Sunday, April 24, 2022

ವಿಜೃಂಭಣೆಯಿಂದ ಜರುಗಿದ ಶ್ರೀ ದೊಡ್ಡಮ್ಮದೇವಿ ದೇವಸ್ಥಾನದ ಕಲಶ ಪ್ರತಿಷ್ಠಾಪನೆ

ಭದ್ರಾವತಿ ರಂಗಪ್ಪ ವೃತ್ತದ ಜೈಭೀಮ್ ನಗರದಲ್ಲಿರುವ ಶ್ರೀ ದೊಡ್ಡಮ್ಮದೇವಿ ದೇವಸ್ಥಾನದ ಕಲಶ ಪ್ರತಿಷ್ಠಾಪನೆ ಅಂಗವಾಗಿ ಶ್ರೀ ದೇವಿಗೆ ಕಲಾ ತತ್ತ್ವಾಧಿವಾಸ ಹೋಮ, ನವ ಕಲಾಭಿಷೇಕ, ಮಹಾಪೂಜೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
    ಭದ್ರಾವತಿ, ಏ. ೨೪: ರಂಗಪ್ಪ ವೃತ್ತದ ಜೈಭೀಮ್ ನಗರದಲ್ಲಿರುವ ಶ್ರೀ ದೊಡ್ಡಮ್ಮದೇವಿ ದೇವಸ್ಥಾನದ ಕಲಶ ಪ್ರತಿಷ್ಠಾಪನೆ ಭಾನುವಾರ ವಿಜೃಂಭಣೆಯಿಂದ ಜರುಗಿತು.
    ಬೆಳಿಗ್ಗೆ ಶ್ರೀ ದೇವಿಗೆ ಕಲಾ ತತ್ತ್ವಾಧಿವಾಸ ಹೋಮ, ನವ ಕಲಾಭಿಷೇಕ, ಮಹಾಪೂಜೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ  ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. ಪೊಲೀಸ್ ಉಮೇಶ್ ನೇತೃತ್ವದ ಸ್ನೇಹ ಜೀವಿ ಬಳಗದಿಂದ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
    ಶಾಸಕ ಬಿ.ಕೆ ಸಂಗಮೇಶ್ವರ್, ದಾನಿಗಳಾದ ಸುನಿಲ್, ವಿ.ಎನ್ ವೆಂಕಟೇಶ್, ಎನ್. ರಾಜು, ಆನಂದ್(ಮೆಡಿಕಲ್), ಜಿ. ಧರ್ಮಪ್ರಸಾದ್, ಜಿ. ಆನಂದಕುಮಾರ್, ಗೋಕುಲ್, ರಮೇಶ್, ಸುಹಾಸ್‌ಗೌಡ ಮತ್ತು ಮುಳ್ಕೆರೆ ಲೋಕೇಶ್, ಸೇವಾಕರ್ತರಾದ ನಗರಸಭೆ ಪೌರಾಯುಕ್ತ ಕೆ. ಪರಮೇಶ್, ಸದಸ್ಯರಾದ ಮಣಿ, ಬಿ.ಎಂ ಮಂಜುನಾಥ್, ಅನುಪಮ ಚನ್ನೇಶ್, ಜಿ.ಪಂ. ಮಾಜಿ ಸದಸ್ಯ ಎಸ್. ಮಣಿಶೇಖರ್, ಸುರೇಶ್, ಬಿ.ಕೆ ಆನಂದ್, ಎನ್. ಕೃಷ್ಣಪ್ಪ, ಗಣೇಶ್‌ರಾವ್, ನರಸಿಂಹಪ್ಪ, ಸತ್ಯ, ಚಿನ್ನಯ್ಯ ಸೇರಿದಂತೆ ಜೈಭೀಮ್ ನಗರ ಸೇರಿದಂತೆ ಸುತ್ತಮುತ್ತಲಿನ ಭಕ್ತಾಧಿಗಳು ಪಾಲ್ಗೊಂಡಿದ್ದರು.
    ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ಎನ್. ಶಿವ, ವಿ.ಎನ್ ವೆಂಕಟೇಶ್, ಅಧ್ಯಕ್ಷ ಕೆ. ಮಂಜುನಾಥ್, ಕಾರ್ಯಾಧ್ಯಕ್ಷ ಎಂ. ನಾಗರಾಜ್, ಉಪಾಧ್ಯಕ್ಷರಾದ ಎನ್. ಕುಮಾರ್, ಎನ್. ವಸಂತ, ಕರಿಗೌಡ, ಪ್ರಧಾನ ಕಾರ್ಯದರ್ಶಿ ಓ. ನರಸಿಂಹ, ಸಹ ಕಾರ್ಯದರ್ಶಿಗಳಾದ ಏಳುಮಲೈ, ಎಸ್. ರಾಜ, ಖಜಾಂಚಿ ಎನ್. ಹರೀಶ್, ಟಿ.ಎನ್ ಗುರುರಾಜ್ ಮತ್ತು ಸದಸ್ಯರು ಉಪಸ್ಥಿತರಿದ್ದರು.


ಭದ್ರಾವತಿ ರಂಗಪ್ಪ ವೃತ್ತದ ಜೈಭೀಮ್ ನಗರದಲ್ಲಿರುವ ಶ್ರೀ ದೊಡ್ಡಮ್ಮದೇವಿ ದೇವಸ್ಥಾನದ ಕಲಶ ಪ್ರತಿಷ್ಠಾಪನೆ ಭಾನುವಾರ ವಿಜೃಂಭಣೆಯಿಂದ ಜರುಗಿತು.

