Friday, May 20, 2022

ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ : ಸರ್ಕಾರಕ್ಕೆ ಮನವಿ

 ನ್ಯಾ.ಎಚ್.ಎನ್ ನಾಗಮೋಹನ್ ದಾಸ್‌ರವರ ಏಕ ಸದಸ್ಯ ಆಯೋಗದ ವರದಿ ಜಾರಿಗೊಳಿಸಿ ಪರಿಶಿಷ್ಟ ಜಾತಿ ಹಾಗು ಪಂಗಡದವರ ಮೀಸಲಾತಿ ಹೆಚ್ಚಿಸುವಂತೆ ಆಗ್ರಹಿಸಿ ಶುಕ್ರವಾರ ಭದ್ರಾವತಿಯಲ್ಲಿ ನಗರ ಮತ್ತು ಗ್ರಾಮಾಂತರ ಸ್ವಾಭಿಮಾನಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾಸಮಿತಿ ವತಿಯಿಂದ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಿ ಶಿರಸ್ತೇದಾರ್ ರಾಧಾಕೃಷ್ಣ ಭಟ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಮೇ. ೨೦: ನ್ಯಾ.ಎಚ್.ಎನ್ ನಾಗಮೋಹನ್ ದಾಸ್‌ರವರ ಏಕ ಸದಸ್ಯ ಆಯೋಗದ ವರದಿ ಜಾರಿಗೊಳಿಸಿ ಪರಿಶಿಷ್ಟ ಜಾತಿ ಹಾಗು ಪಂಗಡದವರ ಮೀಸಲಾತಿ ಹೆಚ್ಚಿಸುವಂತೆ ಆಗ್ರಹಿಸಿ ಶುಕ್ರವಾರ ನಗರ ಮತ್ತು ಗ್ರಾಮಾಂತರ ಸ್ವಾಭಿಮಾನಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾಸಮಿತಿ ವತಿಯಿಂದ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
    ಈ ಸಂದರ್ಭದಲ್ಲಿ ಮಾತನಾಡಿದ ಪ್ರಮುಖರು, ರಾಜ್ಯದಲ್ಲಿ ಪರಿಶಿಷ್ಟ ಜಾತಿ ಹಾಗು ಪಂಗಡಗಳ ಜನಸಂಖ್ಯೆಯಲ್ಲಿ ಹೆಚ್ಚಳವಾಗಿದ್ದರೂ ಸಹ ಮೀಸಲಾತಿ ಹೆಚ್ಚಳ ಮಾಡಿಲ್ಲ. ರಾಜ್ಯದಲ್ಲಿ ೧೯೬೧ರ ಜನಗಣತಿಯಲ್ಲಿ ಪರಿಶಿಷ್ಟ ಪಂಗಡದವರ ಜನಸಂಖ್ಯೆ ೧,೯೨,೦೯೫(ಶೇ.೦.೮೧) ಇದ್ದು, ಮುಂದಿನ ೫ ಜನಗಣತಿಯಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ೨೦೧೧ರಲ್ಲಿ ೪೨,೪೮,೯೮೭ ಜನಸಂಖ್ಯೆ ಇದ್ದು, ೧೯೬೧ರ ಜನಗಣತಿಗೆ ಹೋಲಿಕೆ ಮಾಡಿದ್ದಲ್ಲಿ ಶೇ.೨೨.೧೧ರಷ್ಟು  ಹೆಚ್ಚಾಗಿದೆ. ಇದೆ ರೀತಿ ಪರಿಶಿಷ್ಟ ಜಾತಿ ಜನಸಂಖ್ಯೆ ಸಹ ಹೆಚ್ಚಾಗಿದ್ದು, ೨೦೧೧ರ ಜನಗಣತಿಯಂತೆ ರಾಜ್ಯದಲ್ಲಿ ೧,೦೪,೭೪,೯೯೨ ಜನಸಂಖ್ಯೆ ಹೊಂದಿದೆ.  ಸರ್ಕಾರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡಿಲ್ಲ. ಇದರಿಂದಾಗಿ ಪರಿಶಿಷ್ಟ ಜಾತಿ ಹಾಗು ಪಂಗಡದವರು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಪ್ರಸ್ತುತ ಪರಿಶಿಷ್ಟ ಜಾತಿಗೆ ಶೇ.೧೫ರಷ್ಟು ಹಾಗು ಪರಿಶಿಷ್ಟ ಪಂಗಡಕ್ಕೆ ಶೇ.