Monday, July 4, 2022

ರೈಲಿಗೆ ಸಿಲುಕಿ ೩೦ಕ್ಕೂ ಹೆಚ್ಚು ಕುರಿಗಳು ಬಲಿ

ಭದ್ರಾವತಿ ಉಂಬ್ಳೆಬೈಲು ರಸ್ತೆ ಅಂಡರ್ ಬ್ರಿಡ್ಜ್ ಬಳಿ ಎಲ್‌ಐಸಿ ಕಛೇರಿ ಮುಂಭಾಗ ಸೋಮವಾರ ಸಂಜೆ ಸುಮಾರು ೩೦ಕ್ಕೂ ಹೆಚ್ಚು ಕುರಿಗಳು ಚಲಿಸುತ್ತಿದ್ದ ರೈಲಿಗೆ ಸಿಲುಕಿಕೊಂಡು ಮೃತಪಟ್ಟಿರುವ ಘಟನೆ ನಡೆದಿದೆ.
    ಭದ್ರಾವತಿ, ಜು. ೪ :  ನಗರದ ಉಂಬ್ಳೆಬೈಲು ರಸ್ತೆ ಅಂಡರ್ ಬ್ರಿಡ್ಜ್ ಬಳಿ ಎಲ್‌ಐಸಿ ಕಛೇರಿ ಮುಂಭಾಗ ಸೋಮವಾರ ಸಂಜೆ ಸುಮಾರು ೩೦ಕ್ಕೂ ಹೆಚ್ಚು ಕುರಿಗಳು ಚಲಿಸುತ್ತಿದ್ದ ರೈಲಿಗೆ ಸಿಲುಕಿಕೊಂಡು ಮೃತಪಟ್ಟಿರುವ ಘಟನೆ ನಡೆದಿದೆ.


      ಕುರಿಗಾಹಿಗಳು ಉಂಬ್ಳೆಬೈಲು ರಸ್ತೆಯಲ್ಲಿ ಬರುತ್ತಿದ್ದಾರೆ. ವಾಹನ ದಟ್ಟಣೆ ಹೆಚ್ಚಾದ ಹಿನ್ನಲೆಯಲ್ಲಿ ಕುರಿಗಳು ಏಕಾಏಕಿ ರೈಲ್ವೆ ಹಳಿ ಕಡೆಗೆ ತಿರುಗಿವೆ. ಈ ಸಂದರ್ಭದಲ್ಲಿ ತಾಳಗುಪ್ಪ-ಮೈಸೂರು ರೈಲಿಗೆ ಸಿಲುಕಿಕೊಂಡಿವೆ. ಕೆಲವು ಕುರಿಗಳು ರೈಲಿಗೆ ಸಿಲುಕಿ ಛಿದ್ರ ಛಿದ್ರವಾಗಿವೆ. ಸ್ಥಳದಲ್ಲಿಯೇ ಸುಮಾರು ೩೦ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ.
      ಕುರಿಗಳು ಹಾವೇರಿ ಸವಣೂರಿನ ವ್ಯಕ್ತಿಯೊಬ್ಬರಿಗೆ ಸೇರಿದ್ದಾಗಿದ್ದು, ಘಟನೆ ನಡೆದ ಕೆಲವೇ ಸಮಯದಲ್ಲಿ ಮೃತ ಕುರಿಗಳನ್ನು ತೆರವುಗೊಳಿಸಲಾಯಿತು.



