Monday, April 4, 2022

ಜನ್ನಾಪುರ-ಸಿದ್ದಾಪುರ ಕೆರೆ ಸಂಪೂರ್ಣ ಸರ್ವೆ ಕಾರ್ಯ : ತಹಸೀಲ್ದಾರ್ ಭರವಸೆ

ಕೆರೆ ಸಂರಕ್ಷಣಾ ಸಮಿತಿ ಹೋರಾಟಕ್ಕೆ ತಾಲೂಕು ಆಡಳಿತ ಪೂರಕ ಸ್ಪಂದನೆ

ಭದ್ರಾವತಿ ನಗರಸಭೆಗೆ ಒಳಪಡುವ ಜನ್ನಾಪುರ-ಸಿದ್ದಾಪುರ ವ್ಯಾಪ್ತಿಯಲ್ಲಿರುವ ಸರ್ವೆ ನಂ.೭೦ರ ಕೆರೆಯನ್ನು ಅಭಿವೃದ್ಧಿಪಡಿಸುವ ಮೊದಲು ಒತ್ತುವರಿ ತೆರವು ಮಾಡಿ, ನೂರಾರು ವರ್ಷಗಳಿಂದ ಮಲ-ಮೂತ್ರಗಳಿಂದ ತುಂಬಿಕೊಂಡಿರುವ ಹೂಳನ್ನು ತೆಗೆದು ಅಭಿವೃದ್ಧಿಪಡಿಸಬೇಕೆಂದು ಒತ್ತಾಯಿಸಿ ಜನ್ನಾಪುರ-ಸಿದ್ದಾಪುರ ಕೆರೆ ಸಂರಕ್ಷಣಾ ಸಮಿತಿ ವತಿಯಿಂದ ಸೋಮವಾರ ತಾಲೂಕು ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಲಾಯಿತು.

