Sunday, March 27, 2022

ಜನಮೆಚ್ಚಿದ ಅಧಿಕಾರಿ ಮನೋಹರ್ ಭವಿಷ್ಯದ ರತ್ನ : ಪ್ರೊ. ಡಾ.ವಿ ಸುದೇಶ್

ಭದ್ರಾವತಿ ಸಿದ್ಧರೂಢ ನಗರದ ಶ್ರೀ ಶಂಕರ ಮಠದ ಶ್ರೀ ಭಾರತೀತೀರ್ಥ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ರಂಗಕರ್ಮಿ-ಕಿರಿತೆರೆ ಕಲಾವಿದ ಅಪರಂಜಿ ಶಿವರಾಜ್‌ರವರ 'ನಾ ಕಂಡ ಪೌರಾಯುಕ್ತರು' ಅಭಿನಂದನ ಕೃತಿ ಬಿಡುಗಡೆ ಸಮಾರಂಭವನ್ನು ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಉದ್ಘಾಟಿಸಿದರು.
     ಭದ್ರಾವತಿ, ಮಾ. ೨೭: ಸರ್ಕಾರಿ ಹುದ್ದೆಯಲ್ಲಿರುವವರು ಜನರ ಮನಸ್ಸಿನಲ್ಲಿ ಉಳಿದುಕೊಳ್ಳುವುದು ಬಹಳ ವಿರಳ. ಪೌರಾಯುಕ್ತರಾಗಿ ಜನರು ಮೆಚ್ಚುವ ರೀತಿಯಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿರುವ ಮನೋಹರ್‌ರವರು ದೇಶದ ಭವಿಷ್ಯದ ರತ್ನವಾಗಿ ಉಳಿದುಕೊಳ್ಳುವ ವಿಶ್ವಾಸವಿದೆ ಎಂದು ಬೆಂಗಳೂರು ವಿಶ್ವ ವಿದ್ಯಾಲಯದ ಕಾನೂನು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಡಾ. ವಿ ಸುದೇಶ್ ಹೇಳಿದರು.
    ಅವರು ಭಾನುವಾರ ಸಿದ್ಧರೂಢ ನಗರದ ಶ್ರೀ ಶಂಕರ ಮಠದ ಶ್ರೀ ಭಾರತೀತೀರ್ಥ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ರಂಗಕರ್ಮಿ-ಕಿರಿತೆರೆ ಕಲಾವಿದ ಅಪರಂಜಿ ಶಿವರಾಜ್‌ರವರ 'ನಾ ಕಂಡ ಪೌರಾಯುಕ್ತರು' ಅಭಿನಂದನ ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
    ಮನೋಹರ್ ಅವರ ವಿದ್ಯಾರ್ಥಿ ಜೀವನವನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಭದ್ರಾವತಿಯಲ್ಲಿ ಪೌರಾಯುಕ್ತರಾಗಿ ಜನ ಮೆಚ್ಚುವ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ ಅವರ ಮನಸ್ಸಿನಲ್ಲಿ ಉಳಿದುಕೊಂಡಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
ಬಹುತೇಕ ಅಧಿಕಾರಿಗಳು ಸರ್ಕಾರಿ ಹುದ್ದೆಯಲ್ಲಿ ವೈಯಕ್ತಿಕ ಲಾಭದ ನಿರೀಕ್ಷೆಯನ್ನು ಹೊಂದಿರುತ್ತಾರೆ. ಆದರೆ ಮನೋಹರ್‌ರವರು ಹುದ್ದೆಯನ್ನು ವೈಯಕ್ತಿಕ ಹಿತಾಸಕ್ತಿಗೆ ಬಳಸಿಕೊಳ್ಳದೆ ಕರ್ತವ್ಯವನ್ನು ಸೇವಾ ಮನೋಭಾವದೊಂದಿಗೆ ನಿರ್ವಹಿಸುತ್ತಿರುವುದು ಅಭಿನಂದನಾರ್ಹವಾಗಿದೆ. ಇವರು ಕೇವಲ ಭದ್ರಾವತಿ ನಗರದ ಜನರಿಗೆ ಮಾತ್ರ ರತ್ನವಾಗಿ ಉಳಿದಿಲ್ಲ ದೇಶದ ರತ್ನವಾಗಿ ಉಳಿದುಕೊಂಡಿದ್ದಾರೆ ಎಂದರು.
