Sunday, April 17, 2022

ಇಬ್ರಾಹಿಂ ಜೆಡಿಎಸ್ ಸೇರ್ಪಡೆ : ಹೆಚ್ಚಾದ ಭಿನ್ನಮತ

ಸಿ.ಎಂ ಇಬ್ರಾಹಿಂ

    * ಅನಂತಕುಮಾರ್
    ಭದ್ರಾವತಿ: ಕೇಂದ್ರ ಮಾಜಿ ಸಚಿವ ಸಿ.ಎಂ ಇಬ್ರಾಹಿಂ ಜನತಾದಳ (ಜಾತ್ಯಾತೀತ) ಪಕ್ಷಕ್ಕೆ ಸೇರ್ಪಡೆಗೊಂಡು ರಾಜ್ಯಾಧ್ಯಕ್ಷರಾಗಿ ಭಾನುವಾರ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಕ್ಷೇತ್ರದಲ್ಲಿ ರಾಜಕೀಯ ಭಿನ್ನಮತ ಮತ್ತಷ್ಟು ಸ್ಪೋಟಗೊಳ್ಳುತ್ತಿದ್ದು, ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿರುವ ಶಾರದ ಅಪ್ಪಾಜಿಗೆ ಹಿನ್ನಡೆಯಾಗುವುದು ಬಹುತೇಕ ಖಚಿತವಾಗಿದೆ.
    ಈಗಾಗಲೇ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಬಹುತೇಕ ಸ್ಥಳೀಯ ಮುಖಂಡರು ಪಕ್ಷ ತೊರೆದಿದ್ದಾರೆ. ಇನ್ನೂ ಕೆಲವರು ಶಾರದ ಅಪ್ಪಾಜಿಯನ್ನು ಈಗಾಗಲೇ ಅಭ್ಯರ್ಥಿಯನ್ನಾಗಿ ಘೋಷಿಸಿದ್ದರೂ ಸಹ ಸ್ವಯಂ ಘೋಷಿತ ಅಭ್ಯರ್ಥಿಗಳಾಗಿ ಗುರುತಿಸಿಕೊಳ್ಳಲು ತೆರೆಮರೆಯಲ್ಲಿ ಯತ್ನಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಇದರಿಂದಾಗಿ ಶಾರದ ಅಪ್ಪಾಜಿಗೆ ಹಿನ್ನಡೆಯಾಗಲಿದೆ ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ.
    ಅಪ್ಪಾಜಿ ಅಭಿಮಾನಿಗಳು, ಕಾರ್ಯಕರ್ತರಲ್ಲಿ ಅಸಮಾಧಾನ:
    ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಅವರೊಂದಿಗೆ ಬಹಳವರ್ಷಗಳ ಒಡನಾಟ ಹೊಂದಿದ್ದ ಹಾಗು ಆ ಮೂಲಕ ರಾಜಕೀಯದಲ್ಲಿ ನೆಲೆ ಕಂಡುಕೊಂಡಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್ ಹಾಗು ಬೆಂಬಲಿಗರು ಇತ್ತೀಚೆಗೆ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿರುವುದು ಅಪ್ಪಾಜಿ ಅಭಿಮಾನಿಗಳು ಹಾಗು ಕಾರ್ಯಕರ್ತರಲ್ಲಿ ಅಸಮಾಧಾನವನ್ನುಂಟು ಮಾಡಿದೆ. ಈ ನಡುವೆ ಈ ಹಿಂದೆ ಅಪ್ಪಾಜಿ ಎದುರು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಸೋಲು ಅನುಭವಿಸಿ ೩ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದ ಸಿ.ಎಂ ಇಬ್ರಾಹಿಂ ಪಕ್ಷದ ರಾಜ್ಯಾಧ್ಯಕ್ಷರಾಗಿರುವುದು ಮತ್ತಷ್ಟು ಅಸಮಾಧಾನಕ್ಕೆ ಕಾರಣವಾಗಿದೆ.
    ಅಪ್ಪಾಜಿ ವರ್ಚಸ್ಸಿಗೆ ಧಕ್ಕೆ :