    ಭದ್ರಾವತಿ, ಏ. ೪: ತಾಲೂಕು ಆಡಳಿತದಿಂದ ನಗರಸಭೆಗೆ ಒಳಪಡುವ ಜನ್ನಾಪುರ-ಸಿದ್ದಾಪುರ ವ್ಯಾಪ್ತಿಯಲ್ಲಿರುವ ಸರ್ವೆ ನಂ.೭೦ರ ಕೆರೆಯನ್ನು ಸಂಪೂರ್ಣವಾಗಿ ಸರ್ವೆ ನಡೆಸುವುದಾಗಿ ತಹಸೀಲ್ದಾರ್ ಆರ್. ಪ್ರದೀಪ್ ಹೇಳಿದರು.  
    ಕೆರೆ ಒತ್ತುವರಿ ತೆರವು ಮಾಡಿ, ನೂರಾರು ವರ್ಷಗಳಿಂದ ಮಲ-ಮೂತ್ರಗಳಿಂದ ತುಂಬಿಕೊಂಡಿರುವ ಹೂಳನ್ನು ತೆಗೆದು ಅಭಿವೃದ್ಧಿಪಡಿಸಬೇಕೆಂದು ಒತ್ತಾಯಿಸಿ ತಾಲೂಕು ಕಛೇರಿ ಮುಂಭಾಗ ಸೋಮವಾರ ಜನ್ನಾಪುರ-ಸಿದ್ದಾಪುರ ಕೆರೆ ಸಂರಕ್ಷಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಧರಣಿ ಸತ್ಯಾಗ್ರಹದಲ್ಲಿ ಮನವಿ ಸ್ವೀಕರಿಸಿ ಮಾತನಾಡಿದ ಅವರು, ತಾಲೂಕು ಆಡಳಿತ ಸರ್ವೆ ಕಾರ್ಯದಲ್ಲಿ ಯಾವುದೇ ರೀತಿ ಲೋಪದೋಷವೆಸಗಿಲ್ಲ. ಕೆರೆಯ ಒಟ್ಟು ವಿಸ್ತೀರ್ಣ ೫೨ ಎಕರೆಯಾಗಿದ್ದು, ಬಹಳ ವರ್ಷಗಳ ಹಿಂದೆಯೇ ೧೯೬೨-೬೩ರಲ್ಲಿ ಜಿಲ್ಲಾಧಿಕಾರಿಗಳು ವಿಶೇಷ ಅಧಿಕಾರ ಬಳಸಿಕೊಂಡು ಕೆರೆ ಜಾಗವನ್ನು ಮಂಜೂರಾತಿ ಮಾಡಿದ್ದಾರೆ. ೫ ಎಕರೆ ಜಾಗದಲ್ಲಿ ಮೊದಲು ೬೮-೬೯ರಲ್ಲಿ ೦೪ ಗುಂಟೆ ಖರಾಬು ಜಾಗ ಎಂಬುದಾಗಿ ನಮೂದಿಸಲಾಗಿದ್ದು, ಉಳಿದ ೪ ಎಕರೆ ೩೬ ಗುಂಟೆ ಜಾಗವನ್ನು ೭೨-೭೩ರಲ್ಲಿ ಜೆ.ಪಿ ಹಾಲಸಿದ್ದಪ್ಪ ಎಂಬುವರಿಗೆ ಮಂಜೂರಾತಿ ಮಾಡಲಾಗಿದೆ. ಈ ಪ್ರಕ್ರಿಯೆಗಳ ನಂತರ ಮೂಲ ದಾಖಲಾತಿಗಳಲ್ಲಿ ಬದಲಾವಣೆಯಾಗಿದ್ದು, ಈ ದಾಖಲೆಗಳ ಆಧಾರದ ಮೇಲೆ ೪೫ ಎಕರೆ ೨೦ ಗುಂಟೆ ಜಾಗದ ಸರ್ವೆ ನಡೆಸಲಾಗಿದೆ. ೫ ಎಕರೆ ಕೆರೆ ಒತ್ತುವರಿ ತೆರವುಗೊಳಿಸಲು ಕಾನೂನಾತ್ಮಕ ಸಮಸ್ಯೆ ಎದುರಾಗಿದ್ದು, ಸರ್ವೋಚ್ಛ ನ್ಯಾಯಾಲಯದ ಆದೇಶ ಆನ್ವಯದ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು. ಇದಕ್ಕೂ ಮೊದಲು ಬೇಡಿಕೆಯಂತೆ ಕೆರೆಯ ಸಂಪೂರ್ಣ ಸರ್ವೆ ನಡೆಸುವ ಮೂಲಕ ೪೫ ಎಕರೆ ೨೦ ಗುಂಟೆ ಜಾಗದಲ್ಲಿ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
    ಇದಕ್ಕೂ ಮೊದಲು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಮುಖರು, ಜನ್ನಾಪುರ-ಸಿದ್ದಾಪುರ ಕೆರೆ ಒಟ್ಟು ೫೨ ಎಕರೆ ವಿಸ್ತೀರ್ಣ ಹೊಂದಿದೆ. ಆದರೆ ತಾಲೂಕು ಆಡಳಿತ ಸರ್ವೆ ಕಾರ್ಯ ನಡೆಸಿ ಕೆರೆ ಜಾಗವನ್ನು ೪೫ ಎಕರೆ ೨೦ ಗುಂಟೆ ಎಂದು ಗುರುತಿಸಿದೆ. ಉಳಿದ ಜಾಗ ಒತ್ತುವರಿಯಾಗಿದ್ದು, ಭೂ ಕಬಳಿಕೆದಾರರನ್ನು ರಕ್ಷಿಸುವ ಹುನ್ನಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