೩ರಷ್ಟು ಮೀಸಲಾತಿ ಇದ್ದು, ಮೀಸಲಾತಿ ಹೆಚ್ಚಿಸುವಂತೆ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನಲೆಯಲ್ಲಿ ಹರಿಹರ ತಾಲೂಕಿನ ರಾಜನಹಳ್ಳಿಯ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಯವರು ೨೦೧೯ರಲ್ಲಿ ಮೀಸಲಾತಿ ಹೆಚ್ಚಿಸುವಂತೆ ಆಗ್ರಹಿಸಿ ರಾಜಧಾನಿ ಬೆಂಗಳೂರಿಗೆ ಪಾದಯಾತ್ರೆ ನಡೆಸಿ ಬೃಹತ್ ಸಮಾವೇಶ ಆಯೋಜಿಸುವ ಮೂಲಕ ಸರ್ಕಾರದ ಗಮನ ಸೆಳೆದಿದ್ದರು. ಸರ್ಕಾರ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್ ನಾಗಮೋಹನ್ ದಾಸ್‌ರವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗವನ್ನು ರಚಿಸಿತ್ತು. ಆಯೋಗ ಜುಲೈ, ೨೦೨೦ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆದರೆ ಸರ್ಕಾರ ಆಯೋಗದ ವರದಿಯನ್ನು ಇದುವರೆಗೂ ಜಾರಿಗೊಳಿಸಿರುವುದಿಲ್ಲ. ಇದೀಗ ವರದಿಯನ್ನು ನಿವೃತ್ತ ನ್ಯಾಯಮೂರ್ತಿ ಸುಭಾಷ್ ಆಡಿಯವರ ತ್ರಿ ಸದಸ್ಯ ಸಮಿತಿಗೆ ಒಪ್ಪಿಸಿ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
    ಸರ್ಕಾರ ತಕ್ಷಣ ಪರಿಶಿಷ್ಟ ಜಾತಿಯವರಿಗೆ ಶೇ.೧೫ರಿಂದ ಶೇ.೧೭ಕ್ಕೆ ಹಾಗು ಪರಿಶಿಷ್ಟ ಪಂಗಡದವರಿಗೆ ಶೇ.೩ರಿಂದ ೭.೫ಕ್ಕೆ ಮೀಸಲಾತಿ ಹೆಚ್ಚಿಸಬೇಕು. ನ್ಯಾ.ಎಚ್.ಎನ್ ನಾಗಮೋಹನ್ ದಾಸ್‌ರವರ ಏಕ ಸದಸ್ಯ ಆಯೋಗದ ವರದಿ ಜಾರಿಗೊಳಿಸಬೇಕು. ನ್ಯಾ. ಸುಭಾಷ್ ಆಡಿಯವರ ತ್ರಿ ಸದಸ್ಯ ಸಮಿತಿ ರದ್ದುಪಡಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನಾ ಮೆರವಣಿಗೆ ಆರಂಭಕ್ಕೂ ಮೊದಲು ನಗರದ ಬಿ.ಎಚ್ ರಸ್ತೆ ಅಂಡರ್ ಬ್ರಿಡ್ಜ್ ಬಳಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
    ಶ್ರೀ ಮಹರ್ಷಿ ವಾಲ್ಮೀಕಿ ಸಮಾಜದ ನಗರ ಘಟಕದ ಅಧ್ಯಕ್ಷ ಬಸವರಾಜ ಬಿ ಆನೇಕೊಪ್ಪ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ, ಜಿಲ್ಲಾ ಸಂಚಾಲಕ ಚಿನ್ನಯ್ಯ, ಕೆ. ರಂಗನಾಥ್, ಎಪಿಎಂಸಿ ಮಾಜಿ ನಿರ್ದೇಶಕ ಎಂ.ಎಸ್ ಬಸವರಾಜಪ್ಪ, ಶ್ರೀ ಮಹರ್ಷಿ ವಾಲ್ಮೀಕಿ ಸಮಾಜದ ಗ್ರಾಮಾಂತರ ಅಧ್ಯಕ್ಷ ಎಲ್. ರಂಗಪ್ಪ, ದಲಿತ ನೌಕರರ ಒಕ್ಕೂಟದ ತಾಲೂಕು ಅಧ್ಯಕ್ಷ ಎಸ್.  ಉಮಾ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಬಂಜಾರ ಯುವಕರ ವೇದಿಕೆ ಅಧ್ಯಕ್ಷ ಕೃಷ್ಣನಾಯ್ಕ, ಪ್ರಮುಖರಾದ ಲಕ್ಷ್ಮಣಪ್ಪ, ಶ್ರೀಧರ್, ಶೇಖರಪ್ಪ, ಸುಧಾಮಣಿ, ಶಿವಾನಂದ, ಉಜ್ಜನಿಪುರ ವೆಂಕಟೇಶ್, ವಿವೇಕ್ ಸೇರಿದಂತೆ ಇನ್ನಿತರರು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
    ಮೆರವಣಿಗೆ ನಗರದ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಅಂಬೇಡ್ಕರ್ ವೃತ್ತದಿಂದ ಆರಂಭಗೊಂಡು ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ, ರಂಗಪ್ಪ ವೃತ್ತ ಮೂಲಕ ತಾಲೂಕು ಕಛೇರಿ ತಲುಪಿತು. ನಂತರ ಶಿರಸ್ತೇದಾರ್ ರಾಧಾಕೃಷ್ಣ ಭಟ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.




ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ವಿದ್ಯುತ್ ಪೂರೈಕೆಯಲ್ಲಿ ಏರುಪೇರು : ಎಲೆಕ್ಟ್ರಾನಿಕ್ ಉಪಕರಣಗಳಿಗೆ ಹಾನಿ

ಮಳಿಗೆಗಳ ಮಾಲೀಕರ ಸಂಕಷ್ಟಕ್ಕೆ ಸ್ಪಂದಿಸಿದ ಯುವ ಮುಖಂಡ ಬಿ.ಎಸ್ ಗಣೇಶ್  


ಭದ್ರಾವತಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ವಿದ್ಯುತ್ ಸರಬರಾಜಿನಲ್ಲಿ ಏರುಪೇರು ಉಂಟಾಗುತ್ತಿದ್ದು, ಮಳಿಗೆಗಳ ಮಾಲೀಕರ ಸಮಸ್ಯೆಗೆ ಸ್ಪಂದಿಸಿರುವ ಯುವ ಮುಖಂಡ ಬಿ.ಎಸ್ ಗಣೇಶ್ ನಿಲ್ದಾಣದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು.
    ಭದ್ರಾವತಿ, ಮೇ. ೨೦: ಕರ್ನಾಟಕ ರಸ್ತೆ ಸಾರಿಗೆ ನಿಗಮದ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ವಿದ್ಯುತ್ ಪೂರೈಕೆಯಲ್ಲಿ ಏರುಪೇರು ಉಂಟಾಗುತ್ತಿದ್ದು, ಇದರಿಂದಾಗಿ ನಿಲ್ದಾಣದಲ್ಲಿರುವ ಮಳಿಗೆಗಳಲ್ಲಿ ವಿದ್ಯುತ್ ಉಪಕರಣಗಳು ಹಾನಿಗೊಳಗಾಗಿ ನಷ್ಟ ಉಂಟಾಗಿರುವ ಘಟನೆ ನಡೆದಿದೆ.
    ನಿಲ್ದಾಣದಲ್ಲಿ ವಿದ್ಯುತ್ ಅಸಮರ್ಪಕವಾಗಿ ಸಂಪರ್ಕಗೊಂಡಿರುವ ಹಿನ್ನಲೆಯಲ್ಲಿ ಕೆಲವು ದಿನಗಳಿಂದ ಏಕಾಏಕಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಪ್ರವಹಿಸುತ್ತಿದೆ. ಇದರಿಂದಾಗಿ ಜೆರಾಕ್ಸ್, ಪ್ರಿಂಟರ್, ಲ್ಯಾಪ್‌ಟಾಪ್, ಫ್ರಿಡ್ಜ್, ಕಂಪ್ಯೂಟರ್, ಮಾನಿಟರ್, ಯು.ಪಿ.ಯು, ಮೊಬೈಲ್ ಚಾರ್ಜರ್ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ ಉಪಕರಣಗಳು ಹಾನಿಗೊಳಗಾಗಿ ಲಕ್ಷ ರು. ನಷ್ಟ ಉಂಟಾಗಿದೆ. ಅಲ್ಲದೆ ವಿದ್ಯುತ್ ಕಟ್ಟಡಕ್ಕೂ ಪ್ರವಹಿಸುತ್ತಿದ್ದು, ಇದರಿಂದಾಗಿ ಮಳಿಗೆಗಳ ಮಾಲೀಕರು ಆತಂಕಕ್ಕೆ ಒಳಗಾಗಿದ್ದಾರೆ.
ಮಳಿಗೆಗಳ ಮಾಲೀಕರ ಸಮಸ್ಯೆಗೆ ಸ್ಪಂದಿಸಿರುವ ಯುವ ಮುಖಂಡ ಬಿ.ಎಸ್ ಗಣೇಶ್ ನಿಲ್ದಾಣದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದ್ದಾರೆ.
    ಕೆಎಸ್‌ಆರ್‌ಟಿಸಿ ಅಧಿಕಾರಿಗಳಾದ ಒಡೆಯರ್, ಸುರೇಶ್‌ಬಾಬು, ಶ್ರೀನಿವಾಸ್, ರಾಮಚಂದ್ರ ಮತ್ತು ಫಾರೂಕ್ ಅವರೊಂದಿಗೆ ಸುಮಾರು ೨ ಗಂಟೆಗೂ ಹೆಚ್ಚು ಸಮಯ ಮಾತುಕತೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಳಿಗೆಗಳ ಮಾಲೀಕರು ತಮ್ಮ ಅಳಲನ್ನು ತೋರ್ಪಡಿಸಿಕೊಂಡಿದ್ದಾರೆ. ಬಿಪಿಎಲ್ ಸಂಘದ ಅಧ್ಯಕ್ಷ ಜಗದೀಶ್, ಕಾರ್ಯದರ್ಶಿ ಸುನಿಲ್ ಕುಮಾರ್, ಮೀನುಗಾರರ ಸಂಘದ ಅಧ್ಯಕ್ಷ ಮುರುಗನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮೇ.೨೧ರಂದು ಸರ್ಕಾರಿ ನೌಕರರ ಸಂಘದ ಸರ್ವ ಸದಸ್ಯರ ಸಭೆ, ಮಹಿಳಾ ದಿನಾಚರಣೆ