    ೩ ಬಾರಿ ಶಾಸಕರಾಗಿದ್ದ ಎಂ.ಜೆ ಅಪ್ಪಾಜಿಯವರು ಕ್ಷೇತ್ರದಲ್ಲಿ ತಮ್ಮದೇ ಆದ ವರ್ಚಸ್ಸನ್ನು, ಅಭಿಮಾನಿ ಹಾಗು ಕಾರ್ಯಕರ್ತರ ಬಳಗವನ್ನು ಹೊಂದಿದ್ದರು. ಸುಮಾರು ೪೦ ರಿಂದ ೫೦ ಸಾವಿರದಷ್ಟು ವರ್ಚಸ್ಸಿನ ಮತಗಳು ಅಪ್ಪಾಜಿ ಪರವಾಗಿದ್ದವು. ಇದೀಗ ಅಪ್ಪಾಜಿ ನಿಧನದಿಂದಾಗಿ ಈ ಮತಗಳ ಮೇಲೆ ಕಣ್ಣಿಟ್ಟಿರುವ ಶಾಸಕ ಬಿ.ಕೆ ಸಂಗಮೇಶ್ವರ್ ಅಪ್ಪಾಜಿಯೊಂದಿಗೆ ಗುರುತಿಸಿಕೊಂಡಿರುವ ಪ್ರಮುಖರನ್ನು ಸೆಳೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದು, ಅಪ್ಪಾಜಿಯವರ ಚುನಾವಣಾ ತಂತ್ರಗಾರಿಕೆ ಬೇಧಿಸಲು ಮುಂದಾಗಿರುವುದು ಗುಟ್ಟಾಗಿ ಉಳಿದಿಲ್ಲ. ಈಗಾಗಲೇ ಅಲ್ಪಸಂಖ್ಯಾತ ಸಮುದಾಯದ ಮುಖಂಡ ಫೀರ್ ಷರೀಫ್, ಛಲವಾದಿ ಸಮಾಜದ ಬದರಿನಾರಾಯಣ, ಶಿವರಾಜ್ ಹಾಗು ಶಿವಮಾದು ಸೇರಿದಂತೆ ಇನ್ನಿತರ ಪ್ರಮುಖರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಕಲ್ಪಿಸಿಕೊಡಲಾಗಿದೆ.   ಈ ನಡುವೆ ಅಪ್ಪಾಜಿ ವರ್ಚಸ್ಸಿಗೆ ಧಕ್ಕೆ ತರುವ ಹುನ್ನಾರಗಳು ಸಹ ನಡೆಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.  
    ಸಿ.ಎಂ ಇಬ್ರಾಹಿಂ ಹಿಂದೆ ದುಂಬಾಲು ಬಿದ್ದ ನಾಯಕರು:
    ಕಳೆದ ವರ್ಷ ಅಪ್ಪಾಜಿಯವರ ಪ್ರಥಮ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮುಂಬರುವ ವಿಧಾನಸಭಾ ಚುನಾವಣೆಗೆ ಶಾರದ ಅಪ್ಪಾಜಿಯನ್ನು ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಿಸಿದ್ದಾರೆ. ಆದರೂ ಸಹ ಪಕ್ಷದಲ್ಲಿನ ಕೆಲ ನಾಯಕರು ಮುಂದಿನ ಚುನಾವಣೆಗೆ ತೆರೆಮರೆಯಲ್ಲಿ ಆಕಾಂಕ್ಷಿಗಳಾಗಿರುವುದು ತಿಳಿದು ಬರುತ್ತಿದ್ದು, ಕಳೆದ ಸುಮಾರು ೧ ವರ್ಷದಿಂದ ಸಿ.ಎಂ ಇಬ್ರಾಹಿಂ ಹಿಂದೆ ದುಂಬಾಲು ಬಿದ್ದು ತಿರುಗುತ್ತಿದ್ದಾರೆ. ಇದರಿಂದಾಗಿ ಒಂದೆಡೆ ಶಾರದ ಅಪ್ಪಾಜಿಗೆ ಇರಿಸುಮುರಿಸು ಉಂಟಾಗುತ್ತಿದೆ. ಮತ್ತೊಂದೆಡೆ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡುತ್ತಿದೆ.  
    ಬಿಜೆಪಿ ಪಕ್ಷಕ್ಕೆ ಶಾರದ ಅಪ್ಪಾಜಿ ಸೆಳೆಯಲು ತೆರೆಮರೆಯಲ್ಲಿ ಕಸರತ್ತು :
ಕ್ಷೇತ್ರದಲ್ಲಿ ಅಪ್ಪಾಜಿಯವರ ವರ್ಚಸ್ಸಿನ ಮತಗಳ ಮೇಲೆ ಬಿಜೆಪಿ ಸಹ ಕಣ್ಣಿಟ್ಟಿದ್ದು, ಮುಂಬರುವ ಚುನಾವಣೆಗೆ ಶಾರದ ಅಪ್ಪಾಜಿಯನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಲು ಪಕ್ಷದ ಸ್ಥಳೀಯ ಮುಖಂಡರ ಮೂಲಕ ಸೆಳೆಯಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿರುವ ವಿಚಾರ ಸಹ ಗುಟ್ಟಾಗಿ ಉಳಿದಿಲ್ಲ. ಈಗಾಗಲೇ ಈ ಸಂಬಂಧ ಪ್ರಾಥಮಿಕ ಹಂತದ ಮಾತುಕತೆಗಳು ನಡೆದಿವೆ ಎನ್ನಲಾಗಿದೆ. ಈ ನಡುವೆ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರತಿ ಬಾರಿ ಹೊರಗಿನವರನ್ನು ಅಭ್ಯರ್ಥಿಯನ್ನಾಗಿ ಮಾಡುತ್ತಿದ್ದು, ಪಕ್ಷದ ನಿಷ್ಠಾವಂತ ಮುಖಂಡರು, ಕಾರ್ಯಕರ್ತರನ್ನು ಕಡೆಗಣಿಸುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.