    ಪ್ರಸ್ತುತ ಸರ್ವೆ ಕಾರ್ಯ ನಡೆಸಿ ಗುರುತಿಸಲಾಗಿರುವ ೪೫ ಎಕರೆ ೨೦ ಗುಂಟೆ ಜಾಗದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಬದಲು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ಕೇವಲ ೩೦ ಎಕರೆ ಜಾಗವನ್ನು ಮಾತ್ರ ಸೀಮಿತಗೊಳಿಸಿದೆ. ಈಗಾಗಲೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಲು ಮೊದಲನೇ ಕಂತಿನ ಹಣ ಅಂದಾಜು ೪,೪೮,೦೦,೦೦೦ ರು.  ಬಿಡುಗಡೆಗೊಳಿಸಿದೆ. ಇದು ಅವೈಜ್ಞಾನಿಕ ಕಾಮಗಾರಿಯಾಗಿದ್ದು, ಮೊದಲು ೫೨ ಎಕರೆ ಜಾಗವನ್ನು ಗುರುತಿಸಿ ಸರ್ವೆ ಕಾರ್ಯ ನಡೆಸಿ ಒತ್ತುವರಿ ತೆರವುಗೊಳಿಸಬೇಕೆಂದು ಆಗ್ರಹಿಸಿದರು.
    ನೂರಾರು ವರ್ಷಗಳಿಂದ ಈ ಕೆರೆ ಮಲ-ಮೂತ್ರಗಳಿಂದ ತುಂಬಿಕೊಂಡಿದ್ದು, ಕಲುಷಿತಗೊಂಡಿರುವ ಕೆರೆಯಲ್ಲಿ ಹೂಳು ತೆಗೆದು ಸ್ವಚ್ಛಗೊಳಿಸುವ ಕಾರ್ಯ ಮೊದಲು ಕೈಗೊಳ್ಳಬೇಕಾಗಿದೆ. ಆ ನಂತರ ಕಾಮಗಾರಿ ಆರಂಭಿಸಿ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.
    ಹೋರಾಟ ಸಮಿತಿ ಪ್ರಧಾನ ಸಂಚಾಲಕ ಬಾಲಕೃಷ್ಣ ಧರಣಿ ಸತ್ಯಾಗ್ರಹ ನೇತೃತ್ವ ವಹಿಸಿದ್ದರು. ನಗರಸಭಾ ಸದಸ್ಯರಾದ ಆರ್. ಮೋಹನ್‌ಕುಮಾರ್, ಕಾಂತರಾಜ್, ರಿಯಾಜ್ ಅಹಮದ್, ಡಿಎಸ್‌ಎಸ್ ರಾಜ್ಯ ಖಜಾಂಚಿ ಸತ್ಯ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸುರೇಶ್, ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಶಾರದಮ್ಮ, ತಾಲೂಕು ವಕೀಲರ ಸಂಘದ ಮಾಜಿ ಅಧ್ಯಕ್ಷ ವೆಂಟಕೇಶ್, ಪ್ರಮುಖರಾದ ಜಿ. ರಾಜು, ಚನ್ನಪ್ಪ, ವಿಶ್ವೇಶ್ವರ ಗಾಯಕ್ವಾಡ್, ಎನ್. ರಾಮಕೃಷ್ಣ, ಎಸ್. ಮಂಜುನಾಥ್, ರಾಮಚಂದ್ರ, ವೆಂಕಟೇಶ್, ವಿಲ್ಸನ್ ಬಾಬು, ಪಾಪಣ್ಣ, ಹಾವು ಮಂಜ ಸೇರಿದಂತೆ ಕೆರೆ ಸಮೀಪದ ರೈತರು, ಶ್ರೀ ಚೌಡೇಶ್ವರಿ ದೇವಿ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿಗಳು, ಮಹಿಳೆಯರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