ಅಂಬೇಡ್ಕರ್‌ರವರ ಪುಸ್ತಕ ಜ್ಞಾನದಿಂದ ಜಗತ್ತಿನ ಶ್ರೇಷ್ಠ ಸಂವಿಧಾನ ರಚನೆ

ಶಿವಮೊಗ್ಗ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ.ಹ.ಮ ನಾಗಾರ್ಜುನ

ಛಲವಾದಿಗಳ ಸಮಾಜದ ವತಿಯಿಂದ ಡಾ. ಬಿ. ಅಂಬೇಡ್ಕರ್‌ರವರ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸಮಾಜದ ನೂತನ ಭವನ ನಿರ್ಮಾಣದ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕ, ಕಲಾವಿದ ಅಪೇಕ್ಷ ಮಂಜುನಾಥ್, ಹಿಂದಿ ಶಿಕ್ಷಕಿ ತ್ರಿವೇಣಿ, ಡಿಎಸ್‌ಎಸ್ ಸಂಸ್ಥಾಪಕ ಕಾರ್ಯದರ್ಶಿ ರಾಜು, ಕ್ರೀಡಾಪಟು ಎಂ. ನಾಗರಾಜ್ ಹಾಗು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ಭದ್ರಾವತಿ, ಏ. ೨೪: ಡಾ. ಬಿ.ಆರ್ ಅಂಬೇಡ್ಕರ್‌ರವರು ಸಂಪಾದಿಸಿದ ಪುಸ್ತಕ ಜ್ಞಾನ ಜಗತ್ತಿನ ಶ್ರೇಷ್ಠ ಸಂವಿಧಾನ ರಚನೆಗೆ ನೆರವಾಯಿತು ಎಂದು ಶಿವಮೊಗ್ಗ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ.ಹ.ಮ ನಾಗಾರ್ಜುನ ಹೇಳಿದರು.
    ಅವರು ನ್ಯೂಟೌನ್ ಜಯಶ್ರೀ ವೃತ್ತದ ಸಮೀಪ ತಾಲೂಕು ಛಲವಾದಿಗಳ ಸಮಾಜದ ವತಿಯಿಂದ ಡಾ. ಬಿ. ಅಂಬೇಡ್ಕರ್‌ರವರ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸಮಾಜದ ನೂತನ ಭವನ ನಿರ್ಮಾಣದ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಬಿ.ಆರ್ ಅಂಬೇಡ್ಕರ್‌ರವರು ವಿದೇಶದಲ್ಲಿ ಸುಮಾರು ೫೦ ಸಾವಿರ ಪುಸ್ತಕಗಳನ್ನು ಸಂಗ್ರಹಿಸಿ ಗ್ರಂಥಾಲಯ ನಿರ್ಮಾಣ ಮಾಡುವ ಜೊತೆಗೆ ಅವುಗಳ ಅಧ್ಯಯನ ನಡೆಸಿದರು. ಜೊತೆಗೆ ಸುಮಾರು ೧೫ ಸಾವಿರ ಪುಸ್ತಕಗಳನ್ನು ರಚಿಸಿದರು. ಅವರ ಪುಸ್ತಕ ಜ್ಞಾನ ದೇಶದ ಸಂವಿಧಾನ ರಚನೆಗೆ ನೆರವಾಯಿತು. ಅಂಬೇಡ್ಕರ್‌ರವರು ಹೊಂದಿದ್ದ ಅಪಾರ ಜ್ಞಾನದಿಂದಾಗಿ ಅವರು ಜಗತ್ತಿನ ಶ್ರೇಷ್ಠ ವ್ಯಕ್ತಿಗಳ ಸಾಲಿನಲ್ಲಿ ಒಬ್ಬರಾಗಿ ಗುರುತಿಸಿಕೊಳ್ಳಲು ಸಾಧ್ಯವಾಯಿತು. ಅಂಬೇಡ್ಕರ್‌ರವರ ಆಶಯದಂತೆ ದೇಶದಲ್ಲಿ ಪ್ರತಿಯೊಬ್ಬರಿಗೂ ಇಂದು ಶಿಕ್ಷಣ, ಸಂಘಟನೆ ಮತ್ತು ಹೋರಾಟ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ನಾವುಗಳು ಮುನ್ನಡೆಯಬೇಕೆಂದರು.
    ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಮಾತನಾಡಿ, ಕ್ಷೇತ್ರದಲ್ಲಿ ಛಲವಾದಿ ಸಮಾಜದವರು ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘಟಿತರಾಗಬೇಕು. ಎಲ್ಲಿಯವರೆಗೆ ಸಂಘಟಿತರಾಗುವುದಿಲ್ಲವೋ ಅಲ್ಲಿಯವರೆಗೂ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಸಾಧ್ಯವಿಲ್ಲ. ಅಲ್ಲದೆ ಸಮಾಜ ಬಲಗೊಳ್ಳುವುದಿಲ್ಲ. ಈ ಹಿನ್ನಲೆಯಲ್ಲಿ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು. ಕ್ಷೇತ್ರದಲ್ಲಿ ಛಲವಾದಿ ಸಮಾಜದವರು ಪ್ರಾಮಾಣಿಕತೆಯನ್ನು ಕಾಯ್ದುಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಪ್ರಸ್ತುತ ಹಲವಾರು ಹುದ್ದೆಗಳನ್ನು ಅಲಂಕರಿಸಲು ಸಾಧ್ಯವಾಗಿದೆ. ಈ ಸಮಾಜಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧ ಎಂದರು.
    ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಡಾ. ಟಿ. ಮಂಜುನಾಥ್ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ, ಗೌತಮ ಬುದ್ಧ ಹಾಗು ಡಾ. ಬಿ.ಆರ್ ಅಂಬೇಡ್ಕರ್‌ರವರು ತಮ್ಮ ಬದುಕನ್ನು ಸಮಾ ಸಮಾಜ ನಿರ್ಮಾಣಕ್ಕಾಗಿ ಮೀಸಲಿಡುವ ಮೂಲಕ ಶಾಶ್ವತವಾಗಿ ಉಳಿದುಕೊಂಡಿದ್ದಾರೆ. ಅವರು ಜಗತ್ತಿಗೆ ನೀಡಿರುವ ಕೊಡುಗೆಗಳನ್ನು ನಾವುಗಳು ಸ್ಮರಿಸಿಕೊಳ್ಳುವ ಜೊತೆಗೆ ಅವರ ಆಶಯದಂತೆ ಮುನ್ನಡೆಯಬೇಕಾಗಿದೆ ಎಂದರು.
    ಶಾಸಕ ಬಿ.ಕೆ ಸಂಗಮೇಶ್ವರ್ ಸಮಾಜದ ನೂತನ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು. ಸಮಾಜದ ಅಧ್ಯಕ್ಷ, ನಗರಸಭೆ ಉಪಾಧ್ಯಕ್ಷ ಚನ್ನಪ್ಪ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಇಂಜಿನಿಯರ್ ರಂಗರಾಜಪುರ ಬೌದ್ಧಧರ್ಮದ ಸಂದೇಶಗಳನ್ನು ವಾಚಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಪ್ರತಿಭಾ ಪುರಸ್ಕಾರ ನೆರವೇರಿಸಿಕೊಟ್ಟರು.
     ನಗರಸಭಾ ಸದಸ್ಯರಾದ ಉದಯಕುಮಾರ್, ಪ್ರೇಮ, ಅನ್ನಪೂರ್ಣ, ಸರ್ವಮಂಗಳ, ಕಾಂತರಾಜ್, ದೊಡ್ಡೇರಿ ಗ್ರಾ.ಪಂ. ಉಪಾಧ್ಯಕ್ಷೆ ಹೇಮಾವತಿ, ಸಿಂಗನಮನೆ ಗ್ರಾ.ಪಂ. ಸದಸ್ಯೆ ಚಂದನಮಧು, ಹಿರಿಯೂರು ಗ್ರಾ.ಪಂ. ಸದಸ್ಯ ಕಿರಣ್, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಚಿನ್ನಯ್ಯ, ಕೆ. ರಂಗನಾಥ್, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಹೇಮಾವತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಬದರಿ ನಾರಾಯಣ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಸ್ ಎಸ್ ಬೈರಪ್ಪ ಸ್ವಾಗತಿಸಿದರು. ಎ. ತಿಪ್ಪೇಸ್ವಾಮಿ ನಿರೂಪಿಸಿದರು. ಡಿ. ನರಸಿಂಹಮೂರ್ತಿ ವಂದಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ದೈಹಿಕ ಶಿಕ್ಷಕ, ಕಲಾವಿದ ಅಪೇಕ್ಷ ಮಂಜುನಾಥ್, ಹಿಂದಿ ಶಿಕ್ಷಕಿ ತ್ರಿವೇಣಿ, ಡಿಎಸ್‌ಎಸ್ ಸಂಸ್ಥಾಪಕ ಕಾರ್ಯದರ್ಶಿ ರಾಜು, ಕ್ರೀಡಾಪಟು ಎಂ. ನಾಗರಾಜ್ ಹಾಗು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