    ಚಲನಚಿತ್ರ ನಟಿ, ಮಿಸ್ ಸುಪ್ರ ನ್ಯಾಷನಲ್ ೨೦೧೪ರ ವಿಜೇತೆ ಆಶಾ ಭಟ್ ಮಾತನಾಡಿ, ನಮ್ಮೆಲ್ಲರ ಸಾಧನೆಗೆ ನಮ್ಮೂರಿನ ಕೊಡುಗೆ ಅಪಾರವಾಗಿದೆ. ಇಲ್ಲಿನ ಜನರು ಕಲಾವಿದರು ಸೇರಿದಂತೆ ಎಲ್ಲಾ ಕ್ಷೇತ್ರದವರಿಗೂ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ. ಉತ್ತಮ ಅಧಿಕಾರಿಯಾಗಿರುವ ಮನೋಹರ್‌ರವರು ನಮ್ಮೂರಿನಲ್ಲಿ ಸೇವೆ ಸಲ್ಲಿಸಿರುವುದು ನಮ್ಮೆಲ್ಲರ ಹೆಮ್ಮೆಯ ವಿಚಾರವಾಗಿದೆ ಎಂದರು.
    ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ ಧನಂಜಯ ಮಾತನಾಡಿ, ಪ್ರತಿಯೊಬ್ಬರು ತಮ್ಮ ಬದುಕಿನಲ್ಲಿ ಉತ್ತಮ ಗುಣಗಳನ್ನು ಮೈಗೂಡಿಸಿಕೊಂಡು ಮುನ್ನಡೆದಾಗ ಮಾತ್ರ ಯಾವುದೇ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ. ಆ ಮೂಲಕ ಜನರ ಮನಸ್ಸಿನಲ್ಲಿ ಉಳಿದುಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಮನೋಹರ್ ಸಹ ಒಬ್ಬರಾಗಿದ್ದು, ಸರ್ಕಾರಿ ಅಧಿಕಾರಿಯಾಗಿ ಕರ್ತವ್ಯದಲ್ಲಿ ನಿಷ್ಠೆ ತೋರಿಸುವ ಮೂಲಕ ಎಲ್ಲರ ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆ ಎಂದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಮಾತನಾಡಿ, ಮನೋಹರ್ ಕರ್ತವ್ಯಕ್ಕೆ ಹೆಚ್ಚಿನ ಮಾನ್ಯತೆ ನೀಡಿದವರು. ಕೆಳವರ್ಗದ ಜನರ ನೋವುಗಳನ್ನು ಅರಿತುಕೊಂಡವರು. ಅವರೊಂದಿಗೆ ನಾನು ಸಹ ಒಬ್ಬರು ಎಂಬಂತೆ ಕಾಯಕದಲ್ಲಿ ತೊಡಗಿಸಿಕೊಂಡವರು. ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದವರು. ಇಂತಹ ಅಧಿಕಾರಿಗಳು ಅಪರೂಪ ಎಂದರು.
    ರಂಗಕರ್ಮಿ-ಕಿರಿತೆರೆ ಕಲಾವಿದ ಅಪರಂಜಿ ಶಿವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, 'ನಾ ಕಂಡ ಪೌರಾಯುಕ್ತರು' ಕೃತಿ ರಚಿಸಲು ಉಂಟಾದ ಪ್ರೇರಣೆಗಳು, ಆಶಯಗಳನ್ನು ವಿವರಿಸಿದರು.
    ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಚಲನಚಿತ್ರ ನಟ, ನಿರ್ದೇಶಕ, ಜಾದೂ ಮಾಂತ್ರಿಕ ಎಂ.ಡಿ ಕೌಡಿಕ್ ವಿಶಿಷ್ಟವಾಗಿ ಜಾದೂ ಮೂಲಕ ಉದ್ಘಾಟನೆ ನೆರವೇರಿಸಿಕೊಟ್ಟರು.
    ಶಾಶ್ವತಿ ಮಹಿಳಾ ಸಮಾಜದ ಅಧ್ಯಕ್ಷೆ ರೂಪರಾವ್ ಸ್ವಾಗತಿಸಿದರು. ಮಮತಾ ಬಿ. ನವೀನ್ ನಿರೂಪಿಸಿದರು.

