Sunday, May 29, 2022

ದೇಶದಲ್ಲಿ ಮರೆಯಾಗಿರುವ ಹಿಂದೂ ಧರ್ಮದ ಸಂಸ್ಕೃತಿ, ಪರಂಪರೆ ಅನಾವರಣ

ಹಿಂದೂಪರ ಸಂಘಟನೆಗಳ ಹೋರಾಟಕ್ಕೆ ಸಂದ ಫಲ : ಬಿ.ವೈ ರಾಘವೇಂದ್ರ

ವಿಶ್ವ ಹಿಂದೂ ಪರಿಷತ್ ವತಿಯಿಂದ ಭದ್ರಾವತಿಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ೩೮ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಹಾಗೂ ಧರ್ಮಶ್ರೀ ಸಭಾಭವನ ಮಹಡಿಗಳ ಉದ್ಘಾಟನಾ ಸಮಾರಂಭದಲ್ಲಿ ಸಂಸದ ಬಿ.ವೈ ರಾಘವೇಂದ್ರ ಪಾಲ್ಗೊಂಡು ನೂತನ ದಂಪತಿಗೆ ಶುಭ ಹಾರೈಸಿದರು.

    ಭದ್ರಾವತಿ, ಮೇ. ೨೯: ದೇಶದ ಇತಿಹಾಸದಲ್ಲಿ ಮರೆಯಾಗಿರುವ ಹಿಂದೂ ಧರ್ಮದ ಹಲವಾರು ಸಂಸ್ಕೃತಿ, ಪರಂಪರೆ ಇದೀಗ ಅನಾವರಣಗೊಳ್ಳುತ್ತಿದ್ದು, ವಿಶ್ವ ಹಿಂದು ಪರಿಷತ್ ಸೇರಿದಂತೆ ಹಲವಾರು ಹಿಂದೂ ಪರ ಸಂಘಟನೆಗಳ ಹೋರಾಟಕ್ಕೆ ಇದೀಗ ಫಲ ಲಭಿಸುತ್ತಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು. 
ಅವರು ಭಾನುವಾರ ವಿಶ್ವ ಹಿಂದೂ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೩೮ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಹಾಗೂ ಧರ್ಮಶ್ರೀ ಸಭಾಭವನ ಮಹಡಿಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. 
ಹಿಂದಿನ ಇತಿಹಾಸ ಅರಿಯದವರು ಭವಿಷ್ಯದಲ್ಲಿ ಇತಿಹಾಸವನ್ನು ನಿರ್ಮಿಸಲಾರರು. ನಮ್ಮ ದೇಶದ, ನಾಡಿನ ಇತಿಹಾಸ, ಧರ್ಮ, ಸಂಸ್ಕೃತಿಯನ್ನು ನಾವುಗಳು ಅರಿತುಕೊಳ್ಳುವ ಜೊತೆಗೆ ನಮ್ಮ ಮುಂದಿನ ಪೀಳಿಗೆಯವರಿಗೆ ತಿಳಿಸಿಕೊಡಬೇಕು. ಈ ಕಾರ್ಯದಲ್ಲಿ ವಿಶ್ವ ಹಿಂದೂ ಪರಿಷತ್ ನಿರಂತರವಾಗಿ ತೊಡಗಿಸಿಕೊಂಡು ಬಂದಿರುವುದು ಶ್ಲಾಘನೀಯ. ವಿಶ್ವ ಹಿಂದೂ ಪರಿಷತ್ ಕಾರ್ಯ ಚಟುವಟಿಕೆಗಳಿಗೆ ಬೆನ್ನೆಲುಬಾಗಿರುವ ಹಿಂದೂ ಅಭಿಮಾನಿಗಳು, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. 
ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ದೇಶದಲ್ಲಿ ಮರೆಯಾಗಿರುವ ಹಿಂದೂ ಧರ್ಮದ ಹಲವಾರು ಸಂಸ್ಕೃತಿ, ಪರಂಪರೆ ಇದೀಗ ಅನಾವರಣಗೊಳ್ಳುತ್ತಿದ್ದು, ಜಮ್ಮು-ಕಾಶ್ಮೀರದ ೩೭೦ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಈ ದೇಶದಲ್ಲಿ ಹಿಂದೂ ಧರ್ಮದ ನೆಲೆಗಟ್ಟಿನಲ್ಲಿ ಬದುಕುತ್ತಿರುವ ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಎಲ್ಲಾ ಧರ್ಮದವರು ಸಹ ಒಂದೇ ಎಂಬ ಭಾವನೆಯನ್ನು ಮೂಡಿಸಲಾಗಿದೆ. ಇದೀಗ ಜಮ್ಮು-ಕಾಶ್ಮೀರದಲ್ಲಿ ಮರೆಯಾಗಿದ್ದ ಹಿಂದೂ ಧರ್ಮದ ಹಲವಾರು ಸಂಸ್ಕೃತಿ, ಪರಂಪರೆ ಅನಾವರಣಗೊಳ್ಳುತ್ತಿವೆ. ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ನಮ್ಮ ಹಿರಿಯರ ಬಹಳ ವರ್ಷಗಳ ಕನಸು ನನಸಾಗುತ್ತಿದೆ. ಈ ರೀತಿಯ ಕಾರ್ಯಗಳಲ್ಲಿ ಕೈಜೋಡಿಸಿಕೊಂಡು ಬರುತ್ತಿರುವ ವಿಶ್ವ ಹಿಂದೂ ಪರಿಷತ್ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನನ್ನು ಗುರುತಿಸಿಕೊಂಡಿದೆ ಎಂದರು. 
ನಗರದಲ್ಲಿ ವಿಶ್ವ ಹಿಂದೂ ಪರಿಷತ್ ಸ್ವಂತ ನಿವೇಶನ ಹೊಂದುವ ಮೂಲಕ ಸಮುದಾಯ ಭವನ ನಿರ್ಮಿಸಿರುವುದು ಹೆಮ್ಮೆಯ ವಿಚಾರವಾಗಿದೆ. ಸಮಾಜದ ಎಲ್ಲರ ಸಹಕಾರದೊಂದಿಗೆ ಭವನವನ್ನು ಹಂತ ಹಂತವಾಗಿ ಅಭಿವೃದ್ಧಿಗೊಳಿಸುವ ಕಾರ್ಯ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಭವನದ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಅನುದಾನ ಬಿಡುಗಡೆಗೊಳಿಸುವುದಾಗಿ ಭರವಸೆ ನೀಡಿದರು. 
ಶಾಸಕ ಬಿ.ಕೆ ಸಂಗಮೇಶ್ವರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್, ವಿಶ್ವ ಹಿಂದು ಪರಿಷತ್ ಕ್ಷೇತ್ರಿಯ ಕಾರ್ಯದರ್ಶಿ ಕೇಶವ ಹೆಗ್ಡೆ, ಪ್ರಾಂತ್ಯ ಉಪಾಧ್ಯಕ್ಷ ಹಾ ರಾಮಪ್ಪ, ಜಿಲ್ಲಾಧ್ಯಕ್ಷ  ವಾಸುದೇವ ಮೂರ್ತಿ, ಗ್ರಾಮಾಂತರ ಅಧ್ಯಕ್ಷ ಎಸ್. ಮುತ್ತುರಾಮಲಿಂಗಮ್, ಮಾತೃ ಮಂಡಳಿ ಅಧ್ಯಕ್ಷೆ ಯಶೋಧ ವೀರಭದ್ರಪ್ಪ, ಧರ್ಮಶ್ರೀ ಸಭಾ ಭವನ ಕಟ್ಟಡ ಸಮಿತಿ ಅಧ್ಯಕ್ಷ ಕೆ.ಎಚ್ ತೀರ್ಥಯ್ಯ, ನಗರಸಭಾ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಪೌರಾಯುಕ್ತ ಮನುಕುಮಾರ್, ಸದಸ್ಯ ಆರ್. ಶ್ರೇಯಸ್, ದಾನಿ ವೇದಾವತಿ ಶಿವಮೂತಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ, ಆರ್. ಪೂರ್ವಚಾರ್, ವೈದ್ಯ ಡಾ. ನರೇಂದ್ರ ಭಟ್, ಡಿ.ಆರ್ ಶಿವಕುಮಾರ್, ವೈ.ಎಸ್ ರಾಮಮೂರ್ತಿ, ಮಂಜುನಾಥ ಪವಾರ್, ಎನ್. ಎಸ್ ಮಹೇಶ್ವರಪ್ಪ, ಡಾ. ಬಿ.ಜಿ ಧನಂಜಯ, ಕೆ.ಆರ್ ಸತೀಶ್, ಮಂಜುನಾಥ್ ಕದಿರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  
ಶಿವಮೊಗ್ಗ ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ವಿಶ್ವ ಹಿಂದೂ ಪರಿಷತ್, ಬಜರಂಗದಳ ಸೇರಿದಂತೆ ವಿವಿಧ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು. ಒಂದು ಜೊತೆ ಸಾಮೂಹಿಕ ವಿವಾಹ ನಡೆಯಿತು. ವೇದಬ್ರಹ್ಮ ಕೃಷ್ಣಮೂರ್ತಿ ಸೋಮಯಾಜಿ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. 

