Monday, January 17, 2022

ಕೊರೋನಾ ಸೋಂಕು ಹೆಚ್ಚಳ : ಶಂಕರಘಟ್ಟ ಗ್ರಾಮ ‘ಕಂಟೈನ್‌ಮೆಂಟ್ ಜೋನ್’ ಘೋಷಣೆ

ಭದ್ರಾವತಿ ಶಂಕರಘಟ್ಟ ಗ್ರಾಮದಲ್ಲಿರುವ ಕುವೆಂಪು ವಿಶ್ವವಿದ್ಯಾನಿಲಯ.
    ಭದ್ರಾವತಿ, ಜ. ೧೭: ತಾಲೂಕಿನ ಸಿಂಗನಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಂಕರಘಟ್ಟ ಗ್ರಾಮದ ವ್ಯಾಪ್ತಿಯಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚಾಗಿರುವ ಹಿನ್ನಲೆಯಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ನಿಕ್ಕಮ್ ಸೋಮವಾರ ಇಡೀ ಗ್ರಾಮವನ್ನು 'ಕಂಟೈನ್‌ಮೆಂಟ್ ಜೋನ್' ಎಂದು ಘೋಷಿಸಿ ಆದೇಶ ಹೊರಡಿಸಿದ್ದಾರೆ.
    ಶಂಕರಘಟ್ಟ ಗ್ರಾಮಕ್ಕೆ ಒಳಪಡಿಸುವ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಭಾನುವಾರ ಒಟ್ಟು ೨೪ ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಬಿ.ಪಿ ವೀರಭದ್ರಪ್ಪ ೫ ದಿನಗಳ ಕಾಲ ರಜೆ ಘೋಷಿಸಿದ್ದರು. ಈ ನಡುವೆ ಇದೀಗ ತಹಸೀಲ್ದಾರ್‌ರವರು ಸರ್ಕಾರದ ಮಾರ್ಗಸೂಚಿಯಂತೆ ಎನ್‌ಡಿಎಂಎ ಕಾಯ್ದೆಯಡಿ ಇಡೀ ಗ್ರಾಮವನ್ನು 'ಕಂಟೈನ್‌ಮೆಂಟ್ ಜೋನ್' ಎಂದು ಘೋಷಿಸಿದ್ದಾರೆ.
    ಈ ವ್ಯಾಪ್ತಿಯಲ್ಲಿ ಒಟ್ಟು ೨೧೪ ವಾಸದ ಮನೆಗಳು, ಒಟ್ಟು ೨೫ ಅಂಗಡಿಮುಂಗಟ್ಟು, ಕಛೇರಿಗಳು ಇವೆ. ಒಟ್ಟು ೧೩೪೫ ಜನಸಂಖ್ಯೆಯನ್ನು ಒಳಗೊಂಡಿದೆ. ಕಂಟೈನ್‌ಮೆಂಟ್ ಜೋನ್ ನಿರ್ವಹಣೆ ಅಧಿಕಾರಿಯಾಗಿ ಬಿ.ಆರ್ ಪ್ರಾಜೆಕ್ಟ್ ಸಹಾಯಕ ಇಂಜಿನಿಯರ್(ಎ.ಇ) ರಾಜ್‌ಕುಮಾರ್ ಅವರನ್ನು ನೇಮಕಗೊಳಿಸಿದ್ದು, ಮೊ: ೯೭೪೨೭೬೮೦೯೮ ಸಂಖ್ಯೆ ಕರೆ ಮಾಡಬಹುದಾಗಿದೆ.