Saturday, March 26, 2022

ನೆನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಕಾಮಗಾರಿ ತಕ್ಷಣ ಆರಂಭಿಸಿ : ಪೂರ್ವಭಾವಿ ಸಭೆಯಲ್ಲಿ ಒತ್ತಾಯ

ಭದ್ರಾವತಿಯಲ್ಲಿ ತಹಸೀಲ್ದಾರ್ ಕಛೇರಿ ಸಭಾಂಗಣದಲ್ಲಿ ಡಾ. ಬಾಬು ಜಗಜೀವನ್ ರಾಮ್, ಕೈವಾರ ತಾತಯ್ಯ ಹಾಗು ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ಜನ್ಮ ದಿನಾಚರಣೆ ಅಂಗವಾಗಿ ತಹಸೀಲ್ದಾರ್ ಆರ್. ಪ್ರದೀಪ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
    ಭದ್ರಾವತಿ, ಮಾ. ೨೬: ಹಳೇನಗರದ ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಛೇರಿ(ಬಿಆರ್‌ಸಿ) ಸಮೀಪ ನಿರ್ಮಾಣಗೊಳ್ಳುತ್ತಿರುವ ಅಂಬೇಡ್ಕರ್  ಭವನ ಕಾಮಗಾರಿ ತಕ್ಷಣ ಪೂರ್ಣಗೊಳಿಸುವಂತೆ ದಲಿತ ಸಂಘಟನೆಗಳು ತಾಲೂಕು ಆಡಳಿತಕ್ಕೆ ಒತ್ತಾಯಿಸಿವೆ.
    ತಹಸೀಲ್ದಾರ್ ಕಛೇರಿ ಸಭಾಂಗಣದಲ್ಲಿ ಡಾ. ಬಾಬು ಜಗಜೀವನ್ ರಾಮ್, ಕೈವಾರ ತಾತಯ್ಯ ಹಾಗು ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ಜನ್ಮ ದಿನಾಚರಣೆ ಅಂಗವಾಗಿ ತಹಸೀಲ್ದಾರ್ ಆರ್. ಪ್ರದೀಪ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ ದಲಿತ ಸಂಘಟನೆಗಳ ಪ್ರಮುಖರು ಮಾತನಾಡಿ, ನೆನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನ ಕಾಮಗಾರಿಗೆ ಅಗತ್ಯವಿರುವ ೧.೫ ಕೋಟಿ ರು. ಹೊಂದಿಸಿಕೊಂಡು ತಕ್ಷಣ ಮುಕ್ತಾಯಗೊಳಿಸುವುದು. ಜೊತೆಗೆ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ನೂತನ ಅಂಬೇಡ್ಕರ್ ಪ್ರತಿಮೆ ತಕ್ಷಣ ಪ್ರತಿಷ್ಠಾಪಿಸಬೇಕೆಂದು ಆಗ್ರಹಿಸಿದರು.
    ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಪೌರಾಯುಕ್ತ ಕೆ. ಪರಮೇಶ್, ಸದಸ್ಯ ಬಿ.ಕೆ ಮೋಹನ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗೋಪಿನಾಥ್, ಸಂಚಾರಿ ಪೊಲೀಸ್ ಠಾಣಾಧಿಕಾರಿ ಕವಿತಾ, ದಲಿತ ಸಂಘಟನೆಗಳ ಮುಖಂಡರಾದ ಶಿವಬಸಪ್ಪ, ಕೆ. ರಂಗನಾಥ್, ಈಶ್ವರಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ವಿಐಎಸ್‌ಎಲ್ ಕಾರ್ಖಾನೆಗೆ ಬಂಡವಾಳ ಹೂಡಿ, ನಿವೃತ್ತ ಕಾರ್ಮಿಕರ ವಸತಿ ಗೃಹಗಳ ಸಮಸ್ಯೆ ಬಗೆಹರಿಸಿ