ದೇಶದಲ್ಲಿ ಹಿಂದೂ ಧರ್ಮದ ಸಂಸ್ಕೃತಿ, ಪರಂಪರೆಯನ್ನು ಮರೆಮಾಚುವ ಷಡ್ಯಂತ್ರಗಳು ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ನಾವುಗಳು ಎಚ್ಚೆತ್ತುಕೊಂಡು ನಮ್ಮ ಪೂರ್ವಿಜರ ಹಿಂದಿನ ಇತಿಹಾಸ, ಸಂಸ್ಕೃತಿ, ಪರಂಪರೆ ಅರಿತುಕೊಳ್ಳುವ ಅಗತ್ಯವಿದೆ. ಈ ಮೂಲಕ ನಮ್ಮ ಹೋರಾಟ ಮುಂದುವರೆಸಬೇಕಾದ ಅನಿರ್ವಾಯತೆ ಇದೀಗ ನಿರ್ಮಾಣಗೊಂಡಿದೆ.
                                                                        - ಬಿ.ವೈ ರಾಘವೇಂದ್ರ, ಸಂಸದರು, ಶಿವಮೊಗ್ಗ

Saturday, May 28, 2022

ಸೈಲ್ ಸ್ವರ್ಣ ಜಯಂತಿ : ಕಥೆ ಬರೆಯುವ ಸ್ಪರ್ಧೆ

ಸೈಲ್ ಸ್ವರ್ಣ ಜಯಂತಿ ಲಾಂಛನ

     ಭದ್ರಾವತಿ, ಮೇ. ೨೮ : ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಭಾರತೀಯ ಉಕ್ಕು ಪ್ರಾಧಿಕಾರ) ೨೪ನೇ ಜನವರಿ, ೧೯೭೩ ರಂದು ಆರಂಭಗೊಂಡಿದ್ದು, ತನ್ನ ೫೦ನೇ ವರ್ಷಾಚರಣೆ ಸೈಲ್ ಸ್ವರ್ಣ ಜಯಂತಿ ಅಂಗವಾಗಿ 'ಕಳೆದ ಐದು ದಶಕಗಳಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ಸೈಲ್‌ನ ಕೊಡುಗೆ'.ಎಂಬ ವಿಷಯ ಕುರಿತು ದ್ವಿಭಾಷಾ ಕಥೆ ಬರೆಯುವ ಸ್ಪರ್ಧೆಯನ್ನು ಆಯೋಜಿಸಿದೆ.
     ಈ  ಸ್ಪರ್ಧೆಯು ಸೃಜನಶೀಲತೆ ಮತ್ತು ಬರವಣಿಗೆ ಕೌಶಲ್ಯವನ್ನು ಪ್ರದರ್ಶಿಸಲು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ. ಎಲ್ಲರೂ ಮುಕ್ತವಾಗಿ ಭಾಗವಹಿಸಲು ಅವಕಾಶವಿದ್ದು,  ಸ್ಪರ್ಧೆಯ ವಿವರಗಳು ಕಂಪನಿಯ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು ಮತ್ತು ಅದರ ವೆಬ್‌ಸೈಟ್ www.sail.co.in ನಲ್ಲಿ ಲಭ್ಯವಿದೆ. ಆ.೨೫ ಇಮೇಲ್ ಮೂಲಕ ಸ್ಪರ್ಧೆಗೆ ನಮೂದುಗಳನ್ನು ಸ್ವೀಕರಿಸುವ ಕೊನೆಯ ದಿನವಾಗಿದ್ದು,  ಆದರೆ ಕರಡು ಪ್ರತಿಗಳನ್ನು ಆ. ೩೧ರವರೆಗೆ ಸ್ವೀಕರಿಸಲಾಗುತ್ತದೆ. ಪ್ರತಿ ನಮೂದನ್ನು sailstory2022@gmail.com ಮತ್ತು ಪೋಸ್ಟ್ (ಕರಡು ಪ್ರತಿ) ಎರಡೂ ಇಮೇಲ್ ಮೂಲಕ ಸಲ್ಲಿಸಬೇಕು. ವಿಜೇತರನ್ನು ಸೈಲ್‌ನ ಮೇಲೆ ತಿಳಿಸಲಾದ ವೆಬ್‌ಸೈಟ್ ಮತ್ತು ಅದರ ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಘೋಷಿಸಲಾಗುತ್ತದೆ ಮತ್ತು ಪ್ರಮಾಣಪತ್ರಗಳು ಮತ್ತು ಆಕರ್ಷಕ ಬಹುಮಾನಗಳೊಂದಿಗೆ ನೀಡಲಾಗುತ್ತದೆ.


ದುರಸ್ತಿ ಮಾಡುವಾಗ ಯಂತ್ರಕ್ಕೆ ಸಿಲುಕಿ ಕಾರ್ಮಿಕ ಸಾವು


ಭದ್ರಾವತಿ ಲೋಯರ್‌ಹುತ್ತಾ ಕೈಗಾರಿಕಾ ಪ್ರದೇಶದಲ್ಲಿರುವ ಆರ್‌ಎಎಸ್ ಪಾರ್‍ಮಾಸಿಟಿಕಲ್ ಕಾರ್ಖಾನೆ (ಆಹಾರ ತಯಾರಿಕಾ ಘಟಕ)ಯಲ್ಲಿ ದುರಸ್ತಿ ಮಾಡುವಾಗ ಕಾರ್ಮಿಕ ಸೆಂದಿಲ್‌ಕುಮಾರ್ ಯಂತ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.
    ಭದ್ರಾವತಿ, ಮೇ. ೨೯: ನಗರದ ಲೋಯರ್‌ಹುತ್ತಾ ಕೈಗಾರಿಕಾ ಪ್ರದೇಶದಲ್ಲಿರುವ ಆರ್‌ಎಎಸ್ ಪಾರ್‍ಮಾಸಿಟಿಕಲ್ ಕಾರ್ಖಾನೆ (ಆಹಾರ ತಯಾರಿಕಾ ಘಟಕ)ಯಲ್ಲಿ ಕಾರ್ಮಿಕನೋರ್ವ ಯಂತ್ರಕ್ಕೆ ಸಿಲುಕಿ ಸಾವು ಕಂಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
    ತಾಲೂಕಿನ ಬಸವನಗುಡಿ ನಿವಾಸಿ ಸೆಂದಿಲ್‌ಕುಮಾರ್ ಮೃತಪಟ್ಟ ದುರ್ದೈವಿಯಾಗಿದ್ದು, ಕಾರ್ಖಾನೆಯಲ್ಲಿ ಕಚ್ಚಾ ವಸ್ತುಗಳನ್ನು ಮಿಕ್ಸರ್ ಮಾಡುವ ಯಂತ್ರವನ್ನು ದುರಸ್ತಿ ಮಾಡುವ ವೇಳೆ ಆಕಸ್ಮಿಕವಾಗಿ ಯಂತ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.
    ರಾತ್ರಿ ಸುಮಾರು ೧೨.೩೦ರ ಸಮಯದಲ್ಲಿ ಈ ಘಟನೆ ನಡೆದಿದ್ದು, ಸೆಂದಿಲ್‌ಕುಮಾರ್‌ರವರ ದೇಹ ಯಂತ್ರಕ್ಕೆ ಸಿಲುಕಿ ಕಾಲು, ಕೈ ಹಾಗು ಹೊಟ್ಟೆ ಭಾಗ ಜಜ್ಜಿ ಹೋಗಿದೆ. ತಕ್ಷಣ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿದ್ದಾದರೂ ಯಾವುದೇ ಫಲಕಾರಿಯಾಗಲಿಲ್ಲ. ಈ ಸಂಬಂಧ ಸೆಂದಿಲ್‌ಕುಮಾರ್‌ರವರ ಪತ್ನಿ ಶಾಂತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಕಾರ್ಖಾನೆಯ ವ್ಯವಸ್ಥಾಪಕರ ವಿರುದ್ಧ ದೂರು ದಾಖಲಿಸಿದ್ದಾರೆ.

ಶಾಲೆಗಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಪ್ರತಿಯೊಬ್ಬರ ಪಾತ್ರ ಬಹಳ ಮುಖ್ಯ : ಎ.ಕೆ ನಾಗೇಂದ್ರಪ್ಪ

ಭದ್ರಾವತಿ ಕಾಗದನಗರದ ಪೇಪರ್‌ಟೌನ್ ಪ್ರೌಢಶಾಲೆಯಲ್ಲಿ ಶನಿವಾರ ೮ನೇ ತರಗತಿಗೆ ಪ್ರವೇಶಪಡೆದ ವಿದ್ಯಾರ್ಥಿಗಳಿಗೆ ಟೈ, ಬೆಲ್ಟ್ ಹಾಗು ಸಮವಸ್ತ್ರಗಳನ್ನು ವಿತರಿಸಲಾಯಿತು.
    ಭದ್ರಾವತಿ, ಮೇ. ೨೮: ಇತ್ತೀಚಿನ ವರ್ಷಗಳಲ್ಲಿ ಸಂಘ-ಸಂಸ್ಥೆಗಳು, ದಾನಿಗಳು ಹಾಗು ಹಳೇಯ ವಿದ್ಯಾರ್ಥಿಗಳು ಶಾಲೆಗಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಕೈಜೋಡಿಸುತ್ತಿರುವ ಪರಿಣಾಮ ಶಾಲೆಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಹೇಳಿದರು.
    ಅವರು ಶನಿವಾರ ಪೇಪರ್‌ಟೌನ್  ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಲಾ ಮಕ್ಕಳಿಗೆ ಟೈ, ಬೆಲ್ಟ್ ಹಾಗು ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಪ್ರತಿಯೊಬ್ಬರಿಗೂ ಶಿಕ್ಷಣ ಅವಶ್ಯಕವಾಗಿದ್ದು, ಇದಕ್ಕೆ ಪೂರಕವಾಗಿ ಶಾಲೆಗಳು ಸಹ ಅಭಿವೃದ್ಧಿ ಹೊಂದಬೇಕಾಗಿದೆ. ಶಾಲೆಗಳಲ್ಲಿ ಶಿಕ್ಷಣ ಪಡೆದವರು ಅವುಗಳ ಅಭಿವೃದ್ಧಿ ಬಗ್ಗೆ ಚಿಂತಿಸುವ ಜೊತೆಗೆ ಸರ್ವಾಂಗೀಣ ಬೆಳವಣಿಗೆಯಲ್ಲಿ ಕೈಜೋಡಿಸಬೇಕು. ನಾವು ಶಿಕ್ಷಣ ಪಡೆದ ಶಾಲೆಯನ್ನು ಎಂದಿಗೂ ಮರೆಯಬಾರದು. ಸಾಮಾನ್ಯ ಜನರನ್ನು ಸಹ ಶಾಲೆಗಳ ಅಭಿವೃದ್ಧಿಯಲ್ಲಿ ಕೈಜೋಡಿಸುವಂತೆ ಪ್ರೇರೇಪಿಸಬೇಕು. ಪ್ರತಿಯೊಬ್ಬರು ತಮದೇ ಆದ ಕೊಡುಗೆಗಳನ್ನು ನೀಡಿದಾಗ ಮಾತ್ರ ಶಾಲೆಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಜೊತೆಗೆ ಭವಿಷ್ಯದ ಮಕ್ಕಳಿಗೂ ನೆರವಾಗಲಿವೆ ಎಂದರು.
    ಶಾಲೆಯ ದೈಹಿಕ ಅಪೇಕ್ಷಾ ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಶಾಲೆ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಅವರು ಸಮಾಜದಲ್ಲಿ ಗುರುತಿಸಿಕೊಳ್ಳಲು ಕಾರಣವಾಗಿದೆ. ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಳೇಯ ವಿದ್ಯಾರ್ಥಿಗಳು ಶಾಲೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಶಾಲೆಯಲ್ಲಿ ಕಳೆದ ೩ ವರ್ಷಗಳಿಂದ ದಾನಿಗಳು ಹಾಗು ಹಳೇಯ ವಿದ್ಯಾರ್ಥಿಗಳ ನೆರವಿನೊಂದಿಗೆ ಮಕ್ಕಳಿಗೆ ಉಚಿತವಾಗಿ ಟೈ, ಬೆಲ್ಟ್ ಹಾಗು ಸಮವಸ್ತ್ರಗಳನ್ನು ವಿತರಿಸಲಾಗುತ್ತಿದೆ ಎಂದರು.
    ಶಾಲೆಯ  ಮುಖ್ಯೋಪಾಧ್ಯಾಯಿನಿ ಎ.ಆರ್ ಭಾರತಿ ಅಧ್ಯಕ್ಷತೆ ವಹಿಸಿದ್ದರು. ೧೯೮೨-೮೩ನೇ ಸಾಲಿನ ಹಳೇಯ ವಿದ್ಯಾರ್ಥಿಗಳು, ದಾನಿಗಳಾದ ಬಸವರಾಜ್, ಸತೀಶ್‌ಕುಮಾರ್, ಲಿಂಗೋಜಿರಾವ್ ಮತ್ತು ಈರಪ್ಪ ಹಾಗು ಸಿಆರ್‌ಪಿ ಸಿ. ಚನ್ನಪ್ಪ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಸಹ ಶಿಕ್ಷಕರಾದ ಎಂ. ಕಾಂತರಾಜು ಸ್ವಾಗತಿಸಿದರು. ಸಿ. ಬಸವರಾಜ ವಂದಿಸಿದರು. ಶಾಲೆಯಲ್ಲಿ ೮ನೇ ತರಗತಿಗೆ ಪ್ರವೇಶಪಡೆದ ವಿದ್ಯಾರ್ಥಿಗಳಿಗೆ ಟೈ, ಬೆಲ್ಟ್ ಹಾಗು ಸಮವಸ್ತ್ರಗಳನ್ನು ವಿತರಿಸಲಾಯಿತು.