Saturday, April 23, 2022

ಛಲವಾದಿಗಳ ಸಮಾಜದ ನೂತನ ಭವನ ನಿರ್ಮಾಣಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಗುದ್ದಲಿ ಪೂಜೆ


    
ಭದ್ರಾವತಿ: ತಾಲೂಕು ಛಲವಾದಿಗಳ ಸಮಾಜದ ನೂತನ ಭವನ ನಿರ್ಮಾಣಕ್ಕೆ ಶನಿವಾರ ಶಾಸಕ ಬಿ.ಕೆ ಸಂಗಮೇಶ್ವರ್ ಗುದ್ದಲಿ ಪೂಜೆ ನೆರವೇರಿಸಿದರು. 
       ಸಮಾಜದ ಅಧ್ಯಕ್ಷ, ನಗರಸಭೆ ಉಪಾಧ್ಯಕ್ಷ ಚನ್ನಪ್ಪ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಇಂಜಿನಿಯರ್ ರಂಗರಾಜಪುರ ಬೌದ್ಧಧರ್ಮದ ಸಂದೇಶಗಳನ್ನು ವಾಚಿಸಿದರು.
ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಡಾ. ಟಿ. ಮಂಜುನಾಥ್ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.
      ಶಿವಮೊಗ್ಗ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ.ಹ.ಮ ನಾಗಾರ್ಜುನ ಉಪನ್ಯಾಸ ನಡೆಸಿಕೊಟ್ಟರು.
         ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಪ್ರತಿಭಾ ಪುರಸ್ಕಾರ ನೆರವೇರಿಸಿಕೊಟ್ಟರು.
     ನಗರಸಭಾ ಸದಸ್ಯರಾದ ಬಿ.ಕೆ ಮೋಹನ್, ಉದಯಕುಮಾರ್, ಪ್ರೇಮ, ಅನ್ನಪೂರ್ಣ, ಸರ್ವಮಂಗಳ, ಕಾಂತರಾಜ್, ದೊಡ್ಡೇರಿ ಗ್ರಾ.ಪಂ. ಉಪಾಧ್ಯಕ್ಷೆ ಹೇಮಾವತಿ, ಸಿಂಗನಮನೆ ಗ್ರಾ.ಪಂ. ಸದಸ್ಯೆ ಚಂದನಮಧು, ಹಿರಿಯೂರು ಗ್ರಾ.ಪಂ. ಸದಸ್ಯ ಕಿರಣ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಬದರಿ ನಾರಾಯಣ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಸ್ ಎಸ್ ಬೈರಪ್ಪ ಸ್ವಾಗತಿಸಿದರು. ಕೆ ತಿಪ್ಪೇಸ್ವಾಮಿ ನಿರೂಪಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ದೇಶದಲ್ಲಿ, ರಾಜ್ಯದಲ್ಲಿ ನೀರಾವರಿ ಯೋಜನೆಗಳಿಗೆ ಜೆಡಿಎಸ್ ಕೊಡುಗೆ ಅಪಾರ

ರಾಜ್ಯದ ಮುಂದಿನ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ : ಎಚ್.ಡಿ ರೇವಣ್ಣ

