ತಮಿಳುನಾಡಿಗೆ ಹೋಗಿ ಬಂದ ಓಂ ಶಕ್ತಿ ಭಕ್ತರಲ್ಲಿ ೪ ಮಂದಿಗೆ ಕೋವಿಡ್ ಸೋಂಕು
ಡಾ. ಎಂ.ವಿ ಅಶೋಕ್
ಭದ್ರಾವತಿ, ಜ. ೭: ಕೋವಿಡ್-೧೯ ನಿಯಂತ್ರಣದಲ್ಲಿ ಆರೋಗ್ಯ ಇಲಾಖೆ ಪಾತ್ರ ಅತಿ ಮುಖ್ಯವಾಗಿದ್ದು, ಈ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ಹೆಚ್ಚಿನ ಜಾಗೃತಿ ವಹಿಸಬೇಕಾಗಿದೆ.
ಸರ್ಕಾರ ಕೋವಿಡ್-೧೯ ನಿಯಂತ್ರಣಕ್ಕೆ ಅಗತ್ಯವಿರುವ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಈಗಾಗಲೇ ಸರ್ಕಾರದ ಎಲ್ಲಾ ಇಲಾಖೆಗಳಿಗೂ ಸೂಚಿಸಿದೆ. ಅದರಂತೆ ತಾಲೂಕಿನಾದ್ಯಂತ ಆರೋಗ್ಯ ಇಲಾಖೆ ವಹಿಸಿರುವ ಎಚ್ಚರಿಕೆ ಕ್ರಮಗಳ ಕುರಿತು ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಪತ್ರಿಕೆಗೆ ಮಾಹಿತಿ ನೀಡಿ, ಕೋವಿಡ್-೧೯ ನಿಯಂತ್ರಿಸುವ ಸಂಬಂಧ ಪ್ರಸುತ ಕೋವಿಡ್ ಪರೀಕ್ಷೆಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಹೊರದೇಶ ಹಾಗು ಹೊರರಾಜ್ಯಗಳಿಂದ ಬಂದವರ ಮಾಹಿತಿ ಸಂಗ್ರಹಿಸಿ ಪರೀಕ್ಷೆ ನಡೆಸಲಾಗುತ್ತಿದೆ ಎಂದರು.
ಹೊರದೇಶದಿಂದ ಬಂದವರ ಮಾಹಿತಿ ಇಲಾಖೆಗೆ ಮುಂಚಿತವಾಗಿ ಲಭ್ಯವಾಗುತ್ತಿದೆ. ಇದುವರೆಗೂ ೪೦ ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಯಾರಲ್ಲೂ ಸೋಂಕು ಕಂಡು ಬಂದಿಲ್ಲ. ಉಳಿದಂತೆ ತಮಿಳುನಾಡು ಮೇಲ್ ಮರುವತ್ತೂರು ಓಂ ಶಕ್ತಿ ದೇವಾಲಯಕ್ಕೆ ನಗರದಿಂದ ತೆರಲಿದ್ದ ಭಕ್ತರು ಮರಳಿ ಬಂದಿದ್ದು, ಒಟ್ಟು ೪ ಬಸ್‌ಗಳು ಬಂದಿದ್ದು, ಈ ಪೈಕಿ ಕಳೆದ ೩ ದಿನಗಳಿಂದ ಮೊದಲ ದಿನ ೬೦, ಎರಡನೇ ದಿನ ೧೫೦ ಹಾಗು ಮೂರನೇ ದಿನ ೧೮೦ ಭಕ್ತರನ್ನು ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ ೪ ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಇವರಿಗೆ ಪ್ರತ್ಯೇಕ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ೨ ಬಸ್‌ಗಳು ಬರಬೇಕಾಗಿದ್ದು, ಬಂದ ನಂತರ ಪರೀಕ್ಷೆ ನಡೆಸಲಾಗುವುದು ಎಂದರು.
ಸರ್ಕಾರ ಜಾರಿಗೊಳಿಸಿರುವ ೨ ದಿನಗಳ ವಾರಾಂತ್ಯದ ಕರ್ಪ್ಯೂ ಸಂದರ್ಭದಲ್ಲಿ ವಹಿಸಬೇಕಾದ ಕ್ರಮಗಳ ಕುರಿತು ಸಹ ಇಲಾಖೆ ಗಮನ ಹರಿಸಿದೆ. ಸಾರ್ವಜನಿಕರು ಕರ್ಪ್ಯೂ ಯಶಸ್ವಿಗೆ ಸಹಕರಿಸುವಂತೆ ಮನವಿ ಮಾಡಿದರು.