Saturday, June 18, 2022

ಶಿಕ್ಷಣ ಸಮಾಜದ ಎಲ್ಲರನ್ನು ಒಳಗೊಂಡಿದೆ : ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ

 ಭದ್ರಾವತಿ ವಿದ್ಯಾಮಂದಿರ ಕಲ್ಪವೃಕ್ಷ ಸೇವಾ ಟ್ರಸ್ಟ್ ವತಿಯಿಂದ ಲಯನ್ಸ್ ಕ್ಲಬ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಮತ್ತು ಮಕ್ಕಳ ದಂತ ತಪಸಣಾ ಶಿಬಿರ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಉಚಿತ ನೋಟ್  ಪುಸ್ತಕ ಮತ್ತು ಲೇಖನ ಸಾಮಗ್ರಿ ವಿತರಿಸಿದರು.
    ಭದ್ರಾವತಿ, ಜೂ. ೧೮: ಶಿಕ್ಷಣ ಎಂದರೆ ಕೇವಲ ಮಕ್ಕಳು, ಶಿಕ್ಷಕರು ಹಾಗು ಪೋಷಕರ ನಡುವಿನ ಸಂಬಂಧವಲ್ಲ. ಶಿಕ್ಷಣ ಸಮಾಜದ ಎಲ್ಲರನ್ನು ಒಳಗೊಂಡಿದೆ ಎಂಬುದನ್ನು ಕೆಲವು ಸಂಘ-ಸಂಸ್ಥೆಗಳ ಮಾದರಿ ಕಾರ್ಯಗಳಿಂದ ತಿಳಿದು ಬರುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಹೇಳಿದರು.
    ಅವರು ಶನಿವಾರ ವಿದ್ಯಾಮಂದಿರ ಕಲ್ಪವೃಕ್ಷ ಸೇವಾ ಟ್ರಸ್ಟ್ ವತಿಯಿಂದ ಲಯನ್ಸ್ ಕ್ಲಬ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಮತ್ತು ಮಕ್ಕಳ ದಂತ ತಪಸಣಾ ಶಿಬಿರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಮಕ್ಕಳ ಶಿಕ್ಷಣಕ್ಕೆ ನೆರವಾಗಿ ಉಚಿತವಾಗಿ ನೋಟ್  ಪುಸ್ತಕ ಹಾಗು ಲೇಖನ ಸಾಮಗ್ರಿಗಳನ್ನು ವಿತರಿಸುತ್ತಿರುವುದು ಸಮಾಜಕ್ಕೆ ಮಾದರಿ ಕಾರ್ಯವಾಗಿದೆ. ಮಕ್ಕಳು ನೋಟ್ ಪುಸ್ತಕ ಹಾಗು ಲೇಖನ ಸಾಮಗ್ರಿಗಳ ಸದುಪಯೋಗ ಪಡೆದುಕೊಳ್ಳಬೇಕೆಂದರು.
    ಯುವ ಮುಖಂಡ ಗಣೇಶ್ ಮಾತನಾಡಿ, ಟ್ರಸ್ಟ್ ಮೂಲಕ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿರುವ ಎಲ್ಲರ ಶ್ರಮ ಹೆಚ್ಚಿನದ್ದಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಕಾರ್ಯಗಳು ಇನ್ನೂ ಹೆಚ್ಚಾಗಿ ನಡೆಯುವಂತಾಗಲಿ ಎಂದರು.
    ಸುಬ್ಬಯ್ಯ ಡೆಂಟಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ದಂತ ತಪಾಸಣೆ ನಡೆಸಲಾಯಿತು.
    ಟ್ರಸ್ಟ್ ಅಧ್ಯಕ್ಷ ಲಾಜರ್, ಉಪಾಧ್ಯಕ್ಷ ರಾಮಪ್ಪ ವಿ. ಮುನೇನಕೊಪ್ಪ, ಪ್ರಧಾನ ಕಾರ್ಯದರ್ಶಿ, ನಗರಸಭಾ ಸದಸ್ಯ್ ಕಾಂತರಾಜ್, ಸಹ ಕಾರ್ಯದರ್ಶಿ ಎಚ್.ಪಿ ಶ್ರೀನಿವಾಸ್, ಕೋಶಾಧ್ಯಕ್ಷ ಮಹೇಶ್ವರಪ್ಪ, ನಿರ್ದೇಶಕರಾದ ವಿ.ಎಚ್ ಶಿವಣ್ಣ, ಎಸ್.ಎಚ್ ಹನುಮಂತರಾವ್, ಎಲ್. ಬಸವರಾಜಪ್ಪ, ಡಿ. ಸುಬ್ರಮಣಿ, ನಾಗರಾಜ್, ಆರ್. ಕಾಮಾಕ್ಷಿ, ಎನ್. ರೂಪ, ವಿಲ್ಸನ್ ಬಾಬು ಮತ್ತು ಕೆ. ಆಕಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Friday, June 17, 2022

