೮ ಎಡ ಪಕ್ಷಗಳಿಂದ ಮನೆ-ಮನೆಯಿಂದ ಪ್ರತಿಭಟನೆ
ಮಹಾಮಾರಿ ಕೊರೋನಾ ನಿರ್ವಹಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿರುವುದನ್ನು ಖಂಡಿಸಿ ಸಿಪಿಐ-ಸಿಪಿಐಎಂ-ಎಸ್‌ಯುಸಿಐ-ಸಿಪಿಐ(ಎಂಎಲ್)-ಎಐಎಫ್‌ಬಿ-ಆರ್‌ಪಿಐ-ಸ್ವರಾಜ್ ಇಂಡಿಯಾ ಒಟ್ಟು ೮ ಎಡ ಪಕ್ಷಗಳಿಂದ ಸೋಮವಾರ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದ್ದ ಮನೆ-ಮನೆಯಿಂದ ಪ್ರತಿಭಟನೆ ಭದ್ರಾವತಿ ವಿದ್ಯಾಮಂದಿರದಲ್ಲಿರುವ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಜಿಲ್ಲಾ ಕಾರ್ಯದರ್ಶಿ ಎಂ. ನಾರಾಯಣ ನಿವಾಸದಲ್ಲಿ ನಡೆಯಿತು.
ಭದ್ರಾವತಿ, ಜ. ೨೪: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಾಮಾರಿ ಕೊರೋನಾ ನಿಯಂತ್ರಿಸುವಲ್ಲಿ ವಿಫಲವಾಗಿವೆ. ಅಲ್ಲದೆ ಜನ ವಿರೋಧಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುತ್ತಿವೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಜಿಲ್ಲಾ ಕಾರ್ಯದರ್ಶಿ ಎಂ. ನಾರಾಯಣ ಆರೋಪಿಸಿದರು.
ಮಹಾಮಾರಿ ಕೊರೋನಾ ನಿರ್ವಹಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿರುವುದನ್ನು ಖಂಡಿಸಿ ಸಿಪಿಐ-ಸಿಪಿಐಎಂ-ಎಸ್‌ಯುಸಿಐ-ಸಿಪಿಐ(ಎಂಎಲ್)-ಎಐಎಫ್‌ಬಿ-ಆರ್‌ಪಿಐ-ಸ್ವರಾಜ್ ಇಂಡಿಯಾ ಒಟ್ಟು ೮ ಎಡ ಪಕ್ಷಗಳಿಂದ ಸೋಮವಾರ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದ್ದ ಮನೆ-ಮನೆಯಿಂದ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದರು.
ಪ್ರತಿಯೊಂದು ವಾರ್ಡ್‌ಗಳಲ್ಲಿ ಪ್ರತಿಯೊಂದು ಮನೆಗಳಿಗೆ ಭೇಟಿ ನೀಡಿ ಕೊರೋನಾ ಕುರಿತು ಜಾಗೃತಿ ಮೂಡಿಸುವ ಜೊತೆಗೆ ನಿಯಂತ್ರಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕು. ಸಂಕಷ್ಟದಲ್ಲಿರುವ ಪ್ರತಿ ಕುಟುಂಬಕ್ಕೂ ೧೦ ಸಾವಿರ ರು. ನಗದು ನೇರವಾಗಿ ಅವರ ಖಾತೆಗೆ ವರ್ಗಾಯಿಸುವುದು. ತಲಾ ೧೦ ಕೆ.ಜಿ ಉಚಿತ ಪಡಿತರ ವಿತರಿಸುವುದು. ನಗರ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಿ ೨೦೦ ದಿನಗಳ ಉದ್ಯೋಗ ಖಾತ್ರಿ ಒದಗಿಸುವುದು. ಕೋವಿಡ್ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಿ, ಮೃತಪಟ್ಟವರಿಗೆ ಸೂಕ್ತ ಪರಿಹಾರ ನೀಡುವುದು. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚಿನ ಗಮನ ಹರಿಸುವುದು ಮತ್ತು ಮನೆ ಆರೈಕೆಯಲ್ಲಿರುವ ಸೋಂಕಿತರಿಗೆ ನೆರವು ನೀಡುವಂತೆ ಒತ್ತಾಯಿಸಿದರು.
ಕಾರ್ಮಿಕ ವಿರೋಧಿ, ಭೂ ಸುಧಾರಣೆ ತಿದ್ದುಪಡಿ, ಎಪಿಎಂಸಿ ತಿದ್ದುಪಡಿ, ಜಾನುವಾರು ಹತ್ಯೆ ನಿಷೇಧ ಹಾಗು ಮತಾಂತರ ನಿಷೇಧ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿದರು.
ಮುಖಂಡರುಗಳಾದ ಕೆ. ಮಂಜಣ್ಣ, ಜಿ. ಶಿವಣ್ಣ, ಸಿ. ನಿಂಗಯ್ಯ, ಕೃಷ್ಣೋಜಿರಾವ್, ಮಾದೇವಪ್ಪ ಮತ್ತು ಜಯಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.