Thursday, January 6, 2022

ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ್ವತೀರ್ಥ ಸ್ವಾಮೀಜಿಯವರ ೨ನೇ ವರ್ಷದ ಆರಾಧನಾ ಮಹೋತ್ಸವ

ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ್ವತೀರ್ಥ ಸ್ವಾಮೀಜಿಯವರ ೨ನೇ ವರ್ಷದ ಆರಾಧನಾ ಮಹೋತ್ಸವ ಭದ್ರಾವತಿ ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಜರುಗಿತು.
    ಭದ್ರಾವತಿ, ಜ. ೬: ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ್ವತೀರ್ಥ ಸ್ವಾಮೀಜಿಯವರ ೨ನೇ ವರ್ಷದ ಆರಾಧನಾ ಮಹೋತ್ಸವ ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಜರುಗಿತು.
    ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಿಂದ ರಾಘವೇಂದ್ರ ಸ್ವಾಮಿ ಮಠದ ವರೆಗೆ ಶ್ರೀಗಳ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಲಾಯಿತು. ವೇದಘೋಷದೊಂದಿಗೆ ಆರಂಭಗೊಂಡ ಮೆರವಣಿಗೆಗೆ ದೇವಸ್ಥಾನದ ಪ್ರಧಾನ ಅರ್ಚಕ ವೇದಬ್ರಹ್ಮ ರಂಗನಾಥ ಶರ್ಮ ಮತ್ತು ಸಹಾಯಕ ಅರ್ಚಕ ಶ್ರೀನಿವಾಸ್ ಚಾಲನೆ ನೀಡಿದರು.
    ಯಾರಿಂದಲೂ ಆರ್ಥಿಕ ನೆರವು ಆಪೇಕ್ಷಿಸದೆ ಪೇಜಾವರ ಶ್ರೀಗಳ ಶಿಷ್ಯರಾದ ಪ್ರಮೋದ್‌ಕುಮಾರ್ ಮತ್ತು ಶ್ರೀನಿಧಿ ಪವನ್‌ಕುಮಾರ್‌ರವರು ತಮ್ಮ ಸ್ವಂತ ಹಣದಲ್ಲಿ ಕಾರ್ಯಕ್ರಮ ನೆರವೇರಿಸಿಕೊಟ್ಟರು.
    ಗುರುರಾಜಸೇವಾ ಸಮಿತಿ ಅಧ್ಯಕ್ಷರಾದ ಮುರಳಿಧರ ತಂತ್ರಿ, ನಿರಂಜನ್ ಆಚಾರ್ ಉಪಾಧ್ಯಕ್ಷರಾದ ಸುಮಾ, ರಾಘವೇಂದ್ರ ತಂತ್ರಿ,  ಪ್ರಧಾನ ಕಾರ್ಯದರ್ಶಿ ರಮಾಕಾಂತ್, ಪ್ರಧಾನ ಅರ್ಚಕ ಸತ್ಯನಾರಾಯಣ, ಜಯತೀರ್ಥ, ಶ್ರೀಪತಿ, ಮಧು, ಗುರುರಾಜ್ ಚೌತಾಯಿ, ವಾಸುದೇವಮೂರ್ತಿ, ನಾಗರಾಜ್ ಉಪಧ್ಯಾಯ, ರಂಗಣ್ಣ, ಗಿರಿ, ಕೃಷ್ಣಮೂರ್ತಿ, ರಾಘವೇಂದ್ರ ಅಡಿಗ, ಪ್ರಹ್ಲಾದ, ಉದಯಕುಮಾರ್, ಅನಿಲ, ಹರಿದಾಸ ಭಜನಾ ಮಂಡಳಿ, ಕರಾವಳಿ ವಿಪ್ರ ಬಳಗ ಭಜನಾ ಮಂಡಳಿ, ಹರಿಪ್ರಿಯಾ ಭಜನಾ ಮಂಡಳಿ, ಜ್ಞಾನವಾಹಿನಿ ಭಜನಾ ಮಂಡಳಿ ಮತ್ತು ವಿವಿಧ ಸಂಘ ಸಂಸ್ಥೆಗಳು ಪಾಲ್ಗೊಂಡಿದ್ದವು.  

ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಸೌಂದರ್ಯ ಲಹರಿ ದೀಪ ನಮಸ್ಕಾರ

ಭದ್ರಾವತಿ ಹುತ್ತಾ ಕಾಲೋನಿ ಶೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸೌಂದರ್ಯ ಲಹರಿ ದೀಪ ನಮಸ್ಕಾರ ಜರುಗಿತು.
    ಭದ್ರಾವತಿ, ಜ. ೬: ನಗರದ ಹುತ್ತಾ ಕಾಲೋನಿ ಶೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸೌಂದರ್ಯ ಲಹರಿ ದೀಪ ನಮಸ್ಕಾರ ಜರುಗಿತು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ದೇವಸ್ಥಾನದ ಅರ್ಚಕ ವೇ.ಬ್ರ. ರಾಘವೇಂದ್ರ ಉಪಧ್ಯಾಯ ಮಾತನಾಡಿ, ಸೌಂದರ್ಯ ಲಹರಿ ದೀಪ ನಮಸ್ಕಾರ ಮಹತ್ಸ ವಿವರಿಸಿದರು. ಜೆಡಿಎಸ್ ಪಕ್ಷದ ಮುಖಂಡರಾದ ಶಾರದಾ ಅಪ್ಪಾಜಿ ಮತ್ತು ಡಿ.ಎಸ್.ಗಾಯಿತ್ರಿ ಹಾಗು ಸಂಗಡಿಗರು ಪಾಲ್ಗೊಂಡಿದ್ದರು.  

ಸಾಮಿಲ್‌ನಲ್ಲಿ ಬೆಂಕಿ ಅವಘಡ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

ಭದ್ರಾವತಿ ಹೊಸಸೇತುವೆ ರಸ್ತೆಯಲ್ಲಿರುವ ಶ್ರೀ ಮಂಜುನಾಥಸ್ವಾಮಿ ಸಾಮಿಲ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡ ಸ್ಥಳಕ್ಕೆ ಗುರುವಾರ ಬೆಳಿಗ್ಗೆ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
    ಭದ್ರಾವತಿ, ಜ. ೬: ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ಶ್ರೀ ಮಂಜುನಾಥಸ್ವಾಮಿ ಸಾಮಿಲ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡ ಸ್ಥಳಕ್ಕೆ ಗುರುವಾರ ಬೆಳಿಗ್ಗೆ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
    ಸಾಮಿಲ್‌ನಲ್ಲಿ ನಡೆದಿರುವ ಅಗ್ನಿ ಅವಘಡ ಕುರಿತು ವಿಷಾದ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್, ಅವಘಡದಿಂದ ಸಂತ್ರಸ್ಥರಾಗಿರುವವರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಕಲ್ಪಿಸಿಕೊಡುವಂತೆ ಮನವಿ ಮಾಡಿದರು.
    ಪರಿಹಾರ ನೀಡಲು ಸರ್ಕಾರಕ್ಕೆ ವರದಿ:
    ತಾಲೂಕು ದಂಡಾಧಿಕಾರಿ, ತಹಸೀಲ್ದಾರ್ ಆರ್. ಪ್ರದೀಪ್ ಬೆಂಕಿ ಅವಘಡ ಸಂಭವಿರುವ ಮಾಹಿತಿ ತಿಳಿದ ತಕ್ಷಣ ಸ್ಥಳದಲ್ಲಿಯೇ ಬೀಡುಬಿಟ್ಟು ಪರಿಸ್ಥಿತಿ ಪರಿಶೀಲನೆ ನಡೆಸುವ ಮೂಲಕ ಅಗತ್ಯ ಕ್ರಮಗಳನ್ನು ಕೈಗೊಂಡರು. ಪತ್ರಿಕೆಯೊಂದಿಗೆ ಮಾತನಾಡಿ, ಪ್ರಸ್ತುತ ಉಂಟಾಗುವ ನಷ್ಟದ ಲೆಕ್ಕಚಾರ ನಡೆಯುತ್ತಿದ್ದು, ಕೆಲವು ಮನೆಗಳು ಬಿರುಕು ಬಿಟ್ಟು ಹಾನಿಯಾಗಿದ್ದು, ಕೆಲವು ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ತಗುಲಿ ಹಾನಿ ಉಂಟಾಗಿದ್ದು, ಸೂಕ್ತ ಪರಿಹಾರ ನೀಡುವ ಸಂಬಂಧ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.
    ಈ ಸಂದರ್ಭದಲ್ಲಿ ಕಂದಾಯ ಇಲಾಖೆ, ನಗರಸಭೆ, ಪೊಲೀಸ್ ಹಾಗು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಸಾಮಿಲ್‌ನಲ್ಲಿ ಬೆಂಕಿ ಅವಗಡ : ಕೋಟ್ಯಾಂತರ ರು. ನಷ್ಟ