ನಮ್ಮಗಳ ನಡುವೆ ವಿಷಬೀಜ ಬಿತ್ತಿ ದ್ವೇಷ ಹರಡುವ ಹುನ್ನಾರ : ಡಿ. ಮಂಜುನಾಥ್


ಭದ್ರಾವತಿ :  ಬಹು ಸಂಸ್ಕೃತಿ ಒಪ್ಪಿಕೊಂಡಿರುವ ನಾವೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ    ಬದುಕುತ್ತಿದ್ದು, ನಮ್ಮಗಳ ನಡುವೆ ವಿಷಬೀಜ ಬಿತ್ತಿ ದ್ವೇಷ ಹರಡುವ ಹುನ್ನಾರ ನಡೆಯುತ್ತಿದೆ. ಇದರ ಬಗ್ಗೆ ನಾವುಗಳು ಜಾಗೃತಿಕೊಂಡು ಹೋರಾಟ ನಡೆಸುವ ಅನಿವಾರ್ಯತೆ ನಿರ್ಮಾಣವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಹೇಳಿದರು. ಅವರು ಶುಕ್ರವಾರ ನಗರದ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದಲ್ಲಿ ಕುಪ್ಪಳ್ಳಿಯಿಂದ ಬೆಂಗಳೂರು ಸ್ವಾತಂತ್ರ್ಯ ಉದ್ಯಾನವನಕ್ಕೆ  ಜಾಗೃತಿ ಜ್ಯೋತಿ ಪಯಣ  ಕುವೆಂಪು ವಿಶ್ವಮಾನವ ರಥ ಯಾತ್ರೆ ಸ್ವಾಗತ ಕೋರಿ ಮಾತನಾಡಿದರು.  ಇತ್ತೀಚಿನ ದಿನಗಳಲ್ಲಿ ಬಹುಸಂಸ್ಕೃತಿಯ ಬಹುತ್ವಕ್ಕೆ ಧಕ್ಕೆ ತರುವಂತಹ ಕೆಲಸಗಳು ನಡೆಯುತ್ತಿವೆ.  ಸೃಜನಾತ್ಮಕವಾಗಿ ಆಲೋಚಿಸುವವರ ವಿರುದ್ಧ ಷಡ್ಯಂತ್ರಗಳು ನಡೆಯುತ್ತಿವೆ. ಇದಕ್ಕೆ ಪೂರಕವೆಂಬಂತೆ ಇಂದಿನ ಸರ್ಕಾರ ಹಾಗು ಕೆಲವು ಶಕ್ತಿಗಳು  ನಡೆದುಕೊಳ್ಳುತ್ತಿರುವುದು ಖಂಡನೀಯ. ಇದರ ವಿರುದ್ಧ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವ ಅಗತ್ಯತವಿದೆ.  ಇದಕ್ಕೆ ಪೂರಕವೆಂಬಂತೆ ಕುವೆಂಪು ವಿಶ್ವಮಾನವ ರಥ ಯಾತ್ರೆ ನಡೆಯುತ್ತಿದ್ದು, ಇದರ ಹಿಂದಿನ ಆಶಯವನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಬೆಂಗಳೂರಿನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು. ನಿವೃತ್ತ ಪ್ರಾಂಶುಪಾಲ ಕೃಷ್ಣಮೂರ್ತಿ ಮಾತನಾಡಿ,  ಇಂದಿನ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಕುವೆಂಪು ಅವರ ನಾಡಗೀತೆಯೊಂದಿಗೆ ಬುದ್ಧ, ಬಸವಣ್ಣ, ಮಹಾವೀರ, ಶಂಕರಾಚಾರ್ಯ, ಪೆರಿಯಾರ್, ಗಾಂಧಿ, ಕನಕದಾಸ, ಡಾ. ಬಿ.ಆರ್ ಅಂಬೇಡ್ಕರ್, ನಾರಾಯಣಗುರು ಅವರಿಗೂ ಅವಮಾನಗೊಳಿಸಿದೆ. ಈ ಹಿನ್ನೆಲೆಯಲ್ಲಿ  ಪರಿಷ್ಕೃತಗೊಂಡಿರುವ ಪಠ್ಯ ಪುಸ್ತಕಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.  ನಗರಸಭೆ ಅಧ್ಯಕ್ಷೆ ಗೀತಾ ರಾಜ್ ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸದಸ್ಯರಾದ ಆರ್. ಮೋಹನ್ ಕುಮಾರ್,   ಆರ್. ಶ್ರೇಯಸ್,  ಜಾರ್ಜ್,  ಲತಾ ಚಂದ್ರಶೇಖರ್ ಕಾಂತರಾಜು, ಸಾಹಿತಿ ಚಂದ್ರೇಗೌಡ, ಮುಖಂಡರಾದ ಬಿ.ಎಸ್ ಗಣೇಶ್ , ಅಭಿಲಾಷ್, ಚುಂಚಾದ್ರಿ ಮಹಿಳಾ ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ , ತಾಲೂಕು ಒಕ್ಕಲಿಗರ ಮಹಿಳಾ ವೇದಿಕೆ ಅಧ್ಯಕ್ಷೆ  ಅನ್ನಪೂರ್ಣ ಸತೀಶ್, ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಟಿ ರವಿ, ಕರ್ನಾಟಕ ಜಾನಪದ ಪರಿಷತ್ ತಾಲ್ಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಬಿ.ಎಸ್.ಪಿ  ಪಕ್ಷದ ರಾಜೇಂದ್ರ, ವೆಂಕಟಯ್ಯ ಮಹಾಲಿಂಗಪ್ಪ, ಕಮಲಕರ  ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.  ನಾಡಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಏಕಾಏಕಿ ನೀರು ಸರಬರಾಜು ಸ್ಥಗಿತ : ಸುರಗಿತೋಪಿನಲ್ಲಿ ಕುಡಿಯುವ ನೀರಿನ ಸಮಸ್ಯೆ