    ಭದ್ರಾವತಿ, ಮೇ. ೨೦: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಸರ್ವ ಸದಸ್ಯರ ಸಭೆ ಹಾಗು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮೇ.೨೧ರಂದು ಸಂಜೆ ೫.೩೦ಕ್ಕೆ ಹೊಸ ಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಆವರಣದಲ್ಲಿ ನಡೆಯಲಿದೆ.
    ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ ಸನ್ಮಾನ ಹಾಗು ಬಹುಮಾನ ವಿತರಣೆ ನೆರವೇರಿಸಿಕೊಡಲಿದ್ದಾರೆ. ಸಂಘದ ತಾಲೂಕು ಶಾಖೆ ಅಧ್ಯಕ್ಷ ಬಿ. ಸಿದ್ದಬಸಪ್ಪ ಅಧ್ಯಕ್ಷತೆ ವಹಿಸಲಿದ್ದು, ರಾಜ್ಯ ಉಪಾಧ್ಯಕ್ಷ ಆರ್. ಮೋಹನ್‌ಕುಮಾರ್, ಜಿಲ್ಲಾ ಕಾರ್ಯದರ್ಶಿ ಡಿ.ಟಿ ಕೃಷ್ಣಮೂರ್ತಿ, ಸಹಾಯಕ ಪೊಲೀಸ್ ಅಧೀಕ್ಷಕ ಜಿತೇಂದ್ರಕುಮಾರ್ ದಯಾಮಾ, ಪ್ರಸೂತಿ ತಜ್ಞೆ ಡಾ. ವೀಣಾ ಭಟ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.

Thursday, May 19, 2022

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ

ಶಾಲು ಹೊದಿಸಿ, ಹಾರ ಹಾಕಿ ಸಿಹಿ ತಿನಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ


ಭದ್ರಾವತಿ ತಾಲೂಕಿನಲ್ಲಿ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಆಯಾ ವಿದ್ಯಾಸಂಸ್ಥೆಗಳಿಗೆ ಭೇಟಿ ನೀಡಿ ಸನ್ಮಾನಿಸಿ ಅಭಿನಂದಿಸಿದರು.
    ಭದ್ರಾವತಿ, ಮೇ. ೧೯: ತಾಲೂಕಿನಲ್ಲಿ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಆಯಾ ವಿದ್ಯಾಸಂಸ್ಥೆಗಳಿಗೆ ಭೇಟಿ ನೀಡಿ ಸನ್ಮಾನಿಸಿ ಅಭಿನಂದಿಸಿದರು.
    ನಗರದ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಬಿ. ಪ್ರೇರಣಾ ೬೨೫ಕ್ಕೆ ೬೨೫ ಅಂಕಗಳನ್ನು ಪಡೆದುಕೊಂಡಿರುವ ಹಿನ್ನಲೆಯಲ್ಲಿ ವಿದ್ಯಾಸಂಸ್ಥೆಗೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ವಿದ್ಯಾರ್ಥಿನಿಗೆ ಶಾಲು ಹೊದಿಸಿ, ಹಾರ ಹಾಕುವ ಮೂಲಕ ಸನ್ಮಾನಿಸಿ ಅಭಿನಂದಿಸಿದರು.
    ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿನಿಯ ಸಾಧನೆಗೆ ಬೆನ್ನೆಲುಬಾಗಿ ನಿಂತಿರುವ ಪೋಷಕರು, ವಿದ್ಯಾ ಸಂಸ್ಥೆಯ ಶಿಕ್ಷಕರು, ಸಿಬ್ಬಂದಿ ವರ್ಗದವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಬಾರಿ ತುಂಬಾ ಸಂತೋಷದ ವಿಚಾರವೆಂದರೆ ತಾಲೂಕಿನ ಇಬ್ಬರು ವಿದ್ಯಾರ್ಥಿನಿಯರು ೬೨೫ಕ್ಕೆ ೬೨೫ ಅಂಕಗಳನ್ನು ಪಡೆದು ಸಾಧನೆ ಮಾಡುವ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದಾರೆ. ಅಲ್ಲದೆ ಬಹುತೇಕ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಪಡೆದುಕೊಂಡಿದ್ದಾರೆ. ಅದರಲ್ಲೂ ಅತಿಹೆಚ್ಚು ಅಂಕ ಪಡೆದ ಹೆಚ್ಚಿನವಿದ್ಯಾರ್ಥಿಗಳು ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯಲ್ಲಿರುವುದು ಹೆಮ್ಮೆಯ ವಿಚಾರವಾಗಿದೆ ಈ ಹಿನ್ನಲೆಯಲ್ಲಿ ಸಾಧನೆಗೆ ಸಹಕರಿಸಿದ ಎಲ್ಲರನ್ನು ಅಭಿನಂದಿಸುತ್ತೇನೆ ಎಂದರು.
    ಸಾಧನೆ ಹಿಂದೆ ಕುಟುಂಬ ವರ್ಗದವರ ಪರಿಶ್ರಮ ಹೆಚ್ಚು :
    ಉಪನ್ಯಾಸಕಿ ಶಿಲ್ಪ ಹಾಗು ಬಾಲಕೃಷ್ಣ ದಂಪತಿ ಪುತ್ರಿ, ೬೨೫ಕ್ಕೆ ೬೨೫ ಅಂಕ ಪಡೆದುಕೊಂಡಿರುವ ಪ್ರೇರಣಾ .ಬಿ ಮಾತನಾಡಿ, ನನ್ನ ಸಾಧನೆ ಹಿಂದೆ ತಾಯಿ-ತಂದೆ ಹಾಗು ಕುಟುಂಬ ವರ್ಗದವರ ಪರಿಶ್ರಮ ಹೆಚ್ಚಿನದ್ದಾಗಿದೆ. ವಿದ್ಯಾಸಂಸ್ಥೆ ಸಹ ನನ್ನ ಓದಿಗೆ ಬೆನ್ನೆಲುಬಾಗಿದೆ. ಕಲಿಕೆಯಲ್ಲಿ ಯಾವುದೇ ರೀತಿ ಸಮಸ್ಯೆ ಉಂಟಾದರೂ ಸಹ ಶಿಕ್ಷಕರು ತಕ್ಷಣ ಸ್ಪಂದಿಸುವ ಮೂಲಕ ಬಗೆಹರಿಸುತ್ತಿದ್ದರು. ಹೆಚ್ಚಿನ ಅಂಕ ಪಡೆದಿರುವುದು ನನಗೆ ಹೆಚ್ಚಿನ ಸಂತೋಷವನ್ನುಂಟು ಮಾಡಿದೆ. ಅಲ್ಲದೆ ನನ್ನ ಪೋಷಕರು ಹಾಗು ವಿದ್ಯಾಸಂಸ್ಥೆಯ ಶಿಕ್ಷಕರು, ಸಿಬ್ಬಂದಿ ವರ್ಗದವರು ಸಹ ಸಂತೋಷದಿಂದ ಕಾಣುವಂತಾಗಿರುವುದು ನನಗೆ ಹೆಮ್ಮೆ ಪಡುವಂತಾಗಿದೆ ಎಂದರು.
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಇದೆ ಶಿಕ್ಷಣ ಸಂಸ್ಥೆಯಲ್ಲಿ ಹೆಚ್ಚಿನ ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಸಿಹಿ ತಿನಿಸಿ ಸಂಭ್ರಮ ಹಂಚಿಕೊಂಡರು.
    ವಿದ್ಯಾ ಸಂಸ್ಥೆ ಆಡಳಿತಾಧಿಕಾರಿ ಜಗದೀಶ್, ಪ್ರಾಂಶುಪಾಲರಾದ ಡಾ. ಹರಿಣಾಕ್ಷಿ, ಮುಖ್ಯ ಶಿಕ್ಷಕ ಗಿರೀಶ್, ಶಿಕ್ಷಣ ಸಂಯೋಜಕ ರವಿಕುಮಾರ್ ಹಾಗು ವಿದ್ಯಾಸಂಸ್ಥೆಯ ಶಿಕ್ಷಕರು, ಸಿಬ್ಬಂದಿ ವರ್ಗದವರು, ಪೋಷಕರು ಉಪಸ್ಥಿತರಿದ್ದರು.