 

Wednesday, January 5, 2022

ಸಾಮಿಲ್‌ನಲ್ಲಿ ಬೆಂಕಿ ಅವಗಡ : ಕೋಟ್ಯಾಂತರ ರು. ನಷ್ಟ

ಅಗ್ನಿಶಾಮಕ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳಿಂದ ಸುಮಾರು ೯ ಗಂಟೆ ಕಾರ್ಯಾಚರಣೆ




ಭದ್ರಾವತಿ ಹೊಸಸೇತುವೆ ರಸ್ತೆಯಲ್ಲಿರುವ ಶ್ರೀ ಮಂಜುನಾಥಸ್ವಾಮಿ ಸಾಮಿಲ್‌ನಲ್ಲಿ ರಾತ್ರಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಬೆಂಕಿಯ ಜ್ವಾಲೆಗೆ ವ್ಯಾಪಿಸಿರುವುದು.
       
ಭದ್ರಾವತಿ, ಜ. ೬: ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ಶ್ರೀ ಮಂಜುನಾಥ ಸ್ವಾಮಿ ಸಾಮಿಲ್‌ನಲ್ಲಿ ಬುಧವಾರ ರಾತ್ರಿ ಸುಮಾರು ೧೧ ಗಂಟೆ ಸಮಯದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕೋಟ್ಯಂತರ ರೂ ನಷ್ಟ ಸಂಭವಿಸಿದೆ.
     ರಾತ್ರಿ ಬೆಂಕಿ ಕಾಣಿಸಿಕೊಂಡ ತಕ್ಷಣ ಅಕ್ಕಪಕ್ಕದವರು ಅಗ್ನಿಶಾಮಕ ಇಲಾಖೆಗೆ ಮಾಹಿತಿ ಮುಟ್ಟಿಸಿದ್ದು, ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ನಿರಂತರವಾಗಿ ಸುಮಾರು ೯ ಗಂಟೆ ಸಮಯ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಕೋಟ್ಯಾಂತರ ರೂ ಬೆಲೆಬಾಳುವ ಮರಮುಟ್ಟುಗಳು, ಅಕ್ಕಪಕ್ಕದಲ್ಲಿರುವ ೩-೪ ಅಂಗಡಿಗಳ ಸಾಮಗ್ರಿಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ. ಅಲ್ಲದೆ ಸಮೀಪದಲ್ಲಿರುವ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಆದರೆ ಯಾವುದೇ ಜೀವಹಾನಿ ಸಂಭವಿಸಿಲ್ಲ.
ಬೆಂಕಿ ಕಾಣಿಸಿಕೊಳ್ಳಲು ನಿಖರವಾದ ಮಾಹಿತಿ ಇದುವರೆಗೂ ತಿಳಿದು ಬಂದಿಲ್ಲ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಸೇರಿ ಸುಮಾರು ೫೦ಕ್ಕೂ ಮಂದಿ ಪಾಲ್ಗೊಂಡಿದ್ದರು. ಕಾರ್ಯಾಚರಣೆಯಲ್ಲಿ ಒಟ್ಟು ೯ ಅಗ್ನಿಶಾಮಕ ವಾಹನಗಳನ್ನು ಬಳಸಿಕೊಳ್ಳಲಾಗಿತ್ತು.
        ಸುರಕ್ಷಿತ ಕಾರ್ಯಾಚರಣೆ:
       ಘಟನೆ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅಗ್ನಿಶಾಮಕ ಇಲಾಖೆಯ ಶಿವಮೊಗ್ಗ ಪ್ರಾದೇಶಿಕ ಅಧಿಕಾರಿ ಲಕ್ಕಪ್ಪ, ಇಲಾಖೆಗೆ ಮಾಹಿತಿ ಬಂದ ತಕ್ಷಣ ಕಾರ್ಯಾಚರಣೆ ನಡೆಸಲಾಯಿತು. ತಕ್ಷಣ ಸ್ಥಳಕ್ಕೆ ಆಗಮಿಸಿ ಸುತ್ತಮುತ್ತಲಿನ ಮನೆಗಳಿಗೆ ಮನೆಗಳಿಗೆ ಹಾಗು ಅಂಗಡಿ ಮುಂಗಟ್ಟುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಬೆಂಕಿ ವ್ಯಾಪಿಸದಂತೆ ಎಚ್ಚರವಹಿಸಲಾಯಿತು. ಬೆಂಕಿ ಕೆನ್ನಾಲಿ ಕ್ಷಣ ಕ್ಷಣಕ್ಕೂ ಹೆಚ್ಚಾದ ಹಿನ್ನಲೆಯಲ್ಲಿ ಶಿವಮೊಗ್ಗ-೨, ತರೀಕೆರೆ-೧, ಶಿಕಾರಿಪುರ-೧, ಕಡೂರು-೧ ಹಾಗು ಎಂಪಿಎಂ ಹಾಗು ವಿಐಎಸ್‌ಎಲ್ ತಲಾ ೧ ಒಟ್ಟು ೭ ಹಾಗು ಭದ್ರಾವತಿ ಆಗ್ನಿಶಾಮಕ ಠಾಣೆಯ ೨ ಅಗ್ನಿಶಾಮಕ ವಾಹನಗಳು ಸೇರಿದಂತೆ ಒಟ್ಟು ೯ ವಾಹನಗಳನ್ನು ಕಾರ್ಯಾಚರಣೆ ಬಳಸಿಕೊಳ್ಳಲಾಯಿತು.
        ಯಾವುದೇ ಪ್ರಾಣ ಹಾನಿಯಾಗದಂತೆ, ಬೆಂಕಿ ಜ್ವಾಲೆ ಹೆಚ್ಚು ವ್ಯಾಪಿಸದಂತೆ ಸುರಕ್ಷಿತವಾಗಿ ರಾತ್ರಿ ಸುಮಾರು ೧೧ ಗಂಟೆಯಿಂದ ಅವಿರತ ಪರಿಶ್ರಮದಿಂದ ಯಶಸ್ವಿ ಕಾರ್ಯಾಚರಣೆ ನಡೆಸಲಾಗಿದೆ. ಸದ್ಯಕ್ಕೆ ಅಗ್ನಿ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ ಎಂದರು.
           ಪರಿಹಾರ ನೀಡಿ :
        ಬೆಂಕಿ ಆವರಿಸಿಕೊಂಡಿರುವ ಬಗ್ಗೆ ರಾತ್ರಿ ಮಾಹಿತಿ ಬಂದ ತಕ್ಷಣ ಸ್ಥಳಕ್ಕೆ ಆಗಮಿಸಲಾಯಿತು. ಆದರೆ ಬರುವಷ್ಟರಲ್ಲಿ ಅಂಗಡಿಗೆ ಬೆಂಕಿ ವ್ಯಾಪಿಸಿಕೊಂಡು ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿವೆ. ಅಲ್ಲದೆ ಪಕ್ಕದಲ್ಲಿರುವ ಆಟೋ ಮೊಬೈಲ್ಸ್, ಬ್ಯಾಟರಿ ಅಂಗಡಿ ಮತ್ತು ಡಿಜಿಟಲ್ ಫ್ಲೆಕ್ಸ್ ಅಂಗಡಿಗಳಿಗೂ ಬೆಂಕಿ ವ್ಯಾಪಿಸಿಕೊಂಡು ಸಾಮಗ್ರಿ, ಪರಿಕರಗಳು ಸುಟ್ಟು ಹೋಗಿವೆ. ಹೆಚ್ಚಿನ ಪ್ರಮಾಣದ ನಷ್ಟ ಉಂಟಾಗಿದೆ ಎಂದು ಸ್ಕಂದ ಸ್ಯಾನಿಟರಿ ಅಂಗಡಿ ಮಾಲೀಕ ಮನೋಹರ್ ಗೌಡ ಪತ್ರಿಕೆಯೊಂದಿಗೆ ನೋವು ತೋರ್ಪಡಿಸಿಕೊಂಡು ಸರ್ಕಾರ ತಕ್ಷಣ ನಮ್ಮ ನೋವಿಗೆ ಸ್ಪಂದಿಸಿ ಪರಿಹಾರ ನೀಡಬೇಕೆಂದು ಮನವಿ ಮಾಡಿದರು.
 ಇಡೀ ರಾತ್ರಿ ಮನೆಯಿಂದ ಹೊರಗಡೆ  ಉಳಿಯುವಂತಾಯಿತು :
     ಸ್ಥಳೀಯ ನಿವಾಸಿಯೊಬ್ಬರು ಮಾತನಾಡಿ, ಮನೆಯ ಹಿಂದೆ ಬೆಂಕಿ ವ್ಯಾಪಿಸಿಕೊಂಡ ಪರಿಣಾಮ ಮನೆಯರೆಲ್ಲ ಹೆದರಿಕೆಯಿಂದ ಇಡೀ ರಾತ್ರಿ ಮನೆಯಿಂದ ಹೊರಗೆ ಉಳಿಯುವಂತಾಯಿತು. ಬೆಂಕಿ ಕೆನ್ನಾಲಿಗೆಯಿಂದಾಗಿ ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ಹೆಚ್ಚಿನ ಅನಾಹುತವಾಗುವ ಆತಂಕ ಕಂಡು ಬಂದಿತು. ಆಗ್ನಿಶಾಮಕ ದಳದವರು ನಿರಂತರವಾಗಿ ಕಾರ್ಯಾಚರಣೆ ನಡೆಸಿದ ಪರಿಣಾಮ ಬೆಂಕಿ ಒಂದು ಹಂತದಲ್ಲಿ ನಿಯಂತ್ರಕ್ಕೆ ಬಂದಿತು. ಆಗ ಸ್ವಲ್ಪಮಟ್ಟಿಗೆ ಆತಂಕ ದೂರವಾಯಿತು ಎಂದರು.