ಮಾಜಿ ಪ್ರಧಾನಿ ದೇವೇಗೌಡರಿಂದ ಉಕ್ಕು ಸಚಿವ ರಾಮ್ ಚಂದ್ರ ಪ್ರಸಾದ್ ಸಿಂಗ್‌ಗೆ ಮನವಿ


ಭಾರತೀಯ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಬಂಡವಾಳ ಹೂಡುವ ಜೊತೆಗೆ ನಿವೃತ್ತ ಕಾರ್ಮಿಕರ ವಸತಿ ಗೃಹಗಳ ಸಮಸ್ಯೆ ಬಗೆಹರಿಸುವಂತೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಉಕ್ಕು ಸಚಿವರಿಗೆ ಮನವಿ ಮಾಡಿದರು.
    ಭದ್ರಾವತಿ, ಮಾ. ೨೬ : ಭಾರತೀಯ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಬಂಡವಾಳ ಹೂಡುವ ಜೊತೆಗೆ ನಿವೃತ್ತ ಕಾರ್ಮಿಕರ ವಸತಿ ಗೃಹಗಳ ಸಮಸ್ಯೆ ಬಗೆಹರಿಸುವಂತೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಉಕ್ಕು ಸಚಿವರಿಗೆ ಮನವಿ ಮಾಡಿದ್ದು, ಇದಕ್ಕೆ ಸಚಿವರು ಪೂರಕವಾಗಿ ಸ್ಪಂದಿಸಿದ್ದಾರೆ.
    ಕೇಂದ್ರ ಉಕ್ಕು ಸಚಿವ ರಾಮ್ ಚಂದ್ರ ಪ್ರಸಾದ್ ಸಿಂಗ್‌ರವರನ್ನು ಮಾ.೨೩ರಂದು ಭೇಟಿ ಮಾಡಿರುವ ಎಚ್.ಡಿ ದೇವೇಗೌಡರು, ಪ್ರಸ್ತುತ ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಲಾಗಿದ್ದು, ಜೊತೆಗೆ ಅಧಿಕಾರಿಗಳು ಮತ್ತು ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ಹೆಚ್ಚಿನ ಶ್ರಮವಹಿಸಿ ಹಗಲಿರುಳು ದುಡಿಯುತ್ತಿದ್ದಾರೆ. ಇದರಿಂದಾಗಿ ಅತಿ ಕಡಿಮೆ ಬಂಡವಾಳದಲ್ಲಿ ಕಾರ್ಖಾನೆ ಲಾಭದತ್ತ ಸಾಗುತ್ತಿದೆ. ಈ ಹಿನ್ನಲೆಯಲ್ಲಿ ಹೆಚ್ಚಿನ ಬಂಡವಾಳ ತೊಡಗಿಸಿ ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿದ್ದಾರೆ.
    ಶಿಥಿಲಗೊಂಡಿರುವ ಕಾರ್ಖಾನೆಯ ವಸತಿ ಗೃಹಗಳನ್ನು ಆಡಳಿತ ಮಂಡಳಿ ನಿವೃತ್ತ ಕಾರ್ಮಿಕರಿಗೆ ಲೈಸೆನ್ಸಿಂಗ್ ಸ್ಕೀಂ, ತಾತ್ಕಾಲಿಕ ರಿಟನ್ಷನ್ ಸ್ಕೀಂ ಮತ್ತು ಲಾಂಗ್ ಲೀಸ್ ಸೇರಿದಂತೆ ಇತರೆ ಸ್ಕೀಂಗಳ ಆಧಾರದಲ್ಲಿ ನೀಡಿದೆ. ಇದರಿಂದಾಗಿ ನಿವೃತ್ತ ಕಾರ್ಮಿಕರು ಬಾಡಿಗೆ ಪಾವತಿಸುವಾಗ ಮತ್ತು ಸ್ಕೀಂಗಳ ನವೀಕರಣ ಸಮಯದಲ್ಲಿ ಗೊಂದಲ ಉಂಟಾಗುತ್ತಿದೆ. ಈ ಹಿನ್ನಲೆಯಲ್ಲಿ ಈ ಗೊಂದಲಗಳ ನಿವಾರಣೆಗೆ ಲಾಂಗ್ ಲೀಸ್ ಜೊತೆಗೆ ಯೂನಿಫಾರಂ ಲೀಸ್ ನೀಡುವ ಮೂಲಕ ನಿವೃತ್ತ ಕಾರ್ಮಿಕರ ಹಿತ ಕಾಪಾಡುವಂತೆ ಮನವಿ ಮಾಡಿದ್ದು, ಇದಕ್ಕೆ ಸ್ಪಂದಿಸಿರುವ ಸಚಿವರು ನಿವೃತ್ತ ಕಾರ್ಮಿಕರ ವಸತಿ ಗೃಹಗಳ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.  
    ಕೆಲವು ದಿನಗಳ ಹಿಂದೆ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ವತಿಯಿಂದ ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ ನೇತೃತ್ವದಲ್ಲಿ ಪದಾಧಿಕಾರಿಗಳಾದ ಅಧ್ಯಕ್ಷ ಬಿ.ಜಿ ರಾಮಲಿಂಗಯ್ಯ, ಪ್ರಧಾನ ಕಾರ್ಯದರ್ಶಿ ಬಿ.ಆರ್ ನಾಗರಾಜ ಹಾಗು ಇನ್ನಿತರರು ದೇವೇಗೌಡರನ್ನು ಸಂಪರ್ಕಿಸಿ ಮನವಿ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ದೇವೇಗೌಡರು ಉಕ್ಕು ಸಚಿವರನ್ನು ಭೇಟಿಯಾಗಿದ್ದಾರೆ.

