್ನಿತರರು ಪಾರಿವಾಳ ಹಾರಿ ಬಿಡುವ ಮೂಲಕ ಉದ್ಘಾಟಿಸಿದರು.
    ಭದ್ರಾವತಿ, ಜ. ೨: ಅತಿಸೂಕ್ಷ್ಮ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರು ದಿನದ ೨೪ ಗಂಟೆ ಸಹ ಎಚ್ಚರಿಕೆ ವಹಿಸಬೇಕಾಗಿದೆ. ಇದರಿಂದಾಗಿ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಅದರೂ ಸಹ ಅಲ್ಪಸ್ವಲ್ಪ ಬಿಡುವಿನಲ್ಲಿ ಕುಟುಂಬದ ಸದಸ್ಯರ ಬಗ್ಗೆ ಕಾಳಜಿವಹಿಸುವ ಮೂಲಕ ಕುಟುಂಬದಲ್ಲೂ ನೆಮ್ಮದಿ ವಾತಾವರಣ ರೂಪಿಸಿಕೊಳ್ಳಬೇಕಾಗಿದೆ ಎಂದು ತಹಸೀಲ್ದಾರ್ ಆರ್. ಪ್ರದೀಪ್ ಹೇಳಿದರು.
    ಅವರು ಭಾನುವಾರ ನಗರದ ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಪೊಲೀಸ್ ಕುಟುಂಬದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
    ಸರ್ಕಾರದ ಇತರೆ ಇಲಾಖೆಗಳಿಗೆ ಹೋಲಿಸಿದ್ದಲ್ಲಿ ಪೊಲೀಸ್ ಇಲಾಖೆಯವರು ಹೆಚ್ಚಿನ ಸಮಯ ಕರ್ತವ್ಯಕ್ಕೆ ಮೀಸಲಿಡಬೇಕಾಗಿದೆ. ಅದರಲ್ಲೂ ಭದ್ರಾವತಿ ಕ್ಷೇತ್ರದಂತಹ ಸೂಕ್ಷ್ಮ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರು ಹೆಚ್ಚಿನ ಒತ್ತಡಕ್ಕೆ ಒಳಗಾಗುವಂತಾಗಿದೆ. ಇಲ್ಲಿನ ರಾಜಕೀಯ ಹಾಗು ಸಾಮಾಜಿಕ ವ್ಯವಸ್ಥೆಗಳಿಗೆ ಹೊಂದಿಕೊಂಡು ಹೋಗಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕುಟುಂಬ ಸದಸ್ಯರೊಂದಿಗೆ ನೆಮ್ಮದಿಯಿಂದ ಕಾಲ ಕಳೆಯಲು ಸಾಧ್ಯವಾಗದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಅದರಲ್ಲೂ ಕಳೆದ ೨ ವರ್ಷಗಳಿಂದ ಕೋವಿಡ್-೧೯ ಮಹಾಮಾರಿ ಪರಿಣಾಮ ಕುಟುಂಬ ಸದಸ್ಯರ ಜೊತೆ ಮತ್ತಷ್ಟು ದೂರ ಉಳಿಯುವಂತಾಗಿದೆ. ಇದೀಗ ಕ್ರೀಡಾಕೂಟ ಆಯೋಜನೆ ಮೂಲಕ ಎಲ್ಲರೂ ಒಂದೆಡೆ ಸೇರಿ ಸಂಭ್ರಮಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಕುಟುಂಬ ಸದಸ್ಯರು ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದರು.
    ಐಪಿಎಸ್ ಅಧಿಕಾರಿ ಉಪವಿಭಾಗದ  ಪೊಲೀಸ್ ಉಪ ಅಧೀಕ್ಷಕ ಜಿತೇಂದ್ರಕುಮಾರ್ ದಯಾಮಾ ಅಧ್ಯಕ್ಷತೆ ವಹಿಸಿದ್ದರು. ಪ್ರೊಫೆಷನರಿ ಐಪಿಎಸ್ ಅಧಿಕಾರಿ ಗಜಾನನ ಸುತಾರಾ, ಹೊಳೆಹೊನ್ನೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಲಕ್ಷ್ಮೀಪತಿ, ಗ್ರಾಮಾಂತರ ವೃತ್ತ ನಿರೀಕ್ಷಕ ಚೈತನ್ಯ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಕಾಗದ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಇ.ಓ ಮಂಜುನಾಥ್ ಸ್ವಾಗತಿಸಿದರು. ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ವಂದಿಸಿದರು. ದೈಹಿಕ ಶಿಕ್ಷಕ ಶಿವಲಿಂಗೇಗೌಡ ಕಾರ್ಯಕ್ರಮ ನಿರೂಪಿಸಿದರು.
    ದೈಹಿಕ ಶಿಕ್ಷಕರಾದ ಕರಣ್‌ಸಿಂಗ್, ರೇವತಿ ಮತ್ತು ಅಂತೋಣಿ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು. ಕ್ರೀಡಾ ಪ್ರತಿಜ್ಞೆ ಬೋಧಿಸಲಾಯಿತು.