Saturday, April 16, 2022

ಶ್ರೀಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಪ್ರಾಯಶ್ಚಿತ ರೂಪವಾಗಿ ಚಿಕ್ಕರಥೋತ್ಸವ

ಭದ್ರಾವತಿ ಹಳೇನಗರದ ಪುರಾಣ ಪ್ರಸಿದ್ಧ ಶ್ರೀಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ ಶನಿವಾರ ಬೆಳಿಗ್ಗೆ ಪ್ರಾಯಶ್ಚಿತ ರೂಪವಾಗಿ ಚಿಕ್ಕ ರಥೋತ್ಸವ ನಡೆಸಲಾಯಿತು.
    ಭದ್ರಾವತಿ, ಏ. ೧೬: ಹಳೇನಗರದ ಪುರಾಣ ಪ್ರಸಿದ್ಧ ಶ್ರೀಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ ಶನಿವಾರ ಬೆಳಿಗ್ಗೆ ಪ್ರಾಯಶ್ಚಿತ ರೂಪವಾಗಿ ಚಿಕ್ಕ ರಥೋತ್ಸವ ನಡೆಸಲಾಯಿತು.
    ದೇವಾಲಯದಲ್ಲಿ ಪ್ರತಿವರ್ಷ ಮೇ.೧೬ರ ಬೌದ್ಧಪೌರ್ಣಮಿಯಂದು ವಾರ್ಷಿಕ ರಥೋತ್ಸವ ನಡೆಸಿಕೊಂಡು ಬರಲಾಗುತ್ತಿದ್ದು, ಮಹಾಮಾರಿ ಕೊರೋನಾ ಹಿನ್ನಲೆಯಲ್ಲಿ ಕಳೆದ ಸುಮಾರು ೨ ವರ್ಷಗಳಿಂದ ವಾರ್ಷಿಕ ರಥೋತ್ಸವ ನಡೆಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಪ್ರಾಯಶ್ಚಿತ ರೂಪವಾಗಿ ಚಿಕ್ಕ ರಥೋತ್ಸವ ನಡೆಸಲಾಯಿತು.
    ಬಣ್ಣ ಬಣ್ಣದ ಹೂವುಗಳಿಂದ ಅಲಂಕೃತಗೊಂಡ ರಥದಲ್ಲಿ ಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ರಥೋತ್ಸವ ನಡೆಸಲಾಯಿತು. ರಥೋತ್ಸವ ಆರಂಭಗೊಳ್ಳುತ್ತಿದ್ದಂತೆ ಭಕ್ತರು ಸ್ವಾಮಿಗೆ ಜಯಘೋಷಗಳನ್ನು ಹಾಕಿದರು.
    ದೇವಾಲಯದ ಪ್ರಧಾನ ಅರ್ಚಕ ವೇ.ಬ್ರ.ರಂಗನಾಥ ಶರ್ಮ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ಜಿ ಮಾರುತಿ ಹಾಗೂ ಸದಸ್ಯರು, ನಾರಾಯಣಾಚಾರ್, ಶ್ರೀನಿವಾಸ, ನರಸಿಂಹಚಾರ್, ಶ್ರೀಕಾಂತ್, ಶ್ರೀಹರಿ, ಶ್ರೀರಾಮ್, ನಿರಂಜನ್, ರವಿಮಾಸ್ಟರ್, ಸತ್ಯನಾರಾಯಣ್, ಮನು, ರಮಾಕಾಂತ, ಅಭಿನಂದನ್, ಶೋಭ, ಪುಷ್ಪ ಸೇರಿದಂತೆ ಭಕ್ತಾಧಿಗಳು ಪಾಲ್ಗೊಂಡಿದ್ದರು.