ಮೇ.೨೯ರಂದು ೩೮ನೇ ವರ್ಷದ ಉಚಿತ ಸಾಮೂಹಿಕ ವಿವಾಹ

ಭದ್ರಾವತಿ, ಮೇ. ೨೮: ವಿಶ್ವಹಿಂದು ಪರಿಷತ್ ವತಿಯಿಂದ ಪ್ರತಿವರ್ಷದಂತೆ ಈ ಬಾರಿ ಸಹ ೩೮ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಹಾಗೂ ಧರ್ಮಶ್ರೀ ಸಭಾಭವನ ಮಹಡಿಗಳ ಉದ್ಘಾಟನಾ ಸಮಾರಂಭ ಮೇ.೨೯ ಬೆಳಗ್ಗೆ ೧೧ಗಂಟೆಗೆ ನಡೆಯಲಿದೆ.
ಶಿವಮೊಗ್ಗ ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ಸಂಸದ ಬಿ.ವೈ ರಾಘವೇಂದ್ರ ಸಮಾರಂಭ ಉದ್ಘಾಟಿಸುವರು. ವಿಶ್ವಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ವೆಂಕಟರಮಣ ಶೇಟ್ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಶಾಸಕ ಬಿ.ಕೆ ಸಂಗಮೇಶ್ವರ್, ವಿಧಾನಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಎಸ್. ರುದ್ರೇಗೌಡ, ಡಿ.ಎಸ್ ಅರುಣ್, ವಿಶ್ವ ಹಿಂದು ಪರಿಷತ್ ಕ್ಷೇತ್ರಿಯ ಕಾರ್ಯದರ್ಶಿ ಕೇಶವ ಹೆಗ್ಡೆ, ಪ್ರಾಂತ್ಯ ಉಪಾಧ್ಯಕ್ಷ ಹಾ ರಾಮಪ್ಪ, ಜಿಲ್ಲಾಧ್ಯಕ್ಷ  ವಾಸುದೇವ ಮೂರ್ತಿ, ಗ್ರಾಮಾಂತರ ಅಧ್ಯಕ್ಷ ಎಸ್. ಮುತ್ತುರಾಮಲಿಂಗಮ್, ಮಾತೃ ಮಂಡಳಿ ಅಧ್ಯಕ್ಷೆ ಯಶೋಧ ವೀರಭದ್ರಪ್ಪ, ಧರ್ಮಶ್ರೀ ಸಭಾ ಭವನ ಕಟ್ಟಡ ಸಮಿತಿ ಅಧ್ಯಕ್ಷ ಕೆ.ಎಚ್ ತೀರ್ಥಯ್ಯ, ನಗರಸಭಾ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಪೌರಾಯುಕ್ತ ಮನುಕುಮಾರ್, ಸದಸ್ಯ ಆರ್. ಶ್ರೇಯಸ್, ದಾನಿ ವೇದಾವತಿ ಶಿವಮೂತಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ, ಆರ್. ಪೂರ್ವಚಾರ್, ವೈದ್ಯ ಡಾ. ನರೇಂದ್ರ ಭಟ್, ಡಿ.ಆರ್ ಶಿವಕುಮಾರ್, ವೈ.ಎಸ್ ರಾಮಮೂರ್ತಿ, ಮಂಜುನಾಥ ಪವಾರ್, ಎನ್. ಎಸ್ ಮಹೇಶ್ವರಪ್ಪ ಮತ್ತು ಡಾ. ಬಿ.ಜಿ ಧನಂಜಯ  ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಹಾಗು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕನ್ನಡ ಭಾಷೆಯಲ್ಲಿ ೧೨೫/೧೨೫ ಅಂಕ  ಪಡೆದಿರುವ ತಾಲೂಕಿನ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪರುಸ್ಕಾರ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.