ವೀರಶೈವ ಸಮಾಜದ ಹಿರಿಯ ಮುಖಂಡ ಕೂಡ್ಲಿಗೆರೆ ಎಂ. ನಾಗರಾಜ್ ನಿಧನ


                                   ಕೂಡ್ಲಿಗೆರೆ ಎಂ. ನಾಗರಾಜ್
    ಭದ್ರಾವತಿ, ಜ. ೧೭: ವೀರಶೈವ ಸಮಾಜದ ಹಿರಿಯ ಮುಖಂಡರು, ವಿನಾಯಕ ಬಸ್ ಮಾಲೀಕರಾದ ಕೂಡ್ಲಿಗೆರೆ ಎಂ. ನಾಗರಾಜ್(೬೭) ಸೋಮವಾರ ನಿಧನ ಹೊಂದಿದರು.
    ಪತ್ನಿ, ಓರ್ವ ಪುತ್ರಿ ಹಾಗು ಇಬ್ಬರು ಪುತ್ರರನ್ನು ಹೊಂದಿದ್ದರು. ನಾಗರಾಜ್‌ರವರು ತಾಲೂಕಿನಲ್ಲಿ ವೀರಶೈವ ಸಮಾಜ ಸಂಘಟಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೆ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ದಾನಿಗಳಾಗಿ ಗುರುತಿಸಿಕೊಂಡಿದ್ದರು. ಇವರ ಅಂತ್ಯಕ್ರಿಯೆ ಮಂಗಳವಾರ ಕೂಡ್ಲಿಗೆರೆ ಗ್ರಾಮದಲ್ಲಿ ನಡೆಯಲಿದೆ.
    ಇವರ ನಿಧನಕ್ಕೆ ಶ್ರೀಮದ್ ರಂಭಾಪುರಿ ಜಗದ್ಗುರುಗಳು, ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಾಸಕ ಬಿ.ಕೆ ಸಂಗಮೇಶ್ವರ್, ಹಟ್ಟಿ ಚಿನ್ನದ ಗಣಿ ನಿಯಮಿತ, ನಿರ್ದೇಶಕ ಕೂಡ್ಲಿಗೆರೆ ಹಾಲೇಶ್ ಸೇರಿದಂತೆ ವೀರಶೈವ ಸಮಾಜದ ವಿವಿಧ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಸಮಾಜದ ಪ್ರಮುಖರು ಸಂತಾಪ ಸೂಚಿಸಿದ್ದಾರೆ.

ಶ್ರೀ ರೇಣುಕಾ ಎಲ್ಲಮ್ಮ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಜಾತ್ರಾ ಮಹೋತ್ಸವ


ಭದ್ರಾವತಿ ಹಳೆನಗರದ ದೊಡ್ಡಕುರುಬರ ಬೀದಿ ಶ್ರೀ ರೇಣುಕಾ ಎಲ್ಲಮ್ಮ ದೇವಸ್ಥಾನದಲ್ಲಿ ಸೋಮವಾರ ಹುಣ್ಣಿಮೆಯಂದು ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
    ಭದ್ರಾವತಿ, ಜ. ೧೭:  ಹಳೆನಗರದ ದೊಡ್ಡಕುರುಬರ ಬೀದಿ ಶ್ರೀ ರೇಣುಕಾ ಎಲ್ಲಮ್ಮ ದೇವಸ್ಥಾನದಲ್ಲಿ ಸೋಮವಾರ ಹುಣ್ಣಿಮೆಯಂದು ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
    ಪ್ರತಿವರ್ಷದಂತೆ ಈ ಬಾರಿ ಸಹ ಸೇವಾಕರ್ತರಾದ ಮಾಲಾ ಜೋಗಮ್ಮನವರ ನೇತ್ರತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು.  ಬೆಳಿಗ್ಗೆ ಭದ್ರಾ ನದಿಯಿಂದ ಗಂಗಾ ಪೂಜೆಯೊಂದಿಗೆ ಶ್ರೀ ರೇಣುಕಾ ಎಲ್ಲಮ್ಮ ದೇವಿಯನ್ನು ಉತ್ಸವ ಮೆರವಣಿಗೆ ಮೂಲಕ ತರಲಾಯಿತು. ನಂತರ ಅಮ್ಮನವರಿಗೆ ವಿಶೇಷ ಅಲಂಕಾರದೊಂದಿಗೆ ಪೂಜೆ ಸಲ್ಲಿಸಲಾಯಿತು.
    ಮಹಾಮಂಗಳರತಿ, ತೀರ್ಥಪ್ರಸಾದ ವಿನಿಯೋಗ, ಮಧ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮಗಳು ಜರುಗಿದವು. ಕೇಶವರಾವ್ ಬೋರತ್ ಮತ್ತು  ಪರಶುರಾಮರಾವ್ ಬೋರತ್  ಅವರಿಂದ ಗೊಂದಳ್ ಸೇವೆ  ನೆರವೇರಿತು.