ಭದ್ರಾವತಿ ನಗರಸಭೆಗೆ ಒಳಪಡುವ ಜನ್ನಾಪುರ-ಸಿದ್ದಾಪುರ ವ್ಯಾಪ್ತಿಯಲ್ಲಿರುವ ಸರ್ವೆ ನಂ.೭೦ರ ಕೆರೆಯನ್ನು ಅಭಿವೃದ್ಧಿಪಡಿಸುವ ಮೊದಲು ಒತ್ತುವರಿ ತೆರವು ಮಾಡಿ, ನೂರಾರು ವರ್ಷಗಳಿಂದ ಮಲ-ಮೂತ್ರಗಳಿಂದ ತುಂಬಿಕೊಂಡಿರುವ ಹೂಳನ್ನು ತೆಗೆದು ಅಭಿವೃದ್ಧಿಪಡಿಸಬೇಕೆಂದು ಒತ್ತಾಯಿಸಿ ಜನ್ನಾಪುರ-ಸಿದ್ದಾಪುರ ಕೆರೆ ಸಂರಕ್ಷಣಾ ಸಮಿತಿ ವತಿಯಿಂದ ಸೋಮವಾರ ತಾಲೂಕು ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಿ ತಹಸೀಲ್ದಾರ್ ಆರ್. ಪ್ರದೀಪ್ ಅವರಿಗೆ ಮನವಿ ಸಲ್ಲಿಸಿದರು.