ಅತ್ಯಾಚಾರಕ್ಕೆ ಯತ್ನಿಸಿ ಪತಿ ಹತ್ಯೆಗೈದ ಆರೋಪಿಗೆ ಜೀವಾವಧಿ ಶಿಕ್ಷೆ

    ಭದ್ರಾವತಿ, ಜ. ೫: ಮಧ್ಯ ರಾತ್ರಿ ಮನೆಗೆ ನುಗ್ಗಿ ಗೃಹಿಣಿಯೊಬ್ಬಳ ಮೇಲೆ ಅತ್ಯಾಚಾರವೆಸಗಲು ಮುಂದಾಗಿದ್ದ ವ್ಯಕ್ತಿಯನ್ನು ತಡೆಯಲು ಹೋದ ಪತಿಯ ಮೇಲೆ ತೀವ್ರ ಹಲ್ಲೆ ನಡೆದು ಹತ್ಯೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬುಧವಾರ ಆರೋಪಿಗೆ ಜೀವಾವಧಿ ಹಾಗು ರು. ೨೦,೦೦೦ ದಂಡ ವಿಧಿಸಿ ತೀರ್ಪು ನೀಡಿದೆ.
ಸುಮಾರು ೩ ವರ್ಷಗಳ ಹಿಂದೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗೌಡರಹಳ್ಳಿ ಗ್ರಾಮದಲ್ಲಿ ಪ್ರಕರಣ ನಡೆದಿದ್ದು, ಇದೆ ಗ್ರಾಮದ ನಿವಾಸಿ ಮನ್ಸೂರ್ ಆಲಿಖಾನ್(೨೯) ಶಿಕ್ಷೆಗೊಳಗಾದ ಆರೋಪಿಯಾಗಿದ್ದಾನೆ. ಮೂಲತಃ ಅಸ್ಸಾಂ ರಾಜ್ಯದ ನಬೀಕುಲ್ ಇಸ್ಲಾಂ(೨೧) ಹತ್ಯೆಯಾಗಿದ್ದು, ಈ ಸಂಬಂಧ ಈತನ ಪತ್ನಿ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಘಟನೆ ವಿವರ:
    ನಬೀಕುಲ್ ಇಸ್ಲಾಂ ದಂಪತಿ ಗೌಡರಹಳ್ಳಿಯ ಆಲೆಮನೆಯೊಂದರಲ್ಲಿ ಉದ್ಯೋಗಕ್ಕೆ ಬಂದು ಇಲ್ಲಿಯೇ ನೆಲೆಸಿದ್ದು, ದಂಪತಿ ಮನೆಯಲ್ಲಿದ್ದಾಗ ೨೨.೦೭.೨೦೧೯ರಂದು ರಾತ್ರಿ  ಸುಮಾರು ೧.