ಜಯಶೀಲ ಸುರೇಶ್ ನೇತೃತ್ವದಲ್ಲಿ ವಿಐಎಸ್‌ಎಲ್ ಆಡಳಿತ ಮಂಡಳಿಗೆ ಮನವಿ


    ಭದ್ರಾವತಿ ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೨೦ರ ಸುರಗಿತೋಪಿನಲ್ಲಿ ಕಳೆದ ಕೆಲವು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ವಿಐಎಸ್‌ಎಲ್ ಕಾರ್ಖಾನೆ ವತಿಯಿಂದ ಏಕಾಏಕಿ ನೀರು ಸರಬರಾಜು ಸ್ಥಗಿತಗೊಳಿಸಿರುವ ಹಿನ್ನಲೆಯಲ್ಲಿ ಇಲ್ಲಿನ ನಿವಾಸಿಗಳಿಗೆ ತೊಂದರೆಯಾಗಿದೆ. ತಕ್ಷಣ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ವಾರ್ಡ್ ಸದಸ್ಯೆ ಎಸ್. ಜಯಶೀಲ ಸುರೇಶ್ ನೇತೃತ್ವದಲ್ಲಿ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಸುರಜಿತ್ ಮಿಶ್ರಾ ಅವರಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಜೂ. ೧೭: ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೨೦ರ ಸುರಗಿತೋಪಿನಲ್ಲಿ ಕಳೆದ ಕೆಲವು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ವಿಐಎಸ್‌ಎಲ್ ಕಾರ್ಖಾನೆ ವತಿಯಿಂದ ಏಕಾಏಕಿ ನೀರು ಸರಬರಾಜು ಸ್ಥಗಿತಗೊಳಿಸಿರುವ ಹಿನ್ನಲೆಯಲ್ಲಿ ಇಲ್ಲಿನ ನಿವಾಸಿಗಳಿಗೆ ತೊಂದರೆಯಾಗಿದೆ. ತಕ್ಷಣ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ವಾರ್ಡ್ ಸದಸ್ಯೆ ಎಸ್. ಜಯಶೀಲ ಸುರೇಶ್ ನೇತೃತ್ವದಲ್ಲಿ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಸುರಜಿತ್ ಮಿಶ್ರಾ ಅವರಿಗೆ ಮನವಿ ಸಲ್ಲಿಸಲಾಯಿತು.
    ಕಾರ್ಖಾನೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಸುರಗಿತೋಪಿನಲ್ಲಿ ಕಾರ್ಮಿಕರಿಗೆ ಶೆಡ್‌ಗಳನ್ನು ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿತ್ತು. ಆ ನಂತರ ಇಲ್ಲಿಯೇ ಕಾರ್ಮಿಕರು, ನಿವೃತ್ತ ಕಾರ್ಮಿಕರು ಮತ್ತು ಗುತ್ತಿಗೆ ಕಾರ್ಮಿಕರು ಹಾಗು ಅವರ ಕುಟುಂಬ ವರ್ಗದವರು ನೆಲೆ ನಿಂತಿದ್ದು, ಇಂದಿಗೂ ಇಲ್ಲಿಯೇ ವಾಸಿಸುತ್ತಿದ್ದಾರೆ. ಅಲ್ಲದೆ ಸುಮಾರು ೫೦ ವರ್ಷಗಳಿಂದ ಕಾರ್ಖಾನೆ ವತಿಯಿಂದ ಈ ಭಾಗಕ್ಕೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಇದೀಗ ಏಕಾಏಕಿ ನೀರು ಸರಬರಾಜು ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ. ನಗರಸಭೆ ವತಿಯಿಂದ ಈ ಭಾಗಕ್ಕೆ ಇನ್ನೂ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಕೈಗೊಂಡಿಲ್ಲ. ಇದರಿಂದಾಗಿ ಇಲ್ಲಿನ ನಿವಾಸಿಗಳು, ಜಾನುವಾರುಗಳು ಕುಡಿಯುವ ನೀರಿಗಾಗಿ ತೊಂದರೆ ಎದುರಿಸುವಂತಾಗಿದೆ ಎಂದು ಮನವಿಯಲ್ಲಿ ಅಳಲು ತೋರ್ಪಡಿಸಲಾಗಿದೆ.
    ಕಾರ್ಖಾನೆ ವತಿಯಿಂದ ದಿನಕ್ಕೆ ಕನಷ್ಠ ಪಕ್ಷ ಒಂದು ಗಂಟೆಯಾದರೂ ಕುಡಿಯುವ ಸರಬರಾಜು ಮಾಡುವ ಮೂಲಕ ನಿವಾಸಿಗಳ ಸಂಕಷ್ಟಕ್ಕೆ ಸ್ಪಂದಿಸುವಂತೆ ಮನವಿ ಮಾಡಲಾಗಿದೆ.
    ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ, ನಗರಸಭಾ ಸದಸ್ಯೆ ಪಲ್ಲವಿ, ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟಿನ್ ಗೌರವಾಧ್ಯಕ್ಷ ರಾಮಕೃಷ್ಣ, ಪ್ರಮುಖರಾದ ಕ್ಲಬ್ ಸುರೇಶ್, ದಿಲೀಪ್, ಉಮೇಶ್ ಸುರಗಿತೋಪು, ನಂಜುಂಡಪ್ಪ, ಡಿ.ಟಿ ಶ್ರೀಧರ್, ಚೆನ್ನಿಗಪ್ಪ, ಲೋಕೇಶ್, ನಿರ್ಮಲಕುಮಾರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪ್ರೀತಿಯ ಬಲೆಗೆ ಬಿದ್ದ ಯುವತಿ ಕುಜ ದೋಷಕ್ಕೆ ಬಲಿ