Sunday, April 3, 2022

೫ನೇ ಇಂಟರ್‌ನ್ಯಾಷನಲ್ ಯೂತ್ ಗೇಮ್ಸ್ ಪಂದ್ಯಾವಳಿ : ಸಮರ್ಥ ಎಂ. ಪಟೇಲ್ ಆಯ್ಕೆ

    ಭದ್ರಾವತಿ, ಏ. ೩: ತಾಲೂಕಿನ ಕಾರೇಹಳ್ಳಿ ಬಿಜಿಎಸ್ ಕೇಂದ್ರೀಯ ಮಹಾವಿದ್ಯಾಲಯದ ವಿದ್ಯಾರ್ಥಿ ಸಮರ್ಥ ಎಂ. ಪಟೇಲ್ ದಿ ಅಸೋಸಿಯೇಷನ್ ಫಾರ್ ಟ್ರೆಡಿಷನಲ್ ಯೂತ್ ಗೇಮ್ಸ್ ಅಂಡ್ ಸ್ಪೋರ್ಟ್ಸ್ ಇಂಡಿಯಾ(ಟಿಎಎಫ್‌ಟಿವೈಜಿಎಎಸ್) ವತಿಯಿಂದ ಏ.೨೧ ರಿಂದ ೨೫ರವರೆಗೆ ನಡೆಯಲಿರುವ ೫ನೇ ಇಂಟರ್‌ನ್ಯಾಷನಲ್ ಯೂತ್ ಗೇಮ್ಸ್ ಪಂದ್ಯಾವಳಿಗೆ ಕಬಡ್ಡಿ ಆಟಗಾರನಾಗಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾನೆ.
    ಪಂದ್ಯಾವಳಿ ನೇಪಾಳದ ಪೊಖಾರದಲ್ಲಿ ನಡೆಯಲಿದ್ದು,  ಕಬಡ್ಡಿ ಕ್ರೀಡೆಯಲ್ಲಿ ಆಯ್ಕೆಯಾಗಿರುವ ಒಟ್ಟು ೪ ವಿದ್ಯಾರ್ಥಿಗಳ ಪೈಕಿ ಸಮರ್ಥ ಎಂ. ಪಟೇಲ್ ಸಹ ಒಬ್ಬನಾಗಿದ್ದು, ಈತ ಬಾರಂದೂರು ನಿವಾಸಿ ಎಚ್. ಮಂಜುನಾಥ್‌ರವರ ಪುತ್ರ. ಈ ವಿದ್ಯಾರ್ಥಿಯನ್ನು ಬಿಜಿಎಸ್ ಕೇಂದ್ರಿಯ ಮಹಾವಿದ್ಯಾಲಯದ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕ ಹಾಗು ಸಿಬ್ಬಂದಿ ವೃಂದದವರು ಅಭಿನಂದಿಸಿದ್ದಾರೆ.

ಏ.೧೧ರಂದು ‘ನನ್ನೊಳಗೆ’ ಕವನ ಸಂಕಲನ ಬಿಡುಗಡೆ, ಸಾಧಕರಿಗೆ ಪ್ರಶಸ್ತಿ ಪ್ರದಾನ

    ಭದ್ರಾವತಿ, ಏ. ೩: ತಾಲೂಕಿನ ಸುಲ್ತಾನ್ ಮಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ, ಅಂತರಾಷ್ಟ್ರೀಯ ಜಾನಪದ ಕಲಾವಿದ ಎಂ.ಆರ್ ರೇವಣಪ್ಪನವರ 'ನನ್ನೊಳಗೆ' ಕವನ ಸಂಕಲನ ಬಿಡುಗಡೆ ಹಾಗು ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ಏ.೧೧ರಂದು ಹೊಸನಗರ ತಾಲೂಕಿನ ಮಾದಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸಂಜೆ ೪ ಗಂಟೆಗೆ ಹಮ್ಮಿಕೊಳ್ಳಲಾಗಿದೆ.
    ಶಿವಮೊಗ್ಗ ಜಾನಪದ ಕಲಾ ಮತ್ತು ಸಾಹಿತ್ಯ ವೇದಿಕೆ ಹಾಗು ಮಾದಾಪುರ ಶ್ರೀ ಶನಿಪರಮೇಶ್ವರ ಯುವಕ ಸಂಘದ ವತಿಯಿಂದ ಸಮಾರಂಭ ಆಯೋಜಿಸಲಾಗಿದೆ.
    ತಾಲೂಕಿನ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಶಾಸಕ ಬಿ.ಕೆ ಸಂಗಮೇಶ್ವರ್ ಪುತ್ರ ಬಿ.ಎಸ್ ಗಣೇಶ್, ಡಿಎಸ್‌ಎಸ್ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ,  ಶಿಕ್ಷಕಿ ಭಾರತಿ ಗೋವಿಂದಸ್ವಾಮಿ, ಮಹಾಬಲೇಶ್ವರ ಹೆಗಡೆ, ಹುಚ್ಚಪ್ಪ ಮಾಸ್ಟರ್, ಲಕ್ಷ್ಮಣ್ ರಾವ್ ಬೋರತ್, ನಿಸ್ಸಾರ್ ಖಾನ್ ಕೆಂಚಾಯಿಕೊಪ್ಪ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.
    ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಮೋಹನ್ ಚಂದ್ರಗುತ್ತಿ ಶಿಕ್ಷಣದ ಹಿನ್ನಲೆಯಲ್ಲಿ ಜಾನಪದ ಸಾಹಿತ್ಯ ಕುರಿತು ಉಪನ್ಯಾಸ ನೀಡಲಿದ್ದು, ಜ್ಯೂನಿಯರ್ ಶಂಕರ್‌ನಾಗ್, ಜ್ಯೂನಿಯರ್ ವಿಷ್ಣುವರ್ಧನ್ ಮತ್ತು ಜ್ಯೂನಿಯರ್ ಪುನೀತ್ ರಾಜ್‌ಕುಮಾರ್ ಕಲಾವಿದರಿಂದ ಸಾಂಸ್ಕೃತಿಕ ಮನರಂಜನೆ ಕಾರ್ಯಕ್ರಮಗಳು ಜರುಗಲಿವೆ.