೩೦ರ ಸಮಯದಲ್ಲಿ ಮನ್ಸೂರ್ ಅಲಿಖಾನ್ ಮನೆಯ ಹಂಚನ್ನು ತೆಗೆದು ಒಳಗೆ ನುಗ್ಗಿ ನಬೀಕುಲ್ ಇಸ್ಲಾಂ ಪತ್ನಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಲು ಪ್ರಯತ್ನಿಸಿದ್ದು, ಈ ಸಂದರ್ಭದಲ್ಲಿ ತಡೆಯಲು ಹೋದಾಗ ನಬೀಕುಲ್ ಇಸ್ಲಾಂ ತಲೆಗೆ ಮರದ ರೀಫರ್‌ನಿಂದ ಹೊಡೆದು ತೀವ್ರ ಗಾಯಗೊಳಿಸಿ ಪರಾರಿಯಾಗಿದ್ದನು.  ನಬೀಕುಲ್ ಇಸ್ಲಾಂ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ೨೩.೦೭.೨೦೧೯ರಂದು ಬೆಳಗಿನ ಸಮಯದಲ್ಲಿ ಮೃತಪಟ್ಟಿದ್ದರು. ಈ ಸಂಬಂಧ ದೂರು ದಾಖಲಾದ ಹಿನ್ನಲೆಯಲ್ಲಿ ಅಂದಿನ ಗ್ರಾಮಾಂತರ ವೃತ್ತ ನಿರೀಕ್ಷಕರಾಗಿದ್ದ ಕೆ.ಎಂ ಯೋಗೇಶ್ ಪ್ರಕರಣದ ತನಿಖೆ ಕೈಗೊಂಡು ಆರೋಪಿ ಮನ್ಸೂರ್ ಆಲಿಖಾನ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.
    ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಆರ್.ವೈ ಶಶಿಧರ್ ಆರೋಪ ಸಾಭೀತಾದ ಹಿನ್ನಲೆಯಲ್ಲಿ ಜೀವಾವಧಿ ಶಿಕ್ಷೆ ಮತ್ತು ರು. ೨೦,೦೦೦ ದಂಡ, ದಂಡ ಕಟ್ಟಲು ವಿಫಲರಾದಲ್ಲಿ ಹೆಚ್ಚುವರಿಯಾಗಿ ೩ ವರ್ಷ ಸಾದಾ ಸಜೆ ಮತ್ತು ಕಲಂ ೪೫೦ರ ಅಡಿಯಲ್ಲಿ ಆರೋಪ ದೃಢಪಟ್ಟ ಹಿನ್ನಲೆಯಲ್ಲಿ ೩ ವರ್ಷ ಕಠಿಣ ಸಜೆ ಮತ್ತು ರು. ೧೦,೦೦೦ ದಂಡ ಹಾಗು ದಂಡ ಕಟ್ಟಲು ವಿಫಲರಾದಲ್ಲಿ ಹೆಚ್ಚುವರಿಯಾಗಿ ೨ ತಿಂಗಳು ಸಾದಾ ಸಜೆ ವಿಧಿಸಿ ತೀರ್ಪು ನೀಡಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಪಿ. ರತ್ನಮ್ಮ ವಾದ ಮಂಡಿಸಿದ್ದರು.