ಶ್ರೀ ಬನಶಂಕರಿ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಜರುಗಿದ ಹುಣ್ಣಿಮೆ ಜಾತ್ರಾ ಮಹೋತ್ಸವ

ಭದ್ರಾವತಿ ಹೊಸ ಸೇತುವೆ ರಸ್ತೆಯಲ್ಲಿರುವ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಸೋಮವಾರ ಹುಣ್ಣಿಮೆ ಜಾತ್ರಾ ಮಹೋತ್ಸವದ ಅಂಗವಾಗಿ ಅಮ್ಮನವರಿಗೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು.  
    ಭದ್ರಾವತಿ, ಜ. ೧೭: ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಸೋಮವಾರ ಹುಣ್ಣಿಮೆ ಜಾತ್ರಾ ಮಹೋತ್ಸವದ ಅಂಗವಾಗಿ ಅಮ್ಮನವರಿಗೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು.  
    ಕೋವಿಡ್ ೩ನೇ ಅಲೆ ನಡುವೆಯೂ ಪ್ರತಿವರ್ಷದಂತೆ ಈ ಬಾರಿ ಸಹ ಗಣಹೋಮ, ದುರ್ಗಾಹೋಮ ಮತ್ತು ಕಲಾ ಹೋಮ ಸೇರಿದಂತೆ ಧಾರ್ಮಿಕ ಆಚರಣೆಗಳು ವಿಜೃಂಭಣೆಯಿಂದ ಜರುಗಿದವು.  
    ಬೆಳಿಗ್ಗೆಯಿಂದಲೇ ಭಕ್ತಾದಿಗಳು ಕೋವಿಡ್ ಮಾರ್ಗಸೂಚಿ ಅನ್ವಯ ಅಮ್ಮನವರ ದರ್ಶನ ಪಡೆದು ಕೃಪೆಗೆ ಪಾತ್ರರಾದರು. ದೇವಸ್ಥಾನದ ಪ್ರಧಾನ ಅರ್ಚಕ ಕೇಶವ ರಾಮಾಂಜನೇಯ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು.
    ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಆಂಜನೇಯ, ಸಹಕಾರ್ಯದರ್ಶಿ ಚೆನ್ನಕೇಶವ, ಖಜಾಂಚಿ ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನೂತನ ಅಧ್ಯಕ್ಷ ಸತೀಶ್ ಮತ್ತು ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

Sunday, January 16, 2022

ಫೇಸ್‌ಬುಕ್‌ ಕನ್ನಡಪ್ರಭ, ಭದ್ರಾವತಿ ಗುಂಪು ಸೇರಲು ಕೋಡ್‌ ಸ್ಕ್ಯಾನ್‌ ಮಾಡಿ...

 