ಏ.೫ರಂದು ನಗರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

    ಭದ್ರಾವತಿ, ಏ. ೩:  ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಏ.೫ರಂದು ನಗರಕ್ಕೆ ಆಗಮಿಸುತ್ತಿದ್ದು, ಈಗಾಗಲೇ ಜಿಲ್ಲೆಯಲ್ಲಿ ನಡೆಸಲಾಗಿರುವ ಪಕ್ಷದ ಡಿಜಿಟಲ್ ನೋಂದಾಣಿ ಸದಸ್ಯತ್ವ ಅಭಿಯಾನ ಕುರಿತು ಮಾಹಿತಿ ಪಡೆಯಲಿದ್ದಾರೆ.
    ಅಂದು ಮಧ್ಯಾಹ್ನ ೩ ಗಂಟೆಗೆ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಗೃಹ ಕಚೇರಿಗೆ ಭೇಟಿ ನೀಡಲಿದ್ದು, ಪಕ್ಷದ ಜಿಲ್ಲಾ ಮುಖಂಡರು, ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.



ಬೌದ್ಧ ವಿಹಾರದಲ್ಲಿ ಧ್ಯಾನ ಮಂದಿರ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ

    
ಭದ್ರಾವತಿ ಹೊಸ ನಂಜಾಪುರ ಗ್ರಾಮದಲ್ಲಿ ಸುಮಾರು ಎರಡು ಎಕರೆ ಜಾಗದಲ್ಲಿರುವ ಬೌದ್ಧವಿಹಾರದಲ್ಲಿ ಧ್ಯಾನ ಮಂದಿರ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. 
    ಭದ್ರಾವತಿ, ಏ. ೩:  ಹೊಸ ನಂಜಾಪುರ ಗ್ರಾಮದಲ್ಲಿ ಸುಮಾರು ಎರಡು ಎಕರೆ ಜಾಗದಲ್ಲಿರುವ ಬೌದ್ಧವಿಹಾರದಲ್ಲಿ ಧ್ಯಾನ ಮಂದಿರ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. 
ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಅಧಿಕಾರಿ, ಬೌದ್ಧ ಧರ್ಮದ ಅನುಯಾಯಿಯಾಗಿರುವ ಶ್ರೀನಿವಾಸ್‌ರವರು ತಮ್ಮ ಸ್ವಂತ ಜಮೀನಿನಲ್ಲಿ ೨ ಎಕರೆ ಜಾಗ ಬೌದ್ಧ ವಿಹಾರ ನಿರ್ಮಾಣಕ್ಕೆ ಉಚಿತವಾಗಿ ನೀಡಿದ ಹಿನ್ನಲೆಯಲ್ಲಿ ‘ಸಂಬುದ್ಧ ಧಮ್ಮಾಂಕುರ ಟ್ರಸ್ಟ್’ ಅಸ್ತಿತ್ವಕ್ಕೆ ಬರುವ ಮೂಲಕ ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಬೌದ್ಧ ವಿಹಾರ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. 
ಇದೀಗ ಧ್ಯಾನ ಮಂದಿರ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಟ್ರಸ್ಟ್ ಅಧ್ಯಕ್ಷ, ಬೌದ್ಧ ಧರ್ಮ ಉಪಾಸಕ ಪ್ರೊ. ಎಚ್. ರಾಚಪ್ಪ ಬೌದ್ಧ ಧರ್ಮದ ಆಚರಣೆಗಳನ್ನು ನೆರವೇರಿಸಿಕೊಟ್ಟರು. ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದು, ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಸದಸ್ಯರಾದ ಬಿ.ಕೆ ಮೋಹನ್, ಪ್ರೇಮಾ, ಉದಯಕುಮಾರ್, ಎಂಜಿನಿಯರ್ ರಂಗರಾಜಪುರೆ,  ಟ್ರಸ್ಟ್ ಪ್ರಮುಖರಾದ ಸುರೇಶ್, ಬದರಿನಾರಾಯಣ, ಶಿವಬಸಪ್ಪ, ಬಿ.ಡಿ ಸಾವಕ್ಕನವರ್, ಬಿ.ಎಸ್  ಗಣೇಶ್, ಶಾಂತಿ, ಅನಿಲ್‌ಕುಮಾರ್, ಪುಟ್ಟರಾಜು, ಕಿರಣ್, ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Friday, April 1, 2022