ಭದ್ರಾವತಿ ತಾಲೂಕಿನ ಭದ್ರಾ ಜಲಾಶಯ ಸಮೀಪದ ಬಿ.ಆರ್ ಪ್ರಾಜೆಕ್ಟ್‌ನಲ್ಲಿ ಶನಿವಾರ 'ಜನತಾ ಜಲಧಾರೆ ಯಾತ್ರೆ' ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಬಹಿರಂಗ ಸಭೆಯನ್ನು ಮಾಜಿ ಸಚಿವ ಎಚ್.ಡಿ ರೇವಣ್ಣ ಉದ್ಘಾಟಿಸಿದರು.  
    ಭದ್ರಾವತಿ, ಏ. ೨೩: ದೇಶದಲ್ಲಿ ಹಾಗು ರಾಜ್ಯದಲ್ಲಿ ನೀರಾವರಿ ಯೋಜನೆಗಳಿಗೆ ಜೆಡಿಎಸ್ ಸರ್ಕಾರ ನೀಡಿರುವ ಕೊಡುಗೆ ಅಪಾರವಾಗಿದ್ದು, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹಾಗು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರು ನೀಡಿರುವಷ್ಟು ಅನುದಾನ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ನೀಡಿಲ್ಲ ಎಂದು ಮಾಜಿ ಸಚಿವ ರೇವಣ ಹೇಳಿದರು.
    ಅವರು ಶನಿವಾರ ತಾಲೂಕಿನ ಭದ್ರಾ ಜಲಾಶಯ ಸಮೀಪದ ಬಿ.ಆರ್ ಪ್ರಾಜೆಕ್ಟ್‌ನಲ್ಲಿ 'ಜನತಾ ಜಲಧಾರೆ ಯಾತ್ರೆ' ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದರು.
    ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವುದು ೧೦೦ಕ್ಕೆ ೧೦೦ರಷ್ಟು ಸತ್ಯ. ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷಗಳು ಕಳೆದರೂ ಸಹ ಇಂದಿಗೂ ನೀರಾವರಿ ಯೋಜನೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ೫೦ ವರ್ಷಗಳ ಕಾಲ ಆಡಳಿತ ನಡೆಸಿರುವ ಕಾಂಗ್ರೆಸ್ ಹಾಗು ಆ ನಂತರ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರಗಳು ನೀರಾವರಿ ಯೋಜನೆಗಳಿಗೆ ಹೆಚ್ಚಿನ ಮಹತ್ವ ನೀಡಿಲ್ಲ. ಇವುಗಳ ಕೊಡುಗೆ ಅತ್ಯಲ್ಪವಾಗಿದ್ದು, ಜೆಡಿಎಸ್ ಪಕ್ಷ ತನ್ನ ಅಧಿಕಾರದ ಅವಧಿಯಲ್ಲಿ ಹೆಚ್ಚಿನ ಅನುದಾನಗಳನ್ನು ಬಿಡುಗಡೆಗೊಳಿಸುವ ಮೂಲಕ ಹಲವು ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಎಂದರು.
    ಜೆಡಿಎಸ್ ಅಭಿವೃದ್ಧಿ ವಿಚಾರದಲ್ಲಿ ಎಂದಿಗೂ ಯಾರೊಂದಿಗೂ ರಾಜಿ ಮಾಡಿಕೊಂಡಿಲ್ಲ. ತನ್ನದೇ ಆದ ದೃಢ ನಿರ್ಧಾರಗಳನ್ನು ಹೊಂದಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಎ ಮತ್ತು ಬಿ ಟೀಮ್‌ಗಳಾಗಿ ಹೊಂದಾಣಿಕೆ ರಾಜಕಾರಣ ಮಾಡುತ್ತಿವೆ. ಕೋಲಾರದಲ್ಲಿ ಹಿರಿಯ ರಾಜಕೀಯ ಮುತ್ಸದ್ದಿ ಕೆ.ಎಚ್ ಮುನಿಯಪ್ಪನವರನ್ನು ಹಾಗು ತುಮಕೂರಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರನ್ನು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಲೋಕಸಭಾ ಚುನಾವಣೆಯಲ್ಲಿ ಸೋಲಿಸಿವೆ ಎಂದರು ಆರೋಪಿಸಿದರು.
    ವಿಧಾನಸಭಾ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಶಾರದ ಅಪ್ಪಾಜಿ ಮಾತನಾಡಿ, ಕ್ಷೇತ್ರದಲ್ಲಿ ಮಾಜಿ ಶಾಸಕರಾದ ದಿವಂಗತ ಎಂ.ಜೆ ಅಪ್ಪಾಜಿಯವರ ಕೊಡುಗೆ ಅನನ್ಯವಾಗಿದೆ. ಅವರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ಇದಕ್ಕೆ ಸಾಕ್ಷಿಯಾಗಿದೆ. ಕ್ಷೇತ್ರದಲ್ಲಿ ಅಪ್ಪಾಜಿಯವರ ಕನಸಿನ ಹಲವಾರು ನೀರಾವರಿ ಯೋಜನೆಗಳು ಇಂದಿಗೂ ಅನುಷ್ಠಾನಗೊಳ್ಳದೆ ನೆನೆಗುದಿಗೆ ಬಿದ್ದಿವೆ. ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳುವ ಜೊತೆಗೆ ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳು ಪುನಶ್ಚೇತನಗೊಳ್ಳಬೇಕಾಗಿದೆ. ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳು ಉಳಿದುಕೊಂಡಿವೆ. ಇವುಗಳಿಗೆ ಪರಿಹಾರ ಕಂಡುಕೊಳ್ಳಬೇಕಾದರೆ ಜೆಡಿಎಸ್ ಪಕ್ಷ ಬೆಂಬಲಿಸುವ ಮೂಲಕ ಕ್ಷೇತ್ರದಿಂದ ನನ್ನನ್ನು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಬೇಕು. ಅಪ್ಪಾಜಿ ಅವರಿಗೆ ನೀಡುತ್ತಿದ್ದ ಎಲ್ಲಾ ರೀತಿಯ ಸಹಕಾರ ನನಗೂ ನೀಡಬೇಕೆಂದು ಮನವಿ ಮಾಡಿದರು.

