Thursday, April 14, 2022

ಅಂಬೇಡ್ಕರ್ ಎಂದರೆ ಜ್ಞಾನದ ಸಂಕೇತ, ಇವರ ಸ್ಮರಣೆ ನಿರಂತರವಾಗಿರಲಿ

ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ನಗರಸಭೆ ಹಾಗು ವಿವಿಧ ಸಂಘಟನೆಗಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೧೩೧ನೇ ಜನ್ಮ ದಿನಾಚರಣೆ ಸಮಾರಂಭವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.  
    ಭದ್ರಾವತಿ, ಏ. ೧೪: ಅಂಬೇಡ್ಕರ್ ಎಂದರೆ ಜ್ಞಾನದ ಸಂಕೇತ. ಪ್ರತಿಯೊಬ್ಬರು ಇವರನ್ನು ಕೊನೆಯವರೆಗೂ ಸ್ಮರಣೆ ಮಾಡಿಕೊಳ್ಳಬೇಕು. ಇವರ ಸ್ಮರಣೆಯಿಂದ ಜ್ಞಾನ, ಹೋರಾಟ ಮತ್ತು ಸಂಘಟನೆ ವೃದ್ಧಿಸುತ್ತದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
    ಅವರು ಗುರುವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ನಗರಸಭೆ ಹಾಗು ವಿವಿಧ ಸಂಘಟನೆಗಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೧೩೧ನೇ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
    ಅಂಬೇಡ್ಕರ್ ಎಂದರೆ ಮಾನವ ಹಕ್ಕುಗಳ ಉದ್ದಾರಕ. ಈ ಜಗತ್ತಿನ ಶ್ರೇಷ್ಠ ಜ್ಞಾನಿ. ಇವರ ಬಗ್ಗೆ ಇಂದಿನ ಪೀಳಿಗೆಯವರಿಗೆ ಸರಿಯಾಗಿ ಗೊತ್ತಿಲ್ಲ. ಅಂಬೇಡ್ಕರ್‌ರವರ ವಿಚಾರಧಾರೆಗಳನ್ನು, ಆದರ್ಶತನಗಳನ್ನು ಮನೆಗಳಲ್ಲಿ ಪೋಷಕರು ಮತ್ತು ಶಾಲಾ ಹಂತದಲ್ಲಿ ಶಿಕ್ಷಕರು ತಿಳಿಸಿಕೊಡುವ ನಿಟ್ಟಿನಲ್ಲಿ ಮುಂದಾಗಬೇಕು. ಇವರ ಸ್ಮರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಪ್ರತಿನಿತ್ಯ ಇವರನ್ನು ಸ್ಮರಿಸಿಕೊಳ್ಳುವಂತಾಗಬೇಕೆಂದರು.
    ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸುವಂತೆ ಈಗಾಗಲೇ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರಕ್ಕೆ ಒತ್ತಾಯಿಸಿದ್ದೇನೆ. ಈ ಹಿನ್ನಲೆಯಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನ ಹರಿಸಿ ಭವನದ ಕಾಮಗಾರಿಯನ್ನು ತಕ್ಷಣ ಮುಕ್ತಾಯಗೊಳಿಸಲು ಕ್ರಮ ಕೈಗೊಳ್ಳಬೇಕೆಂದರು.
    ನಗರಸಭೆ ಅಧ್ಯಕ್ಷೆ ಗೀತಾರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ಪೌರಾಯುಕ್ತ ಕೆ. ಪರಮೇಶ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ, ತಹಸೀಲ್ದಾರ್ ಆರ್. ಪ್ರದೀಪ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಮೇಶ್, ನಗರಸಭಾ ಸದಸ್ಯರು, ವಿವಿಧ ದಲಿತಪರ ಸಂಘಟನೆಗಳ ಪ್ರಮುಖರು ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಸಮಾಜ ಕಲ್ಯಾಣ ಇಲಾಖೆ ಮೇಲ್ವಿಚಾರಕ ಎಸ್.ವಿ ಶಶಿಕುಮಾರ್ ಉಪನ್ಯಾಸ ನಡೆಸಿಕೊಟ್ಟರು. ಸಹಾಯಕ ನಿರ್ದೇಶಕ ಎಸ್. ಗೋಪಿನಾಥ್ ಸ್ವಾಗತಿಸಿದರು. ಇದಕ್ಕೂ ಮೊದಲು ವಿವಿಧ ಕಲಾತಂಡಗಳು ಹಾಗು ಡಾ. ಬಿ.ಆರ್ ಅಂಬೇಡ್ಕರ್ ಮತ್ತು ಜಗಮೋಹನ್ ರಾಮ್‌ರವರ ಭಾವಚಿತ್ರಗಳೊಂದಿಗೆ ಬಿ.ಎಚ್ ರಸ್ತೆ ಲೋಯರ್ ಹುತ್ತಾ ಬಸ್ ನಿಲ್ದಾಣದಿಂದ ಮೆರವಣಿಗೆ ನಡೆಸಲಾಯಿತು. ಸಿದ್ದಾರ್ಥ ಅಂಧರ ಕೇಂದ್ರದ ಕಲಾವಿದರಿಂದ ಗೀತಗಾಯನ ನಡೆಯಿತು.

Wednesday, April 13, 2022

ಕೊನೆಗೂ ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಾಣ : ೪ ದಶಕಗಳ ಹೋರಾಟಕ್ಕೆ ಫಲ

ಅನುದಾನ ಬರುವ ನಿರೀಕ್ಷೆಯಲ್ಲಿ ನಿರ್ಮಿತಿ ಕೇಂದ್ರದ ಹಣದಿಂದಲೇ ಕಾಮಗಾರಿ ಪೂರ್ಣ

ಭದ್ರಾವತಿ ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಿಂಭಾಗ ಬಹುತೇಕ ಪೂರ್ಣಗೊಂಡಿರುವ ಡಾ. ಬಿ.ಆರ್ ಅಂಬೇಡ್ಕರ್ ಭವನ.
  