ವಿಇಎಸ್ ವಿದ್ಯಾಸಂಸ್ಥೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ

ಭದ್ರಾವತಿ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ಮಕ್ಕಳ ತಜ್ಞ ಡಾ.ಕೆ.ಜೆ ರಾಜೇಂದ್ರ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ಭದ್ರಾವತಿ, ಜು. ೪: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತ ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ರಾಷ್ಟ್ರೀಯ ವೈದ್ಯರ ದಿನಾಚರಣೆ ವಿಶೇಷವಾಗಿ ಆಚರಿಸಲಾಯಿತು.
      ವಿದ್ಯಾಸಂಸ್ಥೆಯ ಹಳೇಯ ವಿದ್ಯಾರ್ಥಿ, ನಗರದ ಪ್ರಗತಿ ಮಕ್ಕಳ ಚಿಕಿತ್ಸಾಲಯದ ವೈದ್ಯ ಡಾ.ಕೆ.ಜೆ ರಾಜೇಂದ್ರ ಅವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.
      ಈ ಸಂದರ್ಭದಲ್ಲಿ ಮಾತನಾಡಿದ ಡಾ.ಕೆ.ಜೆ ರಾಜೇಂದ್ರ, ವಿದ್ಯಾಸಂಸ್ಥೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ.  ಈ ವಿದ್ಯಾಸಂಸ್ಥೆಯ ವಿದ್ಯಾರ್ಥಿಯಾಗಿರುವುದು ಹೆಮ್ಮೆಯ ವಿಚಾರವಾಗಿದೆ. ಶಾಲಾ ದಿನಗಳು ಇಂದಿಗೂ ಅವಿಸ್ಮರಣೀಯವಾಗಿ ಉಳಿದುಕೊಂಡಿದ್ದು, ವೈದ್ಯರ ದಿನಾಚರಣೆಯಲ್ಲಿ ನನ್ನನ್ನು ಆಹ್ವಾನಿಸಿ ಸನ್ಮಾನಿಸುವ ಮೂಲಕ ಅಭಿನಂದಿಸುತ್ತಿರುವುದು ತುಂಬಾ ಸಂತೋಷವನ್ನುಂಟು ಮಾಡಿದೆ ಎಂದರು.  
       ವಿದ್ಯಾ ಸಂಸ್ಥೆಯ ಕಾರ್ಯಾಧ್ಯಕ್ಷ ಬಿ.ಎಲ್ ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಡಾ.ಎಸ್.ಪಿ ರಾಕೇಶ್, ದೈಹಿಕ ಶಿಕ್ಷಣ ನಿರ್ದೇಶಕ ಶಿವಲಿಂಗೇಗೌಡ, ಎಲ್ಲಾ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಶಿಕ್ಷಕರು ಹಾಗು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.  
      ಜೆ.ಆರ್ ಆಶಾ ಪ್ರಾರ್ಥಿಸಿದರು. ಕವಿತ ನಿರೂಪಿಸಿದರು. ರೇವತಿ ಸ್ವಾಗತಿಸಿ ರವಿ ವಂದಿಸಿದರು.

ಕೇಂದ್ರ, ರಾಜ್ಯ ಸರ್ಕಾರಗಳಿಂದ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಅವಮಾನ

ಪಠ್ಯಪುಸ್ತಕ ಬದಲಾವಣೆ ಕೈಬಿಡಿ, ಪ್ರತ್ಯೇಕ ನಿಗಮ ಸ್ಥಾಪಿಸಿ : ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಆಗ್ರಹ

ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಪ್ರಮುಖರು ಸೋಮವಾರ ಭದ್ರಾವತಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಭದ್ರಾವತಿ, ಜು. ೪: ರಾಜ್ಯದ ಜನಸಂಖ್ಯೆಯಲ್ಲಿ ೪ನೇ ಸ್ಥಾನದಲ್ಲಿರುವ ಈಡಿಗ, ಬಿಲ್ಲವ, ನಾಮಧಾರಿಯಾಗಿ ೨೬ ಪಂಗಡಗಳನ್ನು ಒಳಗೊಂಡಿರುವ ಹಿಂದುಳಿದ ಸಮಾಜವನ್ನು ಕಡೆಗಣಿಸುವ ಜೊತೆಗೆ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಅವಮಾನಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಮುಂದಾಗಿವೆ ಎಂದು ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಪ್ರಮುಖರು ಆರೋಪಿಸಿದರು.
      ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪ್ರಮುಖ್ ಪ್ರವೀಣ್, ತಾಲೂಕು ಅಧ್ಯಕ್ಷ ಎನ್. ನಟರಾಜ್ ಸೇರಿದಂತೆ ಇನ್ನಿತರರು, ಹಿಂದುಳಿದ ವರ್ಗದವರು ಎಂಬ ಏಕೈಕ ಕಾರಣಕ್ಕೆ ಸಮಾಜವನ್ನು ಕಡೆಗಣಿಸಲಾಗುತ್ತಿದೆ. ದೆಹಲಿಯಲ್ಲಿ ಜನವರಿ-೨೬ರ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಬ್ರಹಶ್ರೀ ನಾರಾಯಣ ಗುರುಗಳ ಸ್ಥಬ್ದಚಿತ್ರಕ್ಕೆ ಅವಕಾಶ ನೀಡದೆ ಗುರುಗಳನ್ನು ಅವಮಾನಿಸಿರುವ ಘಟನೆಯನ್ನು ಸಮಾಜ ಇನ್ನೂ ಮರೆತ್ತಿಲ್ಲ. ಈಗಿರುವಾಗ ರಾಜ್ಯ ಸರ್ಕಾರ ಇದೀಗ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಚರಿತ್ರೆಯನ್ನು ೧೦ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕದಿಂದ ತೆಗೆದು ಕನ್ನಡ ಪಠ್ಯ ಪುಸ್ತಕಕ್ಕೆ ಬದಾಯಿಸುವ ಮೂಲಕ ಮತ್ತೊಮ್ಮೆ ಅವಮಾನಗೊಳಿಸುವ ನಿಟ್ಟಿನಲ್ಲಿ ತೊಡಗಿದೆ. ಇದನ್ನು ವೇದಿಕೆ ಖಂಡಿಸುವ ಜೊತೆಗೆ ಕನ್ನಡ ಪಠ್ಯ ಪುಸ್ತಕಕ್ಕೆ ಬದಲಾಯಿಸಿರುವ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದರು.
      ಬ್ರಹ್ಮಶ್ರೀ ನಾರಾಯಣ ಗುರುಗಳ ಮತ್ತು ಪೆರಿಯಾರ್ ಅವರ ಜೀವನ ಚರಿತ್ರೆ ೧೦ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಿಂದ ಕೈಬಿಟ್ಟಿರುವ ಬಗ್ಗೆ ಪ್ರಾರಂಭವಾದ ಹೋರಾಟ ಆ ನಂತರದ ದಿನಗಳಲ್ಲಿ ಭಗತ್ ಸಿಂಗ್ ಚರಿತ್ರೆ ಕೈಬಿಟ್ಟಿರುವುದು ಜೊತೆಯಲ್ಲಿ ಬಸವಣ್ಣ, ಕುವೆಂಪು, ಅಂಬೇಡ್ಕರ್‌ರವರ ಚರಿತ್ರೆಯ ಪಾಠಗಳಲ್ಲಿ ಆಗಿರುವ ಲೋಪದೋಷಗಳ ಬಗ್ಗೆ ಲಿಂಗಾಯಿತ, ಒಕ್ಕಲಿಗ ಸಮಾಜ ಮುಂತಾದ ಮೇಲ್ವರ್ಗಗಳ ಸ್ವಾಮೀಜಿಗಳ ಹೋರಾಟದ ಎಚ್ಚರಿಕೆ ಬಂದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ, ಶಿಕ್ಷಣ ಸಚಿವರು ರೋಹಿತ್ ಚಕ್ರತೀರ್ಥ ಸಮಿತಿ ವಿಸರ್ಜಿಸುವುದರ ಜೊತೆಗೆ ಕುವೆಂಪು ಮತ್ತು ಬಸವಣ್ಣನವರ ಚರಿತ್ರೆಯಲ್ಲಿ ಆಗಿರುವ ಕೆಲವು ಲೋಪದೋಷಗಳನ್ನು ಸರಿಪಡಿಸುವ ಮೂಲಕ ಮೇಲ್ವರ್ಗಗಳನ್ನು ಓಲೈಸಲು ಮುಂದಾಗಿರುವುದು ತಿಳಿದುಬಂದಿದೆ.
