ಬೇಕಾಬಿಟ್ಟಿಯಾಗಿ ಆಸ್ತಿ ತೆರಿಗೆ ಹೆಚ್ಚಿಸಿ ನಿವಾಸಿಗಳ ಶೋಷಣೆ
ಭದ್ರಾವತಿ ನಗರಸಭೆ ಮುಂಭಾಗ ಸೋಮವಾರ ಮನೆ ಮಾಲೀಕರ ಸಂಘದ ವತಿಯಿಂದ ಆಸ್ತಿ ತೆರಿಗೆ ಹೆಚ್ಚಳ ವಿರೋಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ, ಮೇ. ೯: ಇಲ್ಲಿನ ನಗರಸಭೆಗೆ ಇಲ್ಲಿನ ನಿವಾಸಿಗಳು ಮಾಲೀಕರು, ಆದರೆ ನಗರಸಭೆಯಲ್ಲಿ ಕೆಲಸ ಮಾಡುವವರು ನಿವಾಸಿಗಳನ್ನು ಶೋಷಿಸುವ ಮೂಲಕ ರಾಜರಂತೆ ವರ್ತಿಸುತ್ತಿದ್ದಾರೆ. ಈ ನಡುವೆ ನಿವಾಸಿಗಳ ಸಮಸ್ಯೆಗಳನ್ನು ಅರಿತು ಪೂರಕವಾಗಿ ಸ್ಪಂದಿಸಬೇಕಾದ ಜನಪ್ರತಿನಿಧಿಗಳು ಮೌನವಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಅಸಮಾಧಾನ ವ್ಯಕ್ತಪಡಿಸಿದರು.
ಅವರು ಸೋಮವಾರ ಮನೆ ಮಾಲೀಕರ ಸಂಘದ ವತಿಯಿಂದ ಆಸ್ತಿ ತೆರಿಗೆ ಹೆಚ್ಚಳ ವಿರೋಧಿ ಹಮ್ಮಿಕೊಳ್ಳಲಾಗಿದ್ದ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದರು.
ನಾವುಗಳು, ನಮ್ಮ ಅಗತ್ಯಗಳಿಗಾಗಿ ರೂಪಿಸಿಕೊಂಡಿರುವ ವ್ಯವಸ್ಥೆಯಲ್ಲಿ ನಗರಸಭೆ ಸಹ ಒಂದಾಗಿದ್ದು, ನಗರಸಭೆಗೆ ಮಾಲೀಕರು ನಾವುಗಳಾಗಿದ್ದೇವೆ. ನಮ್ಮಿಂದಲ್ಲೇ ನಗರಸಭೆ ನಡೆಯುತ್ತಿದ್ದು, ಇದನ್ನು ಅರ್ಥ ಮಾಡಿಕೊಳ್ಳದ ಅಧಿಕಾರಿಗಳು ಬೇಕಾಬಿಟ್ಟಿಯಾಗಿ ಆಸ್ತಿ ತೆರಿಗೆ ಹೆಚ್ಚಳ ಮಾಡುವ ಮೂಲಕ ಶೋಷಿಸುತ್ತಿರುವುದು ಸರಿಯಲ್ಲ ಎಂದರು.