       * ಅನಂತಕುಮಾರ್
     ಭದ್ರಾವತಿ, ಏ. ೧೩: ಕ್ಷೇತ್ರದಲ್ಲಿ ಸುಮಾರು ೪ ದಶಕಗಳ ಹೋರಾಟಕ್ಕೆ ಇದೀಗ ಫಲ ಲಭಿಸಿದ್ದು, ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಭವನ ಇದೀಗ ಬಹುತೇಕ ಪೂರ್ಣಗೊಂಡಿದೆ.
    ದಲಿತ ಚಳುವಳಿ ಹುಟ್ಟಿದ ನೆಲದಲ್ಲಿ ಅದರ ಮೂಲ ಪ್ರೇರಕ ಶಕ್ತಿ, ಜಗತ್ತಿನ ಶ್ರೇಷ್ಠ ಜ್ಞಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಡಾ. ಬಿ.ಆರ್ ಅಂಬೇಡ್ಕರ್‌ರವರ ಭವನದ ಕನಸು ಇದೀಗ ನನಸಾಗಿದೆ. ಕ್ಷೇತ್ರದಲ್ಲಿ ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಿಸಬೇಕೆಂದು ವಿವಿಧ ದಲಿತಪರ ಸಂಘಟನೆಗಳು ಸುಮಾರು ೪ ದಶಕಗಳ ಹಿಂದೆ ಆರಂಭಿಸಿದ ಹೋರಾಟ ಇದೀಗ ಅಂತ್ಯಗೊಳ್ಳುವಂತಾಗಿದೆ.
    ಆರಂಭದ ಹೋರಾಟದಲ್ಲಿ ಜಯ ಲಭಿಸಿದಾದರೂ ನಿರೀಕ್ಷೆಯಂತೆ ಸುಸಜ್ಜಿತ ಭವನ ನಿರ್ಮಾಣಗೊಳ್ಳಲಿಲ್ಲ. ಆರಂಭದಲ್ಲಿ ನಗರದ ಬಿ.ಎಚ್ ರಸ್ತೆ ಅಪ್ಪರ್ ಹುತ್ತಾ ರೈಲ್ವೆ ಕೆಳಸೇತುವೆ ಬಳಿ ಅತಿ ಚಿಕ್ಕದಾದ, ಗುಡಿಸಲಿನ ಮಾದರಿಯ ಭವನ ನಿರ್ಮಾಣಗೊಂಡಿತು. ಆದರೆ ಈ ಭವನವನ್ನು ಯಾರು ಸಹ ಅಂಬೇಡ್ಕರ್ ಭವನವೆಂದು ಸ್ವೀಕರಿಸಲು ಸಿದ್ದರಿರಲಿಲ್ಲ. ಈ ಹಿನ್ನಲೆಯಲ್ಲಿ ಈ  ಭವನ ಸುಮಾರು ೪-೫ ವರ್ಷಗಳ ವರೆಗೆ ಪಾಳು ಬಿದ್ದಿತ್ತು. ನಂತರದ ದಿನಗಳಲ್ಲಿ ಈ ಭವನವನ್ನು ನಗರಸಭೆ ಆಡಳಿತ ಸಾರ್ವಜನಿಕ ಗ್ರಂಥಾಲಯಕ್ಕೆ ಬಿಟ್ಟುಕೊಡುವ ಮೂಲಕ ಇದರ ನಿರ್ವಹಣೆ ಜವಾಬ್ದಾರಿಯನ್ನು ಗ್ರಂಥಾಲಯ ಇಲಾಖೆಗೆ ವಹಿಸಿದೆ.
    ಪುನಃ ಮುಂದುವರೆದ ಹೋರಾಟ : ಜಾಗ ಹುಡುಕಾಟ
    ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಪುನಃ ದಲಿತಪರ ಸಂಘಟನೆಗಳು ಹೋರಾಟ ಮುಂದುವರೆಸಿದ ಪರಿಣಾಮ ನಗರಸಭೆ ವ್ಯಾಪ್ತಿಯಲ್ಲಿ ಜಾಗ ಹುಡುಕುವ ಪ್ರಕ್ರಿಯೆ ಆರಂಭಗೊಂಡಿತು. ಮೊದಲು ಹೊಸಮನೆ ಮುಖ್ಯರಸ್ತೆಯಲ್ಲಿರುವ ಹಳೇ ಸಂತೆ ಮೈದಾನದಲ್ಲಿ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಸಲಾಯಿತು. ಆದರೆ ಈ ಸ್ಥಳ ಸೂಕ್ತವಲ್ಲ ಬೇರೆಡೆ ನಿರ್ಮಿಸಬೇಕೆಂದು ಒತ್ತಾಯಗಳು ಕೇಳಿ ಬಂದ ಹಿನ್ನಲೆಯಲ್ಲಿ ಕೈಬಿಡಲಾಯಿತು. ನಂತರ ಜಟ್‌ಪಟ್ ನಗರದಲ್ಲಿ ಭವನಕ್ಕೆ ಜಾಗ ಮಂಜೂರಾತಿ ಪಡೆದುಕೊಂಡರೂ ಈ ಜಾಗ ಸಹ ಸೂಕ್ತವಲ್ಲ ಎಂದು ಕೈಬಿಡಲಾಯಿತು. ಕೊನೆಯದಾಗಿ ತಾಲೂಕು ಕಚೇರಿ ರಸ್ತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಿಂಭಾಗ ನಗರಸಭೆಗೆ ಸೇರಿದ ಖಾಲಿ ಜಾಗದಲ್ಲಿ ಭವನ ನಿರ್ಮಾಣ ಮಾಡಲು ತೀರ್ಮಾನಿಸಲಾಯಿತು. ೨೦೧೭ರಲ್ಲಿ ಅಂದಿನ ಶಾಸಕರಾಗಿದ್ದ ದಿವಂಗತ ಎಂ.ಜೆ ಅಪ್ಪಾಜಿಯವರು ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು. ಸುಮಾರು ೫ ವರ್ಷಗಳ ನಂತರ ಬಹುತೇಕ ಪೂರ್ಣಗೊಂಡಿದೆ.

ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಒಟ್ಟು ಸುಮಾರು ರು. ೪.೩೭ ಕೋ. ವೆಚ್ಚ ನಿರೀಕ್ಷಿಸಲಾಗಿದೆ. ಇದೀಗ ಸಮಾಜ ಕಲ್ಯಾಣ ಇಲಾಖೆಯಿಂದ ಬಿಡುಗಡೆಯಾಗಿರುವ ರು.೨ ಕೋ. ಹಾಗು ನಗರಸಭೆ ಅನುದಾನ ರು. ೫೦ ಲಕ್ಷ ಮತ್ತು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ರು.೩೭.೩೭ ಲಕ್ಷ ಅನುದಾನ ಹಾಗು ನಿರ್ಮಿತಿ ಕೇಂದ್ರದಿಂದ ರು. ೮೫ ಲಕ್ಷ  ಸೇರಿ ರು.೩.೭೨ ಕೋ. ವೆಚ್ಚದಲ್ಲಿ ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಳಿಸಲಾಗಿದೆ. ಸರ್ಕಾರದಿಂದ ಈಗಾಗಲೇ ರು. ೧.೫ ಕೋ. ಮಂಜೂರಾತಿಯಾಗಿದ್ದು, ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ. ಆ ನಂತರ ಉಳಿಕೆ ಕಾಮಗಾರಿಗಳು ನಡೆಯಲಿವೆ. ಸದ್ಯಕ್ಕೆ ಸಭೆ-ಸಮಾರಂಭಗಳನ್ನು ನಡೆಸಲು ಅನುಕೂಲವಾಗುವ ನಿಟ್ಟಿನಲ್ಲಿ ಭವನ ಸಿದ್ದಗೊಳಿಸಲಾಗಿದೆ.
                                                        - ಜಿತೇಂದ್ರ, ಇಂಜಿನಿಯರ್, ನಿರ್ಮಿತಿ ಕೇಂದ್ರ, ಶಿವಮೊಗ್ಗ


    ನಿರ್ಮಿತಿ ಕೇಂದ್ರದ ರು. ೮೫ ಲಕ್ಷ ಬಳಸಿ ಕಟ್ಟಡ ಕಾಮಗಾರಿ ಪೂರ್ಣ :
    ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಭವನ ನಿರ್ಮಿಸಲಾಗುತ್ತಿದ್ದು, ಆರಂಭದಲ್ಲಿ ಇಲಾಖೆಗೆ ಸರ್ಕಾರದಿಂದ ರು. ೧ ಕೋ. ಅನುದಾನ ಬಿಡುಗಡೆಗೊಂಡಿದ್ದು, ಈ ಅನುದಾನ ಬಳಸಿಕೊಂಡು ಮೊದಲ ಹಂತದ ಕಾಮಗಾರಿ ನಡೆಸಲಾಯಿತು. ಹೆಚ್ಚಿನ ಅನುದಾನ ಅಗತ್ಯತೆ ಹಿನ್ನಲೆಯಲ್ಲಿ ಪುನಃ ಇಲಾಖೆಗೆ ರು. ೧ ಕೋ. ಅನುದಾನ ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ. ಇದರ ಜೊತೆಗೆ ನಗರಸಭೆ ವತಿಯಿಂದ ರು.೫೦ ಲಕ್ಷ ಬಿಡುಗಡೆಗೊಳಿಸಲಾಗಿದೆ. ಅಲ್ಲದೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ರು.೩೭.೩೭ ಲಕ್ಷ ಸೇರಿದಂತೆ ಒಟ್ಟು ರು.೨.೮೭ ಕೋ. ಅನುದಾನ ಲಭ್ಯವಾದರೂ ಸಹ ಭವನ ಪೂರ್ಣಗೊಳ್ಳಲಿಲ್ಲ. ಎಲೆಕ್ಟ್ರಿಕಲ್ ವರ್ಕ್ಸ್, ಫ್ಲಂಬಿಂಗ್, ಸ್ಟೇಜ್ ಪ್ಲೋರಿಂಗ್ ಮತ್ತು ಪೇಟಿಂಗ್ ಕಾಮಗಾರಿಗಳಿಗಾಗಿ ಅಂದಾಜು ರು. ೬೨.೬೩ ಲಕ್ಷ ಅಗತ್ಯವಿರುವುದು ಕಂಡು ಬಂದಿತು. ಸರ್ಕಾರದಿಂದ ಅನುದಾನ ಬಿಡುಗಡೆಯಾಗುವುದು ವಿಳಂಬವಾಗುವ ಹಿನ್ನಲೆಯಲ್ಲಿ ಹಾಗು ದಲಿತಪರ ಸಂಘಟನೆಗಳ ಹೋರಾಟಕ್ಕೆ ಮಣಿದು ಸದ್ಯಕ್ಕೆ ನಿರ್ಮಿತಿ ಕೇಂದ್ರದ ರು. ೮೫ ಲಕ್ಷ ಬಳಸಿಕೊಂಡು ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಳಿಸಲಾಗಿದೆ.
    ಅನುದಾನ ಬಿಡುಗಡೆಗೆ ಒತ್ತಾಯ:
    ಕೆಲವು ತಿಂಗಳುಗಳ ಹಿಂದೆ ಶಾಸಕ ಬಿ.ಕೆ ಸಂಗಮೇಶ್ವರ್ ವಿಧಾನಸಭೆ ಅಧಿವೇಶನದಲ್ಲಿ ಭವನದ ಕಾಮಗಾರಿ ನೆನೆಗುದಿಗೆ ಬಿದ್ದಿರುವುದನ್ನು ಪ್ರಸ್ತಾಪಿಸಿ ತಕ್ಷಣ ಬಾಕಿ ಅನುದಾನ ಬಿಡುಗಡೆಗೊಳಿಸುವಂತೆ ಒತ್ತಾಯಿಸಿದ್ದರು. ಅಲ್ಲದೆ ಇತ್ತೀಚಿಗೆ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ದಲಿತಪರ ಸಂಘಟನೆಗಳ ಪ್ರಮುಖರು ಸಹ ಅನುದಾನ ಬಿಡುಗಡೆಗೆ ಒತ್ತಾಯಿಸಿದ್ದರು. ಈ ನಡುವೆ ಕಳೆದ ೩ ದಿನಗಳಿಂದ ಹೋರಾಟ ಸಹ ನಡೆಯುತ್ತಿತ್ತು. ಇದೀಗ ಎಲ್ಲಾ ಹೋರಾಟಗಳಿಗೂ ತೆರೆ ಬಿದ್ದಿದೆ.
    ಏ.೧೪ರಂದು ನೂತನ ಭವನದಲ್ಲಿ ಮೊದಲ ಕಾರ್ಯಕ್ರಮ:
    ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ನಗರಸಭೆ ಹಾಗು ವಿವಿಧ ಸಂಘಟನೆಗಳ ವತಿಯಿಂದ ನೂತನ ಭವನದಲ್ಲಿ ಏ.೧೪ರಂದು ಮೊದಲ ಕಾರ್ಯಕ್ರಮ ಡಾ.ಬಿ.ಆರ್ ಅಂಬೇಡ್ಕರ್‌ರವರ ೧೩೧ನೇ ಜನ್ಮದಿನಾಚರಣೆ ಹಮ್ಮಿಕೊಳ್ಳಲಾಗಿದೆ.
    ಬೆಳಿಗ್ಗೆ ೧೧ ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಬಿ ಅಶೋಕ್‌ನಾಯ್ಕ್ ಉದ್ಘಾಟಿಸಲಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದಾರೆ.
    ಸಚಿವರಾದ ಕೆ.ಸಿ ನಾರಾಯಣಗೌಡ, ಕೆ.ಎಸ್ ಈಶ್ವರಪ್ಪ, ಅರಗ ಜ್ಞಾನೇಂದ್ರ, ಸಂಸದ ಬಿ.ವೈ ರಾಘವೇಂದ್ರ, ವಿಧಾನಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಎಸ್.ಎಲ್ ಬೋಜೇಗೌಡ, ಎಸ್. ರುದ್ರೇಗೌಡ, ಭಾರತಿ ಶೆಟ್ಟಿ, ಡಿ.ಎಸ್ ಅರುಣ್, ನಗರಸಭೆ ಅಧ್ಯಕ್ಷೆ ಗೀತಾರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ, ತಹಸೀಲ್ದಾರ್ ಆರ್. ಪ್ರದೀಪ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಮೇಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಸ್. ಗೋಪಿನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
    ಸಮಾಜ ಕಲ್ಯಾಣ ಇಲಾಖೆ ಮೇಲ್ವಿಚಾರಕ ಎಸ್.ವಿ ಶಶಿಕುಮಾರ್ ಉಪನ್ಯಾಸ ನೀಡಲಿದ್ದು, ಕಾರ್ಯಕ್ರಮಕ್ಕೂ ಮೊದಲು ನಗರದ ಅಂಬೇಡ್ಕರ್ ವೃತ್ತದಿಂದ  ಮೆರವಣಿಗೆ ನಡೆಯಲಿದೆ.