ಭದ್ರಾವತಿ  ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಪೊಲೀಸ್ ಕುಟುಂಬದ ವಾರ್ಷಿಕ ಕ್ರೀಡಾಕೂಟಕ್ಕೆ ತಹಸೀಲ್ದಾರ್ ಆರ್. ಪ್ರದೀಪ್ ಗುಂಡು ಎಸೆಯುವ ಮೂಲಕ ಚಾಲನೆ ನೀಡಿದರು.

Saturday, January 1, 2022

ಫಲಾಪೇಕ್ಷೆ ರಹಿತವಾದ ಸೇವೆಗೆ ಭಗವಂತ ಪ್ರಸನ್ನ : ಶ್ರಿ ಸತ್ಯಾತ್ಮ ತೀರ್ಥರು.

ಭದ್ರಾವತಿ ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೨೯ರ ಜನ್ನಾಪುರದ ಶ್ರೀರಾಘವೇಂದ್ರಸ್ವಾಮಿಗಳ ಮಠಕ್ಕೆ ಉತ್ತರಾಧಿಮಠದ ಶ್ರೀಸತ್ಯಾತ್ಮತೀರ್ಥ ಶ್ರೀಗಳು ಭೇಟಿ ನೀಡಿ ಭಕ್ತರಿಗೆ ಆಶೀರ್ವಚನ ನೀಡಿದರು.  
    ಭದ್ರಾವತಿ, ಜ. ೧: ಯಾವುದೇ ಫಲಾಪೇಕ್ಷೆಯಿಲ್ಲದೆ ಭಗವಂತನಲ್ಲಿ ಅಚಲವಾದ ನಂಬಿಕೆ ಹೊಂದಿ ಮಾಡುವ ಕಾರ್ಯಗಳಿಂದ ಭಗವಂತ ಪ್ರಸನ್ನನಾಗಿ ಸದಾ ಸಂರಕ್ಷಿಸುತ್ತಾನೆ ಎಂದು ಉತ್ತರಾಧಿಮಠದ ಶ್ರೀಸತ್ಯಾತ್ಮತೀರ್ಥ ಶ್ರೀಗಳು ಹೇಳಿದರು.
    ಅವರು ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೨೯ರ ಜನ್ನಾಪುರದ ಶ್ರೀರಾಘವೇಂದ್ರಸ್ವಾಮಿಗಳ ಮಠಕ್ಕೆ ಭೇಟಿ ನೀಡಿ ಭಕ್ತರಿಗೆ ಆಶೀರ್ವಚನ ನೀಡಿದರು.  ಹರಿಸರ್ವೋತ್ತಮ  ತತ್ವದಲ್ಲಿ ನಂಬಿಕೆ ಹೊಂದಿ ಕಾಯಾ, ವಾಚ, ಮನಸ ಮಾಡುವ ತ್ರಿವಿಧ ಸೇವಾಕಾರ್ಯಗಳನ್ನು ಭಗವಂತನಿಗೆ ಅರ್ಪಿಸುವುದೇ ನಿಜವಾದ ಶರಣಾಗತಿ. ಭಗವಂತ ಸರ್ವತಂತ್ರ ಸ್ವತಂತ್ರ, ನಾನು ಪರಾಧಿನ ಎಂಬುದನ್ನು ಸದಾಕಾಲ ನೆನಪಿನಲ್ಲಿಟ್ಟುಕೊಂಡು ಭಗವಂತನ ಸೇವೆ ಎಂದು ಮಾಡುವ ಕಾರ್ಯಗಳಿಂದ ಆ ಭಗವಂತ ಸದಾ ಸಂತುಷ್ಟನಾಗಿ ನಮ್ಮನ್ನು ಕಾಯುತ್ತಾನೆ. ಭಗವಂತನಲ್ಲಿ ಸಂಪೂರ್ಣವಾಗಿ ನಂಬಿಕೆ ಹೊಂದಿ ಯಾವುದೇ ಫಲಪೇಕ್ಷೆರಹಿತವಾಗಿ ಮಾಡುವ ಕಾರ್ಯಗಳಿಗೆ ಅವರವರ ಯೋಗ್ಯತಾನುಸಾರವಾದ ಸ್ಥಾನಮಾನಗಳನ್ನು ಖಂಡಿತ  ನೀಡಿ ರಕ್ಷಿಸುತ್ತಾನೆ. ಶ್ರೀಮಧ್ವಾಚಾರ್ಯಾರ ತತ್ವಸಿದ್ಧಾಂತಗಳಲ್ಲಿನ ಈ ಅಂಶವನ್ನು ಪ್ರತಿಯೊಬ್ಬರೂ ಅರಿತುಕೊಂಡು ಬದುಕುಬೇಕೆಂದರು.
    ಶ್ರೀ ಗುರು ರಾಘವೇಂದ್ರಸ್ವಾಮಿಗಳು ಸೇರಿದಂತೆ ಪಂಚಯತಿಗಳ ಬೃಂದಾವನಕ್ಕೆ ಶ್ರಿಗಳು ಆರತಿಬೆಳಗಿ, ಭಕ್ತಾದಿಗಳಿಗೆ ಫಲಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
    ಮಠದ ಅರ್ಚಕ ಮುರಳೀಧರ್, ಪಂಡಿತರಾದ ಘಂಟಿನಾರಾಯಣಾಚಾರ್. ಗೋಪಾಲಾಚಾರ್, ರಾಮಚಂದ್ರಕಲ್ಲಾಪುರ ಸೇರಿದಂತೆ ಭಕ್ತಾಧಿಗಳು ಉಪಸ್ಥಿತರಿದ್ದರು.

ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣೆ ದಿನಾಚರಣೆ

ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣೆ ದಿನಾಚರಣೆ ಶನಿವಾರ ಭದ್ರಾವತಿ ತಾಲೂಕು ಕಛೇರಿ ಸಭಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಅಖಿಲ ಭಾರತ ವಿಶ್ವಕರ್ಮ ಪರಿಷತ್ ತಾಲೂಕು ಶಾಖೆ ಸಹಕಾರದೊಂದಿಗೆ ಸರಳವಾಗಿ ಆಚರಿಸಲಾಯಿತು.
    ಭದ್ರಾವತಿ, ಜ. ೧: ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣೆ ದಿನಾಚರಣೆ ಶನಿವಾರ ತಾಲೂಕು ಕಛೇರಿ ಸಭಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಅಖಿಲ ಭಾರತ ವಿಶ್ವಕರ್ಮ ಪರಿಷತ್ ತಾಲೂಕು ಶಾಖೆ ಸಹಕಾರದೊಂದಿಗೆ ಸರಳವಾಗಿ ಆಚರಿಸಲಾಯಿತು.
    ಜಕಣಾಚಾರಿಯವರ ಭಾವಚಿತ್ರಕ್ಕೆ ಪುಷ್ಪ ನಮನದೊಂದಿಗೆ ಪೂಜೆ ಸಲ್ಲಿಸಿ ತಹಸೀಲ್ದಾರ್ ಆರ್. ಪ್ರದೀಪ್ ಮಾತನಾಡಿದರು. ಅಖಿಲ ಭಾರತ ವಿಶ್ವಕರ್ಮ ಪರಿಷತ್ ರಾಜ್ಯ ಕಾರ್ಯಾಧ್ಯಕ್ಷ ಡಾ. ಸಿ. ರಾಮಾಚಾರಿ, ರುದ್ರಚಾರ್, ಮಂಜುನಾಥ್ ಆಚಾರ್, ಬಿ. ಮಂಜೇಶ್ ಆಚಾರ್, ಖುಗ್ವೇದಚಾರ್, ವೆಂಕಟೇಶಚಾರ್, ಸುಭಾಷ್ ಆಚಾರ್, ಪ್ರಸನ್ನ ಆಚಾರ್, ರಮೇಶ್ ಆಚಾರ್, ಪ್ರಕಾಶ್ ಆಚಾರ್, ಸಿಂಗಚಾರ್ ಹಾಗು ತಾಲೂಕು ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಹೊಸ ವರ್ಷಕ್ಕೆ ಹೊಸತನದೊಂದಿಗೆ ಕಂಗೊಳಿಸುತ್ತಿದೆ ಮಿನಿವಿಧಾನಸೌಧ