ನಮ್ಮಿಂದ ಆಯ್ಕೆಯಾದ ವಾರ್ಡ್ ಸದಸ್ಯರುಗಳು ನಿವಾಸಿಗಳ ಸಮಸ್ಯೆಗಳನ್ನು ಬಗೆಹರಿಸುವ ಹೊಣೆಗಾರಿಕೆ ಹೊಂದಿದ್ದಾರೆ. ಆದರೆ ಇವರು ಆಸ್ತಿ ತೆರಿಗೆ ಹೆಚ್ಚಳ ವಿರೋಧಿಸುವ ಬದಲು ಅಧಿಕಾರಿಗಳ ಬೆಂಬಲಕ್ಕೆ ಮುಂದಾಗಿದ್ದಾರೆ. ಮೊದಲು ಆಸ್ತಿ ತೆರಿಗೆ ಕಡಿಮೆ ಮಾಡುವ ನಿಟ್ಟಿನಲ್ಲಿ ಸಾಮಾನ್ಯ ಸಭೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ವಿಶ್ವ ಹಿಂದೂ ಪರಿಷತ್ ಹಾ. ರಾಮಪ್ಪ ಮಾತನಾಡಿ, ನಗರಸಭೆಗೆ ಆಸ್ತಿ ತೆರಿಗೆ ಪಾವತಿಸಲು ಯಾರಿಗೂ ವಿರೋಧವಿಲ್ಲ. ಆದರೆ ಬೇಕಾಬಿಟ್ಟಿಯಾಗಿ ತೆರಿಗೆ ಹೆಚ್ಚಳ ಮಾಡಿರುವುದು ಸರಿಯಲ್ಲ. ತೆರಿಗೆ ಹೆಚ್ಚಳ ಮಾಡದಂತೆ ಹಲವಾರು ಬಾರಿ ಮನವಿ ಮಾಡಿದ್ದರೂ ಸಹ ಪೂರಕವಾಗಿ ಸ್ಪಂದಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಈ ಹಿಂದಿನ ಪೌರಾಯುಕ್ತ ಮನೋಹರ್‌ರವರು ವರ್ಗಾವಣೆಗೊಂಡ ನಂತರ ನಗರಸಭೆ ಆಡಳಿತ ವ್ಯವಸ್ಥೆ ಹದಗೆಟ್ಟಿದೆ. ಮೊದಲು ಅಧಿಕಾರಿಗಳು ನಿವಾಸಿಗಳ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಹೆಚ್ಚಳ ಮಾಡಿರುವ ಆಸ್ತಿ ತೆರಿಗೆಯನ್ನು ತಕ್ಷಣ ಹಿಂಪಡೆಯಬೇಕೆಂದು ಆಗ್ರಹಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಆರ್. ಕರುಣಾಮೂರ್ತಿ ಮಾತನಾಡಿ, ನಗರಸಭೆ ಆಡಳಿತ ಆಸ್ತಿ ತೆರಿಗೆ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಜನರಿಗೆ ತೊಂದರೆ ಕೊಡುವ ನಿಟ್ಟಿನಲ್ಲಿ ತೊಡಗಿದೆ. ಅಧಿಕಾರಿಗಳಿಗೆ ಒಳ್ಳೆಯ ಕಾರ್ಯ ಮಾಡುವ ಮನಸ್ಥಿತಿ ಇಲ್ಲವಾಗಿದೆ. ನಾವು ಮಾಡುವ ಕೆಲಸ ಮುಂದಿನ ದಿನಗಳಲ್ಲಿ ನೆನಪು ಮಾಡಿಕೊಳ್ಳುವಂತಿರಬೇಕು. ಈ ನಿಟ್ಟಿನಲ್ಲಿ ಆಲೋಚಿಸಿ ಕೆಲಸ ಮಾಡಿದ್ದಲ್ಲಿ ಎಲ್ಲವೂ ಸಾಧ್ಯ ಎಂದರು.
ಸಂಘದ ಅಧ್ಯಕ್ಷ ಟಿ.ಜಿ ಬಸವರಾಜಯ್ಯ ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿದ್ದರು. ಆಮ್ ಆದಿ ಪಕ್ಷದ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್, ಪರಮೇಶ್ವರಚಾರ್, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಮನೆ ಮಾಲೀಕರ ಸಂಘದ ಗೌರವ ಸಲಹೆಗಾರ ಎಲ್.ವಿ ರುದ್ರಪ್ಪ, ಗೌರವಾಧ್ಯಕ್ಷ ಆರ್. ಇಂದುಶೇಖರಯ್ಯ, ಉಪಾಧ್ಯಕ್ಷ ಜಿ. ರಾಮು, ಕಾರ್ಯದರ್ಶಿ ಎನ್. ರಘುನಾಥರಾವ್, ಸಹಕಾರ್ಯದರ್ಶಿ ಡಿ.ಕೆ ಮಹಾಬೇಲೇಶ್ವರ, ಖಜಾಂಚಿ ಆರ್. ಸತ್ಯನಾರಾಯಣರೆಡ್ಡಿ ಹಾಗು ನಿರ್ದೇಶಕರುಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರ ಪಾಲ್ಗೊಂಡಿದ್ದರು.