ಸಚಿವ ಈಶ್ವರಪ್ಪರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ, ಬಂಧಿಸಿ

ಯುವ ಕಾಂಗ್ರೆಸ್ ಪ್ರತಿಭಟನೆ ನಡೆಸಿ ಆಗ್ರಹ

ಭದ್ರಾವತಿಯಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ ಯುವ ಕಾಂಗ್ರೆಸ್ ನಗರ ಹಾಗೂ ಗ್ರಾಮಾಂತರ ಘಟಕಗಳ ವತಿಯಿಂದ ಬುಧವಾರ ನಗರದ ರಂಗಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿ ರಾಜೀನಾಮೆಗೆ ಆಗ್ರಹಿಸಲಾಯಿತು.
    ಭದ್ರಾವತಿ, ಏ. ೧೩: ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ ಯುವ ಕಾಂಗ್ರೆಸ್ ನಗರ ಹಾಗೂ ಗ್ರಾಮಾಂತರ ಘಟಕಗಳ ವತಿಯಿಂದ ಬುಧವಾರ ನಗರದ ರಂಗಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿ ರಾಜೀನಾಮೆಗೆ ಆಗ್ರಹಿಸಲಾಯಿತು.
    ಗುತ್ತಿಗೆದಾರನ ಆತ್ಮಹತ್ಯೆಗೆ  ಸಚಿವರು ಕಾರಣಕರ್ತರಾಗಿದ್ದು, ಕಮಿಷನ್ ದಂಧೆ ಭ್ರಷ್ಟಾಚಾರದಿಂದ ಕಿರುಕುಳಕ್ಕೆ ಒಳಗಾಗಿ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿರುವುದು ಡೆತ್ ನೋಟ್ ನಿಂದ ತಿಳಿದು ಬರುತ್ತಿದೆ. ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಶೇ.೪೦ ಕಮಿಷನ್ ದಂಧೆಯಲ್ಲಿ ತೊಡಗಿಕೊಂಡಿದೆ. ಈ ಹಿಂದೆಯೇ ಗುತ್ತಿಗೆದಾರರು ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರಿಗೆ ಭ್ರಷ್ಟಾಚಾರ ವ್ಯಾಪಕವಾಗಿರುವುದನ್ನು ಉಲ್ಲೇಖಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿದ್ದರು. ಆದರೆ ಈ ಪತ್ರಕ್ಕೆ ನರೇಂದ್ರ ಮೋದಿಯವರು ಸಹ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದರಿಂದಾಗಿ ಬೇಸತ್ತು, ಕಿರುಕುಳ ತಾಳಲಾರದೆ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಆರೋಪಿಸಿದರು.
    ರಾಜ್ಯದೆಲ್ಲೆಡೆ ಭ್ರಷ್ಟಾಚಾರ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯದ ಬಿಜೆಪಿ ಸರ್ಕಾರ ಜನರ ಗಮನವನ್ನು ಬೇರಡೆಗೆ ಸೆಳೆಯಲು ಹಿಜಾಬ್, ಮುಸ್ಲಿಂ ವ್ಯಾಪಾರಿಗಳಿಗೆ ಮಾರಾಟಕ್ಕೆ ನಿಷೇಧ ಸೇರಿದಂತೆ ಇನ್ನಿತರ ವಿಚಾರಗಳ ಕುರಿತು ಧರ್ಮ ಧರ್ಮಗಳ ನಡುವೆ ದ್ವೇಷ ಭಾವನೆ ಮೂಡಿಸುತ್ತಿದೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.  
    ಗುತ್ತಿಗೆದಾರನ ಆತ್ಮಹತ್ಯೆ  ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಂಡು ನ್ಯಾಯ ಒದಗಿಸಿಕೊಡಬೇಕು. ಆತ್ಮಹತ್ಯೆ ಮಾಡಿಕೊಂಡಿರುವ ಗುತ್ತಿಗೆದಾರನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಈಶ್ವರಪ್ಪ ಅವರನ್ನು ತಕ್ಷಣ ಸಚಿವ ಸಂಪುಟದಿಂದ ವಜಾಗೊಳಿಸಿ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿದರು. ಸಚಿವ ಈಶ್ವರಪ್ಪನವರ ಭಾವಚಿತ್ರಕ್ಕೆ ಮಸಿ ಬಳಿದು ಕಾರ್ಯಕರ್ತರು ಆಕೋಶ ವ್ಯಕ್ತಪಡಿಸಿದರು.
    ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಘಟಕ ಅಧ್ಯಕ್ಷ ಟಿ. ಚಂದ್ರೇಗೌಡ,  ಗ್ರಾಮಾಂತರ ಘಟಕ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಯುವ ಘಟಕ ನಗರಾಧ್ಯಕ್ಷ ವಿನೋದ್ ಕುಮಾರ್, ಗ್ರಾಮಾಂತರ ಅಧ್ಯಕ್ಷ ಅಫ್ತಾಬ್ ಅಹಮದ್, ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಸದಸ್ಯರಾದ ಬಿ.ಕೆ ಮೋಹನ್, ಬಿ.ಟಿ ನಾಗರಾಜ್, ಬಿ.ಎಂ ಮಂಜುನಾಥ್, ಜಾರ್ಜ್, ಹಿಂದುಳಿದ ಘಟಕದ ಅಧ್ಯಕ್ಷ ಬಿ. ಗಂಗಾಧರ್, ಮುಖಂಡರಾದ ಎಸ್.ಎಸ್ ಭೈರಪ್ಪ, ಎನ್. ಮಂಜುನಾಥ್, ಐಸಾಕ್, ರಮೇಶ್ ನಾಯ್ಕ, ಮೋಹನ್, ರೂಪ ನಾರಾಯಣ್, ಚಂದ್ರಪ್ಪ, ತಬ್ರೇಜ್ ಖಾನ್, ಅಮೋಸ್ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ನಾಗತಿಬೆಳಗಲು ಶ್ರೀ ನಂಜುಂಡೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ : ಹರಿದು ಭಕ್ತ ಸಮೂಹ