Friday, May 27, 2022

ಮೇ.೨೯ರಂದು ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ

ಶ್ರೀ ವಿನಾಯಕ ಚಾರಿಟೆಬಲ್ ಟ್ರಸ್ಟ್ ವತಿಯಿಂದ ೧೫೦೦ ನೋಟ್ ಬುಕ್‌ಗಳ ವಿತರಣೆಗೆ ಸಿದ್ದತೆ


ಎ. ಧರ್ಮೇಂದ್ರ  
    ಭದ್ರಾವತಿ, ಮೇ. ೨೭: ಶ್ರೀ ವಿನಾಯಕ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಹಲವಾರು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಟ್ರಾವೆಲ್ಸ್ ಮಾಲೀಕ ಮತ್ತು ಸಿವಿಲ್ ಗುತ್ತಿಗೆದಾರ ಎ. ಧರ್ಮೇಂದ್ರ ಪ್ರತಿವರ್ಷ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್‌ಬುಕ್ ವಿತರಣೆಯೊಂದಿಗೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಗಮನ ಸೆಳೆದಿದ್ದಾರೆ.
    ಕಳೆದ ವರ್ಷ ಅರಳಿಹಳ್ಳಿ ಸರ್ಕಾರಿ ಶಾಲೆಯಲ್ಲಿ ಅರಳಿಹಳ್ಳಿ ಸೇರಿದಂತೆ  ಸುತ್ತಮುತ್ತಲ ಗ್ರಾಮಗಳ ಸರ್ಕಾರಿ ಶಾಲೆಗಳ ಮಕ್ಕಳಿಗೆ ಒಟ್ಟು ಸುಮಾರು ೧೦೦೦ ನೋಟ್ ಬುಕ್‌ಗಳನ್ನು ಉಚಿತವಾಗಿ ವಿತರಣೆ ಮಾಡಿದ್ದರು. ಈ ಬಾರಿ ಸಹ ಒಟ್ಟು ೧೫೦೦ ನೋಟ್ ಬುಕ್‌ಗಳನ್ನು ವಿತರಿಸಲು ಮುಂದಾಗಿದ್ದಾರೆ.

'ನಾವು ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ತುಂಬಾ ಬಡತನವಿದ್ದು, ನೋಟ್ ಬುಕ್, ಪಠ್ಯ ಪುಸ್ತಕಗಳನ್ನು ಕೊಂಡುಕೊಳ್ಳುವುದು ಅಸಾಧ್ಯವಾಗಿತ್ತು.  ಅಲ್ಲದೆ ಹಲವಾರು ಕಾರಣಗಳಿಂದ ನಾವು ಹೆಚ್ಚಿನ ವಿದ್ಯಾಭ್ಯಾಸ ಪಡೆಯಲು ಸಾಧ್ಯವಾಗಲಿಲ್ಲ. ನಾವು ಅನುಭವಿಸಿದ ಕಷ್ಟ ಈಗಿನ ವಿದ್ಯಾರ್ಥಿಗಳು ಅನುಭವಿಸಬಾರದು. ಪ್ರಸ್ತುತ ಎಲ್ಲಾ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಪಡೆಯುವುದು ಅನಿವಾರ್ಯವಾಗಿದೆ. ಇಂತಹ ಸಂದರ್ಭದಲ್ಲಿ ಸ್ವಲ್ಪಮಟ್ಟಿಗಾದರೂ ಸ್ಪಂದಿಸಬೇಕೆಂಬ ಮನೋಭಾವನೆಯೊಂದಿಗೆ ಉಚಿತವಾಗಿ ನೋಟ್ ಬುಕ್‌ಗಳನ್ನು ವಿತರಿಸಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರುತ್ತೇನೆ.
                                                                - ಎ. ಧರ್ಮೇಂದ್ರ, ಅಧ್ಯಕ್ಷರು, ಶ್ರೀವಿನಾಯಕ ಚಾರಿಟೆಬಲ್ ಟ್ರಸ್ಟ್ .