ಬಿಪಿಎಲ್ ಸಂಘದಿಂದ ಅಂಬೇಡ್ಕರ್ ಜಯಂತಿ

ಭದ್ರಾವತಿ ನ್ಯೂಟೌನ್ ಭದ್ರಾವತಿ ಪ್ರಜಾ ವಿಮೋಚನೆ ಸಂಘ(ಬಿಪಿಎಲ್)ದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಡಾ. ಬಿ.ಆರ್ ಅಂಬೇಡ್ಕರ್‌ರವರ ೧೩೧ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ವಿಐಎಸ್‌ಎಲ್ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಬಸಂತ್ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಏ. ೧೬: ನಗರದ ನ್ಯೂಟೌನ್ ಭದ್ರಾವತಿ ಪ್ರಜಾ ವಿಮೋಚನೆ ಸಂಘ(ಬಿಪಿಎಲ್)ದ ವತಿಯಿಂದ ಡಾ. ಬಿ.ಆರ್ ಅಂಬೇಡ್ಕರ್‌ರವರ ೧೩೧ನೇ ಜನ್ಮದಿನೋತ್ಸವ ಆಚರಿಸಲಾಯಿತು.
    ನ್ಯೂಟೌನ್ ಪೊಲೀಸ್ ಠಾಣಾಧಿಕಾರಿ  ದೇವರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ವಿಐಎಸ್‌ಎಲ್ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಬಸಂತ್ ಕುಮಾರ್,  ಮುಖಂಡರಾದ ಜಿ ರಾಜು, ರಾಜೇಂದ್ರ  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸಂಘದ ಗೌರವ ಅಧ್ಯಕ್ಷ ಎಸ್.ಕೆ ಸುಧೀಂದ್ರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಧ್ಯಕ್ಷ ಜಗದೀಶ ಅಧ್ಯಕ್ಷತೆ ವಹಿಸಿದ್ದರು. ಸಿಹಿ ಹಂಚಿಕೆ ಜೊತೆಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
     ಉಪಾಧ್ಯಕ್ಷರಾದ ವಿಲಿಯಂ, ಸಂಪತ್,  ಜಿ. ಗೋವಿಂದ,  ಪ್ರಧಾನ ಕಾರ್ಯದರ್ಶಿ ಶ್ಯಾಮ್, ಕಾರ್ಯಾಧ್ಯಕ್ಷ ರವಿಕುಮಾರ್, ಖಜಾಂಚಿ ಮುರಳಿಕೃಷ್ಣ, ಕಾರ್ಯದರ್ಶಿ ಸುನಿಲ್ ಕುಮಾರ್, ಲೋಕೇಶ್, ಡಿಎಸ್‌ಎಸ್ ಮುಖಂಡರಾದ ದಾಸ್, ಸಂಘಟನಾ ಕಾರ್ಯದರ್ಶಿ ಪುರುಷೋತ್ತಮ್, ರವೀಂದ್ರಪ್ಪ, ಅಜಂತ್‌ಕುಮಾರ್, ಸದಸ್ಯರುಗಳಾದ ವೆಂಕಟೇಶ್, ಶ್ರೀನಿವಾಸ್, ಶ್ರೀಕಾಂತ್, ಸಂದೀಪ್, ಅನಿಲ್, ಸಂಜೀವರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕ್ರೀಡಾಮನೋಭಾವ ಪ್ರದರ್ಶಿಸಿ ಪಂದ್ಯಾವಳಿ ಯಶಸ್ವಿಗೊಳಿಸಿ