ಭದ್ರಾವತಿ ತಾಲೂಕಿನ ಇತಿಹಾಸ ಪ್ರಸಿದ್ಧ ನಾಗತಿಬೆಳಗಲು ಶ್ರೀ ನಂಜುಂಡೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಬುಧವಾರ ಆರಂಭಗೊಂಡಿದ್ದು, ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು.
    ಭದ್ರಾವತಿ, ಏ. ೧೩:  ತಾಲೂಕಿನ ಇತಿಹಾಸ ಪ್ರಸಿದ್ಧ ನಾಗತಿಬೆಳಗಲು ಶ್ರೀ ನಂಜುಂಡೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಬುಧವಾರ ಆರಂಭಗೊಂಡಿದ್ದು, ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು.
    ಬೆಳಿಗ್ಗೆ ಶ್ರೀ ಸ್ವಾಮಿಗೆ ರುದ್ರಾಭಿಷೇಕ, ಮಂಗಳಾರತಿ, ಕೆಂಡಾರ್ಚನೆ ಹಾಗು ಸಂಜೆ ಶ್ರೀ ನಂಜುಂಡೇಶ್ವರ ಸ್ವಾಮಿಯ ರಥಾರೋಹಣ ನೆರವೇರಿತು. ಸಂಪ್ರದಾಯದಂತೆ ನಂಜುಂಡೇಶ್ವರ ಸ್ವಾಮಿಯ ಪಲ್ಲಕ್ಕಿ ಹೊತ್ತವರು ಮೊದಲು ಕೆಂಡ ಹಾಯ್ದರು. ನಂತರ ಅಕ್ಕಪಕ್ಕದ ಗ್ರಾಮಗಳಿಂದ ದೇವರುಗಳ ಪಲ್ಲಕ್ಕಿಯನ್ನು ಹೊತ್ತು ತಂದವರು ಸರದಿ ಸಾಲಿನಲ್ಲಿ ನಿಂತು ಕೆಂಡ ಹಾಯ್ದರು.
    ಜಾತ್ರಾ ಮಹೋತ್ಸವದ ಅಂಗವಾಗಿ ದಾನಿಗಳು, ಸೇವಾಕರ್ತರಾದ ಕುಮರಿನಾರಾಯಣಪುರದ ಎ. ಧರ್ಮೇಂದ್ರ ಅವರಿಂದ ಹೂವಿನ ಅಲಂಕಾರ, ಶಿವಮೊಗ್ಗ ಶ್ರೀ ನಂಜುಂಡೇಶ್ವರ ಪ್ರಾವಿಜನ್ ಸ್ಟೋರ್‍ಸ್, ಉಮಾ-ಎಂ. ಚಂದ್ರಶೇಖರ್ ಕುಟುಂಬದಿಂದ ಮಜ್ಜಿಗೆ ವಿತರಣೆ, ನಗರದ ಬಿ.ಎಚ್ ರಸ್ತೆ ಐಟಿಐ ಮುಂಭಾಗದ ಶ್ರೀ ಮಲ್ಲಿಕಾರ್ಜುನ ಸಾಮಿಲ್ ಶಶಿಕಲಾ-ಪರಶುರಾಮಪ್ಪ ಕುಟುಂಬದಿಂದ ದಾಸೋಹ ವ್ಯವಸ್ಥೆ ಕೈಗೊಳ್ಳಲಾಗಿತ್ತು.
    ಏ.೧೪ರ ಬೆಳಿಗ್ಗೆ ೫ ಗಂಟೆಗೆ ರಥೋತ್ಸವ, ಮಧ್ಯಾಹ್ನ ಓಕಳಿ, ಏ.೧೫ರ ಬೆಳಿಗ್ಗೆ ೬ ಗಂಟೆಗೆ ರುದ್ರಾಭಿಷೇಕ, ಸಿದ್ದರಪೂಜೆ, ಮಹಾಮಂಗಳಾರತಿ, ನಂತರ ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ನಡೆಯಲಿದೆ.
    ಸಾಂಸ್ಕೃತಿಕ ಮನರಂಜನೆ ಕಾರ್ಯಕ್ರಮಗಳು:
    ಜಾತ್ರಾ ಮಹೋತ್ಸವದ ಹಿನ್ನಲೆಯಲ್ಲಿ ಬುಧವಾರ ರಾತ್ರಿ, ನಾಗತಿಬೆಳಗಲು ಗ್ರಾಮದ ಭೋವಿಕಾಲೋನಿ ಶ್ರೀ ನಂಜುಂಡೇಶ್ವರಸ್ವಾಮಿ ಯುವಕ ಸಂಘದಿಂದ ಕೋಲಾಟ ಮತ್ತು ಡೊಳ್ಳು, ರಾಜ್ಯ ಪ್ರಶಸ್ತಿ ವಿಜೇತ ಬಿ. ಪರಮೇಶ್ವರಪ್ಪ ಸಂಗಡಿಗರಿಂದ ವೀರಾಗಾಸೆ, ನಾಗತಿಬೆಳಗಲು ತಾಂಡ ಶ್ರೀ ನಂಜುಂಡೇಶ್ವರ ಸ್ವಾಮಿ ಯುವಕ ಸೇವಾಲಾಲ್ ಸಂಘ ಹಾಗು ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ವಾಲ್ಯಾನಾಯ್ಕ ಸಂಗಡಿಗರಿಂದ ಕೋಲಾಟ ಮತ್ತು ಆರ್. ಭೀಮಾನಾಯ್ಕ ಸಂಗಡಿಗರಿಂದ ಡೊಳ್ಳು ಹಾಗು ಎಸ್.ಪಿ ಚಂದ್ರಪ್ಪ ಸಂಗಡಿಗರಿಂದ ಭಜನೆ ಮತ್ತು ಶ್ರೀ ಮುತ್ತು ಮಾರಿಯಮ್ಮ ಯುವಕ ಸಂಘದಿಂದ ಪಂಬೈ ನೃತ್ಯ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಮನರಂಜನೆ ಕಾರ್ಯಕ್ರಮಗಳು ಜರುಗಿದವು.
    ಜಾತ್ರೆಯಲ್ಲಿ ಯಾವುದೇ ಧರ್ಮದ ವ್ಯಾಪಾರಿಗಳಿಗೆ ನಿರ್ಬಂಧವಿಲ್ಲ:
    ನಾಗತಿಬೆಳಗಲು ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮುಸ್ಲಿಂ ಸಮುದಾಯದವರು ಹೆಚ್ಚಾಗಿ ವಾಸಿಸುತ್ತಿದ್ದು, ಹಿಂದಿನಿಂದಲೂ ಜಾತ್ರೆಯನ್ನು ಯಾವುದೇ ಧರ್ಮ, ಜಾತಿ ಬೇಧಭಾವವಿಲ್ಲದೆ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಸಹ ಜಾತ್ಯಾತೀತವಾಗಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಎಲ್ಲಾ ಧರ್ಮದ ವ್ಯಾಪಾರಿಗಳಿಗೂ ಅವಕಾಶ ಕಲ್ಪಿಸಲಾಗಿದೆ.
    ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ  ಸ್ಥಳೀಯ ಸಂಸ್ಥೆಗಳ ಜನ ಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು ಹಾಗು ನಾಗತಿಬೆಳಗಲು, ಕುಮರಿನಾರಾಯಣಪುರ, ತಳ್ಳಿಕಟ್ಟೆ, ಬಾಬಳ್ಳಿ, ಗೌಡರಹಳ್ಳಿ, ಕಾಗೇಕೋಡಮಗ್ಗೆ, ಕೂಡ್ಲಿಗೆರೆ, ಹಳೇಸೀಗೇಬಾಗಿ ಸೇರಿದಂತೆ ಸುತ್ತಮುತ್ತಲ ಹತ್ತಾರು ಗ್ರಾಮಗಳ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.