      ಆದರೆ ಹಿಂದುಳಿದ ವರ್ಗಗಳ ಉನ್ನತಿಯ ಹರಿಕಾರ, ಕೇರಳದಲ್ಲಿ ಮೇಲ್ವರ್ಗದವರ ಅನಾಚಾರ, ದಬ್ಬಾಳಿಕೆಯಿಂದಾಗಿ ಮತಾಂತರವಾಗುತ್ತಿದ್ದ ಹಿಂದುಳಿದ ವರ್ಗಗಳಿಗೆ ಧ್ವನಿಯಾಗಿ, ಶಕ್ತಿಯಾಗಿ ಅವರನ್ನು ಹಿಂದುತ್ವದಲ್ಲಿ ಉಳಿಸಿ ಕೇರಳವನ್ನು ದೇವರ ನಾಡನ್ನಾಗಿ ಪರಿವರ್ತಿಸಿದ ಮಹಾನ್ ಸಂತ, ವಿದ್ಯೆಯ ಮಹತ್ವ ಸಮಾಜಕ್ಕೆ ತಿಳಿಸಿಕೊಟ್ಟು ಶೈಕ್ಷಣಿಕ ಕ್ರಾಂತಿಯನ್ನು ಮಾಡಿದ ಸಮಾಜ ಸುಧಾರಕರಾದ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಚರಿತ್ರೆಯನ್ನು ಎಲ್ಲಾ ವಿದ್ಯಾರ್ಥಿಗಳು ಅಧ್ಯಯನ ಮಾಡಲೇಬೇಕಾದ ಸಮಾಜ ವಿಜ್ಞಾನ ಪಠ್ಯಪುಸ್ತಕದಿಂದ ತೆಗೆದು ವಿದ್ಯಾರ್ಥಿಗಳಿಗೆ ಐಚ್ಚಿಕವಾದ ಕನ್ನಡ ಪಠ್ಯಪುಸ್ತಕದಲ್ಲಿ ಸೇರ್ಪಡೆಗೊಳಿಸಿ ಹಿಂದುಳಿದ ಸಮಾಜದ ಕಣ್ಣೊರೆಸುವ ತಂತ್ರ ಮಾಡಲಾತ್ತಿದೆ ಎಂದು ಆರೋಪಿಸಿದರು. ಇದನ್ನು ಸಮಾಜ ಯಾವತ್ತಿಗೂ ಒಪ್ಪುತ್ತಿಲ್ಲ. ಈಗಾಗಲೇ ಈ ಕುರಿತು ಈ ಹಿಂದೆಯೇ ಸಮಾಜದ ಗಣ್ಯರು ಸ್ಪಷ್ಟಪಡಿಸಿದ್ದಾರೆ. ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿಯೇ ಬ್ರಹ್ಮಶ್ರೀ ನಾರಾಯಣಗುರುಗಳ ಜೀವನ ಚರಿತ್ರೆ ಮುಂದುವರೆಸಬೇಕೆಂದು ಆಗ್ರಹಿಸಿದರು.
       ರಾಜ್ಯದ ಜನಸಂಖ್ಯೆಯಲ್ಲಿ ೪ನೇ ಸ್ಥಾನದಲ್ಲಿರುವ ಈಡಿಗ, ಬಿಲ್ಲವ, ನಾಮಧಾರಿಯಾಗಿ ೨೬ ಪಂಗಡಗಳನ್ನು ಒಳಗೊಂಡಿರುವ ಹಿಂದುಳಿದ ಸಮಾಜದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ರಚಿಸಬೇಕೆಂದು ಹಲವಾರು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಆದರೆ ಸರ್ಕಾರ ಈ ಬಗ್ಗೆ ಗಮನ ಹರಿಸುತ್ತಿಲ್ಲ. ನಮ್ಮ ಹೋರಾಟದ ನಂತರ ಇತ್ತೀಚಿಗೆ ಕೆಲವು ಸಮಾಜಗಳು ಬೇಡಿಕೆ ಸಲ್ಲಿಸಿದ ತಕ್ಷಣ ಪ್ರತ್ಯೇಕ ನಿಗಮ ಮಂಡಳಿ ರಚಿಸಿ ನೂರಾರು ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ. ಆದರೆ ನಮ್ಮ ಸಮಾಜಕ್ಕೆ ಪ್ರತ್ಯೇಕ ನಿಗಮ ರಚಿಸುವಲ್ಲಿ ನಿರ್ಲಕ್ಷ್ಯತನ ವಹಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣ ಸಮಾಜದ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
      ವೇದಿಕೆ ತಾಲೂಕು ಗೌರವಾಧ್ಯಕ್ಷ ವಸಂತ ಬಿ. ಪೂಜಾರಿ, ಬಿ. ಲೋಕನಾಥ್, ಕೋಗಲೂರು ತಿಪ್ಪೇಸ್ವಾಮಿ, ಉಪಾಧ್ಯಕ್ಷರಾದ ಆರ್. ಚಂದ್ರಶೇಖರ್, ಕೆ.ಎನ್ ಜಗದೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
      