ಅಧಿಕಾರಿಗಳು, ಸಿಬ್ಬಂದಿಗಳ ಸ್ವಂತ ಹಣದಲ್ಲಿಯೇ ಕಛೇರಿ, ಸಭಾಂಗಣ ನವೀಕರಣ..!

ಭದ್ರಾವತಿ ತಾಲೂಕು ಕಛೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು.
   
   * ಅನಂತಕುಮಾರ್
    ಭದ್ರಾವತಿ, ಜ. ೧: ತಾಲೂಕಿನ ಶಕ್ತಿ ಕೇಂದ್ರ ಮಿನಿ ವಿಧಾನಸೌಧ ಹೊಸ ವರ್ಷಕ್ಕೆ ಹೊಸತನದೊಂದಿಗೆ ಕಂಗೊಳಿಸುತ್ತಿದ್ದು, ತಾಲೂಕು ಕಛೇರಿ ಅಧಿಕಾರಿಗಳು ಹಾಗು ಸಿಬ್ಬಂದಿಗಳ ಪರಿಶ್ರಮ ಇದೀಗ ಮಾದರಿಯಾಗಿ ಪರಿಣಮಿಸಿದೆ.
    ನಾವು ಕರ್ತವ್ಯ ನಿರ್ವಹಿಸುವ ಸ್ಥಳ ಸಹ ಇತರರಿಗೆ ಮಾದರಿಯಾಗಬೇಕು. ತಮ್ಮ ಸೇವಾ ಅವಧಿಯಲ್ಲಿ ಒಂದಿಷ್ಟು ಏನಾದರೂ ಕೊಡುಗೆ ನೀಡಬೇಕೆಂಬ ಆಶಯ ಕೆಲವು ವ್ಯಕ್ತಿಗಳು ಹೊಂದಿರುತ್ತಾರೆ. ಇಂತಹ ವ್ಯಕ್ತಿಗಳಲ್ಲಿ ಪ್ರಸ್ತುತ ತಾಲೂಕು ದಂಡಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಆರ್. ಪ್ರದೀಪ್ ಅವರು ಹೊಂದಿದ್ದಾರೆ. ಈ ಕಾರಣದಿಂದಲ್ಲಿಯೇ ಕೆಲವೇ ಕೆಲವು ತಿಂಗಳಲ್ಲಿ ತಾಲೂಕು ಕಛೇರಿ ಚಿತ್ರಣವೇ ಬದಲಾಗಿದೆ.
    ತಾಲೂಕಿನಲ್ಲಿ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು ೧೧೦ ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ಪೈಕಿ ೨೮ ಜನ ಗ್ರಾಮ ಲೆಕ್ಕಾಧಿಕಾರಿಗಳು ಹಾಗು ೪೦ ಜನ ಗ್ರಾಮ ಸಹಾಯಕರು, ೩ ಜನ ರಾಜಸ್ವ ನಿರೀಕ್ಷಕರು, ಉಳಿದಂತೆ ತಹಸೀಲ್ದಾರ್, ತಹಸೀಲ್ದಾರ್ ಗ್ರೇಡ್-೧, ಉಪತಹಸೀಲ್ದಾರ್, ಪ್ರಥಮ ದರ್ಜೆ, ದ್ವಿತೀಯ ದರ್ಜೆ ಗುಮಾಸ್ತರು ಹಾಗು 'ಡಿ' ದರ್ಜೆ ನೌಕರರು ಸೇರಿ ಒಟ್ಟು ೪೫ ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರೆಲ್ಲರೂ ಒಟ್ಟಾಗಿ ತಮ್ಮ ಸ್ವಂತ ಹಣದಲ್ಲಿ ಹಾಗು ಸರ್ಕಾರದ ಇತರೆ ಇಲಾಖೆಗಳ ನೆರವು ಹಾಗು ದಾನಿಗಳ ಸಹಕಾರದೊಂದಿಗೆ ಪ್ರಥಮ ಹಂತವಾಗಿ ತಹಸೀಲ್ದಾರ್ ಕಛೇರಿ ಮಿನಿವಿಧಾನ ನವೀಕರಣ ಕಾರ್ಯಕ್ಕೆ ಮುಂದಾಗಿದ್ದಾರೆ.