ಕುಮಾರಸ್ವಾಮಿ ವಿಧಿ ಲಿಖಿತ..!
ಕೋಡಿಮಠದ ಶ್ರೀಗಳು ಭವಿಷ್ಯ ವಾಣಿ ನುಡಿದಿರುವ ಮೆಸೇಜ್ ಇತ್ತೀಚೆಗೆ ವಾಟ್ಸಪ್‌ನಲ್ಲಿ ಗಮನಿಸಿದ್ದೇನೆ. ಶ್ರೀಗಳು ರಾಜ್ಯದ ಮುಂದಿನ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಎಂದು ಖಚಿತವಾಗಿ ತಿಳಿಸಿದ್ದಾರೆ. ಇದು ವಿಧಿ ಲಿಖಿತವಾಗಿದ್ದು, ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ.
                                                                                                        - ಎಚ್.ಡಿ ರೇವಣ್ಣ, ಮಾಜಿ ಸಚಿವ

    ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜೆ.ಪಿ ಯೋಗೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಾಜಿ ಶಾಸಕಿ ಶಾರದ ಪೂರ್‍ಯಾನಾಯ್ಕ, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾ ಸತೀಶ್, ಪಕ್ಷದ ಯುವ ಘಟಕದ ನೂತನ ಜಿಲ್ಲಾಧ್ಯಕ್ಷ ಮಧುಕುಮಾರ್, ಯುವ ಘಟಕದ ತಾಲೂಕು ಅಧ್ಯಕ್ಷ ಎಂ.ಎ ಅಜಿತ್, ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎಸ್. ಮಣಿಶೇಖರ್, ಜೆ.ಪಿ ಯೋಗೇಶ್, ಶಿಮೂಲ್ ಮಾಜಿ ಅಧ್ಯಕ್ಷ ಡಿ. ಆನಂದ್, ನಗರಸಭೆ ವಿರೋಧ ಪಕ್ಷದ ನಾಯಕ ಬಸವರಾಜ ಬಿ. ಆನೇಕೊಪ್ಪ, ಸದಸ್ಯರಾದ ಉದಯಕುಮಾರ್, ಕೋಟೇಶ್ವರರಾವ್, ವಿಜಯ, ಸವಿತಾ, ಜಯಶೀಲ, ರೇಖಾ, ಮಂಜುಳ, ಪಲ್ಲವಿ, ನಾಗರತ್ನ, ರೂಪಾವತಿ, ಮುಖಂಡರಾದ ಡಿ.ಟಿ ಶ್ರೀಧರ್, ಮುರ್ತುಜಾಖಾನ್, ನಂಜುಂಡೇಗೌಡ, ಲೋಕೇಶ್ವರರಾವ್, ಮೈಲಾರಪ್ಪ, ಉಮೇಶ್, ಗೊಂದಿ ಜಯರಾಂ, ದಿಲೀಪ್, ಗಿರಿನಾಯ್ಡು, ಗುಣಶೇಖರ್, ಕೆಬಲ್ ಸುರೇಶ್, ಅಶೋಕ್‌ಕುಮಾರ್, ಭಾಗ್ಯಮ್ಮ, ವಿಶಾಲಾಕ್ಷಿ  ಸೇರಿದಂತೆ ಇನ್ನಿತರರು ಕೈಜೋಡಿಸಿ ಬಹಿರಂಗಸಭೆ ಯಶಸ್ವಿಗೆ ಮುಂದಾಗಿದ್ದಾರೆ.
    ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಎಂ. ರಾಜು ಸ್ವಾಗತಿಸಿದರು. ಎಚ್.ಬಿ ರವಿಕುಮಾರ್ ವಂದಿಸಿದರು. ಮಾಜಿ ಉಪಾಧ್ಯಕ್ಷೆ ಮಹಾದೇವಿ ಸಂಗಡಿಗರು ಪ್ರಾರ್ಥಿಸಿದರು.
    ಇದಕ್ಕೂ ಮೊದಲು ತಾಲೂಕಿನ ಶ್ರೀರಾಮನಗರದ ಶ್ರೀ ರಾಮೇಶ್ವರ ದೇವಸ್ಥಾನದಿಂದ ಬೆಳಿಗ್ಗೆ 'ಜನತಾ ಜಲಧಾರೆ ಯಾತ್ರೆ'ಗೆ ಚಾಲನೆ ನೀಡಲಾಯಿತು. ಮಧ್ಯಾಹ್ನ ಸುಮಾರು ೧ ಗಂಟೆಗೆ ಯಾತ್ರೆ ಬಿ.ಆರ್ ಪ್ರಾಜೆಕ್ಟ್ ತಲುಪಿತು. ನಂತರ ಭದ್ರಾ ಜಲಾಶಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ 'ಜನತಾ ಜಲಧಾರೆ ಯಾತ್ರೆ' ರಥಕ್ಕೆ ಅಭಿಷೇಕ ಸಲ್ಲಿಸಲಾಯಿತು.


ಭದ್ರಾವತಿ ತಾಲೂಕಿನ ಭದ್ರಾ ಜಲಾಶಯ ಸಮೀಪದ ಬಿ.ಆರ್ ಪ್ರಾಜೆಕ್ಟ್‌ನಲ್ಲಿ ಶನಿವಾರ 'ಜನತಾ ಜಲಧಾರೆ ಯಾತ್ರೆ' ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಬಹಿರಂಗ ಸಭೆಯಲ್ಲಿ ಮಾಜಿ ಸಚಿವ ಎಚ್.ಡಿ ರೇವಣ್ಣ, ಮಾಜಿ ಶಾಸಕಿ ಶಾರದ ಪೂರ್‍ಯನಾಯ್ಕ, ಶಾರದ ಅಪ್ಪಾಜಿ ಅವರನ್ನು ಅಭಿನಂದಿಸಲಾಯಿತು.  