Sunday, July 3, 2022

ದಕ್ಷಿಣ ಭಾರತ ಚಲನಚಿತ್ರ ನೌಕರರ ಫೆಡರೇಷನ್ ಅಧ್ಯಕ್ಷ ಆರ್.ಕೆ ಸೆಲ್ವಮಣಿ ಸೇರಿದಂತೆ ಗಣ್ಯರ ತಂಡ ಆಗಮನ : ಅದ್ದೂರಿ ಸ್ವಾಗತ

ದಕ್ಷಿಣ ಭಾರತ ಚಲನಚಿತ್ರ ನೌಕರರ ಫೆಡರೇಷನ್ ಅಧ್ಯಕ್ಷ ಆರ್.ಕೆ ಸೆಲ್ವಮಣಿ ಸೇರಿದಂತೆ ಅನೇಕ ಗಣ್ಯರು ಭಾನುವಾರ ಭದ್ರಾವತಿಯಲ್ಲಿ ಉದ್ಯಮಿ ಎ. ಮಾಧು ಅವರ ನಿವಾಸಕ್ಕೆ ಭೇಟಿ ನೀಡಿದರು.
    ಭದ್ರಾವತಿ, ಜು. ೩: ದಕ್ಷಿಣ ಭಾರತ ಚಲನಚಿತ್ರ ನೌಕರರ ಫೆಡರೇಷನ್ ಅಧ್ಯಕ್ಷ ಆರ್.ಕೆ ಸೆಲ್ವಮಣಿ ಸೇರಿದಂತೆ ಅನೇಕ ಗಣ್ಯರು ಭಾನುವಾರ ನಗರದ ಉದ್ಯಮಿ ಎ. ಮಾಧು ಅವರ ನಿವಾಸಕ್ಕೆ ಭೇಟಿ ನೀಡಿದರು.
      ಶಿವಮೊಗ್ಗದಲ್ಲಿ ರುದ್ರಾಕ್ಷ ಫೌಂಡೇಷನ್ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಚೆನ್ನೈನಿಂದ ಆಗಮಿಸಿದ ಸಂಗೀತ ನಿರ್ದೇಶಕ ಗಂಗೈ ಅಮರನ್, ಚಲನಚಿತ್ರ ನಿರ್ದೇಶಕ ಹಾಗು ದಕ್ಷಿಣ ಭಾರತ ಚಲನಚಿತ್ರ ನೌಕರರ ಫೆಡರೇಷನ್ ಅಧ್ಯಕ್ಷ ಆರ್. ಸೆಲ್ವಮಣಿ ಮತ್ತು ಚಲನಚಿತ್ರ ಹಾಗು ಟಿ.ವಿ ಕಲಾವಿದ ರಾಜ ಚೆಲ್ಲಪ್ಪ ಅವರನ್ನು ನಗರದ ಉಂಬ್ಳೆಬೈಲು ರಸ್ತೆ ಮೆಸ್ಕಾಂ ಕಛೇರಿ ಮುಂಭಾಗದಲ್ಲಿರುವ ಸಂಜಯ್ ಕಾಲೋನಿಯಲ್ಲಿ ಉದ್ಯಮಿಗಳಾದ ಎ. ಮಾಧು, ಸುರೇಶ್‌ಕುಮಾರ್, ಮೀನುಗಾರರ ಸಂಘದ ಅಧ್ಯಕ್ಷ ಮುರುಗನ್, ಎಂ. ಭೂಪಾಲ್, ಸುಂದರ್ ಬಾಬು ಸೇರಿದಂತೆ ಇನ್ನಿತರ ಪ್ರಮುಖರು ಅದ್ದೂರಿಯಾಗಿ ಸ್ವಾಗತಿಸಿ ಸನ್ಮಾನಿಸಿ ಗೌರವಿಸಿದರು.