ಭದ್ರಾವತಿ ಮಿನಿವಿಧಾನಸೌಧದ ತಾಲೂಕು ಕಛೇರಿ ಸಭಾಂಗಣ ಕಛೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸ್ವಂತ ಹಣದಲ್ಲಿ ನವೀಕರಣಗೊಂಡಿರುವುದು.

    ಇದೀಗ ಸುಮಾರು ೭-೮ ಲಕ್ಷ ರು. ವೆಚ್ಚದಲ್ಲಿ ತಹಸೀಲ್ದಾರ್‌ರವರ ಕಛೇರಿ ಹಾಗು ಸಭಾಂಗಣ ನವೀಕರಣಗೊಳಿಸಲಾಗಿದ್ದು, ಹೊಸದಾಗಿ ಅತ್ಯಾಧುನಿಕ ಪೀಠೋಪಕರಣಗಳು, ಸಿ.ಸಿ ಕ್ಯಾಮೆರಾ, ಮೈಕ್, ಸ್ಪೀಕರ್ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಬಣ್ಣ ಲೇಪನ ಸೇರಿದಂತೆ ಹಲವು ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಇವುಗಳ ಜೊತೆಗೆ ಹೊರಭಾಗದಲ್ಲಿ ಹೊಸದಾಗಿ ಕಛೇರಿ ನಾಮಫಲಕ ಅಳವಡಿಸಲಾಗಿದೆ. ನವೀಕರಣ ಕಾರ್ಯ ಸಂಪೂರ್ಣವಾಗಿ ಮುಕ್ತಾಯಗೊಂಡಿದ್ದು, ಶನಿವಾರ ತಹಸೀಲ್ದಾರ್ ಆರ್. ಪ್ರದೀಪ್, ತಹಸೀಲ್ದಾರ್ ಗ್ರೇಡ್-೨ ರಂಗಮ್ಮ, ಉಪತಹಸೀಲ್ದಾರ್‌ಗಳಾದ ಅರಸು, ನಾರಾಯಣಗೌಡ, ಮಂಜಾನಾಯ್ಕ, ರಾಜಸ್ವ ನಿರೀಕ್ಷಕ ಪ್ರಶಾಂತ್, ರಾಧಕೃಷ್ಣಭಟ್ ಸೇರಿದಂತೆ ಕಛೇರಿಯ ಅಧಿಕಾರಿಗಳು, ಸಿಬ್ಬಂದಿಗಳು ಸಂಭ್ರಮ ತಮ್ಮ ಸಂಭ್ರಮ ಹಂಚಿಕೊಂಡರು.
    ಈಗಾಗಲೇ ಮಿನಿವಿಧಾನಸೌಧದಲ್ಲಿ ಸರ್ಕಾರದಿಂದ ಬಿಡುಗಡೆಯಾದ ಸುಮಾರು ೫೦ ಲಕ್ಷ ರು. ಹಣದಲ್ಲಿ ಲಿಫ್ಟ್ ಅಳವಡಿಸಲಾಗಿದೆ. ಅಲ್ಲದೆ ದಾನಿಗಳ ನೆರವಿನಿಂದ ಹೊರಭಾಗದಲ್ಲಿ ಧ್ವಜಾ ಸ್ತಂಭ ಹಾಗು ಮುಖ್ಯದ್ವಾರದ ಎರಡು ಬದಿ ಕಬ್ಬಿಣದ ಗ್ರಿಲ್‌ಗಳನ್ನು ಅಳವಡಿಸಲಾಗಿದೆ. ಒಟ್ಟಾರೆ ಅಭಿವೃದ್ದಿಗೆ ಪೂರಕವಾದ ಸಂಪನ್ಮೂಲಗಳನ್ನು ಸರ್ಕಾರದ ಅನುದಾನ ನಿರೀಕ್ಷಿಸದೆ ಕ್ರೋಢಿಕರಿಸಿಕೊಂಡು ಮಿನಿವಿಧಾನಸೌಧವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಕಾರ್ಯ ಇತರ ಇಲಾಖೆಗಳಿಗೆ ಸಹ ಮಾದರಿಯಾಗಿ ಕಂಡು ಬರುತ್ತಿದೆ.