ಧಾರಕಾರ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿ ಹಾನಿ : ತಹಸೀಲ್ದಾರ್


ಭದ್ರಾವತಿ ತಾಲೂಕಿನಾದ್ಯಂತ ಕಳೆದ ೨ ದಿನಗಳಿಂದ ಧಾರಕಾರವಾಗಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಸುಣ್ಣದಹಳ್ಳಿ ಬಳಿ ರಸ್ತೆ ಸೇತುವೆ ಕಾಮಗಾರಿ ನಡೆಯುತ್ತಿದ್ದು, ಲೋಕೋಪಯೋಗಿ ಇಲಾಖೆಯವರು ನಿರ್ಮಿಸಿದ್ದ ಪರ್ಯಾಯ ರಸ್ತೆ ನೀರಿನಲ್ಲಿ ಕೊಚ್ಚಿಹೋಗಿ ಸಂಚಾರ ಸ್ಥಗಿತಗೊಂಡಿರುವುದು.
    ಭದ್ರಾವತಿ, ಮೇ. ೧೯: ಕಳೆದ ೨ ದಿನಗಳಿಂದ ತಾಲೂಕಿನಾದ್ಯಂತ ಧಾರಕಾರವಾಗಿ ಮಳೆಯಾಗುತ್ತಿದ್ದು, ಇದರಿಂದಾಗಿ ಬಹುತೇಕ ಕಡೆ ಮನೆಗಳಿಗೆ ಹಾಗು ಜಮೀನು ಮತ್ತು ತೋಟಗಳಿಗೆ ನೀರು ನುಗ್ಗಿ ಹಾನಿ ಉಂಟಾಗಿರುವ ಘಟನೆಗಳು ನಡೆದಿವೆ.
    ಮಳೆ ಹಾನಿ ಕುರಿತು ಪತ್ರಿಕೆಗೆ ಮಾಹಿತಿ ನೀಡಿದ ತಹಸೀಲ್ದಾರ್ ಆರ್. ಪ್ರದೀಪ್, ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಗುರುವಾರ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಸುಣ್ಣದಹಳ್ಳಿ ಬಳಿ ರಸ್ತೆ ಸೇತುವೆ ಕಾಮಗಾರಿ ನಡೆಯುತ್ತಿದ್ದು, ಲೋಕೋಪಯೋಗಿ ಇಲಾಖೆಯವರು ನಿರ್ಮಿಸಿದ್ದ ಪರ್ಯಾಯ ರಸ್ತೆ ನೀರಿನಲ್ಲಿ ಕೊಚ್ಚಿಹೋಗಿದ್ದು, ಇದರಿಂದಾಗಿ ಈ ಮಾರ್ಗದಲ್ಲಿ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ತರೀಕೆರೆ ರಸ್ತೆ ಮೂಲಕ ನಗರ ಪ್ರವೇಶಿಸುವ ವಾಹನಗಳಿಗೆ ಬೈಪಾಸ್ ಮೂಲಕ ಸಂಚರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.
    ಕಾರೇಹಳ್ಳಿ, ಮೈದೊಳಲು, ಆನವೇರಿ, ಆದ್ರಿಹಳ್ಳಿ, ಇಟ್ಟಿಗೆಹಳ್ಳಿ ಸೇರಿದಂತೆ ಇತ್ಯಾದಿ ಭಾಗಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಎಡೇಹಳ್ಳಿ ಭಾಗದಲ್ಲಿ ಭತ್ತ ಹಾಗು ಕಬ್ಬಿನ ತೋಟಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿವೆ. ಇಟ್ಟಿಗೆಹಳ್ಳಿಯಲ್ಲಿ ಖಾಸಗಿ ವ್ಯಕ್ತಿಯೊಬ್ಬರು ರಸ್ತೆಗೆ ಅಡ್ಡಲಾಗಿ ಮಣ್ಣನ್ನು ಸುರಿದಿದ್ದು, ಇದರಿಂದಾಗಿ ರಸ್ತೆ ಯುದ್ದಕ್ಕೂ ನೀರು ನಿಂತುಕೊಂಡು ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿದೆ. ಅಲ್ಲದೆ ರಸ್ತೆ ಸಂಚಾರಕ್ಕೆ ತೊಂದರೆ ಉಂಟಾದ ಹಿನ್ನಲೆಯಲ್ಲಿ ಸ್ಥಳದಲ್ಲಿಯೇ ಬೀಡುಬಿಟ್ಟು ಜೆಸಿಬಿ ಮೂಲಕ ನೀರು ಸರಾಗವಾಗಿ ಹೋಗಲು ಕಾಲುವೆ ನಿರ್ಮಿಸಲಾಗಿದೆ. ಇದರಿಂದಾಗಿ ಸಮಸ್ಯೆ ಸ್ವಲ್ಪಮಟ್ಟಿಗೆ ಸಮಸ್ಯೆ ಬಗೆಹರಿದಿದೆ ಎಂದರು.
    ಉಳಿದಂತೆ ಬಿಆರ್‌ಪಿ ಭಾಗದಲ್ಲಿ ಮನೆಗಳ ಮೇಲೆ ಮರಬಿದ್ದು ಹಾನಿ ಉಂಟಾಗಿರುವ ಘಟನೆ ಹೊರತುಪಡಿಸಿ ಚಿಕ್ಕಪುಟ್ಟ ಘಟನೆ ನಡೆದಿವೆ. ನಗರ ವ್ಯಾಪ್ತಿಯಲ್ಲಿ ನಗರಸಭೆ ಪೌರಾಯುಕ್ತರ ನೇತೃತ್ವದಲ್ಲಿ ತಂಡ ರಚಿಸಿ ನಿಗಾವಹಿಸಲು ಸೂಚಿಸಲಾಗಿದೆ. ಒಟ್ಟಾರೆ ತಾಲೂಕಿನಲ್ಲಿ ಹೆಚ್ಚಿನ ಮನೆಗಳಿಗೆ ಹಾನಿಯಾಗಿದ್ದು, ಸ್ವಲ್ಪ ಬೆಳೆ ಹಾನಿ ಉಂಟಾಗಿದೆ. ಹಾನಿ ಕುರಿತ ಸಂಪೂರ್ಣ ಮಾಹಿತಿ ಶುಕ್ರವಾರ ಲಭ್ಯವಾಗಲಿದೆ ಎಂದರು.