ಪ್ರೀತಿಯ ಬಲೆಗೆ ಬಿದ್ದು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿ ಕೊನೆಯುಸಿರೆಳೆದ ಸುಧಾ
    ಭದ್ರಾವತಿ, ಜೂ. ೧೭: ಪ್ರೀತಿ ಮುಂದೆ ಹಣ, ಅಂತಸ್ತು, ಜಾತಿ, ಭಾಷೆ, ವಯಸ್ಸು ಯಾವುದೂ ಇಲ್ಲ ಎನ್ನುತ್ತಾರೆ. ಪರಸ್ಪರ ಪ್ರೀತಿಸಿದ ಬಹುತೇಕ ಜೋಡಿಗಳು ಎಲ್ಲವನ್ನೂ ಮೀರಿ ದಾಂಪತ್ಯಕ್ಕೆ ಕಾಲಿಡುವುದು ಸಹಜ. ಇಲ್ಲೊಂದು ಪ್ರಕರಣದಲ್ಲಿ ಜ್ಯೋತಿಷಿ ಹೇಳಿದ ಜಾತಕದಿಂದಾಗಿ ಜೋಡಿಗಳಿಬ್ಬರು ಸಾವಿನ ದವಡೆಗೆ ಸಿಲುಕಿಕೊಂಡು ಕೊನೆಗೆ ಪ್ರೀತಿಯ ಬಲೆಗೆ ಬಿದ್ದಿದ್ದ ಯುವತಿ ಬಲಿಯಾಗಿರುವ ಘಟನೆ ನಡೆದಿದೆ.
    ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಧಾ ಬಲಿಯಾಗಿದ್ದು, ಭದ್ರಾವತಿ ವಿಭಾಗ, ಚನ್ನಗಿರಿ ಉಪವಿಭಾಗದ, ಚನ್ನಗಿರಿ ವಲಯದಲ್ಲಿ ಉಪ ವಲಯ ಅರಣ್ಯಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರವೀಣ್ ಮೊಕಾಶಿ ಹಾಗು ಸುಧಾ ಕಳೆದ ಸುಮಾರು ೭ ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಇಬ್ಬರು ಮದುವೆಗೂ ಮುಂದಾಗಿದ್ದರು. ಅಲ್ಲದೆ ಬೇರೆ ಬೇರೆ ಜಾತಿಯಾಗಿದ್ದರೂ ಸಹ ಆರಂಭದಲ್ಲಿ ಮದುವೆಗೆ ಎರಡು ಮನೆಯವರು ಸಹ ಒಪ್ಪಿಗೆ ಸೂಚಿಸಿದ್ದರು ಎನ್ನಲಾಗಿದೆ.
    ಇನ್ನೇನು ಮದುವೆ ನಡೆದೇ ಹೋಯಿತು ಎನ್ನುವಷ್ಟರಲ್ಲಿ ಪ್ರವೀಣ್ ಮೊಕಾಶಿಯವರ ತಾಯಿ ಲಕ್ಷ್ಮಿಯವರು ಜ್ಯೋತಿಷಿ ಬಳಿ ಜಾತಕ ಕೇಳಿದ್ದು, ಈ ಸಂದರ್ಭದಲ್ಲಿ ಯುವತಿಗೆ ಕುಜ ದೋಷವಿರುವುದಾಗಿ ಹೇಳಿದ್ದಾರೆ. ಜ್ಯೋತಿಷ್ಯದ ಪ್ರಕಾರ ಕುಜ ದೋಷವಿದ್ದಲ್ಲಿ ಒಂದು ವೇಳೆ ಇವರಿಬ್ಬರ ಮದುವೆ ನಡೆದಲ್ಲಿ ಮಗನಿಗೆ ಬೇಗನೆ ಸಾವು ಸಂಭವಿಸಲಿದೆ ಎಂಬ ನಂಬಿಕೆಯಲ್ಲಿ ಲಕ್ಷ್ಮೀಯವರು ಇವರಿಬ್ಬರ ಮದುವೆಗೆ ನಿರಾಕರಿಸಿದ್ದು, ಅಲ್ಲದೆ ಇಬ್ಬರು ಪರಸ್ಪರ ಮಾತನಾಡುವುದಕ್ಕೂ ಸಹ ಅಡ್ಡಿಯಾಗಿದ್ದರು ಎನ್ನಲಾಗಿದೆ.