ನಾನು ತಹಸೀಲ್ದಾರ್ ಆಗಿ ವರ್ಗಾವಣೆಯಾಗಿ ಬರುವವರೆಗೂ ಮಿನಿವಿಧಾನಸೌಧದ ಮುಂಭಾಗ ಧ್ವಜಾಸ್ತಂಭ ಇರಲಿಲ್ಲ. ಇದನ್ನು ಮನಗಂಡು ಕಂದಾಯ ಇಲಾಖೆಯಿಂದ ನೆರವು ಪಡೆದುಕೊಳ್ಳುತ್ತಿರುವ ಸರ್ಕಾರದ ಇತರ ಇಲಾಖೆಗಳ ಹಾಗು ದಾನಿಗಳ ಸಹಕಾರದಿಂದ ಧ್ವಜಾಸ್ತಂಭ ನಿರ್ಮಾಣ ಮಾಡಲಾಯಿತು. ಇದರಿಂದ ಸ್ಪೂರ್ತಿಗೊಂಡು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ ಸಹ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ತಮ್ಮ ಸ್ವಂತ ಹಣದಲ್ಲಿ ಸುಮಾರು ೭-೮ ಲಕ್ಷ ರು. ವೆಚ್ಚದಲ್ಲಿ ಕಛೇರಿ ಹಾಗು ಸಭಾಂಗಣ ಆಧುನೀಕರಣಗೊಳಿಸಲಾಗಿದೆ. ಒಟ್ಟಾರೆ ಸುಮಾರು ೩೫ ಲಕ್ಷ ರು. ಗಳಷ್ಟು ಹಣ ಸರ್ಕಾರಕ್ಕೆ ಉಳಿತಾಯವಾಗಿದೆ. ಈಗಾಗಲೇ ಈ ಸಂಬಂಧ ಸರ್ಕಾರಕ್ಕೆ ಸಲ್ಲಿಸಲಾಗಿರುವ ೧೦ ಲಕ್ಷ ರು. ಗಳ ಪ್ರಸ್ತಾವನೆಗೂ ಶಾಸಕರು ಅನುಮೋದನೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಅನುದಾನವನ್ನು ಮಿನಿವಿಧಾನಸೌಧ ಹಿಂಭಾಗದ ಕಟ್ಟಡ ನವೀಕರಣ ಕಾರ್ಯಕ್ಕೆ ಬಳಸಿಕೊಳ್ಳಲಾಗುವುದು. ಅಲ್ಲದೆ ೧೦ ಲಕ್ಷ ರು. ವೆಚ್ಚದ ಜನರೇಟ್ ಅಳವಡಿಕೆಗೂ ಸಹ ಅನುಮೋದನೆ ಲಭಿಸಿದೆ. ಉದ್ಯಮಿಗಳು, ಸೇವಾ ಸಂಸ್ಥೆಗಳು ತಮ್ಮ ಸಿಎಸ್‌ಆರ್ ಹಣದಲ್ಲಿ ಈ ರೀತಿಯ ಕಾರ್ಯಗಳನ್ನು ಕೈಗೊಳ್ಳಲು ನೆರವಾಗುವುದರಿಂದ ಸರ್ಕಾರಿ ಕಛೇರಿಗಳು ಸಹ ಅಭಿವೃದ್ಧಿಗೊಳ್ಳುತ್ತವೆ.
                                                                        - ಆರ್. ಪ್ರದೀಪ್, ತಹಸೀಲ್ದಾರ್, ಭದ್ರಾವತಿ.