Friday, April 22, 2022

‘ಜನತಾ ಜಲಧಾರೆ ಯಾತ್ರೆ’ ಬಹಿರಂಗ ಸಭೆಗೆ ಭರದ ಸಿದ್ದತೆ : ಮುಖಂಡರಲ್ಲಿ ಉತ್ಸಾಹ

ಸಭೆಯಲ್ಲಿ ಪಾಲ್ಗೊಳ್ಳಲಿರುವ ಮಾಜಿ ಪ್ರಧಾನಿ ದೇವೇಗೌಡ

    ಭದ್ರಾವತಿ, ಏ. ೨೨: ರಾಜ್ಯದ ಸಮಗ್ರ ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಗಳಿಗೆ ಆದ್ಯಾರ್ಪಣೆಗಾಗಿ ಜಾತ್ಯಾತೀತ ಜನತಾದಳ ವತಿಯಿಂದ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ 'ಜನತಾ ಜಲಧಾರೆ ಯಾತ್ರೆ' ಶುಕ್ರವಾರ ಸಂಜೆ ತಾಲೂಕಿನ ಶ್ರೀರಾಮನಗರಕ್ಕೆ ಆಗಮಿಸಿತು.  
    ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ತುಂಗಾಭದ್ರಾ ಸಂಗಮ ಸ್ಥಳದ ಸಮೀಪದ ಚಿಕ್ಕಕೂಡ್ಲಿಯಿಂದ ಯಾತ್ರೆ ಹೊಳೆಹೊನ್ನೂರು, ಕೈಮರ, ಅರಹತೊಳಲು, ಕಲ್ಲಿಹಾಳ್, ಅರಬಿಳಿಚಿ, ಕೂಡ್ಲಿಗೆರೆ ಮಾರ್ಗವಾಗಿ ಶ್ರೀರಾಮನಗರ ಪ್ರವೇಶಿಸಿತು.
ಮಾಜಿ ಪ್ರಧಾನಿ ಆಗಮನಕ್ಕೆ ಭರದ ಸಿದ್ದತೆ :
    'ಜನತಾ ಜಲಧಾರೆ ಯಾತ್ರೆ' ಅಂಗವಾಗಿ ಶನಿವಾರ ಭದ್ರಾ ಜಲಾಶಯದ ಸಮೀಪದ ಬಿ.ಆರ್ ಪ್ರಾಜೆಕ್ಟ್‌ನಲ್ಲಿ ನಡೆಯಲಿರುವ ಬಹಿರಂಗ ಸಭೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಆಗಮಿಸಲಿದ್ದಾರೆ ಈ ಹಿನ್ನಲೆಯಲ್ಲಿ ನಗರದಲ್ಲಿ ಭರದ ಸಿದ್ದತೆ ನಡೆಸಲಾಗಿದೆ.
    ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಪ್ರಥಮ ವರ್ಷದ ಪುಣ್ಯ ಸ್ಮರಣೆ ನಂತರ ಶಾರದ ಅಪ್ಪಾಜಿ ನೇತೃತ್ವದಲ್ಲಿ ನಡೆಸುತ್ತಿರುವ ಬೃಹತ್ ಬಹಿರಂಗ ಸಭೆ ಇದಾಗಿದ್ದು, ನಗರದೆಲ್ಲೆಡೆ ಜೆಡಿಎಸ್ ಪಕ್ಷದ ಧ್ವಜ, ಬಂಟಿಂಗ್ಸ್‌ಗಳು ರಾರಾಜಿಸುತ್ತಿವೆ. 'ಜನತಾ ಜಲಧಾರೆ ಯಾತ್ರೆ'ಗೆ ಸ್ವಾಗತಕೋರಲು ಪ್ರಮುಖ ವೃತ್ತಗಳಲ್ಲಿ, ರಸ್ತೆಗಳಲ್ಲಿ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ.



     ಮುಖಂಡರಲ್ಲಿ ಉತ್ಸಾಹ :
    ಕಳೆದ ಕೆಲವು ತಿಂಗಳಿನಿಂದ ಪಕ್ಷದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಅಪ್ಪಾಜಿ ಅವರೊಂದಿಗೆ ಗುರುತಿಸಿಕೊಂಡಿದ್ದ ಪ್ರಮುಖರು ಪಕ್ಷ ತೊರೆದು ಬೇರೆ ಬೇರೆ ಪಕ್ಷಗಳಿಗೆ ಸೇರ್ಪಡೆಗೊಂಡರೂ ಸಹ ಶಾರದ ಅಪ್ಪಾಜಿ  ಯಾವುದಕ್ಕೂ ಎದೆಗುಂದದೆ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದಾಗಿ ಪ್ರಸ್ತುತ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಮುಖಂಡರು, ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಾಗಿದೆ.
    ಪಕ್ಷದ ಯುವ ಘಟಕದ ನೂತನ ಜಿಲ್ಲಾಧ್ಯಕ್ಷ ಮಧುಕುಮಾರ್ ಹೆಚ್ಚು ಉತ್ಸಾಹದಿಂದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಇವರೊಂದಿಗೆ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ, ಯುವ ಘಟಕದ ತಾಲೂಕು ಅಧ್ಯಕ್ಷ ಎಂ.ಎ ಅಜಿತ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎಸ್. ಮಣಿಶೇಖರ್, ಜೆ.ಪಿ ಯೋಗೇಶ್, ಶಿಮೂಲ್ ಮಾಜಿ ಅಧ್ಯಕ್ಷ ಡಿ. ಆನಂದ್, ನಗರಸಭೆ ವಿರೋಧ ಪಕ್ಷದ ನಾಯಕ ಬಸವರಾಜ ಬಿ. ಆನೇಕೊಪ್ಪ, ಸದಸ್ಯರಾದ ಉದಯಕುಮಾರ್, ಕೋಟೇಶ್ವರರಾವ್, ವಿಜಯ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಎಚ್.ಬಿ ರವಿಕುಮಾರ್, ಎಂ. ರಾಜು, ಮುಖಂಡರಾದ ಕರಿಯಪ್ಪ, ಮುರ್ತುಜಾಖಾನ್, ನಂಜುಂಡೇಗೌಡ, ಲೋಕೇಶ್ವರರಾವ್, ಮೈಲಾರಪ್ಪ, ಉಮೇಶ್, ಗೊಂದಿ ಜಯರಾಂ, ದಿಲೀಪ್, ಗಿರಿನಾಯ್ಡು, ಗುಣಶೇಖರ್ ಸೇರಿದಂತೆ ಇನ್ನಿತರರು ಕೈಜೋಡಿಸಿ ಬಹಿರಂಗಸಭೆ ಯಶಸ್ವಿಗೆ ಮುಂದಾಗಿದ್ದಾರೆ.