ಭದ್ರಾವತಿ ತಾಲೂಕಿನ ಇತಿಹಾಸ ಪ್ರಸಿದ್ಧ ನಾಗತಿಬೆಳಗಲು ಶ್ರೀ ನಂಜುಂಡೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಬುಧವಾರ ಆರಂಭಗೊಂಡಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ  ಸ್ಥಳೀಯ ಸಂಸ್ಥೆಗಳ ಜನ ಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದರು.

ಜಿ. ರಾಜಲಕ್ಷ್ಮಿ ನಿಧನ

ಜಿ. ರಾಜಲಕ್ಷ್ಮಿ
    ಭದ್ರಾವತಿ, ಏ. ೧೩: ನಗರದ ಕೇಶವಪುರ ಬಡಾವಣೆ ನಿವಾಸಿ ಜಿ. ರಾಜಲಕ್ಷ್ಮಿ(೮೪) ಎಸ್. ಗೋವಿಂದ ರಾಜಶೆಟ್ಟಿ ಬುಧವಾರ ನಿಧನ ಹೊಂದಿದರು.
    ಪತಿ, ಮೂವರು ಪುತ್ರರು ಹಾಗು ಇಬ್ಬರು ಪುತ್ರಿಯರನ್ನು ಹೊಂದಿದ್ದರು. ರಾಜಲಕ್ಷ್ಮಿಯವರು ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಇವರ ಅಂತ್ಯಕ್ರಿಯೆ ಸಂಜೆ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು.
    ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಆರ್ಯವೈಶ್ಯ ಸಮಾಜ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.

Tuesday, April 12, 2022

ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಾಣಗೊಂಡಿಲ್ಲ : ೪ ದಶಕಗಳ ಹೋರಾಟಕ್ಕೆ ಫಲ ಲಭಿಸಿಲ್ಲ

ಭವನ ಪೂರ್ಣಗೊಳ್ಳಲು ಬೇಕು ಇನ್ನೂ ರು. ೬೨.೬೩ ಲಕ್ಷ..!

ಭದ್ರಾವತಿ ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಿಂಭಾಗ ನಿರ್ಮಾಣ ಹಂತದಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಭವನ.