ಆಂಜನಪ್ಪ ನಿಧನ

ಆಂಜನಪ್ಪ 
    ಭದ್ರಾವತಿ, ಮಾ. ೨೬: ತಾಲೂಕು ಸರ್ಕಾರಿ ‘ಡಿ’ ಗ್ರೂಪ್ ನೌಕರರ ಸಂಘದ ಉಪಾಧ್ಯಕ್ಷ ಆಂಜನಮೂರ್ತಿಯವರ ತಂದೆ, ಸಂಜಯ್ ಕಾಲೋನಿ ನಿವಾಸಿ ಆಂಜನಪ್ಪ(೮೩) ಶನಿವಾರ ಬೆಳಿಗ್ಗೆ ನಿಧನ ಹೊಂದಿದರು. 
ಆಂಜನಮೂರ್ತಿ ಸೇರಿದಂತೆ ೪ ಗಂಡು, ೧ ಹೆಣ್ಣು ಮಕ್ಕಳನ್ನು ಹೊಂದಿದ್ದರು. ಆಂಜನಪ್ಪ ಕೆಲವು ದಿನಗಳಿಂದ ಆನಾರೋಗ್ಯಕ್ಕೆ ಒಳಗಾಗಿ ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 
ಇವರ ಅಂತ್ಯಕ್ರಿಯೆ ಭಾನುವಾರ ಹುತ್ತಾಕಾಲೋನಿಯಲ್ಲಿರುವ ಹಿಂದು ರುದ್ರ ಭೂಮಿಯಲ್ಲಿ ನಡೆಯಲಿದೆ. ಮೃತರ ನಿಧನಕ್ಕೆ ‘ಡಿ’ ಗ್ರೂಪ್ ನೌಕರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ. 