ನೂತನ ದಂಪತಿಗೆ ಶುಭ ಹಾರೈಸಿದ ಶಾಸಕ ಬಿ.ಕೆ ಸಂಗಮೇಶ್ವರ್

ಭದ್ರಾವತಿಯಲ್ಲಿ ಜರುಗಿದ ಆಕ್ಷರತೆ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್, ಉದ್ಯಮಿ ಬಿ.ಕೆ ಜಗನ್ನಾಥ, ಯುವ ಮುಖಂಡ ಬಿ.ಎಸ್ ಗಣೇಶ್ ಸೇರಿದಂತೆ ನಗರದ ಅನೇಕ ಗಣ್ಯರು ಜಹೈನುಲ್ ಅಬಿದ್(ಎಬಿಡಿ) ನೂತನ ದಂಪತಿಗೆ ಶುಭ ಹಾರೈಸಿದರು.
    ಭದ್ರಾವತಿ, ಜ. ೫: ನಗರಸಭೆ ವ್ಯಾಪ್ತಿಯ ಸೀಗೆಬಾಗಿ ಸಿ.ಎನ್ ರಸ್ತೆಯ, ಎ.ಎಸ್ ಫರ್ನಿಚರ್ ಅಬ್ದುಲ್ ರಶೀದ್ ಅವರ ಪುತ್ರ ಜಹೈನುಲ್ ಅಬಿದ್(ಎಬಿಡಿ) ವಿವಾಹ ಅರಕ್ಷತೆ ಬುಧವಾರ ಹೊಳೆಹೊನ್ನೂರು ರಸ್ತೆಯ ಅನ್ವರ್ ಕಾಲೋನಿ ಹಜರತ್ ಸೈಯದ್ ಸಾದತ್ ಮದರಸ(ದಾರುಲುಲೂಮ್)ನಲ್ಲಿ ನಡೆಯಿತು.
    ಶಾಸಕ ಬಿ.ಕೆ ಸಂಗಮೇಶ್ವರ್, ಉದ್ಯಮಿ ಬಿ.ಕೆ ಜಗನ್ನಾಥ, ಯುವ ಮುಖಂಡ ಬಿ.ಎಸ್ ಗಣೇಶ್ ಸೇರಿದಂತೆ ನಗರದ ಅನೇಕ ಗಣ್ಯರು ಪಾಲ್ಗೊಂಡು ಶುಭ ಹಾರೈಸಿದರು.
    ಅಬಿದ್ ಚಿಕ್ಕಮಗಳೂರಿನ ಅರಣ್ಯ ಗುತ್ತಿಗೆದಾರ ಪಿ.ಕೆ ಸೈಯದ್ ಆಲಿ ಅವರ ಪುತ್ರಿ ಫಾತಿಮಾ ಶಿಫಾನ ಅವರೊಂದಿಗೆ ಜ.೨ರಂದು ಚಿಕ್ಕಮಗಳೂರಿನ ಸಹಾರ ಶಾದಿ ಮಹಲ್‌ನಲ್ಲಿ ವಿವಾಹವಾಗಿದ್ದರು. ಅಬಿದ್ ಕಾಂಗ್ರೆಸ್ ಪಕ್ಷದ ಮಾಧ್ಯಮ ವಿಭಾಗದಲ್ಲಿ ಕೆಲವು ವರ್ಷಗಳಿಂದ ವೃತ್ತಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.