    ಭದ್ರಾವತಿ: ಕ್ರೀಡೆಯಲ್ಲಿ ಸೋಲು ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾಮನೋಭಾವ ತೋರಿಸುವ ಮೂಲಕ ಪಂದ್ಯಾವಳಿ ಯಶಸ್ವಿಗೊಳಿಸುವಂತೆ  ಮೈಕ್ರೋ ಸ್ಮಾಲ್ ಅಂಡ್ ಮೀಡಿಯಂ ಎಂಟರ್ಪ್ರೈಸಸ್-ಪಿ.ಸಿ(ಎಂಎಸ್ಎಂಇ-ಪಿ.ಸಿ) ರಾಜ್ಯ ಘಟಕದ ಅಧ್ಯಕ್ಷ ಎಚ್.ಸಿ ರಮೇಶ್ ಹೇಳಿದರು.
       ಅವರು ಶನಿವಾರ ನಗರದ ವಿಐಎಸ್ಎಲ್ ಕ್ರೀಡಾಂಗಣದಲ್ಲಿ ದೊಣಬಘಟ್ಟ ಸೆವೆನ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾಗಿರುವ ಎರಡು ದಿನಗಳ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
     ನಗರದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
   ಕರ್ನಾಟಕ ಸ್ಟೇಟ್ ಕನ್ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ಜಿಲ್ಲಾ ಕಾರ್ಯಧ್ಯಕ್ಷ ಸುಂದರ್ ಬಾಬು ಮಾತನಾಡಿ, ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ಕೊಡುವವರು ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ  ರಮೇಶ್ ರವರು ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಕ್ರೀಡಾಪಟುಗಳು ಪಂದ್ಯಾವಳಿಯ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಹಿರಿಯ ಅಂತರಾಷ್ಟ್ರೀಯ ಕ್ರೀಡಾಪಟು ಚೆನ್ನಯ್ಯ, ಬೆಂಗಳೂರಿನ ಯುವ ಸಹಕಾರಿ ಧುರೀಣ ಡಿ. ಸುನಿಲ್,  ಮುಖಂಡರಾದ ರವಿಚಂದ್ರನ್,  ಇಮ್ರಾನ್,  ಚಂದ್ರು ದೇವರಹಳ್ಳಿ , ರಮೇಶ್ , ರವಿ, ತೋಪೇಗೌಡ ಮಹಿಳಾ ಪ್ರಮುಖರಾದ ರೇಖಾ, ಅನ್ನಪೂರ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
   ಪೊಲೀಸ್, ಮೆಸ್ಕಾಂ ,ಆರ್ ಎಎಫ್, ರೈಲ್ವೆ ಹಾಗೂ ಪಂಚಾಯತ್ ರಾಜ್ ಇಲಾಖೆಗಳ ತಂಡ ಹಾಗೂ ಶಿಕ್ಷಕರು ಮತ್ತು ವಕೀಲರು ಒಳಗೊಂಡ ಒಟ್ಟು ಎಂಟು ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ಶ್ರೀ ಸತ್ಯಸಾಯಿ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕರಾದ ಶಶಿ ಮತ್ತು ಸಂತೋಷ್ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.




Friday, April 15, 2022

ಈಜಲು ಹೋದ ವಿದ್ಯಾರ್ಥಿ ಸಾವು


    ಭದ್ರಾವತಿ, ಏ. ೧೫: ಕಾಲುವೆಯಲ್ಲಿ ಈಜಲು ಹೋದ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ರಂಗನಾಥಪುರದಲ್ಲಿ ನಡೆದಿದೆ.
    ಮೃತಪಟ್ಟ ವಿದ್ಯಾರ್ಥಿಯನ್ನು ದೊಡ್ಡೇರಿ ಅಲ್ಪಸಂಖ್ಯಾತ ವಸತಿ ಶಾಲೆಯ ವಿದ್ಯಾರ್ಥಿ ಮಹಮದ್ ಅಲ್ಹನ್(೧೬) ಎಂದು ಗುರುತಿಸಲಾಗಿದೆ. ವಸತಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದ ಅಲ್ಹನ್ ಪರೀಕ್ಷೆ ಮುಗಿಸಿಕೊಂಡು ರಜೆ ಮೇಲೆ ಮನೆಗೆ ಹಿಂದಿರುಗುವಷ್ಟರಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
    ವಿದ್ಯಾರ್ಥಿ ಅಲ್ಹನ್ ಶಿವಮೊಗ್ಗ ವಾದಿ-ಏ-ಹುದಾ ನಿವಾಸಿಯಾದ ಮಹಮದ್ ಹರೂನ್ ಪುತ್ರನಾಗಿದ್ದು, ಈತ ೬ನೇ ತರಗತಿಯಿಂದ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಪರೀಕ್ಷೆ ಮುಕ್ತಾಯಗೊಂಡ ಮರುದಿನ ಈತ ವಸತಿ ಶಾಲೆಯಿಂದ ಸ್ನೇಹಿತರೊಂದಿಗೆ ರಂಗನಾಥಪುರದ ಭದ್ರಾ ನದಿ ಕಾಲುವೆಯಲ್ಲಿ ಈಜಲು ತೆರಳಿದ್ದು, ಈ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿದ್ದಾನೆ. ೨ ದಿನಗಳ ಹಿಂದೆ ಈತನ ಮೃತ ದೇಹ ಹಕ್ಕಿಪಿಕ್ಕಿ ಕ್ಯಾಂಪ್‌ನಲ್ಲಿ ಪತ್ತೆಯಾಗಿದೆ.
    ರಜೆ ಹಿನ್ನಲೆಯಲ್ಲಿ ತಂದೆ ಹರೂನ್ ಪರೀಕ್ಷೆ ಮುಗಿದ ತಕ್ಷಣ ಮಗನನ್ನು ಮನೆಗೆ ಕರೆದೊಯ್ಯಲು ಮುಂದಾಗಿದ್ದರು. ಆದರೆ ಅಷ್ಟರಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂತರಾಷ್ಟ್ರೀಯ ಜಾನಪದ ಕಲಾವಿದ ಎಂ.ಆರ್ ರೇವಣಪ್ಪನವರ ‘ನನ್ನೊಳಗೆ’ ಕವನ ಸಂಕಲನ ಬಿಡುಗಡೆ