ಎಸ್‌ಎಸ್‌ಎಲ್‌ಸಿ ಶೇ.೮೩.೫೪ ಫಲಿತಾಂಶ : ೬ ಸರ್ಕಾರಿ, ೧೨ ಖಾಸಗಿ ಶಾಲೆಗಳು ಶೇ.೧೦೦ರಷ್ಟು ಫಲಿತಾಂಶ

ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
    ಭದ್ರಾವತಿ, ಮೇ. ೧೯: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿ ತಾಲೂಕಿಗೆ ಶೇ.೮೩.೫೪ ಫಲಿತಾಂಶ ಲಭಿಸಿದ್ದು, ೬ ಸರ್ಕಾರಿ ಹಾಗು ೧೨ ಖಾಸಗಿ ಶಾಲೆಗಳು ಶೇ.೧೦೦ರಷ್ಟು ಫಲಿತಾಂಶ ಪಡೆದುಕೊಂಡಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ತಿಳಿಸಿದರು.
    ಅವರು ಗುರುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ಒಟ್ಟು ೪,೧೮೬ ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದು, ಈ ಪೈಕಿ ೩,೪೯೭ ವಿದ್ಯಾರ್ಥಿ ಉತ್ತೀರ್ಣರಾಗಿದ್ದಾರೆ. ಸರ್ಕಾರಿ ಶಾಲೆಗಳ ೧೮೬೨, ಅನುದಾನಿತ ಶಾಲೆಗಳ ೭೩೭ ಹಾಗು ಖಾಸಗಿ ಶಾಲೆಗಳ ೧೫೮೭ ಸೇರಿ ಒಟ್ಟು ೪,೧೮೬ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ ೧೪೮೪ ಸರ್ಕಾರಿ, ೫೪೭ ಅನುದಾನಿತ ಹಾಗು ೧೪೬೬ ಖಾಸಗಿ ಶಾಲೆಗಳ ಒಟ್ಟು ೩,೪೯೭ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಸರ್ಕಾರಿ ಶಾಲೆಗಳು ಶೇ.೭೯.೭೦ರಷ್ಟು, ಅನುದಾನಿತ ಶಾಲೆಗಳು  ಶೇ. ೭೪.೨೨ರಷ್ಟು  ಹಾಗು ಖಾಸಗಿ ಶಾಲೆಗಳು ಶೇ.೯೨.೩೮ರಷ್ಟು ಫಲಿತಾಂಶ ಪಡೆದುಕೊಂಡಿವೆ ಎಂದರು.
    ಈ ಬಾರಿ ಸಹ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಪರೀಕ್ಷೆಗೆ ಹಾಜರಾದ ೨,೧೭೩ ಬಾಲಕಿಯರಲ್ಲಿ ಶೇ.೮೭.೯೦ರಷ್ಟು ಒಟ್ಟು ೧೯೧೦ ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಹಾಜರಾದ ೨೦೧೩ ಬಾಲಕರಲ್ಲಿ ಶೇ.೭೮.೮೪ರಷ್ಟು ಒಟ್ಟು ೧೫೮೭ ಬಾಲಕರು ಉತ್ತೀರ್ಣರಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ ಶೇ.೮೩.೬೫ರಷ್ಟು ಹಾಗು ನಗರ ಭಾಗದಲ್ಲಿ ಶೇ.೮೩.೪೦ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದರು.
    ಈ ಬಾರಿ ಇಬ್ಬರು ವಿದ್ಯಾರ್ಥಿಯರು ೬೨೫ಕ್ಕೆ ೬೨೫ ಅಂಕಗಳನ್ನು ಪಡೆಯುವ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದಾರೆ. ನಗರದ ಬಿ.ಎಚ್ ರಸ್ತೆ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯ ಪ್ರತೀಕ್ಷಾ ದಯಾನಂದ ೬೨೫ಕ್ಕೆ ೫೨೫ ಅಂಕ ಹಾಗು ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಪ್ರೇರಣಾ .ಬಿ ೬೨೫ಕ್ಕೆ ೬೨೫ ಅಂಕಗಳನ್ನು ಪಡೆದುಕೊಂಡಿದ್ದಾರೆ. ಈ ವಿದ್ಯಾರ್ಥಿಗಳನ್ನು ಇಲಾಖೆಯಿಂದ ಸನ್ಮಾನಿಸಿ ಅಭಿನಂದಿಸಲಾಗಿದೆ. ಈ ಬಾರಿ ೬ ಸರ್ಕಾರಿ ಮತ್ತು ೧೨ ಖಾಸಗಿ ಶಾಲೆಗಳು ಸೇರಿದಂತೆ ಒಟ್ಟು ೧೮ ಶಾಲೆಗಳು ಶೇ.೧೦೦ರಷ್ಟು ಫಲಿತಾಂಶ ಪಡೆದುಕೊಳ್ಳುವ ಮೂಲಕ ಉತ್ತಮ ಸಾಧನೆ ಮಾಡಿವೆ ಎಂದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆ : ಇಬ್ಬರು ವಿದ್ಯಾರ್ಥಿಗಳು ೬೨೫ಕ್ಕೆ ೬೨೫