ಕೂಡ್ಲಿಗೆರೆ ಗ್ರಾಮದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಯವರ ಹುಟ್ಟುಹಬ್ಬ ಆಚರಣೆ


ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮದಲ್ಲಿ ಕರ್ನಾಟಕ ರತ್ನ, ತ್ರಿವಿಧ ದಾಸೋಹಿ, ತುಮಕೂರು ಸಿದ್ದಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ೧೧೫ನೇ ಹುಟ್ಟುಹಬ್ಬ ಶುಕ್ರವಾರ ವಿಜೃಂಭಣೆಯಿಂದ ಆಚರಿಸಲಾಯಿತು. 
    ಭದ್ರಾವತಿ, ಏ. ೧: ತಾಲೂಕಿನ ಕೂಡ್ಲಿಗೆರೆ ಗ್ರಾಮದಲ್ಲಿ ಕರ್ನಾಟಕ ರತ್ನ, ತ್ರಿವಿಧ ದಾಸೋಹಿ, ತುಮಕೂರು ಸಿದ್ದಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ೧೧೫ನೇ ಹುಟ್ಟುಹಬ್ಬ ಶುಕ್ರವಾರ ವಿಜೃಂಭಣೆಯಿಂದ ಆಚರಿಸಲಾಯಿತು. 
ಈ ಬಾರಿ ಗ್ರಾಮದ ಪ್ರಮುಖರು ಒಂದೆಡೆ ಸೇರಿ ವಿಶೇಷವಾಗಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಹುಟ್ಟುಹಬ್ಬ ಆಚರಿಸುವ ಮೂಲಕ ಗಮನ ಸೆಳೆದರು. ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಮೂಲಕ ಗೌರವ ಸಲ್ಲಿಸಲಾಯಿತು. ನಂತರ ಸಿಹಿ ಹಂಚಿಕೆಯೊಂದಿಗೆ ದಾಸೋಹ ನಡೆಸಲಾಯಿತು. 
ಕಾರ್ಯಕ್ರಮದಲ್ಲಿ ಸುಗ್ರಾಮ ಚುನಾಯಿತ ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರ ಒಕ್ಕೂಟದ ಅಧ್ಯಕ್ಷೆ ಗೌರಮ್ಮ, ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಮಾದೇವಿ, ಮಾಜಿ ಅಧ್ಯಕ್ಷೆ ಮಲ್ಲಕ್ ವೀರಪ್ಪನ್, ಸದಸ್ಯರಾದ ವಿಶ್ವನಾಥ್, ಸಿದ್ದಮ್ಮ ನಾಗೇಶ್,  ಮುಖಂಡರಾದ ಕಾಂಗ್ರೆಸ್ ಪರಿಶಿಷ್ಟ ಪಂಗಡ ಘಟಕದ ಅಧ್ಯಕ್ಷ ಎಸ್. ಮಹಾದೇವ, ಕರುನಾಡು ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ವೈ. ಶಶಿಕುಮಾರ್, ಆರ್. ನಾಗರಾಜ್ ಕೂಡ್ಲಿಗೆರೆ, ಮಂಜುನಾಥ್ ವೆಲ್ಡಿಂಗ್, ಜಯಣ್ಣ, ಶಾಲಿನಿ, ಪ್ರಶಾಂತ್ ಕೋಳಿ ಮತ್ತು ತಂಡದವರು, ಕಾಂಗ್ರೆಸ್ ಮಾಧ್ಯಮ ವಿಭಾಗದ ಪ್ರವೀಣ್‌ನಾಯ್ಕ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