ಭದ್ರಾವತಿ ತಾಲೂಕಿನ ಸುಲ್ತಾನ್ ಮಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ, ಅಂತರಾಷ್ಟ್ರೀಯ ಜಾನಪದ ಕಲಾವಿದ ಎಂ.ಆರ್ ರೇವಣಪ್ಪನವರ 'ನನ್ನೊಳಗೆ' ಕವನ ಸಂಕಲನ ಬಿಡುಗಡೆ ಸಮಾರಂಭ ಹೊಸನಗರ ತಾಲೂಕಿನ ಮಾದಾಪುರದಲ್ಲಿ ನಡೆಯಿತು.
    ಭದ್ರಾವತಿ, ಏ. ೧೫: ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ತಾಲೂಕಿನ ಸುಲ್ತಾನ್ ಮಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ, ಅಂತರಾಷ್ಟ್ರೀಯ ಜಾನಪದ ಕಲಾವಿದ ಎಂ.ಆರ್ ರೇವಣಪ್ಪನವರ ‘ನನ್ನೊಳಗೆ’ ಕವನ ಸಂಕಲನ ಬಿಡುಗಡೆ ಹಾಗು ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಹೊಸನಗರ ತಾಲೂಕಿನ ಮಾದಾಪುರದಲ್ಲಿ ನಡೆಯಿತು. 
ಶಿವಮೊಗ್ಗ ಜಾನಪದ ಕಲಾ ಮತ್ತು ಸಾಹಿತ್ಯ ವೇದಿಕೆ ಹಾಗು ಮಾದಾಪುರ ಶ್ರೀ ಶನಿಪರಮೇಶ್ವರ ಯುವಕ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಎಂ.ಆರ್ ರೇವಣಪ್ಪನವರ ಮಾತೃಶ್ರೀ ಭರ್ಮಮ್ಮ ‘ನನ್ನೊಳಗೆ’ ಕವನ ಸಂಕಲನ ಬಿಡುಗಡೆಗೊಳಿಸಿದರು. 
ಹಿರಿಯ ರಾಜಕೀಯ ಮುತ್ಸದ್ದಿ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಮಾಜಿ ಸದಸ್ಯೆ ಶ್ವೇತಾ ಆರ್. ಬಂಡಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವೀರೇಶ್ ಹಾಲವಳ್ಳಿ, ಮಾಜಿ ಸದಸ್ಯೆ ಸರಸ್ವತಿ ಗಣಪತಿ, ಗ್ರಾ.ಪಂ. ಮಾಜಿ ಸದಸ್ಯ ಎಂ.ಆರ್ ಲೋಕಪ್ಪ, ಉದ್ಯಮಿ ಬಿ.ಕೆ ಜಗನ್ನಾಥ್, ಶಿಕ್ಷಕರಾದ ಯು. ಮಹಾದೇವಪ್ಪ, ಧನಂಜಯ ಮತ್ತು ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಮೋಹನ್ ಚಂದ್ರಗುತ್ತಿ ಮತ್ತು ಶ್ರೀ ಶನಿಪರಮೇಶ್ವರ ಯುವಕ ಸಂಘದ ಅಧ್ಯಕ್ಷ ಜಿ. ಹರೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಶಾಸಕ ಬಿ.ಕೆ ಸಂಗಮೇಶ್ವರ್ ಪುತ್ರ ಬಿ.ಎಸ್ ಗಣೇಶ್, ಡಿಎಸ್‌ಎಸ್ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ,  ಶಿಕ್ಷಕಿ ಭಾರತಿ ಗೋವಿಂದಸ್ವಾಮಿ, ಮಹಾಬಲೇಶ್ವರ ಹೆಗಡೆ, ಹುಚ್ಚಪ್ಪ ಮಾಸ್ಟರ್, ಲಕ್ಷ್ಮಣ್ ರಾವ್ ಬೋರತ್, ನಿಸ್ಸಾರ್ ಖಾನ್ ಕೆಂಚಾಯಿಕೊಪ್ಪ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. 
  ಜ್ಯೂನಿಯರ್ ಶಂಕರ್‌ನಾಗ್, ಜ್ಯೂನಿಯರ್ ವಿಷ್ಣುವರ್ಧನ್ ಮತ್ತು ಜ್ಯೂನಿಯರ್ ಪುನೀತ್ ರಾಜ್‌ಕುಮಾರ್ ಕಲಾವಿದರಿಂದ ಸಾಂಸ್ಕೃತಿಕ ಮನರಂಜನೆ ಕಾರ್ಯಕ್ರಮಗಳು ಜರುಗಿದವು.  ಎಂ.ಆರ್ ರೇಣಪ್ಪ ನಿರ್ದೇಶನದಲ್ಲಿ ಸಂಗ್ಯಾ ಬಾಳ್ಯ ನಾಟಕ ಶ್ರೀ ಶನಿಪರಮೇಶ್ವರ ಯುವಕ ಸಂಘದ ಕಲಾವಿದರಿಂದ ಪ್ರದರ್ಶನಗೊಂಡು ಪ್ರೇಕ್ಷಕರ ಮನಸೂರೆಗೊಂಡಿತು. 