ವಿಐಎಸ್‌ಎಲ್, ಎಂಪಿಎಂ ಪುನಶ್ಚೇತನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮನವಿ


ಭದ್ರಾವತಿ ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳ ಪುನಶ್ಚೇತನಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಏ. ೨೨: ನಗರದ ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳ ಪುನಶ್ಚೇತನಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಯಿತು.
    ಎರಡು ಕಾರ್ಖಾನೆಗಳನ್ನು ಪುನಶ್ಚೇತನಗೊಳಿಸುವ ಜೊತೆಗೆ ಆಧುನಿಕ ನಗರವನ್ನಾಗಿ ರೂಪಿಸಲು ನಗರಸಭೆ ೩೫ ವಾರ್ಡ್‌ಗಳಲ್ಲೂ ಪರಿಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಬಾಕಿ ಉಳಿದಿರುವ ಒಳಚರಂಡಿ ಕಾಮಗಾರಿ ಕೈಗೆತ್ತಿಕೈಗೊಳ್ಳಲು, ಉದ್ಯಾನವನಗಳ ಅಭಿವೃದ್ಧಿ, ಕೆರೆಗಳ ಸಂರಕ್ಷಣೆ ಕೈಗೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಅಮೃತ್ ೨.೦ ನಗರಸಭೆಗೆ ಮಂಜೂರಾತಿ ಮಾಡುವುದು. ಜನ್ನಾಪುರ ಸರ್ವೆ ನಂ.೭೦ರ ಸುಮಾರು ೪೫.೨೦ ಎಕರೆ ವಿಸ್ತ್ರೀರ್ಣವುಳ್ಳ ಕೆರೆಗೆ ನಗರದ ವಿವಿಧ ಭಾಗಗಳಿಂದ ಕಲ್ಮಶಗೊಂಡ ನೀರು ಸೇರ್ಪಡೆಗೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ ಕಲ್ಮಶಗೊಂಡ ನೀರು ಕೆರೆಗೆ ಸೇರ್ಪಡೆಗೊಳ್ಳದಂತೆ ತಡೆಯಲು ಕೆರೆ ಬದಿಯಲ್ಲಿ ರಾಜಕಾಲುವೆ ನಿರ್ಮಾಣ ಮಾಡಲು ನಗರಸಭೆಗೆ ಅಗತ್ಯವಿರುವ ಆರ್ಥಿಕ ನೆರವು ನೀಡುವಂತೆ ಮನವಿ ಮಾಡಲಾಗಿದೆ.
    ನಗರಸಭೆ ವ್ಯಾಪ್ತಿಯಲ್ಲಿ ಸುಮಾರು ೭೦ ಕೆರೆಗಳಲ್ಲಿ ಬೌಂಡರಿ ನಿಗದಿಪಡಿಸಲು, ಬಸಿಕಾಲುವೆ ನಿರ್ಮಾಣ ಮಾಡಲು, ಕೆರೆಗಳನ್ನು ಅಭಿವೃದ್ಧಿಪಡಿಸಲು ನಗರಸಭೆಯಲ್ಲಿ ಆರ್ಥಿಕ ಕೊರತೆ ಹಿನ್ನಲೆಯಲ್ಲಿ ತುರ್ತಾಗಿ ೫ ಕೋ. ರು. ಅನುದಾನ ನಗರಸಭೆಗೆ ಬಿಡುಗಡೆಗೊಳಿಸುವುದು. ಇದೆ ರೀತಿ ಕ್ಷೇತ್ರದ ೨೩ ಗ್ರಾಮ ಪಂಚಾಯಿತಿಗಳಲ್ಲಿರುವ ಕೆರೆಗಳನ್ನು ಅಭಿವೃದ್ಧಿಪಡಿಸಲು  ಎಲ್ಲಾ ಪಂಚಾಯಿತಿಗಳಿಗೆ ತಲಾ ೧ ಕೋ. ರು. ನಂತೆ ಒಟ್ಟು ೨೩ ಕೋ. ರು. ಬಿಡುಗಡೆಗೊಳಿಸುವಂತೆ ಒತ್ತಾಯಿಸಲಾಗಿದೆ.
    ರಾಜ್ಯದ  ಎಲ್ಲಾ ೨೨೪ ವಿಧಾನಸಭಾ ಕ್ಷೇತ್ರಗಳಲ್ಲೂ ಕೆರೆಕಟ್ಟೆಗಳ ಉತ್ಸವ ಹಾಗು ಕೊಳಚ ಪ್ರದೇಶಗಳಲ್ಲಿ ಸ್ಲಂ ನಿವಾಸಿಗಳ ದಿನಾಚರಣೆ ಆಚರಿಸಲು ಸೂಕ್ತ ಕ್ರಮ ಕೈಗೊಂಡು ಆದೇಶ ಹೊರಡಿಸುವಂತೆ ಕೋರಲಾಗಿದೆ.
    ಟ್ರಸ್ಟ್ ಛೇರ್‍ಮನ್, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್, ಮುರುಗೇಶ್ ಸೇರಿದಂತೆ ಇನ್ನಿತರರು ಮನವಿ ಸಲ್ಲಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮೆಕ್ಕೆಜೋಳ ಬೆಳೆಗೆ ‘ಲದ್ದಿ ಹುಳು’ ಬಾಧೆ : ಶೇ.೭೦ರಷ್ಟು ಬೆಳೆ ಹಾನಿ

ಭತ್ತದ ಬೆಳೆಗೂ ವ್ಯಾಪಿಸುವ ಆತಂಕ : ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲು ಸೂಚನೆ