ತಕ್ಷಣ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿ : ತಾಲೂಕು ಆಡಳಿತಕ್ಕೆ ಮನವಿ

ವಿಳಂಬವಾದಲ್ಲಿ ಅಮರಣಾಂತರ ಉಪವಾಸ ಸತ್ಯಾಗ್ರಹ


ಭದ್ರಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ವಿಳಂಬವಾಗಿರುವುದನ್ನು ಖಂಡಿಸಿ ಶುಕ್ರವಾರ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಮತ್ತು ಸುವರ್ಣ ಮಹಿಳಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಆರ್. ಪ್ರದೀಪ್ ಅವರಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಏ. ೧: ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ವಿಳಂಬವಾಗಿರುವುದನ್ನು ಖಂಡಿಸಿ ಶುಕ್ರವಾರ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಮತ್ತು ಸುವರ್ಣ ಮಹಿಳಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಆರ್. ಪ್ರದೀಪ್ ಅವರಿಗೆ ಮನವಿ ಸಲ್ಲಿಸಲಾಯಿತು.
    ನಿರಂತರವಾಗಿ ಹೋರಾಟ ನಡೆಸಿದ ಹಿನ್ನಲೆಯಲ್ಲಿ ಹಾಗು ಈ ಹಿಂದಿನ ನಗರಸಭೆ ಪೌರಾಯುಕ್ತರಾದ ಮನೋಹರ್‌ರವರ ಪರಿಶ್ರಮದಿಂದ ನಗರಸಭೆ ವ್ಯಾಪ್ತಿಯಲ್ಲಿ ೭೦ ಕೆರೆಗಳ ಬೌಂಡರಿ ನಿಗದಿಪಡಿಸುವ ಕಾರ್ಯಕ್ಕೆ ತಾಲೂಕು ಆಡಳಿತದಿಂದ ಆದೇಶವಾಗಿರುತ್ತದೆ. ಈ ಪೈಕಿ ಈಗಾಗಲೇ ಉಜ್ಜನಿಪುರದ ಬಳಸೋಕಟ್ಟೆ ಕೆರೆ, ಬಳಕಟ್ಟೆ ಕೆರೆ, ಜನ್ನಾಪುರ ಕೆರೆ, ಬುಳ್ಳಾಪುರದ ಸರ್ಕಾರಿ ಚಿಕ್ಕಯ್ಯನ ಕೆರೆ ಮತ್ತು ಗೌಡನಕಟ್ಟೆ ಕೆರೆ, ಸಿದ್ದಾಪುರದ ಬಳಸೋಕೆರೆ, ಬಿದಿರೊಡ್ಡು ಕೆರೆ ಮತ್ತು ಚಿಕ್ಕಯ್ಯನ ಕೆರೆ, ಬುಳ್ಳಾಪುರದ ಸರ್ಕಾರಿ ಕೆರೆ ಮತ್ತು ಬಾಳೆಕಟ್ಟೆ ಕೆರೆ, ಕಡದಕಟ್ಟೆ ಸರ್ಕಾರಿ ಕೆರೆ, ಬೊಮ್ಮನಕಟ್ಟೆ ಕೆರೆ, ದೊಡ್ಡಗೊಪ್ಪೇನಹಳ್ಳಿ ಸರ್ಕಾರಿ ಕೆರೆ, ಹೆಬ್ಬಂಡಿ ಕೆರೆ, ಕಣಕಟ್ಟೆ ಕೆರೆ, ಆನೆಕೊಪ್ಪ ಕೆರೆ, ಕವಲಗುಂದಿ ಯಳವಪ್ಪನಕೆರೆ, ಸೀಗೆಬಾಗಿ ಕೆರೆ, ಹೆಬ್ಬಂಡಿ ಕೆರೆ ಮತ್ತು ಹೊಸಮನೆ ಕೆರೆ ಸೇರಿದಂತೆ ಒಟ್ಟು ೨೩ ಕೆರೆಗಳ ಬೌಂಡರಿ ನಿಗದಿಪಡಿಸುವ ಕಾರ್ಯ ಮುಕ್ತಾಯಗೊಂಡಿರುತ್ತದೆ. ಆದರೆ ಇದುವರೆಗೂ ಒತ್ತುವರಿ ತೆರವು ಕಾರ್ಯ ನಡೆದಿರುವುದಿಲ್ಲ.
    ಇದೆ ರೀತಿ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಸಿಕೆರೆ, ಬಳಸೋಕೆರೆ, ಸಿರಿಯೂರು ಕೆರೆ ಹಾಗು ಹಿರಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ಬಳಸೋಕೆರೆ, ಕೆಂಚವೀರಪ್ಪನ ಕೆರೆ, ಬಸವನಕಟ್ಟೆ ಕೆರೆ ಮತ್ತು ನಾಯಕನ ಕೆರೆ ಸೇರಿದಂತೆ ಒಟ್ಟು ೭ ಕೆರೆಗಳ ಬೌಂಡರಿ ನಿಗದಿಪಡಿಸುವ ಕಾರ್ಯ ಮುಕ್ತಾಯಗೊಂಡಿರುತ್ತದೆ. ಆದರೆ ತೆರವು ಕಾರ್ಯಾಚರಣೆ ನಡೆದಿರುವುದಿಲ್ಲ. ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈಗಾಗಲೇ ಕೆರೆಗಳ ಒತ್ತುವರಿ ಕಾರ್ಯ ಬಿರುಸಿನಿಂದ ನಡೆದಿದೆ. ಆದರೆ ಈ ಕ್ಷೇತ್ರದ ವ್ಯಾಪ್ತಿಯಲ್ಲಿ ವಿಳಂಬವಾಗುತ್ತಿದ್ದು, ಇದರಿಂದಾಗಿ ಕೇಂದ್ರ ಸರ್ಕಾರದ ಮಹತ್ವಾಂಕ್ಷೆ ಯೋಜನೆಗಳಲ್ಲಿ ಒಂದಾದ ಕ್ಯಾಚ್ ದ ರೈನ್(ಮಳೆ ನೀರು ಹಿಡಿಯಿರಿ) ಅನುಷ್ಠಾನಕ್ಕೆ ಹಿನ್ನಡೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಲಾಯಿತು.
    ಮುಂದಿನ ವರ್ಷ ಮಾರ್ಚ್ ೨೨ರಂದು ಕ್ಷೇತ್ರದಲ್ಲಿ ಕೆರೆ ಕಟ್ಟೆಗಳ ಉತ್ಸವ ನಡೆಯುತ್ತಿದ್ದು, ಉತ್ಸವಕ್ಕೆ ಪೂರಕವೆಂಬಂತೆ ಹಾಗು ಕ್ಯಾಚ್ ದ ರೈನ್ ಯೋಜನೆಗೆ ಹಿಂಬುಕೊಡಲು ತಕ್ಷಣ ತಾಲೂಕು ಆಡಳಿತ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ತುರ್ತಾಗಿ ನಡೆಸಬೇಕು. ಒಂದು ವೇಳೆ ವಿಳಂಬವಾದಲ್ಲಿ ಮುಂದಿನ ದಿನಗಳಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಗಮನ ಸೆಳೆಯಲು ಅಮರಣಾಂತರ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.
    ಮುಖಂಡರುಗಳಾದ ಆರ್. ವೇಣುಗೋಪಾಲ್, ಮುರುಗೇಶ್, ಚಂದ್ರಶೇಖರ್, ಇಂದ್ರಾಣಿ, ಶೈಲಜಾ ಮಹೇಶ್, ಮೊಹಮ್ಮದ್ ಹನೀಫ್, ಪ್ರಸನ್ನ, ವೆಂಕಟೇಶ್, ಶಂಭೂಗೌಡ, ನಾಗೇಶ್, ಉಮೇಶ್‌ನಾಯ್ಕ, ಕುಮಾರನಾಯ್ಕ, ಕಸ್ನಾನಾಯ್ಕ, ಪಾಂಡುರಂಗೇಗೌಡ ಸೇರಿದಂತೆ ಇನ್ನೂ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.