ವೀರಶೈವ ಲಿಂಗಾಯಿತ ಸಮಾಜ ಬಲಿಷ್ಠಗೊಳ್ಳಲಿ : ಬಿ.ಕೆ ಮೋಹನ್

ಭದ್ರಾವತಿ ಹಳೇನಗರದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ತುಮಕೂರು ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರ ಜನ್ಮದಿನಾಚರಣೆ ಕಾಯಕ್ರಮದ ಪೂರ್ವಭಾವಿ ಸಭೆಯಲ್ಲಿ ವೀರಶೈವ ಲಿಂಗಾಯಿತ ಸಮಾಜದ ಮುಖಂಡ, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಮಾತನಾಡಿದರು.
    ಭದ್ರಾವತಿ, ಏ. ೧೫ : ವೀರಶೈವ ಲಿಂಗಾಯಿತರು ತಾಲೂಕಿನಲ್ಲಿ ಸುಮಾರು ೭೦ ರಿಂದ ೭೫ ಸಾವಿರ ಜನಸಂಖ್ಯೆ ಹೊಂದಿದ್ದು, ಎಲ್ಲರೂ ಒಗ್ಗಟ್ಟಾಗಿ ಬಲಿಷ್ಠ ಸಮಾಜ ಕಟ್ಟುವ ನಿಟ್ಟಿನಲ್ಲಿ ಮುಂದಾಗಬೇಕೆಂದು ಸಮಾಜದ ಮುಖಂಡ, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಹೇಳಿದರು.
    ಅವರು ಹಳೇನಗರದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ತುಮಕೂರು ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರ ಜನ್ಮದಿನಾಚರಣೆ ಕಾಯಕ್ರಮದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
    ತಾಲೂಕಿನಲ್ಲಿ ಬಹುದೊಡ್ಡ ಸಮಾಜವಾಗಿದ್ದರೂ ಸಹ ಒಗ್ಗಟ್ಟು ಕಂಡು ಬರುತ್ತಿಲ್ಲ. ಸಮಾಜದ ಎಲ್ಲಾ ಒಳಪಂಗಡಗಳು ಸಹ ತಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ತೊರೆದು ಒಗ್ಗಟ್ಟು ಪ್ರದರ್ಶಿಸಬೇಕಾಗಿದೆ. ಸಮಾಜವನ್ನು ಎಲ್ಲಾ ರೀತಿಯಿಂದಲೂ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕಾಗಿದೆ. ಸಮಾಜದ ಪ್ರತಿಯೊಬ್ಬರ ಕಷ್ಟಸುಖಗಳಿಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಬೇಕಾಗಿದೆ ಎಂದರು.