* ಅನಂತಕುಮಾರ್
    ಭದ್ರಾವತಿ, ಏ. ೧೨: ಕ್ಷೇತ್ರದಲ್ಲಿ ಸುಮಾರು ೪ ದಶಕಗಳ ಹೋರಾಟಕ್ಕೆ ಇನ್ನೂ ಫಲ ಲಭಿಸಿಲ್ಲ. ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಭವನ ಈ ಬಾರಿ ಸಹ ಪೂರ್ಣಗೊಂಡಿಲ್ಲ.
    ದಲಿತ ಚಳುವಳಿ ಹುಟ್ಟಿದ ನೆಲದಲ್ಲಿ ಅದರ ಮೂಲ ಪ್ರೇರಕ ಶಕ್ತಿ, ಜಗತ್ತಿನ ಶ್ರೇಷ್ಠ ಜ್ಞಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಡಾ. ಬಿ.ಆರ್ ಅಂಬೇಡ್ಕರ್‌ರವರ ಭವನದ ಕನಸು ಇಂದಿಗೂ ಕನಸಾಗಿ ಉಳಿದುಕೊಂಡಿದೆ. ಕ್ಷೇತ್ರದಲ್ಲಿ ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಿಸಬೇಕೆಂದು ವಿವಿಧ ದಲಿತಪರ ಸಂಘಟನೆಗಳು ಸುಮಾರು ೪ ದಶಕಗಳ ಹಿಂದೆ ಆರಂಭಿಸಿದ ಹೋರಾಟ ಇಂದಿಗೂ ಮುನ್ನಡೆಯುತ್ತಿದೆ. ಆರಂಭದ ಹೋರಾಟದಲ್ಲಿ ಜಯ ಲಭಿಸಿದಾದರೂ ನಿರೀಕ್ಷೆಯಂತೆ ಸುಸಜ್ಜಿತ ಭವನ ನಿರ್ಮಾಣಗೊಳ್ಳಲಿಲ್ಲ.
    ಆರಂಭದಲ್ಲಿ ನಗರದ ಬಿ.ಎಚ್ ರಸ್ತೆ ಅಪ್ಪರ್ ಹುತ್ತಾ ರೈಲ್ವೆ ಕೆಳಸೇತುವೆ ಬಳಿ ಅತಿ ಚಿಕ್ಕದಾದ, ಗುಡಿಸಲಿನ ಮಾದರಿಯ ಭವನ ನಿರ್ಮಾಣಗೊಂಡಿತು. ಆದರೆ ಈ ಭವನವನ್ನು ಯಾರು ಸಹ ಅಂಬೇಡ್ಕರ್ ಭವನವೆಂದು ಸ್ವೀಕರಿಸಲು ಸಿದ್ದರಿರಲಿಲ್ಲ. ಈ ಹಿನ್ನಲೆಯಲ್ಲಿ ಈ  ಭವನ ಸುಮಾರು ೪-೫ ವರ್ಷಗಳ ವರೆಗೆ ಪಾಳು ಬಿದ್ದಿತ್ತು. ನಂತರದ ದಿನಗಳಲ್ಲಿ ಈ ಭವನವನ್ನು ನಗರಸಭೆ ಆಡಳಿತ ಸಾರ್ವಜನಿಕ ಗ್ರಂಥಾಲಯಕ್ಕೆ ಬಿಟ್ಟುಕೊಡುವ ಮೂಲಕ ಇದರ ನಿರ್ವಹಣೆ ಜವಾಬ್ದಾರಿಯನ್ನು ಗ್ರಂಥಾಲಯ ಇಲಾಖೆಗೆ ವಹಿಸಿದೆ.
    ಪುನಃ ಮುಂದುವರೆದ ಹೋರಾಟ : ಜಾಗ ಹುಡುಕಾಟ
    ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಪುನಃ ದಲಿತಪರ ಸಂಘಟನೆಗಳು ಹೋರಾಟ ಮುಂದುವರೆಸಿದ ಪರಿಣಾಮ ನಗರಸಭೆ ವ್ಯಾಪ್ತಿಯಲ್ಲಿ ಜಾಗ ಹುಡುಕುವ ಪ್ರಕ್ರಿಯೆ ಆರಂಭಗೊಂಡಿತು. ಮೊದಲು ಹೊಸಮನೆ ಮುಖ್ಯರಸ್ತೆಯಲ್ಲಿರುವ ಹಳೇ ಸಂತೆ ಮೈದಾನದಲ್ಲಿ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಸಲಾಯಿತು. ಆದರೆ ಈ ಸ್ಥಳ ಸೂಕ್ತವಲ್ಲ ಬೇರೆಡೆ ನಿರ್ಮಿಸಬೇಕೆಂದು ಒತ್ತಾಯಗಳು ಕೇಳಿ ಬಂದ ಹಿನ್ನಲೆಯಲ್ಲಿ ಕೈಬಿಡಲಾಯಿತು. ನಂತರ ಜಟ್‌ಪಟ್ ನಗರದಲ್ಲಿ ಭವನಕ್ಕೆ ಜಾಗ ಮಂಜೂರಾತಿ ಪಡೆದುಕೊಂಡರೂ ಈ ಜಾಗ ಸಹ ಸೂಕ್ತವಲ್ಲ ಎಂದು ಕೈಬಿಡಲಾಯಿತು. ಕೊನೆಯದಾಗಿ ತಾಲೂಕು ಕಚೇರಿ ರಸ್ತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಿಂಭಾಗ ನಗರಸಭೆಗೆ ಸೇರಿದ ಖಾಲಿ ಜಾಗದಲ್ಲಿ ಭವನ ನಿರ್ಮಾಣ ಮಾಡಲು ತೀರ್ಮಾನಿಸಲಾಯಿತು. ೨೦೧೭ರಲ್ಲಿ ಅಂದಿನ ಶಾಸಕರಾಗಿದ್ದ ದಿವಂಗತ ಎಂ.ಜೆ ಅಪ್ಪಾಜಿಯವರು ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.
    ಪೂರ್ಣಗೊಳ್ಳಲು ಬೇಕು ಇನ್ನೂ ರು. ೬೨.೬೩ ಲಕ್ಷ..!
    ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಭವನ ನಿರ್ಮಿಸಲಾಗುತ್ತಿದ್ದು, ಆರಂಭದಲ್ಲಿ ಇಲಾಖೆಗೆ ಸರ್ಕಾರದಿಂದ ರು. ೧ ಕೋ. ಅನುದಾನ ಬಿಡುಗಡೆಗೊಂಡಿದ್ದು, ಈ ಅನುದಾನ ಬಳಸಿಕೊಂಡು ಮೊದಲ ಹಂತದ ಕಾಮಗಾರಿ ನಡೆಸಲಾಯಿತು. ಹೆಚ್ಚಿನ ಅನುದಾನ ಅಗತ್ಯತೆ ಹಿನ್ನಲೆಯಲ್ಲಿ ಪುನಃ ಇಲಾಖೆಗೆ ರು. ೧ ಕೋ. ಅನುದಾನ ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ. ಇದರ ಜೊತೆಗೆ ನಗರಸಭೆ ವತಿಯಿಂದ ರು.೫೦ ಲಕ್ಷ ಬಿಡುಗಡೆಗೊಳಿಸಲಾಗಿದೆ. ಒಟ್ಟು ರು.೨.೫೦ ಕೋ. ಅನುದಾನ ಲಭ್ಯವಾದರೂ ಸಹ ಭವನ ಪೂರ್ಣಗೊಂಡಿಲ್ಲ. ಬಾಕಿ ಇರುವ ಎಲೆಕ್ಟ್ರಿಕಲ್ ವರ್ಕ್ಸ್, ಫ್ಲಂಬಿಂಗ್, ಸ್ಟೇಜ್ ಪ್ಲೋರಿಂಗ್ ಮತ್ತು ಪೇಟಿಂಗ್ ಕಾಮಗಾರಿಗಳಿಗಾಗಿ ಇನ್ನೂ ರು. ೬೨.೬೩ ಲಕ್ಷ ಅಗತ್ಯವಿದ್ದು, ಈ ಪೈಕಿ ಮಂಜೂರಾತಿಯಾಗಿರುವ ಶಾಸಕರ ಪ್ರದೇಶಾಭಿವೃದ್ಧಿ ಅನುದಾನ ರು. ೩೭.೩೭ ಲಕ್ಷ ಇನ್ನೂ ಬಿಡುಗಡೆಗೊಂಡಿಲ್ಲ. ಇದರಿಂದಾಗಿ ಸದ್ಯಕ್ಕೆ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಭವನದ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಶಿವಮೊಗ್ಗ ನಿರ್ಮಿತಿ ಕೇಂದ್ರ ವಹಿಸಿಕೊಂಡಿದೆ.
    ಅನುದಾನ ಬಿಡುಗಡೆಗೆ ಒತ್ತಾಯ:
    ಕೆಲವು ತಿಂಗಳುಗಳ ಹಿಂದೆ ಶಾಸಕ ಬಿ.ಕೆ ಸಂಗಮೇಶ್ವರ್ ವಿಧಾನಸಭೆ ಅಧಿವೇಶನದಲ್ಲಿ ಭವನದ ಕಾಮಗಾರಿ ನೆನೆಗುದಿಗೆ ಬಿದ್ದಿರುವುದನ್ನು ಪ್ರಸ್ತಾಪಿಸಿ ತಕ್ಷಣ ಬಾಕಿ ಅನುದಾನ ಬಿಡುಗಡೆಗೊಳಿಸುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ ಇತ್ತೀಚಿಗೆ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ದಲಿತಪರ ಸಂಘಟನೆಗಳ ಪ್ರಮುಖರು ಅನುದಾನ ಬಿಡುಗಡೆಗೆ ಒತ್ತಾಯಿಸಿದ್ದು, ಈ ನಡುವೆ ಕಳೆದ ೩ ದಿನಗಳಿಂದ ಹೋರಾಟ ಸಹ ನಡೆಯುತ್ತಿದೆ.
    ಈ ಬಾರಿ ದಲಿತಪರ ಸಂಘಟನೆಗಳು ಏ.೧೪ರೊಳಗೆ ಭವನ ಕಾಮಗಾರಿ ಸಂಪೂರ್ಣವಾಗಿ ಮುಕ್ತಾಯಗೊಳ್ಳುವ ನಿರೀಕ್ಷೆ ಹೊಂದಿದ್ದವು. ಆದರೆ ನಿರೀಕ್ಷೆ ಹುಸಿಯಾಗಿದ್ದು, ಭವನ ಪೂರ್ಣಗೊಳ್ಳುವವರೆಗೆ ಹೋರಾಟ ಮುಂದುವರೆಸುವುದು ಅನಿವಾರ್ಯವಾಗಿದೆ.