ಶತಕ ದಾಟಿದ ಕೊರೋನಾ : ಕುವೆಂಪು ವಿ.ವಿ ೨೪ ಮಂದಿಗೆ ಸೋಂಕು

    ಭದ್ರಾವತಿ, ಜ. ೧೬: ತಾಲೂಕಿನಲ್ಲಿ ಕೊರೋನಾ ಸೋಂಕಿನ ಪ್ರಮಾಣ ಭಾನುವಾರ ಶತಕ ದಾಟಿದ್ದು, ಒಂದು ವಾರದಲ್ಲಿ ೪೦೦ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ.
    ಕೊರೋನಾ ೩ನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಸರ್ಕಾರಿ ಕಛೇರಿಗಳು, ಶಾಲಾ-ಕಾಲೇಜುಗಳಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವುದು ಜನರ ಆತಂಕಕ್ಕೆ ಕಾರಣವಾಗುತ್ತಿದೆ. ಈ ಹಿಂದೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದರಿಂದ ಶಾಲಾ ಮಕ್ಕಳಲ್ಲಿ ಹೆಚ್ಚಿನ ಸೋಂಕು ಕಂಡು ಬಂದಿರಲಿಲ್ಲ. ಆದರೆ ಈ ಬಾರಿ ಶಾಲಾ-ಕಾಲೇಜುಗಳು ಭೌತಿಕವಾಗಿ ಶೈಕ್ಷಣಿಕ ಚಟುವಟಿಗಳನ್ನು ಆರಂಭಿಸಿರುವುದರಿಂದ ಸೋಂಕು ಮತ್ತಷ್ಟು ವೇಗವಾಗಿ ಹರಡುತ್ತಿದೆ ಎನ್ನಲಾಗಿದೆ.
    ಶನಿವಾರ ೯೮ಕ್ಕೆ ಅಂತ್ಯವಾಗಿದ್ದ ಸೋಂಕಿನ ಪ್ರಮಾಣ ಭಾನುವಾರ ೧೦೫ಕ್ಕೆ ಏರಿಕೆಯಾಗಿದೆ. ಒಂದು ವಾರದಲ್ಲಿ ಒಟ್ಟು ೪೩೦ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
    ಕುವೆಂಪು ವಿಶ್ವವಿದ್ಯಾನಿಲಯಕ್ಕೂ ಒಕ್ಕರಿಸಿದ ಸೋಂಕು:
    ನಗರದ ಲೋಕೋಪಯೋಗಿ ಇಲಾಖೆ ಕಛೇರಿಯ ಬಹುತೇಕ ಸಿಬ್ಬಂದಿಗಳಲ್ಲಿ ಸೋಂಕು ಕಾಣಿಸಿಕೊಂಡಿರುವುದು ಹಾಗು ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯಲ್ಲಿ ಸೋಂಕು ಕಾಣಿಸಿಕೊಂಡಿರುವುದು ಈಗಾಗಲೇ ತಿಳಿದಿರುವ ವಿಚಾರವಾಗಿದೆ. ಇದೀಗ ಸೋಂಕು ಜ್ಞಾನ ದೇಗುಲ ವಿಶ್ವವಿದ್ಯಾನಿಲಯಕ್ಕೂ ಒಕ್ಕರಿಸಿಕೊಂಡಿದೆ. ವಿಶ್ವವಿದ್ಯಾನಿಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ೫ ಸಿಬ್ಬಂದಿಗಳಿಗೆ ಹಾಗು ೧೯ ವಿದ್ಯಾರ್ಥಿಗಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಜ.೧೭ರ ಸೋಮವಾರದಿಂದ ಜ.೨೧ರ ವರೆಗೆ ಕುಲಸಚಿವ ಪ್ರೊ. ಬಿ.ಪಿ ವೀರಭದ್ರಪ್ಪ ರಜೆ ಘೋಷಿಸಿ ಆದೇಶಿಸಿದ್ದಾರೆ.