ಪ್ರೀತಿಯ ಬಲೆಗೆ ಬಿದ್ದು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿ ಕೊನೆಯುಸಿರೆಳೆದ ಸುಧಾ
 ಈ ನಡುವೆ ಪ್ರವೀಣ್ ಮೊಕಾಶಿ ಸಹ ಸುಧಾಳಿಂದ ಅಂತರ ಕಾಯ್ದುಕೊಂಡಿದ್ದು, ಈ ಹಿನ್ನಲೆ ಸುಧಾ ನೇರವಾಗಿ ಪ್ರವೀಣ್ ಮೊಕಾಶಿಯನ್ನು ಭೇಟಿಯಾಗಿ ಇತ್ಯರ್ಥಪಡಿಸಿಕೊಳ್ಳಲು ಮುಂದಾಗಿ ಮೇ.೩೦ರಂದು ಉಬ್ರಾಣಿ ಆಗಮಿಸಿದ್ದಾಳೆ. ಈ ಸಂದರ್ಭದಲ್ಲಿ ಇಬ್ಬರು ನಡುವೆ ಮಾತುಕತೆ ನಡೆದು ಕೊನೆಗೆ ಸುಧಾ ನೀನು ಇಲ್ಲದೆ ನಾನು ಬದುಕುವುದಿಲ್ಲ ಎಂದು ತಿಳಿಸಿದ್ದಾಳೆ.
ಈ ನಡುವೆ ಮೇ.೩೧ರಂದು ಸುಧಾಳನ್ನು ಪ್ರವೀಣ್ ಮೊಕಾಶಿ ಬೈಕ್‌ನಲ್ಲಿ ಕೂರಿಸಿಕೊಂಡು ಸಾವು ಎಂದರೆ ಹೇಗಿರುತ್ತದೆ ಎಂದು ತೋರಿಸುತ್ತೇನೆ ಎಂದು ಬೈಕನ್ನು ಮನಬಂದಂತೆ ಓಡಿಸಿ ಭಯ ಹುಟ್ಟಿಸಿದ್ದಾನೆ. ಆದರೂ ಇದಕ್ಕೆ ಜಗ್ಗದ ಸುಧಾಳನ್ನು ಕೊನೆಗೆ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಬಳಿ ಕರೆ ತಂದು ಇಬ್ಬರು ವಿಷ ಕುಡಿದು ಸಾಯೋಣವೆಂದು ತಿಳಿಸಿದ್ದು, ಈ ಹಿನ್ನಲೆಯಲ್ಲಿ ಪ್ರವೀಣ್ ಮೊಕಾಶಿ ಮೊದಲು ನೀನು ವಿಷ ಕುಡಿಯುವಂತೆ ಯುವತಿಗೆ ತಿಳಿಸಿದ್ದು, ಆದರಂತೆ ಆಕೆ ವಿಷ ಸೇವಿಸಿದ್ದಾಳೆ. ಆದರೆ ಪ್ರವೀಣ್ ಮೊಕಾಶಿ ವಿಷ ಸೇವಿಸಿರುವ ಬಗ್ಗೆ ಸುಧಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಅನುಮಾನ ವ್ಯಕ್ತಪಡಿಸಿದ್ದಾಳೆ.
    ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಮಾಹಿತಿ ತಿಳಿಸಿದ ತಕ್ಷಣ ಇಬ್ಬರನ್ನು ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಸುಧಾಳನ್ನು ಮಣಿಪಾಲ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಸುಧಾ ಕಳೆದ ೨ ದಿನಗಳ ಹಿಂದೆ ಸಾವು ಕಂಡಿದ್ದಾಳೆ. ಆದರೆ ಪ್ರವೀಣ್ ಮೊಕಾಶಿ ಬಗ್ಗೆ ಇದುವರೆಗೂ ಮಾಹಿತಿ ಲಭ್ಯವಾಗಿಲ್ಲ.
    ಪ್ರಕರಣ ಸಂಬಂಧ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರವೀಣ್ ಮೊಕಾಶಿ ಹಾಗು ತಾಯಿ ಲಕ್ಷ್ಮೀ ವಿರುದ್ಧ  ಪ್ರಕರಣ ದಾಖಲಾಗಿದೆ. ಪ್ರೀತಿಯ ಬಲೆಗೆ ಬಿದ್ದ ಯುವತಿ ಕುಜ ದೋಷಕ್ಕೆ ಬಲಿಯಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ.


