Saturday, May 28, 2022

ಶಾಲೆಗಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಪ್ರತಿಯೊಬ್ಬರ ಪಾತ್ರ ಬಹಳ ಮುಖ್ಯ : ಎ.ಕೆ ನಾಗೇಂದ್ರಪ್ಪ

ಭದ್ರಾವತಿ ಕಾಗದನಗರದ ಪೇಪರ್‌ಟೌನ್ ಪ್ರೌಢಶಾಲೆಯಲ್ಲಿ ಶನಿವಾರ ೮ನೇ ತರಗತಿಗೆ ಪ್ರವೇಶಪಡೆದ ವಿದ್ಯಾರ್ಥಿಗಳಿಗೆ ಟೈ, ಬೆಲ್ಟ್ ಹಾಗು ಸಮವಸ್ತ್ರಗಳನ್ನು ವಿತರಿಸಲಾಯಿತು.
    ಭದ್ರಾವತಿ, ಮೇ. ೨೮: ಇತ್ತೀಚಿನ ವರ್ಷಗಳಲ್ಲಿ ಸಂಘ-ಸಂಸ್ಥೆಗಳು, ದಾನಿಗಳು ಹಾಗು ಹಳೇಯ ವಿದ್ಯಾರ್ಥಿಗಳು ಶಾಲೆಗಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಕೈಜೋಡಿಸುತ್ತಿರುವ ಪರಿಣಾಮ ಶಾಲೆಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಹೇಳಿದರು.
    ಅವರು ಶನಿವಾರ ಪೇಪರ್‌ಟೌನ್  ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಲಾ ಮಕ್ಕಳಿಗೆ ಟೈ, ಬೆಲ್ಟ್ ಹಾಗು ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಪ್ರತಿಯೊಬ್ಬರಿಗೂ ಶಿಕ್ಷಣ ಅವಶ್ಯಕವಾಗಿದ್ದು, ಇದಕ್ಕೆ ಪೂರಕವಾಗಿ ಶಾಲೆಗಳು ಸಹ ಅಭಿವೃದ್ಧಿ ಹೊಂದಬೇಕಾಗಿದೆ. ಶಾಲೆಗಳಲ್ಲಿ ಶಿಕ್ಷಣ ಪಡೆದವರು ಅವುಗಳ ಅಭಿವೃದ್ಧಿ ಬಗ್ಗೆ ಚಿಂತಿಸುವ ಜೊತೆಗೆ ಸರ್ವಾಂಗೀಣ ಬೆಳವಣಿಗೆಯಲ್ಲಿ ಕೈಜೋಡಿಸಬೇಕು. ನಾವು ಶಿಕ್ಷಣ ಪಡೆದ ಶಾಲೆಯನ್ನು ಎಂದಿಗೂ ಮರೆಯಬಾರದು. ಸಾಮಾನ್ಯ ಜನರನ್ನು ಸಹ ಶಾಲೆಗಳ ಅಭಿವೃದ್ಧಿಯಲ್ಲಿ ಕೈಜೋಡಿಸುವಂತೆ ಪ್ರೇರೇಪಿಸಬೇಕು. ಪ್ರತಿಯೊಬ್ಬರು ತಮದೇ ಆದ ಕೊಡುಗೆಗಳನ್ನು ನೀಡಿದಾಗ ಮಾತ್ರ ಶಾಲೆಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಜೊತೆಗೆ ಭವಿಷ್ಯದ ಮಕ್ಕಳಿಗೂ ನೆರವಾಗಲಿವೆ ಎಂದರು.
    ಶಾಲೆಯ ದೈಹಿಕ ಅಪೇಕ್ಷಾ ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಶಾಲೆ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಅವರು ಸಮಾಜದಲ್ಲಿ ಗುರುತಿಸಿಕೊಳ್ಳಲು ಕಾರಣವಾಗಿದೆ. ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಳೇಯ ವಿದ್ಯಾರ್ಥಿಗಳು ಶಾಲೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಶಾಲೆಯಲ್ಲಿ ಕಳೆದ ೩ ವರ್ಷಗಳಿಂದ ದಾನಿಗಳು ಹಾಗು ಹಳೇಯ ವಿದ್ಯಾರ್ಥಿಗಳ ನೆರವಿನೊಂದಿಗೆ ಮಕ್ಕಳಿಗೆ ಉಚಿತವಾಗಿ ಟೈ, ಬೆಲ್ಟ್ ಹಾಗು ಸಮವಸ್ತ್ರಗಳನ್ನು ವಿತರಿಸಲಾಗುತ್ತಿದೆ ಎಂದರು.
    ಶಾಲೆಯ  ಮುಖ್ಯೋಪಾಧ್ಯಾಯಿನಿ ಎ.ಆರ್ ಭಾರತಿ ಅಧ್ಯಕ್ಷತೆ ವಹಿಸಿದ್ದರು. ೧೯೮೨-೮೩ನೇ ಸಾಲಿನ ಹಳೇಯ ವಿದ್ಯಾರ್ಥಿಗಳು, ದಾನಿಗಳಾದ ಬಸವರಾಜ್, ಸತೀಶ್‌ಕುಮಾರ್, ಲಿಂಗೋಜಿರಾವ್ ಮತ್ತು ಈರಪ್ಪ ಹಾಗು ಸಿಆರ್‌ಪಿ ಸಿ. ಚನ್ನಪ್ಪ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಸಹ ಶಿಕ್ಷಕರಾದ ಎಂ. ಕಾಂತರಾಜು ಸ್ವಾಗತಿಸಿದರು. ಸಿ. ಬಸವರಾಜ ವಂದಿಸಿದರು. ಶಾಲೆಯಲ್ಲಿ ೮ನೇ ತರಗತಿಗೆ ಪ್ರವೇಶಪಡೆದ ವಿದ್ಯಾರ್ಥಿಗಳಿಗೆ ಟೈ, ಬೆಲ್ಟ್ ಹಾಗು ಸಮವಸ್ತ್ರಗಳನ್ನು ವಿತರಿಸಲಾಯಿತು.


No comments:

Post a Comment