ಮಾವಿನಕೆರೆ ಸರ್ಕಾರಿ ಶಾಲೆಗೆ ಶೇ.೧೦೦ರಷ್ಟು ಫಲಿತಾಂಶ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೧೦೦ಕ್ಕೆ ೧೦೦ರಷ್ಟು ಫಲಿತಾಂಶ ಪಡೆದುಕೊಂಡಿರುವ ಭದ್ರಾವತಿ ತಾಲೂಕಿನ ಮಾವಿನಕೆರೆ ಸರ್ಕಾರಿ ಪ್ರೌಢಶಾಲೆ.
    ಭದ್ರಾವತಿ, ಮೇ. ೧೯: ತಾಲೂಕಿನಲ್ಲಿ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ೬೨೫ಕ್ಕೆ ೬೨೫ ಅಂಕಗಳನ್ನು ಪಡೆದುಕೊಂಡಿದ್ದು, ಈ ನಡುವೆ ಮಾವಿನಕೆರೆ ಸರ್ಕಾರಿ ಪ್ರೌಢಶಾಲೆ ಶೇ.೧೦೦ಕ್ಕೆ ೧೦೦ರಷ್ಟು ಫಲಿತಾಂಶ ಪಡೆದುಕೊಂಡಿದೆ.

ಪ್ರತೀಕ್ಷಾ ದಯಾನಂದ (೬೨೫/೬೨೫)
    ನಗರದ ಬಿ.ಎಚ್ ರಸ್ತೆ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯ ಪ್ರತೀಕ್ಷಾ ದಯಾನಂದ ೬೨೫ಕ್ಕೆ ೫೨೫ ಅಂಕ ಹಾಗು ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಪ್ರೇರಣಾ .ಬಿ ೬೨೫ಕ್ಕೆ ೬೨೫ ಅಂಕಗಳನ್ನು ಪಡೆದುಕೊಂಡಿದ್ದಾರೆ.
ಉಳಿದಂತೆ ನ್ಯೂಟೌನ್ ಸೇಂಟ್ ಚಾರ್ಲ್ಸ್ ಶಾಲೆಯ ರಿತಿಕ್ ೬೨೪, ಹೊಸಮನೆ ಸೇಂಟ್ ಮೇರಿಸ್ ಶಾಲೆಯ ಆರ್. ಚೇತನ್ ೬೨೧, ಹೊಳೆಹೊನ್ನೂರು ಸೇಂಟ್ ಮೇರಿಸ್ ಶಾಲೆಯ ವಿದ್ಯಾರ್ಥಿಗಳಾದ ಯಶಸ್ವಿನಿ .ಕೆ ೬೨೨ ಮತ್ತು ಪೂರ್ವಿಕ ೬೨೧ ಅತಿ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಾರೆ.


ಪ್ರೇರಣಾ ಬಿ (೬೨೫/೬೨೫)
    ಒಟ್ಟಾರೆ ತಾಲೂಕಿನಲ್ಲಿ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಲಭಿಸಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರ ತಿಳಿಸಿದ್ದಾರೆ.


 ತನುಶ್ರೀ ೬೦೧/೬೨೫
    ತಾಲೂಕಿನ ಮಾವಿನಕೆರೆ ಸರ್ಕಾರಿ ಪ್ರೌಢಶಾಲೆ ಈ ಬಾರಿ ಶೇ.೧೦೦ಕ್ಕೆ ೧೦೦ರಷ್ಟು ಫಲಿತಾಂಶ ಪಡೆದುಕೊಂಡಿದೆ. ಪರೀಕ್ಷೆಗೆ ಹಾಜರಾದ ೧೮ ವಿದ್ಯಾರ್ಥಿಗಳು ಸಹ ತೇರ್ಗಡೆಗೊಂಡಿದ್ದು, ಈ ಪೈಕಿ ತನುಶ್ರೀ ವಿದ್ಯಾರ್ಥಿನಿ ೬೨೫ಕ್ಕೆ ೬೦೧ ಅತಿ ಹೆಚ್ಚು ಅಂಕ ಪಡೆದಕೊಂಡಿದ್ದಾರೆ.