ಶ್ರೀ ನಾಗೇಂದ್ರಕುಮಾರ್ ಗುರುಗಳಿಂದ ವಿಶೇಷ ಸತ್ಸಂಗ

ಶ್ರೀ ನಾಗೇಂದ್ರಕುಮಾರ್ ಗುರುಗಳಿಂದ ಭದ್ರಾವತಿ ನ್ಯೂಟೌನ್ ಶ್ರೀ ದತ್ತಾಶ್ರಮದಲ್ಲಿ ಭಾನುವಾರ ವಿಶೇಷ ಸತ್ಸಂಗ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
    ಭದ್ರವತಿ, ಜು. ೩: ಶ್ರೀ ನಾಗೇಂದ್ರಕುಮಾರ್ ಗುರುಗಳಿಂದ ನ್ಯೂಟೌನ್ ಶ್ರೀ ದತ್ತಾಶ್ರಮದಲ್ಲಿ ಭಾನುವಾರ ವಿಶೇಷ ಸತ್ಸಂಗ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
      ಬೆಳಿಗ್ಗೆ ೯ ಗಂಟೆಯಿಂದ ಆರಂಭಗೊಂಡ ಸತ್ಸಂಗದಲ್ಲಿ ಗುರುಗಳಿಂದ ಪ್ರವಚನ, ಭಕ್ತರಿಂದ ಲಲಿತಾಸಹಸ್ರನಾಮದಿಂದ ಕುಂಕುಂಮಾರ್ಚನೆ, ಪಾದಪೂಜೆ, ಪುಷ್ಪಾಭಿಷೇಕ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. ಇದಕ್ಕೂ ಮೊದಲು ಗುರುಗಳನ್ನು ಪೂರ್ಣಕುಂಭದಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು.
      ನಗರದ ವಿವಿಧೆಡೆಗಳಿಂದ ಭಕ್ತಾಧಿಗಳು ಆಗಮಿಸಿ ಶ್ರೀಗಳ ದರ್ಶನ ಪಡೆದರು. ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಮೂಲತಃ ಭದ್ರಾವತಿಯವರಾದ ಸುಷ್ಮಯೋಗಾನಂದ ಕುಟುಂಬ ವರ್ಗದವರು ಕಾರ್ಯಕ್ರಮವನ್ನು ಆಯೋಜಿಸಿದ್ದರು.
       ಶನಿವಾರ ಸಂಜೆ ತಾಲೂಕು ಕಛೇರಿ ಮುಂಭಾಗದಲ್ಲಿರುವ ನೋಟರಿ ಆರ್.ಎಸ್ ಶೋಭಾ ಅವರ ನಿವಾಸದಲ್ಲಿ ಪ್ರವಚನ ನಡೆಯಿತು. ಮೈಸೂರಿನಿಂದ ಪುತ್ರಿ ಪ್ರತಿಭಾ ಅವರೊಂದಿಗೆ ಶ್ರೀ ನಾಗೇಂದ್ರಕುಮಾರ್ ಗುರುಗಳು ಕಳೆದ ೨ ದಿನಗಳಿಂದ ನಗರದಲ್ಲಿ ವಾಸ್ತವ್ಯ ಹೂಡಿದ್ದಾರೆ.
      

ಕನ್ನಯ್ಯಾ ಲಾಲ್ ಟೈಲರ್ ಕಗ್ಗೊಲೆ ಖಂಡಿಸಿ ಬಜರಂಗದಳ ಪ್ರತಿಭಟನೆ

ಮುಕ್ತಾಯದ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ : ಬಟ್ಟೆ ಅಂಗಡಿ ಗಾಜು ಪುಡಿ ಪುಡಿ