ಶರಣರಿಂದ ನವ ಸಮಾಜ ನಿರ್ಮಾಣಕ್ಕೆ ಮುನ್ನುಡಿ : ಡಾ. ಬಿ.ಜಿ ಧನಂಜಯ

ಭದ್ರಾವತಿ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಮೈಸೂರು ಹಾಗು ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೬೨೫ನೇ ವಚನ ಮಂಟಪ ಮತ್ತು ದತ್ತಿ ಕಾರ್ಯಕ್ರಮವನ್ನು ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎನ್ ಮಹಾರುದ್ರ, ಪ್ರಾಂಶುಪಾಲ ಡಾ. ಎಂ.ಜಿ ಉಮಾಶಂಕರ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
    ಭದ್ರಾವತಿ, ಮಾ. ೨೬: ಶರಣರು ೧೨ನೇ ಶತಮಾನದಲ್ಲಿ ಸಾಮಾಜಿಕ ಪ್ರಜ್ಞೆ ಮೂಲಕ ನವ ಸಮಾಜ ನಿರ್ಮಾಣಕ್ಕೆ ಮುನ್ನುಡಿ ಬರೆದರು. ಆದರೆ ಇಂದಿಗೂ ನಾವುಗಳು ಅವರ ಆಶಯಗಳನ್ನು ಅರಿತುಕೊಂಡಿಲ್ಲ ಎಂದು ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಹೇಳಿದರು.
    ಅವರು ಶನಿವಾರ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಮೈಸೂರು ಹಾಗು ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೬೨೫ನೇ ವಚನ ಮಂಟಪ ಮತ್ತು ದತ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಜಗತ್ತಿಗೆ ಶರಣರು ನೀಡಿರುವ ಕೊಡುಗೆ ಅಪಾರವಾಗಿದೆ. ಶರಣರು ತಮ್ಮ ಜೀವನ ಚರಿತ್ರೆಗಳನ್ನು ಬರೆದಿಟ್ಟುಕೊಳ್ಳಲಿಲ್ಲ ಬದಲಾಗಿ ಚಾರಿತ್ರ್ಯ ವಂತರಾಗಿ ಬದುಕಿ ಇಂದಿಗೂ ಶಾಶ್ವತವಾಗಿ ಉಳಿದುಕೊಂಡಿದ್ದಾರೆ. ಕಾಯಕದಿಂದ ವಚನ ಸಾಹಿತ್ಯ ರೂಪುಗೊಂಡಿದ್ದು, ಈ ಸಾಹಿತ್ಯ ಸಮಾಜ ಬದಲಿಸುವ ಶಕ್ತಿ ಹೊಂದಿದೆ. ಪ್ರತಿಯೊಂದು ವಚನ ಸಹ ಸಾಮಾಜಿಕ ಕಾಳಜಿಯನ್ನು ಹೊಂದಿದ್ದು, ವಚನಗಳು ಯಾವುದೇ ದುರುದ್ದೇಶದಿಂದ ಕೂಡಿಲ್ಲ ಎಂದರು.
    ಬಸವಣ್ಣನವರು ಕೆಳವರ್ಗದವರ ಏಳಿಗಾಗಿ ಹೋರಾಟ ನಡೆಸಿದರು. ಈ ಹಿನ್ನಲೆಯಲ್ಲಿ ಅವರು ಸಾಕಷ್ಟು ಟೀಕೆಗಳಿಗೆ ಒಳಗಾಗಬೇಕಾಯಿತು. ಆದರೆ ಅವರು ತಮ್ಮ ನೈಜತೆಯನ್ನು ಕಾಯ್ದುಕೊಂಡು ಸಾಮಾಜಿಕ ಶೋಷಣೆಗಳ ವಿರುದ್ಧ ಚಳುವಳಿ ನಡೆಸಿದರು. ವೈಶ್ಯೆಯನ್ನು ಸಮಾಜದ ಮುಖ್ಯವಾಹಿನಿಗೆ ಕರೆ ತರುವ ಮೂಲಕ ಸಮಾನತೆ ಕಲ್ಪಿಸಿಕೊಟ್ಟು ಆ ಮೂಲಕ ಆಕೆಯಿಂದ ವಚನಗಳನ್ನು ರೂಪಿಸಿದ ಕೀರ್ತಿ ವಚನಕ್ಕೆ ಸಾಹಿತ್ಯಕ್ಕೆ ಸಲ್ಲುತ್ತದೆ. ನಾವುಗಳ ಇದೀಗ ಸಮಾನತೆ ಕುರಿತು ಮಾತನಾಡುತ್ತಿದ್ದೇವೆ. ಇದನ್ನು ೧೨ನೇ ಶತಮಾನದಲ್ಲಿಯೇ ಜಾರಿಗೆ ತಂದಿದ್ದ ಶರಣರು ಅತ್ಯಂತ ಶ್ರೇಷ್ಠರಾಗಿದ್ದಾರೆ. ಆತ್ಮ ವಂಚನೆ ಮಾಡಿಕೊಳ್ಳುವ ಬದಲು ಆತ್ಮಾವಲೋಕನ ಮಾಡಿಕೊಂಡು ಬದುಕು, ಆತ್ಮ ವಿಶ್ವಾಸದಿಂದ ಬದುಕು ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ ಎಂದರು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎನ್ ಮಹಾರುದ್ರ, ಪ್ರಸ್ತುತ ನಾವುಗಳು ಇಂದು ಸಮಾಜದಲ್ಲಿ ಧರ್ಮ, ಧರ್ಮಗಳ ವೈಷಮ್ಯ ಬೆಳೆಸಿಕೊಳ್ಳುವ ದಾರಿಯಲ್ಲಿ ಸಾಗುತ್ತಿದ್ದೇವೆ. ಆದರೆ ೧೨ನೇ ಶತಮಾನದಲ್ಲಿಯೇ ಸಮಾಜದಲ್ಲಿ ಶರಣರು ಸಮಾನತೆ ಸಮಾಜ ರೂಪಿಸಿಕೊಂಡಿದ್ದರು. ಶರಣರ ಚಿಂತನೆಗಳು, ಆಶಯಗಳು ಇಂದಿಗೂ ಪ್ರಸ್ತುತವಾಗಿವೆ. ನಾವುಗಳು ಶರಣ ದಾರಿಯಲ್ಲಿ ಸಾಗುವಂತಾಗಬೇಕೆಂದರು.
    ಶರಣ ಸಾಹಿತ್ಯ ಪರಿಷತ್ ತಾಲೂಕು ಕೋಶಾಧ್ಯಕ್ಷ ಕತ್ತಲಗೆರೆ ತಿಮ್ಮಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿನ ಪೀಳಿಗೆಗೆ ಶರಣ ಸಾಹಿತ್ಯದ ಅಗತ್ಯತೆ ಕುರಿತು ಮನವರಿಕೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿದರು.
    ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಜಿ ಉಮಾಶಂಕರ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಜಿ. ಸವಿತಾ ಉಪಸ್ಥಿತರಿದ್ದರು.
    ವಿದ್ಯಾರ್ಥಿಗಳಿಂದ ವಚನ ಗಾಯನ ನಡೆಯಿತು. ಕಾಲೇಜಿನ ಅಧ್ಯಾಪಕ, ಅಧ್ಯಾಪಕೇತರ ಸಿಬ್ಬಂದಿ ವರ್ಗದವರು, ಕದಳಿ ಮಹಿಳಾ ವೇದಿಕೆ ಸದಸ್ಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Friday, March 25, 2022