    ಭದ್ರಾವತಿ, ಏ. ೨೨:  ತಾಲೂಕಿನ ಕೆಲವು ಭಾಗಗಳಲ್ಲಿ ಇದೀಗ ಮೆಕ್ಕೆಜೋಳ ಬೆಳೆಗೆ 'ಲದ್ದಿ ಹುಳು' ಬಾಧೆ ವ್ಯಾಪಕವಾಗಿ ಕಾಣಿಸಿಕೊಂಡಿದ್ದು, ರೈತರು ಸಂಕಷ್ಟಕ್ಕೆ ಒಳಗಾಗುವಂತಾಗಿದೆ. ಈ ನಡುವೆ 'ಲದ್ದಿ ಹುಳು' ಬಾಧೆ ಭತ್ತದ ಬೆಳೆಗೂ ವ್ಯಾಪಿಸಿಕೊಳ್ಳುವ ಆತಂಕ ಎದುರಾಗಿದ್ದು, ಕೃಷಿ ಇಲಾಖೆ ರೈತರಿಗೆ ಮುನ್ನಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಸಲಹೆ ನೀಡಿದೆ.
    ತಾಲೂಕಿನ ಕೂಡ್ಲಿಗೆರೆ ಹೋಬಳಿ ದೊಡ್ಡೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಮ್ಮೆದೊಡ್ಡಿ, ಬಸಲಿಕಟ್ಟೆ, ಬಂಡಿಗುಡ್ಡ, ದೊಡ್ಡೇರಿ ಮತ್ತು ಸುತ್ತಮುತ್ತ ಗ್ರಾಮಗಳಲ್ಲಿ ಅಡಕೆ ತೋಟಗಳಲ್ಲಿ ಮೇವಿಗಾಗಿ ಬೆಳೆದಿರುವ ಮೆಕ್ಕೆಜೋಳ ಬೆಳೆಯಲ್ಲಿ 'ಲದ್ದಿ ಹುಳು' ಬಾಧೆ ಕಾಣಿಸಿಕೊಂಡಿದ್ದು, ಶೇ.೭೦ರಷ್ಟು ಬೆಳೆ ಹಾನಿಗೊಳಗಾಗಿರುತ್ತದೆ.
    ಲದ್ದಿ ಹುಳು ಮುಂದಿನ ೪-೫ ದಿವಸಗಳಲ್ಲಿ ಭತ್ತದ ಬೆಳೆಗು ಹಾನಿ ಉಂಟುಮಾಡವ ಸಂಭವವಿದ್ದು,  ಈ ವ್ಯಾಪ್ತಿಯ ರೈತರು ಸಾಮೂಹಿಕವಾಗಿ ಹತೋಟಿ ಕ್ರಮವನ್ನು ಕೈಗೊಳ್ಳಬೇಕಾಗಿದೆ.
    ಹತೋಟಿ ಕ್ರಮಗಳು:
    ಕೀಟನಾಶಕ ಸಿಂಪಡಣೆ: ಎಮ್ಮಮ್ಕಟಿನ್ ಬೆಂಜೋಯೇಟ್ (Emmamectin Benzoate) ಕೀಟನಾಶಕವನ್ನು ಪ್ರತಿ ಔಷಧಿ ಕ್ಯಾನ್‌ಗೆ ೧೦ ಗ್ರಾಂ ಕೀಟನಾಶಕವನ್ನು ಬೇರೆಸಿ ಪ್ರತಿ ಎಕರೆಗೆ ೧೫೦ ರಿಂದ ೨೦೦ ಲೀಟರ್ ದ್ರಾವಣ ಸಿಂಪಡಿಸಬೇಕು.
    ವಿಷಪ್ರಾಶನ:  ೧೦ ಕೆಜಿ ಅಕ್ಕಿ  ತೌಡು, ೨ ಕೆಜಿ ಬೆಲ್ಲ , ೨೫೦ ಎಂ.ಎಲ್  ಕ್ಲೋರೋಪೈರಿಫಾಸ್ ಕ್ರಿಮಿನಾಶಕ ಹಾಗೂ ನೀರು.
    ಮಾಡುವ ವಿಧಾನ: ೨ ಕೆಜಿ ಬೆಲ್ಲವನ್ನು ೫ ಲೀಟರ್ ನೀರಿನಲ್ಲಿ ಕರಗಿಸಿ ೧೦ ಕೆಜಿ ಅಕ್ಕಿ ತೌಡಿಗೆ ಸೇರಿಸಿ ಚನ್ನಾಗಿ ಬೇರಿಸಿ, ೨೫೦ ಎಂ.ಎಲ್ ಕ್ಲೋರೋಪೈರಿಫಾಸ್ ಕ್ರಿಮಿನಾಶಕ ಮಿಶ್ರಣಮಾಡಿ ೨೪ ಗಂಟೆಗಳ ಕಾಲ ಗಾಳಿ ಆಡದಂತೆ ಚೀಲದಲ್ಲಿ ಕಟ್ಟಿ ಇಡುವುದು. ಮಾರನೇ ದಿನ ಸಂಜೆ ೪ ಗಂಟೆ ನಂತರ ಈ ವಿಷಪ್ರಾಶನವನ್ನು ಉಂಡೆ ಮಾಡಿ ಒಂದು ಎಕರೆ ಜಮೀನಿನಲ್ಲಿ ಇಡುವುದು.
    ಹೆಚ್ಚಿನ ಮಾಹಿತಿಗೆ ಕೂಡ್ಲಿಗೆರೆ ಭಾಗದ ಕೃಷಿ ಆಧಿಕಾರಿ ಮೊ: ೮೨೭೭೯೩೨೬೫೦ ಅಥವಾ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಮೊ: ೭೮೯೨೪೨೫೪೫೫ ಸಂಪರ್ಕಿಸಬಹುದಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.


ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಹೋಬಳಿ ದೊಡ್ಡೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಮ್ಮೆದೊಡ್ಡಿ, ಬಸಲಿಕಟ್ಟೆ, ಬಂಡಿಗುಡ್ಡ, ದೊಡ್ಡೇರಿ ಮತ್ತು ಸುತ್ತಮುತ್ತ ಗ್ರಾಮಗಳಲ್ಲಿ ಅಡಕೆ ತೋಟಗಳಲ್ಲಿ ಮೇವಿಗಾಗಿ ಬೆಳೆದಿರುವ ಮೆಕ್ಕೆಜೋಳ ಬೆಳೆಯಲ್ಲಿ 'ಲದ್ದಿ ಹುಳು' ಬಾಧೆ ಕಾಣಿಸಿಕೊಂಡಿದ್ದು, ಶೇ.೭೦ರಷ್ಟು ಬೆಳೆ ಹಾನಿಗೊಳಗಾಗಿರುತ್ತದೆ.