    ಶ್ರೀ ಹರಿಹರೇಶ್ವರ ಪ್ರೌಢಶಾಲೆ ಹಳೇ ವಿದ್ಯಾರ್ಥಿಗಳ ಸಂಘದ ನೇತೃತ್ವದಲ್ಲಿ ಮೇ.೨೯ರ ಭಾನುವಾರ ಬೆಳಿಗ್ಗೆ ೯.೩೦ಕ್ಕೆ ಶ್ರೀರಾಮನಗರದ ಶ್ರಮಜೀವಿ ಮರಿಸಿದ್ದಯ್ಯ ಕಲ್ಯಾಣ ಮಂಟಪದಲ್ಲಿ ಬಾಬಳ್ಳಿ, ಕಾಗೇಕೋಡಮಗ್ಗಿ, ಜಯನಗರ, ವೀರಾಪುರ, ರಾಮನಗರ, ಕುಮರಿನಾರಾಯಣಪುರ ಮತ್ತು ತಳ್ಳಿಕಟ್ಟೆ ಗ್ರಾಮಗಳ ಸರ್ಕಾರಿ ಶಾಲೆಗಳ ಮಕ್ಕಳಿ ಉಚಿತ ನೋಟ್ ಬುಕ್ ವಿತರಣೆ ನಡೆಯಲಿದೆ.
    ಜಾನಪದ ಆಕಾಡೆಮಿ ಅಧ್ಯಕ್ಷೆ ಪದ್ಮಶ್ರೀ ಮಾತಾ ಬಿ. ಮಂಜಮ್ಮ ಜೋಗತಿ, ತಹಸೀಲ್ದಾರ್ ಆರ್. ಪ್ರದೀಪ್, ಪೊಲೀಸ್ ಉಪಾಧೀಕ್ಷಕ ಜಿತೇಂದ್ರಕುಮಾರ್ ದಯಾಮಾ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಪೊಲೀಸ್ ವೃತ್ತ ನಿರೀಕ್ಷಕ ಎನ್.ಕೆ ಗುರುರಾಜ್, ಶಮಜೀವಿ ಮರಿಸಿದ್ದಯ್ಯ ಕಲ್ಯಾಣ ಮಂಟಪದ  ರಮೇಶ್, ಯು. ಹರೀಶ್‌ರಾವ್, ಸಿ. ಹರಿಬಾಬು, ಸಿ.ಎಸ್ ನಾಗರಾಜ್, ಮಮತ, ರೂಪವತಿ, ಮಂಗಳ ಗೌರಮ್ಮ, ಶಶಿಕುಮಾರ, ಪರಮೇಶ್ವರಪ್ಪ, ಸತ್ಯನಾರಾಯಣ, ಸುರೇಶ್, ಗಂಗಣ್ಣ, ಕಾವೇರಮ್ಮ ಮತ್ತು ಗಣೇಶ್ ಕಲ್ಲೇರಿ, ಆಶಾರಾಣಿ ಧರ್ಮೇಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿರುವವರು.
    ಮಹಾಮಾರಿ ಕೊರೋನಾ ಸಂದರ್ಭದಲ್ಲಿ ಧರ್ಮೇಂದ್ರ ಅವರು ಶ್ರೀ ವಿನಾಯಕ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಉಚಿತ ಆಂಬ್ಯುಲೆನ್ಸ್ ಸೇವೆ ಒದಗಿಸುವ ಮೂಲಕ ಮಾನವೀಯತೆ ಮೆರೆದಿದ್ದರು.

ಶಿಕ್ಷಣ ಎಂದರೆ ಪರಿಪೂರ್ಣವಾಗಿ ಬದುಕಲು ಪೂರಕವಾದ ಜ್ಞಾನದ ಎಲ್ಲಾ ಬಗೆಯ ಕಲಿಕೆ : ಎ.ಕೆ ನಾಗೇಂದ್ರಪ್ಪ