ಕಲಿಕೆ ಜೊತೆಗೆ ಗುರುವಿನ ಕಾರುಣ್ಯವಿದ್ದಾಗ ಮಾತ್ರ ಅಕ್ಷರ ಅಕ್ಷಯವಾಗಲಿದೆ : ಡಾ. ಸುದರ್ಶನ್ ಆಚಾರ್

ತರುಣ ಭಾರತಿ ವಿಶ್ವಸ್ಥ ಮಂಡಳಿ ವತಿಯಿಂದ ಭದ್ರಾವತಿ ಕೇಶವಪುರ ಬಡಾವಣೆಯಲ್ಲಿರುವ ತರುಣ ಭಾರತಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಮೂಹಿಕ ಶಾಸ್ತ್ರೋಕ ಅಕ್ಷರಭ್ಯಾಸ ಕಾರ್ಯಕ್ರಮ ಆಯುರ್ವೇದ ವೈದ್ಯ ಡಾ. ಸುದರ್ಶನ ಆಚಾರ್ ಉದ್ಘಾಟಿಸಿದರು.
    ಭದ್ರಾವತಿ, ಜೂ. ೧೭:  ನಿರಂತರ ಕಲಿಕೆ ಜೊತೆಗೆ ಗುರುವಿನ ಕಾರುಣ್ಯವಿರಬೇಕು ಆಗ ಮಾತ್ರ ಅಕ್ಷರ ಅಕ್ಷಯವಾಗಿ ಉಳಿಯಲಿದೆ ಎಂದು ಆಯುರ್ವೇದ ವೈದ್ಯ ಡಾ. ಸುದರ್ಶನ ಆಚಾರ್ ಹೇಳಿದರು.
    ಅವರು ಶುಕ್ರವಾರ ತರುಣ ಭಾರತಿ ವಿಶ್ವಸ್ಥ ಮಂಡಳಿ ವತಿಯಿಂದ ಕೇಶವಪುರ ಬಡಾವಣೆಯಲ್ಲಿರುವ ತರುಣ ಭಾರತಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಮೂಹಿಕ ಶಾಸ್ತ್ರೋಕ ಅಕ್ಷರಭ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಕ್ಷರ ಕಲಿಕೆಯಲ್ಲಿ ಗುರುವಿನ ಪಾತ್ರ ಬಹಳ ಮುಖ್ಯವಾಗಿದೆ. ಗುರುಗಳು ಹೇಳಿ ಕೊಡುವ ವಿದ್ಯೆ ನಮ್ಮ ಬದುಕಿನ ಕೊನೆಯವರೆಗೂ ಉಳಿಯಲಿದೆ. ಗುರು ಸ್ಥಾನ ಮಹತ್ವದ್ದಾಗಿದೆ. ಇದನ್ನು ಅರಿತುಕೊಂಡು ಮಕ್ಕಳು ಕಲಿಕೆಯಲ್ಲಿ ತೊಡಗಬೇಕೆಂದರು.
    ತರುಣ ಭಾರತಿ ವಿಶ್ವಸ್ಥ ಮಂಡಳಿ ಗೌರವಾಧ್ಯಕ್ಷ ಡಾ.ಮಹಾಬಲೇಶ್ವರ ಮಾತನಾಡಿ, ಅಕ್ಷರ ಅಂದರೆ ಅಕ್ಷಯವಿದ್ದಂತೆ. ಅದು ಎಂದಿಗೂ ನಾಶವಾಗುವುದಿಲ್ಲ. ಅಂತಹ ಅಕ್ಷರವನ್ನು ಕಲಿಸುವ ಮೂಲಕ ಸಾಕ್ಷರತ್ವದಿಂದ ಸರಸ್ವತ್ವದೆಡೆಗೆ ಸಾಗಿ ಅಂತಿಮವಾಗಿ ಸಮಾಜಕ್ಕೆ ಯೋಗ್ಯ ವ್ಯಕ್ತಿಯಾಗ ಬೇಕು ಎನ್ನುವ ಉದ್ದೇಶದಿಂದ ಅಕ್ಷರಭ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
    ಆಯಾಯ ಕಾಲಕ್ಕೆ ಯಾವ್ಯಾವ ಸಂಸ್ಕಾರಗಳನ್ನು ಮಾಡಬೇಕೋ ಆಯಾಯ ಸಂಸ್ಕರಾರಗಳನ್ನು ಮಾಡಬೇಕು. ಗಣಪತಿ, ಸರಸ್ವತಿ ಹಾಗು ಕುಲ ದೇವರೊಂದಿಗೆ ಪೂಜಿಸಿ ಸ್ಮರಿಸಿ ಅಕ್ಕಿಯ ಕಾಳುಗಳ ಮೇಲೆ ಅಕ್ಷರಭ್ಯಾಸವನ್ನು ಮಗುವಿನಿಂದ ಬರೆಸುವ ಮೂಲಕ ಮಕ್ಕಳಿಗೆ ವಿಧ್ಯಾಭ್ಯಾಸವನ್ನು ಪ್ರಾರಂಭಿಸಲಾಗುತ್ತದೆ ಎಂದರು.
    ಕಾರ್ಯಕ್ರಮದಲ್ಲಿ ಎಲ್ಲಾ ಮಕ್ಕಳಿಗೆ ಉಚಿತವಾಗಿ ಸ್ಲೇಟು, ಬಳಪಗಳನ್ನು ವಿತರಿಸಲಾಯಿತು. ವೇ.ಬ್ರ.ಚಂದನ್ ಜೋಯ್ಸ್ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು.
    ಕೃಷ್ಣ ಉಪಾಧ್ಯಾಯ ಅಧ್ಯಕ್ಷತೆ ವಹಿಸಿದ್ದರು. ವಿಶ್ವಸ್ಥ ಮಂಡಳಿ ಪ್ರಮುಖರಾದ ಮಧುಕರ್ ಕಾನಿಟ್ಕರ್, ಸುಭಾಷ್, ನಂದಿನಿ ಮಲ್ಲಿಕಾರ್ಜುನ, ಜಯಶ್ರೀ , ರವಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಶಾಲೆಯ ಮಕ್ಕಳು, ಶಿಕ್ಷಕರು, ಪೋಷಕರು ಹಾಗು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
    ನಾಗಶ್ರೀ ಪ್ರಾರ್ಥಿಸಿದರು. ಸರಿತಾ ಅಮೃತವಚನ ವಾಚಿಸಿದರು. ಸರ್ವಮಂಗಳ ಸ್ವಾಗತಿಸಿದರು. ಅನಿತಾ ವಂದಿಸಿ, ಗೀತಾ ನಿರೂಪಿಸಿದರು.