    ಸಿದ್ದಗಂಗಾ ಶ್ರೀಗಳ ಜನ್ಮದಿನಾರಣೆ ಮೇ ತಿಂಗಳಿನಲ್ಲಿ ಅದ್ದೂರಿಯಾಗಿ ಆಚರಿಸಲು ಈಗಾಗಲೇ ತೀರ್ಮಾನಿಸಲಾಗಿದ್ದು, ವಿವಿಧ ಸಮಿತಿ ಗಳನ್ನು ರಚಿಸಿ ಪೂರ್ವ ಸಿದ್ದತೆಗಳನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕೆ ಸಮಾಜದ ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
    ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅರಕೆರೆ ಎಚ್.ಎಲ್ ಷಡಾಕ್ಷರಿ, ಜಂಗಮ ಸಮಾಜದ ಅಧ್ಯಕ್ಷ ಅಡವೀಶಯ್ಯ, ಅಖಿಲ ಭಾರತ ವೀಶೈವ ಮಹಾಸಭಾ ತಾಲೂಕು ಅಧ್ಯಕ್ಷೆ ನಂದಿನಿ ಮಲ್ಲಿಕಾರ್ಜುನ್ ಮತ್ತು ಸಾಧು ವೀರಶೈವ ಸಮಾಜದ ಅಧ್ಯಕ್ಷೆ ಯಶೋಧ ವೀರಭದ್ರಪ್ಪ ಹಾಗು ಸಾಧು ವೀರಶೈವ ಸಮಾಜದ ಯುವ ಘಟಕದ ಅಧ್ಯಕ್ಷ ರವಿಕುಮಾರ್ ಸೇರಿದಂತೆ ಇನ್ನಿತರರು ವೀರಶೈವ ಲಿಂಗಾಯಿತ ಸಮಾಜವನ್ನು ಮತ್ತಷ್ಟು ಸಂಘಟಿಸುವ ಕುರಿತು ಮಾತನಾಡಿದರು.
    ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್, ನೋಳಂಬ ವೀರಶೈವ ಸಮಾಜದ ಉಪಾದ್ಯಕ್ಷ ರಾಜು, ವಕೀಲರ ಸಂಘದ ಉಪಾಧ್ಯಕ್ಷ ವಿಶ್ವನಾಥ್, ಪಂಚಮಸಾಲಿ ಸಮಾಜದ ಅಧ್ಯಕ್ಷ ಸತೀಶ್, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ಹಳೇನಗರ ವೀರಶೈವ ಸೇವಾ ಸಮಿತಿ ಅಧ್ಯಕ್ಷ ಆರ್. ಮಹೇಶ್‌ಕುಮಾರ್, ವೀರಶೈವ ಲಿಂಗಾಯಿತ ಮಹಿಳಾ ಸಮಾಜದ ಆರ್.ಎಸ್.ಶೋಭಾ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು
    ವೀರಶೈವ ಸಮಾಜ ತಾಲೂಕು ಘಟಕದ ನೂತನ ಅಧ್ಯಕ್ಷ ಕೆ.ಎಚ್.ತೀರ್ಥಯ್ಯ ಮತ್ತು ನೇಪಾಳದಲ್ಲಿ ನಡೆಯಲಿರುವ ೧೬ವರ್ಷ ಒಳಗಿನ ಅಂತರಾಷ್ಟ್ರೀಯ ಮಟ್ಟದ ಕಬ್ಬಡ್ಡಿ ಪಂದ್ಯಾವಳಿಗೆ ಆಯ್ಕೆಯಾಗಿರುವ ಬಾರಂದೂರಿನ ಬಿಜಿಎಸ್ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿ ಸಮರ್ಥ ಎಂ. ಪಾಟೀಲ್‌ರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ಸಮಾಜದ ಮುಖಂಡರಾದ ವಾಗೀಶ್ ಸ್ವಾಗತಿಸಿದರು. ಎಂ.ಪರಮೇಶ್ವರ ನಿರೂಪಿಸಿದರು. ತೀರ್ಥಯ್ಯ ಪ್ರಸ್ತಾವಿಕ ನುಡಿಗಳನ್ನಾಡಿದರು.