ರಾಜಸ್ತಾನದ ಉದಯಪುರದಲ್ಲಿ ನಡೆದ ಕನ್ನಯ್ಯಾ ಲಾಲ್ ಟೈಲರ್ ಕಗ್ಗೊಲೆ ಖಂಡಿಸಿ ಭಾನುವಾರ ಸಂಜೆ ಭದ್ರಾವತಿ ನಗರದ ರಂಗಪ್ಪ ವೃತ್ತದಲ್ಲಿ ಬಜರಂಗದಳ ವತಿಯಿಂದ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಯಿತು.
    ಭದ್ರಾವತಿ, ಜು. ೩ : ರಾಜಸ್ತಾನದ ಉದಯಪುರದಲ್ಲಿ ನಡೆದ ಕನ್ನಯ್ಯಾ ಲಾಲ್ ಟೈಲರ್ ಕಗ್ಗೊಲೆ ಖಂಡಿಸಿ ಭಾನುವಾರ ಸಂಜೆ ನಗರದ ರಂಗಪ್ಪ ವೃತ್ತದಲ್ಲಿ ಬಜರಂಗದಳ ವತಿಯಿಂದ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಯಿತು.
      ರಾಜಸ್ತಾನದ ಉದಯಪುರದಲ್ಲಿ ನೂಪುರ್ ಶರ್ಮಾ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಬೆಂಬಲಿಸಿ ಪೋಸ್ಟ್ ಮಾಡಿದ ಕಾರಣಕ್ಕೆ ಕನ್ನಯ್ಯಾ ಲಾಲ್ ಅವರನ್ನು ಹತ್ಯೆ ಮಾಡಿರುವುದು ಖಂಡನೀಯ, ದೇಶದಲ್ಲಿ ಹಿಂದುಗಳು ನೆಮ್ಮದಿಯಾಗಿ ಬದುಕಲು ಸಾಧ್ಯವಾಗುತ್ತಿಲ್ಲ. ಹತ್ಯೆಗೆ ಕಾರಣರಾದವರನ್ನು ತಕ್ಷಣ ಗಲ್ಲಿಗೇರಿಸಬೇಕೆಂದು ಆಗ್ರಹಿಸಿದರು.
      ರಸ್ತೆ ತಡೆ ನಡೆಸಿ ಪ್ರತಿಭಟಿಸುವ ಮೂಲಕ ಹತ್ಯೆಗೆ ಕಾರಣರಾದವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಪ್ರಮುಖರಾದ ದುರ್ಗಾವಾಹಿನಿ ಸಂಘಟನೆಯ ಶೈಲ, ಬಜರಂಗದಳ ಜಿಲ್ಲಾ ಸಹ ಸಂಚಾಲಕ ರಾಘವನ್ ವಡೀವೇಲು ಸೇರಿದಂತೆ ಇನ್ನಿತರರು ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು. ಪ್ರಮುಖರಾದ ಕೃಷ್ಣ, ಚಂದ್ರು, ಶ್ರೀಕಾಂತ, ಕಿರಣ, ರಮೇಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
     ಅವಾಚ್ಯ ಶಬ್ದಗಳಿಂದ ನಿಂದನೆ : ಎರಡು ಗುಂಪುಗಳ ನಡುವೆ ಗಲಾಟೆ:
      ಪ್ರತಿಭಟನೆ ಮುಕ್ತಾಯಗೊಳಿಸಿ ತೆರಳುವಾಗ ರಂಗಪ್ಪ ವೃತ್ತದಲ್ಲಿ ಮುಸ್ಲಿಂ ಸಮುದಾಯದ ಯುವಕರ ಗುಂಪೊಂದು ಅವಾಚ್ಯ ಶಬ್ದಗಳಿಂದ ಪ್ರತಿಭಟನಾಕಾರರನ್ನು ನಿಂದಿಸಿದ್ದು, ಇದರಿಂದಾಗಿ ಮಾತಿನ ಚಕಮಕಿ ನಡೆದು ಗಲಾಟೆ ನಡೆದಿದೆ ಎಂದು ಬಜರಂಗದಳ ಜಿಲ್ಲಾ ಸಹ ಸಂಚಾಲಕ ರಾಘವನ್ ವಡೀವೇಲು ಪತ್ರಿಕೆಗೆ ಸ್ಪಷ್ಟಪಡಿಸಿದ್ದಾರೆ. ಇದುವರೆಗೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ. ಒಂದು ವೇಳೆ ದೂರು ದಾಖಲು ಮಾಡಿದ್ದಲ್ಲಿ ನಾವು ಸಹ ಪ್ರತಿ ದೂರು ನೀಡುವುದಾಗಿ ತಿಳಿಸಿದ್ದಾರೆ.
      ಗಲಾಟೆ ಸಂದರ್ಭದಲ್ಲಿ ಸ್ವಾಗ್ ಮೆನ್ಸ್ ಫ್ಯಾಷನ್ ಬಟ್ಟೆ ಅಂಗಡಿಯ ಗಾಜು ಪುಡಿ ಪುಡಿಯಾಗಿದೆ. ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಎರಡು ಕಡೆಯವರನ್ನು ಸಮಾಧಾನಗೊಳಿಸಿ ತೆರವುಗೊಳಿಸಿದ್ದಾರೆ ಎನ್ನಲಾಗಿದೆ.


ಪ್ರತಿಭಟನೆ ಮುಕ್ತಾಯಗೊಳಿಸಿ ತೆರಳುವಾಗ ರಂಗಪ್ಪ ವೃತ್ತದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದು ಬಟ್ಟೆ ಅಂಗಡಿಯೊಂದರ ಗಾಜು ಪುಡಿ ಪುಡಿಯಾಗಿರುವುದು.