Thursday, June 16, 2022

ಟ್ರೆಂಚ್‌ನಲ್ಲಿ ಸಿಕ್ಕಿಹಾಕಿಕೊಂಡ ಹಸು : ಸ್ಥಳೀಯರಿಂದ ರಕ್ಷಣೆ


ಭದ್ರಾವತಿ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಕನ್ನಡ ಪ್ರಾಥಮಿಕ ಶಾಲೆ ಪಕ್ಕದಲ್ಲಿ ಟ್ರೆಂಚ್(ಕಂದಕ)ನಲ್ಲಿ ಹಸು ಸಿಕ್ಕಿಹಾಕಿಕೊಂಡಿರುವುದು.
ಭದ್ರಾವತಿ, ಜೂ. ೧೬: ನಗರದ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಕನ್ನಡ ಪ್ರಾಥಮಿಕ ಶಾಲೆ ಪಕ್ಕದಲ್ಲಿ ಟ್ರೆಂಚ್(ಕಂದಕ)ನಲ್ಲಿ ಹಸು ಸಿಕ್ಕಿಹಾಕಿಕೊಂಡ ಘಟನೆ ನಡೆದಿದ್ದು, ತಕ್ಷಣ ಸ್ಥಳೀಯರು ಹಸುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಾಲೆಯ ಪಕ್ಕದಲ್ಲಿ ಟ್ರೆಂಚ್ ಹೊಡೆದು ಹಲವು ದಿನಗಳು ಕಳೆದಿದ್ದು, ಆದರೆ ಟ್ರಂಚ್ ಮುಚ್ಚದ ಕಾರಣ ಹಸುವೊಂದು ಸಿಕ್ಕಿ ಹಾಕಿಕೊಂಡಿದೆ. ಸ್ಥಳೀಯರು ಹಸು ಸಿಕ್ಕಿ ಹಾಕಿಕೊಂಡ ತಕ್ಷಣ ಕಾರ್ಯಪ್ರವೃತರಾಗಿ ಟ್ರಂಚ್ ಅಕ್ಕಪಕ್ಕ  ಮಣ್ಣು ಹೊರ ತೆಗೆದು ಸಡಿಲಗೊಳಿಸುವ ಮೂಲಕ ರಕ್ಷಿಸಿದ್ದಾರೆ. ಈ ನಡುವೆ ಘಟನೆಗೆ ಬಿಎಸ್‌ಎನ್‌ಎಲ್ ನಿರ್ಲಕ್ಷ್ಯತನ ಕಾರಣ ಎಂದು ಸ್ಥಳೀಯರು ಆರೋಪಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲೆ ಪಕ್ಕದಲ್ಲಿಯೇ ಟ್ರೆಂಚ್ ಇರುವ ಕಾರಣ ಒಂದು ವೇಳೆ ಶಾಲಾ ಮಕ್ಕಳು ಟ್ರಂಚ್‌ನಲ್ಲಿ ಸಿಕ್ಕಿ ಹಾಕಿಕೊಂಡು ಅವಘಡಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿದ್ದು, ತಕ್ಷಣ ಟ್ರಂಚ್ ಮುಚ್ಚುವ ಕಾರ್ಯ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.