ಏ.೧೩ರಂದು ಶ್ರೀ ನಂಜುಂಡೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ

ಭದ್ರಾವತಿ ನಾಗತಿಬೆಳಗಲು ಶ್ರೀ ನಂಜುಂಡೇಶ್ವರ ಸ್ವಾಮಿ ದೇವಸ್ಥಾನ.
    ಭದ್ರಾವತಿ, ಏ. ೧೨: ತಾಲೂಕಿನ ನಾಗತಿಬೆಳಗಲು ಇತಿಹಾಸ ಪ್ರಸಿದ್ದ ಶ್ರೀ ನಂಜುಂಡೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಏ. ೧೩ರಂದು ನಡೆಯಲಿದೆ.
    ಬೆಳಿಗ್ಗೆ ೫ ಗಂಟೆಗೆ ಶ್ರೀ ಸ್ವಾಮಿಯ ರುದ್ರಾಭಿಷೇಕ, ಮಂಗಳಾರತಿ, ೧೦ ಗಂಟೆಗೆ ಕೆಂಡಾರ್ಚನೆ, ಸಂಜೆ ಶ್ರೀ ನಂಜುಂಡೇಶ್ವರ ಸ್ವಾಮಿಯ ರಥಾರೋಹಣ, ಏ.೧೪ರ ಬೆಳಿಗ್ಗೆ ೫ ಗಂಟೆಗೆ ರಥೋತ್ಸವ, ಮಧ್ಯಾಹ್ನ ಓಕಳಿ, ಏ.೧೫ರ ಬೆಳಿಗ್ಗೆ ೬ ಗಂಟೆಗೆ ರುದ್ರಾಭಿಷೇಕ, ಸಿದ್ದರಪೂಜೆ, ಮಹಾಮಂಗಳಾರತಿ, ನಂತರ ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಕೋರಲಾಗಿದೆ.
    ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಕುಮರಿನಾರಾಯಣಪುರದ ಮುಖಂಡ, ಶ್ರೀವಿನಾಯಕ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎ. ಧರ್ಮೇಂದ್ರ ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ ದೇವಸ್ಥಾನ ಸೇವಾಸಮಿತಿ ಕಾರ್ಯದರ್ಶಿ, ಮೊ: ೮೧೦೫೨೬೪೩೫೭ ಸಂಖ್ಯೆಗೆ ಕರೆ ಮಾಡಬಹುದಾಗಿದೆ.