ಮಾ.೨೬ರಂದು ವಿಶ್ವ ಮಹಿಳಾ ದಿನಾಚರಣೆ

    ಭದ್ರಾವತಿ, ಮಾ. ೨೫: ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಮಾ.೨೬ರಂದು ಸಂಜೆ ೫ ಗಂಟೆಗೆ ನ್ಯೂಟೌನ್ ಉಂಬ್ಳೆಬೈಲ್ ರಸ್ತೆಯಲ್ಲಿರುವ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
    ವೇದಿಕೆ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ವೇದಿಕೆ ತಾಲೂಕು ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಅಧ್ಯಕ್ಷತೆ ವಹಿಸಲಿದ್ದಾರೆ. ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಸಂಚಾರಿ ಪೊಲೀಸ್ ಠಾಣಾಧಿಕಾರಿ ಕವಿತಾ, ಕಸಾಪ ತಾಲೂಕು ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಶಿವಮೊಗ್ಗ ಕಸ್ತೂರ್ಬಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಡಾ. ಬಿ.ಎನ್ ತಂಬೂಳಿ ಉಪನ್ಯಾಸ ನೀಡಲಿದ್ದಾರೆ.

ಭದ್ರಾವತಿಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ೪೪೬೯ ವಿದ್ಯಾರ್ಥಿಗಳು

೧೬ ಕೇಂದ್ರಗಳು, ಜಾಗೃತದಳ, ಮೊಬೈಲ್ ಸ್ವಾಧೀನಾಧಿಕಾರಿ, ಮಾರ್ಗಾಧಿಕಾರಿ ನೇಮಕ


ಎ.ಕೆ ನಾಗೇಂದ್ರಪ್ಪ
    ಭದ್ರಾವತಿ, ಮಾ. ೨೫: ತಾಲೂಕಿನಲ್ಲಿ ಈ ಬಾರಿ ಒಟ್ಟು ೪೪೬೯ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸಲಿದ್ದು, ಒಟ್ಟು ೧೬ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ತಿಳಿಸಿದರು.
    ಅವರು ಈ ಕುರಿತು ಮಾಹಿತಿ ನೀಡಿ, ಒಟ್ಟು ೧೬ ಪರೀಕ್ಷಾ ಕೇಂದ್ರಗಳ ಪೈಕಿ ೧ ಪರೀಕ್ಷಾ ಕೇಂದ್ರ ಖಾಸಗಿ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದೆ. ೨,೨೨೨ ಬಾಲಕರು ಹಾಗು ೨,೨೪೭ ಬಾಲಕಿಯರು ಪರೀಕ್ಷೆ ಬರೆಯಲಿದ್ದು, ಎಲ್ಲಾ ಪರೀಕ್ಷಾ ಕೇಂದ್ರಗಳಿಗೂ ತಲಾ ಓರ್ವ ಸ್ಥಾನಿಕ ಜಾಗೃತ ದಳ ಅಧಿಕಾರಿ ಹಾಗು ಮೊಬೈಲ್ ಸ್ವಾಧೀನಾಧಿಕಾರಿ ನೇಮಕಗೊಳಿಸಲಾಗಿದೆ. ಈ ಬಾರಿ ವಿದ್ಯಾರ್ಥಿಗಳು ಸೂಚಿಸಲಾಗಿರುವ ನಿಗದಿತ ಪರೀಕ್ಷಾ ಕೇಂದ್ರಗಳಲ್ಲಿಯೇ ಪರೀಕ್ಷೆ ಬರೆಯಬೇಕು. ಬೇರೆ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಅವಕಾಶವಿಲ್ಲ ಎಂದರು.
    ಕೋವಿಡ್-೧೯ ಮುನ್ನಚ್ಚರಿಕೆ ಹಿನ್ನಲೆಯಲ್ಲಿ ಪ್ರತಿ ಪರೀಕ್ಷಾ ಕೇಂದ್ರಕ್ಕೂ ಆರೋಗ್ಯ ಸಿಬ್ಬಂದಿಗಳನ್ನು ನೇಮಕಗೊಳಿಸಲಾಗಿದ್ದು, ಸೋಂಕು ನಿವಾರಕ ಹಾಗು ಮಾಸ್ಕ್ ಬಳಕೆ ಕುರಿತು ಜಾಗೃತಿ ಮೂಡಿಸಲಿದ್ದಾರೆ. ಜೊತೆಗೆ ಆರೋಗ್ಯ ತಪಾಸಣೆ ನಡೆಸಲಿದ್ದು, ಒಂದು ವೇಳೆ ಸೋಂಕು ತಗುಲಿರುವ ವಿದ್ಯಾರ್ಥಿಗಳು ಕಂಡು ಬಂದಲ್ಲಿ ಅವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.
    ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ತಲುಪಿಸಲು ೫ ಮಾರ್ಗಾಧಿಕಾರಿಗಳನ್ನು ನೇಮಕಗೊಳಿಸಲಾಗಿದ್ದು, ಉಳಿದಂತೆ ತಾಲೂಕು ಮಟ್ಟದಲ್ಲಿ ತಹಸೀಲ್ದಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅವರನ್ನೊಳಗೊಂಡ ಜಾಗೃತದಳ ಸಮಿತಿ ರಚಿಸಲಾಗಿದೆ. ಈಗಾಗಲೇ ಪರೀಕ್ಷಾ ಕೇಂದ್ರಗಳಿಗೆ ನೇಮಕಗೊಳಿಸಲಾಗಿರುವ ಅಧಿಕಾರಿಗಳು, ಸಿಬ್ಬಂದಿಗಳಿಗೆ ಮಾಹಿತಿ ನೀಡಲಾಗಿದೆ. ಎಲ್ಲರನ್ನು ಒಂದೆಡೆ ಸೇರಿಸಿ ಶನಿವಾರ ಪುನಃ ಮಾಹಿತಿ ನೀಡಲಾಗುವುದು. ಒಟ್ಟಾರೆ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ಅಗತ್ಯವಿರುವ ಎಲ್ಲಾ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ ಎಂದರು.