ಭದ್ರಾವತಿ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಕನ್ನಡ ಪ್ರಾಥಮಿಕ ಶಾಲೆ ಪಕ್ಕದಲ್ಲಿ ಟ್ರೆಂಚ್(ಕಂದಕ)ನಲ್ಲಿ ಹಸು ಸಿಕ್ಕಿಹಾಕಿಕೊಂಡ ಘಟನೆ ನಡೆದಿದ್ದು, ತಕ್ಷಣ ಸ್ಥಳೀಯರು ಹಸುವನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. 

ದೊಣಬಘಟ್ಟ ಗ್ರಾಮ ಅಧ್ಯಕ್ಷರಾಗಿ ಎಂ.ಡಿ ಕಲೀಂ, ಉಪಾಧ್ಯಕ್ಷರಾಗಿ ಮಲ್ಲಮ್ಮ ಅವಿರೋಧ ಆಯ್ಕೆ

ಭದ್ರಾವತಿ ದೊಣಬಘಟ್ಟ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷ ಎಂ.ಡಿ ಕಲೀಂ

    ಭದ್ರಾವತಿ, ಜೂ. ೧೬: ತಾಲೂಕಿನ ದೊಣಬಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಎಂ.ಡಿ ಕಲೀಂ ಹಾಗು ಉಪಾಧ್ಯಕ್ಷರಾಗಿ ಮಲ್ಲಮ್ಮ ಗುರುವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
    ಒಟ್ಟು ೨೧ ಸದಸ್ಯ ಬಲವನ್ನು ಹೊಂದಿರುವ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನ ಎ ವರ್ಗಕ್ಕೆ ಹಾಗು ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ. ಒಡಂಬಡಿಕೆಯಂತೆ ಅಧಿಕಾರ ಹಂಚಿಕೆ ಮಾಡಿಕೊಂಡಿದ್ದು, ಮೊದಲ ಹಂತದಲ್ಲಿ ಖಲೀಲ್ ಸಾಬ್ ಅಧ್ಯಕ್ಷರಾಗಿ ಹಾಗು ಹಾಲಮ್ಮ ಉಪಾಧ್ಯಕ್ಷರಾಗಿ ಅಧಿಕಾರ ನಡೆಸಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದರು.


ಭದ್ರಾವತಿ ದೊಣಬಘಟ್ಟ ಗ್ರಾಮ ಪಂಚಾಯಿತಿ ನೂತನ ಉಪಾಧ್ಯಕ್ಷೆ ಮಲ್ಲಮ್ಮ

    ತೆರವಾದ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆದಿದ್ದು, ಅಧ್ಯಕ್ಷರಾಗಿ ಎಂ.ಡಿ ಕಲೀಂ ಹಾಗು ಉಪಾಧ್ಯಕ್ಷರಾಗಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಮಲ್ಲಮ್ಮ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್ ಕಾರ್ಯ ನಿರ್ವಹಿಸಿದರು. ಚುನಾವಣಾ ಪ್ರಕ್ರಿಯೆಯಲ್ಲಿ ೧೨ ಸದಸ್ಯರು ಭಾಗವಹಿಸಿದ್ದು, ಎರಡು ಸ್ಥಾನಗಳಿಗೂ ಪ್ರತಿಸ್ಪರ್ಧಿಗಳು ಇಲ್ಲದ ಕಾರಣ ಅವಿರೋಧ ಆಯ್ಕೆ ಘೋಷಿಸಲಾಯಿತು. ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಂಡ ನಂತರ ನೂತನ ಅಧ್ಯಕ್ಷರು, ಉಪಾಧ್ಯಕ್ಷರ ಬೆಂಬಲಿಗರು ಸಂಭ್ರಮಾಚರಣೆ ನಡೆಸಿದರು.  


    ಈ ನಡುವೆ ಒಡಂಬಡಿಕೆಯಂತೆ ನಡೆದುಕೊಂಡಿಲ್ಲ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಸದಸ್ಯೆ ಕೌಸರು ಬಾನು ಬೆಂಬಲಿಗರೊಂದಿಗೆ ಪ್ರತಿಭಟನಡೆಸಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಕೆಲ ಸಮಯ ಅಹಿತಕರ ವಾತಾವರಣ ನಿರ್ಮಾಣಗೊಂಡಿದ್ದು, ಪೊಲೀಸರು ಮಧ್ಯ ಪ್ರವೇಶಿಸಿ ಪ್ರತಿಭಟನಾಕಾರರನ್ನು ತೆರವುಗೊಳಿಸಿದ್ದಾರೆ.  ಕೌಸರ್ ಬಾನು ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸುವಲ್ಲಿ ಯಶಸ್ವಿಯಾದರು. ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ನಡೆದಿರುವ ಘಟನೆ ವಿಡಿಯೋ ಎಲ್ಲೆಡೆ ವ್ಯಾಪಕವಾಗಿ ಹರಿದಾಡುತ್ತಿದೆ.