ಭದ್ರಾವತಿಯಲ್ಲಿ ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೨೫ಕ್ಕೆ ೬೨೫ ಅಂಕ ಪಡೆದುಕೊಂಡು ತಾಲೂಕಿಗೆ ಕೀರ್ತಿ ತಂದಿರುವ ನಗರದ ಬಿ.ಎಚ್ ರಸ್ತೆ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯ ಪ್ರತೀಕ್ಷಾ ದಯಾನಂದ ಹಾಗು ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಪ್ರೇರಣಾ .ಬಿ ಸೇರಿದಂತೆ ೩ ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಮೇ. ೨೭: ಶಿಕ್ಷಣ ಎಂದರೆ ಸಮಾಜದಲ್ಲಿ ಪರಿಪೂರ್ಣವಾಗಿ ಬದುಕಲು ಪೂರಕವಾದ ಜ್ಞಾನದ ಎಲ್ಲಾ ಬಗೆಯ ಕಲಿಕೆಯಾಗಿದ್ದು, ಇದು ಹುಟ್ಟಿನಿಂದ ಸಾವಿನವರೆಗೂ ಮುಂದುವರೆಯುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಹೇಳಿದರು.
    ಅವರು ಶುಕ್ರವಾರ ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾವಂತ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಮಗುವಿನ ಮೊದಲ ಕಲಿಕೆ ಮನೆಯಿಂದ ಆರಂಭಗೊಳ್ಳುತ್ತದೆ. ತಂದೆ-ತಾಯಿ ಮೊದಲ ಗುರುಗಳಾಗಿದ್ದು, ಈ ಹಿನ್ನಲೆಯಲ್ಲಿ ಮಗುವಿನ ಬೆಳವಣಿಗೆಗೆ ಪೂರಕವಾದ ವಾತಾವರಣ ರೂಪಿಸಿಕೊಡುವುದು ಪೋಷಕರ ಜವಾಬ್ದಾರಿಯಾಗಿದೆ.  ಶಿಕ್ಷಣ ಎಂದರೆ ಕೇವಲ ಪಠ್ಯಪುಸ್ತಕದ ಜ್ಞಾನ ವಲ್ಲ. ಪ್ರತಿಯೊಂದು ಕ್ಷೇತ್ರದಲ್ಲೂ ಕಲಿಕೆಯ ಪ್ರಕ್ರಿಯೆಯಲ್ಲಿ ತೊಡಗುವುದಾಗಿದೆ. ಇದನ್ನು ಸರಿಯಾಗಿ ಅರ್ಥಮಾಡಿಕೊಂಡು ಮುನ್ನಡೆಯಬೇಕೆಂದರು.
    ವೇದಿಕೆ ಗೌರವಾಧ್ಯಕ್ಷೆ ಡಾ. ಆರ್. ಅನುರಾಧ ಪಟೇಲ್ ಮಾತನಾಡಿ, ಪ್ರತಿಯೊಂದಕ್ಕೂ ಜ್ಞಾನ ಬಹಳ ಮುಖ್ಯ.  ಮಹಾತ್ಮಗಾಂಧಿಜೀ ಸೇರಿದಂತೆ ಅನೇಕ ಮಹಾನ್ ಆದರ್ಶ ವ್ಯಕ್ತಿಗಳು ಶಿಕ್ಷಣದ ಮಹತ್ವದ ಬಗ್ಗೆ ತಿಳಿಸಿದ್ದಾರೆ. ಶಿಕ್ಷಣ ಎಂಬುದು ಕೇವಲ ಹೆಚ್ಚಿನ ಅಂಕಗಳನ್ನು ಪಡೆಯುವುದಲ್ಲ ಪರಿಶ್ರಮದ ಮೂಲಕ ಸಮಾಜಕ್ಕೆ ಪೂರಕವಾದ, ಮೌಲ್ಯಯುತ ಜ್ಞಾನವನ್ನು ಪಡೆಯುವುದಾಗಿದೆ. ಯಾವುದೇ ಕ್ಷೇತ್ರದಲ್ಲೂ ಪರಿಶ್ರಮವಿಲ್ಲದೆ ಏನನ್ನು ಸಹ ಸಾಧಿಸಲು ಸಾಧ್ಯವಿಲ್ಲ. ನಮ್ಮ ಸಾಧನೆಯ ಜೊತೆ ಜೊತೆಗೆ ಸೇವೆಯನ್ನು ಸಹ ಒಂದು ಭಾಗವನ್ನಾಗಿಸಿಕೊಳ್ಳಬೇಕೆಂದರು.
    ಪೌರಾಯುಕ್ತ ಮನುಕುಮಾರ್ ಮಾತನಾಡಿ, ಶಿಕ್ಷಣ ಎಂಬುದು ನಮ್ಮ ಜೀವನದ ಒಂದು ಹಂತವಾಗಿದೆ. ನಾವು ಭವಿಷ್ಯದಲ್ಲಿ ಆಯ್ಕೆ ಮಾಡಿಕೊಳ್ಳುವ ಕ್ಷೇತ್ರ ಬಹಳ ಮುಖ್ಯವಾಗಿದೆ. ನಮ್ಮ ಗುರಿ ನಿರಂತರವಾಗಿರಬೇಕು. ಸಂಘಟನೆಗಳಲ್ಲಿ ವಿಶಿಷ್ಟ ಶಕ್ತಿ ಇದ್ದು, ಇದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಂಡಾಗ ಮಾತ್ರ ಸಂಘಟನೆ ಮತ್ತಷ್ಟು ಬಲಿಷ್ಠಗೊಳ್ಳುತ್ತದೆ ಎಂದರು.
    ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘಟನೆಯಲ್ಲಿ ಮಹಿಳೆಯರು ನಿರಂತರವಾಗಿ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿ ಕಾರ್ಯಕ್ರಮ ಸಹ ಹೊಸ ಉತ್ಸಾಹ ತಂದು ಕೊಡುತ್ತಿವೆ. ವೇದಿಕೆ ಕಾರ್ಯಕ್ರಮಗಳಿಗೆ ಗೌರವಾಧ್ಯಕ್ಷರಾದ ಡಾ. ಅನುರಾಧಪಟೇಲ್‌ರವರು ಹೆಚ್ಚಿನ ಸಹಕಾರ, ಪೋತ್ಸಾಹ ನೀಡುತ್ತಿದ್ದಾರೆ. ಇದೀಗ ಪ್ರತಿಭಾವಂತ ವಿದ್ಯಾರ್ಥಿಗಳನ್ನು ವೇದಿಕೆ ವತಿಯಿಂದ ಸನ್ಮಾನಿಸಿ ಅಭಿನಂದಿಸುವ ಕಾರ್ಯಕ್ರಮ ಆಯೋಜಿಸಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
    ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೨೫ಕ್ಕೆ ೬೨೫ ಅಂಕ ಪಡೆದುಕೊಂಡು ತಾಲೂಕಿಗೆ ಕೀರ್ತಿ ತಂದಿರುವ ನಗರದ ಬಿ.ಎಚ್ ರಸ್ತೆ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯ ಪ್ರತೀಕ್ಷಾ ದಯಾನಂದ ಹಾಗು ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಪ್ರೇರಣಾ .ಬಿ ಅವರಿಗೆ ೫ ಸಾವಿರ ರು. ಪ್ರೋತ್ಸಾಹ ಧನದೊಂದಿಗೆ  ಮತ್ತು  ಸೇಂಟ್ ಚಾರ್ಲ್ಸ್ ವಿದ್ಯಾಸಂಸ್ಥೆಯ ವಿಧಿತಾ ಅವರಿಗೆ ೨ ಸಾವಿರ ರು. ಪ್ರೋತ್ಸಾಹ ಧನದೊಂದಿಗೆ ೩ ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.
    ವೇದಿಕೆ ಪ್ರಧಾನ ಕಾರ್ಯದರ್ಶಿ ಲತಾ ಪ್ರಭಾಕರ್ ನಿರೂಪಿಸಿದರು. ಉಪಾಧ್ಯಕ್ಷೆ ಪುಷ್ಪ ಕೇಶವಮೂರ್ತಿ, ಕಾರ್ಯದರ್ಶಿ ಶೀಲಾರವಿ ಮತ್ತು ಖಜಾಂಚಿ ಭಾರತಿಕುಮಾರ್ ಸೇರಿದಂತೆ ವೇದಿಕೆ ಸದಸ್ಯರು, ಪ್ರತಿಭಾವಂತ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.