ಸರ್ಕಾರದ ಕ್ರಮ ಬಹುಪಾಲು ಅತಿಥಿ ಉಪನ್ಯಾಸಕರಿಗೆ ಮಾರಕ : ಎಂ. ರಮೇಶ್

ಎಂ. ರಮೇಶ್
    ಭದ್ರಾವತಿ ಜ. ೧೬: ಅತಿಥಿ ಉಪನ್ಯಾಸಕರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಳೆದ ಸುಮಾರು ೧ ತಿಂಗಳಿನಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದು, ಇದೀಗ ಸರ್ಕಾರ ಇವರ ಬೇಡಿಕೆಗಳನ್ನು ಈಡೇರಿಸಲು ಮುಂದಾಗಿರುವುದು ಶ್ಲಾಘನೀಯ ಕಾರ್ಯವಾಗಿದೆ. ಆದರೆ ಸರ್ಕಾರದ ಕೈಗೊಂಡಿರುವ ಕ್ರಮ ಬಹುಪಾಲು ಅತಿಥಿ ಉಪನ್ಯಾಸಕರಾಗಿ ಮಾರಕವಾಗಿದೆ ಎಂದು ನೈರುತ್ಯ ಶಿಕ್ಷಕರ ಕ್ಷೇತ್ರದ ಪರಾಜಿತ ಅಭ್ಯರ್ಥಿ, ತಾಲೂಕಿನ  ಗ್ರಾಮಾಂತರ ಕಾಂಗ್ರೆಸ್ ಹಿಂದುಳಿದ ವಿಭಾಗದ ಅಧ್ಯಕ್ಷ ಎಂ.ರಮೇಶ್ ಆರೋಪಿಸಿದ್ದಾರೆ.
    ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಳ ಮಾಡಿರುವುದು ಸ್ವಾಗತಾರ್ಹ. ಆದರೆ ಕಾರ್ಯಭಾರದ ಅವಧಿಯನ್ನು ಹೆಚ್ಚಳ ಮಾಡಿರುವುದರಿಂದ ಈಗಿರುವ ಬಹುಪಾಲು ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಸದ್ಯ ಜಾರಿಯಲ್ಲಿರುವ ೮ ರಿಂದ ೧೦ ಗಂಟೆಗಳ ಕಾರ್ಯಭಾರವನ್ನು ಗರಿಷ್ಟ ೧೫ ಗಂಟೆಗಳಿಗೆ ಹೆಚ್ಚಿಸಲಾಗಿದೆ. ಇದರಿಂದ ಸುಮಾರು ಅರ್ಧದಷ್ಟು ಉಪನ್ಯಾಸಕರು ಕಾರ್ಯಭಾರವಿಲ್ಲದೆ ಕೆಲಸ ಕಳೆದುಕೊಳ್ಳಲ್ಲಿದ್ದಾರೆ.
    ೧೫ ಗಂಟೆಗಳ ಕಾರ್ಯಭಾರ ಲಭ್ಯವಿಲ್ಲದೇ ಇದ್ದರೆ, ಅಂತಹ ಅತಿಥಿ ಉಪನ್ಯಾಸಕರನ್ನು ಕಾರ್ಯಭಾರವಿರುವ ಇತರೆ ಸರಕಾರಿ ಕಾಲೇಜುಗಳಲ್ಲಿ ಕೆಲಸ ನಿರ್ವಹಿಸಲು ಶಿವಮೊಗ್ಗದವರನ್ನು ಗುಲ್ಬರ್ಗಕ್ಕೂ ಅಥವಾ ಬೀದರ್‌ಗೆ ವರ್ಗಾವಣೆಗೊಳಿಸಿದರೆ ಅತಿಥಿ ಉಪನ್ಯಾಸಕರೇ ಕೆಲಸ ಬಿಡುವಂತಹ ಸ್ಥಿತಿ ಉದ್ಭವವಾಗುತ್ತದೆ.
    ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಸೇವಾ ಭದ್ರತೆಯ ಬಗ್ಗೆ ಯಾವುದೇ ಖಾತರಿ ನೀಡಿರುವುದಿಲ್ಲ. ಕಳೆದ ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರುಗಳನ್ನು ಯಾರೊಬ್ಬರನ್ನು ಕರ್ತವ್ಯದಿಂದ ತೆಗೆದು ಹಾಕದೇ ಸೇವಾ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಬೇಕಾಗಿದೆ ಎಂದು ರಮೇಶ್ ಒತ್ತಾಯಿಸಿದ್ದಾರೆ.