ಭೈರವಿ ಒಕ್ಕಲಿಗ ಮಹಿಳಾ ವೇದಿಕೆ ಅಸ್ತಿತ್ವಕ್ಕೆ : ಅಧ್ಯಕ್ಷರಾಗಿ ಲತಾ ಚಂದ್ರಶೇಖರ್

ಭದ್ರಾವತಿಯಲ್ಲಿ ಭಾನುವಾರ ಭೈರವಿ ಒಕ್ಕಲಿಗ ಮಹಿಳಾ ವೇದಿಕೆ ಅಸ್ತಿತ್ವಕ್ಕೆ ಬಂದಿದ್ದು, ನೂತನ ಪದಾಧಿಕಾರಿಗಳು ಆಯ್ಕೆಯಾದರು.
    ಭದ್ರಾವತಿ, ಜು. ೩ : ಜನಪರ ಕಾಳಜಿಯೊಂದಿಗೆ ಹಲವಾರು ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಳ್ಳಬೇಕೆಂಬ ಆಶಯದೊಂದಿಗೆ ನೂತನವಾಗಿ ಭೈರವಿ ಒಕ್ಕಲಿಗ ಮಹಿಳಾ ವೇದಿಕೆ ಅಸ್ತಿತ್ವಕ್ಕೆ ಬಂದಿದೆ ಎಂದು ನಗರಸಭಾ ಸದಸ್ಯೆ, ವೇದಿಕೆ ಅಧ್ಯಕ್ಷೆ ಲತಾ ಚಂದ್ರಶೇಖರ್ ಹೇಳಿದರು.
      ಅವರು ಭಾನುವಾರ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಒಕ್ಕಲಿಗ ಸಮುದಾಯದ ಮಹಿಳೆಯರು ಒಗ್ಗೂಡಿ ಈ ವೇದಿಕೆಯನ್ನು ರಚಿಸಿದ್ದು, ಸಮಾಜದಲ್ಲಿ ಒಕ್ಕಲಿಗ ಸಮುದಾಯದ ಮಹಿಳೆಯರ ಹಿತ ರಕ್ಷಣೆ ಜೊತೆಗೆ ಬಡ ಮಕ್ಕಳ ಶಿಕ್ಷಣಕ್ಕಾಗಿ, ಅಂಗವಿಕಲರು ಹಾಗು ಅಸಕ್ತರ ನೆರವಿಗಾಗಿ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳಬೇಕೆಂಬ ಆಶಯ ಹೊಂದಲಾಗಿದೆ. ಯಾವುದೇ ರಾಜಕೀಯ ಹಿತಾಸಕ್ತಿ  ಅಥವಾ ದುರುದ್ದೇಶ ವೇದಿಕೆ ಹೊಂದಿಲ್ಲ ಎಂದರು.
      ನೂತನ ಪದಾಧಿಕಾರಿಗಳು :
      ವೇದಿಕೆ ನೂತನ ಪದಾಧಿಕಾರಿಗಳಾಗಿ ಅಧ್ಯಕ್ಷರಾಗಿ ಲತಾ ಚಂದ್ರಶೇಖರ್, ಗೌರವಾಧ್ಯಕ್ಷರಾಗಿ ಲಕ್ಷ್ಮಿರಾಜು, ನೇತ್ರಾವತಿ, ಉಪಾಧ್ಯಕ್ಷರಾಗಿ ಭಾಗ್ಯ ಈಶ್ವರ್,  ಕಾರ್ಯದರ್ಶಿಯಾಗಿ ಶಾಲಿನಿ, ಸಹಕಾರ್ಯದರ್ಶಿಯಾಗಿ ಅಂಬಿಕಾ, ಖಜಾಂಚಿಯಾಗಿ ಯಮುನಾ ಹಾಗು ನಿರ್ದೇಶಕರಾಗಿ ಹೇಮಾವತಿ ಸುರೇಶ್, ಸಾವಿತ್ರಮ್ಮ ವೆಂಕಟೇಶ್, ಶೋಭಾ ಲಕ್ಷ್ಮಣ್, ಪ್ರೇಮ ಪ್ರಕಾಶ್, ಶೃತಿ ನವೀನ್, ಲೀಲಾ ರವಿಕುಮಾರ್, ಪದ್ಮಿನಿ ವಿಠ್ಠಲ್, ಮಂಜುಳ ಆನಂದ್, ಮಾಲಾ ರಾಮಣ್ಣ, ಪ್ರೇಮ ಶ್ರೀನಿವಾಸ್, ಗೀತಾ ಮಹೇಶ್, ವಿಜಯ ಚಂದ್ರಶೇಖರ್, ಜಯಲಕ್ಷ್ಮೀ ಕುಮಾರ್, ಶ್ಯಾಮಲ ರಾಜು, ಗೀತಾ ಗಿರೀಶ್, ರೂಪ  ಮತ್ತು ದೇವಿಕಾ ನಾಗರಾಜ್ ಸೇರಿದಂತೆ ಒಟ್ಟು ೨೦ ನಿರ್ದೇಶಕರು ಆಯ್ಕೆಯಾಗಿದ್ದಾರೆ.
      ತಾಲೂಕು ಸುಗ್ರಾಮ ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರ ಒಕ್ಕೂಟದ ಅಧ್ಯಕ್ಷ ಗೌರಮ್ಮ ಮಹಾದೇವ ಉಪಸ್ಥಿತರಿದ್ದರು. ಶಾಲಿನಿ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.